ಪ್ರಕೃತಿಯಲ್ಲಿನ ಜೀವನಚಕ್ರ

ಪ್ರಕೃತಿಯಲ್ಲಿನ ಜೀವನಚಕ್ರ

© ಸೌಮ್ಯ ಅಭಿನಂದನ್

ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಅನೇಕ ಜೀವಿಗಳನ್ನು ನೋಡುತ್ತೇವೆ. ಪ್ರತಿಯೊಂದು ಜೀವಿಯೂ ತನ್ನದೇ ಆದ ವಿಶಿಷ್ಟ ರೀತಿಯ ಜೀವನ ಚಕ್ರವನ್ನು ಹೊಂದಿದೆ. ಈ ಜೀವನ ಚಕ್ರದಲ್ಲಿ ಹುಟ್ಟು ಒಂದು ಭಾಗವಾದರೆ, ಸಾವು ಕೂಡ ಒಂದು ಭಾಗವೇ. ಎರಡಕ್ಕೂ ಒಂದು ಪರಿಪೂರ್ಣವಾದ ಅರ್ಥವಂತು ಇದ್ದೇ ಇದೆ. ಒಂದು ಜೀವಿಯ ಹುಟ್ಟಿನಿಂದ ಪರಿಸರಕ್ಕೆ ಎಷ್ಟು ಉಪಯೋಗವೋ, ಸಾವಿನಿಂದ ಕೂಡ ಅಷ್ಟೇ ಉಪಯೋಗವಿದೆ. ಪರಿಸರ ಪ್ರೇಮಿಯಾದ ನಾನು ಎಲ್ಲಿ ಹೋದರು ಮೊದಲು ಹುಡುಕುವುದು ಅಲ್ಲಿನ ಜೀವ ಸಂಕುಲವನ್ನೇ..  ಅಂತೆಯೇ ಒಂದು ದಿನ ಸಾಗರದ ಎಲ್. ಬಿ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ವಿಹರಿಸುತ್ತಿದ್ದಾಗ ಅಕಸ್ಮಾತಾಗಿ ಲಿಂಬೆ ಗಿಡದಲ್ಲಿ ಹಸಿರು ಬಣ್ಣದ ಕಂಬಳಿ ಹುಳುವನ್ನು (Caterpillar) ನೋಡಿದೆ. ಹಾಗೆಯೇ ಪ್ರತಿ ದಿನ ಒಂದು ಬಾರಿ ಅದನ್ನು ಗಮನಿಸುವುದು ಕೂಡ ನನ್ನ ದಿನ ನಿತ್ಯದ ರೂಢಿಯಾಯಿತು. ದಿನ ಕಳೆಯುತ್ತಿದ್ದಂತೆ ಕಂಬಳಿ ಹುಳು ತನ್ನ ಆಕಾರ ಮತ್ತು ರೂಪದಲ್ಲಿ ಬದಲಾಗಿ ಪೊರೆಹುಳು (Pupa) ಹಂತವನ್ನು ತಲುಪಿಯೇ ಬಿಟ್ಟಿತು(13/12/2020 ರಂದು). ಮೊದಲು ಹಚ್ಚ ಹಸಿರು ಬಣ್ಣದ್ದಾಗಿದ್ದ ಪೊರೆಹುಳುವಿನ ಬಣ್ಣ ದಿನದಿಂದ ದಿನಕ್ಕೆ ಬದಲಾಗತೊಡಗಿತು. ಸುಮಾರು 17 ದಿನಗಳಾದ ಮೇಲೆ (30/12/2020 ರ ಹೊತ್ತಿಗೆ) ಅದರ ಬಣ್ಣ ಕಪ್ಪು ಮಿಶ್ರಿತ ತಿಳಿ ಕಂದು ಬಣ್ಣದ್ದಾಗಿತ್ತು.

© ಸೌಮ್ಯ ಅಭಿನಂದನ್

ನನಗೆ ಇದು ಯಾವಾಗ ಚಿಟ್ಟೆಯಾಗತ್ತೊ, ಯಾವ ಚಿಟ್ಟೆಯಾಗತ್ತೊ ಎಂಬ ಕುತೂಹಲ. ಅಚಾನಕ್ಕಾಗಿ ನಾಲ್ಕು ದಿನವಾದ ಮೇಲೆ (03/01/2021 ರ ಬೆಳೆಗ್ಗೆ) ಗುಲಾಬಿ ಮಿಶ್ರಿತ ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳ ರೆಕ್ಕೆಹೊದ್ದು ತನ್ನ ಪ್ಯೂಪಾದ ಮೇಲೆ ಕುಳಿತ್ತಿದ್ದಳು ಕಸ್ತೂರಿ ಚಿಟ್ಟೆ (Common Mormon) ಚಿಟ್ಟೆ. ಮುದುರಿಕೊಂಡಿದ್ದ ತನ್ನ ರೆಕ್ಕೆಗಳನ್ನು ಬಿಚ್ಚಿ ಅನೇಕ ಬಾರಿ ಹಾರಲು ಪ್ರಯತ್ನಿಸಿದರೂ  ಸಾಧ್ಯವಾಗಲಿಲ್ಲ. ಇನ್ನೂ ಸೂರ್ಯನ ಬಿಸಿಲು ಬೀಳದ ಕಾರಣ ರೆಕ್ಕೆಗಳಿಗೆ ಸೂರ್ಯನ ಶಾಖ ಸಿಗದೆ, ಹಾರಲು ರೆಕ್ಕೆಗಳು ಸ್ಪಂದಿಸುತ್ತಿರಲಿಲ್ಲ. ನೋಡ ನೋಡುತ್ತಿದ್ದಂತೆ ಕಾಮನ್ ಮಾರ್ಮೊನ್ ಚಿಟ್ಟೆಯು ಹಾರಲು ಶಕ್ತಿ ಸಾಲದೆ ಕೆಳಗೆ ಇದ್ದ ಕಟ್ಟಿರುವೆಗಳ ರಾಶಿಯ ಮೇಲೆ ಬಿದ್ದಿತು. ಕಟ್ಟಿರುವೆಗಳು ಮುತ್ತಿಕೊಂಡವು. ಚಿಟ್ಟೆಯು ಒದ್ದಾಡಿ ಕ್ಷಣಾರ್ಧದಲ್ಲಿ ತನ್ನ ಒದ್ದಾಟವನ್ನು ನಿಲ್ಲಿಸಿಯೇ ಬಿಟ್ಟಿತು!

ಹೀಗೆ ಒಂದು ಜೀವಿಯ ಬದುಕು ತನ್ನ ಕರ್ತವ್ಯ ನಿಭಾಯಿಸುವುದರೊಳಗೇ ಅಂತ್ಯವಾಯಿತು. ಅಂತೆಯೇ ಯಾವುದೋ ಒಂದು ಜೀವಿಯ ಹುಟ್ಟು ಇನ್ಯಾವುದೋ ಒಂದು ಜೀವಿಯ ಆಹಾರವಾಗಿರುತ್ತದೆ. ಇದೇ ತಾನೆ ಎಲ್ಲಾ ಜೀವಿಗಳು ಒಪ್ಪಿಕೊಳ್ಳಲೇಬೇಕಾದ ಪ್ರಕೃತಿಯ ನಿಯಮ.

ಲೇಖನ: ಸೌಮ್ಯ ಅಭಿನಂದನ್
ಶಿವಮೊಗ್ಗ ಜಿಲ್ಲೆ

Spread the love

7 thoughts on “ಪ್ರಕೃತಿಯಲ್ಲಿನ ಜೀವನಚಕ್ರ

  1. I came to know that..by reading this article you have great observing vision.. Keep writing good things…sister

  2. Lekhana thumba channagide.. very interesting.. nivu heliddu nija.., Prakruthiya niyamagale ondu rochaka vishya. , ellaru thalebagale beku.

Comments are closed.

error: Content is protected.