ನೀವೂ ಕಾನನಕ್ಕೆ ಬರೆಯಬಹುದು

      

ಚಳಿಗಾಲ ಬಂದಾಗ ‘ಎಷ್ಟು ಚಳಿ’ ? ಎಂದರು
ಬಂತಲ್ಲ ಬೇಸಿಗೆ, ಕೆಟ್ಟ ಬಿಸಿಲೆಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.
ಎಂಬ ಕೆ ಎಸ್ ನರಸಿಂಹಸ್ವಾಮಿ ಅವರ ಮಾತು ಎಷ್ಟು ನಿಜ!.

ಇದು ಬೇಸಿಗೆ ಕಾಲ. ಬಿಸಿಲು ಎಂದಾಕ್ಷಣ ಮಕ್ಕಳಿಗೆ ಬೇಸಿಗೆ ರಜದ ನೆನಪಾದರೆ, ಬಿಸಿಲ ಬೇಗೆಯಲ್ಲಿ ಬೆವರು ಸುರಿಸುತ್ತಾ ದುಡಿಯುವ ರೈತರಿಗೆ ಬರಗಾಲ, ಕ್ಷಾಮದ ಬಗ್ಗೆ ಚಿಂತೆ. ಇತ್ತೀಚಿಗೆ ವಿಶ್ವ ವನ್ಯಜೀವಿ ದಿನದಂದೇ ನಾಗರಹೊಳೆಯಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಬಿಸಿಲಿನ ತೀವ್ರತೆಯ ಬಗ್ಗೆ ತಿಳಿಸುತ್ತದೆ. ಹಾಗೆಂದರೆ ಕಾಡ್ಗಿಚ್ಚು ಎಂಬುದು ಬಿಸಿಲಿಗೆ ಮಾತ್ರವೇ ಕಾಣಿಸುತ್ತದೆ ಎಂದಲ್ಲ. ಸ್ವಾಭಾವಿಕವಾಗಿಯೂ ಮಿಂಚು, ಗಾಳಿಯ ಘರ್ಷಣೆಯಿಂದ ಸಂಭವಿಸುವ ಸಾಧ್ಯತೆ ಇದೆ. ಆದರೆ ಬಹಳ ಅಪರೂಪ. ಆದರೆ ಇಂದಿನ ವಿದ್ಯಮಾನಗಳಲ್ಲಿ ಕಾಡ್ಗಿಚ್ಚಿಗೆ ಮಾನವ ಚಟುವಟಿಕೆಗಳಾದ ಆರದ ಬೀಡಿ ತುಂಡುಗಳನ್ನು ಎಸೆಯುವುದು, ಅರಣ್ಯಕ್ಕೆ ಹತ್ತಿರ ಇರುವ ಕಸಕ್ಕೆ ಬೆಂಕಿ ಹಾಕುವುದು, ಕಾಡಿನ ಅಂಚಿನಲ್ಲಿ ಅಡಿಗೆ ಮಾಡಿ ಒಲೆ ಆರಿಸದೆ ಬಿಡುವುದು ಮತ್ತು ಅರಣ್ಯ ಸಿಬ್ಬಂದಿಗಳ ಮೇಲಿನ ದ್ವೇಷದಿಂದ ಕಾಡಿಗೆ ಬೆಂಕಿ ಹಾಕುವುದು ಹೀಗೆ ಹಲವಾರು ಕಾರಣಗಳಾಗಿವೆ.

ಕಾಡಿಗೆ ಬೆಂಕಿ ಬೀಳುವುದರಿಂದ ಅಲ್ಲಿರುವ ಭೂಮಿ ಸುಟ್ಟು, ಹೊಸ ಸಸ್ಯಗಳು ಬೆಳೆಯಲು ಸಹಾಯವಾಗುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳಿದರೆ, ಕೆಲವೊಮ್ಮೆ ಕಾಡ್ಗಿಚ್ಚಿನಿಂದ ಬೆಂಕಿಯ ಕೆನ್ನಾಲಿಗೆಗೆ ಬಹುತೇಕ ಕಾಡು ಸುಟ್ಟು ನಾಶವಾಗುವ ಜೊತೆಗೆ ವನ್ಯಜೀವಿಗಳ ಸಾವಿನ ಸಾಧ್ಯತೆಗಳು ಇವೆ.

ಇನ್ನೂ ವಾಹನಗಳು ಹೊರಸೂಸುವ ವಿಷಕಾರಿ ಅನಿಲಗಳು ಮತ್ತು ಕಾಡ್ಗಿಚ್ಚಿನಂತಹ ಪರಿಣಾಮ ಮುಂತಾದ ಕಾರಣಗಳಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದನ್ನು ಕೆಲವು ಸಂಶೋಧನೆಗಳು ಹೇಳುತ್ತವೆ. ನಾವು ಇದರ ಪರಿಣಾಮವನ್ನು ಮುಂದೆ ಅನುಭವಿಸಬೇಕಾಗುತ್ತದೆ. ಇದನ್ನು ಅರಿತು ಇನ್ನು ಮುಂದಾದರೂ ಪರಿಸರ ಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳಿತು.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Spread the love
error: Content is protected.