ನವನಯನಟನ ಮಯೂರಿ
© ಡಾ. ದೀಪಕ್ .ಬಿ
ನವಿಲೇ ಓ ನವಿಲೇ ಏನ್ ಹೇಳಲೇ
ತಿಳಿಹಸಿರು, ನಸು ಹಸಿರು, ಕಡುಹಸಿರು, ಎಲೆಹಸಿರು
ಪ್ರಕೃತಿಯ ಕೃತಿಯಲಿ ತೋರಣವೆಂಬಂತೆ
ಮಯೂರಿ ಓ ಮಯೂರಿ ಏನ್ ತಯಾರಿ
ತಿಳಿ ನೀಲಿ ನಸು ನೀಲಿ ಬಾನ್ ನೀಲಿ
ನವನಟನ ಮನೋಹರಿ, ಮೇಘ ಮುದ್ರಿತ ಶಾಯರಿ
ಶ್ರಾವಣಕೆ ಮೈ ನೆರೆದಂತೆ ಕುಣಿವೆ ನೀ ಮೈ ಮರೆವಂತೆ
ಗರಿ ಗರಿ ಓ ನವಿಲ್ ಗರಿ ಏನ್ ನಿನ್ನ ಪರಿ
ನೂರು ಕಣ್ಣ ನೋಟ, ಮಾಡಿಸದಿರದೆ ಮಾಟ
ಮನವೆಂಬ ವನದಲಿ ಬಣ್ಣಿಸಲೇತಕೆ ವರ್ಣದೂಟ
ಕೃಪೆ ತೋರೆಯ ಇಹದ ಖಗಗಳಿಗೆ, ಬಂಧನವಿಟ್ಟು ಮನುಜನ ಕೈಗಳಿಗೆ
ಪೌರಾಣಿಕವಾಗಿ ಉತ್ತರ ರಾಮಾಯಣದಲ್ಲಿ ಇಂದ್ರನು ರಾವಣನನ್ನು ಸೋಲಿಸಲಾಗದೇ ನವಿಲಿನ ರೆಕ್ಕೆಗಳಡಿ ಆಶ್ರಯಿಸುತ್ತಾನೆ. ಇಂದ್ರನ ಆಶೀರ್ವಾದದಿಂದ ಸಾವಿರ ಕಣ್ಣುಗಳು ಬಂದದ್ದೆಂದು, ವಿಷ್ಣುವಿನ ವಾಹನ ಗರುಡನ ಒಂದು ರೆಕ್ಕೆಯಿಂದ ಮಯೂರನ ಜನ್ಮ ಆಗಿದ್ದೆಂಬ ಪ್ರತೀತಿ ಕೂಡ ಇದೆ. ಪರವಾಣಿ ಎಂಬ ಮಯೂರಿ ಕಾರ್ತಿಕೇಯನ ವಾಹನವು ಕೂಡ. ರಾಜ ರವಿವರ್ಮನ ಮಾಯಾಚಿತ್ರಕಲೆಗಳಲ್ಲಿ ಅತ್ಯದ್ಭುತವಾಗಿ ಬಿಂಬಿತವಾಗಿದೆ. ಮಯೂರೇಶ್ವರನೆಂಬ ಗಣೇಶನ ಅವತಾರ, ವಿಕಟ, ಚಂದ್ರ ಭೈರವ, ಹೀಗೆ ಅನೇಕರ ಖಾಸಗಿ ವಾಹನ ಕೂಡ. ಚಿತ್ರಮೇಖಲ ಎಂಬ ಮಯೂರಿಯು ಸರಸ್ವತಿ ದೇವಿಯೊಂದಿಗೆ ಸದಾ ಕಾಣುತ್ತದೆ. ಮಯೂರಿಯು ಸಹನೆ, ಅನುಕಂಪ ಮತ್ತು ಜ್ಞಾನದ ಸಂಕೇತ. ಶ್ರೀಕೃಷ್ಣನ ಮುಡಿಗೇರಿ ಇಂದಿಗೂ ಹೆಚ್ಚು ಪ್ರಚಲಿತ. ಚಿನ್ನದ ಮಯೂರಿಯ ಮುಂದಿನ ಅವತಾರವೇ ಬುದ್ಧ ಎಂಬ ಕಲ್ಪನೆ ಕೂಡ ಮಹತ್ವದ್ದು ಎಂದು ಜಾತಕದಲ್ಲಿ ಹೇಳಿದೆ.
ಮೇಘದೂತ ಮತ್ತು ಕುಮಾರಸಂಭವದಲ್ಲಿ ಮಯೂರಿಯನ್ನು ಸಾಹಿತ್ಯದ ಶಿಶುವಾಗಿ ಕಾಳಿದಾಸರು ಬಳಸಿಕೊಂಡು ರಾರಾಜಿಸಿದ್ದಾರೆ. ಭಾರತೀಯ ಪುರಾಣಗಳಲ್ಲದೆ ಗ್ರೀಕ್ ನಾಗರಿಕತೆಗಳಲ್ಲೂ ಮಯೂರಿಗೆ ಪ್ರಾಶಸ್ತ್ಯ ಕೊಡಲಾಗಿದೆ. ‘ಯೇಜಡಿ’ ಎಂಬ ಕರ್ಡಿಶ್ ಧರ್ಮದ ಚಿಹ್ನೆ ಕೂಡ ಮಯೂರಿ ಆಗಿರುತ್ತದೆ.
ಸಾಮ್ರಾಜ್ಯಶಾಹಿ
ಭಾರತೀಯ ಸಾಮ್ರಾಜ್ಯಗಳಲ್ಲಿ ನವಿಲಿಗೆ ಅತಿ ವಿಶಿಷ್ಟ ಸ್ಥಾನವಿದೆ. ಸಾಹಿತ್ಯ, ಕಲೆ ಇನ್ನಿತರೆ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದೆ. ರಾಜರುಗಳು ತಮ್ಮ ಆಸ್ಥಾನದಲ್ಲಿ ನವಿಲಿನ ಸಾಕುವಿಕೆಯನ್ನು ಪ್ರತಿಷ್ಠೆಯಾಗಿ ಮಾಡಿಕೊಂಡಿದ್ದರು. ಅದಕ್ಕೋಸ್ಕರ ದೊಡ್ಡ ದೊಡ್ಡ ಉದ್ಯಾನವನಗಳನ್ನು ನಿರ್ಮಿಸಿ ಕೇವಲ ನವಿಲುಗಳನ್ನು ಬಿಡುತ್ತಿದ್ದರು. ಶ್ರಾವಣಕ್ಕೆ ಮಳೆ ಬರುವ ವೇಳೆಗೆ ಮಯೂರ ನರ್ತನ ಕಣ್ತುಂಬಿಕೊಳ್ಳಲು ನೆರೆಹೊರೆಯ, ದೂರದ ಅತಿಥಿಗಳನ್ನು ಆಹ್ವಾನಿಸುತ್ತಿದ್ದರು.
ಮೌರ್ಯ ಸಾಮ್ರಾಜ್ಯದ ಹೆಸರು ಮಯೂರ ಪದದಿಂದಲೇ ನಾಮಾಂಕಿತವಾಗಿರಬಹುದು, ಈ ಸಾಮ್ರಾಜ್ಯದ ಪೂರ್ವಿಕರು ಹಿಂದಿನ ರಾಜರ ಆಸ್ಥಾನಗಳಲ್ಲಿ ನವಿಲುಗಳನ್ನು ನೋಡಿಕೊಳ್ಳುತ್ತಿದ್ದರು. ಕ್ರಿ.ಶ 345-365 ರಲ್ಲಿ ಮಯೂರಶರ್ಮನೆಂಬ ವಿದ್ವಾಂಸ ಬನವಾಸಿ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ. ತಾಳಗುಂದದ ಶಾಸನದಲ್ಲಿ ಇದನ್ನು ಕೆತ್ತಲಾಗಿದೆ. ಹೀಗೆಯೇ ಪಟ್ಟದಕಲ್, ಲೇಪಾಕ್ಷಿ ಇನ್ನಿತರೆ ಪುರಾತನ ದೇವಾಲಯಗಳಲ್ಲಿ ಕಲ್ಲಿನ ಕೆತ್ತನೆಗಳಲ್ಲಿ ನವಿಲಿನ ವಿವಿಧ ಭಂಗಿಗಳನ್ನು ಕಾಣಬಹುದು. ನಮ್ಮ ಪೂರ್ವಿಕರು ಪ್ರಕೃತಿ, ಪ್ರಾಣಿ ಪಕ್ಷಿಗಳಿಗೆ ಸಮಾನ ಪ್ರಾಶಸ್ತ್ಯ ನೀಡುತ್ತಿದ್ದರೆಂಬುದಕ್ಕೆ ಇವುಗಳೆಲ್ಲ ಮುಖ್ಯ ಕುರುಹುಗಳಾಗಿವೆ.
ಐತಿಹಾಸಿಕ ‘ಮಯೂರ ಸಿಂಹಾಸನ’ ಭಾರತೀಯ-ಮೊಘಲ್ ಕಲಾಸೃಷ್ಟಿ. ಅದೇ ರೀತಿ ಅತ್ಯಂತ ಬೆಲೆ ಬಾಳುವ ವಸ್ತು ಕೂಡ. ಇದಕ್ಕೆ ತಾಜ್ ಮಹಲಿನ ಐದು ಪಟ್ಟು ಬೆಲೆ ಎಂದು ಅಂದಾಜಿಸಲಾಗಿದೆ. ಫ್ರೆಂಚ್ ವಜ್ರ ಪರಿಚಾರಕ ಜೀನ್ ಬಾಪ್ಟಿಸ್ಟ್ ಇದನ್ನು ಆ ಕಾಲದಲ್ಲೇ ವರ್ಣಿಸಿದ್ದಾನೆ. ಕೊಹಿನೂರ್ ನಂತ ಸರಿಸಾಟಿಯುಳ್ಳ ಹಲವು ವಜ್ರಗಳಿಂದ ಇದು ಅನೇಕ ವರ್ಷಗಳು ಅಲಂಕೃತವಾಗಿತ್ತು. ದಿಲ್ಲಿಯನ್ನು ನಾದಿರ್ ಷಾ ದಂಡೆತ್ತಿ ಬಂದಾಗ ಆಕ್ರಮಣ ಮಾಡಿ ’ಮಯೂರ ಸಿಂಹಾಸನ’ವನ್ನು ಇರಾನಿಗೆ ಕದ್ದೊಯ್ದನು. ನಂತರ ಅವನ ಕಗ್ಗೊಲೆಯಾದಾಗ ಈ ಸಿಂಹಾಸನವನ್ನು ನಾಶಮಾಡಲಾಯಿತು.
ರಾಷ್ಟ್ರೀಕರಣ
01 ಫೆಬ್ರವರಿ 1963ರ ಸಂಪುಟದಲ್ಲಿ ಆಶ್ಚರ್ಯವಶಾತ್ ಹಕ್ಕಿಗಳ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಿತ್ತು. ರಾಜಕಾರಣಿಗಳ ಬಾಯಲ್ಲಿ ಗರುಡ, ಹಂಸ, ನವಿಲು, ಎರ್ಲಡ್ಡು ಹಕ್ಕಿಗಳು ಚರ್ಚಾ ವಸ್ತುಗಳಾಗಿದ್ದವು. ಅಷ್ಟೇ ಏಕೆ, ಕಾಗೆ ಕೂಡ ಪೈಪೋಟಿ ಒಡ್ಡಿತು. ಅನೇಕ ಮಾನದಂಡಗಳನ್ನು ಪರಿಗಣಿಸಿ ನವಿಲನ್ನು ಭಾರತದ ರಾಷ್ಟ್ರ ಹಕ್ಕಿ ಎಂದು ಆಯ್ಕೆ ಮಾಡಲಾಯಿತು. ತದನಂತರ ಬೇರೆ ರಾಷ್ಟ್ರಗಳು ಕಿಚ್ಚು ಪಟ್ಟಿರಬಹುದು. ಆಯ್ಕೆ ಮಾಡಿದ ಮುಂದಿನ ದಿನಗಳಲ್ಲಿ 1972 ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ರಕ್ಷಿಸಲಾಯಿತು. ಆಹಾರಕ್ಕಾಗಿ ಸಾಕಣೆ ಮಾಡುತ್ತಿದ್ದ ನವಿಲನ್ನು ಯಾರು ಕೂಡ ಮುಟ್ಟದ ಹಾಗೆ ಆಗಿದ್ದರಿಂದ, ಸಂತತಿ ಗಣನೀಯವಾಗಿ ಏರಿಕೆ ಕಂಡಿತು. ಸೌಂದರ್ಯ, ಕಲೆ, ಇನ್ನಿತರ ಅಂಶಗಳನ್ನು ಹೊರತು ಪಡಿಸಿ ಎರ್ಲಡ್ಡು (Great Indian Bustard) ಹಕ್ಕಿಗಳನ್ನು, ಪರಿಸರವಾದಿಗಳ ಆಶಯದಂತೆ ರಾಷ್ಟ್ರಪಕ್ಷಿ ಎಂದು ಪರಿಗಣಿಸಿದ್ದರೆ ಅವುಗಳು ವಿನಾಶದಂಚಿಗೆ ಬರುತ್ತಿರಲಿಲ್ಲವೇನೋ. ಇದೀಗ 100-150 ಉಳಿದುಕೊಂಡಿವೆ ಅಷ್ಟೇ.
ನವಿಲ್ನೆನಪುಗಳು
ಅನೇಕ ಕವಿಗಳಿಗೆ ಸ್ಪೂರ್ತಿಯಾದ ಈ ನವಿಲುಗರಿಗಳ ಕುರಿತು ವರ್ಣಿಸಲಸಾಧ್ಯ. 100-150 ಕಣ್ಣುಗಳಂತೆ ಕಾಣುತ್ತವೆ. ನೀಲಿ ಹಸಿರು, ಗಿಳಿ ಹಸಿರು, ತಿಳಿ ಹಸಿರು, ಕಿತ್ತಳೆ ಇತರೆ ಬಣ್ಣಗಳಿಂದ ಕೂಡಿದ್ದು ಗರಿಮರಿಗಳು ಸುತ್ತಲೂ ಬೆಳೆದಿರುತ್ತವೆ. ಶಾಲೆ ಓದುವಾಗ ಹೇಗೋ ನವಿಲುಗರಿ ಸ್ನೇಹಿತರ ಮೂಲಕ ಸಿಗುತ್ತಿದ್ದವು. ಅದನ್ನು ಪುಸ್ತಕದಲ್ಲಿಟ್ಟು ಎರಡು ಕಾರಣಗಳಿಗೆ ಅನೇಕ ವರ್ಷ ಕಾಪಾಡುತ್ತಿದ್ದೆವು. ಒಂದು, ಸರಸ್ವತಿಯ ಸಮೀಪ ಫೋಟೋಗಳಲ್ಲಿ ನವಿಲನ್ನು ನೋಡಿದ್ದೆವು. ಆದ್ದರಿಂದ ಯಾವ ವಿಷಯ ಕಷ್ಟವಾಗುತಿತ್ತೋ ಆ ಪುಸ್ತಕದಲ್ಲಿಟ್ಟು, ಓದುವುದನ್ನು ಮರೆತು ಬಿಡುತ್ತಿದ್ದೆವು! ಇಟ್ಟಿದ್ದಕ್ಕೋ ಏನೋ ಅದೇ ವಿಷಯದ ಬಗ್ಗೆ ಚರ್ಚಿಸುತ್ತಿದ್ದೆವು. ಸರಸ್ವತಿ ಒಲಿಯುತ್ತಿದ್ದಳು!
ಏಕೋ ಏನೋ ಎಲ್ಲಾ ವಿಷಯಗಳ ಪುಸ್ತಕದಲ್ಲಿಡಲು ಗರಿಗಳು ಸಿಗುತ್ತಿರಲಿಲ್ಲ. ಇನ್ನೊಂದು ಕಾರಣ ಗರಿ, ಮರಿ ಮಾಡುತ್ತದೆಂದು. ಅದು ನಿರ್ಜೀವ ವಸ್ತು ಎಂದು ಕನಸಿನಲ್ಲೂ ಊಹಿಸಿಕೊಳ್ಳುತ್ತಿರಲಿಲ್ಲ. ಮರಿಯಾದ ತಕ್ಷಣ ಅವುಗಳನ್ನು ಬೇರೆ ಬೇರೆ ವಿಷಯಗಳ ಪುಸ್ತಕಗಳಿಗೆ ರವಾನಿಸಲು ಪುಸ್ತಕದಲ್ಲಿ ಜೋಪಾನವಾಗಿಡುತ್ತಿದ್ದೆವು.ಅನೇಕ ದಿನಗಳ ನಂತರ ಆಶ್ಚರ್ಯವಶಾತ್ ಸಣ್ಣದೊಂದು ನವಿಲಿಗರಿ ಇರುತ್ತಿತ್ತು.! ಪುಸ್ತಕ ಉಜ್ಜಿಯೋ ಅಥವಾ ನಾವೇ ಮರೆತು ಇನ್ನೊಂದು ಇಟ್ಟಿರುತ್ತಿದ್ದೆವು.
ಹಾವ – ಭಾವ
Pavo cristatus ಎಂದು ನಾಮಾಂಕಿತಗೊಂಡಿರುವ ನವಿಲುಗಳು ಗಗನಸಖಿಗಳಲ್ಲ, ಬದಲಾಗಿ ನೆಲ ಹಕ್ಕಿಗಳು. ಸಾಮಾನ್ಯವಾಗಿ ಎತ್ತರಕ್ಕೆ ಹಾರಲೊಲ್ಲವು. ವಿಶ್ವದಾದ್ಯಂತ ಮಯೂರಿಯ ಮಾಯೆಗೆ ಮಾರುಹೋಗದವರಿಲ್ಲ ವರ್ಣರಂಜಿತ ಹಕ್ಕಿಗಳು ತಮ್ಮ ಅಪ್ಪಟ ಬಣ್ಣದ ತುಪ್ಪಟದೊಂದಿಗೆ ಸದಾ ಮಿರುಗುತ್ತವೆ. ಇದರ ಪುಕ್ಕಗಳು ಚಿತ್ರವರ್ಣದ್ದಾಗಿದ್ದು ಬೇರೆ ಬೇರೆ ಕೋನಗಳಲ್ಲಿ ಬೇರೆಯೇ ವರ್ಣ ಸೂಸುತ್ತವೆ.
ನವಿಲಿನ ಆಕಾರ ಮತ್ತು ಗಾತ್ರ ನೋಡಿ ನಮ್ಮ ದೇಶದ ತೂಕದ ಹಕ್ಕಿ ಎಂದು ಭಾವಿಸಿದರೆ ತಪ್ಪಾದೀತು. ಗಂಡಿನ ಸರಾಸರಿ ತೂಕ 5 ಕೆಜಿ ಇರಬಹುದು. ಹೆಣ್ಣುಗಂಡುಗಳೆರಡೂ ಬಹುತೇಕ ಸಮಾನ ತೂಗುತ್ತವೆ. ಸುಮಾರು 12 ಕೆಜಿ ತೂಗುವ ಎರ್ಲಡ್ಡು ಹಕ್ಕಿಗಳು ನಮ್ಮ ದೇಶದ ತೂಕದ ಹಕ್ಕಿ. ಅದೇ ರೀತಿ ಗಂಡು ನವಿಲಿನ ಬಾಲ ಉದ್ದವೆಂದರೆ ತಪ್ಪಾಗುತ್ತದೆ. ಹಿಂಬದಿಯ ಪುಕ್ಕಗಳು ಉದ್ದವಾಗಿ ಬೆಳೆದಿರುತ್ತವೆ. ಹಾಗಾಗಿ ಅದು ಬಾಲವೇ ಅಲ್ಲ. ಗಂಡು ನವಿಲಿನ ಉದ್ದ 2.3ಮೀ. ಆದರೆ ಪುಕ್ಕದ ಗೊಂಚಲಿನ ಉದ್ದವೇ 1.6ಮೀ ಇರುತ್ತದೆ. ರೆಕ್ಕೆ ಬಿಚ್ಚಿದರೆ 1.4ಮೀ ಅಡ್ಡಗಲ. ನವಿಲು ಗೊಂಚಲಿನೊಂದಿಗೆ ಹಾರುವ ದೃಶ್ಯ ಹೃದಯನ್ಮನಮೋಹಕ ಹಾರುವ ಅತಿ ದೊಡ್ಡ ಪಕ್ಷಿ ಎಂದೇ ಹೇಳಬಹುದು .
ನವಿಲನ್ನು ಪಂಕದಂತೆ ಅರಳಿಸಿದಾಗ ನೂರು ಕಣ್ಣುಗಳು ಬಾಯಿ ಬಿಡುತ್ತವೆ. ಹೆಣ್ಣು ನವಿಲಿಗೆ ಉದ್ದವಾದ ಪುಕ್ಕಗಳು ಇಲ್ಲದಿರುವುದು ಮತ್ತು ಹೆಚ್ಚು ಕಂದುಬಣ್ಣ ಇರುವುದು ಬಿಟ್ಟರೆ ಮಿಕ್ಕೆಲ್ಲ ಲಕ್ಷಣಗಳು ಗಂಡು-ಹೆಣ್ಣುಗಳ ನಡುವೆ ಸಮಾನವಾಗಿರುತ್ತವೆ. ಮರಿಗಳಿಗೆ ಸಂಜ್ಞೆ ಕೊಡಲು ಅಥವಾ ಬೇರೆ ಹೆಣ್ಣು ನವಿಲ್ ವಿಲನ್ ಓಡಿಸಲು ಅರಳಿಸುತ್ತದೆ. ಎರಡಕ್ಕೂ ಹಲವು ಗರಿಗಳುಳ್ಳ ಸ್ಥಿರ ಮುಕುಟವಿರುತ್ತದೆ. ಭಾರತದಾದ್ಯಂತ ಮತ್ತು ಅಕ್ಕ ಪಕ್ಕದ ಕೆಲವು ರಾಷ್ಟ್ರಗಳಲ್ಲಿ ಕಾಣಿಸುತ್ತದೆ. ಬೇರೆ ಪ್ರಾಣಿಗಳೊಂದಿಗೆ ಬೆರೆಯುವ ಸ್ವಭಾವ ಇಲ್ಲದಿರುವುದರಿಂದ ಹೆಚ್ಚು ಜಗಳಗಂಟಿಗಳು ಇವು. ನಾವು ಬಳಸುವ ತೆರೆದ ಅಥವಾ ಮಡಚುವ ಬೀಸಣಿಗೆಯು ಯಾವ ಹೊಸ ತಂತ್ರಜ್ಞಾನವು ಅಲ್ಲ, ನವಿಲಿನಿಂದಲೇ ಕಾಪಿ ಹೊಡೆದದ್ದು.
ಎಷ್ಟು ಸುಂದರವೋ ಅಷ್ಟು ಭಯ ಹುಟ್ಟಿಸುವ ಪ್ರವೃತ್ತಿ ಇವುಗಳದ್ದು. ಆಹಾರ ಪದಾರ್ಥಗಳು ಏನಾದರೂ ಕಾಣಿಸಿದರೆ ದೇಹವನ್ನು ನಮ್ಮ ಮೈಮೇಲೆ ಬಿಟ್ಟು ಕೊಕ್ಕಿನಿಂದ ಕಿತ್ತೊಯ್ಯುತ್ತದೆ. ಕೊಕ್ಕಿನ ಕುಟುಕುವಿಕೆ ಸುತ್ತಿಗೆಯ ಏಟಿನಂತೆ. ಅಪ್ಪಿತಪ್ಪಿ ಮೂಳೆಗೆ ಬಲವಾಗಿ ಕುಟುಕಿದರೆ ಪ್ರಾಣಹೋಗುವಂತಾಗುವುದು ಖಂಡಿತ. ಮೈಮೇಲೆ ಹಾರಿದಾಗ ಹರಿತವಾದ ಉಗುರುಗಳಿಂದ ಕೆರೆದರೆ ನೆತ್ತರೇ ಉತ್ತರ.
ಇವುಗಳ ಆಹಾರದ ಮೆನುವಿನಲ್ಲಿ ಮಿಶ್ರಾಹಾರವಿದ್ದು ಎಲೆಗಳನ್ನು ಕೆರೆದು ಕೆದರಿ ಹುಳು-ಹುಪ್ಪಟೆ ಹೆಕ್ಕುತ್ತದೆ. ಮುಂಜಾವಿನಲಿ ಹಾಗು ಮುಸ್ಸಂಜೆಯಲಿ ಇವುಗಳ ಆಹಾರ ಹುಡುಕುವ ಪ್ರಕ್ರಿಯೆ ಸಕ್ರಿಯವಾಗಿರುತ್ತದೆ. ಬಿಸಿಲಿನ ಝಳ ತಪ್ಪಿಸಿಕೊಳ್ಳುವ ನೆರಳುಪ್ರಿಯರು ಇವು. ಕಾಡಿನಲ್ಲಿರುವ ಕೀಟಗಳು ಹಣ್ಣು, ಹುಳು, ಸಣ್ಣ ಸಸ್ತನಿಗಳು ಸಣ್ಣ ಸರೀಸೃಪಗಳು, ಹಾವುಗಳು ಇವುಗಳಿಗೆ ಬಹಳ ಇಷ್ಟ. ಹಾವನ್ನು ಹಿಡಿದು ಹಾರುವ ದೃಶ್ಯ ಕೂಡ ಹೃದಯ ಸ್ಪರ್ಶಿ. ಕಾಡಂಚಿನ ಕೆಲಭಾಗಗಳಲ್ಲಿ ರೈತರಿಗೆ ಬಹಳ ಕಿರಿಕಿರಿ ಉಂಟುಮಾಡುತ್ತವೆ, ಕೊಲ್ಲುವ ಅನುಮತಿ ಇದ್ದರೆ ರೈತ ತನ್ನ ಬೆಳೆಗಳನ್ನು ಉಳಿಸಿಕೊಳ್ಳುತ್ತಿದ್ದ. ಆದರೆ ಇದೆಂದು ಸಾಧ್ಯವಿಲ್ಲದ ಕಲ್ಪನೆ. ಆದರೂ ಕದ್ದು ಮುಚ್ಚಿ ನವಿಲಿನ ಮಾಂಸಕ್ಕೆ ಮಾರುಹೋದವರು ಅನೇಕರಿದ್ದಾರೆ. ಹಳ್ಳಿಗರು ಕಾಡಿಗೆ ಹೋದಾಗ ನವಿಲಿನ ಮೊಟ್ಟೆಗಳನ್ನು ಕದ್ದು ತಂದು ಕೋಳಿಗಳ ಮೊಟ್ಟೆಯೊಡನಿಟ್ಟು ಕಾವು ಕೊಡಿಸುತ್ತಾರೆ. ಮರಿಗಳು ಆಚೆ ಬಂದಾಗ ತಾಯಿ ಕೋಳಿ ತಿನ್ನಿಸುವ, ಕಾಪಾಡುವ ಕ್ರಿಯೆ ಚಂದದ ನಗು ಕೊಡುತ್ತದೆ. ಮರಿಗಳು ದೊಡ್ಡದಾಗಿ ಬೇರೆ ಹೋಗುವವರೆಗೂ ಬೆಳೆಸುತ್ತದೆ. ನವಿಲಿನ ಕೂಗು ‘ಕ್ವಾ ಕ್ವಾ’ ಎಂಬ ಉದ್ದನೆಯ ಆಲಾಪನೆ. ಅನೇಕ ಕಿಲೋಮೀಟರು ದೂರದಿಂದಲೇ ಆಲಿಸಬಹುದು. ಅದೇ ರೀತಿ ಹೆಣ್ಣು ಕೂಡ ಆಲಿಸುತ್ತವೆ.
ವಿಕಾಸದ ಸಂಗಾತಿ
ಡಾರ್ವಿನ್ ಪಿತಾಮಹನಿಗೆ ತಲೆ ಕೆಡಿಸಿದ ಏಕೈಕ ವಿಷಯವೆಂದರೆ ನವಿಲುಗರಿಗಳು. ಆತ ಪ್ರತಿಪಾದಿಸಿದ ‘ಪ್ರಾಕೃತಿಕ ಆಯ್ಕೆಯ’ ಸಿದ್ಧಾಂತದಲ್ಲಿ ಇವು ಸರಿಹೊಂದಲಿಲ್ಲ, ನಂತರ ಬಹಳ ಯೋಚಿಸಿ ಸಮರ್ಥಿಸಿಕೊಂಡ. ಹೆಣ್ಣುಗಳು ಉದ್ದವಾದ ಗುಚ್ಛ ನೋಡಿ ಆಕರ್ಷಣೆಯಾಗುವುದಿಲ್ಲ. ಇತ್ತೀಚಿನ ಪ್ರಯೋಗವೊಂದರಲ್ಲಿ ಅನೇಕ ಗರಿಗಳನ್ನು ಕಿತ್ತುಹಾಕಲಾಯಿತು. ಆದರೂ ಹೆಣ್ಣು ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿತು. ಇನ್ನೊಂದು ಪ್ರಯೋಗದಲ್ಲಿ ಮುಂಗಾರಿನ ಸಮಯದಲ್ಲಿ ನಡೆಯುವ ನರ್ತನದಲ್ಲಿ ಗರಿಗಳ ಕಣ್ಣುಗಳ ಮೇಲೆ ಕಣ್ಣಿಡಲಾಯಿತು. ನಿರ್ಧಿಷ್ಟ ಸಂಖ್ಯೆಗಿಂತ ಕಡಿಮೆ ಅಥವಾ ಹೆಚ್ಚು ಕಣ್ಣುಗಳುಳ್ಳ ಗಂಡುಗಳ ಮೇಲೆ, ಹೆಣ್ಣು ಕಣ್ಣಾಯಿಸಲಿಲ್ಲ. ಮಗದೊಂದು ತಂಡದ ಪ್ರಕಾರ ಹೆಚ್ಚು ಕಣ್ಣುಗಳುಳ್ಳ ನವಿಲುಗರಿಗಳ ನವಿಲು ಹೆಚ್ಚು ಆರೋಗ್ಯದಾಯಕವೆಂದು ಹೇಳಿತು.
ಜಪಾನಿನ ತಂಡವೊಂದು ತಮ್ಮ ಏಳು ವರ್ಷದ ಸಂಶೋಧನೆಯಲ್ಲಿ ಪ್ರಾಕೃತಿಕ ಆಯ್ಕೆಯ ವಿಷಯದಲ್ಲಿ ನವಿಲುಗರಿಗಳ ಪಾತ್ರವೇ ಇಲ್ಲ ಎಂದು ಪ್ರತಿಪಾದಿಸಿಬಿಟ್ಟಿತು!! ನವಿಲುಗಳ ಸಮೂಹ ಕೊಂಚವೂ ಧೃತಿಗೆಡದೆ ತಮ್ಮ ಕುಂಚಗಳನ್ನು ಕುಣಿಸುತ್ತಲೇ ಇದ್ದವು. ಆದರೆ ವಿಜ್ಞಾನಿಗಳ ಸಮೂಹದಲ್ಲಿ ತಬ್ಬಿಬ್ಬು ಉಂಟಾಯಿತು, ಹೌಹಾರಿದರು. ತದನಂತರ ಡಾರ್ವಿನ್ ಹೇಳಿಕೆಯ ಮೇಲೆಯೇ ಅನೇಕ ಪ್ರಯೋಗ ಮಾಡಿದರೂ ಗೊಂದಲಗೊಂಡು ಈಗಲೂ ಯಕ್ಷಪ್ರಶ್ನೆಯಾಗೇ ಉಳಿದಿದೆ. ನವಿಲುಗರಿಯ ಕಣ್ಣುಗಳು, ಹೆಣ್ಣುನವಿಲಿಗಿಂತ ಹೆಚ್ಚು ವಿಜ್ಞಾನಿಗಳ ಕಣ್ಣು ಕುಕ್ಕಿದ್ದಂತೂ ನಿಜ. ಸಂಗಾತಿಯನ್ನು ಆಯ್ಕೆ ಮಾಡುವ ಹೆಣ್ಣಿನ ಮನದಾಳವನ್ನು ಅರಿಯಲು ಸಾಧ್ಯವೇ?
ಇವೆಲ್ಲವಕ್ಕೂ ಅಪವಾದವೆಂಬಂತೆ ಬಿಳಿ ನವಿಲುಗಳು ಗೋಚರಿಸುತ್ತವೆ. GP.ಸ್ಯಾಂಡರ್ ಸನ್, ಮಸಿನಗುಡಿಯಲ್ಲಿ ವನ್ಯ ಬಿಳಿ ನವಿಲನ್ನು ನೋಡಿ ದಾಖಲಿಸಿದ್ದನ್ನು M.ಕೃಷ್ಣನ್ ರಂತ ಪರಿಸರ ಪಂಡಿತರು ಧೃಡೀಕರಿಸಿದ್ದಾರೆ. ಅಂತಹವನ್ನು ತಂದು ಮೃಗಾಲಯಗಳಲ್ಲಿ ಮರಿ ಮಾಡಿಸಿ ನೋಡುಗರಿಗೆ ಮನೋಲ್ಲಾಸದ ಮುದ ನೀಡುತ್ತಾರೆ. ಬಿಳಿಯಲ್ಲವೇ ಎಲ್ಲಾ ಬಣ್ಣಗಳ ಮೂಲ. ಈಶಾನ್ಯ ದೇಶಗಳಲ್ಲಿ ಹಸಿರು ನವಿಲು ಮತ್ತು ಕಾಂಗೋದ ಮುಬುಲು ಎಂಬ ಇನ್ನೆರಡು ಜಾತಿ ಬಿಟ್ಟರೆ ಪ್ರಪಂಚದಾದ್ಯಂತ ನವಿಲುಗಳೇ ಕಾಣಸಿಗುವುದಿಲ್ಲ. ಅಮೆರಿಕನ್ನರ ಕಾನೂನು ಸಡಿಲವಿರುವುದರಿಂದ ಅನೇಕರು ನವಿಲುಗಳನ್ನು ಮೋಜಿಗಾಗಿ ಸಾಕುವ ಹುಚ್ಚಾಟಕ್ಕೆ ಇಳಿದಿದ್ದಾರೆ.
ಹೀಗೆ ಮಾನವನ ಕುಚೇಷ್ಟೆಯಿಂದ ನವಿಲು ವಿಲವಿಲನೆ ಒದ್ದಾಡದಿರುವುದು ಸಂತಸದ ಸಂಗತಿ. ಇದೇ ರೀತಿ ಎಲ್ಲ ಹಕ್ಕಿಗಳಿಗೂ ಮಾನ್ಯತೆ ಕೊಟ್ಟು ಆವಾಸಗಳಿಗೆ, ಕಾಡುಗಳಿಗೆ ಪ್ರಮುಖ ಆದ್ಯತೆ ಕೊಟ್ಟರೆ ಭಾರತೀಯ ಪ್ರಾಕೃತಿಕ ಸಂಪತ್ತನ್ನು ಅಳಿಯದೇ, ಉಳಿಸಬಹುದು.
ಲೇಖನ: ಮುರಳಿ .ಎಸ್
ಬೆಂಗಳೂರು ಜಿಲ್ಲೆ.