ಪ್ರಕೃತಿಯ ಮಡಿಲಲ್ಲಿ ” ಕೆಂಪು ಹರಟೆ ಮಲ್ಲ” ಹಕ್ಕಿಯ ಮೌನದ ಮಾತು

ಪ್ರಕೃತಿಯ ಮಡಿಲಲ್ಲಿ ” ಕೆಂಪು ಹರಟೆ ಮಲ್ಲ” ಹಕ್ಕಿಯ ಮೌನದ ಮಾತು

    © ಶಶಿಧರಸ್ವಾಮಿ ಆರ್. ಹಿರೇಮಠ

ಕುರುಚಲು ಕಾಡಿನ ಚಳಿಗಾಲದ ಬೆಳಗು ಎಂದರೆ ಅದು ಮೌನ ಮತ್ತು ಮಂಜಿನ ಜುಗಲ್‌ಬಂದಿ. ಎಲೆಗಳ ತುದಿಯಲ್ಲಿ ಇಬ್ಬನಿಯ ಹನಿಗಳು ಮುತ್ತಿನಂತೆ ತೂಗಾಡುತ್ತಿರುತ್ತವೆ. ಅಬ್ಬಾ… ಎಂತಹ ಚಳಿ! ಇಂದು ಬೆಳಿಗ್ಗೆ ಪೊದೆಯಿಂದ ಹೊರಬರಲು ಮನಸ್ಸೇ ಬರುತ್ತಿಲ್ಲ. ರೆಕ್ಕೆಗಳನ್ನು ಮುದುಡಿಕೊಂಡು, ಬೆಚ್ಚಗೆ ಕುಳಿತಿರೋಣ ಎಂದು ಎನಿಸಿದ್ದು ಸುಳ್ಳಲ್ಲ. ಸುತ್ತಲೂ ದಟ್ಟವಾದ ಮಂಜು, ಗಾಳಿಯಲ್ಲಿ ಹರಿತವಾದ ಕತ್ತಿಯಂತೆ ಮೈಯನ್ನು ಇರಿಯುವ ತಂಪು. ಈ ದಿನವನ್ನು ಹೊಸದಾಗಿ ಸ್ವಾಗತಿಸಬೇಕಲ್ಲವೇ? ಮೈಮೇಲೆ ಅಂಟಿದ ನಿನ್ನೆಯ ಧೂಳನ್ನು, ಆಲಸ್ಯವನ್ನು ತೊಳೆದುಕೊಳ್ಳದಿದ್ದರೆ ಈ ದಿನಕ್ಕೆ ಅರ್ಥವೆಲ್ಲಿದೆ? ಹಾಗಾಗಿಯೇ, ನಾನು ಮೆಲ್ಲನೆ ಹಾರಿ ಸ್ನಾನ ಮಾಡೋಣ ಅಂತಾ, ಚಂದ್ರು ಶಿಡೇನೂರ ತೋಟದಲ್ಲಿ ನಿಂತ ನೀರಿನ ಬಳಿ ಬಂದೆ. ಅಯ್ಯೋ! ಅಲ್ಲಿ ಶಶಿ ಮಾರುದ್ದ ಲೆನ್ಸ್ ಹಿಡ್ಕೊಂಡು ನನ್ನ ಪೊಟೋ ತೆಗೆಯೋಕೆ ಕೂತಿದ್ದಾನೆ! ನನಗೋ ನಾಚಿಕೆ ಬೇರೆ, ಗಿಡದ ಮರೆಗಿದ್ದ ನೀರಿನ ಗುಂಡಿಯತ್ತ ಹಾರಿ ಬಂದು ಸ್ನಾನಕ್ಕೆ ಸಿದ್ದನಾದೆ.

ಅಲ್ಲಿನ ನೀರು ಎಷ್ಟು ತಣ್ಣಗಿತ್ತೆಂದರೆ, ಇಡೀ ಆಕಾಶವೇ ಹೆಪ್ಪುಗಟ್ಟಿ ಆ ನಿಂತ ನೀರಿನ ಗುಂಡಿಗೆ ಇಳಿದಿದೆಯೇನೋ ಎಂಬಂತಿತ್ತು. ಮೊದಲು ಒಂದು ಕ್ಷಣ ಹಿಂಜರಿದೆ. ಒಂದು ಕಾಲಿಟ್ಟೆ… ‘ಅಮ್ಮಾ!’ ಎನಿಸುವಂತಹ ನಡುಕ ಮೈಯೆಲ್ಲಾ ವ್ಯಾಪಿಸಿತು. ಆದರೂ ಧೈರ್ಯ ಮಾಡಿ ಒಮ್ಮೆಲೇ ಮುಳುಗು ಹಾಕಿದೆ. ರೆಕ್ಕೆಗಳನ್ನು ಬಡಿಯುತ್ತಾ, ನೀರಿನ ಹನಿಗಳನ್ನು ಚಿಮ್ಮಿಸುತ್ತಾ ಮಿಂದು ಎದ್ದಾಗ, ಆ ಚಳಿ ಕೂಡ ಒಮ್ಮೆಲೇ ಮಾಯವಾಗಿ, ಎದೆಯೊಳಗೆ ಯಾವುದೋ ನವಚೈತನ್ಯ ಹರಿದಂತಾಯಿತು. ಸ್ನಾನ ಮುಗಿಸಿ ಈ ಒಣಗಿದ ರೆಂಬೆಯ ಮೇಲೆ ಬಂದು ಕುಳಿತಿದ್ದೇನೆ. ನನ್ನ ಹಸಿ ಹಸಿ ರೆಕ್ಕೆಗಳನ್ನು ಬಿಡಿಸಿ ಸೂರ್ಯನ ಪ್ರೀತಿಯ ಸ್ಪರ್ಶಕ್ಕಾಗಿ ಕಾಯುತ್ತಿದ್ದೇನೆ. ಆ ಬಿಸಿಲ ಕಿರಣಗಳು ನನ್ನ ಪ್ರತಿ ರೆಕ್ಕೆಯನ್ನು ಸ್ಪರ್ಶಿಸಿದಾಗ, ಹಬೆ ಏಳುವಂತೆ ಅನ್ನಿಸುತ್ತಿದೆ. ಚಳಿಯಲ್ಲಿ ಸ್ನಾನ ಮಾಡುವುದು ಕಷ್ಟವಿರಬಹುದು, ಆದರೆ ಸ್ನಾನದ ನಂತರದ ಈ ನಿರಾಳತೆ ಇದೆಯಲ್ಲ ಇಂತಹ ಆನಂದ ಬೇರೊಂದಿಲ್ಲ. ಸೂರ್ಯನ ಶಾಖ ನನ್ನ ಒದ್ದೆ ರೆಕ್ಕೆಗಳನ್ನು ಸ್ಪರ್ಶಿಸಿದಾಗ ಆಗುವ ಆ ಆನಂದವಿದೆಯಲ್ಲ, ಅದು ಯಾವ ರಾಜವೈಭೋಗಕ್ಕೂ ಸಮನಲ್ಲ. ಬದುಕೂ ಹಾಗೆಯೇ ಅಲ್ಲವೇ? ಸಂಕಷ್ಟದ ಚಳಿಯನ್ನು ಎದುರಿಸಿದಾಗಲೇ, ಸುಖದ ಬಿಸಿಲು ನಮಗೆ ಹೆಚ್ಚು ಮಧುರವಾಗಿ ಕಾಣುವುದು. ಈಗ ನಾನು ಹಗುರವಾಗಿದ್ದೇನೆ, ಶುಭ್ರವಾಗಿದ್ದೇನೆ. ಈಗ ನನ್ನ ಹಾಡು ಮತ್ತಷ್ಟು ಸ್ಪಷ್ಟವಾಗಿ, ಮತ್ತಷ್ಟು ಲವಲವಿಕೆಯಿಂದ ಕೇಳಿಸುತ್ತದೆ.

    © ಶಶಿಧರಸ್ವಾಮಿ ಆರ್. ಹಿರೇಮಠ

ಅಂದಹಾಗೆ ನನ್ನ ಹೆಸರು ಹೇಳೋದೆ ಮರೆತೆ ನೋಡಿ. ನಾನು ‘ಕೆಂಪು ಹರಟೆ ಮಲ್ಲ’, ‘ಕೆಂಪು ಗೀಜಗಾರ್ಲು ಹಕ್ಕಿ’ ಅಥವಾ ‘ಚೀರಪಕ್ಷಿ’ ಅಂತಲೂ ನನ್ನನ್ನು ಕರೆಯುತ್ತಾರೆ; ಇಂಗ್ಲೀಷಿನಲ್ಲಿ ನನಗೆ ಟಾನಿ ಬೆಲ್ಲೀಡ್ ಬ್ಯಾಬ್ಲರ್ (Tawny-bellied Babbler), ರೂಫಸ್ ಬೆಲ್ಲೀಡ್ ಬ್ಯಾಬ್ಲರ್ (Rufous bellied Babbler) ಅಥವಾ ವೈಟ್ ಥ್ರೋಟೆಡ್ ಬ್ಯಾಬ್ಲರ್ (White-throated Babbler) ಎಂಬ ಹೆಸರುಗಳಿವೆ, ಪಕ್ಷಿ ತಜ್ಞರು ನನ್ನನ್ನು ಡುಮೇಟಿಯಾ ಹೈಪರಿತ್ರಾ (Dumetia hyperythra) ಎಂದು ವೈಜ್ಞಾನಿಕವಾಗಿ ಹೆಸರಿಸಿ, ಪಾಸ್ಸರಿಫಾರ್ಮಿಸ್ (Passeriformes) ಗಣದ, ಟಿಮಾಲಿಡೇ (Timaliidae) ಕುಟುಂಬಕ್ಕೆ ಸೇರಿಸಿದ್ದಾರೆ.

ನಾನು ಈ ವಿಶಾಲವಾದ ಕುರುಚಲು ಕಾಡಿನ ಒಂದು ಪುಟ್ಟ ಜೀವಿ. ನನ್ನನ್ನು ನೀವು ನೋಡುತ್ತಿದ್ದೀರಾ? ಈ ಒಣಗಿದ ರೆಂಬೆಯ ಮೇಲೆ ನಾನು ಎಷ್ಟು ಆರಾಮವಾಗಿ ಕುಳಿತಿದ್ದೇನೆ ಎಂದರೆ, ಇಡೀ ಪ್ರಪಂಚದ ಸೌಂದರ್ಯವೇ ನನ್ನ ಪುಟ್ಟ ರೆಕ್ಕೆಗಳ ಕೆಳಗೆ ಅಡಗಿದಂತಿದೆ. ನನ್ನ ಮೈಬಣ್ಣವನ್ನು ಒಮ್ಮೆ ನೋಡಿ. ನನ್ನ ಎದೆಯ ಭಾಗಕ್ಕೆ ಸೂರ್ಯನೇ ಬಣ್ಣ ಬಳೆದಿದ್ದಾನೋ ಏನೋ ಎಂಬಂತೆ ಕಿತ್ತಳೆ ಬಣ್ಣ ಹೊಳೆಯುತ್ತಿದೆ. ಈ ಬಿಳಿ ಕಂಠ, ನಾನು ಹಾಡುವ ಹಾಡಿಗೆ ಒಂದು ಅಚ್ಚ ಶುಭ್ರ ಗೌರವದಂತೆ ಕಾಣುವುದಿಲ್ಲವೇ? ನೀವು ನನ್ನನ್ನು ‘ಹರಟೆಮಲ್ಲ’ ಎನ್ನುವುದು ಸತ್ಯ; ಹೌದು! ನಾನು ನನ್ನ ಗೆಳೆಯರೊಂದಿಗೆ ಸದಾ ಚಿಲಿಪಿಲಿ ಅಂತ ಮಾತನಾಡುತ್ತಲೇ ಇರುತ್ತೇನೆ. ಒಂಟಿತನ ನನಗಿಷ್ಟವಿಲ್ಲ; ನಾವು ಗುಂಪಾಗಿ ಸಂಭ್ರಮಿಸುವವರು. ನನ್ನ ಬದುಕು ತುಂಬಾ ಸರಳ. ನಾನು ಎತ್ತರದ ಆಕಾಶದಲ್ಲಿ ಹಾರುವ ಹದ್ದಲ್ಲ, ಅತಿ ದೂರದೂರಿಗೆ ವಲಸೆ ಹೋಗುವ ಹಕ್ಕಿಯೂ ನಾನಲ್ಲ. ಈ ಕುರುಚಲು ಗಿಡಗಳು, ಈ ಒಣಗಿದ ಮರದ ಕೊಂಬೆಗಳು ಮತ್ತು ನೆಲದ ಮೇಲೆ ಸಿಗುವ ಪುಟ್ಟ ಹುಳ-ಹಪ್ಪಟೆಗಳೇ ನನ್ನ ಪ್ರಪಂಚ. ಗದ್ದಲದ ಪ್ರಪಂಚಕ್ಕೆ ನಾನು ಕಾಣಿಸದಿರಬಹುದು, ಆದರೆ ನಾನು ಇಲ್ಲದಿದ್ದರೆ ಈ ಕಾಡಿನ ಸಂಗೀತ ಅಪೂರ್ಣ.

    © ಶಶಿಧರಸ್ವಾಮಿ ಆರ್. ಹಿರೇಮಠ

ನಾನು ಗುಬ್ಬಚ್ಚಿ ಗಾತ್ರದ ಕಂದು ಕಿತ್ತಳೆ ಬಣ್ಣದ ಹಕ್ಕಿ; ಗದ್ದ, ಕತ್ತು, ಎದೆ, ಹೊಟ್ಟೆ ಹಾಗೂ ತಳಭಾಗ ತಿಳಿ ಕಿತ್ತಳೆ. ಕಂಠವು ಬಿಳುಪಾಗಿದೆ, ಕೊಕ್ಕು ತಿಳಿ ಕಿತ್ತಳೆ, ಬಾಲ ಹಾಗೂ ಬೆನ್ನು ಕಂದು ಮಿಶ್ರಿತ ಹಸಿರು, ಹೊಳೆಯವ ತಿಳಿ ಬಣ್ಣದ ಕಣ್ಣುಗಳಿವೆ. ಕಾಲುಗಳು ತಿಳಿ ಗುಲಾಬಿ ಬಣ್ಣದಿಂದ ಕೂಡಿವೆ. ನನ್ನ ಆವಾಸಸ್ಥಾನ ಕೃಷಿಭೂಮಿ, ಹುಲ್ಲುಗಾವಲು, ಕುರುಚಲು ಕಾಡುಗಳ ಪೊದೆಗಳಾಗಿವೆ. ನಾನು ‘ಸ್ವೀಚ್…….. ಸ್ವೀಚ್……..ಸ್ವೀಚ್……..’ ಎಂದು ಸುಮಧುರವಾಗಿ ಕೂಗುವೆ. ನಾನು ಕೀಟಾಹಾರಿಯಾಗಿದ್ದು, ನನ್ನ ಆಹಾರ ಹುಡುಕುವ ಶೈಲಿ ಬಹಳ ವಿಶಿಷ್ಟವಾಗಿದೆ. ನೆಲದ ಮೇಲೆ ಬಿದ್ದಿರುವ ಒಣಎಲೆಗಳನ್ನು ನನ್ನ ಕೊಕ್ಕಿನಿಂದ ಮಗುಚಿ ಹಾಕಿ, ಅದರ ಕೆಳಗಿರುವ ಕೀಟಗಳನ್ನು ಪತ್ತೆಹಚ್ಚಿ ತಿನ್ನುತ್ತೇನೆ. ಹಾಗೆಯೇ ಪೊದೆಗಳ ಕೆಳಭಾಗದಲ್ಲಿ ಹಾರಾಡುತ್ತಾ ಆಹಾರ ಹುಡುಕುತ್ತಿರುತ್ತೇನೆ. ನನ್ನ ಊಟದ ಮೆನುವಿನಲ್ಲಿ ಸಣ್ಣ ಜೇಡಗಳು, ಮಿಡತೆಗಳು, ಮರಿಕೀಟಗಳು, ಇರುವೆಗಳು ಮತ್ತು ಇತರ ಸಣ್ಣ ಪುಟ್ಟ ಕೀಟಗಳು ಸೇರಿವೆ. ಅಪರೂಪಕ್ಕೆ ನಾನು ಕೆಲವು ಹೂವುಗಳ ಮಕರಂದವನ್ನೂ ಸೇವಿಸುವುದುಂಟು. ಅದರಲ್ಲೂ ‘ಮುತ್ತುಗ’ದ ಹೂವು ಅಂದರೆ ಪಂಚಪ್ರಾಣ. ನಾನು ಹೆಚ್ಚಾಗಿ ಗುಂಪುಗಳಲ್ಲಿ 6-10 ಸಹೋದರ ಸರೋದರಿಯರೊಂದಿಗೆ ಆಹಾರ ಅರಸುತ್ತಿರುತ್ತೇನೆ.

ನಮ್ಮ ಸಂತಾನೋತ್ಪತ್ತಿಯ ಕಾಲವು ಸಾಮಾನ್ಯವಾಗಿ ಮಳೆಗಾಲದ ಸಮಯವಾಗಿದ್ದು, ‘ಮೇ’ ತಿಂಗಳಿನಿಂದ ‘ಸೆಪ್ಟೆಂಬರ್’ವರೆಗೆ ನೆಲಕ್ಕೆ ಬಹಳ ಸನಿಹದಲ್ಲಿ ದಟ್ಟವಾದ ಪೊದೆಗಳ ನಡುವೆ ಗೂಡು ಕಟ್ಟುತ್ತೇವೆ. ನಮ್ಮ ಗೂಡು ಚೆಂಡಿನ ಆಕಾರದಲ್ಲಿ ಇರುತ್ತದೆ. ಗೂಡನ್ನು ಒಣಗಿದ ಹುಲ್ಲು ಅಥವಾ ಬಿದಿರಿನ ಎಲೆಗಳಿಂದ ಮಾಡಿ, ಗೂಡಿನ ಪಕ್ಕದಲ್ಲಿ ಪ್ರವೇಶ ದ್ವಾರವನ್ನು ಮಾಡಿಕೊಂಡಿರುತ್ತೇನೆ. 3 ರಿಂದ 4 ಬಿಳಿ ಅಥವಾ ಕೆನೆ ಬಣ್ಣವಿರುವ, ಮೇಲೆ ಕೆಂಪು-ಕಂದು ಬಣ್ಣದ ಸಣ್ಣ ಚುಕ್ಕೆಗಳನ್ನು ಹೊಂದಿರುವ ಮೊಟ್ಟೆಗಳನ್ನು ಇಡುತ್ತೇವೆ. ಗೂಡು ಕಟ್ಟುವುದು ಮತ್ತು ಮರಿಗಳಿಗೆ ಆಹಾರ ತಂದುಕೊಡುವ ಕೆಲಸವನ್ನು ನಾವು ದಂಪತಿಗಳಿಬ್ಬರೂ ಸಮಾನವಾಗಿ ನಿರ್ವಹಿಸುತ್ತೇವೆ. ಕೆಲವು ಸಲ ಕೋಗಿಲೆ, ಚಾಣದಂತಹ ಇತರ ಹಕ್ಕಿಗಳ ಮರಿಗಳನ್ನು ಸಾಕಿ ಬೆಳೆಸುತ್ತೇವೆ.

ನಾನು ನಿಮ್ಮಂತೆ ಅತಿ ಆಸೆಯವನಲ್ಲ. ನನಗೆ ಬೇಕಾಗಿರುವುದು ಕೇವಲ ಒಂದು ಸುರಕ್ಷಿತ ಪೊದೆ ಮತ್ತು ಕುಡಿಯಲು ಒಂದಿಷ್ಟು ಶುದ್ಧ ನೀರು. ಈ ಪ್ರಕೃತಿ ನಮಗೆಷ್ಟೋ ನೀಡಿದೆ, ಅದನ್ನು ಉಳಿಸಿಕೊಳ್ಳೋಣ. ನನ್ನ ಈ ಪುಟ್ಟ ಬಣ್ಣದ ನೋಟ, ನಿಮ್ಮ ಮುಖದಲ್ಲಿ ಒಂದು ಸಣ್ಣ ಮಂದಹಾಸ ಮೂಡಿಸಿದರೆ, ಅಷ್ಟೇ ಸಾಕು ನನಗೆ, ಬರುತ್ತೇನೆ, ಬಾಯ್ ಬಾಯ್! ನನ್ನ ಗೆಳೆಯರು ಪೊದೆಯ ಆ ಕಡೆಯಿಂದ ಕರೆಯುತ್ತಿದ್ದಾರೆ. ಮತ್ತೆ ಸಿಗೋಣ…

    © ಶಶಿಧರಸ್ವಾಮಿ ಆರ್. ಹಿರೇಮಠ

ಲೇಖನ: ಶಶಿಧರ ಸ್ವಾಮಿ ಆರ್. ಹಿರೇಮಠ
                     ಹಾವೇರಿ ಜಿಲ್ಲೆ

Spread the love

One thought on “ಪ್ರಕೃತಿಯ ಮಡಿಲಲ್ಲಿ ” ಕೆಂಪು ಹರಟೆ ಮಲ್ಲ” ಹಕ್ಕಿಯ ಮೌನದ ಮಾತು

  1. ಲೇಖನದ ಪ್ರಾರಂಭ ಕುವೆಂಪು ಅವರ ಅಜ್ಜಯ್ಯನ ಅಭ್ಯಂಜನಕ್ಕಿಂತಲೂ ಕಡಿಮೆ ಏನಿಲ್ಲ ಸರ್. ಹರಟೆಮಲ್ಲನ ಹರಟೆಯನ್ನು ಹಕ್ಕಿಯ ಸ್ವಗತದಂತೆಯೇ ವಿವರಿಸಿರುವುದು ನಿಮ್ಮ ಕ್ರಿಯಾಶೀಲತೆ ಮತ್ತು ಹಕ್ಕಿಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವುದನ್ನು ತಿಳಿಸುತ್ತದೆ. ಲೇಖನ‌ ಉತ್ತಮವಾಗಿದೆ. ಅಭಿನಂದನೆಗಳು ಸರ್

Comments are closed.

error: Content is protected.