ಮರ ನೀ ಅಮರ

ಮರ ನೀ ಅಮರ

ಮರಗಳೇ ನಿಮ್ಮ ಹೆಸರಲ್ಲಿದೆ ಎರಡೇ ಎರಡು ಅಕ್ಷರ 

ಆದರೂ ಬೆಳೆಯುವಿರಿ ನೀವು ಬಹಳ ಎತ್ತರ 

ಪರಿಸರದ ನೂರು ಪ್ರಶ್ನೆಗಳಿಗೆ ನೀವೇ ಉತ್ತರ 

ನಿಮ್ಮ ಸಲಹಿದ ವೃಕ್ಷ ಮಾತೆ ತಿಮ್ಮಕ್ಕನ ನಡುಗೆ ಅಕ್ಕರೆಯ ಆಗರ 

ಹಸಿರಾಗಿ ಹಬ್ಬುವ ರೆಂಬೆ ಕೊಂಬೆಗಳು ಹಕ್ಕಿಗಳ ಗೂಡು

ನಿಮ್ಮ ನೆರಳು ಕೋಟಿ ಕೋಟಿ ಕೀಟಗಳ ನಾಡು 

ಮಣ್ಣೊಳಗೆ ಬೇರುಗಳು ಸೂಕ್ಷ್ಮ ಜೀವಿಗಳ ಕಾಡು

ಒಣಗಿ ಉದುರಿದರೆ ಎಲೆಗಳು ರಸಗೊಬ್ಬರದ ಬೀಡು 

ಕಾಡಲ್ಲಿ ನೀವು ಇಳೆಗೂ ಮಳೆಗೂ ಬೆಸುಗೆಯ ಕೊಂಡಿ 

ಹೊಲದಲ್ಲಿ ಒಣಗಿ ಧರೆಗುರುಳಿದರೆ ಎತ್ತಿನ ಬಂಡಿ

ಮನೆಗಳಲ್ಲಿ ಕಿಟಕಿಮಂಚ ಸುಖಾಸನಗಳ ಜೋಡಿ 

ಬೇಡವಾದರೆ ಅಗ್ನಿಯಲ್ಲಿ ಅಂತಿಮ ನುಡಿ.

ಮಣ್ಣ ಸಂರಕ್ಷಣೆ ನಿಮ್ಮ ಬವಣೆ 

ಸಕಲ ಜೀವಿಗಳ ಮೇಲೂ ನಿಮಗಿದೆ ಅಗಾಧ ಕರುಣೆ 

ನಿಮ್ಮನ್ನೆಲ್ಲಾ ರಕ್ಷಿಸುವುದು ಪ್ರತಿ ಮನುಜನ ಹೊಣೆ 

ಅಂತಿಮವಾಗಿ ನೀವೇ ಅಲ್ಲವೆ ಸಕಲರ ಜೀವಾಧಾರಣೆ?

        ಬಿ. ಸೀತಾರಾಮ

                  ಬೆಂಗಳೂರು ಜಿಲ್ಲೆ

ಪ್ರಕೃತಿ ಬಿಂಬ

 ಕಂದು ಹೂ ©  ಡಾ. ಶಿಶುಪಾಲ ಎಸ್.
ಏಷ್ಯಾ ಖಂಡದ ಸಮತಟ್ಟು ಪ್ರದೇಶ, ಎಲೆ ಉದುರುವ ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಈ ಚಿಟ್ಟೆಯು ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜುನೋನಿಯಾ ಇಫಿಟಾ (Junonia iphita) ಎಂದು ಕರೆಯಲಾಗುತ್ತದೆ. ಕಿತ್ತಳೆ ಕಂದು ಬಣ್ಣದ ಮೇಲ್ಭಾಗವನ್ನು ಹೊಂದಿದ್ದು, ಹಲವಾರು ಕಂದು ಪಟ್ಟೆಗಳನ್ನೂ ಸಹ ಹೊಂದಿದೆ. ಕೆಳಗಿನ ರೆಕ್ಕೆಗಳ ಮೇಲೆ ಹಲವಾರು ಕೆಂಪು ಮಿಶ್ರಿತ ಕಂದು ಬಣ್ಣದ ಕಣ್ಣಿನಂತಹ ಮಚ್ಚೆಗಳ ಸರಣಿಯನ್ನು ಹೊಂದಿದೆ. ಸಾಮಾನ್ಯವಾಗಿ ರೆಕ್ಕೆಗಳನ್ನು ತೆರೆದು ಗಿಡ ಅಥವಾ ನೆಲದ ಮೇಲೆ ಕೂತು ಬೇಟೆಯಾಡುತ್ತದೆ. ಅಕಾಂಥೇಸಿ (Acanthaceae) ಕುಟುಂಬಕ್ಕೆ ಸೇರುವ ರುಯೆಲಿಯಾ ರಿಪನ್ಸ್ (Ruellia repens) ಮತ್ತು ಹೆಮಿಗ್ರಾಫಿಸ್ ರೆಪ್ಟಾನ್ಸ್ (Hemigraphis reptans) ಇದರ ಅತಿಥೇಯ ಸಸ್ಯಗಳಾಗಿವೆ. 

ಅಲೆಮಾರಿ   ©  ಡಾ. ಶಿಶುಪಾಲ ಎಸ್.
ಏಷ್ಯಾ ಮತ್ತು ಆಸ್ಟ್ರೇಲಿಯಾ ಖಂಡಗಳ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ಎಲೆ ಉದುರುವ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಈ ಅಲೆಮಾರಿ ಚಿಟ್ಟೆಯು ಪಿಯರಿಡೇ (Pieridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಕ್ಯಾಟೊಪ್ಸಿಲಿಯಾ ಪೊಮೊನಾ (Catopsilia pomona) ಎಂದು ಕರೆಯಲಾಗುತ್ತದೆ. ರೆಕ್ಕೆಗಳು ಹಳದಿ ಅಥವಾ ತೆಳು ಹಸಿರು ಮಿಶ್ರಿತ ಬಿಳಿ ಬಣ್ಣದ್ದಾಗಿವೆ. ಕೆಲವೊಮ್ಮೆ ಹೆಣ್ಣು ಚಿಟ್ಟೆಗಳು ತೆಳು ಹಳದಿ ಬಣ್ಣವಿದ್ದು, ಕೆಳಗಿನ ರೆಕ್ಕೆಗಳ ಹಿಂಭಾಗದ ಕೋಶದ ತುದಿಯಲ್ಲಿ ಕಂದು ಬಣ್ಣದ ಮಚ್ಚೆಗಳನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ಸಾವಿರಾರು ಚಿಟ್ಟೆಗಳು ತೇವಾಂಶವಿರುವ ಮಣ್ಣಿನ ಮೇಲೆ ಕುಳಿತು ಖನಿಜಗಳನ್ನು ಹೀರಿಕೊಳ್ಳುತ್ತವೆ. ಗುಂಪಿನಲ್ಲಿ ವಲಸೆ ಹೋಗುತ್ತವೆ. ಫ್ಯಾಬೇಸಿ (Fabaceae) ಕುಟುಂಬದ ಸೀಮೆತಂಗಡಿ ಮರ, ಮುತ್ತುಗ ಮರ ಇದರ ಅತಿಥೇಯ ಸಸ್ಯಗಳಾಗಿವೆ.

ನೀಲಿ ಕುಪ್ಪಿ  © ಡಾ. ಶಿಶುಪಾಲ ಎಸ್.
ಪೂರ್ವ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಎಲೆ ಉದುರುವ ಕಾಡು ಮತ್ತು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ನೀಲಿ ಕುಪ್ಪಿ ಚಿಟ್ಟೆಯು ಪ್ಯಾಪಿಲಿಯೊನಿಡೆ (Papilionidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಗ್ರ್ಯಾಫಿಯಂ ಸಾರ್ಪೆಡಾನ್ (Graphium sarpedon) ಎಂದು ಕರೆಯಲಾಗುತ್ತದೆ. ಕೆಳಗಿನ ಮತ್ತು ಮೇಲಿನ ರೆಕ್ಕೆಗಳು ಕಪ್ಪಾಗಿದ್ದು, ತಳದ ಹೊರಭಾಗದಲ್ಲಿ ಉದ್ದವಾದ ನೀಲಿ ಪಟ್ಟೆಯಿರುತ್ತದೆ ಮತ್ತು ಅದರ ಸುತ್ತ ಕೆಲವು ಕೆಂಪು ಬಣ್ಣದ ಮಚ್ಚೆಗಳಿರುತ್ತವೆ. ಅಂಚಿನಲ್ಲಿ ಅರ್ಧ ಚಂದ್ರಾಕೃತಿಯ ನೀಲಿ ಮಿಶ್ರಿತ ಹಸಿರು ಮಚ್ಚೆಗಳಿರುತ್ತವೆ. ವೇಗವಾಗಿ ಹಾರಾಡುತ್ತವೆ ಮತ್ತು ತೇವಾಂಶವಿರುವ ಮಣ್ಣಿನ ಮೇಲೆ ಗುಂಪುಗುಂಪಾಗಿ ಕಂಡು ಬರುತ್ತವೆ. ಲಾರೇಸಿ (Lauraceae) ಕುಟುಂಬದ ಕಾಡು ದಾಲ್ಚಿನ್ನಿ ಹಾಗೂ ಕರ್ಪೂರದ ಮರದ ಜಾತಿಗೆ ಸೇರಿದ ವಿವಿಧ ಮರಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

 ತ್ರಿವರ್ಣೆ  © ಡಾ. ಶಿಶುಪಾಲ ಎಸ್.

ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡು, ಎಲೆ ಉದುರುವ ಕಾಡು ಮತ್ತು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಈ ತ್ರಿವರ್ಣೆ ಚಿಟ್ಟೆಯು ಪಿಯರಿಡೇ (Pieridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಡೆಲಿಯಾಸ್ ಯೂಕರಿಸ್ (Delias eucharis) ಎಂದು ಕರೆಯಲಾಗುತ್ತದೆ. ಮೇಲಿನ ರೆಕ್ಕೆಯ ಹಿಂಭಾಗ ಕಪ್ಪು ಬಣ್ಣದಾಗಿದ್ದು, ಅಂಚಿನಲ್ಲಿ ಹಾಗೂ ಬಿಳಿ ಕೋಶದ ಹೊರಭಾಗದಲ್ಲಿ ಬಿಳಿ ಮಚ್ಚೆಗಳ ಎರಡು ಸಾಲಿರುತ್ತದೆ. ಕೆಳಗಿನ ರೆಕ್ಕೆಯ ಹಿಂಭಾಗದ ಅಂಚಿನಲ್ಲಿ ಕೆಂಪು ಮಚ್ಚೆಗಳ ಸಾಲಿದ್ದು, ಉಳಿದ ಭಾಗ ಮಂದ ಹಳದಿ ಬಣ್ಣದ್ದಾಗಿರುತ್ತದೆ. ತನ್ನ ಪ್ರಕಾಶಮಾನವಾದ ಬಣ್ಣದಿಂದ ಈ ಎಚ್ಚರಿಕೆಯನ್ನು ಕೂಡ ನೀಡುತ್ತದೆ. ಎತ್ತರದ ಮರಗಳಲ್ಲಿ ಹಾರಾಡುತ್ತವೆ ಮತ್ತು ಹೂಗಳ ಬಳಿ ಹೆಚ್ಚಾಗಿ ಕಾಣಬಹುದು. ಲೊರಾಂಥೇಸಿ (Loranthaceae) ಕುಟುಂಬದ ಬಂದಳಿಕೆ ಗಿಡ ಇದರ ಅತಿಥೇಯ ಸಸ್ಯವಾಗಿದೆ

ಚಿತ್ರ: ಡಾ. ಶಿಶುಪಾಲ ಎಸ್.

ಲೇಖನ: ದೀಪ್ತಿ ಎನ್.

Spread the love

Leave a Reply

Your email address will not be published. Required fields are marked *

error: Content is protected.