ಹುಲಿ ಸೊಪ್ಪು ಮರ
Ironwood tree
Memecylon umbellatum
© ಡಾ ಅಶ್ವಥ ಕೆ ಎನ್
ಹುಳಿ ಸೊಪ್ಪು ಮರವು ಸಾಮಾನ್ಯವಾಗಿ ಭಾರತ, ಶ್ರೀಲಂಕಾ, ಅಂಡಮಾನ್-ನಿಕೋಬಾರ್ ದ್ವೀಪಗಳು, ಮ್ಯಾನ್ಮಾರ್ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ ಕಾಣಿಸುತ್ತದೆ. ಹುಳಿ ಸೊಪ್ಪು ಮರವು ಒಂದು ಸಣ್ಣ ಮರವಾಗಿದೆ. ಇದು ಸುಮಾರು 6 ಮೀಟರ್ ಎತ್ತರ ಬೆಳೆಯಬಲ್ಲದು. ಇದರ ತೊಗಟೆ ಒರಟಾಗಿದೆ.
ಇದರ ಎಲೆಗಳು ಸುಮಾರು 5 ಸೆಂಟಿಮೀಟರ್ ಉದ್ದವಿದ್ದು, ಸರಳ ಎಲೆಗಳಾಗಿವೆ. ಸುವಾಸನೆಯಿಂದ ಕೂಡಿದ ನೀಲಿ ಬಣ್ಣದ ಕಿರು ಹೂಗಳು ಗುಚ್ಛಗುಚ್ಛವಾಗಿ ಇರುತ್ತವೆ. ಇದರ ಹಣ್ಣುಗಳು ನೇರಳೆ ಬಣ್ಣದಲ್ಲಿದ್ದು, ಸುಮಾರು ಒಂದು ಸೆಂಟಿಮೀಟರ್ ಗಾತ್ರ ಇರುತ್ತವೆ. ಸಾಮಾನ್ಯವಾಗಿ ಫೆಬ್ರವರಿಯಿಂದ ಮಾರ್ಚ್ ತಿಂಗಳಲ್ಲಿ ಹೂ ಬಿಡುತ್ತದೆ (ಪ್ರದೇಶಾನುಸಾರ ಸಮಯ ಬದಲಾಗಬಹುದು). ಇದರ ದೊಡ್ಡ ಮರವು ಮುಖ್ಯವಾಗಿ ಕಾಡುಗಳಲ್ಲಿ ಕಾಣಬಹುದು. ಕೆಲವು ವೇಳೆ ಕಾಡಂಚುಗಳಲ್ಲಿ ಈ ಮರ ಪೊದೆಗಳಂತೆ ಬೆಳೆದಿರುವುದನ್ನು ಕಾಣಬಹುದು.
ಇದರ ಬೀಜಗಳನ್ನು ಸುಮಾರು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ಮಣ್ಣಿನ ಪ್ರತಿ ಕುಂಡಕ್ಕೆ ನಾಲ್ಕು ಬೀಜಗಳನ್ನು ಬಿತ್ತನೆ ಮಾಡಿ, ಕಾಲಕಾಲಕ್ಕೆ ನೀರು ಕೊಟ್ಟರೆ 10 ರಿಂದ 14 ದಿನಗಳಲ್ಲಿ ಮೊಳಕೆ ಒಡೆಯುತ್ತವೆ (ಅಂಕುರಣ ಪ್ರಮಾಣ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ).
ಇದರ ಕೊಂಬೆಗಳು ಮತ್ತು ಮರದ ಭಾಗಗಳು ಬಲಿಷ್ಠವಾಗಿರುವುದರಿಂದ ರೈತರು ತಮ್ಮ ಸಣ್ಣಪುಟ್ಟ ಉಪಕರಣಗಳಾದ ಕೈಗುದ್ದಲಿ ಮತ್ತು ಇತರೆ ರೈತಾಪಿ ಉಪಕರಣಗಳನ್ನು ತಯಾರಿಸಲು ಬಳಸುತ್ತಾರೆ.
ಈ ಮರದ ಎಲೆ ಮತ್ತು ಬೇರುಗಳಲ್ಲಿ ಹಲವು ಔಷಧೀಯ ಗುಣಗಳು ಇರುವುದಾಗಿ ಪಾರಂಪರಿಕ ವೈದ್ಯಕೀಯದಲ್ಲಿ ಉಲ್ಲೇಖಗಳಿವೆ. ರೋಗ ನಿರೋಧಕವಾಗಿ ಬಳಸುತ್ತಾರೆ ಎಂದು ನಂಬಿಕೆ ಇದೆ. ರಕ್ತನಾಳ ಕಾಯಿಲೆಗಳು, ಮುಟ್ಟಿನ ಸಮಸ್ಯೆ, ಮಧುಮೇಹ ನಿಯಂತ್ರಣಕ್ಕೆ ಇದರ ಎಲೆಗಳನ್ನು ಬಳಸುತ್ತಾರೆ ಎಂಬುದು ಪರಂಪರೆ. ಎಲೆಗಳಲ್ಲಿ ಉರಿ ನಿವಾರಕ ಮತ್ತು ಶಿಲೀಂಧ್ರ ನಾಶಕ ಗುಣಗಳಿರುವುದಾಗಿ ಕೆಲವು ಅಧ್ಯಯನಗಳು ಸೂಚಿಸುತ್ತವೆ; ಆದ್ದರಿಂದ ಕೆಮ್ಮು ಮತ್ತು ಅತಿಸಾರಕ್ಕೆ ಜನಪದ ವೈದ್ಯಕೀಯದಲ್ಲಿ ಬಳಸುತ್ತಾರೆ.
ಲೇಖನ: ಶಂಕರಪ್ಪ ಕೆ ಪಿ
ಶಾಂತಮ್ಮ ಎಸ್
(ಬೆಂಗಳೂರು ಜಿಲ್ಲೆ)
