ವನಸುಮ – ಕರಿಮತ್ತಿ

ವನಸುಮ – ಕರಿಮತ್ತಿ

        © ಸುನಿಲ್ ಆರ್.

English Name: Black Murdah 

Scientific Name: Terminalia crenulata

ಟರ್ಮಿನಾಲಿಯಾ ಕ್ರೆನುಲಾಟಾ (Terminalia crenulata) ಮರವನ್ನು ಸಾಮಾನ್ಯವಾಗಿ ಕರಿಮತ್ತಿ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಬೇಸಿಗೆಯಲ್ಲಿ ಎಲೆ ಉದುರಿಸಿ ಬೋಳಾಗಿ ಕಾಣುವ ಈ ಮರ ಭಾರತ, ಶ್ರೀಲಂಕಾ, ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಕರ್ನಾಟಕದ ಕೊಡಗು, ಹಾಸನ, ಧಾರವಾಡ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಣಸಿಗುತ್ತದೆ. ಸಮುದ್ರ ಮಟ್ಟದಿಂದ 800-1000 ಮೀಟರ್ ಎತ್ತರ ಇರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ಮರ ಬೆಟ್ಟ ಪ್ರದೇಶಗಳಲ್ಲಿ, ನದಿ ದಡಗಳಲ್ಲಿ, ಹಳ್ಳಗಳ ಬಳಿ ಕಂಡುಬರುತ್ತದೆ. ಇದರ ಕಾಂಡದ ಮೇಲೆ ಇರುವ ಬೂದು ಮಿಶ್ರಿತ ಕಪ್ಪು ಬಣ್ಣದ ತೊಗಟೆಯ ಮೇಲೆ ಮೊಸಳೆಯ ಚರ್ಮದಂತ ಅಡ್ಡಡ್ಡ ಉದ್ದುದ್ದ ಬಿರುಕುಗಳು ಇರುತ್ತವೆ. ಬಲಿತ ಮರದ ಕಾಂಡದ ತಿರುಳು ಕೂಡ ಕಂದು ಬಣ್ಣದಲ್ಲಿ ಇರುತ್ತದೆ. 30 ರಿಂದ 40 ಅಡಿ ಎತ್ತರಕ್ಕೆ ಬೆಳೆಯುವ ಈ ಮರದ ಸುತ್ತಳತೆ ಸುಮಾರು ಮೂರುವರೆ ಮೀಟರ್.  ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ತನ್ನ ಎಲೆಗಳನ್ನು ಉದುರಿಸಿ ಬೋಳಾಗಿ ಕಾಣುತ್ತದೆ. ಕಾಂಡಕ್ಕೆ ಏನಾದರೂ ಪೆಟ್ಟು ಬಿದ್ದರೆ ಹಳದಿ ಬಣ್ಣದ ಅಂಟು ದ್ರವ ಹೊರಬಂದು ಗಟ್ಟಿಯಾಗುತ್ತದೆ. ಎಲೆಗಳು 12-15 ಸೆಂ. ಮೀ. ಉದ್ದವಿದ್ದು, ಮಾವಿನ ಎಲೆಗಳನ್ನು ಹೋಲಿದರೂ, ಎಲೆಯ ತುದಿ ಸ್ವಲ್ಪ ಅಗಲವಿದ್ದು, ತುದಿ ಚೂಪಾಗಿರದೆ ಮೊಂಡಾಗಿ ಇರುತ್ತದೆ.  ಚಿಗುರೆಲೆಗಳ ಮೇಲೆ ರೋಮದಂತಹ ರಚನೆ ಇರುತ್ತದೆ. ಎಲೆಗಳ ತೊಟ್ಟಿನ ಬಳಿ ಎರಡು ಸಣ್ಣ ಗಂತಿಗಳು ಇರುತ್ತವೆ.

© ಸುನಿಲ್ ಆರ್.

ಈ ಮರವು ಜೂನ್ ತಿಂಗಳಲ್ಲಿ ಹೂ ಬಿಡುತ್ತದೆ. ಗೊಂಚಲು ಗೊಂಚಲಾಗಿ ಬಿಡುವ ಇದರ   ಹೂ ಗುಚ್ಛದಲ್ಲಿ ದಳಗಳೇ ಇರುವುದಿಲ್ಲ. ಬೆಣ್ಣೆಯಂತಹ ಬಿಳಿ ಬಣ್ಣದ ಹೂಗಳ ಗುಚ್ಛ ಸರದಂತೆ ಕಾಣುತ್ತದೆ. ಪ್ರತಿ ಹೂವಿನಲ್ಲಿ ಐದು ಮೊನಚಾದ ಲೋಬ್ ಗಳು ಇರುತ್ತವೆ. ಪೂರ್ಣವಾಗಿ ಹೂ ಬಿಟ್ಟ ಮರ ಬಹಳ ಸುಂದರವಾಗಿ ಕಾಣುತ್ತದೆ. ಎಳೆಯ ಕಾಯಿಗಳು ಕೆಂಪಗೆ ಇರುತ್ತವೆ.  5 ಸೆಂ. ಮೀ. ಉದ್ದವಿರುವ ಬಲಿತ ಕಾಯಿಗಳು ಹಸಿರು ಬಣ್ಣದಲ್ಲಿ ಇರುತ್ತವೆ. ಪ್ರತಿ ಕಾಯಿಯ ಮೇಲೆ ನಾಲ್ಕು ತೆಳು ರೆಕ್ಕೆಯ ಮಾದರಿಯ ರಚನೆ ಇರುತ್ತದೆ. ಆಗಸ್ಟ್ ತಿಂಗಳಲ್ಲಿ ಹಣ್ಣಾಗಿ ನುಣುಪಾದ ಗಾಢ ಕಂದು ಬಣ್ಣಕ್ಕೆ ತಿರುಗಿ ಸೆಪ್ಟೆಂಬರ್ ತಿಂಗಳಲ್ಲಿ ಕಾಯಿಗಳು ಕೆಳಗೆ ಉದುರುತ್ತವೆ. ಇದರ ಕಾಯಿಗಳು ಸ್ಟಾರ್ ಫ್ರೂಟ್ ನಂತೆ ಕಂಡರೂ ಬಹಳ ನಾರುಯುಕ್ತವಾಗಿರುತ್ತದೆ. ಪ್ರತಿ ಕಾಯಿಯಲ್ಲೂ ಒಂದು ಬೀಜ ಇರುತ್ತದೆ. ಬಿತ್ತನೆ ಮಾಡಿದ ಶೇಕಡ 70 ಕಾಯಿಗಳು ಮೊಳಕೆಯೊಡೆದು ಗಿಡ ಬರುತ್ತವೆ.  ಪ್ರತಿ ಕಾಯಿಯಿಂದ ಒಂದು ಗಿಡ ಮೊಳೆಯುತ್ತದೆ.

ಮತ್ತಿ ಮರ ಒಂದು ಬಹಳ ಒಳ್ಳೆಯ ಮೋಪಿನ ಮರ. ಇದರ ಹಲಗೆಗಳನ್ನು ರೈಲು ಹಳಿಯ ಅಟ್ಟೆಗಳಿಗಾಗಿ ಮತ್ತು ವಾಹನ ಲಾರಿಗಳ, ಚಾರ್ಸಿಗಳ ನಿರ್ಮಾಣದಲ್ಲಿ ಬಳಕೆ ಮಾಡುತ್ತಿದ್ದರು. ಕಬ್ಬಿಣದಂತೆ ಗಟ್ಟಿಯಾಗಿರುವ ಈ ಮರದ ತೊಲೆಗಳನ್ನು ಬಾಗಿಲು ಚೌಕಟ್ಟು, ಕಿಟಕಿ ಇತರೆ ಪೀಠೋಪಕರಣಗಳನ್ನು ಮಾಡಲು ಬಳಸುತ್ತಾರೆ. ನೀರು, ಗೆದ್ದಲಿನ ಸಂಪರ್ಕಕ್ಕೆ ಬಾರದೆ ಹೋದರೆ ಈ ಮರದ ತೊಲೆಗಳು 200 ರಿಂದ 300 ವರ್ಷದವರೆಗೂ ಬಾಳಿಕೆ ಬರುತ್ತವೆ. ಬಲಿತ ಮರದ ಸೇಗು ಕಪ್ಪು ಬಣ್ಣ ಇರುತ್ತದೆ.

ಜೇನುಹುಳಗಳಿಗೆ ಮಕರಂದವನ್ನು ಉಣಿಸುವ ಈ ಮರ, ಹಲವು ಪ್ರಭೇದದ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ.

© ಸುನಿಲ್ ಆರ್.

ಕರಿಮತ್ತಿಯ ಔಷಧೀಯ ಗುಣಗಳು:

ಆಯುರ್ವೇದ ಮತ್ತು ಜನಪದ ವೈದ್ಯಕೀಯ ಪದ್ಧತಿಗಳಲ್ಲಿ ಈ ಮರದ ತೊಗಟೆ, ಎಲೆಗಳು ಮತ್ತು ಕಷಾಯವನ್ನು ಅನೇಕ ರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಈ ಸಸ್ಯದಲ್ಲಿಆಂಟಿ-ಆಕ್ಸಿಡೆಂಟ್ ಮತ್ತು ಆಂಟಿ-ಮೈಕ್ರೋಬಿಯಲ್ ಗುಣಗಳು ಇವೆ. ತೊಗಟೆಯಿಂದ ತೆಗೆದ ಸಾರವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಯನಗಳು ತಿಳಿಸಿವೆ. ಇದರಿಂದ ಗಾಯಗಳು, ಚರ್ಮದ ಸೋಂಕುಗಳು ಮತ್ತು ಉರಿಯೂತ ಸಂಬಂಧಿತ ಸಮಸ್ಯೆಗಳಲ್ಲಿ ಇದು ಉಪಯುಕ್ತವಾಗುತ್ತದೆ.

ಇದಲ್ಲದೆ, ಟರ್ಮಿನಾಲಿಯಾ ಜೀನಸ್ ಮೇಲೆ ನಡೆದ ಸಮಗ್ರ ವೈಜ್ಞಾನಿಕ ವಿಮರ್ಶೆಗಳು, ಈ ವರ್ಗದ ಸಸ್ಯಗಳು ಯಕೃತ್ತು ರಕ್ಷಣೆ, ಉರಿಯೂತ ಕಡಿತ, ಜೀರ್ಣಕ್ರಿಯೆ ಸುಧಾರಣೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳನ್ನು ಹೊಂದಿವೆ ಎಂದು ಸ್ಪಷ್ಟಪಡಿಸಿವೆ. ಟರ್ಮಿನಾಲಿಯಾ ಕ್ರೆನುಲಾಟಾ (ಕರಿಮತ್ತಿ) ಕೂಡ ಇದೇ ಗುಣಗಳನ್ನು ಹೊಂದಿದ್ದು, ಪರಂಪರೆಯಿಂದ ಅತಿಸಾರ, ಹೊಟ್ಟೆನೋವು, ಬಾಯಿ ಮತ್ತು ಹಲ್ಲುಮೂಳೆ ಸಮಸ್ಯೆಗಳಿಗೆ ಬಳಸಲಾಗುತ್ತಿದೆ. ಈ ಮರದ ತೊಗಟೆಯಲ್ಲಿ ಕ್ಯಾಟೆಚಿನ್, ಟ್ಯಾನಿನ್ ಮತ್ತು ಫಿನಾಲಿಕ್ ಇದ್ದು, ಇವು ದೇಹದಲ್ಲಿನ ಹಾನಿಕಾರಕ ಕಣಗಳನ್ನು ನಾಶಮಾಡುವ ಮೂಲಕ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.

ಲೇಖನ: ಕೆ. ಪಿ. ಶಂಕರಪ್ಪ , ಶಾಂತಮ್ಮ ಎಸ್.
       
ಬೆಂಗಳೂರು
ನಗರ ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.