ಕಾನನ ಕೂಟ – ಕಲಿಕೆಗೆ ಮುಕುಟ

ಕಾನನ ಕೂಟ – ಕಲಿಕೆಗೆ ಮುಕುಟ

       © WCG

ಒಂದು ವಾರದ ಹಿಂದೆ ಮಗನೊಂದಿಗೆ ಲಾಲ್‌ಬಾಗ್ ಪುಷ್ಪಾಲಂಕಾರದ ವಿಸ್ಮಯ ಲೋಕವನ್ನು ಕಂಡ ನಮಗೆ, ಜನವರಿ 26ರಂದು ನಡೆದ ಕಾನನ ಕೂಟಕ್ಕೆ ಕಾಲಿಟ್ಟ ತಕ್ಷಣವೇ ಅದೇ ವಿಸ್ಮಯ ಜಗತ್ತಿನ ಒಡೆಯರಾದ ಪೂರ್ಣಚಂದ್ರ ತೇಜಸ್ವಿಯವರ ಭಾವಚಿತ್ರ ಕಣ್ಣಿಗೆ ಬಿತ್ತು. ಅವರ ಭಾವಚಿತ್ರದಂತೆಯೇ ಸಭಾಂಗಣವೂ ಕೂಡ ಸಕಾರಾತ್ಮಕತೆ ಮತ್ತು ಪ್ರಸನ್ನ ವಾತಾವರಣದಿಂದ ತುಂಬಿಕೊಂಡಿತ್ತು. ಅಲ್ಲಿ ನೆರೆದವರೆಲ್ಲರೂ ತೇಜಸ್ವಿಯವರ ಪರಿಪಾಲಕರಾಗಿರುವಾಗ, ಅಂಥ ವಾತಾವರಣ ಸಹಜವೆನಿಸಿತು.

ಇದು ನನಗೆ ಮೊದಲ ಕಾನನ ಕೂಟ. ಪ್ರಕೃತಿ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದರೂ, ಈ ಸಮಾರಂಭ ಹೇಗೆ ನಡೆಯಲಿದೆ ಎಂಬ ಕುತೂಹಲ ನನ್ನ ಮನಸ್ಸಿನಲ್ಲಿ ಮನೆಮಾಡಿತ್ತು. ಅಲ್ಲಿ ನನಗೆ ಕಂಡದ್ದು ಯಾವುದೇ ಆಡಂಬರವಿಲ್ಲದ, ಅತ್ಯಂತ ಸರಳವಾಗಿ ಸಿದ್ಧಪಡಿಸಿದ್ದ ಸಭಾಂಗಣ. ಸೇರಿದ್ದ ಎಲ್ಲರಲ್ಲೂ ಸಹಜವಾದ ಮಂದಹಾಸ, ಸರಳತೆ ಮತ್ತು ಸೌಹಾರ್ದತೆ ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಆದರೆ ನನ್ನ ಮನಸ್ಸಿನಲ್ಲಿ ಮಾತ್ರ ಒಂದು ಪ್ರಶ್ನೆ ಉದಯಿಸಿತು. ಯಾವುದೇ ದೀಪಸ್ತಂಭವಿಲ್ಲದೆ ಈ ಕಾರ್ಯಕ್ರಮ ಹೇಗೆ ಉದ್ಘಾಟನೆಗೊಳ್ಳುವುದು ಎಂದು.

ತಡವಿಲ್ಲದೆ ಶುರುವಾದ ಕಾರ್ಯಕ್ರಮ ನನ್ನ ಪ್ರಶ್ನೆಗೆ ಉತ್ತರವಾಯಿತು. ಎಲ್ಲರoತೆ ದೀಪ ಹಚ್ಚುವ ಬದಲು, ಗಿಡಕ್ಕೆ ನೀರನ್ನು ಎರೆಯುವ ಮೂಲಕ ಉದ್ಘಾಟಿಸಿದರು. ದೀಪದಿಂದ ಹೊರಬರುವ ಕಾರ್ಬನ್ ಸಹ ಪರಿಸರಕ್ಕೆ ಬೇಡವೆಂಬ ಕಾಳಜಿ ಕಾರ್ಯಗತಗೊಂಡಿದೆ ಎನಿಸಿತು.

ಇಷ್ಟಲ್ಲದೆ, ಅನಿವಾರ್ಯ ಸಂದರ್ಭಗಳಲ್ಲಿ ಪ್ರಕೃತಿಪರರೂ ಸಹ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವ ಪರಿಸ್ಥಿತಿಯನ್ನು ಕಾಣಬಹುದು. ಆದರೆ ಕಾನನ ಕೂಟ ಸಮಾರಂಭದಲ್ಲಿ ಮಾಡಿದ ತಯಾರಿ ನಿಜಕ್ಕೂ ನಿದರ್ಶನವಾಗಿತ್ತು. ಧನರಾಜ್ ಎಂ. ಮತ್ತು ಸುನಿಲ್ ಆರ್. ಅವರ “ಸಾಮಾನ್ಯ ಹಾವುಗಳು” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ಪುಸ್ತಕಗಳನ್ನು ಪ್ಲಾಸ್ಟಿಕ್ ಗಿಫ್ಟ್ ಪೇಪರ್‌ ಬದಲು ಬಾಳೆಎಲೆಯಲ್ಲಿ ಅಂದವಾಗಿ ಹೊದಿಸಿದ್ದು, ಪ್ಲಾಸ್ಟಿಕ್ ಟ್ರೇ ಬದಲು ಹೂಗಳಿಂದ ಅಲಂಕರಿಸಿದ ಬಿದಿರಿನ ಬುಟ್ಟಿಯೊಳಗೆ ಪುಸ್ತಕವನ್ನು ಇಟ್ಟದ್ದು, ಬರಹಗಾರರ ಸನ್ಮಾನಕ್ಕೆ ಹಣ್ಣುಗಳ ಪ್ಲಾಸ್ಟಿಕ್ ಬಾಸ್ಕೆಟ್ ಬದಲು ಇಕೋ–ಫ್ರೆಂಡ್ಲಿ ಚೀಲಗಳನ್ನು ನೀಡಿದ್ದು ಗಮನಾರ್ಹವಾಗಿತ್ತು.

ಈ ಎಲ್ಲಾ ಕಾರ್ಯಗಳು ಸೃಜನಶೀಲತೆಯ ಜೊತೆಗೆ ಅವರು ಪರಿಸರದ ಬಗ್ಗೆ ಹೊಂದಿರುವ ಕಾಳಜಿಯನ್ನು ಸ್ಪಷ್ಟವಾಗಿ ತೋರಿಸಿತು. ಜೊತೆಗೆ, ನಮ್ಮ ನಾಡಿನ ಸಂಸ್ಕೃತಿಯನ್ನು ಕೂಡ ಎತ್ತಿ ಹಿಡಿದಂತಿತ್ತು.

ಈ ಎಲ್ಲವೂ ನನ್ನ ಪುಟ್ಟ ಮಗನಿಗೆ ಒಳ್ಳೆಯ ನಿದರ್ಶನವನ್ನು ನೀಡಿತಲ್ಲ ಎಂಬ ಸಮಾಧಾನ ನನ್ನೊಳಗೆ ಮೂಡಿತು. ಒಟ್ಟಾರೆ, ವೈಲ್ಡ್‌ಲೈಫ್ ಕನ್ಸರ್ವೇಶನ್ ಗ್ರೂಪ್(WCG) ಕೇವಲ ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಯ ವೇದಿಕೆಯಷ್ಟೇ ಅಲ್ಲ, ಅಕ್ಷರಶಃ ಆ ಮೌಲ್ಯಗಳ ನಿಜವಾದ ಪರಿಪಾಲಕರಿವರು ಎಂಬ ಭಾವನೆ ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿತು.

ಇಷ್ಟೊಂದು ವಿಭಿನ್ನ ರೀತಿಯ ಪಾಠಗಳನ್ನು ನೀಡಿದ ಈ ಕೂಟದಲ್ಲಿ, ಉಪಸ್ಥಿತರಿದ್ದ ಅತಿಥಿ ಹಾಗೂ ಸ್ನೇಹಿತರಿಂದ ದೊರೆತ ಅರಿವಿಗೆ ನಾನು ಶರಣಾದೆ.

ಅತಿಥಿಗಳಾದ ಶ್ರೀ ವಸಂತಕುಮಾರ್ ಅವರು ಲೇಖಕರಿಗೆ ಪರಿಸರ ವೀಕ್ಷಣೆಯ ಮಹತ್ವವನ್ನು ವಿವರಿಸಿದ ರೀತಿ, ಶ್ರೀಮತಿ ಜಯಶ್ರೀ ರವರು ಪರಿಸರ ಮತ್ತು ವನ್ಯಜೀವಿಗಳ ಕುರಿತ ಕಾರ್ಯಾಗಾರಗಳು ಕೇವಲ ಬೇಸಿಗೆ ಶಿಬಿರಗಳಿಗಷ್ಟೇ ಸೀಮಿತವಾಗದೇ, ಪ್ರತಿಯೊಂದು ಶಾಲೆಯ ಮಕ್ಕಳಿಗೂ ತಲುಪಬೇಕೆಂಬ ಮಹತ್ವವನ್ನು ವಿವರಿಸುತ್ತ ಅದಕ್ಕಾಗಿ ತಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂಬ ನಿರ್ಧಾರ ಎಲ್ಲವೂ ಮನಮುಟ್ಟಿದ್ದವು.

ಮುಖ್ಯ ಅತಿಥಿಗಳಾದ ಶ್ರೀಮತಿ ದೀಪಾ ರವರು ನೀಡಿದ ಅನೇಕ ಬರವಣಿಗೆಗೆ ಸಂಬಂಧಿತ ಮಾಹಿತಿಗಳು ಮತ್ತು ಸಲಹೆಗಳು, ಪ್ರಶಸ್ತಿ ಗೆಲ್ಲುವುದಷ್ಟೇ ಅಲ್ಲದೆ ಬರಹವು ನಿರಂತರವಾಗಿ ಸಾಗಬೇಕು, ಅದಕ್ಕಾಗಿ ಬರಹಗಾರರು ನಿರ್ದಿಷ್ಟ ಸಮಯವನ್ನು ಬರವಣಿಗೆಗೆ ಮೀಸಲಿಡಬೇಕು ಎಂಬ ಮಾರ್ಗದರ್ಶನ, ಇವೆಲ್ಲವೂ ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿ, ಬರವಣಿಗೆಯತ್ತವೂ ಪ್ರಕೃತಿ ಸಂರಕ್ಷಣೆಯ ಕಾರ್ಯದತ್ತವೂ ಹೊಸ ಸ್ಪೂರ್ತಿಯನ್ನು ನೀಡಿದವು.

ಈ ಎಲ್ಲದರ ನಡುವೆ, ಕಾನನ ಲೇಖನ ಸ್ಪರ್ಧೆಯ ಪ್ರಶಸ್ತಿ ತೀರ್ಮಾನವು ಯಾವುದೇ ಪಕ್ಷಪಾತವಿಲ್ಲದೆ, ಪ್ರಾಮಾಣಿಕವಾಗಿ ಲೇಖನಗಳ ಮೌಲ್ಯದ ಆಧಾರದ ಮೇಲೆ ಮಾಡಲಾಗಿದೆ ಎಂದು ತಿಳಿಸಿದಾಗ, ಮೊದಲ ಬಾರಿಗೆ ನಾನು ಕನ್ನಡದಲ್ಲಿ ಲೇಖನ ಬರೆದು ‘ಉತ್ತಮ ಲೇಖನ’ ಪ್ರಶಸ್ತಿಯನ್ನು ಪಡೆದ ಕ್ಷಣದ ಹೆಮ್ಮೆಯ ಭಾವನೆ ನನ್ನೊಳಗೆ ಅನಿರ್ವಚನೀಯ ಸಂತೋಷವನ್ನು ತುಂಬಿತು.

© WCG

ಈ ಪುಟ್ಟ ಹೆಮ್ಮೆ ಮತ್ತು ಸಂತೋಷದ ನಡುವೆಯೇ, ಪ್ರಶಸ್ತಿ ವಿಜೇತರ ಮಾತುಗಳನ್ನು ಕೇಳುತ್ತಿದ್ದ ನನಗೆ ಕೆ. ಎಸ್. ಶ್ರೀನಿವಾಸ್ ಅವರ ಮಾತುಗಳು ರಪ್ಪನೆ ಬಡಿದೆಚ್ಚರಿಸಿತು. ಛಾಯಾಗ್ರಹಣ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು, ಕರ್ನಾಟಕ ಸರ್ಕಾರದ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದರೂ, ತಮ್ಮ ಬರವಣಿಗೆಯ ಮೊದಲ ಪ್ರಶಸ್ತಿಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿ, “ಇದು ಬರವಣಿಗೆಯಲ್ಲಿನ ನನ್ನ ಮೊದಲ ಪ್ರಶಸ್ತಿ” ಎಂದು ಹೇಳಿದಾಗ ಎಷ್ಟೇ ಬೆಳೆದರೂ ಹೃದಯ ಸರಳತೆ ಮತ್ತು ವಿನಯದ ಮಹತ್ವ, ಎಷ್ಟೇ ಕಲಿತರೂ, ಇನ್ನೂ ಕಲಿಯಲು ಅವಕಾಶವಿದೆ ಎಂಬುದಕ್ಕೆ ಅವರು ಜೀವಂತ ನಿದರ್ಶನವಾಗಿ ಕಾಣಿಸಿದರು.

ಅ ಕ್ಷಣದಲ್ಲಿ ಕುವೆಂಪು ಅವರ ಸಾಲುಗಳು ಎಷ್ಟೋ ನಿಜವೆಂದೆನಿಸಿತು.

ಯಾವುದಕ್ಕೂ ಮೊದಲಿಲ್ಲ
ಯಾವುದಕ್ಕೂ ತುದಿಯಿಲ್ಲ
ಯಾವುದೂ ಎಲ್ಲಿಯೂ ನಿಲ್ಲುವುದಿಲ್ಲ
ಕೊನೆ ಮುಟ್ಟುವುದು ಇಲ್ಲ

ಈ ಸಾಲುಗಳ ಅರ್ಥ ನನ್ನೊಳಗೆ ಇನ್ನಷ್ಟು ಆಳವಾಗಿ ಅರ್ಥವಾಯಿತು.

ಹೀಗೆ, ನನಗೆ ಮತ್ತು ನನ್ನ ಪುಟ್ಟ ಮಗನಿಗೆ ಕಾನನ ಕೂಟ ನಿಜವಾಗಿಯೂ ಕಲಿಕೆಯ ಮುಕುಟವಾಯಿತು.

ನೀವು ಸಹ ಇದನ್ನು ಒಪ್ಪುತ್ತೀರಲ್ಲವೇ?

© WCG

ಲೇಖನ: : ಸಮತ ಸೀತಾರಾಮ್
                     ಬೆಂಗಳೂರು ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.