ಹಾಡು ನಿಲ್ಲಿಸದ ಹಕ್ಕಿ!

ಹಾಡು ನಿಲ್ಲಿಸದ ಹಕ್ಕಿ!

© Nilesh Shiragave

ಪಕ್ಷಿ ವೀಕ್ಷಣೆ ಅನ್ನೋದು ಮೊದಲಿನಿಂದಲೂ ನನಗೆ ಇಷ್ಟವಾದ ಹವ್ಯಾಸ. ಆದರೆ ಇತ್ತೀಚೆಗೆ ಅದಕ್ಕೆಲ್ಲಾ ಸಮಯಾನೇ ಕೊಡ್ತಾ ಇಲ್ಲ. ಹಾಗೆ ಅಂತ ಅವುಗಳ ಜೊತೆ ಒಡನಾಟ ಏನೂ ಕಮ್ಮಿ ಆಗಿಲ್ಲ. ನನಗಿನ್ನೂ ನೆನಪಿದೆ, ಈ ‘ವೈಟ್ ರಂಪ್ಡ್ ಶಾಮಾ’ ಅಂತ ಒಂದು ಪಕ್ಷಿ ಇದೆ, ನಮ್ಮ ಆಶ್ರಮದ ತೋಟದಲ್ಲಿ. ಸ್ವಲ್ಪ ಅಪರೂಪದ ಪಕ್ಷಿ ಅಂತೆ ಅದು. ಆದ್ರೆ ನಾನು ಅದರ ಸುತ್ತ ಜಾಸ್ತಿ ಸಮಯ ಇದ್ದಿದ್ರಿಂದಾನೋ ಏನೋ ನಂಗೆ ಹಾಗೆ ಅನ್ನಿಸಿರ್ಲಿಲ್ಲ. ಯಾಕಂದ್ರೆ, ಎಷ್ಟೋ ಸಾರಿ ಕಾಗೆ ಸಿಗುವಷ್ಟು ಸಾಮಾನ್ಯವಾಗಿ ನಂಗೆ ಸಿಕ್ತಾ ಇತ್ತು. ಒಮ್ಮೊಮ್ಮೆ ಅಂತೂ ನಾನು ತೋಟದ ರೂಮಿನಲ್ಲಿ ಇದ್ದಾಗ ಬೆಳಿಗ್ಗೆ ಎದ್ದು ಟವೆಲ್ ತಗೊಳ್ಳಲು ಹೊರಗೆ ಬಂದ್ರೆ ಆ ಟವಲ್ ದಾರದ ಮೇಲೆ ಕೂತು ಗುಡ್ ಮಾರ್ನಿಂಗ್ ಕೂಡಾ ಹೇಳಿದೆ. ಮೊದ ಮೊದಲು ಹೇ… ಅಪರೂಪದ ಪಕ್ಷಿ ಅಂತ ಫೊಟೋ ತೆಗೆಯೋದಕ್ಕೆ ಒಳಗೆ ಓಡಿ ಫೋನ್ ತರುತ್ತಿದ್ದ ನಾನು ಕ್ರಮೇಣ ನಿದ್ದೆಗಣ್ಣಿನಲ್ಲೇ ಸಲ್ಯೂಟ್ ಮಾಡಿ ಗುಡ್ ಮಾರ್ನಿಂಗ್ ಹೇಳುತ್ತಿದ್ದೆ. ಇತ್ತೀಚೆಗೆ ತಯಾರಾಗಿ ತರಾತುರಿಯಲ್ಲಿ ನಮ್ಮ ‘ಮಾಡೂ ಆಫೀಸ್’ ಕಡೆಗೆ ಹೋಗುತ್ತಿದ್ದೆ. ತಕ್ಷಣ ಒಂದು ವಿಚಿತ್ರದ ಶಬ್ಧ…! ಒಂದು ಸರಿಯಾದ ಪ್ಯಾಟರ್ನ್ ಇಲ್ಲ, ಮೆಲೋಡಿ ಇಲ್ಲ. ಆದರೆ ಪದೇ ಪದೇ ಕೇಳಿದರೆ ಏನೋ ಒಂದು ತರಹ ಪ್ಯಾಟರ್ನ್ ಗೆ ಹೋಲಿಕೆ ಇತ್ತು.

ಇದ್ಯಾವುದೋ ವಿಚಿತ್ರ ಪಕ್ಷಿ ಇರಬೇಕು ಅಂದುಕೊಂಡೆ. ಆ ನಂತರ ಮುರಳಿ ಅಣ್ಣ ಹೇಳಿದ ಮೇಲೆ ತಿಳೀತು ಅದು ಶಾಮಾ ಪಕ್ಷಿ ಹಾಡು ಅಂತ. ಅದಾದ ಮೇಲೆ “ಹೌದಾ ಮತ್ತೊಮ್ಮೆ ಸಿಗಲಿ ತಾಳು ನಾನು ಅದರಂತೆ ವಿಸಿಲ್ ಹಾಕಿ ರೇಗಿಸ್ತೀನಿ”. ಅಂತ ಮನಸ್ಸಲ್ಲೇ ಅಂದುಕೊಂಡೆ. ಮತ್ತೊಮ್ಮೆ ಆ ಅವಕಾಶಕ್ಕೆ ನಾನೇನು ಕಾಯಬೇಕಾಗಿರಲಿಲ್ಲ. ಅದರ ಮುಂದಿನ ದಿನವೇ ಸಿಕ್ತು. ಅದು ಅಲ್ಲೆಲ್ಲೋ ದೂರದಲ್ಲಿ ಕೂತು ಸಂಗಾತಿಗಾಗಿಯೋ ಏನೋ ಕೂಗ್ತಾ ಇತ್ತು. ನಾನು ಸಿಕ್ಕಿದ್ದೇ ಚಾನ್ಸ್ ಅಂತ ಅದರಂತೆ ಪ್ಯಾಟರ್ನ್ ಇಲ್ಲದ ಪ್ಯಾಟರ್ನ್ ನಲ್ಲಿ ಕೂಗೋಕೆ ಶುರು ಮಾಡಿದೆ. ಮೊದಲನೇ ಬಾರಿಗೆ ಅದು ನನ್ನ ಕೂಗಿಗೆ ಪ್ರತಿಕ್ರಿಯಿಸುವಂತೆ ಸ್ವಲ್ಪ ಸಮಯ ತಗೊಂಡು ಕೂಗಿತ್ತು. ನಾನು ಮತ್ತೆ ಅಷ್ಟೇ ಸಮಯ ತಗೊಂಡು ಕೂಗಿದೆ. ಅದೂ ಮತ್ತೆ ಕೂಗಿತು. ಅರೇ… ಇದೊಂಥರಾ ಚೆನ್ನಾಗಿದೆ ಅಂತ ಹಾಗೇ ಆಫೀಸ್ ಕಡೆ ನಡೀತಾ… ಕೂಗ್ತಾ… ಹೋದೆ. ಆಶ್ಚರ್ಯ ಅಂದ್ರೆ, ಶಾಮಾ ಕೂಡಾ ನನ್ನ ಕೂಗಿಗೆ ಪ್ರತಿಕ್ರಿಯೆ ಕೊಡ್ತಾ ಬಂತು. ಇನ್ನೂ ಅಚ್ಚರಿ ಏನಂದ್ರೆ, ಬರಬರುತ್ತಾ ಆ ಪಕ್ಷಿ ನನ್ನ ಶಬ್ಧ ಕೇಳ್ತಾ, ಇದ್ಯಾವುದೋ ಹೆಣ್ಣು ಪಕ್ಷಿ ಅಂತ ಅಂದುಕೊಂಡು ನಾನು ನಡೀತಿದ್ದ ದಾರಿಗೆ ಹತ್ರ ಬಂತು. ನೀವು ನಂಬೋದಿಲ್ಲಾ… ನಾನು ಆಶ್ರಮ ಹತ್ತಿರತ್ತಿರ ಆಗುವಷ್ಟರಲ್ಲಿ ನಾನು ನಡೀತಿದ್ದ ದಾರಿಯ ಪಕ್ಕದ ಮರದಲ್ಲಿ ಬಂದು ಕೂತು ಹಾಡುತ್ತಿತ್ತು. ಅದಾದ ನಂತರ ಯಾವುದೋ ಹೆಣ್ಣು ಪಕ್ಷಿ ಅಂತ ತಿಳಿದಿದ್ದ ನನ್ನನ್ನ, ಇವನ್ಯಾರೋ ಮಾನವ ಮಂಗ ಚೇಷ್ಟೆ ಮಾಡ್ತಾ ಇದಾನೆ ಅಂತ ಗೊತ್ತಾಯ್ತು ಅನ್ಸತ್ತೆ, ಸನಿಹದಿಂದ ನನ್ನ ಕೂಗು ಕೇಳಿದ ಮೇಲೆ ಹೊರಟೇ ಹೋಯ್ತು. ಆದರೂ ಆ ಅನುಭವ ಇನ್ನೂ ನನ್ನ ನೆನಪಿನ ಪುಸ್ತಕದಲ್ಲಿ ಹಾಗೇ ಇದೆ.

 ಆ ಸಮಯದಲ್ಲೇ ನನಗೆ ಮೂಡಿದ್ದ ಒಂದು ಪ್ರಶ್ನೆ “ಈ ಪಕ್ಷಿಗಳು ಹೀಗೆ ದಿನವಿಡೀ ಕೂಗ್ತಾ ಇರ್ತವಲ್ಲ ಬೇರೆ ಕೆಲ್ಸಾ ಇಲ್ವ? ಹಾಡು ನಿಲ್ಸೊದೇ ಇಲ್ವ? ಅಂತ.” ಸಂಗಾತಿಗಾಗಿ ಅಥವಾ ಆಹಾರಕ್ಕಾಗಿ ಕೂಗುವ ಪಕ್ಷಿಗಳಿಗೂ ಒಂದು ಕೂಗು ನಿಲ್ಲಿಸುವ ಸಮಯ ಬೇಡವೇ? ನಿದ್ದೆ ಮಾಡಬೇಡವೇ? ಖಂಡಿತಾ ಇದೆ. ಕತ್ತಲಾಗುತ್ತಿದ್ದಂತೆ ತಮ್ಮ ಗಾಯನವನ್ನು ಕ್ಷೀಣಿಸುತ್ತಾ ಮರ-ಗಿಡಗಳ ಕೊಂಬೆಗಳ ಮೇಲೆ ಅವಿತು ನಿದ್ದೆಗೆ ಜಾರುತ್ತವೆ. ಆದರೆ ದಕ್ಷಿಣ ಅಮೇರಿಕಾದಲ್ಲಿ ತಿಳಿದು ಬಂದ ವಿಚಾರ ಒಂದಿದೆ. ಮನುಷ್ಯ ಮತ್ತು ವನ್ಯಜೀವಿಗಳ ಬಗ್ಗೆ ಅಭ್ಯಾಸ ಮಾಡುವ ಗಿಲ್ಬರ್ಟ್ ಎಂಬ ವಿಜ್ಞಾನಿಯ ಸಂಶೋಧನೆಯಂತೆ, ಮುಂಚೆ ಪಕ್ಷಿಗಳು ಬೆಳಕು ಇರುವ ಸಮಯದಲ್ಲಿ ಕೂಗುತ್ತಿದ್ದ ಗರಿಷ್ಟ ಸಮಯಕ್ಕಿಂತ ಇಂದು ಸುಮಾರು 50 ನಿಮಿಷಗಳು ಹೆಚ್ಚು ಕೂಗುತ್ತಿವೆಯಂತೆ. ಕಾರಣ, ಬೆಳಕಿನ ಮಾಲಿನ್ಯ (light pollution). ಹೌದು, ಬೆಳಕಿನ ಮಾಲಿನ್ಯ ಅಂತ ಕೂಡಾ ಒಂದಿದೆ. ಸ್ವಾಭಾವಿಕವಾಗಿ ದೊರೆಯುವ ಸೂರ್ಯನ ಬೆಳಕಿಗೆ ಹೋಲುವ, ರಾತ್ರಿಯನ್ನು ಬೆಳಗಿಸುವ ದಾರಿ ದೀಪಗಳು, ವಾಹನಗಳ ಬೆಳಕುಗಳು ಹೀಗೆ ಹತ್ತು ಹಲವು ಬೆಳಕಿನ ಉಪಕರಣಗಳ ಬಳಕೆಯಿಂದ ಆಗುವ ಮಾಲಿನ್ಯವನ್ನು ಬೆಳಕಿನ ಮಾಲಿನ್ಯ ಎಂದೇ ಕರೆಯುತ್ತಾರೆ. ಬೇರೆ ಎಲ್ಲಾ ಮಾಲಿನ್ಯಗಳಂತೆ ಬೆಳಕಿನ ಮಾಲಿನ್ಯವೂ ಸಹ ನಮ್ಮ ಹಾಗೂ ಇತರ ಜೀವಜಂತುಗಳ ಮೇಲೆ ಪರಿಣಾಮ ಬೀರುತ್ತದೆ. ಪಕ್ಷಿಗಳು ವಲಸೆ ಹೋಗುವ ಸಮಯದಲ್ಲಿ ಎದುರಿಸುವ ಇಂತಹ ಮಾಲಿನ್ಯಗಳಿಂದ ಅವುಗಳ ವಲಸೆಗೆ ತೊಂದರೆಯಾಗಬಹುದು, ಸಂತಾನಗಳ ಮೇಲೆ ಪರಿಣಾಮ ಬೀರಬಹುದು, ಅವುಗಳು ನಿದ್ದೆ ಮಾಡುವ ಸಮಯಗಳಲ್ಲಿ ವ್ಯತ್ಯಾಸವಾಗಿ, ಅವುಗಳ ಹಾರ್ಮೋನುಗಳ ಮೇಲೂ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಪುರಾವೆಗಳಿವೆ.

       ಆ ದಿಕ್ಕಿನಲ್ಲೇ ನಡೆಸಿದ ಸಂಶೋಧನೆಯಲ್ಲಿ ಗಿಲ್ಬರ್ಟ್ ಮತ್ತು ಅವರ ಸಹೋದ್ಯೋಗಿ ಬ್ರೆಂಟ್ ಬರ್ಡ್ ವೆದರ್ (birdweather.com) ಎಂಬ ಗ್ಲೋಬಲ್ ಸಿಟಿಜನ್ ಪ್ರಾಜೆಕ್ಟ್ ನಿಂದ ಪಡೆದ ಸುಮಾರು 583 ಪಕ್ಷಿಗಳ 4,40,000 ಕೂಗುಗಳನ್ನು ತೆಗೆದುಕೊಂಡು ಆ ಪ್ರದೇಶಗಳ ಬೆಳಕಿನ ಮಾಲಿನ್ಯದ ಜೊತೆ ಹೋಲಿಸಿದ್ದಾರೆ. ಅದರಿಂದ ತಿಳಿದು ಬಂದದ್ದು, ಅತಿ ಹೆಚ್ಚು ಬೆಳಕು ಅಥವಾ ಬೆಳಕಿನ ಮಾಲಿನ್ಯವಿದ್ದ ಜಾಗದಲ್ಲಿ ಪಕ್ಷಿಗಳು ಸರಾಸರಿ 50 ನಿಮಿಷಗಳು ಹೆಚ್ಚು ಕೂಗುತ್ತಿದ್ದವಂತೆ. ಅಂದರೆ ಸುಮಾರು 18 ನಿಮಿಷಗಳು ಬೆಳಿಗ್ಗೆ ಹಾಗೂ 32 ನಿಮಿಷಗಳು ಸಾಯಂಕಾಲ. ಹಾಗೂ ನೋಡಲು ಸ್ವಲ್ಪ ದಪ್ಪನಾದ ಕಣ್ಣುಗಳಿದ್ದ ಪಕ್ಷಿಗಳಲ್ಲಿ ಈ ಬದಲಾವಣೆ ಹೆಚ್ಚಿತ್ತಂತೆ. ಬಹುಶಃ ದಪ್ಪ ಕಣ್ಣುಗಳು ಹೆಚ್ಚು ಬೆಳಕನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಎಂದು ಕಾಣುತ್ತದೆ. ಅದರ ಜೊತೆಗೆ ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡುವ ಕಾಲದಲ್ಲಿ ಈ ಬೆಳಕಿನ ಮಾಲಿನ್ಯದ ಪರಿಣಾಮ ಹೆಚ್ಚಿತ್ತು. ಹಾಗಾಗಿ ಪಕ್ಷಿಗಳು ಬೆಳಿಗ್ಗೆ ಬೇಗ ಎದ್ದು ಕೂಗುತ್ತಿದ್ದದ್ದಲ್ಲದೇ, ಸಂಜೆಯ ಸಮಯದಲ್ಲಿ ಹಕ್ಕಿಗಳು ಹಾಡು ನಿಲ್ಲಿಸಲು ಮರೆತೇ ಹೋದಂತೆ ಕಾಣುತ್ತದೆ.

ಈ ಬೆಳಕಿನ ಮಾಲಿನ್ಯದ ಪರಿಣಾಮ ಪಕ್ಷಿಗಳ ಹಾಡುವಿಕೆಗೆ ಹೀಗೆ ಕಾಡುವುದರಿಂದ ಆಗುವ ಪರಿಣಾಮ ಒಳ್ಳೆಯದು ಅಥವಾ ಕೆಟ್ಟದೆಂದು ನಿರ್ಧರಿಸಲು ಈಗ ಆಗದಿರಬಹುದು. ಆದರೆ ನಮ್ಮ ಜೀವನದಲ್ಲಿ ನಾವು ಅಳವಡಿಸುವ ಬದಲಾವಣೆಗಳ ಅರಿವೇ ಇಲ್ಲದೆ ಮಾಡುವ ಕಾರ್ಯಗಳು ನಮ್ಮ ಊಹೆಗೆ ಮೀರಿ ಹೀಗೆ ಉಳಿದ ಜೀವಿಗಳ ಮೇಲೆ ಬೀರುತ್ತಿರುವ ಪರಿಣಾಮಗಳ ಅಂಚನೆಯು ನಮ್ಮಲ್ಲಿಲ್ಲ ಎನ್ನುವುದು ವಾಸ್ತವ. ಹಾಗಾದರೆ ನಮಗೆ ಬೇಕಾದ ಹಾಗೆ ಬದುಕುವ ಹಾಗೇ ಇಲ್ಲವೇ? ಎಂಬ ಪ್ರಶ್ನೆಗೆ ನನ್ನ ಅನಿಸಿಕೆಯುತ್ತರ, “ಖಂಡಿತಾ ಇದೆ! ಆದರೆ ನಮ್ಮ ಜೀವನ ಕೇವಲ ನಮ್ಮದಲ್ಲ, ಬರಿಯ ಸ್ವಾರ್ಥದ ಬದುಕಲ್ಲ ನಮ್ಮದು. ಸಹಬಾಳ್ವೆಯ ನಿದರ್ಶನವದು. ಸಹಿಸಿ, ಗೌರವಿಸಿ, ಸಹನೆಯದಿ ಬಾಳುವ ಜೀವನದ ಪುರಾವೆಯದು. ಈ ಸತ್ಯದ ಅರಿವು ಸದಾ ಮನದಲ್ಲಿಟ್ಟು, ನಾವು ಜೀವಕೋಟಿಗಳಲ್ಲೊಂದು ಜೀವ ಎಂದು ನೆನಪಿಸುವ ಅಭಿಮಾನದ ಜೀವನವಾಗಬೇಕದು.”

     Source: www.snexplores.org

ಲೇಖನ: ಜೈಕುಮಾರ್ ಆರ್.
          ಬೆಂಗಳೂರು ನಗರ ಜಿಲ್ಲೆ

Spread the love
error: Content is protected.