ವನಸುಮ – ತಾರೆ ಮರ
© ನಾಗೇಶ್ ಒ. ಎಸ್.
English Name: Bahera
Scientific Name: Terminalia belerica
ತಾರೆ ಮರವು (Terminalia belerica) ಶುಷ್ಕ ಒಣ ಹವೆ ಇರುವ ಪ್ರದೇಶದಲ್ಲಿ ಬೆಳೆಯುವ ದೊಡ್ಡ ಮರ. ಸಾಮಾನ್ಯವಾಗಿ ಶನಿದೇವರು ಈ ಮರದಲ್ಲಿ ವಾಸಿಸುವರು ಎಂಬುದು ಸಾಂಸ್ಕೃತಿಕ ನಂಬಿಕೆ. ಆದ್ದರಿಂದ ಈ ಮರಕ್ಕೆ ಪೂಜನೀಯ ಸ್ಥಾನ ದೊರೆತಿದೆ. ದಕ್ಷಿಣ ಭಾರತದಲ್ಲಿ ಶನಿದೇವರ ದೇವಸ್ಥಾನಗಳ ಬಳಿ ಈ ಮರವನ್ನು ಕಾಣಬಹುದು ಅಥವಾ ಈ ಮರ ಇರುವ ಕಡೆ ಶನಿದೇವರ ದೇವಸ್ಥಾನವನ್ನು ಕಟ್ಟುತ್ತಾರೆ. ಈ ಮರವನ್ನು ಶಾಂತಿಮರ ಎಂದು ಕೂಡ ಕರೆಯುತ್ತಾರೆ.
ಇದು ಭಾರತದ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಅಲ್ಲದೆ ಚೀನಾ, ಮಯನ್ಮಾರ್ ಮಲೇಶಿಯಾದ ಶುಷ್ಕ ಪ್ರದೇಶಗಳಲ್ಲಿ ಕಾಣಸಿಗುತ್ತದೆ.
ತಾರೆ ಮರ ಸುಮಾರು 50 ರಿಂದ 60 ಅಡಿ ಎತ್ತರಕ್ಕೆ ಬೆಳೆಯುವ ಬೃಹತ್ ಮರ. ಇದರ ಎಲೆಗಳು 15 ಸೆಂಟಿ ಮೀಟರ್ ಉದ್ದವಿದ್ದು, ಕೊಂಬೆಗಳ ತುದಿಯಲ್ಲಿ ಗುಚ್ಛದಂತೆ ಗುಂಪಾಗಿ ಇರುತ್ತವೆ. ಎಲೆಗಳ ಮೇಲೆ ಇರುವ ನಾಳ ರಚನೆಗಳು ಎದ್ದು ಕಾಣುತ್ತವೆ. ಮರದ ತುಂಬಾ ಎಲೆಗಳು ಇದ್ದು, ಮರವು ಉತ್ತಮ ನೆರಳು ನೀಡುತ್ತದೆ. ಬೇಸಿಗೆಯಲ್ಲಿ ಕೆಲಕಾಲ ಎಲ್ಲಾ ಎಲೆಗಳನ್ನು ಉದುರಿಸಿ ಮರವು ಬೋಳಾಗಿ ಕಾಣುತ್ತದೆ.
ಈ ಮರ ಜನವರಿಯಿಂದ ಮಾರ್ಚ್ ವರೆಗೂ ಹೂ ಬಿಡುತ್ತದೆ. ಇದರ ಹೂಗಳು ತಿಳಿ ಅರಿಶಿಣ-ಹಸಿರು ಬಣ್ಣದಲ್ಲಿರುತ್ತವೆ. ಈ ಹೂವಿನ ಮಕರಂದವು ಹಲವು ಪಕ್ಷಿಗಳಿಗೆ, ಜೇನುಹುಳು ಕೀಟಗಳಿಗೆ ಆಹಾರ ಒದಗಿಸುತ್ತದೆ. ಈ ಮರ ಪೂರ್ಣ ಪ್ರಮಾಣದಲ್ಲಿ ಹೂ ಬಿಟ್ಟಾಗ ಜೇನಿನಂತಹ ವಾಸನೆಯನ್ನು ಹೊರ ಸೂಸಿ ಈ ಮರದ ಸುತ್ತಮುತ್ತಲಿನ ವಾತಾವರಣವೇ ಜೇನಿನ ವಾಸನೆಯಿಂದ ಘಮಘಮಿಸುತ್ತದೆ. ಇದರಿಂದ ಕೀಟಗಳನ್ನು ಆಕರ್ಷಿಸಿ ಪರಾಗಸ್ಪರ್ಶಕ್ರಿಯೆ ಮಾಡಿಸಿಕೊಳ್ಳುತ್ತದೆ.
ತಾರೆ ಮರದ ಅಂಡಾಕಾರದ ಕಾಯಿಗಳು 2 ಸೆಂ. ಮೀ – 2.5 ಸೆಂ. ಮೀ ಗಾತ್ರವಿದ್ದು, ಬೂದು ಬಣ್ಣದಲ್ಲಿ ಇರುತ್ತವೆ. ಕಾಯಿಗಳ ಮೇಲೆ ಅಸ್ಪಷ್ಟ 5 ಕೋನೀಯ ಗೆರೆಗಳಿದ್ದು, ಕಾಯಿಯ ತಿರುಳು ಸೂಕ್ಷ್ಮ ಕೂದಲುಗಳಂತಹ ರಚನೆಯಿಂದ ಆವೃತವಾಗಿರುತ್ತವೆ. ಈ ಕಾಯಿಯ ಒಳಭಾಗದಲ್ಲಿ ಕಡಲೆ ಬೀಜದಂತಹ ಪಪ್ಪು ಇರುತ್ತದೆ. ಆಯುರ್ವೇದದ ತ್ರಿಫಲ ಚೂರ್ಣ ತಯಾರಿಕೆಯಲ್ಲಿ ತಾರೆ ಮರದ ಕಾಯಿಯನ್ನು ಬಳಸುವರು. ಬೂದು-ಕಂದು ಬಣ್ಣದ ತೊಗಟೆಯಿದ್ದು, ಮರದ ಕಾಂಡದಲ್ಲಿನ ತೊಗಟೆಯ ಮೇಲೆ ಅಡ್ಡಡ್ಡ ಉದ್ದುದ್ದ ಬಿರುಕುಗಳು ಇರುತ್ತವೆ. ಇದರ ಬೀಜಗಳನ್ನು ಬಿತ್ತನೆ ಮಾಡಿ ಸಸಿಗಳನ್ನು ಸುಲಭವಾಗಿ ಪಡೆಯಬಹುದು. ನಾಟಿ ಮಾಡಿದ ಬೀಜಗಳು ಮೊಳಕೆ ಒಡೆಯಲು 14 ದಿನಗಳು ಬೇಕು. ತಣ್ಣೀರಿನಲ್ಲಿ 48 ಗಂಟೆಗಳ ಕಾಲ ನೆನೆಸಿಟ್ಟು ನಂತರ ಬಿತ್ತನೆ ಮಾಡಿದರೆ ಬೇಗ ಮೊಳೆಯುತ್ತವೆ. ಬಹುಬೇಗ ಬೆಳೆಯುವ ಈ ಮರ ಉದ್ಯಾನವನಗಳಲ್ಲಿ, ರಸ್ತೆ ಬದಿಗಳಲ್ಲಿ ಬೆಳೆಯಲು ಸೂಕ್ತವಾದ ಮರ. ಜಾನುವಾರುಗಳ ಮೇವು, ಔಷಧಿಗಳಿಗೂ ಸಹ ಬಳಸುತ್ತಾರೆ.



ಈ ಮರ ಪ್ರಾಣಿ-ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು ಜಾಗ ದೊರಕಿಸಿಕೊಡುತ್ತದೆ. ಹಲವು ಪ್ರಭೇದದ ಪಕ್ಷಿಗಳು, ಸಸ್ತನಿಗಳ ತಂಗುದಾಣವಾಗಿದೆ. ಇದರ ಹಣ್ಣುಗಳನ್ನು ಜಿಂಕೆ ಮೊದಲಾದ ಪ್ರಾಣಿಗಳು ತಿನ್ನುತ್ತವೆ. ಹಲವು ಪ್ರಭೇದದ ಪರಾವಲಂಬಿ ಸಸ್ಯಗಳು, ಆರ್ಕಿಡ್ ಗಳೂ ಕೂಡ ಈ ಮರದ ಮೇಲೆ ಬೆಳೆದು ಆಶ್ರಯ ಪಡೆದುಕೊಳ್ಳುತ್ತವೆ.
ತಾರೆ ಮರದ ಔಷಧೀಯ ಗುಣಗಳ ಬಗ್ಗೆ ಹಲವಾರು ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಈ ಎಲ್ಲ ಅಧ್ಯಯನಗಳು ಪ್ರಾಣಿಗಳ ಮೇಲೆ ನಡೆದಿದ್ದು, ಮಾನವನ ಮೇಲೆ ಉಂಟಾಗಬಹುದಾದ ಔಷಧೀಯ ಪರಿಣಾಮದ ಬಗ್ಗೆ ಇನ್ನೂ ಹೆಚ್ಚು ಸಂಶೋಧನೆ ನಡೆಯಬೇಕಿದೆ.
ಕೆಲವು ವೈಜ್ಞಾನಿಕ ಅಧ್ಯಯನಗಳ ಫಲಿತಾಂಶಗಳು ಹೀಗಿವೆ:
ಗಾಯ ಗುಣಮುಖಗೊಳಿಸುವಿಕೆ (Wound healing): ಸಾಹಾ ಮತ್ತು ಸಹೋದ್ಯೋಗಿಗಳು (2011) ತಾರೆ ಮರದ ಪೇಸ್ಟ್ ಗಾಯವನ್ನು ವೇಗವಾಗಿ ಗುಣಪಡಿಸಲು ಸಹಕಾರಿಯಾಗಿದೆ ಎಂದು ವರದಿ ಮಾಡಿದ್ದಾರೆ.
ಮನೋನಿಲುವು ಸುಧಾರಣೆ (Antidepressant activity): ತಾರೆ ಮರದ ಹಣ್ಣಿನ ರಸ (AETB) ಇಲಿಗಳಲ್ಲಿ ಮನೋನಿಲುವು ಸುಧಾರಿಸಿದೆ ಎಂದು ಅಧ್ಯಯನ ತೋರಿಸಿದೆ.
ಜಲೋದರ ನಿವಾರಣೆ (Anti-diarrheal activity): ಬಿಮಲೇಶ್ ಕುಮಾರ್ ಅವರ ಅಧ್ಯಯನದ ಪ್ರಕಾರ ತಾರೆ ಮರದಲ್ಲಿ ಜಲೋದರ ನಿವಾರಕ ಗುಣಗಳಿವೆ.
ಮಧುಮೇಹ ನಿಯಂತ್ರಣ (Anti-diabetic effect): ತಾರೆ ಮರದ ಹಣ್ಣಿನ ಸಾರ ಇನ್ಸುಲಿನ್ ಮಟ್ಟ, ರಕ್ತದಲ್ಲಿನ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣವನ್ನು ಸುಧಾರಿಸಿದ್ದು, ಮಧುಮೇಹದಿಂದ ಉಂಟಾಗುವ ನೀರಿನ ಪಿಂಡದ (kidney) ಸಮಸ್ಯೆ ಮತ್ತು ಕೊಬ್ಬಿನ ಅಸಮತೋಲನ (dyslipidemia) ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಪರಿಣಾಮಗಳಲ್ಲಿ methanol extract ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ.

ಲೇಖನ: ಕೆ. ಪಿ. ಶಂಕರಪ್ಪ , ಶಾಂತಮ್ಮ ಎಸ್.
ಬೆಂಗಳೂರು ನಗರ ಜಿಲ್ಲೆ

ಸಹಾಯಕ ಪ್ರಾಧ್ಯಾಪಕರು
ಎಸ್ ಎನ್ ಆರ್ ಪದವಿ ಕಾಲೇಜ್ , ಜಿಗಣಿ , ಬೆಂಗಳೂರು.