ಕೋವಿಡ್ ಹೊತ್ತು ಹೋದ ಗಮ್ಮತ್ತು!

ಕೋವಿಡ್ ಹೊತ್ತು ಹೋದ ಗಮ್ಮತ್ತು!

ಕೋವಿಡ್ ಮಹಾಮಾರಿ ನಮ್ಮ ತಲೆಮಾರು ಕಂಡ ಅತಿದೊಡ್ಡ ಸಾಂಕ್ರಾಮಿಕ. ನನಗಿನ್ನೂ ನೆನಪಿದೆ, ನಮ್ಮೂರ ಪಕ್ಕದ ಊರಾದ ಕಾಟೇರಿದೊಡ್ಡಿ ಬೆಟ್ಟದ ಒಂದು ಕೊನೆಯಲ್ಲಿ ನಿಂತು ನೋಡಿದರೆ ಇಡೀ ಭೂಮಿ ಗುಂಡಾಗಿರುವುದು ನಿಜ ಎನ್ನುವಂತಹ ದೃಶ್ಯ ಕಾಣುತ್ತಿತ್ತು. ಅಂದು ರಾತ್ರಿ ಆ ದೊಡ್ಡಿ ಬೆಟ್ಟದ ಮೇಲೆ ಕೂತು ಹಾಗೆ ನೋಡುತ್ತಿದ್ದರೆ, ‘ಅರೇ… ಇಡೀ ಭೂಮಿಯಲ್ಲಿರುವ ಎಲ್ಲಾ ದೇಶಗಳಲ್ಲಿ ಈಗ ಏನೂ ನಡೆಯುತ್ತಿಲ್ಲ. ಇಡೀ ಭೂಮಿ ಸ್ಥಬ್ಧ! ಈ ಕೋವಿಡ್ ಕಾರಣದಿಂದಾಗಿ ಯಾವ ಮನುಷ್ಯಜೀವಿಯೂ ಇನ್ನೊಂದು ಮನುಷ್ಯ ಜೀವಿಯ ಜೊತೆ ಮಾತನಾಡಲೂ ಸಹ ಬಿಡುತ್ತಿಲ್ಲ. ಎಂಥಾ ವಿಪರ್ಯಾಸ?’ ಅನಿಸುತ್ತಿತ್ತು. ಆ ಒಂದೂವರೆ ವರುಷ ಒಬ್ಬೊಬ್ಬರಿಗೂ ಒಂದೊಂದು ಮರೆಯಲಾಗದ ಅನುಭವ. ಮಾತುಗಳಿಲ್ಲ, ಬರೀ ಭಾವನೆಗಳ ಭಾರೀ ಬುತ್ತಿಯಷ್ಟೆ. ಹೊರಲೂ ಆಗದು, ಇಳಿಸಲೂ ಆಗದು! ಆ ಸಮಯದಲ್ಲೇ ಆದ ಇನ್ನೊಂದು ವಿಪರ್ಯಾಸ ಅಂದರೆ, ನಮಗೆಲ್ಲರಿಗೂ ಒಂದಷ್ಟು ದಿನ ಕಳೆದು ಹೋದ ‘ವಾಸನೆಯ ಅನುಭವ’. ಹೌದಲ್ಲವೇ… ಯಾವ ಸೌಗಂಧವೇ ಆಗಲಿ ಅಥವಾ ದುರ್ಗಂಧವೇ ಆಗಲಿ. ಏನೂ ಅರಿಯಲಾಗದ ಆ ಸಮಯದ ವಾಸನೆ ಈಗಲು ಒಮ್ಮೊಮ್ಮೆ ಬೀಸುತ್ತದೆ. ನಾವು ತಿನ್ನುವ ಎಲ್ಲಾ ಆಹಾರ ಪದಾರ್ಥಗಳಿಗೆ ಪೂರಕವಾಗಿ ಸವಿಯುವ ಆ ವಾಸನೆಯ ಸಾಮರ್ಥ್ಯ ಕಳೆದುಕೊಂಡಾಗಲಂತೂ… ಅಬ್ಬಬ್ಬಾ, ನೀರಸ. ಆದರೆ ಆ ಅನುಭವಗಳು ಕೆಲವು ದಿನಗಳಿದ್ದು ಹೊರಟು ಹೋದವು ಅಲ್ಲವೇ, ನಂತರ ನಾವು ನಮ್ಮ ವಾಸನಾ ಗ್ರಹಣ ಸಾಮರ್ಥ್ಯವನ್ನು ಪಡೆದುಕೊಂಡು ಈಗ ಎಂದಿನಂತೆ ಸುಗಂಧಗಳನ್ನು ಆಸ್ವಾಧಿಸುತ್ತಾ ಬಂದಿದ್ದೇವೆ.

 ಹೌದಾ? ನಿಜವಾಗಿಯೂ ನಮ್ಮ ವಾಸನೆ ಗ್ರಹಿಕೆ ಸಾಮರ್ಥ್ಯ ನಮಗೆ 100% ಬಂತೇ? ಅಥವಾ ಈಗಲೂ ಸಹ ಕೆಲವು ವಾಸನೆಗಳನ್ನು ಗ್ರಹಿಸಲಾಗದೆ, ಅದಕ್ಕೆ ಹೆಚ್ಚಿನ ಗಮನ ಹರಿಸದೆ, ನಮ್ಮ ನಿರತ ದೈನಂದಿನ ಕೆಲಸಗಳಲ್ಲಿ ತೊಡಗಿಬಿಡುತ್ತಿದ್ದೇವೆಯೇ? ಇಂತಹ ಪ್ರಶ್ನೆಗಳನ್ನು ಒಮ್ಮೆ ಹಾಕಿಕೊಂಡು ನೋಡಿ. ಏಕೆಂದರೆ ಇನ್ನೂ ಕೆಲವರಿಗೆ ಕೋವಿಡ್ ಸಮಯದಲ್ಲಿ ಕಳೆದುಕೊಂಡ ವಾಸನಾ ಸಾಮರ್ಥ್ಯ ಇನ್ನೂ ಪೂರ್ಣವಾಗಿ ಹಿಂದಿರುಗಿಲ್ಲ! ಎನ್ನುತ್ತಿದೆ ಸಂಶೋಧನೆಯೊಂದು. ಅಹುದು, ಲಿಯೋರ ಎಂಬ ಸಂಶೋಧಕಿಯ ಗಮನಿಕೆ ಹಾಗೂ ಸಂಶೋಧನೆಯ ಪ್ರಕಾರ ಕೋವಿಡ್ ಬಾಧಿತ ಇನ್ನೂ ಎಷ್ಟೋ ಜನಕ್ಕೆ ತಾವು ಗ್ರಹಿಸುವ ವಾಸನೆಗಳು ಪೂರ್ಣವಾಗಿ ಗ್ರಹಿಸಲಾಗುತ್ತಿಲ್ಲ ಎನ್ನುವುದೇ ಗೊತ್ತಿಲ್ಲ. ಇಂತಹ ವಿಚಾರಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಸಂಶೋಧನೆಗಳು ನಡೆಯುವುದಿಲ್ಲ ಎನ್ನುತ್ತಾರೆ ಲಿಯೋರ. ಅದಕ್ಕಾಗಿಯೇ ಅವರ ತಂಡ ಸುಮಾರು 3000 ವ್ಯಕ್ತಿಗಳನ್ನು ಈ ಸಂಶೋಧನೆಗಾಗಿ ಕರೆಸಿ, 40 ವಿವಿಧ ಬಗೆಯ ವಾಸನೆಗಳನ್ನು ಗ್ರಹಿಸಲು ಬಿಟ್ಟರು. ಉದಾಹರಣೆಗೆ, ಟರ್ಪೆಂಟೈನ್ ವಾಸನೆ, ಚೀವಿಂಗ್ ಗಮ್ ವಾಸನೆ, ನಿಂಬೆಯ ವಾಸನೆ, ಹೀಗೆ. ಕೊನೆಗೆ ಅವರಿಗೆ ತಿಳಿದದ್ದು ಇದು. ಸುಮಾರು 80% ಭಾಗದ ಜನ ತಾವು ಸಲೀಸಾಗಿ ಗ್ರಹಿಸುತ್ತಿದ್ದ ವಾಸನೆಗಳನ್ನು ಈಗ ಗ್ರಹಿಸಲು ಆಗುತ್ತಿಲ್ಲ. ಕಾರಣ ಅವರು ಕೋವಿಡ್ ಸಮಯದಲ್ಲಿ ಕಳೆದುಕೊಂಡ ಆ ಸಾಮರ್ಥ್ಯ ಪೂರ್ಣವಾಗಿ ಇನ್ನೂ ಮರುಕಳಿಸಿಲ್ಲ. ಅಂದ ಮಾತ್ರಕ್ಕೆ ಅವರಿಗೆ ಗ್ರಹಿಸುವ ಸಾಮರ್ಥ್ಯವೇ ಇಲ್ಲ ಎಂದಲ್ಲ. ಬದಲಿಗೆ ಅದು ಮೊದಲಿನಷ್ಟು ಗಟ್ಟಿಯಾಗಿಲ್ಲ.

© John Coletti_Getty Images

ಇದು ಸಾಮಾನ್ಯವಾಗಿ ತಿಳಿದು ಬರುವುದಿಲ್ಲ. ಏಕೆಂದರೆ ಹೀಗೆ ನಮಗೆ ವಾಸನೆ ಗ್ರಹಿಕೆ ಕಡಿಮೆ ಆಗಿರುವ ವಿಚಾರ ನಾವು ಗಮನಿಸಿರುವುದಿಲ್ಲ. ಹೋಗಲಿ ಬಿಡಿ ಆದರೇನು? ದೊಡ್ಡ ಸಮಸ್ಯೆಯಾದರೂ ಏನು? ಸ್ವಲ್ಪ ಗ್ರಹಿಕೆ ಕಡಿಮೆ ಆಗಿದೆ ಅಷ್ಟೇ ತಾನೆ? ನಡೆಯುತ್ತೆ… ಅಂದುಕೊಂಡೀರಿ ಹುಷಾರ್. ಈ ಕಡಿಮೆಯಾದ ಸಾಮರ್ಥ್ಯದ ಪರಿಣಾಮ ದುಬಾರಿಯಾದೀತು. ಎಂದು ಎಚ್ಚರಿಸುತ್ತಾರೆ ಲಿಯೋರ. ಏಕೆಂದರೆ ಇದರಿಂದಾಗಿ ಲೀಕ್ ಆಗುತ್ತಿರುವ ಗ್ಯಾಸ್ ನ ವಾಸನೆ ಗ್ರಹಿಕೆ ಆಗದೇ ಇರಬಹುದು, ಹಾಳಾದ ಆಹಾರ ಪದಾರ್ಥದ ಅರಿವು ಆಗದೇ ಇರಬಹುದು ಅಥವಾ ಬೆಂಕಿ ಉರಿಯುವ ಸೂಚನೆಯಾದ ಹೊಗೆ ವಾಸನೆಯೇ ತಿಳಿಯದೇ ಇರಬಹುದು. ಆದ್ದರಿಂದ ವಾಸನೆ ಗ್ರಹಿಕೆಯ ಸಾಮರ್ಥ್ಯ ಕಡಿಮೆಯಾಗಿದೆ ಎಂಬ ಅನುಮಾನವೇನಾದರೂ ನಿಮಗೆ ಇದ್ದರೆ ಅದನ್ನು ಒಮ್ಮೆ ವೈದ್ಯರಿಗೆ ತೋರಿಸುವುದು ಒಳಿತು.

ನಮ್ಮ ತನು-ಮನದ ಆರೋಗ್ಯಕರ ವರ್ತಮಾನ ಹಾಗೂ ಭವಿಷ್ಯತ್ತಿಗಾಗಿಯೇ ಬಳಸಬೇಕಾದ ನಮ್ಮ ಇಂದ್ರಿಯಗಳನ್ನು ಸರಿಯಾದ ರೂಪದಲ್ಲಿ ರಕ್ಷಿಸಿಕೊಳ್ಳುವುದು ನಮ್ಮದೇ ಕರ್ತವ್ಯ. ಏಕೆಂದರೆ ಅವುಗಳಿಲ್ಲದೇ ನಮ್ಮ ಸುತ್ತಲಿನ ಪರಪಂಚದ ಗಮ್ಮತ್ತು ಯಾರಿಗೆ ತಿಳಿಯುತ್ತಿತ್ತು? ಆದ್ದರಿಂದ ನಮ್ಮ ಇಂದ್ರಿಯಗಳನ್ನು ಬಳಸಬೇಕಾದ ಜಾಗಗಳಲ್ಲೇ ಬಳಸಿ, ಸರಿಯಾದ ಮಾಹಿತಿಯನ್ನು ನೀಡಿ ಬೆಳೆಸಿ, ನೆಮ್ಮದಿಯಿಂದ ಜೀವಿಸಿ. ಆ ಘಮ್… ಹೊತ್ತು ಇರಲಿ ಯಾವತ್ತೂ…

     Source: www.snexplores.org

ಲೇಖನ: ಜೈಕುಮಾರ್ ಆರ್.
          ಬೆಂಗಳೂರು ನಗರ ಜಿಲ್ಲೆ

Spread the love
error: Content is protected.