ಕಂಬಳಿ ಹುಳು!
© ಡಾ. ಪ್ರಭಾಕರ್ ತೀರ್ಥಹಳ್ಳಿ
ಡಿಸೆಂಬರ್ ತಿಂಗಳು ಬಂತು ಎಂದರೆ ಭಯ ಶುರುವಾಗುತ್ತೆ. ಚಳಿ ಅಂತಲ್ಲ! ಈ ಕಂಬಳಿ ಹುಳುಗಳ ಹಾವಳಿಗೆ. ಯಾವ ಗೋಡೆ ನೋಡಿದರೂ ಕಂಬಳಿ ಹುಳುಗಳದ್ದೇ ದರ್ಬಾರು! ಲೆಪಿಡೊಪ್ಟೆರಾ ಗಣಕ್ಕೆ ಸೇರಿದ ಇದಕ್ಕೆ ಸಾಮಾನ್ಯ ಹೆಸರು “ಕ್ಯಾಟರ್ಪಿಲ್ಲರ್ ” ಎಂದು.
ಇವುಗಳ ದೇಹವನ್ನು ತಲೆಯ ಭಾಗ, ಎದೆಯ ಭಾಗ ಮತ್ತು ಉದರ ಭಾಗ ಎಂಬ ಮೂರು ಭಾಗಗಳಾಗಿ ವಿಂಗಡಿಸಬಹುದು. ಇವುಗಳಿಗೆ ಮೂರು ಜೊತೆ ಸಂಧಿಪಾದಗಳಿವೆ (ಜಾಯಿಂಟ್ಸ್) ಅದು ಎದೆಯ ಭಾಗದಲ್ಲಿ ಇದರ ಕೊನೆಯಲ್ಲಿ/ತುದಿಯಲ್ಲಿ ಕೊಂಡಿಗಳು ಕಂಡುಬರುತ್ತವೆ. ಉದರ ಭಾಗದಲ್ಲಿ ಪಾದಗಳನ್ನು ನೋಡಬಹುದು. ಅದು ಐದು ಜೊತೆ ಇರಬಹುದು ಅಥವಾ ಒಂದು ಪ್ರಭೇದಕ್ಕಿಂತ ಇನ್ನೊಂದಕ್ಕೆ ವ್ಯತ್ಯಾಸವೂ ಇರಬಹುದು. ದಪ್ಪ ಮತ್ತು ದುಂಡಾದ ಕಾಲುಗಳು; ಅದರ ತುದಿಯಲ್ಲಿ ಮುಳ್ಳುಗಳಂತ ರಚನೆಗಳು; ಚಲಿಸುವಾಗ ಈ ಮುಳ್ಳುಗಳು ಗೋಡೆ, ಗಿಡವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಸಹಾಯ ಮಾಡುತ್ತವೆ. ತಲೆಯು ಗಟ್ಟಿಯಾದ ಕ್ಯೂಟಿಕಲ್ ಕವಚದಿಂದ ಆವರಿಸಿದ್ದು, ತಲೆಯ ಭಾಗದಲ್ಲಿ ಒಂದು ಜೊತೆ ತುಂಡಾದ ಕುಡಿಮೀಸೆಗಳನ್ನು ತುದಿಯಲ್ಲಿ ನೋಡಬಹುದು. ಇದರ ದವಡೆಗಳು (mandibles) ಗಟ್ಟಿ ಹಾಗೂ ಶಕ್ತಿಯುತವಾಗಿವೆ. ಬದಿಯಲ್ಲಿ ಇರುವ ಮಾಕ್ಸಿಲಾ ಭಾಗಗಳು ಬಹಳ ಚಿಕ್ಕದಾಗಿರುವುದರಿಂದ ಸಾಮಾನ್ಯ ಕಣ್ಣಿಗೆ ಸ್ಪಷ್ಟವಾಗಿ ಕಾಣುವುದಿಲ್ಲ. ಕೆಳ ತುಟಿಯ ಬಳಿ ಇರುವ ವಿಶೇಷ ರೇಷ್ಮೆ ಗ್ರಂಥಿಗಳು ದ್ರವ ರೂಪದ ಪದಾರ್ಥವನ್ನು ಹೊರಸೂಸುತ್ತವೆ. ಇದು ಸ್ಪಿನ್ನರೆಟ್ ಮೂಲಕ ಹೊರಬಂದ ತಕ್ಷಣ ಗಟ್ಟಿಯಾಗಿ, ನಾವು ಕಾಣುವ ರೇಷ್ಮೆಯಂತ ದಾರವಾಗಿ ರೂಪುಗೊಳ್ಳುತ್ತದೆ.

ಕೆಲವು ಕಂಬಳಿಹುಳುಗಳ ದೇಹದ ಮೇಲ್ಮೈ ತುಂಬೆಲ್ಲಾ ದಟ್ಟವಾಗಿ ರೋಮಗಳು ಅಥವಾ ಗುಚ್ಛಗಳಂತೆ ಕಾಣುವ ಕೂದಲುಗಳಿರುತ್ತವೆ. ಇವುಗಳನ್ನು ಮುಟ್ಟಿದಾಗ ಅಥವಾ ಅವು ನಮ್ಮ ಬಟ್ಟೆ, ಚರ್ಮದ ಮೇಲೆ ಹರಿದಾಗ, ಈ ರೋಮಗಳ ತುದಿ ಚರ್ಮಕ್ಕೆ ತಾಗುತ್ತಿದ್ದಂತೆ ಅದರಲ್ಲಿರುವ ಸೂಕ್ಷ್ಮ ಕಿರಿಕಿರಿ ಉಂಟುಮಾಡುವ ರಾಸಾಯನಿಕಗಳು ಚರ್ಮಕ್ಕೆ ಸೋಕಿ ಉರಿ, ಕೆರೆತ ಮತ್ತು ಸುಡುವಂಥ ಅನುಭವವನ್ನು ಕೊಡುತ್ತವೆ. ಈ ಕಿರಿಕಿರಿಯನ್ನು ಉಂಟುಮಾಡುವ ಪ್ರಮಾಣ ಮತ್ತು ತೀವ್ರತೆ ಪ್ರಭೇದದಿಂದ ಪ್ರಭೇದಕ್ಕೆ ಬದಲಾಗುತ್ತದೆ. ಕೆಲ ಕಂಬಳಿಹುಳುಗಳ ಮುಳ್ಳುಗಳು ಸಂಪೂರ್ಣ ಹಾನಿರಹಿತವಾಗಿದ್ದರೂ, ಕೆಲವು ಜಾತಿಗಳಿಗೆ ರೋಮವಿಲ್ಲದೇ ನುಣ್ಣಗೆ ಇರುವ ದೇಹವೂ ಕಂಡುಬರುತ್ತದೆ. ಆದ್ದರಿಂದ ಕಂಬಳಿಹುಳುಗಳು ನಾನಾ ರೂಪ–ರಂಗಗಳಲ್ಲಿ ಕಾಣಿಸುತ್ತವೆ.





ಕಂಬಳಿಹುಳುಗಳಲ್ಲಿ ಕೆಲವು ಹಗಲಿನಲ್ಲಿ ಕ್ರಿಯಾಶೀಲವಾಗಿದ್ದರೆ ಇನ್ನು ಕೆಲವು ರಾತ್ರಿ ಹೊತ್ತು ಕ್ರಿಯಾಶೀಲವಾಗಿರುತ್ತವೆ. ಈ ಹುಳುಗಳಲ್ಲಿ ಹಲವಾರು ಸುಂದರವಾದ ಬಲು ಆಕರ್ಷಿತವಾದವುಗಳನ್ನು ಕಾಣಬಹುದು. ಕೆಲವು ಕಣ್ಣಿಗೆ ರಂಜಿಸುವಂತಾ ಬಣ್ಣ ಹೊಂದಿದ್ದು ನೋಡಲು ಆಕರ್ಷಕವಾದರೆ ಕೆಲವು ನೋಡಲು ವಿಚಿತ್ರ ಎನಿಸುತ್ತವೆ. ಇವು ಸಾಮಾನ್ಯವಾಗಿ ಸಸ್ಯಾಹಾರಿಗಳೇ. ಆದ್ದರಿಂದ ಎಲೆ, ತೊಗಟೆಯನ್ನು ತಿಂದು ಸಸ್ಯಹಾನಿ ಮಾಡುತ್ತವೆ. ಕೆಲವು ಪ್ರಭೇದದ ಕಂಬಳಿಹುಳುಗಳು ಮಾಂಸಹಾರಿಗಳು ಆಗಿವೆ. ಇರುವೆ ಗೂಡಿನ ಮೊಟ್ಟೆಗಳನ್ನು, ಸಸ್ಯ ತಿಗಣೆಗಳನ್ನು ಹಾಗು ಅದರ ಜಾತಿಯ ಹುಳುಗಳನ್ನೇ ತಿಂದು ತೇಗುತ್ತವೆ. ಇವು ಬಹು ಬೇಗ ಬೆಳವಣಿಗೆಯಾಗಿ, ಕೆಲವು ಎರಡೇ ವಾರಗಳಲ್ಲಿ ದೇಹದ ಆಕಾರ ದುಪ್ಪಟ್ಟುಗೊಂಡು ದೇಹದ ಬೆಳವಣಿಗೆ ಸ್ಥಗಿತಗೊಳ್ಳುತ್ತದೆ. ಇವು ತಿನ್ನುವುದನ್ನು ನಿಲ್ಲಿಸಿ ತನ್ನ ಸುತ್ತಲೂ ಕೋಟೆಯ ಹಾಗೆ ಪೊರೆಯನ್ನು ಹೆಣೆದುಕೊಂಡು ತನಗೆ ತಾನೇ ಅದರಲ್ಲಿ ಬಂಧಿಯಾಗುತ್ತವೆ. ಅದರ ದೇಹ ಈ ವೇಳೆ ಪರಿವರ್ತನೆಗೊಂಡು ಸುಂದರವಾದ ಪತಂಗ ಅಥವಾ ಚಿಟ್ಟೆಯಾಗಿ ಹೊರಬರುತ್ತವೆ.





ನಾನು ಮೊದಲೇ ಹೇಳಿದ ಹಾಗೆ ಕಂಬಳಿ ಹುಳುಗಳು ಅಂದ್ರೆ ಭಯವಾಗೋದು ಸಹಜ, ಯಾಕಂದ್ರೆ ಅವು ನೋಡಲು ಭಯಾನಕವಾಗಿರುತ್ತವೆ ಹಾಗು ಅವು ಸೋಕಿದರೆ ಮೈಯೆಲ್ಲಾ ಉರಿ, ಕೆರೆತ ಶುರುವಾಗಿ ಕಂಬಳಿ ಹುಳುಗಳ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ಆಲೋಚನೆಯೂ ಬರುತ್ತದೆ. ಆದರೆ ಅವುಗಳ ಜೀವನ ಚಕ್ರವನ್ನು ನೋಡಿದರೆ ಅವುಗಳೇ ಮುಂದೆ ನಾವು ಆನಂದಿಸುವ ಚಿಟ್ಟೆ ಅಥವಾ ಪತಂಗವಾಗಿ ಹೊರಹೊಮ್ಮುತ್ತವೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಅದರ ಜೊತೆಗೆ ಇದರಲ್ಲಿ ಮಾನವರಾದ ನಾವು ಜೀವನದ ಪ್ರಮುಖ ಪಾಠ ಕಲಿಯಬಹುದು. ಜೀವನದಲ್ಲಿ ನಾವು ಎಷ್ಟೇ ಕಷ್ಟಗಳನ್ನು ಕಂಡರು, ಅನುಭವಿಸಿದರೂ ಮುಂದೆ ಕಂಬಳಿಹುಳು ಸುಂದರವಾದ ಚಿಟ್ಟೆಯಾಗುವಂತೆ ನಮಗೂ ಒಂದು ಸುಂದರ ಜೀವನ ಸಿಗುತ್ತದೆ ಎನ್ನುವುದನ್ನು ಮರೆಯಬಾರದು ಎಂಬುದನ್ನು ಚಿಟ್ಟೆಗಳ ಜೀವನ ಕಲಿಸುತ್ತದೆ.
ಮುಂದೆ ನೀವು ಕಂಬಳಿ ಹುಳುಗಳನ್ನು ನೋಡಿ ಅಸಹ್ಯ ಪಡುವುದು, ಅದನ್ನ ಸಾಯಿಸುವುದಕ್ಕೂ ಮುಂಚೆ ಒಮ್ಮೆ ಆಲೋಚಿಸಿ? ಭಯಂಕರ ವಿಕೃತ ಜೀವಿಯೊಂದು ಎಲ್ಲರೂ ಇಷ್ಟಪಡುವಂತ ಸುಂದರ, ಆಕರ್ಷಕ ಚಿಟ್ಟೆ ಅಥವಾ ಪತಂಗವಾಗಿ ಹೊರಹೊಮ್ಮಿ ಎಲ್ಲರಿಗೂ ಮಾದರಿಯಾಗುವಂತೆ ಮಾಡುವ, ಅದರ ಹಂತಗಳನ್ನು ಒಮ್ಮೆ ನೆನಪಿಸಿಕೊಳ್ಳಿ.
ನಿಮಗೂ ಮುಂದೆ ಏನನ್ನಾದರೂ ಸಾಧಿಸಬಲ್ಲೇ ಎಂಬ ಧೈರ್ಯ, ಹುಮ್ಮಸ್ಸು ಬರಬಹುದು! ಏನಂತೀರಾ?

ಲೇಖನ: ಹರ್ಷಿತ ಪಿ. ಹನುಮಯ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆ