ಕಾಪಾಡುವ ಕರುಳಿನ ಸೂಕ್ಷ್ಮಜೀವಿಗಳು. . .
ನನಗೆ ನಮ್ಮ ಕಾಡಿನಲ್ಲಿ ಬೈಕನ್ನು ಓಡಿಸುವಾಗ ಹೆಲ್ಮೆಟ್ ಧರಿಸಲು ಇಷ್ಟವೇ ಇಲ್ಲ. ಕಾರಣ, ನಮ್ಮ ಕಾಡಿನ ಹಸಿರು, ಆ ಮಣ್ಣಿನ ವಾಸನೆ, ಗಾಳಿ ಹೇಳುವ ಮಾತುಗಳು ಕೇಳುತ್ತಾ ಹೋಗಬೇಕು ಎನ್ನುವ ಆಸೆ. ಬೆಳಗಿನ ಜಾವ ಪರವಾಗಿಲ್ಲ, ಆದರೆ ರಾತ್ರಿಯ ಹೊತ್ತು ಹೀಗೆ ಹೋಗುವುದು ಕಷ್ಟವೇ. ಏಕೆಂದರೆ ಗಾಡಿಯ ಬೆಳಕಿಗೆ ಆಕರ್ಷಿತರಾಗಿ, ಆಯಾ ತಪ್ಪಿ ಬಂದು ಎಷ್ಟೋ ಕೀಟಗಳು ನೇರ ಕಣ್ಣಿನ ಗುಡ್ಡೆಗೇ ಬಂದು ಹೊಡೆದುಬಿಡುತ್ತವೆ. ಆದರೆ ಬಹುತೇಕ ಸಮಯ ನಮ್ಮ ದೇಹ ಎಷ್ಟು ಚೆನ್ನಾಗಿ ಅದಕ್ಕೆ ಪ್ರತಿಕ್ರಿಯಿಸುತ್ತದೆ ಎಂದರೆ ನಮ್ಮ ಕಣ್ಣಿನ ರೆಪ್ಪೆ ಕೀಟ ಬಂದು ಹೊಡೆಯುವ ಆ ಕ್ಷಣಮಾತ್ರದಲ್ಲಿ ಮುಚ್ಚಿ ನಮ್ಮ ಕಣ್ಣನ್ನು ರಕ್ಷಿಸಿಬಿಡುತ್ತದೆ. ಕೆಲವೊಮ್ಮೆ ಕೀಟದ ವೇಗ ಹೆಚ್ಚಾಗಿದ್ದು ಕಣ್ಣಿಗೆ ಹೊಡೆದೇಬಿಟ್ಟಿತು ಎಂದರೂ ನಮ್ಮ ಕಣ್ಣು-ಕಣ್ಣೀರನ್ನು ಹರಿಸಿ ಅದನ್ನು ಹೊರ ಹಾಕುವ ಪ್ರಯತ್ನ ಮಾಡುತ್ತದೆ. ಇಷ್ಟೇ ಅಲ್ಲ ಸೆಖೆಯಾದಾಗ ದೇಹವನ್ನು ತಂಪು ಮಾಡಲು ಬರುವ ಬೆವರು, ಚಳಿಯಲ್ಲಿ ನಿಂತುಕೊಳ್ಳುವ ದೇಹದ ಕೂದಲು, ಇವೆಲ್ಲಾ ದೇಹವನ್ನು ಹೊರಗಿನ ಬೇಡದ ಬದಲಾವಣೆಗಳಿಗೆ ರಕ್ಷಿಸಿಕೊಳ್ಳುವ ಪ್ರಯತ್ನಗಳು. ಇದು ಕೇವಲ ದೇಹದ ಹೊರಗೆ ಮಾತ್ರವಲ್ಲ, ದೇಹದ ಒಳಗೆ ಆಗುವ ತೊಂದರೆಗಳಿಗೂ ಪ್ರತಿಕ್ರಿಯಿಸುತ್ತದೆ. ಉದಾಹರಣೆಗೆ ಗಾಳಿ ಮಾತ್ರ ಹೋಗಬೇಕಾದ ಶ್ವಾಸನಾಳದಲ್ಲಿ ಬೇರೆ ವಸ್ತು ಹೋದರೆ ನಾವು ಅದನ್ನು ಸೀನುವುದರ ಮೂಲಕ ಹೊರಗೆ ಹಾಕುತ್ತೇವೆ. ಹಾಗಾದರೆ ನಾವು ತಿನ್ನುವ ಆಹಾರದಿಂದ ದೇಹವನ್ನು ಸೇರುವ ಬೇಡದ ವಸ್ತು ಅಥವಾ ವಿಷಕಾರಿ ವಸ್ತು ದೇಹ ಸೇರಿದರೆ ಏನು ಮಾಡುವುದು? ಇದಕ್ಕೂ ನಮ್ಮ ದೇಹ ಉಪಾಯ ಮಾಡಿಕೊಂಡಿದೆ. ನಮ್ಮ ದೇಹಕ್ಕೆ ಒಗ್ಗದ ವಸ್ತುವೇನಾದರೂ ನಮ್ಮ ಹೊಟ್ಟೆಗೆ ಹೋದರೆ ನಮ್ಮ ದೇಹ ಅದನ್ನು ವಾಂತಿಯಿಂದಲೋ ಅಥವಾ ಲೂಸ್ ಮೋಷನ್ ನಿಂದಲೋಹೊರಗೆ ಹಾಕಿಬಿಡುತ್ತದೆ. ಆದರೇ… ದೇಹ ತಯಾರಿಸಿರುವ ಇಂತಹ ಎಲ್ಲಾ ರಕ್ಷಣಾ ಕವಚವನ್ನು ಮೀರಿ ದೇಹ ಸೇರುವ ಕೆಲವು ವಿಷಕಾರಿ ವಸ್ತುಗಳನ್ನು ಹೊರ ಹಾಕುವುದು ಹೇಗೆ? ಅದು ಅಷ್ಟು ಸುಲಭವಲ್ಲ. ಹೇಳಬೇಕೆಂದರೆ ನಾವು ಉಸಿರಾಡುವ ಕಲುಷಿತ ಗಾಳಿ ಮತ್ತು ಆಹಾರದಿಂದಲೇ ನಮ್ಮ ಪೀಳಿಗೆಗೆ ಹತ್ತು ಹಲವಾರು ಅಸ್ತಮಾ, ಕ್ಯಾನ್ಸರ್ ನಂತಹ ರೋಗಗಳು ಸಾಮಾನ್ಯವಾಗಿಬಿಟ್ಟಿವೆ. ಇಂತಹ ಸಮಯದಲ್ಲಿ ನಮ್ಮ ದೇಹದ ಒಳಗೆ ಇರುವ ‘ಕರುಳಿನ ಸೂಕ್ಷ್ಮಜೀವಿಗಳು’ ನಮ್ಮ ದೇಹಕ್ಕೆ ಸಾಮಾನ್ಯವಾಗಿ ಬಂದು ಸೇರುವ ಹಾಗೂ ಕ್ಯಾನ್ಸರ್ ನಂತಹ ರೋಗವನ್ನೂ ತರಬಲ್ಲ PFAS (polyfluroalkyl substances) ಎಂಬ ವಿಷಕಾರಿ ವಸ್ತುವನ್ನು ದೇಹದಿಂದ ಹೊರ ಹಾಕುವ ಕೆಲಸವನ್ನು ಈ ಸೂಕ್ಶ್ಮ ಜೀವಿಗಳು ಮಾಡುತ್ತಿವೆ ಎಂದು ಹೇಳುತ್ತಿದೆ ಹೊಸ ಸಂಶೋಧನೆ.

ನಾವು ಬಳಸುವ ಎಷ್ಟೋ ದಿನನಿತ್ಯದ ವಸ್ತುಗಳಲ್ಲಿ ನಮಗೆ ಬೇಡದ, ವಿಷಕಾರಿ ವಸ್ತುಗಳು ಅಡಗಿವೆ ಹಾಗೂ ಕೆಲವಂತೂ ನಮ್ಮ ದೇಹವನ್ನೂ ಸೇರುತ್ತಿವೆ. ಉದಾಹರಣೆಗೆ ನಾವು ಬಳಸುವ ಜಲನಿರೋಧಕ (ವಾಟರ್ಪ್ರೂಫ್) ವಸ್ತುಗಳಲ್ಲಿ ಹಾಗೂ ಅಡುಗೆ ಮನೆಯಲ್ಲಿ ಬಳಸುವ ಅಂಟುರಹಿತ (ನಾನ್ ಸ್ಟಿಕ್ಕಿ) ಅಡುಗೆ ಪಾತ್ರೆಗಳಲ್ಲಿ ಕಂಡುಬರುವಂತಹ ಶಾಶ್ವತ ರಾಸಾಯನಿಕಗಳು (ಫಾರೆವರ್ ಕೆಮಿಕಲ್ಸ್) ನಮ್ಮ ದೇಹನ್ನು ಸೇರಿದರೆ ಕೊಲೆಸ್ಟ್ರಾಲ್, ಬೆಳವಣಿಗೆ ಕ್ಷೀಣತೆ ಮತ್ತು ಕ್ಯಾನ್ಸರ್ ತರಬಲ್ಲದು. ನಮ್ಮ ದೇಹದಲ್ಲಿ ಇಂತಹ ರಾಸಾಯನಿಕವನ್ನು ಹೊರ ಹಾಕುವ ಯಾವುದೇ ಸ್ವಾಭಾವಿಕ ದೇಹದ ಕಾರ್ಯಾಚರಣೆ ಇಲ್ಲ. ಆದರೆ ನಮ್ಮ ಜೀರ್ಣಾಂಗವ್ಯೂಹದ ಭಾಗವೇ ಆಗಿಬಿಟ್ಟಿರುವ ಕೆಲವು ಒಳ್ಳೆ ಬ್ಯಾಕ್ಟೀರಿಯಾಗಳು ಈ ಕೆಲಸವನ್ನು ನಮಗಾಗಿ ಮಾಡುತ್ತವೆ ಎಂದು ಸಂಶೋಧನೆಯಲ್ಲಿ ತೊಡಗಿದ್ದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿಜ್ಞಾನಿ ಕಿರಣ್ ಪಾಟೀಲ್ ಹೇಳುತ್ತಾರೆ. ಇಲ್ಲಿಯವರೆಗೆ ನಮ್ಮ ಜೀರ್ಣಕ್ರಿಯೆಯಲ್ಲಿ ಈ ಬ್ಯಾಕ್ಟೀರಿಯ್ಯಾಗಳು ಸಹಾಯ ಮಾಡುತ್ತವೆ ಎಂದು ತಿಳಿದಿದ್ದರೂ, ಹೇಗೆ ಎಂದು ನಿಖರವಾಗಿ ತಿಳಿದಿರಲಿಲ್ಲ. ಜೊತೆಗೆ ಇಂತಹ ವಿಷಕಾರಿ ರಾಸಾಯನಿಕಗಳನ್ನು ಹೀರಿಕೊಂಡು ನಮ್ಮ ದೇಹದಿಂದ ಹೊರಹಾಕುತ್ತವೆ ಎಂಬುದು ತಿಳಿದೇ ಇರಲಿಲ್ಲ. ಇವು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದರೆ, ನಮ್ಮ ದೇಹವನ್ನು ಸೇರುವ ಇಂತಹ ರಾಸಾಯನಿಕಗಳನ್ನು ಈ ಬ್ಯಾಕ್ಟೀರಿಯಾಗಳು 20-75 % ವರೆಗೆ ನಮ್ಮ ದೇಹಕ್ಕೆ ಯಾವುದೇ ಅಡ್ಡ ಪರಿಣಾಮವಾಗದಂತೆ ದೇಹದಿಂದ ಹೊರ ಹಾಕುತ್ತವೆಯಂತೆ.

ವಿಜ್ಞಾನಿಗಳು ಈ ವಿಚಾರವನ್ನು ಮೊದಲು ಕಂಡು ಹಿಡಿದದ್ದು ಇಲಿಗಳಲ್ಲಿ. ಮಾನವನ ಆವಾಸಕ್ಕೆ ಹತ್ತಿರದಲ್ಲಿಯೇ ಕಂಡುಬರುವ ಈ ಜೀವಿಗಳ ಜೀರ್ಣಾಂಗದಲ್ಲಿ ಇರುವ ಸೂಕ್ಷ್ಮಜೀವಿಗಳು ಮನುಷ್ಯನ ಜೀರ್ಣಾಂಗದಲ್ಲಿರುವ ಜೀವಿಗಳಿಗೆ ಹೋಲುತ್ತವೆ. ಆದ್ದರಿಂದ ಇಲಿಗಳ ಆಹಾರದಲ್ಲಿ ಸೇರಿದ್ದ ಈ ಶಾಶ್ವತ ರಾಸಾಯನಿಕಗಳನ್ನು ತಮ್ಮ ದೇಹದಿಂದ ಹೊರ ಹಾಕಿರುವುದನ್ನು ಇಲಿಗಳ ಮಲ ವಿಸರ್ಜನೆಯನ್ನು ಅಭ್ಯಸಿಸಿದ ವಿಜ್ಞಾನಿಗಳು ತಿಳಿದುಕೊಂಡಿದ್ದಾರೆ. ಇದು ನಮ್ಮ ಮನುಷ್ಯನಲ್ಲಿ ಹೇಗೆ ನಡೆಯಬಹುದು ಎಂಬುದನ್ನು ತಿಳಿಯಲು ಪ್ರಯೋಗಾಲಯದಲ್ಲಿ ಎರಡು ಮಾದರಿಗಳನ್ನು ತೆಗೆದುಕೊಂಡರು. ಒಂದರಲ್ಲಿ ರಾಸಾಯನಿಕಗಳನ್ನು ಹೊರ ಹಾಕುವ ಬ್ಯಾಕ್ಟೀರಿಯಾಗಳಿದ್ದವು. ಇನ್ನೊಂದರಲ್ಲಿ ಇರಲಿಲ್ಲ. ಈಗ ಅದಕ್ಕೆ ಈ PFAS ಹಾಕಿದಾಗ, ಬಾಕ್ಟೀರಿಯಾ ಇದ್ದ ಮಾದರಿಯಲ್ಲಿ ಅವುಗಳು ರಾಸಾಯನಿಕವನ್ನು ಹೀರಿಕೊಂಡಿದ್ದವು. ಇಲ್ಲದುದರಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಇದರಿಂದ ತಿಳಿಯುವ ನೇರ ವಿಚಾರವೇ ಈ ಕರುಳಿನ ಬ್ಯಾಕ್ಟೀರಿಯಾಗಳು ಆ ಶಾಶ್ವತ ರಾಸಾನಿಕಗಳನ್ನು ಯಶಸ್ವಿಯಾಗಿ ಹಿಡಿದಿಟ್ಟಿದ್ದವು ಎಂದು. ಇದು ವಿಜ್ಞಾನಿಗಳಿಗೆ ಒಂದು ಮಹತ್ವದ ಹೆಜ್ಜೆಯಾಗಿತ್ತು. ಏಕೆಂದರೆ ಈ ತರಹದ ಒಂದು ವ್ಯವಸ್ಥೆ ನಮ್ಮ ದೇಹದಲ್ಲಿಯೇ ಇದೆ ಎಂದು ತಿಳಿದು ಬಂದುದರಿಂದ ಈಗ ಈ ರಾಸಾಯನಿಕಗಳನ್ನು ತಡೆಯುವ ಇನ್ನು ಹತ್ತು ಹಲವಾರು ಬಗೆ ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಬಹುದಲ್ಲವೇ.
ನಮಗೆ ತಿಳಿಯದ ಹಾಗೆ ನಮ್ಮ ದೇಹದಲ್ಲೇ ಇದ್ದು ನಮ್ಮನ್ನು ರಕ್ಷಿಸುವ ಎಷ್ಟೋ ಕಾರ್ಯಾಚರಣೆಗಳು ನಡೆಯುತ್ತಿವೆ ಎನ್ನುವುದನ್ನು ಜೀರ್ಣಿಸಿಕೊಳ್ಳುವುದೇ ಹೊಸದಾಗಿದೆ. ನಮ್ಮ ಜೀರ್ಣಾಂಗವ್ಯೂಹದಲ್ಲೇ ಇದ್ದು ತಾವು ಪಡೆಯುವ ಆಹಾರಕ್ಕೆ ನಮಗೆ ಉಪಕಾರ ಮಾಡಿ ಕಾಪಾಡುವ ಇಂತಹ ಬ್ಯ್ಯಾಕ್ಟೀರಿಯಾಗಳ ಜೀವನದ ಮೌಲ್ಯ ಹೊರಗಿನ ನಮ್ಮಂತಹ ಎಷ್ಟೋ ಜನರಿಗೆ ಆದರ್ಶವಾದೀತು.
Source: www.snexplores.org

ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.