ಕನ್ನಡದ ಪಕ್ಷಿ ಶಿಕ್ಷಕರ ಕೈಪಿಡಿ

ಕನ್ನಡದ ಪಕ್ಷಿ ಶಿಕ್ಷಕರ ಕೈಪಿಡಿ

ಪಕ್ಷಿ ಪ್ರೇಮವನ್ನು ಸಾರುವಲ್ಲಿ ಸಹಾಯಕವಾಗುವ ಅರ್ಲಿ ಬರ್ಡ್ ನ ಕನ್ನಡದ ಪಕ್ಷಿ ಶಿಕ್ಷಕರ ಕೈಪಿಡಿಯು ಇದೀಗ ಲಭ್ಯವಿದೆ.

ಆಟ ಮತ್ತು ಕಲೆ ಆಧಾರಿತ ಕಲಿಕೆಯೊಂದಿಗೆ ಪಕ್ಷಿಗಳ ಅದ್ಭುತಗಳನ್ನು ಮಕ್ಕಳಿಗೆ ತಿಳಿಯಪಡಿಸಲು, ಶಿಕ್ಷಣತಜ್ಞರಿಗೆ ಸ್ಫೂರ್ತಿ ನೀಡಿ, ಅವರನ್ನು ಸಜ್ಜುಗೊಳಿಸಲು ಬೇಕಾದ ಎಲ್ಲಾ ವಿಧಾನಗಳನ್ನು ಒಳಗೊಂಡಿರುವ ಕೈಪಿಡಿಯು ಇದಾಗಿದೆ. ಇದು ಅನೇಕ ಪ್ರಕೃತಿ ಶಿಕ್ಷಕರ ಆಲೋಚನೆಗಳು ಮತ್ತು ಅನುಭವಗಳಿಂದ ಹೊರಹೊಮ್ಮಿದ ಸಂಕಲನವಾಗಿದೆ. ಮಕ್ಕಳೊಂದಿಗೆ ಪ್ರಯತ್ನಿಸಬಹುದಾದ ವಿವಿಧ ಚಟುವಟಿಕೆಗಳು, ಆಟಗಳು, ಯೋಜನೆಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿದೆ. 

ಮಕ್ಕಳು ನೈಸರ್ಗಿಕ ಪ್ರಪಂಚದ ಬಗ್ಗೆ ಸಹಜವಾದ ಕುತೂಹಲ ಮತ್ತು ವಿಸ್ಮಯವನ್ನು ಹೊಂದಿರುತ್ತಾರೆ, ಆದರೆ ಬೆಳೆಯುತ್ತಿದ್ದಂತೆ ಈ ಮನೋಭಾವವು ಬಹಳಷ್ಟು ಕ್ಷೀಣಿಸಿಬಿಡುತ್ತದೆ. ಪ್ರಕೃತಿಯೊಂದಿಗೆ ಆಳವಾದ ಅವಿನಾಭಾವ ಸಂಪರ್ಕವನ್ನು ನಿರ್ಮಿಸಿ ಅವರ ಕುತೂಹಲವನ್ನು ಪೋಷಿಸುವುದು ಅತ್ಯಗತ್ಯ. ಮಾರ್ಗದರ್ಶಕರ (ಪೋಷಕರು ಅಥವಾ ಶಿಕ್ಷಕರು) ಮಾರ್ಗದರ್ಶನದಲ್ಲಿ ಮಗುವಿಗೆ ದೊರಕುವ ಪ್ರಕೃತಿಯೊಂದಿಗಿನ ಅನುಭವವು, ಅನೇಕ ಭಾವನಾತ್ಮಕ ಮತ್ತು ದೈಹಿಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಸಂಶೋಧನೆಯು ತಿಳಿಸುತ್ತದೆ. ಪಕ್ಷಿಗಳು ಬಹಳ ಸುಂದರ ಮತ್ತು ಆಸಕ್ತಿದಾಯಕವಾಗಿರುವುದರಿಂದ ಈ ಪ್ರಯಾಣಕ್ಕೆ ಅವುಗಳೇ ಪರಿಪೂರ್ಣವಾದ ಆರಂಭಿಕ ಘಟ್ಟವಾಗುವುದೆಂದು ಅರ್ಲಿ ಬರ್ಡ್ನಲ್ಲಿ ನಂಬುತ್ತೇವೆ.

ಸೌಮಿತ್ರ ದೇಶಮುಖ್ ಅವರಿಂದ ಸುಂದರವಾಗಿ ಚಿತ್ರಿಸಲ್ಪಟ್ಟ ಮತ್ತು ಆದಿತಿ ಎಲಾಸ್ಸೆರಿ ಅವರಿಂದ ವಿನ್ಯಾಸಗೊಳಿಸಲಾದ ಈ ಕೈಪಿಡಿಯು ಬಹಳ ಆಕರ್ಷಕವಾಗಿ ಮೂಡಿಬಂದಿದೆ. ಈ ಆಕರ್ಷಕ ರೇಖಾ ಚಿತ್ರಗಳು, ವಿಷಯದೊಂದಿಗೆ ತ್ವರಿತ ಸಂಪರ್ಕವನ್ನು ಸೃಷ್ಟಿಸುತ್ತವೆ ಮತ್ತು ಪ್ರಕೃತಿ ಶಿಕ್ಷಣಕ್ಕಾಗಿ ಕಲೆ ಆಧಾರಿತ ಕಲಿಕೆಯ ಪ್ರಾಮುಖ್ಯತೆಯನ್ನು ಕೇಂದ್ರೀಕರಿಸುತ್ತವೆ. ಈ ಕೈಪಿಡಿಯು 60 ಕ್ಕೂ ಹೆಚ್ಚು ಆಟಗಳು ಮತ್ತು ಸೃಜನಶೀಲ ಚಟುವಟಿಕೆಗಳನ್ನು ಒಳಗೊಂಡಿದ್ದು, ಶಿಕ್ಷಕರ ಬಳಕೆಗೆ ಅನುಸಾರವಾಗಿ ವಿಚಾರಗಳ ಸಂಪತ್ತನ್ನು ನೀಡುತ್ತದೆ.

ಈ ಕೈಪಿಡಿಯ ಹಿಂದಿನ ಸಂಪೂರ್ಣ ಆಶಯವನ್ನು ಡೇವಿಡ್ ಸೋಬೆಲ್ ಅವರ ಈ ಮಾತಿನಿಂದ ತಿಳಿಯಬಹುದು – “ಮಕ್ಕಳ ಅಭಿವೃದ್ಧಿ ಮತ್ತು ಸಬಲತೆಯನ್ನು ನಾವು ಬಯಸುವುದಾದರೆ, ಭೂಮಿಯನ್ನು ಉಳಿಸಿ ಎಂದು ಹೇಳುವ ಮೊದಲು, ಅವರು ಅದನ್ನು ಪ್ರೀತಿಸುವ ಅವಕಾಶವನ್ನು ಕಲ್ಪಿಸಬೇಕು.”

ವಯಸ್ಕರು ನೈಸರ್ಗಿಕ ಪ್ರಪಂಚದ ಜ್ಞಾನ ಅಥವಾ ತಿಳುವಳಿಕೆಯ ಅರಿವಿಲ್ಲವೆಂದು ಹಿಂದೇಟುಹಾಕದೆ, ಪಕ್ಷಿಗಳ ಆಕರ್ಷಕ ಜಗತ್ತನ್ನು ತಮ್ಮ ಮಕ್ಕಳೊಂದಿಗೆ ಸಂತೋಷದಿಂದ ಅನ್ವೇಷಿಸಿ ಪ್ರಶಂಸಿಸುವಲ್ಲಿ ಈ ಕೈಪಿಡಿಯು ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದು ಭಾವಿಸುತ್ತೇವೆ!

ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡುವ ಮುಖಾಂತರ ಡಿಜಿಟಲ್ ಫ್ಲಿಪ್ಬುಕ್ ಪಿಡಿಎಫ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿ.

ಲೇಖನ: ಅರ್ಲಿ ಬರ್ಡ್ ತಂಡ
          ಬೆಂಗಳೂರು
ಜಿಲ್ಲೆ

Spread the love

Leave a Reply

Your email address will not be published. Required fields are marked *

error: Content is protected.