ಸೈಲೆಂಟ್ ಕಿಲ್ಲರ್

ಸೈಲೆಂಟ್ ಕಿಲ್ಲರ್

    © ನಾಗೇಶ್ ಗೌಡ ಕೆ. ಜಿ.

ರಾತ್ರಿ 9 ಗಂಟೆಯ ಸಮಯ. ಇನ್ನೇನು ಎಲ್ಲರೂ ಊಟ ಮುಗಿಸಿ ಮಲಗಿಕೊಳ್ಳುವುದಕ್ಕೆ ಸಿದ್ದರಾಗುತ್ತಿದ್ದರು. ಪ್ರತಿನಿತ್ಯದಂತೆ ನಾನು 9 ಗಂಟೆಯ ನಂತರ ಊಟ ಮಾಡುವ ಸಲುವಾಗಿ ಕೈ ತೊಳೆದುಕೊಂಡು ಮನೆಯ ಪಡಸಾಲೆಗೆ ಹೊಕ್ಕು ಕೂತು ಊಟವನ್ನು ಮಾಡುತ್ತಿದ್ದೆನು. ಇನ್ನೇನು ಊಟ ಮುಗಿಸುವ ಸಮಯ. ನಮ್ಮ ಮನೆಯ ಕೆಂಚ (ನಾಯಿ) ಜೋರಾಗಿ ಬೊಗಳಲು ಪ್ರಾರಂಭಿಸಿದ. ನಾನು ಊಟಕ್ಕೆ ಕುಳಿತಿದ್ದರೂ ಅವನು ಇಷ್ಟು ಜೋರಾಗಿ ಬೊಗಳುವುದನ್ನು ಸಹಿಸಿಕೊಳ್ಳಲಾಗದಷ್ಟು ಶಬ್ದಮಾಡುತ್ತಿದ್ದ. ಊಟ ಮುಗಿಸಿದವನೆ ಹೊರ ನಡೆದು “ಅಚ, ಅಚ, ಅಲ್ಲಿ ಯಾರವರೇ ಅಂತ ಈ ರೀತಿ ಬೊಗಳುತ್ತಿದ್ದೀಯಾ. ಕಿವಿಗಳೆರಡು ಮರಗಟ್ಟಿ ಹೋಯ್ತು” ಎಂದು ಶಪಿಸುತ್ತಾ ಕೆಂಚನ ಕಡೆಗೆ ತೆರಳಿದೆನು. ಅದೇ ಸಮಯಕ್ಕೆ ನಮ್ಮ ಹರೀಶನು (ಅಳಿಯ) ಸಹ ಕೆಂಚನ ಅಬ್ಬರ ತಾಳಲಾರದೆ ಪರೀಕ್ಷೆಗೆ ಓದಿಕೊಳ್ಳುತ್ತಿದ್ದವನು ಪುಸ್ತಕ ಮಡಿಚಿಟ್ಟು ಹೊರ ಬಂದನು. ಇಬ್ಬರು ನಾಯಿಯನ್ನು ಅಬ್ಬರಿಸುತ್ತಾ ಮುಂದಾದೆವು. ಆದರೆ ನಮ್ಮ ಕೆಂಚ ಮಾತ್ರ ನಮ್ಮ ಅಬ್ಬರಕ್ಕೆ ಕಿವಿಗೊಡದೆ ತನ್ನ ಸಂಗೀತವನ್ನು ಮುಂದುವರಿಸಿದ್ದ.

© ವಿವೇಕ್ ಶರ್ಮ

ನಮ್ಮ ದೃಷ್ಟಿ ಕೆಂಚನ ಮುಂದಿನ ಎಂಟ್ಹತ್ತಡಿ ದೂರದಲ್ಲಿ ನೆಟ್ಟಿತು. ಯಾಕೆ ಕೆಂಚ ಈ ಪಾಟಿ ಬೊಗಳುತ್ತಿದ್ದಾನೆಂದು ಅರ್ಥವಾಗಿದ್ದು ಆಗ. ಕೆಂಚನ ಬೊಗಳಿಕೆಗೆ ಏನು ಪ್ರತಿಕ್ರಿಯೆ ನೀಡದೆ ಕಪ್ಪು ಮೈಬಣ್ಣದ ಮೇಲೆ ಮಧ್ಯೆ ಮಧ್ಯೆ ಪಟ್ಟೆ ಇರುವ ಹಾವೊಂದು, ಯಾರ ಹಂಗಿಲ್ಲದೆ ತನ್ನದೇ ದಾರಿಎಂಬಂತೆ ಗರ್ವದಿಂದ ತೆವಳಿಕೊಂಡು ಬರುತ್ತಿತ್ತು.  ನಾವು ಹಾವನ್ನು ನೋಡಿದ ಮೇಲೆ ಕೆಂಚನು ತನ್ನ ಕೆಲಸ ಮುಗಿಸಿದವನಂತೆ ನಿಧಾನವಾಗಿ ಬೊಗಳುತ್ತಾ ಸ್ತಬ್ದನಾದನು.  “ಹರೀಶ, ಇದು ಕಟ್ಟಾವಿನ ತರ ಇದೆ. ಇದರ ಮುಂದೆ ಹೋಗಬೇಡ. ಅದು ಹುಲ್ಲಸ್ಲೆ ಮೇಲೆ ಬರುತ್ತಾ ಇದೆ. ನಾವು ಈಗ ಅದನ್ನು ಗೇಟ್ ಕಡೆ ಬರದಂತೆ ಮಾಡಬೇಕು” ಎಂದು ನಾಲ್ಕು ಅಡಿ ದೂರದಲ್ಲಿದ್ದ ಗೇಟಿನ ಹತ್ತಿರ ನಿಂತು ಪಿಸು ಮಾತಿನಲ್ಲಿ ತಿಳಿಸಿದೆ. ಈ ಪಿಸು ಮಾತು ಹೇಳಿದ್ದು ಹಾವಿಗೆ ಕೇಳಿಸದಿರಲಿ ಎಂದಲ್ಲ. ನಮ್ಮಪ್ಪನ ಕಿವಿಗೆ ಬೀಳದಿರಲಿ ಎಂದು. ಈ ಹಾವು ಇರುವುದು ಅವರಿಗೆ ಗೊತ್ತಾದರೆ ಅದರ ಮರಣ ಖಚಿತ.

© ವಿವೇಕ್ ಶರ್ಮ

ಹಾವು ಮನೆಯ ಗೇಟ್ ಕಡೆಗೆ ಬರದಂತೆ ನಾವಿಬ್ಬರು ಅನೇಕ ತಂತ್ರಗಳನ್ನು ಮಾಡಲು ಪ್ರಾರಂಭಿಸಿದೆವು. ಆದರೆ ಈ ಹಾವು ವಿಷಕಾರಿ ಎಂದು ತಿಳಿದಿದ್ದರೂ ನಮಗೆ ಹಾವಿನ ಉಳಿವಿನ ಜೊತೆ ನಮ್ಮ ಅಳಿವು- ಉಳಿವಿನ ಪ್ರಶ್ನೆಯೂ ಕಾಡತೊಡಗಿತು. ನಮಗೆ ಪರಿವೇ ಇಲ್ಲದಂತಾಗಿ ನಮ್ಮ ಬಾಯಿಂದ ಕೆಲ ಶಬ್ದಗಳು ಬರತೊಡಗಿದವು.  “ಶು, ಶು ಈ ಕಡೆ ಬರಬೇಡ, ಬಂದ್ರೆ ತಿಥಿ” ಎನ್ನುತ್ತಾ ಕಾಲನ್ನು ನೆಲಕ್ಕೆ ಬಡಿಯುತ್ತಾ ಶಬ್ದ ಮಾಡುತ್ತಿದ್ದೆವು. ನಮ್ಮಿಬ್ಬರ ಈ ಸರ್ಕಸ್ ನಮ್ಮಮ್ಮನ ಕಣ್ಣಿಗೆ ಬೀಳದಂತೆ ನಡೆಸಬೇಕಾದ ಅನಿವಾರ್ಯತೆ ಒದಗಿತ್ತು. ಏಕೆಂದರೆ ಎರಡು ಘಟನೆಗಳಿಂದಾಗಿ ನಮ್ಮ ಅಮ್ಮನಿಗೆ ಹಾವಿನ ಬಗ್ಗೆ ಅತಿಯಾದ ಭಯವು ಉಂಟಾಗಿ ಘಾಸಿಗೊಂಡಿದ್ದರು.

© ವಿವೇಕ್ ಶರ್ಮ

ಒಮ್ಮೆ ನಮ್ಹೊಲದ ಬದುವಿನಲ್ಲಿ ಅಮ್ಮನಿಗೆ ಹಾವು ಕಚ್ಚಿತ್ತು. ದುರಾದೃಷ್ಟಕ್ಕೆ ನಾವ್ಯಾರು ಆ ದಿನ ಮನೆಯಲ್ಲಿರಲಿಲ್ಲ. ಆಗ ನಮ್ಮಮ್ಮ ಹತ್ತಿರದಲ್ಲಿದ್ದ ಮನೆಯವರ ಸಹಾಯ ಪಡೆದುಕೊಂಡು ಕೆಂಚಗಾನಹಳ್ಳಿಯ ನಾಟಿ ವೈದ್ಯರ ಹತ್ತಿರ ಹೋಗಿ ಔಷಧಿ ತಿಂದು ಬಂದಿದ್ದರು. ಕಚ್ಚಿದ್ದು ಯಾವ ಹಾವು ಅಂತಾನೂ ಗೊತ್ತಾಗಲಿಲ್ಲ. ಅದೃಷ್ಟಕ್ಕೆ ಯಾವುದೇ ತರಹದ ತೊಂದರೆ ಅಮ್ಮನಿಗೆ ಆಗಲಿಲ್ಲ. ಕಚ್ಚಿದ ಹಾವು ವಿಷರಹಿತವಿರಬಹುದು. ಹಾವುಗಳಲ್ಲಿ ವಿಷರಹಿತ ಅಥವಾ ವಿಷಪೂರಿತ ಯಾವುದೇ ಹಾವು ಕಚ್ಚಿದರೂ ನಾಟಿ ಔಷಧಕ್ಕಿಂತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕೆಂಬುದು ನನ್ನ ಸಲಹೆ.

    © ಮನೋಜ ದೊಡವಾಡ.

ಇನ್ನೊಂದು ಘಟನೆ. ನಾನು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಆಗ ನಾನು, ನನ್ನ ತಮ್ಮ, ಅಪ್ಪ-ಅಮ್ಮನೊಂದಿಗೆ ಚಿಕ್ಕದಾದ ಮನೆಯಲ್ಲಿ ವಾಸಿಸುತ್ತಿದ್ದೆವು. ಮನೆಯ ವ್ಯಾಪ್ತಿ ಚಿಕ್ಕದಾಗಿದ್ದು, ಕೊನೆಯಲ್ಲಿ ಅಡುಗೆಮನೆಯಿದ್ದು, ಅದಕ್ಕೆ ಅಂಟಿಕೊಂಡಂತೆ ತೆರೆದ ಬಾಗಿಲಿನ ಒಂದು ಕೊಠಡಿ, ಅದರ ಮುಂದೆ ಪಡಸಾಲೆ ಜೊತೆ ದನದ ಕೊಟ್ಟಿಗೆಯಿಂದ ಕೊನೆಗೊಂಡಿತು. ನಮ್ಮ ಮನೆಯ ಅಡುಗೆಮನೆ ಮತ್ತು ಪಡಸಾಲೆಯ ಮಧ್ಯೆ ಇದ್ದ ಸರ್ವೋಪಯೋಗಿ ಕೊಠಡಿ ನಾವು ಓದಿಕೊಳ್ಳುತ್ತಿದ್ದ ಸ್ಥಳ. ಜೊತೆಗೆ ಈ ಕೊಠಡಿಯಲ್ಲಿ ನಮ್ಮ ಪುಸ್ತಕಗಳನ್ನು ಒಂದು ಗೋಡೆಯೊಳಗಿನ ಒಂದು ಗೂಡಿನಲ್ಲಿ ಪೇರಿಸಿಟ್ಟುಕೊಳ್ಳಲಾಗಿತ್ತು. ಅದೇ ಕೊಠಡಿಯಲ್ಲಿ ದೇವರ ಫೋಟೋಗಳು, ದವಸ-ಧಾನ್ಯ ತುಂಬಿಟ್ಟುಕೊಳ್ಳಲು ಮಣ್ಣಿನಿಂದ ಮಾಡಿದ ವಾಡೇವು, ಬುಡ್ಡು ಮತ್ತು ಕರಿಬಾನೆಗಳನ್ನು ಜೋಡಿಸಲಾಗಿತ್ತು. ಒಂದು ದಿನ ನಾವೆಲ್ಲರೂ ರಾತ್ರಿಯ ಊಟ ಮುಗಿಸಿದ್ದೆವು. ಪ್ರತಿದಿನ ನಾನು ರಾತ್ರಿ 11 ಗಂಟೆಗಳವರೆಗೆ ಓದಿಕೊಳ್ಳುತ್ತಿದ್ದೆ. ಆ ರಾತ್ರಿ ಓದಲು ಆಸಕ್ತಿ ಇಲ್ಲದೆ ಪಠ್ಯಪುಸ್ತಕಗಳನ್ನು ಮತ್ತು ನೋಟ್ಸ್ ಗಳನ್ನೆಲ್ಲ ಎತ್ತಿಡಲು ಪುಸ್ತಕದ ಗೂಡಿನ ಕಡೆಗೆ ಹೋಗುತ್ತಿದ್ದೆನು. ಪುಸ್ತಕಗಳನ್ನೆಲ್ಲಾ ಗೂಡಿಗೆ ಸೇರಿಸಿದೆ. ಜಂತೆಯ ಕಡೆ ಏನೋ ಆಕರ್ಷಿಸಿದಂತೆ 60 ವೋಲ್ಟ್ ಬಲ್ಪಿನ ಬೆಳಕಿನಲ್ಲಿ ಗೋಚರಿಸಿತು. ಜಂತೆ ಮನೆಯ ಮಾಳಿಗೆಗೆ ಅಡ್ಡೆಗಳನ್ನು ಹಾಕಿ ಅದಕ್ಕೆ ತೆಂಗಿನ ಮರದ ಪಟ್ಟಿಗಳನ್ನಿಟ್ಟು, ಪಟ್ಟಿಗಳ ಮೇಲೆ ಇಟ್ಟಿಗೆಯನ್ನು ಜೋಡಿಸಿ ಅದರ ಮೇಲೆ ಮಣ್ಣನ್ನು ಹಾಕಲಾಗಿತ್ತು. ಪ್ರತೀ ವರ್ಷ ಮಳೆಗಾಲದಲ್ಲಿ ಮಾಳಿಗೆ ಸೋರುತ್ತಿದ್ದರಿಂದ ನಾಲ್ಕೈದು ಕಿಲೋ ಮೀಟರ್ ದೂರಲ್ಲಿದ್ದ ಕಟ್ಟೆಯೊಂದರ ಕರಲು ಮಣ್ಣನ್ನು ಎತ್ತಿನ ಗಾಡಿಯಲ್ಲಿ ತಂದು ಹಾಕುತ್ತಿದ್ದರು. ನನ್ನ ದೃಷ್ಟಿ ಈಗ ನಮ್ಮನೆಯ ಜಂತೆಯ ಕಡೆ ಸೆಳೆಯಿತು. ಜಂತೆಯ ಇಟ್ಟಿಗೆಗಳ ಮಧ್ಯೆ ಕಪ್ಪನೆಯ ಬಾಲವೊಂದು ನೇತಾಡುತ್ತಿತ್ತು. ಯಾವುದೋ ಇಲಿಯ ಬಾಲವಿರಬಹುದು ಎಂದು ಸುಮ್ಮನಾದೆ. ಕೆಲ ನಿಮಿಷಗಳ ನಂತರ ಬಾಲ ಚಲಿಸಿದಂತಾಗಿ ಕುತೂಹಲದಿಂದ ಇನ್ನೂ ಹತ್ತಿರ ಹೋಗಿ ತಲೆ ಮೇಲೆತ್ತಿ ಜಂತೆಯನ್ನು ನೋಡಿದೆ. ಉದ್ದನೆಯ ಹಾವಿನ ಚಹರೆಗಳು ಕಾಣತೊಡಗಿದವು. ಮೈಬಣ್ಣ ಕಪ್ಪು ಬಣ್ಣದಿಂದ ಕೂಡಿದ್ದರೂ ಮಧ್ಯೆ ಮಧ್ಯೆ ಬಿಳಿ ಪಟ್ಟೆಗಳಿದ್ದ ಹಾವು ನಾಲಿಗೆಯನ್ನು ಹೊರಹಾಕಿ ಜಂತೆಯಲ್ಲಿ ಅಡಗಿದ್ದ ಇಲಿಗಳಿಗಾಗಿ ಹುಡುಕಾಟ ನಡೆಸುತ್ತಿತ್ತು. ನಮ್ಮಪ್ಪನಿಗೆ ಹೇಳುವಷ್ಟರಲ್ಲಿ ಹಾವು ಅದರ ಜಾಗವನ್ನು ಬದಲಿಸಿ ಇಟ್ಟಿಗೆಯ ಸಂದಿಯಲ್ಲಿ ತೂರಿ ಇನ್ನೊಂದು ಅಡ್ಡೆಯ ಪಕ್ಕದಲ್ಲಿದ್ದ ಇಟ್ಟಿಗೆ ಸಂದಿಯನ್ನು ಸೇರಿತು. ಎಲ್ಲರಿಗೂ ನಿದ್ದೆಯ ಬದಲಿಗೆ ಭಯ ಪ್ರಾರಂಭವಾಯಿತು. ಹಾವನ್ನು ಹೊಡೆದು ಹಾಕದಿದ್ದರೆ ನಾವು ಮಲಗಿದ್ದಾಗ ಬಂದು ಕಚ್ಚಿದರೆ ಏನು ಮಾಡೋದು!? ಎಂಬ ಚಡಪಡಿಕೆ ನಮ್ಮಪ್ಪನಿಗೆ ಶುರುವಾಯಿತು. “ಹಾವು ಜಂತೆಯಲ್ಲಿ ಇರುವುದರಿಂದ ಸಾಯಿಸುವುದು ಸುಲಭವಲ್ಲ. ಸುಮ್ಮನೆ ಗಾಬರಿ ಮಾಡಿದರೆ ತಪ್ಪಿಸಿಕೊಂಡು ಬಿಟ್ಟರೆ ಕಷ್ಟ” ಎಂದು ಹೇಳಿದರು.

© ಡಾ. ಪ್ರಭಾಕರ್ ತೀರ್ಥಹಳ್ಳಿ

ಕೆಲ ನಿಮಿಷಗಳ ನಂತರ ಹಾವಿನ ಚಲನೆ ಮುಂದುವರೆದು ಇಟ್ಟಿಗೆಯ ಸಂಧಿಯಲ್ಲಿ ಸ್ಥಿರವಾಗಿಬಿಟ್ಟಿತು. ನಮ್ಮಪ್ಪ ನಮ್ಮ ಕಡೆ ನೋಡುತ್ತಾ “ಕರೆಹನುಮಣ್ಣರ ಹನುಮಂತರಾಯಿ ಮನೆ ಹತ್ರ ಹೋಗಿ ಭರ್ಜಿಯನ್ನು ತೆಗೆದುಕೊಂಡು, ಅವನನ್ನೂ ಕರ್ಕೊಂಡು ಬೇಗ ಬಾ” ಎಂದು ಹೇಳಿದರು. ಅದರಂತೆ ಕಡುಗತ್ತಲಲ್ಲಿ ಊರಿನ ಕೊನೆಯಲ್ಲಿದ್ದ ಅವರ ಮನೆಗೆ ಹೋಗಿ ಭರ್ಜಿ ಸಮೇತ ಬಹುಬೇಗ ಕರೆದುಕೊಂಡು ಬಂದೆವು. ತಂದ ಭರ್ಜಿಯಿಂದ ತಲೆಗೆ ಹಾಕಿದರೂ ಸಹ ಅದರಿಂದ ತಪ್ಪಿಸಿಕೊಳ್ಳಲು ಜಂತೆಯಲ್ಲೇ ಹಿಂದೆ ಮುಂದೆ ಸರಿಯುತ್ತಿತ್ತು. ಕೊನೆಗೆ ಅರ್ಧ ಇಟ್ಟಿಗೆಯನ್ನು ತೆಗೆದುಹಾಕಿ ಅದನ್ನು ಸಾಯಿಸಲು ಮುಂದಾದರು. ಇವರು ಏನೇ ಮಾಡಿದರೂ ತಲೆಗೆ ಸ್ವಲ್ಪ ಗಾಯವಾಗಿದ್ದು ಬಿಟ್ಟರೆ ಹಾವಿನ ದೇಹಕ್ಕೆ ಭರ್ಜಿ ತಾಗುತ್ತಿರಲಿಲ್ಲ. ಅರ್ಧ ಗಂಟೆಯ ಪ್ರಯತ್ನಗಳೆಲ್ಲಾ ವಿಫಲವಾಗಿ ಹೋಯಿತು. ಆದರೆ ಹಾವು ಮಾತ್ರ ಜಂತೆಯ ಕೊನೆಯಲ್ಲಿದ್ದ ಬಿಲದೊಳಗೆ ಸೇರಿಕೊಂಡಿತು. ಈಗ ಆ ಹಾವನ್ನು ಹಿಡಿಯಬೇಕೆಂದರೆ ಮಾಳಿಗೆಯನ್ನು ಕೀಳಬೇಕಾದ ಪರಿಸ್ಥಿತಿ ಉಂಟಾಯಿತು. ಅಂತಹ ದುಸ್ಸಾಹಸಕ್ಕೆ ಕೈ ಹಾಕುವುದು ಬೇಡವೆಂದು ನಮ್ಮಪ್ಪ ತೀರ್ಮಾನಿಸಿದರು. ಆದರೆ ಈ ರಾತ್ರಿ ನಿದ್ದೆ ಬರುವುದಾದರೂ ಉಂಟೇ!?. ನಮ್ಮನ್ನು ಮಲಗಿಸಿ ಅರ್ಧ ಹೊತ್ತಿನ ತನಕ ನಮ್ಮಮ್ಮ ಎದ್ದು ಕುಳಿತುಕೊಂಡೇ ಬೆಳಗಿನ ಜಾವದವರೆಗೆ ತೂಕಡಿಸಿಕೊಂಡು ನಿದ್ದೆ ಮಾಡಿ ಬೆಳಕರಿಸಿದರು. ಒಂದು ವಾರದ ಕಾಲ ಮನೆಯಲ್ಲಿ ಭಯದ ವಾತಾವರಣವಿದ್ದರೂ ಹಾವು ತನ್ನ ಜೀವ ಉಳಿಸಿಕೊಂಡರೆ ಸಾಕೆಂದು ಅಲ್ಲಿಂದ ಜಾಗ ಖಾಲಿ ಮಾಡಿರಬೇಕೆಂದು ನನಗನಿಸಿತು. ಈ ಜಂತೆಯಲ್ಲಿದ್ದ ಹಾವೂ ಸಹ ಕಟ್ಹಾವಿನ ರೀತಿ ಇದ್ದರೂ ಹಾವಿನ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲದ ಕಾರಣ ನಿಖರವಾಗಿ ಕಟ್ಹಾವೇ ಎಂದು ಹೇಳಲು ಸಾಧ್ಯವಾಗಲಿಲ್ಲ. ಅದಿರಲಿ ಬಿಡಿ ಇದು ಮುಗಿದು ಹೋದ ಕಥೆ.

    © ವಿವೇಕ್ ಶರ್ಮ

ಈಗ ನಮ್ಮ ಅಂಗಳದಲ್ಲಿರುವ ಕಟ್ಹಾವನ್ನು ಬಚಾವ್ ಮಾಡುವ ತುರ್ತಿದೆ. ಹರೀಶ್ ಮತ್ತು ನಾನು ಮತ್ತದೇ ಗೇಟ್ ಕಡೆ ಬರುತ್ತಿದ್ದ ಹಾವಿನ ದಾರಿ ತಪ್ಪಿಸಲು ಸರ್ಕಸ್ ಮುಂದುವರಿಸುತ್ತಿದ್ದೆವು. ನಮ್ಮಿಬ್ಬರ ಕಷ್ಟವನ್ನು ಅದು ಅರ್ಥ ಮಾಡಿಕೊಂಡಿರಬಹುದೆನೋ! ತಕ್ಷಣವೇ ಅದರ ದಿಕ್ಕನ್ನು ಬದಲಾಯಿಸಿ ಗೇಟ್ ಕಡೆ ಬರುವ ಬದಲು ಸಿಮೆಂಟ್ ಕಣದಿಂದ ಇಳಿದು ಹುಲ್ಲಿನ ಮೇಲೆ ಹೋಗಲು ಪ್ರಾರಂಭಿಸಿತು. ನಾವು ಅಂಗಳದ ಸಿಮೆಂಟ್ ಮೇಲೆ ಹಾವು ಬರದಂತೆ ಮಾಡಲು ಚಡಪಡಿಸುತ್ತಿದ್ದೆವು. ಕೆಲವು ನಿಮಿಷಗಳ ನಂತರ ನಮ್ಮ ಅಮ್ಮ ನಮ್ಮಿಬ್ಬರ ಕಡೆ ಧಾವಿಸಿ ನಮ್ಮ ಹಾವಭಾವ ಗಮನಿಸಿದ್ದರಿಂದ ನಾವು ಈ ಕಟ್ಹಾವು ಇರುವ ಬಗ್ಗೆ ಹೇಳಲೇಬೇಕಾಯಿತು. ನೀರಿನ ತೊಟ್ಟಿಯ ಹತ್ತಿರ ತನ್ನ ಪಾಡಿಗೆ ತಾನು ಪಯಣ ಮುಂದುವರಿಸುತ್ತಿತ್ತು. ನಮ್ಮಮ್ಮನೂ ಸಹ ಕುತೂಹಲದಿಂದ “ಎಂತಹ ಹಾವದು? ನೀವು ಹತ್ತಿರ ಹೋಗಬೇಡಿ. ನಿಮ್ಮಪ್ಪನನ್ನು ಎಬ್ಬಿಸುತ್ತೀನಿ ಇರು” ಎಂದು ಹೇಳಿ ದನದ ಕೊಟ್ಟಿಗೆಯ ಹತ್ತಿರ ಮಲಗಿದ್ದ ನಮ್ಮಪ್ಪನನ್ನು ಎಬ್ಬಿಸಲು ಮುಂದಾದರು. ಕೆಲವೇ ಸೆಕೆಂಡುಗಳಲ್ಲಿ ನಾವು ಯಾಮಾರಿದರೂ ಹಾವನ್ನು ಸಾಯಿಸಿ ಬಿಡುತ್ತಾರೆಂದು ನಮ್ಮ ಮೆದುಳು ಶರವೇಗದಲ್ಲಿ ಕಾರ್ಯನಿರತವಾಯಿತು. ಅಪ್ಪನನ್ನು ಎಬ್ಬಿಸಲು ಹೋಗುತ್ತಿದ್ದ ಅಮ್ಮನನ್ನು ತಡೆದು “ಹೇಳಬೇಡಮ್ಮ, ಅದು ಈ ಕಡೆ ಬರಲ್ಲ. ಅದರ ಪಾಡಿಗೆ ಅದು ಹೋಗುತ್ತದೆ. ಈ ಕಡೆ ಬರದಂತೆ ನಾವು ನೋಡಿಕೊಳ್ಳುತ್ತಿರುತ್ತೇವೆ. ಪಾಪ ಅದರ ಪಾಡಿಗೆ ಅದನ್ನು ಬಿಟ್ಟುಬಿಡು” ಎಂದು ಹೇಳಿದೆವು. ಕೊನೆಗೆ ನಮ್ಮಮ್ಮ ನಮ್ಮ ಮನವಿಯನ್ನು ಒಲ್ಲದ ಮನಸ್ಸಿನಿಂದ ಸ್ವೀಕರಿಸಿ ಕಟ್ಟು ಹಾವಿನ ದೇಹ ಸೌಂದರ್ಯ ವೀಕ್ಷಿಸಲು ನಮ್ಮೊಂದಿಗೆ ಜೊತೆಯಾದರು.

    © ವಿವೇಕ್ ಶರ್ಮ

ನಮ್ಮ ಮೂವರ ಚಿತ್ತ ಉರಗನತ್ತ ನೆಟ್ಟು ಸುಮ್ಮನೆ ಅದರ ಪಯಣವನ್ನು ನೋಡುತ್ತಾ ನಿಂತೆವು. ಕೊನೆಗೂ ಹಾವು ನಮ್ಮ ಹೊರಗಿನ ಕೊಟ್ಟಿಗೆಯ ಗೊಂತನ್ನು ದಾಟಿ ಮನೆಯ ಪಕ್ಕದಲ್ಲಿದ್ದ ಎತ್ತಿನ ಗಾಡಿಯ ಸಮೀಪವಾಗಿ ಮನೆ ಹಿಂದಿನ ಕರಿಬೇವಿನ ಗಿಡಕ್ಕೆ ಹಾಕಿದ್ದ ಹೊದಿಕೆಯಲ್ಲಿ ಲೀನವಾಯಿತು. ಮೂವರು ನಿಟ್ಟುಸಿರು ಬಿಡುತ್ತಾ, ಬೆಳಿಗ್ಗೆ ಆ ಕಡೆ ಹೋಗುವುದು ಬೇಡ ಎಂಬ ಷರತ್ತಿನೊಂದಿಗೆ ಹಾವಿನ ಬಗ್ಗೆ ಚರ್ಚೆ ಮುಂದುವರೆಯಿತು‌. ಕಪ್ಪಗಿನ ಮೈಬಣ್ಣ ಹೊಂದಿರುವ ದೇಹವಿದ್ದರೂ ಮಧ್ಯೆ ಮಧ್ಯೆ ಬಿಳಿ ಪಟ್ಟಿಗಳು ಇದ್ದ ಕಾರಣ ನಮ್ಮಮ್ಮ ಇದು ಕಟ್ಟಾವು ಎಂದು ಹೇಳಿ ಮಲಗಲು ಹೊರಟು ಹೋದರು. ನಮ್ಮಿಬ್ಬರಿಗೆ ಈ ಹಾವಿನ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ಮೊಳಕೆಯೊಡೆಯಿತು. ಹಾವುಗಳ ಬಗ್ಗೆ ಅನೇಕ ಪುಸ್ತಕಗಳಲ್ಲಿ ಓದಿದಂತೆ, ಕಾರ್ಯಗಾರಗಳಲ್ಲಿ ಕೇಳಿಸಿಕೊಂಡಂತೆ ನಾವು ನೋಡಿದ ಹಾವು ಸೈಲೆಂಟ್ ಕಿಲ್ಲರ್ ಎಂದು ಸಹ ಹೇಳುತ್ತಿದ್ದರು. ಏಕೆಂದರೆ ಈ ನಾಮಧೇಯದಿಂದ ಕರೆಯಲು ಕಾರಣವೇನು ಎಂದು ತಿಳಿಯಲು ಮುಂದಾದೆನು. ಗುರುರಾಜ್ ಸನಿಲ್ ರವರು ಬರೆದಿದ್ದ ಹಾವು ನಾವುಪುಸ್ತಕವು ನನ್ನಲ್ಲಿತ್ತು. ನಾನು ನೋಡಿದ ಕಟ್ಟಾವಿನ ಬಗ್ಗೆ ಆ ಪುಸ್ತಕದಲ್ಲಿದ್ದ ಮಾಹಿತಿಗಳನ್ನು ಓದಲು ಪ್ರಾರಂಭಿಸಿದೆನು.

    © ವಿವೇಕ್ ಶರ್ಮ

ಕಟ್ಹಾವು ಮಧ್ಯಮ ಗಾತ್ರದ ಶರೀರ, ಹೊಳೆಯುವ ನಯವಾದ ಶರೀರದ ಪೊರೆಯ ಹುರುಪೆಗಳು, ದುಂಡಗಿನ ತಲೆಯನ್ನು ಹೊಂದಿರುತ್ತವೆ. ಈ ಹಾವುಗಳ ಮೇಲ್ದುಟಿಯ ಅಂಚು ಮತ್ತು ಕೆಳತುಟಿಯು ಬಿಳುಪಾಗಿರುತ್ತದೆ. ಸಣ್ಣ ಕಣ್ಣುಗಳು, ವೃತ್ತಾಕಾರದ ಪಾಪೆಯನ್ನು ಹೊಂದಿವೆ. ಶರೀರ ಬಣ್ಣವು ನೀಲಿ ಮಿಶ್ರಿತ ಕಪ್ಪು ಅಥವಾ ಮಂದಗಪ್ಪು ಬಣ್ಣದಿಂದ ಕೂಡಿದೆ. ಪೊರೆಯ ಹುರುಪೆಗಳು ಷಡ್ಭಜಾಕೃತಿಯಲ್ಲಿವೆ. ಉದರ ಫಲಕಗಳು ಬಿಳುಪಾಗಿದ್ದು ಅಗಲವಾಗಿರುತ್ತವೆ. ನೀಲಿ ಮಿಶ್ರಿತ ಕಪ್ಪು ಬಣ್ಣದ ಶರೀರದ ಮೇಲೆ ತೆಳು ಬಿಳುಪಿನ ಹಲವಾರು ಜೋಡಿ ಅಡ್ಡ ಕಟ್ಟುಗಳಿದ್ದು, ಅವು ಹಾವಿನ ತಲೆಯಿಂದ ಆರು-ಎಂಟು ಇಂಚುಗಳ ನಂತರ ಆರಂಭವಾಗಿ ಬಾಲದ ಕೊನೆಯವರೆಗೂ ಇರುತ್ತವೆ. ಈ ಕಟ್ಟುಗಳು ಸುಮಾರು 38 ರಿಂದ 60ರ ವರೆಗಿರುತ್ತವೆ‌. ಮರಿ ಹಾವುಗಳಲ್ಲಿ ಈ ಕಟ್ಟುಗಳು ಹೆಚ್ಚಾಗಿ ತಲೆಯಿಂದಲೇ ಆರಂಭವಾಗಿ ಬಾಲದ ತುದಿಯವರೆಗಿದ್ದು ಅವು ಬೆಳೆದಂತೆ ತಲೆ ಮತ್ತು ಕುತ್ತಿಗೆಯ ಕಟ್ಟುಗಳು ಮಾಸುತ್ತವೆ. ಇವುಗಳ ನಾಲಿಗೆಯು ಗುಲಾಬಿ ಮಿಶ್ರಿತ ಕೆಂಪು ಬಣ್ಣದಿಂದ ಕೂಡಿದೆ. ಗರಿಷ್ಠ 150 ಸೆಂ. ಮೀ ಉದ್ದ ಬೆಳೆಯಬಲ್ಲ ಈ ಹಾವುಗಳಲ್ಲಿ ಗಂಡು ಹಾವುಗಳು ದೊಡ್ಡದಿರುತ್ತವೆ.  ಮೊಟ್ಟೆಯಿಂದ ಹೊರಗೆ ಬಂದ ಮರಿಗಳು 25 ರಿಂದ 30 ಸೆಂಟಿ ಮೀಟರ್ ಉದ್ದ ಇರುತ್ತವೆ.

    © ರಾಘವೇಂದ್ರ

ಸಾಮಾನ್ಯವಾಗಿ ಜನವಸತಿಗಳ ಸುತ್ತಮುತ್ತ ಕಂಡುಬರುವ ಈ ಹಾವುಗಳು ಹಳೆಯ ಕಲ್ಲಿನ ರಾಶಿ, ಸುಂಡಿಲಿಗಳ ಬಿಲ, ಹುತ್ತ, ಕೊಳೆತ ಮರದ ಪೊಟರೆ, ಹೊಲಗದ್ದೆಗಳ ಇಲಿಯ ಬಿಲಗಳಲ್ಲಿ ವಾಸಿಸುತ್ತವೆ. ಹೆಚ್ಚು ನೀರಿನ ಆಸರೆ ಇರುವಲ್ಲಿ ಕಂಡುಬರುತ್ತವೆ. ರಾತ್ರಿ ಸಂಚಾರಿಗಳಾದ ಇವು ಹೆಚ್ಚಾಗಿ ಏಕಾಂಗಿಯಾಗಿ ವಾಸಿಸುತ್ತವೆ; ಜೋಡಿಯಾಗಿ ಕಾಣುವುದು ಸಂಭೋಗಕಾಲದಲ್ಲಿ ಮಾತ್ರ. ಬೆದರಿದಾಗ ತಲೆಯನ್ನು ದೇಹದ ಕೆಳಗೆ ಮರೆಮಾಡಿಕೊಂಡು ರಕ್ಷಣೆಯ ಭಂಗಿಯನ್ನು ತೋರುತ್ತದೆ.

ಈ ಕಟ್ಟು ಹಾವು ನಮ್ಮೆಲ್ಲರ ಸುತ್ತಮುತ್ತಲಿನ ಪರಿಸರದಲ್ಲಿ ಅಧಿಕ ಸಂಖ್ಯೆಯಲ್ಲಿದ್ದರೂ ಅವು ಆದಷ್ಟು ಗುಪ್ತವಾಗಿ ಬದುಕುವ ಕಾರಣ ಅವು ನಮಗೆ ಅಪರೂಪಕ್ಕೆ ಕಂಡು ಬರುತ್ತವೆ. ಇವುಗಳಲ್ಲಿ ಕಂಡುಬರುವ ಹೋರಾಟಗಳು ಸಾಮಾನ್ಯವಾಗಿ ಗಂಡು ಹಾವುಗಳ ಗಡಿಹೋರಾಟ (male combat) ಅಥವಾ ಮಿಲನಪೂರ್ವ ಕದನ (courtship interactions) ಆಗಿರಬಹುದು. ಈ ಹಾವುಗಳನ್ನು ಮಾನವರು ರಕ್ಷಣೆ ಮಾಡಲು ಹಿಡಿದಾಗ ಅವು ತಮ್ಮ ರಕ್ಷಣೆಯ ತಂತ್ರವಾಗಿ ಕೆಲವೊಮ್ಮೆ ಗುದದ್ವಾರದೊಳಗಿರುವ ವಾಸನಾಗ್ರಂಥಿಯಿಂದ (cloacal scent gland) ಒಂದು ಬಗೆಯ ದುರ್ವಾಸನೆಯಿಂದ ಕೂಡಿದ ರಾಸಾಯನಿಕವನ್ನು ಸ್ರವಿಸುತ್ತವೆ.

© ವಿವೇಕ್ ಶರ್ಮ

ಇವುಗಳು ತಮ್ಮ ನೈಸರ್ಗಿಕ ಪರಿಸರದಲ್ಲಿ ಸಾಮಾನ್ಯವಾಗಿ 10–17 ವರ್ಷಗಳವರೆಗೆ ಬದುಕಬಲ್ಲವು (ಬಂಧನದಲ್ಲಿ ಅಂದಾಜು 15–20 ವರ್ಷದವರೆಗೆ ಬದುಕುತ್ತವೆ). ಇವು ಮುಖ್ಯವಾಗಿ ಇತರ ಪ್ರಭೇದದ ವಿಷಪೂರಿತ ಮತ್ತು ವಿಷರಹಿತ ಹಾವುಗಳನ್ನೂ (ophiophagy) ತಿನ್ನುತ್ತವೆ. ಜೊತೆಗೆ ಇಲಿ, ಹಲ್ಲಿಗಳನ್ನು ಸಹ ತಿನ್ನುತ್ತವೆ. ಕೆಲವೊಮ್ಮೆ ಸ್ವಜಾತಿ ಭಕ್ಷಣೆ (cannibalism) ಕೂಡ ವರದಿಯಾಗಿದೆ, ಆದರೆ ಅದು ಅತ್ಯಂತ ಅಪರೂಪ.

ಈ ಹಾವುಗಳ ಸಂತಾನೋತ್ಪತ್ತಿ ಪ್ರಕ್ರಿಯೆಯು ಸಾಮಾನ್ಯವಾಗಿ ಡಿಸೆಂಬರ್–ಏಪ್ರಿಲ್ ತಿಂಗಳ ನಡುವೆ ನಡೆಯುತ್ತದೆ. ಜನವರಿ–ಫೆಬ್ರವರಿ ಸಮಯದಲ್ಲಿ ಸಂಭೋಗ ಕಂಡುಬರುತ್ತದೆ. ಹೆಣ್ಣು ಹಾವುಗಳು 6–15 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳಿಗೆ ಕಾವು ಕೊಡುವ ಅವಧಿ 60–70 ದಿನಗಳವರೆಗೆ ಇರುವುದರಿಂದ, ಮೇ–ಜೂನ್ ತಿಂಗಳಲ್ಲಿ ಮರಿಗಳು ಹೊರ ಬರುತ್ತವೆ. ಹುಟ್ಟಿದ ಮರಿಗಳು ಸರಾಸರಿ 25–30 ಸೆಂ. ಮೀ ಉದ್ದವಿದ್ದು, ಮೊದಲ ಎರಡು ವರ್ಷಗಳಲ್ಲಿ ತಮ್ಮ ಉದ್ದವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳಬಲ್ಲವು.

    © ರಾಘವೇಂದ್ರ

ಭಾರತದ ವಿಷಯುಕ್ತ ಹಾವುಗಳಲ್ಲಿ ಕಟ್ಟು ಹಾವು ಸಹ ಒಂದು. ಇದನ್ನು ಭಾರತದ ‘ಬಿಗ್ 4’ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ‘ಬಿಗ್ 4’ ನಲ್ಲಿ ಇರುವ ಹಾವುಗಳಾದ ನಾಗರಹಾವು, ಕಟ್ಟು ಹಾವು, ಕೊಳಕ ಮಂಡಲ, ಗರಗಸ ಮಂಡಲದಿಂದಲೇ ಭಾರತದಲ್ಲಿ ಹೆಚ್ಚು ಸಾವು ಸಂಭವಿಸುತ್ತಿದೆ. ಇಂಗ್ಲಿಷ್ ನಲ್ಲಿ ಇದನ್ನು ಕಾಮನ್ ಕ್ರೈಟ್ (Common Krait) ಎಂಬ ಹೆಸರಿನಿಂದ ಕರೆದರೆ, ವೈಜ್ಞಾನಿಕವಾಗಿ ಬಂಗಾರಸ್ ಕೆರುಲಿಯಸ್ (Bungarus Caeruleus) ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಕಡಂಬಳ ಹಾವು ಎಂಬ ಹೆಸರೂ ಸಹ ಈ ಹಾವಿಗೆ ಇದೆ. ಆಡು ಭಾಷೆಯಲ್ಲಿ ಇದರ ದೇಹ ವಿನ್ಯಾಸದ ಆಧಾರದ ಮೇಲೆ ಕಟ್ಟು ಹಾವು ಎಂದು ಕರೆಯುತ್ತಾರೆ. ಈ ಹಾವು ಕಚ್ಚಿದಾಗ ಕೆಲವು ಬಾರಿ ನಮ್ಮ ಅರಿವಿಗೆ ಬರುವುದೇ ಇಲ್ಲ ಮತ್ತು ಸೊಳ್ಳೆ ಕಚ್ಚಿದಂತಾಗುತ್ತದೆ. ಹಾಗಾಗಿಯೇ ಇದನ್ನು ನಾನು ‘ಸೈಲೆಂಟ್ ಕಿಲ್ಲರ್’ ಎಂದು ಸಹ ಸಂಬೋಧಿಸುವುದು. ಕಡಂಬಳದ ಹಾವಿನ ವಿಷವು ನರಮಂಡಲದ ಮೇಲೆ ಪ್ರಭಾವ ಬೀರುವ (Neurotoxic) ಗುಣವನ್ನು ಹೊಂದಿದೆ. ಈ ಹಾವಿನ ಕಡಿತದಿಂದ ಶರೀರದಲ್ಲಿ ಪಾರ್ಶ್ವವಾಯುವಿನ ಲಕ್ಷಣಗಳು ಕಂಡುಬಂದು ಉಸಿರಾಟ ಸ್ಥಗಿತಗೊಂಡು ಸಾವು ಸಂಭವಿಸಬಹುದು. ಆದ್ದರಿಂದ ಇದರ ಕಡಿತಕ್ಕೊಳಗಾದಾಗ ಆದಷ್ಟು ಬೇಗ ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅಗತ್ಯವಿದೆ.

© ಮನೋಜ ದೊಡವಾಡ.

ಸುಮಾರು 310 ಮಿಲಿಯನ್ ವರ್ಷಗಳ ಹಿಂದೆ ಸರಿಸೃಪಗಳು ಉಗಮಗೊಂಡವು. ಹಾವುಗಳು ಹಲ್ಲಿಗಳಂತಹ ಜೀವಿಗಳಿಂದ ವಿಕಾಸಗೊಂಡವು. ಪ್ರಪಂಚದಲ್ಲಿ ಪ್ರಸ್ತುತ ಸುಮಾರು 3,900-4000 ಪ್ರಭೇದದ ಹಾವುಗಳು ದಾಖಲಾಗಿವೆ. ಭಾರತದಲ್ಲಿ ಸುಮಾರು 300 ಪ್ರಭೇದದ ಹಾವುಗಳು ಪತ್ತೆಯಾಗಿದ್ದು, ಅವುಗಳಲ್ಲಿ ಸುಮಾರು 60 ಪ್ರಭೇದಗಳು ವಿಷಕಾರಿ. ಕರ್ನಾಟಕದಲ್ಲಿ 12–15 ವಿಷಕಾರಿ ಪ್ರಭೇದಗಳು ದೊರಕುತ್ತವೆ.

ಈ 12-15 ಪ್ರಭೇದದ ವಿಷಕಾರಿ ಹಾವುಗಳಲ್ಲಿ ನಾಲ್ಕು ಪ್ರಭೇದಗಳು — ಕಡಂಬಳ ಹಾವು (Common Krait, Bungarus caeruleus), ನಾಗರಹಾವು (Indian Cobra, Naja naja), ಕೊಳಕು ಮಂಡಲ (Russell’s viper, Daboia russelii), ಮತ್ತು ಗರಗಸ ಮಂಡಲ (Saw scaled viper, Echis carinatus) — ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸಮೀಪವಿರುವ ವಾಸಸ್ಥಳಗಳಲ್ಲಿ ಸಾಮಾನ್ಯವಾಗಿ ವಾಸಿಸುತ್ತವೆ. ಹಾವುಗಳು ಜೀವವೈವಿಧ್ಯತೆಯ ಪ್ರಮುಖ ಅಂಗವಾಗಿದ್ದು, ಆಹಾರ ಸರಪಳಿಯನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾವುಗಳು ಇಲಿಗಳ ನಿಯಂತ್ರಣ ಮಾಡುವುದರಲ್ಲಿ ಮುಂಚೂಣಿಯಲ್ಲಿರುತ್ತವೆ. ಹಾವುಗಳ ಇರುವಿಕೆಯಿಂದ ರೈತರ ಹೊಲಮನೆಗಳಲ್ಲಿ ಇಲಿಗಳ ಪಾಲಾಗುವ ಆಹಾರ ಪದಾರ್ಥಗಳು ವ್ಯರ್ಥವಾಗುವುದು ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಹಾಗಾಗಿ ಅವುಗಳಿಗೆ ತೊಂದರೆ ಮಾಡದೆ, ನಾವು ಎಚ್ಚರಿಕೆಯಿಂದ ಬದುಕುವುದೂ ಸಹ ಪರಿಸರ ಸಂರಕ್ಷಣೆಯ ಒಂದು ಪ್ರಮುಖ ಭಾಗವೆಂದು ಹೇಳಬಹುದು.

ಅಂದು ನಾವು ‘ಸೈಲೆಂಟ್ ಕಿಲ್ಲರ್’ ಆದ ಕಟ್ಟು ಹಾವನ್ನು ನಮ್ಮ ಅಂಗಳದಿಂದ ಅಪ್ಪನಿಗೆ ಗೊತ್ತಿಲ್ಲದಂತೆ ಸೈಲೆಂಟಾಗಿ ಬಚಾವ್ ಮಾಡಿದ್ದಂತೂ ನಮಗೆ ಸಂತಸದ ಕ್ಷಣಗಳಾಗಿದ್ದವು. ಆದರೆ ಅದು ಬೇರೊಬ್ಬರ ಕಣ್ಣಿಗೆ ಬಿದ್ದರೆ ನಮ್ಮ ಜನ ಬಿಡುತ್ತಾರೆಯೇ? ಪರಿಸರದಲ್ಲಿ ಅದೂ ಸಹ ಒಂದು ಭಾಗ ಎಂಬ ಅಂಶವನ್ನು ಅರಿತು ಅದಕ್ಕೂ ತೊಂದರೆ ಕೊಡದೆ, ಅವರೂ ತೊಂದರೆಗೆ ಒಳಗಾಗದೆ ನಮ್ಮ ಪೂರ್ವಿಕರ ಸಹಬಾಳ್ವೆಯ ಮಹಾ ತತ್ವವನ್ನು ಎತ್ತಿ ಹಿಡಿಯುವರೇ? ಹಾವು ಕಂಡರೆ ದೊಣ್ಣೆ ಎಲ್ಲಿ ಎನ್ನುವ ಕಾಲ ಘಟ್ಟದಲ್ಲಿ ಅದು ಜನರ ಕಣ್ ತಪ್ಪಿಸಿ ಬದುಕುತ್ತದೆಯೇ? ಕಾಲವೇ ಅದಕ್ಕೆ ಉತ್ತರ ನೀಡಬೇಕು.

ಹುಲ್ಲಸ್ಲೆ = ಹುಲ್ಲಿನ ಪ್ರದೇಶ.

ವಾಡೇವು = ಧಾನ್ಯ ತುಂಬುವ ಮಣ್ಣಿನ ದೊಡ್ಡ ಮಡಿಕೆ.

ಬುಡ್ಡು = ಕಾಳುಗಳನ್ನು ತುಂಬುವ ಮಡಿಕೆ.

ಜಂತೆ = ಮನೆಯ ಮಾಳಿಗೆಯ ಕೆಳಭಾಗ.

    © ಡಾ. ಅಶ್ವಥ ಕೆ. ಎನ್.

ಲೇಖನ: ಮಂಜುನಾಥ್ ಅಮಲಗೊಂದಿ 
          ತುಮಕೂರು ಜಿಲ್ಲೆ

Spread the love
error: Content is protected.