ಫಂಗೈ ಎಸೆಯುತ್ತಿರುವ ಅಲರ್ಜಿ ಎಂಬ ಭರ್ಜಿ!
© Ai
ಮುಖ ಮುಚ್ಚಿಕೊಂಡರೆ ಕಾಲಿಗೆ ಸಾಲದು, ಕಾಲಿನಲ್ಲಿ ಎಳೆದುಕೊಂಡರೆ ಮುಖಕ್ಕೆ ಸಿಗದು. ಕೆಲವೊಮ್ಮೆ ಸ್ವಲ್ಪ ಸಣ್ಣ ಬೆಡ್ ಶೀಟ್ ಅನ್ನು ಬಳಸುವಾಗ ನಿಮಗೂ ಈ ತೊಂದರೆ ಆಗಿರುತ್ತದೆ. ಆದರೆ ನನ್ನ ವಿಚಾರದಲ್ಲಿ, ಆಗಿನ್ನೂ ನಾನು ಪಿ.ಯು.ಸಿ. ತೆಳುವಾದ ಬೆಡ್ ಶೀಟ್, ನಾವಿದ್ದ ರೂಮ್ ಬೇರೆ ಚಳಿಗಾಲದಲ್ಲಿ ಎ.ಸಿ. ಯಂತೆ ಕೆಲಸ ಮಾಡುತ್ತದೆ. ಹೇಗೋ ಕಷ್ಟಪಟ್ಟು ಮುಖ ಹಾಗೂ ಕಾಲಿಗೆ ಸೇರಿಸಿ ಬೆಡ್ ಶೀಟ್ ಅನ್ನು ಹೊದ್ದುಕೊಂಡರೂ ಆ ಪಾಪಿ ಚಳಿಗಾಳಿ ಆ ತೆಳುವಾದ ಬೆಡ್ ಶೀಟ್ ನ ಒಳಗೂ ನುಸುಳಿ ಭಾರೀ ತೊಂದರೆ ಕೊಡುತ್ತಿತ್ತು. ಅಷ್ಟೇ ಆದರೆ ಪರವಾಗಿಲ್ಲ. ನಮ್ಮ ಆ ರೂಮಿನ ಗೋಡೆಗಳು ಎಷ್ಟು ಚೆನ್ನಾಗಿ ತೇವಾಂಶವನ್ನು ಹಿಡಿದು ಇಟ್ಟುಕೊಳ್ಳುತ್ತಿದ್ದವು ಅಂದರೆ, ಬಹುಶಃ ಯಾವುದೇ ತೊಂದರೆ ಇಲ್ಲದೆ ಅಣಬೆ ಕೃಷಿ ಮಾಡಬಹುದಿತ್ತೇನೋ. ನಮ್ಮ ಈ ಸಂದರ್ಭದಲ್ಲಿ ಹೆಚ್ಚು ಕಡಿಮೆ ಹಾಗೇ ಆಯಿತು. ಅಣಬೆಯನ್ನು ನಾವು ಬೆಳೆದಿಲ್ಲ, ಆದರೆ ಬೇರೆ ಪ್ರಭೇದದ ಶಿಲೀಂಧ್ರಗಳು (ಫಂಗೈ) ಗೋಡೆಗಳ ಮೇಲೆ, ನಮ್ಮ ಬೆಡ್ ಶೀಟಿನ ಮೇಲೆ, ಅಷ್ಟೇ ಯಾಕೆ ನಮ್ಮ ಯುನಿಫಾರ್ಮ್ ಮೇಲೆ ಕೂಡಾ ಬೆಳೆದು ತಮ್ಮ ಆ ಫಂಗೈ ಸುವಾಸನೆ ಬೀರುತ್ತಿತ್ತು. ನಮ್ಮ ಪುಣ್ಯಕ್ಕೆ ಅದರಿಂದ ನಮಗೆ ದೊಡ್ಡದಾದ ಅಲರ್ಜಿ ಅಥವಾ ರೋಗಗಳು ಬಾರದಿದ್ದರೂ ನಮಗೆ ಕಾಟ ಕೊಡುತ್ತಿದ್ದದಂತೂ ನಿಜ. ನಾನಿದ್ದ ಆಶ್ರಮದ ತೋಟದ ರೂಮಿನಲ್ಲಿ ಇದು ಪ್ರತೀ ವರ್ಷ ನಡೆಯುವ ಸಾಮಾನ್ಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಬದಲಾದ ಯಾಂಟಿ-ಫಂಗೈ ಪೈಂಟ್ ಗಾಲ ಸಹಾಯದಿಂದ ಫಂಗೈ ತೊಂದರೆಗಳು ಸ್ವಲ್ಪ ಕಡಿಮೆ ಆಗಿದೆ. ತಕ್ಕಮಟ್ಟಿಗೆ ಉಷ್ಣವಲಯವಾದ ನಮ್ಮ ಭಾರತದಂತಹ ಪ್ರದೇಶದಲ್ಲೇ ಹೀಗಿರುವಾಗ ಚಳಿಯುಕ್ತ ಪ್ರದೇಶಗಳಾದ ಅಮೆರಿಕಾದಂತಹ ದೇಶಗಳ ಜನರ ಪಾಡೇನು ಪಾಪ? ನಮ್ಮ ಊಹೆಯಂತೆ ಅಲ್ಲಿ ಈ ಫಂಗೈ ಮತ್ತು ಪೋಲನ್ಅಲರ್ಜಿಗಳು ನಮಗಿಂತ ಹೆಚ್ಚು. ವರ್ಷದ ಒಂದು ಸಮಯದಲ್ಲಿ ಎಲ್ಲರೂ ಎದುರಿಸಬೇಕಾದ ಸಾಮಾನ್ಯ ಸಮಸ್ಯೆ ಅದು. ಆದರೆ ಇತ್ತೀಚೆಗಿನ ವರುಷಗಳಲ್ಲಿ, ಸಾಮಾನ್ಯವಾಗಿ ವಸಂತ ಕಾಲದಲ್ಲಿ ಬರುತ್ತಿದ್ದ ಈ ಅಲರ್ಜಿಗಳು ಅವರಿಗೆ ಈಗ ಸುಮಾರು 3 ವಾರಗಳು ಬೇಗ ಬರತೊಡಗಿವೆಯಂತೆ. ಒಂದು ದಶಕದ ಹಿಂದೆ ವಸಂತ ಋತುವಿನಲ್ಲಿ ಆಗುತ್ತಿತ್ತು ಆದರೆ ಈಗ ಅದಕ್ಕಿಂತ ಸುಮಾರು ಒಂದು ತಿಂಗಳ ಮುಂಚೆಯೇ ಆಗುತ್ತಿದೆ. ಇದಕ್ಕೆ ಕಾರಣ ಏನೆಂದು ಹುಡುಕುತ್ತಾ ಹೋದ ಮಿಷಿಗನ್ ವಿಶ್ವವಿದ್ಯಾಲಯದ ಪರಿಸರಶಾಸ್ತ್ರಜ್ಞೆ ಕಾಯ್ ಜ್ಹು ಅವರಿಗೆ ತಿಳಿದದ್ದು ಇದಕ್ಕೆಲ್ಲಾ ಕಾರಣ ನಮ್ಮ ನಿಮ್ಮೆಲ್ಲರ ಶ್ರಮದ ಫಲ ‘ಹವಾಮಾನ ಬದಲಾವಣೆ’.

ಇದು ನಾವು ಲೆಕ್ಕಿಸದೆ ಇರುವಷ್ಟು ಸಣ್ಣ ವಿಚಾರವಲ್ಲ ಎನ್ನುತ್ತಾರೆ ಕಾಯ್ ಜ್ಹು. ಏಕೆಂದರೆ ಈ ಹವಾಮಾನ ಬದಲಾವಣೆಯಿಂದ ಬೇಗ ಅರಳುವ ಹೂಗಳು ತಮ್ಮ ಸ್ವಾಭಾವಿಕ ಸಮಯಕ್ಕೆ ಮುಂಚೆಯೇ ಅರಳುವುದಲ್ಲದೇ, ಹೆಚ್ಚೆಚ್ಚು ಪೋಲನ್ (ಪರಾಗ ಕಣಗಳು) ಗಳನ್ನು ಗಾಳಿಗೆ ತೂರಿ ಬಿಡುತ್ತಿವೆಯಂತೆ. ಇದರಿಂದ ಎಷ್ಟೋ ಜನರಿಗೆ ಪೊಲನ್ ಅಲರ್ಜಿ ಹೆಚ್ಚಾಗುತ್ತಿದೆ. ಅದೊಂದೇ ಅಲ್ಲ, ಅದರ ಜೊತೆ ಜೊತೆಗೆ ಈ ಫಂಗೈ ಅಲರ್ಜಿ ಸಂಖ್ಯೆಯು ಹೆಚ್ಚುತ್ತಿದೆಯಂತೆ. ಈಗಾಗಲೇ ಅಮೆರಿಕಾದಲ್ಲಿ ಪ್ರತಿ ಐವರಲ್ಲಿ ಒಬ್ಬರಿಗೆ ಫಂಗೈ ಅಲರ್ಜಿ ಆಗಿ ಅದರಿಂದ ಬಾಧಿತರಾಗುತ್ತಿದ್ದಾರಂತೆ. ಆ ಬಾಧೆಯಿಂದಮೂಗಿನಲ್ಲಿ ಆಗುವ ನವೆ/ತುರಿಕೆ, ಕಣ್ಣು ಮತ್ತು ಗಂಟಲುಗಳಲ್ಲಿ ಆಗುವ ಇರಿಟೇಷನ್ ಹಾಗೂ ಉಸಿರಾಟದ ತೊಂದರೆಗಳು ಸಹಿಸುವವರಿಗೇ ಗೊತ್ತು.

ಇದನ್ನು ವೈಜ್ಞಾನಿಕವಾಗಿ ಅರಿಯಲು ಜ್ಹು ಅವರ ತಂಡ ಯು. ಎಸ್. ನಲ್ಲಿರುವ ಪ್ರಮುಖ ಆಸ್ಪತ್ರೆಗಳಲ್ಲಿ ದಾಖಲಿಸಲಾದ 55 ‘ನ್ಯಾಷನಲ್ ಅಲರ್ಜಿ ಬ್ಯುರೋ’ ಗೆ ಸೇರಿದ 2003 ರಿಂದ 2022 ಕಾಲಘಟ್ಟದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪಡೆದು ಅಭ್ಯಸಿಸಿದ ಅನುಸಾರ, ಈ ಫಂಗಲ್ ಅಲರ್ಜಿ ಸಾಮಾನ್ಯವಾಗಿ ಶುರುವಾಗುತ್ತಿದ್ದ ಸಮಯಕ್ಕಿಂತ 22 ದಿನ ಅಂದರೆ ಸರಿ ಸುಮಾರು 3 ವಾರಗಳ ಮುಂಚೆಯೇ ಶುರುವಾಗುತ್ತಿರುವುದು ನಾವೆಲ್ಲಾ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವೇ. ಏಕೆಂದರೆ ಈ ಹಿಂದಿನ ಕೆಲವು ಲೇಖನಗಳಲ್ಲಿ ಹೇಳಿರುವಂತೆ ಈ ಫಂಗಲ್ ಡಿಸೀಸಸ್/ ಶಿಲೀಂಧ್ರ ರೋಗಗಳು ಮಾನವನಿಗೆ ಹೆಚ್ಚು ಕಾಟ ಕೊಡಲು ಅವಕಾಶ ಸಿಗಲಿಲ್ಲ, ಆದರೆ ಈಗಿನ ಬದಲಾಗುತ್ತಿರುವ ಹವಾಮಾನ ಹಾಗೂ ವಾತಾವರಣ ನಮ್ಮನ್ನು ಸಹ ಅವುಗಳ ಬಲ ಪ್ರಯೋಗಿಸಬಲ್ಲ ಬಲಹೀನ ಪ್ರಭೇದಗಳ ಗುಂಪಿಗೆ ಸೇರಿಸಿಬಿಡುತ್ತವೆ ಎಚ್ಚರ. ಒಮ್ಮೆ ಶಿಲೀಂದ್ರ ರೋಗಗಳು ಶುರುವಾದರೆ ಯಾರಿಗೆ ಗೊತ್ತು ಕೊರೋನಾ ಹಾಗೆ ಇನ್ನೊಂದು ತೀವ್ರ ಸಾಂಕ್ರಾಮಿಕ ರೋಗ ಉಗಮವಾಗಬಹುದು.

ಪ್ರಪಂಚಾದ್ಯಂತ ಹರಡಿರುವ ಬದಲಾದ ನಮ್ಮ ಜೀವನ ಶೈಲಿ ಹಾಗೂ ನಮ್ಮ ದಿನಬಳಕೆಯ ವಸ್ತುಗಳಿಂದ ಹವಾಮಾನ ಬದಲಾವಣೆ ಆಗುತ್ತಿರುವುದು ನಮಗೆಲ್ಲಾ ತಿಳಿದ ವಿಚಾರವೇ. ಆದರೆ ಅದರ ಪರಿಣಾಮಗಳು ಇನ್ನು ನಮ್ಮ ಅಜ್ಞಾನ ಪರದೆಯ ಹಿಂದೆಯೇ ಇವೆ. ಅದರಲ್ಲಿ ಹುಡುಕಿ ಸಿಕ್ಕಿರುವ ಒಂದು ಉದಾಹರಣೆಯಿದು. ಹಾಗಾಗಿ ನಾವೇ ಮುಖ್ಯ ಕಾರಣಿಗರಾಗಿ ಮಾಡಿದ ಹವಾಮಾನ ಬದಲಾವಣೆ ಎಂಬ ಪಾಪದ ಫಲವನ್ನು ತಾನು ಬಳಸಿಕೊಂಡು ಫಂಗೈ ಎಸೆಯುತ್ತಿರುವ ಅಲರ್ಜಿಯ ಭರ್ಜಿಯಿಂದ ತಪ್ಪಿಸಿಕೊಂಡೇವಾ ನಾವು?
Source: www.snexplores.org

ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.