ಭಯಾನಕ ವಿಷದ ಕಾಳಿಂಗ ಸರ್ಪ

ಭಯಾನಕ ವಿಷದ ಕಾಳಿಂಗ ಸರ್ಪ

    © ಡಾ. ಪ್ರಭಾಕರ್ ತೀರ್ಥಹಳ್ಳಿ

ಕಾಳಿಂಗ ಎನ್ನುವುದನ್ನು ಹೆಚ್ಚಾಗಿ ಬಳಸುವುದು ಕಾಳಿಂಗಸರ್ಪವನ್ನು ಉಲ್ಲೇಖಿಸಲು. ಕಾಳಿಂಗ ಸರ್ಪದ ವೈಜ್ಞಾನಿಕ ಹೆಸರು ‘ಒಫಿಯೊಫಗಸ್ ಹನ್ನಾ’, ಇದರ ಅರ್ಥ ‘ಹಾವು ಭಕ್ಷಕ’ ಎಂದು. ಕಾಳಿಂಗ ಸರ್ಪವು ಬೇರೆ ಪ್ರಭೇದದ ಹಾವನ್ನು, ಆಗಾಗ ತನ್ನ ಪ್ರಭೇದದ ಹಾವನ್ನು ಭಕ್ಷಿಸಿ ಜೀವಿಸುತ್ತದೆ. ಕಾಳಿಂಗ ಸರ್ಪವು ವಿಶ್ವದ ಅತ್ಯಂತ ಉದ್ದನೆಯ ಹಾಗೂ ಅತ್ಯಂತ ವಿಷಕಾರಿ ಹಾವಿನ ಪೈಕಿ ಒಂದು. ಸುಂದರ ಮೈಕಟ್ಟನ್ನು ಹೊಂದಿರುವ ಈ ಹಾವು ಕಪ್ಪು ಬಣ್ಣದ್ದಾಗಿದ್ದು, ಬಿಳಿ ಪಟ್ಟೆಗಳನ್ನು ಹೊಂದಿರುತ್ತದೆ.

ಸುಮಾರು 3–4 ಮೀಟರ್ ಅಥವಾ 10–13 ಅಡಿ ಉದ್ದ ಬೆಳೆಯುವ ಈ ಹಾವು ಏಷ್ಯಾದ ಹಲವು ಭಾಗಗಳಲ್ಲಿ ಮತ್ತು ಭಾರತದ ಕೆಲ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ದಟ್ಟ ಅರಣ್ಯ ಪ್ರದೇಶವೇ ಇದರ ಆವಾಸಸ್ಥಾನ. ಕರ್ನಾಟಕದ ಆಗುಂಬೆ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಾಣಸಿಗುತ್ತದೆ. ತನ್ನ ಒಟ್ಟು ದೇಹದ ಮೂರನೇ ಭಾಗವನ್ನು ಗಾಳಿಯಲ್ಲಿ ಎತ್ತಿಕೊಂಡು ನಿಲ್ಲಿಸಬಲ್ಲ ಶಕ್ತಿ ಹೊಂದಿರುವ ಕಾಳಿಂಗ ಸರ್ಪವನ್ನು ಇಂಗ್ಲಿಷ್ನಲ್ಲಿ ‘ಕಿಂಗ್ ಕೋಬ್ರಾ’ ಮತ್ತು ಕೇರಳದಲ್ಲಿ ‘ರಾಜವೆಂಬಾಲ’ ಎಂದು ಕರೆಯುತ್ತಾರೆ. ಇತರೆ ಹಾವಿನಂತೆ ಈ ಹಾವು ಕಣ್ಣಿನ ಹಿಂಭಾಗದ ಚೀಲದಲ್ಲಿ ವಿಷವನ್ನು ಶೇಖರಿಸುತ್ತದೆ.

© ಡಾ. ಪ್ರಭಾಕರ್ ತೀರ್ಥಹಳ್ಳಿ

ಈ ಹಾವು ತನ್ನ ಹಲ್ಲಿನಿಂದ ಬೇಟೆಯನ್ನು ಕಚ್ಚಿ ಸಾಯಿಸಿದ ನಂತರ ನಿಧಾನವಾಗಿ ನುಂಗುತ್ತದೆ. ಅದರ ಹೊಟ್ಟೆಯಲ್ಲಿ ಇರುವ ಟಾಕ್ಸಿನ್ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಕಾಳಿಂಗ ಸರ್ಪವು ತನ್ನ ಬಾಯಿಯನ್ನು ಅಗಲವಾಗಿ ತೆರೆಯುವ ಶಕ್ತಿ ಹೊಂದಿರುವ ಕಾರಣ ತಲೆಗಿಂತ ದೊಡ್ಡ ಗಾತ್ರದ ಬೇಟೆಯನ್ನು ನುಂಗಬಲ್ಲದು.

© ಡಾ. ಪ್ರಭಾಕರ್ ತೀರ್ಥಹಳ್ಳಿ

ಹೆಣ್ಣು ಕಾಳಿಂಗ ಹಾವು ಒಮ್ಮೆಗೇ 20 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆ ಹೊರಬಂದ ನಂತರ ಮರಿ ಸ್ವತಃ ಆಹಾರ ಹುಡುಕಲು ತೆರಳುತ್ತದೆ. ಮೊಟ್ಟೆಯಿಂದ ಹೊರಬಂದ ಮರಿ ಸುಮಾರು 45–60 ಸೆಂ. ಮೀ ಉದ್ದವಿದ್ದು, ಹುಟ್ಟಿನಲ್ಲಿಯೇ ವಿಷವನ್ನು ಹೊಂದಿದ್ದು, ಕಚ್ಚಬಲ್ಲ ಸಾಮರ್ಥ್ಯವನ್ನು ಸಹ ಹೊಂದಿದೆ; ಆದರೆ ವಿಷದ ಪ್ರಮಾಣವು ವಯಸ್ಕ ಹಾವಿನಷ್ಟಿರದೆ, ದೇಹದ ಗಾತ್ರಕ್ಕೆ ಅನುಗುಣವಾಗಿರುತ್ತದೆ. ಕಾಳಿಂಗ ಸರ್ಪವು ಜಗತ್ತಿನ ಅತಿ ಉದ್ದವಾದ ವಿಷಕಾರಿ ಹಾವಿನಲ್ಲೊಂದು. ಕಾಳಿಂಗ ಸರ್ಪದ ವಿಷವು ಮುಖ್ಯವಾಗಿ ನರಮಂಡಲದ ಮೇಲೆ ಪರಿಣಾಮ ಬೀರುವ ನ್ಯೂರೋಟಾಕ್ಸಿಕ್ ಸ್ವಭಾವವನ್ನು ಹೊಂದಿದೆ.

ಕಾಳಿಂಗ ಸರ್ಪದ ಬಾಹ್ಯ ಜೀವನ

© ಡಾ. ಪ್ರಭಾಕರ್ ತೀರ್ಥಹಳ್ಳಿ

ಕಾಳಿಂಗ ಸರ್ಪವು ತನ್ನ ದೇಹದ ಗಾತ್ರ ಮತ್ತು ರೂಪ ವೈಶಿಷ್ಟ್ಯದಿಂದ ನಾಗರಹಾವಿಗಿಂತ ವಿಭಿನ್ನವಾಗಿದೆ. ಕಾಳಿಂಗ ಸರ್ಪ ಇತರ ನಾಗರಹಾವಿಗಿಂತ ದೊಡ್ಡದಾಗಿದ್ದು, ಅದರ ಕುತ್ತಿಗೆಯ ಹಿಂಭಾಗದಲ್ಲಿ “V” ಪಟ್ಟೆಗಳಂತಹ ಚಿಹ್ನೆ ಕಂಡುಬರುತ್ತದೆ. ನಾಗರಹಾವಿನಲ್ಲಿ ಸಾಮಾನ್ಯವಾಗಿ ಒಂದು ಅಥವಾ ಎರಡು ಕಣ್ಣಿನಾಕಾರದ ಪಟ್ಟೆಗಳು ಇರುತ್ತವೆ. ಕಾಳಿಂಗ ಸರ್ಪವು ಗಾತ್ರದಲ್ಲಿ ದೊಡ್ಡದಾಗಿದ್ದರೂ, ವೇಗವಾಗಿ ಚಲಿಸುವುದರಲ್ಲಿ ಚುರುಕಾಗಿದೆ. ಇದು ಕಡುಹಸಿರು, ಕಂದು ಅಥವಾ ಕಪ್ಪು ಬಣ್ಣದ ಚರ್ಮ ಹೊಂದಿದ್ದು, ದೇಹದ ಕೆಳಭಾಗ ಮಸುಕಾದ ಹಳದಿ ಬಣ್ಣವಿದೆ. ಹೊಟ್ಟೆಯ ಭಾಗವು ಕೆನೆಹಾಲಿನ ಅಥವಾ ಮಸುಕಾದ ಹಳದಿ ಬಣ್ಣವನ್ನು ಹೊಂದಿದೆ. ಕಾಳಿಂಗ ಸರ್ಪವು ಪ್ರೋಟೆರೊಗ್ಲಿಫ್ (ನಿರಂತರವಾಗಿ ಸ್ಥಿರ ಮುಂಭಾಗದ ಹಲ್ಲು) ದಂತರಚನೆಯನ್ನು ಹೊಂದಿದ್ದು, ಬಾಯಿಯ ಮುಂಭಾಗದಲ್ಲಿ ಒಂದು ಹಲ್ಲಿನಿಂದ ವಿಷವನ್ನು ಸ್ರವಿಸುತ್ತದೆ. ಹಲ್ಲು ಚರ್ಮದೊಳಗೆ ಹಾಯುವಂತೆ ಬೇಟೆಯ ಶರೀರಕ್ಕೆ ವಿಷವನ್ನು ತಲುಪಿಸಲು ವಿನ್ಯಾಸಗೊಂಡಿದೆ.

© ಡಾ. ಪ್ರಭಾಕರ್ ತೀರ್ಥಹಳ್ಳಿ

ಗಂಡು ಕಾಳಿಂಗ ಸರ್ಪ ಹೆಣ್ಣು ಹಾವಿಗಿಂತ ದೊಡ್ಡ ಮತ್ತು ದಪ್ಪ ದೇಹ ಹೊಂದಿದೆ. ಆದರೆ ವಿಷದ ಹಲ್ಲು ಗಾತ್ರದಲ್ಲಿ ಗಂಡು–ಹೆಣ್ಣು ವ್ಯತ್ಯಾಸದ ಬಗ್ಗೆ ಸ್ಪಷ್ಟ ವೈಜ್ಞಾನಿಕ ದಾಖಲೆಗಳಿಲ್ಲ; ಹಲ್ಲು ಬೇಟೆಗೆ ಅಗತ್ಯವಿರುವ ಪ್ರಮಾಣದ ವಿಷವನ್ನು ಮಾತ್ರ ಹರಿಸಲು ನಿರ್ಮಿತವಾಗಿದೆ. ಕಾಳಿಂಗ ಸರ್ಪದ ಸರಾಸರಿ ಜೀವಿತಾವಧಿ ಪ್ರಾಕೃತಿಕ ಪರಿಸರದಲ್ಲಿ 15–20 ವರ್ಷಗಳಷ್ಟಿದೆ. ಹೆಚ್ಚು ಕಚ್ಚುವ ಸಾಮರ್ಥ್ಯ ಹೊಂದಿದ್ದರೂ, ಸಾಮಾನ್ಯವಾಗಿ ನಾಚಿಕೆ ಸ್ವಭಾವದ ಮತ್ತು ಏಕಾಂತ ಬಯಸುವ ಜೀವಿಯಾಗಿದೆ. ಬೇಟೆಯಲ್ಲದ ಇತರ ಜೀವಿಗಳಿಂದ ಸ್ವತಃ ದೂರವಾಗಲು ಸಹಜ ಪ್ರವೃತ್ತಿಯು ಇದರಲ್ಲಿ ಕಂಡುಬರುತ್ತದೆ.

ವಾಸಸ್ಥಾನ:

ಕಾಳಿಂಗ ಸರ್ಪವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಇದು ಮುಖ್ಯವಾಗಿ ಎತ್ತರದ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತದೆ, ಹಾಗು ಸರೋವರ ಮತ್ತು ಹಳ್ಳಗಳ ಹತ್ತಿರವೂ ಕಂಡುಬರುತ್ತದೆ. ಅರಣ್ಯ ನಾಶದಿಂದ ಕಾಳಿಂಗ ಸರ್ಪಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಕರ್ನಾಟಕದ ಆಗುಂಬೆಯ ಸೋಮೇಶ್ವರ ಕಾಡು ಹೆಚ್ಚು ಕಾಳಿಂಗ ಸರ್ಪಗಳನ್ನು ಹೊಂದಿರುವ ಕಾಡಾಗಿ ಪ್ರಸಿದ್ಧಿ ಹೊಂದಿದೆ.

ಬೇಟೆ:

ಕಾಳಿಂಗ ಸರ್ಪ ತನ್ನ ಸೀಳು ನಾಲಿಗೆಯ ಮೂಲಕ ವಾಸನೆ (ರಸಾಯನಿಕ ಸಂಕೇತ) ಗ್ರಹಿಸುತ್ತದೆ. ದೇಹದ ಸೂಕ್ಷ್ಮ ಭಾಗದಿಂದ ವಾಸನೆ ಪತ್ತೆ ಮಾಡಿ, ಜಕೋಬ್ಸನ್ ಅಂಗದ ಮೂಲಕ ಬೇಟೆಯ ಸ್ಥಳವನ್ನು ಗುರುತಿಸುತ್ತದೆ. ಆಹಾರದ ವಾಸನೆ ಸಿಕ್ಕಾಗ, ಬೇಟೆಯ ದಿಕ್ಕು ತಿಳಿಯಲು ಹಾವು ತನ್ನ ಸೀಳು ನಾಲಿಗೆಯನ್ನು ಹೊರ ಚಾಚುತ್ತದೆ. ಕಾಳಿಂಗ ಸರ್ಪದ ತೀಕ್ಷ್ಣ ದೃಷ್ಟಿ, ಬುದ್ಧಿಮತ್ತೆ ಮತ್ತು ಭೂಮಿಯ ಕಂಪನವನ್ನು ಗ್ರಹಿಸುವ ಸಾಮರ್ಥ್ಯ ಬೇಟೆ ಪತ್ತೆಯಲ್ಲಿ ಸಹಾಯ ಮಾಡುತ್ತದೆ. ಹಾವು ತನ್ನ ಆಹಾರವನ್ನು ತಿನ್ನುವಾಗ ಸಂಪೂರ್ಣವಾಗಿ ನುಂಗುತ್ತದೆ.

ಆಹಾರ ಕ್ರಮ:

ಕಾಳಿಂಗ ಸರ್ಪದ ಆಹಾರದಲ್ಲಿ ಹೆಚ್ಚಾಗಿ ಇತರ ಹಾವುಗಳು ಸೇರಿವೆ. ಆದರೆ ಆಹಾರದ ಕೊರತೆಯ ಸಮಯದಲ್ಲಿ, ಕಾಳಿಂಗ ಸರ್ಪವು ಚಿಕ್ಕ- ಚಿಕ್ಕ ಕಶೇರುಕ ಪ್ರಾಣಿಗಳು, ಇಲಿ, ಮೊಲ ಮತ್ತು ಪಕ್ಷಿಗಳನ್ನು ಕೂಡ ತಿನ್ನಬಹುದು. ಕೆಲ ಸಂದರ್ಭಗಳಲ್ಲಿ, ಈ ಹಾವು ತನ್ನ ದೇಹದ ಸ್ನಾಯುಗಳನ್ನು ಬಳಸಿ, ದೊಡ್ಡ ಪ್ರಾಣಿಯನ್ನು ನುಂಗಲು ತನ್ನ ಬಾಯಿಯನ್ನು ಹೊಂದಿಸಿಕೊಳ್ಳುತ್ತದೆ. ಕಾಳಿಂಗ ಸರ್ಪದ ನಿಧಾನಗತಿಯ ಜೀರ್ಣಕ್ರಿಯೆಯ ಕಾರಣದಿಂದ, ಒಂದು ಬಾರಿ ದೊಡ್ಡ ಪ್ರಮಾಣದ ಆಹಾರವನ್ನು ಸೇವಿಸಿದ ಮೇಲೆ, ಕೆಲವು ತಿಂಗಳುಗಳವರೆಗೆ ಬೇಟೆಯಾಡದೆ ಅದೇ ಆಹಾರದಲ್ಲಿ ಜೀವಿಸುತ್ತದೆ. ಇಲಿಗಳೂ ಸಹ ಕಾಳಿಂಗ ಸರ್ಪದ ಸಾಮಾನ್ಯ ಆಹಾರವಾಗಿದ್ದು, ಇಲಿಗಳ ಆಕರ್ಷಣೆಯಿಂದ ಕೆಲವೊಮ್ಮೆ ಕಾಳಿಂಗ ಸರ್ಪವು ಮಾನವರ ವಾಸಸ್ಥಳಗಳ ಹತ್ತಿರ ಸಹ ಬರುತ್ತವೆ.

ರಕ್ಷಣೆಯ ತಂತ್ರಗಳು:

ಕಾಳಿಂಗ ಸರ್ಪವು ಭಯಗೊಂಡಾಗ, ತನ್ನ ದೇಹದ ಮೂರನೇ ಒಂದು ಭಾಗವನ್ನು ಹೆಡೆಯ ರೀತಿ ಎತ್ತಿ, ಕುತ್ತಿಗೆಯನ್ನು ನೇರಗೊಳಿಸಿ, ವಿಷದ ಹಲ್ಲುಗಳನ್ನು ತೋರಿಸುವ ಮೂಲಕ ಎದುರಿರುವ ಜೀವಿಯನ್ನು ಹೆದರಿಸುವ ತಂತ್ರವನ್ನು ಅನುಸರಿಸುತ್ತದೆ. ತನ್ನ ಹತ್ತಿರಕ್ಕೆ ಬರುವ ವಸ್ತು ಅಥವಾ ಜೀವಿಗಳಿಂದ ಅನಿರೀಕ್ಷಿತ ಚಲನೆಯಾಗುವಾಗ, ಹಾವು ತಕ್ಷಣ ಪಲಾಯನಗೈಯುತ್ತದೆ. ಕಾಳಿಂಗ ಸರ್ಪವು ಹಠಾತ್ ದಾಳಿ ಮಾಡುವುದಿಲ್ಲ; ಬದಲಾಗಿ ಸುಮಾರು 2–3 ಮೀಟರ್ (ಸುಮಾರು 7 ಅಡಿ) ದೂರದಿಂದ ಭಯಭೀತಿಯಾಗಿ ಬೇಟೆಯನ್ನು ವೀಕ್ಷಿಸುತ್ತದೆ. ಇದರಲ್ಲಿನ ನಿರೊಟಾಕ್ಸಿಕ್ ಪ್ರಭಾವದಿಂದ ಮುಂಗುಸಿ ಮತ್ತು ಇತರ ಸಣ್ಣ ಭಕ್ಷಕ ಪ್ರಾಣಿಗಳಿಂದ ಸ್ವತಃ ರಕ್ಷಣೆ ಪಡೆಯುತ್ತದೆ.

ಸಂತಾನೋತ್ಪತ್ತಿ:

ಹೆಣ್ಣು ಕಾಳಿಂಗ ಸರ್ಪವು ತನ್ನ ದೇಹದಿಂದ ವಿಭಿನ್ನವಾದ ವಾಸನೆಯನ್ನು ಹೊರಬಿಟ್ಟು, ಲೈಂಗಿಕ ಕ್ರಿಯೆಗೆ ಸಿದ್ಧವಿರುವುದನ್ನು ಗಂಡು ಹಾವಿಗೆ ತಿಳಿಸುತ್ತದೆ. ಕೆಲವೊಮ್ಮೆ ಒಂದೇ ಹೆಣ್ಣು ಹಾವಿಗೆ ಎರಡು ಗಂಡು ಹಾವಿನ ನಡುವೆ ಹೋರಾಟ ನಡೆಯುತ್ತದೆ, ಗೆದ್ದ ಗಂಡು ಹೆಣ್ಣಿನೊಂದಿಗೆ ಸೇರುತ್ತದೆ.

ಹೆಣ್ಣು ಕಾಳಿಂಗ ಸರ್ಪವು ತನ್ನ ಮೊಟ್ಟೆಗಳ ಪ್ರಮುಖ ಪೋಷಕವಾಗಿರುತ್ತದೆ. ಮೊಟ್ಟೆ ಇಡುವ ಮೊದಲು, ಹೆಣ್ಣು ಹಾವು ತನ್ನ ಉದ್ದನೆಯ ದೇಹದ ಸಹಾಯದಿಂದ ದೊಡ್ಡ ಎಲೆಗಳ ಹಾಸನ್ನು (ಗೂಡು) ರಚಿಸುತ್ತದೆ. ಈ ಎಲೆಗಳ ಹಾಸಿನಲ್ಲಿ 20–40 ಮೊಟ್ಟೆಗಳನ್ನು ಇಟ್ಟ ನಂತರ, ಹಾಸು ಕಾವುಗೂಡಿನಂತೆ ಕೆಲಸ ಮಾಡುತ್ತದೆ. ಹೆಣ್ಣು ಹಾವು ಮೊಟ್ಟೆಗಳನ್ನು ದೊಡ್ಡ ಪ್ರಾಣಿಗಳಿಂದ ಮತ್ತು ಮಳೆಯಿಂದ ರಕ್ಷಿಸಲು ಹಾಗು ಮೊಟ್ಟೆಗಳಿಗೆ ಸೂಕ್ತ ಉಷ್ಣತೆ (ಸುಮಾರು 25℃) ನೀಡಲು ಮತ್ತು ಅವು ಮರಿಯಾಗುವ ತನಕ ಗೂಡನ್ನು ಕಾಯುತ್ತದೆ.

ಆಗುಂಬೆ ಮಳೆ ಕಾಡು ಪ್ರದೇಶವು ಕಾಳಿಂಗ ಸರ್ಪಗಳ ಸ್ವರ್ಗವೆಂದೇ ಹೆಸರು ಪಡೆದಿದೆ. ನಾಡಿಗೆ ಆಹಾರ ಅರಸಿಕೊಂಡು ಬರುವ ಇವುಗಳನ್ನು ಕೊಲ್ಲುವ ಬದಲು ತಜ್ಞರಿಂದ ಹಿಡಿಸಿ ಮರಳಿ ಅರಣ್ಯಕ್ಕೆ ಬಿಡುವ ವ್ಯವಸ್ಥೆಯನ್ನು ಮಾಡುವ ಮೂಲಕ ಅವುಗಳ ಸಂತತಿಯ ಉಳಿವಿನ ಸಂಕಲ್ಪವನ್ನು ಮನುಕುಲ ಮಾಡಬೇಕಿದೆ.

© ಡಾ. ಪ್ರಭಾಕರ್ ತೀರ್ಥಹಳ್ಳಿ

ಲೇಖನ: ಸಂತೋಷ್ ರಾವ್ ಪೆರ್ಮುಡಾ 
          ದಕ್ಷಿಣ ಕನ್ನಡ ಜಿಲ್ಲೆ

Spread the love
error: Content is protected.