ಕಚ್ಚಲು ಆರಿಸುವ ಸೊಳ್ಳೆಗಳು…
© Gemini_ai
ಗುಯ್… ಗುಯ್… ಎಂದು ಶಬ್ಧ ಮಾಡುತ್ತಾ ಆಗೊಮ್ಮೆ ಈಗೊಮ್ಮೆ ಕಚ್ಚುವ ಸೊಳ್ಳೆಗಳನ್ನು ನೋಡಿರುತ್ತೀರಿ. ಆದರೆ ಅಂದೇಕೋ ಸೊಳ್ಳೆಗಳೆಲ್ಲಾ ಮಾತನಾಡಿಕೊಂಡು ನನ್ನ ಮೇಲೆ ದಾಳಿಗೆಂದೇ ಧಾವಿಸಿದಂತೆ ಅನ್ನಿಸಿತ್ತು. ಏಕೆಂದರೆ ಆ ಸಂಜೆ ನಾನು ನನ್ನ ಜೀವನದಲ್ಲೇ ನೋಡಿರದಷ್ಟು ಸೊಳ್ಳೆಗಳ ಸಮೂಹ ನನ್ನ ಮುಖ-ದೇಹದ ಸುತ್ತ ಆವರಿಸಿದ್ದವು. ಗಾಳಿಯಲ್ಲಿ ಸುಮ್ಮನೆ ಕೈ ಬೀಸಿದರೆ ಖಂಡಿತ ಒಂದೋ ಎರಡೋ ಸೊಳ್ಳೆ ಕೈ ಹಿಡಿತಕ್ಕೆ ಸಿಗುತ್ತಿದ್ದವು. ಅವುಗಳಿಗಿಂತ ನಾನು ಎಷ್ಟೇ ದೊಡ್ಡ ದೇಹಿಗನಾದರೂ ಈ ತರ ಎರಗಿದರೆ ಯಾರು ಸಹಿಸುತ್ತಾರೆ ನೀವೇ ಹೇಳಿ? ಅದಕ್ಕೆ ಒಂದು ತೀರ್ಮಾನಕ್ಕೆ ಬಂದೆ. ಆ ಮರಗಳ ಮಧ್ಯೆ ಇರುವುದೇ ಬೇಡ, ಜಾಗ ಬದಲಾಯಿಸಿ ಬಿಡೋಣ ಎಂದು ಎದ್ದು ಅಲ್ಲಿಂದ ಹೊರಟೇ ಬಿಟ್ಟೆ. ಸಂಜೆಯ ಪ್ರಾರ್ಥನಾ ಸಮಯವಾದ್ದರಿಂದ ಹಾಗೆ ಮುಖಕ್ಕೆರೆಡು ನೀರು ಹೊಡೆದು ಭಜನೆಗೆ ಹೋದೆ. ಯಾವುದೋ ಗೂಢಾಚಾರಿ ಸೊಳ್ಳೆ ನಾನಿರುವ ಮಾಹಿತಿಯನ್ನು ಉಳಿದ ಸೊಳ್ಳೆಗಳಿಗೆಲ್ಲಾ ಕೊಟ್ಟಿದೆ ಎಂದು ಕಾಣುತ್ತದೆ. ಅಲ್ಲಿಗೂ ಬಂದು ಬಿಟ್ಟಿದ್ದವು. ನನ್ನ ಕೈಯಲ್ಲಿ ಆದಷ್ಟು ತಾಳ್ಮೆಯಿಂದ ಸುಮ್ಮನಿರಲು ಪ್ರಯತ್ನ ಪಟ್ಟೆ. ಆದರೆ ಅವುಗಳ ದಾಳಿ ನಿಲ್ಲಲೇ ಇಲ್ಲ. ಇನ್ನೂ ಇದು ಕೆಲಸಕ್ಕೆ ಬಾರದೆಂದು ಕಾನೂನು ಕೈಗೆ ತೆಗೆದುಕೊಳ್ಳಬೇಕಾಯಿತು. ಮಾತು ಕೇಳದ ಆಕ್ರಮಣಾಕಾರಿ ಸೊಳ್ಳೆಗಳ ಮಾರಣಹೋಮ ಶುರುವಾಯಿತು. ನನ್ನ ಕೈಯಿಂದ ಹತರಾದ ಸೊಳ್ಳೆಗಳ ಅವಶೇಷಗಳನ್ನು ಅಲ್ಲೇ ನೆಲದ ಮೇಲೆ ಜೋಡಿಸುತ್ತಾ ನಂತರ ನನ್ನ ಮೇಲೆ ದಾಳಿ ಮಾಡಲು ಬರುವ ಇತರ ಸೊಳ್ಳೆಗಳಿಗೆ ಪಾಠವಾಗಿಸಿದೆ. ಹೀಗೆ 13 ಸೊಳ್ಳೆಗಳ ದಾರುಣ ಪ್ರಾಣಹಾನಿಯ ನಂತರ ಅವುಗಳ ದಾಳಿ ಸ್ವಲ್ಪ ಕಡಿಮೆ ಆಯಿತು ಎಂದು ನನ್ನ ನೆನಪಿನ ಶಕ್ತಿ ಹೇಳುತ್ತಿದೆ. ಅಂದು ಆ ದಿನ ನಾನು ಗಮನಿಸಿದ ಇನ್ನೊಂದು ವಿಚಾರವಿದೆ. ಸೊಳ್ಳೆಗಳು ಬಂದು ನಮ್ಮ ಮೈ ಮೇಲೆ ಕುಳಿತ ತಕ್ಷಣ ಕಚ್ಚುತ್ತಿರಲಿಲ್ಲ. ಇದನ್ನು ನೀವು ಗಮನಿಸಿರಬಹುದು ಅಲ್ಲವೇ? ಬಂದು ಕೂತು, ಸರಿಯಾದ ಜಾಗ ಹುಡುಕಿ, ತನ್ನ ಸೂಜಿ ಮೂತಿ ಎಲ್ಲಿ ಸುಲಭವಾಗಿ ಇಳಿಯುತ್ತದೆಯೋ ಅಲ್ಲಿ ನಿಧಾನವಾಗಿ ತೂರಿಸಿ ರಕ್ತ ಹೀರುತ್ತಿತ್ತು. ಇದು ಎಷ್ಟು ಸತ್ಯವೋ ಗೊತ್ತಿಲ್ಲ, ಆದರೆ ನನ್ನ ಗಮನಿಕೆ ಅಷ್ಟೇ. ಆದರೆ ಹೊಸದೊಂದು ಸಂಶೋಧನೆ ಹೇಳುತ್ತದೆ ಹಾಗೆ ಸೊಳ್ಳೆಗಳು ನಮ್ಮ ಮೈ ಮೇಲೆ ಕೂತಾಗ ಕೇವಲ ಸರಿಯಾದ ಜಾಗ ಹುಡುಕುವುದಕ್ಕೆ ಮುಂಚೆ ಈತ ನನ್ನ ರುಚಿಗೆ ಸರಿಹೊಂದುತ್ತಾನೋ ಇಲ್ಲವೋ ಎಂದು ಸವಿದು ನೋಡುತ್ತವಂತೆ. ಆ ನಂತರವೇ ಇವನನ್ನು ಕಚ್ಚಲೇ-ಬೇಡವೇ ಎಂದು ನಿರ್ಧರಿಸುತ್ತವಂತೆ.

ಇಂಥದೇ ಪ್ರಶ್ನೆ ಸಮ್ವೇದನಾ ಜೀವಶಾಸ್ತ್ರಜ್ಞೆ ಲೀಸಾ ಅವರಿಗೂ ಬಂತು. ‘ಏಕೆ ಸೊಳ್ಳೆಗಳು ಕೆಲವೊಮ್ಮೆ ಒಬ್ಬರನ್ನು ಮಾತ್ರ ಹೆಚ್ಚು ಕಚ್ಚುತ್ತವೆ ಹಾಗೇ ಕೆಲವರನ್ನು ಕಡಿಮೆ ಕಚ್ಚುತ್ತವೆ? ಎಂದು’. ಇದಕ್ಕೆ ಉತ್ತರ ಹುಡುಕುತ್ತಾ ಹೊರಟರು. ಯಾವುದೇ ವಿಜ್ಞಾನಿಯಾದರೂ ಏನಾದರೂ ಪ್ರಶ್ನೆ ಮೂಡಿದರೆ ಮೊದಲು ಹುಡುಕುವುದು, ಈಗಾಗಲೇ ನಮಗೆ ಈ ವಿಚಾರದ ಬಗ್ಗೆ ಏನೇನು ತಿಳಿದಿದೆ ಎಂದು. ಹಾಗಾಗಿ ಇಲ್ಲಿಯೂ ಕೂಡ ಸೊಳ್ಳೆಗಳ ಬಗ್ಗೆ ನಮಗೇನು ತಿಳಿದಿದೆ ಎಂದು ಹುಡುಕಲು ಶುರು ಮಾಡಿದರು. ಅದರಲ್ಲಿ ತಿಳಿದು ಬಂದ ವಿಚಾರಗಳೆಂದರೆ, ಸೊಳ್ಳೆಗಳು ರಕ್ತವನ್ನು ಪ್ರಾಣಿಗಳಿಂದ ಹೀರಿಕೊಂಡು ಸೇವಿಸುತ್ತವೆ. ಜೊತೆಗೆ ಅವುಗಳು ಮನುಷ್ಯರನ್ನು ಅವನ ಬೆವರಿನ ವಾಸನೆಯಿಂದ ಕಂಡುಹಿಡಿಯುತ್ತವೆ ಎಂದು. ಉಳಿದ ಪ್ರಾಣಿಗಳಿಗಿಂತ ಮನುಷ್ಯನ ಮೇಲೆ ಕೂತು ರಕ್ತ ಹೀರುವುದೆಂದರೆ ಅವುಗಳಿಗೆ ಸುಲಭವಾದ್ದರಿಂದ ನಾವೆಂದರೆ ಇಷ್ಟ. ಆದರೆ ಅವುಗಳು ಹೀಗೆ ಬಂದು ಹೋದರೆ ಅಷ್ಟು ತೊಂದರೆ ಏನಿಲ್ಲ. ಅವುಗಳು ತರುವ ರೋಗಗಳಾದ ಡೆಂಗ್ಯೂ, ಮಲೇರಿಯಾ, ಹಳದಿ ಜ್ವರ ಇಂತಹ ಖಾಯಿಲೆಗಳದ್ದೇ ಭಯ. ಇಂತಹ ಖಾಯಿಲೆಗಳನ್ನು ತಡೆಯಬೇಕೆಂದರೆ, ಅವುಗಳು ಹೇಗೆ ಕಚ್ಚುತ್ತವೆ? ಏಕೆ ಕಚ್ಚುತ್ತವೆ? ಕಚ್ಚುವಾಗ ನಮ್ಮ ಚರ್ಮದ ಮೇಲೆ ಏನೆಲ್ಲಾ ನಡೆಯುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಅವುಗಳನ್ನು ತಡೆಯುವ ಉಪಾಯ ಸಿಗಬಹುದು. ಆ ವಿಚಾರದ ಹಾದಿಯಲ್ಲೇ ಹೊರಟ ಲೀಸಾ ಮತ್ತು ತಂಡದವರಿಗೆ ತಿಳಿದದ್ದು, ಸೊಳ್ಳೆಗಳು ಎಲ್ಲರನ್ನೂ ಒಂದೇ ರೀತಿಯಲ್ಲಿ ಕಚ್ಚುವುದಿಲ್ಲ. ಯಾರ ಬೆವರಿನ ರುಚಿ ಆ ಸೊಳ್ಳೆಗಳಿಗೆ ಹಿಡಿಸುತ್ತದೋ ಅವರನ್ನು ಹೆಚ್ಚು ಕಚ್ಚುತ್ತವೆ. ಅಂದರೆ ಸೊಳ್ಳೆಗಳು ಕಚ್ಚುವ ಮುನ್ನ ಮನುಷ್ಯನನ್ನು ಅವನ ಬೆವರಿನ ರುಚಿಯ ಆಧಾರದ ಮೇಲೆ ಕಚ್ಚಲು ಆರಿಸುತ್ತವೆ ಎಂದಾಯ್ತು. ಆದರೆ ಅವು ಯಾವುದನ್ನು ರುಚಿಸಿ ಹೋಗುತ್ತಿವೆ ಎಂಬುದು ತಿಳಿಯಲಿಲ್ಲ. ಹಾಗಾಗಿ ಅದನ್ನು ತಿಳಿಯಲು ಕೆಲವು ಪ್ರಯೋಗಗಳನ್ನು ಮಾಡಲಾಯಿತು.

ಮನುಷ್ಯನ ಬೆವರಿನಲ್ಲಿ ನೀರು, ಉಪ್ಪು ಹಾಗೂ ಅಮೈನೋ ಆಸಿಡ್ ಎಂದು ಕರೆಯುವ ವಸ್ತುಗಳಿರುತ್ತವೆ. ಇವುಗಳಲ್ಲಿ ಯಾವುದನ್ನು ಹುಡುಕಿಕೊಂಡು ಹೋಗುತ್ತಿವೆ ಎಂದು ತಿಳಿಯಲು, ಮೊದಲಿಗೆ ಒಂದು ವಸ್ತುವಿನ ಮೇಲೆ ಉಪ್ಪನ್ನು ಸವರಲಾಯಿತು, ಇನ್ನೊಂದು ವಸ್ತುವಿನ ಮೇಲೆ ಅಮೈನೋ ಆಸಿಡ್ ಅನ್ನು ಸವರಲಾಯಿತು. ಆಗ ಸೊಳ್ಳೆಗಳು ಉಪ್ಪು ಸವರಿದ ವಸ್ತುವಿನ ಬಳಿ ಹೋಗಲಿಲ್ಲ. ಹಾಗೆಂದು ಅಮೈನೋ ಆಸಿಡ್ ಬಳಿ ಹೋಯಿತೆಂದುಕೊಂಡಿರಾ, ಅಲ್ಲೂ ಇಲ್ಲ. ಇವೆರಡರ ಬಳಿಯೂ ಹೋಗಲಿಲ್ಲ. ಅರೇ… ಇದೇನಿದು? ಎಂದು ನಮ್ಮ ಹಾಗೆ ಅವರಿಗೂ ಅನ್ನಿಸಿತ್ತು. ಹಾಗಾಗಿ ಇನ್ನೊಂದು ಪ್ರಯೋಗ ಮಾಡಲು ಮುಂದಾದರು. ಈಗ ಹಲವರ ಬೆವರನ್ನು ಒಂದು ಜಾಗದಲ್ಲಿ ಇರಿಸಿ ಸೊಳ್ಳೆಗಳು ಯಾವ ಬೆವರಿನ ಮಾದರಿಯ ಬಳಿ ಹೋಗುತ್ತದೆಂದು ನೋಡಿದರು. ಅದರಲ್ಲಿ ಬೇರೆಲ್ಲಾ ಬೆವರಿನ ಮಾದರಿಗಳಿಗಿಂತ ಯಾರದೋ 2 ಬೆವರಿನ ಮಾದರಿಗಳ ಬಳಿಯೇ ಹೆಚ್ಚು ಸೊಳ್ಳೆಗಳು ಹೋದದ್ದು. ಇದರಿಂದ ತಿಳಿದ ಒಂದು ಸಾಮಾನ್ಯ ವಿಚಾರ ಎಂದರೆ ಸೊಳ್ಳೆಗಳು ಕೆಲವು ಬೆವರಿಗೇ ಹೆಚ್ಚು ಆಕರ್ಷಿತವಾಗುತ್ತಿವೆ ಎಂದು. ಆದರೆ ಏಕೆ ಹೀಗೆ? ಅದರಲ್ಲಿ ಮಾತ್ರ ಅಂಥದ್ದೇನಿದೆ? ಎಂಬ ಪ್ರಶ್ನೆಗಳು ಬಂದವು ಎಂದು ಕಾಣುತ್ತದೆ. ಅದಕ್ಕೆ ಪ್ರಯೋಗವನ್ನು ಇನ್ನೂ ಸೂಕ್ಷ್ಮವಾಗಿ ಹಾಗೂ ಆಳವಾಗಿ ಮಾಡತೊಡಗಿದರು.
ನಮ್ಮ ನಿಮ್ಮ ಬರೀ ಕಣ್ಣಿಗೆ ಕಾಣದ ಸೊಳ್ಳೆಗಳ ಉದ್ದನೆಯ ರಕ್ತ ಹೀರುವ ಕೊಳವೆಯ ತುದಿಯಲ್ಲಿ ಎರಡು ಸಣ್ಣ ತುಟಿಗಳ ಆಕಾರದ ಅಂಗ ಇದೆಯಂತೆ. ಅವುಗಳ ತುದಿಯಲ್ಲಿ ಸಣ್ಣ ಸಣ್ಣ ಕೂದಲುಗಳಿವೆಯಂತೆ. ಅದರ ಸಹಾಯದಿಂದ ಸೊಳ್ಳೆಗಳು ಅವುಗಳು ಕೂತ ಚರ್ಮದ ರುಚಿಯನ್ನು ಗ್ರಹಿಸುತ್ತದೆಯಂತೆ. ಈ ಗ್ರಹಿಕೆ ಸಿಹಿ ಪದಾರ್ಥಗಳಿದ್ದಾಗ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದವಂತೆ. ಹಾಗೆ ಕಹಿಯ ಪದಾರ್ಥವಿದ್ದಾಗ ಹೆಚ್ಚು ಕ್ರಿಯಾಶೀಲವಾಗಿ ಇರಲಿಲ್ಲವಂತೆ. ಅಂದರೆ ಸೊಳ್ಳೆಗಳು ಕಹಿಯಾದ ವಸ್ತುಗಳಿದ್ದರೆ ಹೆಚ್ಚು ಕಚ್ಚುವುದಿಲ್ಲ ಎಂದಾಯ್ತು. ಈ ವಿಚಾರ ಇಷ್ಟು ನಿಖರವಾಗಿ ಹಾಗೂ ವೈಜ್ಞಾನಿಕವಾಗಿ ಇದುವರೆಗೆ ಯಾರೂ ಕಂಡುಹಿದಿರಲಿಲ್ಲವಂತೆ. ನಮ್ಮ ಲೀಸಾ ಮತ್ತು ತಂಡದವರೇ ಮೊದಲು. ಇಂತಹ ವಿಚಾರ ತಿಳಿದ ಬಳಿಕ ಮುಂದಿನ ಹೆಜ್ಜೆಯೇ, ಯಾವ ಕಹಿ ವಸ್ತುವಿನಿಂದ ತಯಾರಿಸಿದ ಧರಿಸುವ ಬಟ್ಟೆ, ಆಯಿಂಟ್ ಮೆಂಟ್, ಸ್ಪ್ರೇ ಗಳನ್ನು ತಯಾರಿಸುವುದು ಎಂದು. ಅಲ್ಲವೇ? ವಿಜ್ಞಾನಿಗಳೂ ಸಹ ಅದೇ ಕೆಲಸದಲ್ಲಿದ್ದಾರೆ.

ನೋಡಿದಿರಾ ನಮಗೆ ಅಷ್ಟೇ ಅಲ್ಲ. ಕೀಟಗಳಿಗೂ ರುಚಿಯ ಆಯ್ಕೆಯಿದೆ. ಇಲ್ಲಿ ಸೊಳ್ಳೆಗಳು ಅವುಗಳು ಕಚ್ಚಲು ಬಯಸುವವರನ್ನು ರುಚಿಸಿ ಆರಿಸುತ್ತವೆಯಂತೆ. ಹಾಗೆ ನೋಡಿದರೆ ಬಹುಶಃ ಸೊಳ್ಳೆಗಳಾದರೂ ನಮ್ಮನ್ನು ಇಷ್ಟ ಪಡುತ್ತವೆ ಎಂದು ಸೊಳ್ಳೆಗಳಿಂದ ಹೆಚ್ಚು ಕಚ್ಚಿಸಿಕೊಳ್ಳುವವರು ಹೇಳಿಕೊಳ್ಳಬಹುದು. ಆದರೂ ಬೇರೆಯವರ ರುಚಿಗೆ ನಾವು ಒಗ್ಗುತ್ತೇವಾ ಎಂದು ಹುಡುಕುವುದಕ್ಕಿಂತ ನಮ್ಮ ವಿಷಯ-ವಿಚಾರಗಳ ರುಚಿ ಚೆನ್ನಾಗಿದ್ದರೆ ಬೇರೆಯವರು ರುಚಿಸಿ ಬರುತ್ತಾರೆ, ಎನ್ನುವುದರಲ್ಲಿ ಎರಡು ಮಾತಿಲ್ಲ.
Source: www.snexplores.org

ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.