ಬಾವಲಿ v/s ಜೀರುಂಡೆ

ಬಾವಲಿ v/s ಜೀರುಂಡೆ

“ಅಷ್ಟು ಬುದ್ಧಿ ಬೇಡ್ವಾ? ಕಾಲಿನ ಸುತ್ತಾ ನೋಡು ಹೆಂಗೆ ಬಿದ್ದದೆ ಹುಲ್ಲು”, “ಹೇ. . .  ಜರಗು ಆ ಕಡೆ!”, ಹೀಗೆ ಹಸುಗಳನ್ನು ನಾವು ನೀವು ಮಾತನಾಡುವ ಹಾಗೆ ನಮ್ಮ ಹಳ್ಳಿಯ ಜನ ಮಾತನಾಡುತ್ತಾರೆ, ಗೊತ್ತೇನು? ಇನ್ನೂ ಕೆಲವೊಮ್ಮೆ ಪದಗಳ ಬಳಕೆ ಇಲ್ಲದ ಹಾಗೆ ‘ಹ್ಮೂ ಬಾ… ಬಾ… ಬಾ…’ ‘ಅಚ್ಚ್… ಹೇಯ್’ ಹೀಗೆ ನಮ್ಮ ಭಾಷೆಯಲ್ಲಿ ಅರ್ಥವಿಲ್ಲದ ಪದಗಳನ್ನು ಬಳಸಿ ಸಹ ಮಾತನಾಡುವುದುಂಟು. ಆಡು-ದನ ಮೇಯಿಸಿದ್ದರೆ ಇದೆಲ್ಲಾ ಸರ್ವೇ ಸಾಮಾನ್ಯದ ಪದಗಳು. ಹೀಗೆ ನಮ್ಮ ಕಿವಿಗೆ ಕೇವಲ ಶಬ್ಧದಂತೆ ಕಂಡರೂ ಅದರದ್ದೇ ಭಾಷೆಯಲ್ಲಿ ಕೆಲವು ಶಬ್ಧಗಳಿಗೆ ತುಂಬಾ ಅರ್ಥಗಳಿರುತ್ತವೆ. ಉದಾಹರಣೆಗೆ, ಎಷ್ಟೋ ಪ್ರಾಣಿಗಳು ತಮ್ಮದೇ ಆದ ಶಬ್ಧ ಭಾಷೆಯಲ್ಲಿ ಮಾತನಾಡುತ್ತವೆ. ಅಷ್ಟೇ ಅಲ್ಲ ಬೇಟೆಯನ್ನೂ ಆಡುತ್ತವೆ. ಯೋಚಿಸಿದರೆ ನಿಮಗೂ ಕೆಲವು ಉದಾಹರಣೆಗಳು ಹೊಳೆಯಬಹುದು. ಆದರೆ ನಮ್ಮ ನಿಮ್ಮ ಕಿವಿಗೆ ಕೇಳದ ಶಬ್ಧದ ಸಹಾಯದಿಂದ ಬೇಟೆಯಾಡುವ ಜೀವಿಯಾವುದಾದರೂ ಗೊತ್ತಿದೆಯೇನು? ಹಾ… ಬಾವಲಿಯೇ! ನನಗೆ ತಿಳಿದ ಹಾಗೆ ಬಾವಲಿ ಒಂದೇ ಹಾರುವ ಸಸ್ತನಿ ತನ್ನ ಶ್ರವಣಾತೀತ ಶಬ್ಧ ಬಳಸಿ, ತನ್ನ ಆಹಾರದ ನಿರ್ದಿಷ್ಟ ಸ್ಥಳವನ್ನು ಹಾರುತ್ತಲೇ ಗುರುತಿಸಿ, ಏನೂ ಕಾಣದ ಕತ್ತಲಿನಲ್ಲಿ ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಜೀವಿ. ಹಾಗೆಂದ ಮಾತ್ರಕ್ಕೆ ಅವುಗಳಿಗೇನು ಸುಲಭವಾಗಿ ಬೇಟೆ ಸಿಗುವುದಿಲ್ಲ. ಏಕೆಂದರೆ ಅಂತಹ ಶ್ರವಣಾತೀತ ಶಬ್ದಕ್ಕೆ ತನ್ನ ಶ್ರವಣಾತೀತ ಶಬ್ಧದಿಂದ ಉತ್ತರ ನೀಡಿ ತನ್ನ ದಿಕ್ಕು ಬದಲಿಸುವಂತೆ ಮಾಡುವ ಎಷ್ಟೋ ಕೀಟಗಳಿವೆ. ಅವುಗಳಲ್ಲಿ ‘ಹುಲಿ ಪತಂಗ (tiger moth)’ ವಿಶೇಷ. ಯಾಕೆ ಗೊತ್ತೇನು? ಜೀವವಿಕಾಸದಲ್ಲಿ ಈ ಪತಂಗ ತಾನು ಬಿಡುವ ಶಬ್ಧದಿಂದ ತಾನು ನಿನಗೆ ವಿಷಕಾರಿ ತಿನ್ನಲು ಪ್ರಯತ್ನಿಸಬೇಡ ಎಂಬ ವಿಚಾರ ವಿನಿಮಯ ಮಾಡಿರುತ್ತದೆ. ಅದರ ಅನುಸಾರ ಈ ಹುಲಿ ಪತಂಗ ಶಬ್ಧ ಏನಾದರೂ ಕೇಳಿದರೆ ಬಾವಲಿಗಳು ಅವುಗಳ ತಂಟೆಗೇ ಹೋಗುವುದಿಲ್ಲ. ಇದರಿಂದ ಇಬ್ಬರೂ ಸುರಕ್ಷಿತ. ನೋಡಿ ಈ ಕೀಟ ಪ್ರಪಂಚ ಎಷ್ಟು ವಿಚಿತ್ರ ಹಾಗೂ ವಿಶೇಷ. ಇದು ನಮಗಾಗಲೇ ತಿಳಿದಿರುವ ವಿಚಾರ. ಇದಕ್ಕೆ ಮೀರಿದ ಹೊಸ ವಿಚಾರ ಹೇಳಲೇನು? ಹುಲಿ ಪತಂಗದ ಹಾಗೆ ‘ಹುಲಿ ಜೀರುಂಡೆ’ ಎಂಬ ಒಂದು ಕೀಟವಿದೆ. ಅದು ರಾತ್ರಿಯಲ್ಲಿ ತನ್ನನ್ನು ತಾನು ಬಾವಲಿಗೆ ಆಹಾರವಾಗುವುದರಿಂದ ತಪ್ಪಿಸಿಕೊಳ್ಳಲು ಏನು ಮಾಡುತ್ತದೆ ಗೊತ್ತೇನು? ಊಹಿಸಿ ಒಮ್ಮೆ… ಈ ಜೀರುಂಡೆ ಕೇವಲ ಶಬ್ಧವನ್ನು ಉತ್ಪತ್ತಿ ಮಾಡದೆ ಹುಲಿ ಪತಂಗ ಮಾಡುವ ಶಬ್ದಕ್ಕೆ ಹೋಲುವ ಹಾಗೆ ಶಬ್ಧ ಮಾಡಿ ತಾನೂ ಸಹ ಹುಲಿ ಪತಂಗವೇ ಎಂದು ಸುಳ್ಳು ಹೇಳಿ ಬಾವಲಿಗಳ ಬಾಯಿಗೆ ಆಹಾರವಾಗುವುದರಿಂದ ತಪ್ಪಿಸಿಕೊಳ್ಳುತ್ತವೆ.

ಹುಲಿ ಜೀರುಂಡೆಗಳು ಕೀಟ ಜಗತ್ತಿನ ಭಯಾನಕ ಬೇಟೆಗಾರರು, ತಮ್ಮ ಅಗಲವಾದ ಹಾಗೂ ಗಟ್ಟಿಯಾದ ಬಾಯಿಯಿಂದ ಮಿಂಚಿನ ವೇಗದಲ್ಲಿ ಬೇಟೆಯಾಡಿದ ಇತರ ಕೀಟಗಳನ್ನು ಸಲೀಸಾಗಿ ತಿನ್ನಬಲ್ಲವು. ಆದರೆ ಅವುಗಳೂ ಸಹ ಬೇರೆಯ ಪ್ರಾಣಿಗಳಿಗೆ ಹೆಚ್ಚಾಗಿ ನಿಶಾಚರಿಗಳಾದ ಬಾವಲಿಗಳಿಗೆ ಆಹಾರವಾಗಿವೆ, ಅದರಿಂದ ತಪ್ಪಿಸಿಕೊಳ್ಳಲು ಇವು ಮಾಡಿರುವ ಉಪಾಯವೇ ಬೇರೆ ಮತ್ತು ವಿಶೇಷ. ಬಾವಲಿಗಳು ಬೇಟೆಯಾಡುವುದು ತಮ್ಮ ಶ್ರವಣಾತೀತ ಶಬ್ಧದ ಸಹಾಯದಿಂದ. ಈ ಶಬ್ಧ ಹೆಸರಿನಲ್ಲಿರುವಂತೆ ಮನುಷ್ಯನ ಆಲಿಕೆಗೆ ಕೇಳಿಸುವುದಿಲ್ಲ. ಇದನ್ನು ಆಲಿಸಬಲ್ಲ ಕೆಲವು ಕೀಟಗಳು ಬಾವಲಿಯಿಂದ ಬರುವ ಈ ತರಂಗಗಳನ್ನು ಆಲಿಸಿದ ತಕ್ಷಣ ತಮ್ಮ ಜೀವ ಉಳಿಸಿಕೊಳ್ಳಲು ಪಲಾಯಿಸುತ್ತವೆ. ಆದರೆ ಕೆಲವು ಕೀಟಗಳು ಆ ಬಾವಲಿಯ ತರಂಗಗಳನ್ನು ಹಾಳುಮಾಡಲು ತಮ್ಮದೇ ಶ್ರವಣಾತೀತ ಶಬ್ದಗಳನ್ನು ಮಾಡಿ ಬಾವಲಿಗಳ ದಾರಿ ತಪ್ಪಿಸುತ್ತವೆ. ಆದರೆ ಈ ಹುಲಿ ಜೀರುಂಡೆಯಂತಹ ಕೆಲವೇ ಕೆಲವು ಕೀಟಗಳು ಮಾತ್ರ ಬಾವಲಿಗಳು ಸಹ ಹೆದರುವ ವಿಷಕಾರಿ ಪತಂಗಗಳಲ್ಲಿ ಒಂದಾದ ಹುಲಿ ಪತಂಗ ಹೊರಸೂಸುವ ತರಂಗಗಳಿಗೆ ಹೋಲುವ ತರಂಗವನ್ನು ಬಿಟ್ಟು ತಾನೂ ಸಹ ವಿಷಕಾರಿ ಪತಂಗ ಎನ್ನುವಂತೆ ನಂಬಿಸಿ, ಹೆದರಿಸಿ ತನ್ನನ್ನು ತಿನ್ನಲು ಬರುವ ಬಾವಲಿಗಳನ್ನೇ ಓಡಿಸುತ್ತವಂತೆ.

ಇದನ್ನು ಪರೀಕ್ಷಿಸಲು ವಿಜ್ಞಾನಿಗಳ ತಂಡ ದಕ್ಷಿಣ ಆರಿಸೊನಾದಿಂದ 19 ವಿವಿಧ ಪ್ರಭೇದದ ಹುಲಿ ಜೀರುಂಡೆಗಳನ್ನು ತಂದರು. ಅವುಗಳಲ್ಲಿ 12 ಬೆಳಗಿನ ಜಾವದಲ್ಲಿ ಸಕ್ರಿಯವಾಗಿದ್ದವು. ಉಳಿದ 7 ಪ್ರಭೇದದ ಜೀರುಂಡೆಗಳು ರಾತ್ರಿಯಲ್ಲಿ ಸಕ್ರಿಯವಾಗಿದ್ದವು. ಈ ರಾತ್ರಿಯಲ್ಲಿ ಸಕ್ರಿಯವಾಗಿರುವ ಕೀಟ ಜೀರುಂಡೆಯನ್ನು ಒಂದು ಕಂಬಿಗೆ ಸಿಕ್ಕಿಸಿ ಅದಕ್ಕೆ ಬಾವಲಿ ಮಾಡುವ ಶಬ್ಧದ ಹಾಗೆ ಅದರ ದಿಕ್ಕಿಗೆ ಶಬ್ಧ ಹೊರಡಿಸಲಾಯಿತು. ಅದನ್ನು ಗ್ರಹಿಸಿದ ತಕ್ಷಣ ಈ ಜೀರುಂಡೆ, ತಾನು ಸಾಮಾನ್ಯವಾಗಿ ಹಾರುವಾಗ ತನ್ನ ಹಾರುವ ರೆಕ್ಕೆಗಳನ್ನು ಮುಚ್ಚುವ ಕವಚವಾದ ‘ಫೋರ್ ವಿಂಗ್ಸ್’ ಎಂದು ಕರೆಯಲ್ಪಡುವ ಕವಚವನ್ನು ತೆಗೆದು ತನ್ನ ಹಾರುವ ರೆಕ್ಕೆಗಳಾದ ‘ಹೈಂಡ್ ವಿಂಗ್ಸ್’ ಅನ್ನು ಹೊರಗೆ ತೆಗೆದು ಹಾರುತ್ತವೆ. ಈ ಬಾವಲಿಗಳ ತರಂಗವನ್ನು ಆಲಿಸಿದ ತಕ್ಷಣ ಅದರಲ್ಲಿ ಬದಲಾವಣೆಯಾಯಿತು. ಅದೇನೆಂದರೆ ಹಾರುವ ಸಮಯದಲ್ಲಿ ಮುಂಭಾಗದ ರೆಕ್ಕೆಗಳು ಹಿಂಭಾಗದ ರೆಕ್ಕೆಗಳಿಗೆ ತೊಂದರೆ ಆಗಬಾರದು ಎಂದು ತಾಗದ ಹಾಗೆ ಸ್ವಲ್ಪ ದೂರದಲ್ಲಿರುತ್ತವೆ. ಆದರೆ ಈಗ ಆ ಫೋರ್ ವಿಂಗ್ಸ್ ಗಳು ಹೈಂಡ್ ವಿಂಗ್ಸ್ ಗಳಿಗೆ ತಾಗುವ ಹಾಗೆ ಹತ್ತಿರ ತಂದು ಅದರಿಂದ ಶ್ರವಣಾತೀತ ಶಬ್ದಗಳನ್ನು ಉತ್ಪತ್ತಿ ಮಾಡುತ್ತಿದ್ದವು.

ಇದನ್ನು ಆಲಿಸಿ ಪರೀಕ್ಷಿಸಲು ಮುಂದಾದ ವಿಜ್ಞಾನಿಗಳಿಗೆ ಅಚ್ಚರಿ ಕಾದಿತ್ತು. ಈ ತರಂಗಗಳನ್ನು ಆಲಿಸಿ, ಯೋಚಿಸಿ, ಊಹಿಸಿ ಬಾವಲಿಗಳೂ ಹೆದರುವ ಹುಲಿ ಪತಂಗಗಳ ತರಂಗಗಳಿಗೆ ಹೋಲಿಸಿದಾಗ ಅದು ಸರಿಯಾಗಿ ಹೋಲುತ್ತಿತ್ತು. ಇದರಿಂದ ಅವರ ತಂಡಕ್ಕೆ ಖಾತ್ರಿಯಾದದ್ದೇನೆಂದರೆ ಈ ಹುಲಿ ಜೀರುಂಡೆಗಳು ತಮ್ಮನ್ನು ತಾವು ಬಾವಲಿಗಳ ಆಹಾರವಾಗುವುದನ್ನು ತಪ್ಪಿಸಲು ಬಾವಲಿಗಳು ಹೆದರುವ ಹುಲಿ ಪತಂಗಗಳ ಹಾಗೆ ಶಬ್ಧ ಮಾಡಿ ಬಾವಲಿಗಳನ್ನೂ ಓಡಿಸುತ್ತವೆ ಎಂದು!

     ಬಾವಲಿಗಳ ಹಾವಳಿಯನ್ನು ಮೀರಿ ನೀರುಂಡೆಗಳಂತೆ ತಪ್ಪಿಸಿಕೊಳ್ಳುವ ಈ ಜೀರುಂಡೆಗಳ ಉಪಾಯ ಮೆಚ್ಚುವಂಥದ್ದು. ನಾವು ಪ್ರತಿ ದಿನ ಮಾಡುವ ಹಾಗೂ ಸದಾ ಕೇಳುವ ಶಬ್ಧವೇ ಕೆಲವು ಜೀವಿಗಳ ಜೀವ ಉಳಿಸುವ ಮಂತ್ರದಂಡ. ಇದು ಕೇವಲ ಒಂದು ಜೀವಿಯ ವಿಶೇಷ ವಿಸ್ಮಯ ವಿಕಸನದ ವಿಚಾರ. ಇಂತಹ ಹತ್ತು ಹದಿನಾರು ನಮ್ಮ ಕಣ್ಣ ಮುಂದೆಯೇ ಜರುಗುತ್ತಿದ್ದರೂ ಕಣ್ಣುಗಳಲ್ಲಿ ಆಲಿಸುವ ಪರಿವೀಕ್ಷಣೆಯ ಮೆದುಳಿನ ಪಕ್ವತೆ ಅರಿಯುವ ಪ್ರಯತ್ನವಿದೆಯೇ…

Source: www.snexplores.org

ಲೇಖನ: ಜೈಕುಮಾರ್ ಆರ್.
          ಬೆಂಗಳೂರು ನಗರ ಜಿಲ್ಲೆ

Spread the love
error: Content is protected.