ಜೇಡಗಳ ಜಾಡಿನಲ್ಲಿ

ಜೇಡಗಳ ಜಾಡಿನಲ್ಲಿ

    © ಭಗವತಿ ಬಿ. ಎಂ.

. . . ಹಿಂದಿನ ಸಂಚಿಕೆಯಿಂದ

ಹಿಂದಿನ ಸಂಚಿಕೆಯಲ್ಲಿ ಜೇಡಗಳ ಬಗೆಗಿನ ನನ್ನ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದೆ. ಈ ಸಂಚಿಕೆಯಲ್ಲಿ ಇನ್ನೂ ಕೆಲವು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಕೆಲವು ಜೇಡಗಳನ್ನು ಕಂಡರೆ ಸಾಮಾನ್ಯವಾಗಿ ಜನರು ಭಯಪಡುತ್ತಾರೆ. ಒಮ್ಮೆ ನಮ್ಮ ಚಿಕ್ಕಪ್ಪನ ಮಗನಾದ ಪರಮೇಶಿಗೆ ಹೂವಿನ ತೋಟದಲ್ಲಿ ನೆಲಗಿರಬ ಕಚ್ಚಿದ್ದರಿಂದ ಅವನಿಗೆ ನಾಟಿ ಔಷದವನ್ನು ಕೊಡಿಸಿದ್ದರು. ಇದೊಂದು ಜೇಡದ ಗುಂಪಿಗೆ ಸೇರಿದ್ದು, ನೆಲದಲ್ಲಿ ರಂಧ್ರ ಮಾಡಿಕೊಂಡು ರಕ್ಷಣೆಗಾಗಿ ಮೇಲೊಂದು ಮಣ್ಣಿನ ಮುಚ್ಚಳ ಹಾಕಿಕೊಂಡು ಅವಿತುಕೊಂಡಿರುತ್ತದೆ. ಇವುಗಳು ತಮ್ಮ ಆಹಾರ ಜೀವಿಗಳು ಹತ್ತಿರ ಬಂದರೆ ಅವುಗಳ ದೇಹಕ್ಕೆ ಅನಸ್ತೀಶಿಯಾ ರೀತಿ ಕೆಲಸ ಮಾಡುವ ರಾಸಾಯನಿಕವನ್ನು ಚುಚ್ಚಿ ಪ್ರಜ್ಞೆ ತಪ್ಪಿಸುತ್ತವೆ. ಈ ರಾಸಾಯನಿಕವು ಮಾನವರನ್ನು ಪ್ರಜ್ಞೆ ತಪ್ಪಿಸುವುದಕ್ಕಾಗಲಿ, ಸಾವನ್ನು ತರುವಷ್ಟಾಗಲಿ ಪ್ರಭಾವಿತವಿಲ್ಲ. ಅದು ಕಚ್ಚಿದ ಭಾಗದಲ್ಲಿ ಸ್ವಲ್ಪ ಉರಿ ಬರುವ ಕಾರಣ ಇವುಗಳು ವಿಷ ಎಂದು ಭಾವಿಸುತ್ತಾರೆ. ಜೇಡಗಳು ಕಚ್ಚಿದರೆ ಸಾವನ್ನಪ್ಪುತ್ತಾರೆ ಎಂದು ಕೆಲವರು ನಂಬಿದ್ದಾರೆ. ನಮ್ಮ ದೇಶದಲ್ಲಿ ಕಂಡು ಬರುವ ಜೇಡಗಳು ಕಚ್ಚಿದರೆ ಸಾವು ಸಂಭವಿಸುವುದಿಲ್ಲ. ಕಚ್ಚಿದ ಭಾಗದಲ್ಲಿ ಸ್ವಲ್ಪ ಉರಿ ಉಂಟಾಗುತ್ತದೆ, ಕೆಲವೊಮ್ಮೆ ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ಏರುಪೇರಾಗುತ್ತದೆ (ಅದು ಸಹ ತುಂಬಾ ವಿರಳ).  ಜೇಡಗಳು ತಮ್ಮ ಆಹಾರಕ್ಕಾಗಿ ಕೀಟಗಳನ್ನು ಪ್ರಜ್ಞೆ ತಪ್ಪಿಸುವಷ್ಟು ಮಾತ್ರ ವಿಷವನ್ನು ಹೊಂದಿರುತ್ತವೆ. ಆದರೆ ಜನರು ನಿರುಪದ್ರವಿಗಳಾದ ಈ ಜೇಡಗಳನ್ನು ವಿಷಕಾರಿ ಜೀವಿಗಳು ಎಂದು ಸಾಯಿಸುವುದನ್ನು ಬಿಟ್ಟಿಲ್ಲ.

ಕೆಲವು ದಿನಗಳ ಹಿಂದೆ ನನ್ನ ಸ್ಕೂಟಿಯಲ್ಲಿ ಜೇಡವೊಂದು ಬಲೆಯನ್ನು ಹೆಣೆದು ತನ್ನ ಆಹಾರಕ್ಕಾಗಿ ಮಿಕಗಳು ಸಿಗಬಹುದೆಂದು ಕಾಯುತ್ತಾ ಕುಳಿತಿತ್ತು.  ನಾನು ಬೇರೆ ಊರಿಗೆ ಹೋಗಬೇಕಿದ್ದ ಕಾರಣ ‘ಏನು ಮಾಡುವುದು ಈಗ?’  ಎಂದು ಯೋಚಿಸುತ್ತಾ ಜೇಡದ ಬಲೆಯನ್ನು ತೆಗೆಯಲು ಮನಸ್ಸಿಲ್ಲದೆ ಮಡದಿ ಯಶೋಧಳಿಗೆ ತೋರಿಸಿದೆ. ನನ್ನ ಕೈಯಾರೆ ಬಲೆಯನ್ನು ಕೀಳುವುದು ಬೇಡ ಏನೂ ತೊಂದರೆ ಇಲ್ಲ ಎಂದೆನಿಸಿ ಗಾಡಿಯನ್ನು ಚಾಲು ಮಾಡಿ ಮುಂದಕ್ಕೆ ಚಲಿಸಿಯೇ ಬಿಟ್ಟೆ. ಮುಂದೆ ಸಾಗುತ್ತಾ ಸಾಗುತ್ತಾ ಅದರ ಕಡೆಗಿನ ಗಮನವೇ ಮರೆತು ಹೋಯಿತು. ಕೆಲಸವೆಲ್ಲವನ್ನು ಮುಗಿಸಿ ಸಂಜೆ ನಾನು ಊರಿಂದ ವಾಪಸ್ ಮನೆಗೆ ಬಂದರೂ ತನ್ನ ಬಲೆಯೊಂದಿಗೆ ಜೇಡವು ಅದೇ ಸ್ಥಳದಲ್ಲೇ ವಿರಮಿಸುತ್ತಿತ್ತು. 10 ಕಿ. ಮೀ ನಮ್ಮೊಂದಿಗೆ ಅದು ಸಹ ಯಾವುದೇ ಖರ್ಚಿಲ್ಲದೆ ಊರನ್ನು ಸುತ್ತಿಕೊಂಡು ಬಂದಿತ್ತು! ಅಷ್ಟು ವೇಗವಾಗಿ ಚಲಿಸಿದರೂ ಜೇಡ ಅಲ್ಲಿಂದ ಕದಲದೆ ಇದ್ದದ್ದನ್ನು ಕಂಡು ಈ ವಿಸ್ಮಯ ಜೀವಿಗಳ ಬಗೆಗಿನ ಕುತೂಹಲ ಇಮ್ಮಡಿಗೊಂಡಿತು.  ಹಿಂದೊಮ್ಮೆ ಪರಿಸರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಸಾಲಿಗ ತಂಡದವರು ಪ್ರಕಟಿಸಿದ್ದ “ಹಿತ್ತಲ ಜೇಡಗಳು” ಪುಸ್ತಕವನ್ನು ತಂದಿದ್ದೆ. ಹೋದವನೇ ಜೇಡಗಳ ಬಗ್ಗೆ ಇನ್ನೂ ವಿವರವಾಗಿ ಓದಲು ಶುರುಮಾಡಿದೆ. ಬಹುತೇಕ ಚಿತ್ರಗಳನ್ನು ಒಳಗೊಂಡಿದ್ದ ಪುಸ್ತಕದ ಪುಟಗಳನ್ನು ಸರಸರ ತಿರುವಿ ಹಾಕಲು ಪ್ರಾರಂಭಿಸಿದೆ. ಇದರಿಂದ ಸ್ವಲ್ಪಮಟ್ಟಿಗಿನ ಮಾಹಿತಿ ಲಭ್ಯವಾಯಿತು.

    © ಗುರುಪ್ರಸಾದ್ ಕೆ. ಆರ್.

 ಸಕಲ ಜೀವರಾಶಿಗಳ ನಡುವೆ ಜೇಡಗಳೂ ಸಹ ಬದುಕಲು ವಿಶಿಷ್ಟವಾದ ಶಕ್ತಿ-ಸಾಮರ್ಥ್ಯವನ್ನು ಪ್ರಕೃತಿಯು ವರದಾನವಾಗಿ ನೀಡಿದೆ. ಜೇಡಗಳ ಅತಿ ಮುಖ್ಯ ಕಾಯಕವೆಂದರೆ ಬಲೆಯನ್ನು ತೆಳುವಾದ ನೂಲಿನಿಂದ ನೇಯುವುದು. ಕೆಲ ಸಮಯದಲ್ಲಿ ಬಲೆಯು ನಾಶವಾದರೂ ಕೆಲವೇ ನಿಮಿಷಗಳಲ್ಲಿ ಮತ್ತೆ ಬಲೆ ನಿರ್ಮಾಣ ಮಾಡಿಬಿಡುತ್ತವೆ. ಹಕ್ಕಿಗಳು ವಿಮಾನ ಸಂಶೋಧನೆಗೆ ಸ್ಪೂರ್ತಿಯಾದರೆ, ಬಟ್ಟೆಯನ್ನು ನೇಯ್ಗೆ ಮಾಡಲು ಮತ್ತು ಮಾನವ ಬಳಕೆಯ ಬಲೆಯನ್ನು ನಿರ್ಮಿಸಲು ಜೇಡಗಳೇ ಸ್ಪೂರ್ತಿಯಿದ್ದಿರಬೇಕು. ಹೊಟ್ಟೆಯಿಂದ ರೇಷ್ಮೆಯಂತಹ ದಾರವನ್ನು ಸ್ರವಿಸುವ ಮೂಲಕ ಬಲೆ ನಿರ್ಮಾಣಕ್ಕೆ ಶ್ರಮಿಸುತ್ತವೆ. ಹೊಟ್ಟೆಯ ಭಾಗದ ಹಿಂದಿನ ತುದಿಯಿಂದ ಜೇಡವು ತನ್ನ ಆರು ಎಳೆಯನ್ನು ಬಿಟ್ಟು ಕಣ್ಣಿಗೆ ಆಕರ್ಷಿಸುವಂತೆ ಬಲೆಯನ್ನು ನೇಯುತ್ತದೆ. ಈ ಬಲೆಯೇ ಅನೇಕ ಕೀಟಗಳ ಸಾವಿಗೆ ಕಾರಣವಾಗುತ್ತದೆ. ಪ್ರತಿದಿನವು ಜೇಡಗಳು ತನ್ನ ತೂಕದ ಮೂರು ಪಟ್ಟು ಆಹಾರ ತಿಂದು ಹೆಚ್ಚುವರಿಯಾಗಿ ಬಲೆಯಲ್ಲಿ ಇಟ್ಟುಕೊಳ್ಳುತ್ತವೆ. ಜಗತ್ತಿನಲ್ಲಿ ಸುಮಾರು 113 ಜೇಡ ಕುಟುಂಬಗಳಲ್ಲಿ 45,700 ಜೇಡ ಪ್ರಭೇದಗಳನ್ನು ಪತ್ತೆಹಚ್ಚಲಾಗಿದೆ. ಜೇಡಗಳು ಸಂದಿಪದಿ ವಂಶದ (Arthropoda) ನೆಲವಾಸಿ ವರ್ಗದ (Arachnida) ನೇಕಾರ ಗಣದ (Araneae) ಸದಸ್ಯ. ನಾನು ನಮ್ಮ ಪ್ರದೇಶದಲ್ಲಿ ದಸ್ಕತ್ ಜೇಡ (Signature spider), ಏಡಿ ಜೇಡ (Crab spider), ಡೇರೆ ಜೇಡ (Tent-web spider), ಮುಳ್ಳು ಜೇಡ (Spiny orb weaver), ಚುಕ್ಕೆ ಜೇಡ (Spotted orb weaver), ತೋಳ ಜೇಡ (Wolf spider), ಪಟ್ಟಿ-ಲಿಂಕ್ಸ್ ಜೇಡ (Striped Lynx spider), ಹಸಿರು-ಲಿಂಕ್ಸ್ ಜೇಡ (Green Lynx spider), ಚಾವಣಿ ಜೇಡ (Cellar Spider), ಹಾರುವ ಜೇಡ (Jumping spider), ಬೇಟೆಗಾರ ಜೇಡ (Common Huntman spider) ಗಳನ್ನು ನೋಡಿದ್ದೇನೆ. ಜೇಡಗಳು ಎಂಟು ಕಾಲುಗಳಿಂದ ಕೂಡಿರುತ್ತವೆ. ಜೇಡಗಳಿಗೆ ಎಂಟು ಕಣ್ಣುಗಳಿದ್ದು, ಆರು, ನಾಲ್ಕು, ಎರಡು ಮತ್ತು ಕಣ್ಣೇ ಇಲ್ಲದ ಜೇಡಗಳೂ ಸಹ ಇವೆ. ಕೀಟ ಪ್ರಪಂಚದಲ್ಲಿ ಕೀಟಗಳಿಗೆ ದೇಹವು ಮೂರು ಭಾಗಗಳಾಗಿ ವಿಭಜನೆಯಾಗಿದ್ದರೆ ಜೇಡಗಳಲ್ಲಿ ಎರಡೇ ಭಾಗಗಳು! ತಲೆ ಮತ್ತು ಎದೆ ಜೊತೆ ಸೇರಿದ ಜೇಡ ದೇಹದ ಮುಂಭಾಗಕ್ಕೆ ಸೆಫಲೋಥೋರಾಕ್ಸ್ ಎಂದು ಹೆಸರಿದೆ. ಇವುಗಳಿಗೆ ಮೂಳೆಗಳು ಮತ್ತು ಆಂತರಿಕ ಅಸ್ಥಿ ಪಂಜರ ಇರುವುದಿಲ್ಲ. ಜೇಡಗಳು ಪರ ಭಕ್ಷಕಗಳಾಗಿದ್ದು, ವೈವಿಧ್ಯಮಯ ಜೀವಿಗಳನ್ನು ಸೇವಿಸುತ್ತವೆ. ಒಂದು ಅಂದಾಜಿನ ಪ್ರಕಾರ ಗಿಡ-ಮರಗಳಿಂದ ಕೂಡಿರುವ ಒಂದು ಎಕರೆ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜೇಡಗಳಿರುತ್ತವೆ. ವಿಶ್ವದಲ್ಲಿನ ಜೇಡಗಳು 400 ರಿಂದ 800 ಮಿಲಿಯನ್ನಷ್ಟು ಪ್ರಮಾಣದ ಕೀಟಗಳನ್ನು ಕೊಂದು ತಿನ್ನುತ್ತವೆ. ಒಂದೇ ವರ್ಷಕ್ಕೆ ಇಷ್ಟೊಂದು ಬೃಹತ್ ಗಾತ್ರದ ಕೀಟಗಳನ್ನು ನಿಯಂತ್ರಿಸಲು ಮಾನವರು ಕೀಟನಾಶಕಗಳೇನನ್ನಾದರು ಬಳಸಿದರೆ ಅದೆಷ್ಟು ಲೀಟರ್ ಕೀಟನಾಶಕಗಳನ್ನು ಸುರಿಯಬೇಕೋ? ಊಹಿಸಲು ಅಸಾಧ್ಯ. ಎಲ್ಲಾ ಪ್ರಭೇದದ ಜೇಡಗಳು ಒಂದೇ ರೀತಿಯ ಜೀವಿತಾವಧಿಯನ್ನು ಹೊಂದಿಲ್ಲ. ಪ್ರಭೇದಗಳಿಗೆ ಅನುಗುಣವಾಗಿ ಕೆಲವು ತಿಂಗಳುಗಳಿಂದ ಗರಿಷ್ಠ ಆರು ವರ್ಷಗಳವರೆಗೆ ಜೀವಿತಾವಧಿ ಹೊಂದಿರುತ್ತವೆ.

ಜೇಡಗಳು ಅವುಗಳ ಬಾಯಿಯ ಮುಂದೆ ಜೋಡಿಯಾದ ಒಂದು ಜೊತೆ ಕೋರೆ ಹಲ್ಲುಗಳನ್ನು ಹೊಂದಿರುತ್ತವೆ. ಇವು ಬೇಟೆಗೆ ಬಲಿಯಾಗುವ ಜೀವಿಗಳ ದೇಹಕ್ಕೆ ವಿಷವನ್ನು ಚುಚ್ಚುವುದಕ್ಕೆ ಹೈಪೋಡರ್ಮಿಕ್ ಸೂಜಿಗಳಂತಹ ರಚನೆಯನ್ನು ಒಳಗೊಂಡಿರುತ್ತದೆ. ನೂಲಿನಿಂದ ನೇಯ್ಗೆ ಮಾಡಿದ ಬಲೆಯು ಕೀಟಗಳನ್ನು ಸೆರೆ ಹಿಡಿಯುವುದಕ್ಕೆ, ಮೊಟ್ಟೆ ಇಡಲು ಗೂಡು ನಿರ್ಮಿಸುವುದಕ್ಕೆ, ಬೇಟೆಯಾದ ಜೀವಿಗಳನ್ನು ಸುತ್ತುವರೆಯುವುದಕ್ಕೆ ಸಹಾಯಕವಾಗಿದೆ. ಹೆಚ್ಚಿನ ಜೇಡಗಳು ಮನುಷ್ಯರಿಗೆ ಹಾನಿಕಾರಕವಲ್ಲ ಮತ್ತು ಅವು ಆತ್ಮರಕ್ಷಣೆಗಾಗಿ ಮಾತ್ರ ಕಚ್ಚುತ್ತವೆ. ಅವುಗಳಲ್ಲಿ ಕೆಲವು ಸೊಳ್ಳೆ ಕಡಿತ ಅಥವಾ ಜೇನು ನೊಣ ಕಡಿತಕ್ಕಿಂತ ಸ್ವಲ್ಪ ಹೆಚ್ಚಿನ ಪರಿಣಾಮವನ್ನು ಉಂಟುಮಾಡುತ್ತವೆ ಮತ್ತು ಬೆರಳೆಣಿಕೆಯಷ್ಟು ಪ್ರಭೇದಗಳು ಮಾತ್ರ ಮನುಷ್ಯರಿಗೆ ಅಪಾಯಕಾರಿ.

© ಗುರುಪ್ರಸಾದ್ ಕೆ. ಆರ್.

ವಿಭಿನ್ನ ಜೇಡಗಳು ವಿಭಿನ್ನ ಬೇಟೆಯ ತಂತ್ರಗಳನ್ನು ಬಳಸುತ್ತವೆ. ಕೆಲವು ಪ್ರಭೇದಗಳು ಹಾರುವ ಕೀಟಗಳನ್ನು ಬಲೆಗೆ ಬೀಳಿಸಲು ಸಂಕೀರ್ಣವಾದ ಜಾಲಗಳನ್ನು ನಿರ್ಮಿಸುತ್ತವೆ. ತೋಳ ಜೇಡಗಳು ನೆಲದ ಮೇಲೆ ತಮ್ಮ ಬೇಟೆಯನ್ನು ಹುಡುಕುತ್ತವೆ. ಜಿಗಿಯುವ ಜೇಡಗಳು ಬೆಕ್ಕುಗಳಂತೆ ಬೇಟೆಯ ಜೀವಿಗಳ ಮೇಲೆ ಜಿಗಿಯುತ್ತವೆ. ಏಡಿ ಜೇಡಗಳು ಹೂಗಳಿಗೆ ಆಕರ್ಷಿತವಾಗಿ ಬರುವ ಕೀಟಗಳನ್ನು ಹಿಡಿಯಲು ಹೂವುಗಳ ಒಳಗೆ ಅಡಗಿಕೊಳ್ಳುತ್ತವೆ. ಮೀನುಗಾರಿಕೆ ಜೇಡಗಳು ನೀರಿನ ಸಮೀಪ ಧಾವಿಸಿ ಸಣ್ಣ ಮೀನು ಮತ್ತು ಗೊದಮೊಟ್ಟೆಗಳನ್ನು ಹಿಡಿಯುತ್ತವೆ. ಜೇಡಗಳು ದ್ರವ ಆಹಾರವನ್ನು ಮಾತ್ರ ಸೇವಿಸಬಹುದು. ಕೆಲವು ಜೇಡಗಳು ತಮ್ಮ ಮಧ್ಯದ ಕರುಳಿನಿಂದ ಜೀರ್ಣಕಾರಿ ಕಿಣ್ವಗಳನ್ನು ಬೇಟೆಗಾಗಿ ಪಂಪ್ ಮಾಡುತ್ತವೆ ಮತ್ತು ನಂತರ ಬಲಿಯಾದ ಕೀಟಗಳ ದ್ರವ್ಯಾಂಶವನ್ನು ಕರುಳಿನೊಳಗೆ ಹೀರಿಕೊಳ್ಳುತ್ತವೆ. ಬಲಿಯಾದ ಕೀಟದ ಖಾಲಿ ಅಸ್ಥಿಪಂಜರವನ್ನು ಮಾತ್ರ ಹೊರಗಡೆ ಬಿಡುತ್ತವೆ. ಇತರೆ ಜೇಡಗಳು ಚೆಲಿಸೆರಾವನ್ನು ಬಳಸಿಕೊಂಡು ಬೇಟೆಯಾದ ಕೀಟವನ್ನು ಜೀರ್ಣಕಾರಿ ಕಿಣ್ವಗಳೊಂದಿಗೆ ಬೆರೆಸುವಾಗ ಪುಡಿಮಾಡಿ ನಂತರ ದ್ರವೀಕೃತ ಅಂಶಗಳನ್ನು ಹೀರುತ್ತವೆ.

    © ಭಗವತಿ ಬಿ. ಎಂ.

 ಹೆಚ್ಚಿನ ಪ್ರಭೇದಗಳಲ್ಲಿ ಗಂಡು ಜೇಡಗಳು ಸಾಮಾನ್ಯವಾಗಿ ಹೆಣ್ಣು ಜೇಡಗಳಿಗಿಂತ ಚಿಕ್ಕದಾಗಿರುತ್ತವೆ. ಗಂಡು ಜೇಡವು ನಾನು ಮತ್ತು ನೀನು ಒಂದೇ ಪ್ರಭೇದದ ಜೇಡ ಎಂದು ಹೆಣ್ಣಿಗೆ ಸಂಕೇತಿಸಬೇಕು. ಗಂಡು ಜೇಡವು ನೃತ್ಯ, ಸ್ಟ್ರಮ್ಮಿಂಗ್, ಆಹಾರವನ್ನು ಉಡುಗೊರೆಯಾಗಿ ನೀಡುವಂತಹ ವಿಶಿಷ್ಟವಾದ ಪ್ರಣಯದ ಆಚರಣೆಗಳ ಮೂಲಕ ತನ್ನ ಸಂಯೋಗದ ಉದ್ದೇಶವನ್ನು ಸೂಚಿಸುತ್ತದೆ. ಹೆಣ್ಣು ಜೇಡವು ಗಂಡಿನ ಉದ್ದೇಶವನ್ನು ಗುರುತಿಸಿದ ನಂತರ, ಇದು ಗಂಡಿಗೆ ತಾನು ಗ್ರಹಣಶೀಲಳು ಎಂದು ಸಂಕೇತಿಸುವ ಮೂಲಕ ತನ್ನನ್ನು ತಾನು ಸಂಯೋಗಕ್ಕೆ ಒಳಪಡಿಸಿಕೊಳ್ಳುತ್ತಾಳೆ. ಆಗ ಮಾತ್ರ ಗಂಡು ಹೆಣ್ಣನ್ನು ಸಂಯೋಗಕ್ಕಾಗಿ ಸಂಪರ್ಕಿಸಬೇಕು. ಅದ್ಯಾಗೋ, ಹತಾಶೆಗೆ ಒಳಗಾದ ಕೆಲವು ಗಂಡು ಜೇಡಗಳು ಒಪ್ಪಿಗೆಯಿಲ್ಲದ ಹೆಣ್ಣಿನೊಂದಿಗೆ ಸಂಯೋಗ ಮಾಡಲು ಪ್ರಯತ್ನಿಸುತ್ತವೆ. ಅದು ಸಾಧ್ಯವಾಗದೆ ಹೆಣ್ಣಿಗೆ ಗಂಡು ಜೇಡ ಆಹಾರವಾಗುತ್ತದೆ. ಬಹುತೇಕ ಜೇಡಗಳು ಫಲವತ್ತಾದ ಮೊಟ್ಟೆಗಳನ್ನು ನೂಲಿನಿಂದ ಮೊಟ್ಟೆಯ ಪೆಟ್ಟಿಗೆಯಲ್ಲಿ ಸುತ್ತಿಟ್ಟಿರುತ್ತವೆ. ಕೆಲವು ಪ್ರಭೇದದ ಜೇಡಗಳು ತನ್ನ ಮೊಟ್ಟೆಗಳನ್ನು ತಾವೇ ರಕ್ಷಿಸಿಕೊಳ್ಳುವುದಿಲ್ಲ. ಇನ್ನು ಕೆಲವು ಪ್ರಭೇದದ ಜೇಡ ಮರಿಗಳು ಹೊರ ಬರುವವರೆಗೂ ಅವುಗಳ ಜೊತೆಯೇ ಇರುತ್ತವೆ. ಅನೇಕ ಪ್ರಭೇದದ ತೋಳ ಜೇಡಗಳು ಮೊಟ್ಟೆಯೊಡೆದು ಅವು ತಮ್ಮನ್ನು ತಾವು ನೋಡಿಕೊಳ್ಳುವಷ್ಟು ಶಕ್ತರಾಗುವವರೆಗೂ ಮರಿಗಳನ್ನು ತಮ್ಮ ಬೆನ್ನಿನ ಮೇಲೆಯೇ ಹೊತ್ತುಕೊಂಡು ತಿರುಗುತ್ತವೆ.

ಅಭಿವೃದ್ಧಿಯ ಹೆಸರಿನಲ್ಲಿ ಆಧುನಿಕ ಜೀವನಶೈಲಿಗಳಿಂದ ಮತ್ತು ಆಧುನಿಕ ಕೃಷಿಯಿಂದ ಎಷ್ಟೋ ಪರೋಪಕಾರಿ ಕೀಟಗಳು ನಾಶವಾಗುವ ಪಥದಲ್ಲಿವೆ. ಅರಣ್ಯ ನಾಶ ಮತ್ತು ಕೀಟನಾಶಕಗಳ ಬಳಕೆಯಿಂದ ಪ್ರತಿಕ್ಷಣ ಲಕ್ಷಾಂತರ ಜೇಡಗಳನ್ನು ಕಳೆದುಕೊಳ್ಳುತ್ತಿದ್ದೇವೆ. ತನ್ನ ಆಹಾರ ಬೇಟೆಗಾಗಿ ಬಲೆಯನ್ನು ನೇಯುವ ಜೇಡಗಳೇ ಇಂದು ಮಾನವ ಕೇಂದ್ರಿತ ಅಭಿವೃದ್ಧಿಯ ಬಲೆಗೆ ಬಲಿಪಶುಗಳಾಗುತ್ತಿವೆ. ಒಟ್ಟಾರೆ ಪ್ರಕೃತಿಯ ವಿಸ್ಮಯಗಳಲ್ಲಿ ಜೇಡಗಳ ಬದುಕು ಸಹ ವಿಶಿಷ್ಟವಾದದ್ದು.  ಪರಿಸರ ವ್ಯವಸ್ಥೆಯಲ್ಲಿ ಆಹಾರ ಸರಪಳಿಯನ್ನು ಸುಸ್ಥಿತಿಯಲ್ಲಿಡಲು ಜೇಡಗಳ ಪಾತ್ರ ಅಗ್ರಗಣ್ಯ. ಹಾಗಾಗಿ ಪ್ರತಿಯೊಬ್ಬರೂ ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಶ್ರಮಿಸಬೇಕೆಂಬುದು ನನ್ನ ಒತ್ತಾಸೆಯಾಗಿದೆ. ಅಲ್ಲದೆ ನಮ್ಮ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಒಂದಾದ ಪರಿಚ್ಛೇದ 51 ಎ(ಜಿ)ನ ಪ್ರಕಾರ “ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿಗೊಳಿಸುವುದು ಮತ್ತು ಪ್ರಾಣಿಪಕ್ಷಿಗಳಿಗೆ ಅನುಕಂಪ ತೋರಿಸುವುದು” ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ.  ಅದನ್ನು ಅರಿತು ನಮ್ಮ ಸುತ್ತಮುತ್ತಲಿನ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಮೂಲಕ ಸಕಲ ಜೀವರಾಶಿಗಳೊಂದಿಗೆ ಕೂಡಿ ಬಾಳುವುದನ್ನು ಕಲಿಯಬೇಕಿದೆ ಅಲ್ಲವೇ?

ಲೇಖನ: ಮಂಜುನಾಥ್ ಅಮಲಗೊಂದಿ
          ತುಮಕೂರು
ಜಿಲ್ಲೆ

Spread the love
error: Content is protected.