ಹೀಗೊಂದು ಸಂಜೆ

ಹೀಗೊಂದು ಸಂಜೆ

        © ಗುರುಪ್ರಸಾದ್ ಕೆ. ಆರ್.

ಹೀಗೆ ಒಂದು ಸಂಜೆ ಮೈಸೂರಿನಲ್ಲಿರುವ ನಾನು, ಬೆಂಗಳೂರಿನಲ್ಲಿರುವ ಅಣ್ಣನಿಗೆ ಕರೆ ಮಾಡಿದೆ. ಅವನೊಬ್ಬ ಹವ್ಯಾಸಿ ಛಾಯಾಗ್ರಾಹಕನಾಗಿರುವುದರಿಂದ “ವಿದ್ಯಾರಣ್ಯಪುರದ ನರಸೀಪುರ ಕೆರೆಯ ಬಳಿ ಪಕ್ಷಿಗಳ ಚಿತ್ರ ತೆಗೆಯಲು ಕಾಯ್ತಾ ಕುತ್ಕೊಂಡಿದ್ದೀನಿ” ಅಂದ. ನಾನು “ಹೋ!! ಯಾವ್ದು ಬೇಟೆ ಆಗ್ಲಿಲ್ವ?” ಅಂದೆ. “ಇನ್ನೂ ಇಲ್ಲ ಕಣೆ” ಅಂದ, ಅದು ಇದುಮಾತಾಡ್ತಾ ಇದ್ದಾಗ “ಒಂದು ನಿಮಿಷ ಇರು” ಅಂತ ಫೋನ್ ಕೆಳಕ್ಕೆ ಹಾಕಿ ಕ್ಯಾಮೆರಾ ತಗೊಂಡು ಕ್ಲಿಕ್ ಕ್ಲಿಕ್ ಮಾಡಿದ ಸದ್ದು ಕೇಳಿಸ್ತು. ನಾನು ಕುತೂಹಲದಿಂದ “ಏನಾಯ್ತು? ಏನ್ ಸಿಕ್ತು?” ಅಂತ ಕೇಳ್ತಾನೆ ಇದ್ದೆ.  ಫೋನ್ ತಗೊಂಡ ಅಣ್ಣ “ಲೇ  ನಿನ್ ಜೊತೆ ಮಾತಾಡ್ತಿದ್ದಾಗ ಒಂದು ಅಮೇಜಿಂಗ್ ಫೋಟೊ ಸಿಕ್ತು ಕಳಿಸ್ತೀನಿ ನೋಡು” ಅಂದ. 

ಫೋಟೋ ನೋಡಿದ ನನಗೆ ಇದೊಂದು ಅದ್ಭುತ ಕ್ಲಿಕ್ ಅನಿಸಿ, “ಹೀಗೂ ಆಗುತ್ತ!” ಅಂದೆ. ಅಣ್ಣ “ನೀನು ಫೋನ್ ನಲ್ಲಿ ಇಲ್ದೆ ಹೋಗಿದ್ರೆ ಈ ಫೋಟೋನ ಇನ್ನು ಅದ್ಭುತವಾಗಿ ತೆಗಿಬಹುದಿತ್ತು. ನಾನು ಗಮನಿಸಿ ಕ್ಯಾಮೆರಾ ತಗೋಳೋಷ್ಟ್ರಲ್ಲಿ ಸ್ವಲ್ಪ ತಡವಾಯ್ತು” ಅಂತ ಅಂದ. ಅದಕ್ಕೆ ನಾನ್ ಬಿಡ್ತೀನಾ, “ಹಲೋ ಗುರು ನೀನು ಹೋಗಿ ಒಂದು ಗಂಟೆ ಆದ್ರು ನಿನಗೊಬ್ರು ಸಿಕ್ಕಿರಲಿಲ್ಲ. ನಾನು ಫೋನ್ ಮಾಡಿ ಮಾತಾಡ್ತಾ ಇದ್ದದ್ದಕ್ಕೇನೆ ಈ ಮೂವರು ಸಿಕ್ಕಿದ್ದು” ಅಂತ ಮರುನುಡಿದೆ. ಇಲ್ಲಿರುವ ಫೋಟೋನೆ ಅದು.

ಆಹಾರ ಸರಪಳಿ ಕೇಳಿದ್ದೀನಿ. ಈ ತರದ ಕೊಂಡಿಯೊಂದಿಗಿನ ಸರಪಳಿಯನ್ನ ಇದೇ ಮೊದಲ ಬಾರಿ ನೋಡ್ತಿರೋದು ಅಂದೆ.

ಅಣ್ಣ ಈ ಛಾಯಾಚಿತ್ರದ ಒಳನೋಟ ಹೀಗಾಗಿರಬಹುದೆಂದು ವಿವರಿಸ್ತಾ ಹೋದ. “ನೋಡು ಆ ‘ಬ್ರಾಹ್ಮಿಣಿ ಗಿಡುಗ’ ಬಂದಿದ್ದು ಮೀನಿನ ಒದ್ದಾಟ ನೋಡಿ. ಯಾಕಂದ್ರೆ ಈ ಕೆರೇಲಿ ಜಲಸಸ್ಯಗಳೇ ಜಾಸ್ತಿ ಇವೆ. ಮೇಲಿಂದ ಗಿಡುಗ ನೋಡಿದಾಗ ಮೀನಿರುವ ಜಾಗ ನೋಡಿತೇ ವಿನಃ, ಮೀನಿನ ಬಾಲವನ್ನ ಹಾವು ಹಿಡಿದಿರೋದು ನೋಡಿಲ್ಲ. ಹಾಗಾಗಿ ಆ ಮೀನನ್ನು ಗಾತ್ರವನ್ನು ಎತ್ತಲು ಬೇಕಾಗುವಷ್ಟು ಶಕ್ತಿ ಉಪಯೋಗಿಸಿ ಮೀನಿನ್ನು ಹಿಡಿದು ಎತ್ತಿದೆ. ಗಿಡುಗ ಹಿಡಿದಿರುವಷ್ಟೇ ಬಲವಾಗಿ ಹಾವೂ ಮೀನನ್ನ ಹಿಡಿದಿದ್ದರಿಂದ ಹಾಗೂ ಆಗಂತುಕನ ಆಗಮನವನ್ನೂ ನಿರೀಕ್ಷಿಸದೇ ಇದ್ದುದರಿಂದ ಮೀನನ್ನು ಬಿಟ್ಟಿಲ್ಲ. ಮೀನಿನ ಇನ್ನೊಂದು ತುದಿ ಗಿಡುಗ ಹಿಡಿದು ಎತ್ತಿದ್ದರಿಂದ ಮೀನಿನ ಜೊತೆ ಜೊತೆಗೆ ಹಾವು ನೀರನ್ನು ಬಿಟ್ಟು ಮೇಲೆ ಬಂದಿದೆ. ಗಿಡುಗ ಮೀನಿಗಷ್ಟೇ ಬಲಪ್ರಯೋಗ ಮಾಡಿದ್ದರಿಂದ ಹಾವಿನ ತೂಕವನ್ನೂ ತನ್ನ ಕಾಲಿನಲ್ಲಿ ಹಿಡಿದುಕೊಳ್ಳಲು ಆಗದೆ ಕಾಲಿನಿಂದ ಜಾರಿ ಮತ್ತೆ ನೀರೊಳಗೆ ಬಿದ್ದಿದೆ.”

 ನಾನು “ಅಬ್ಬಾ! ಉಳಿವಿಗಾಗಿ ಹೋರಾಟ ಕೇಳ್ತಾ ಇರ್ತೀವಿ ಜೊತೆ ಜೊತೆಗೆ ಆಹಾರ ಸರಪಳಿಯನ್ನೂ. ಇದೊಂದು ಎರಡೂ ರೀತಿಯ ಉದಾಹರಣೆಯನ್ನು ತಿಳಿಸುವಂತಹ ಚಿತ್ರ. ಹೇಗೆ ಅಂದ್ರೆ ನೋಡು ಹಾವು ಮೀನನ್ನು ಹಿಡಿದಾಗ ಮೀನು ಒದ್ದಾಡುತ್ತದಲ್ವ ಅದು ಹೇಗಾದರೂ ಮಾಡಿ ಹಾವಿನ ಬಾಯಿಂದ ತಪ್ಪಿಸಿಕೊಳ್ಳುವ ತಂತ್ರ. ಹಾಗೆಯೇ ಮೀನನ್ನು ಹಾವು ತಿನ್ನುತ್ತದೆ, ಹದ್ದು ತಿನ್ನುತ್ತದೆ. ಈ ಚಿತ್ರದಲ್ಲಿ ಮೀನಂತೂ ಹೇಗಿದ್ದರೂ ಇಬ್ಬರಲ್ಲಿ ಒಬ್ಬರಿಗೆ ಆಹಾರವಾಗೋದು ಖಚಿತ. ಗಿಡುಗನ ಕಾಲಿನಿಂದ ಜಾರಿದ ಮೀನು ತನ್ನನ್ನೇ ತಿನ್ನಲು ಬಂದ ಹಾವಿನ ಪ್ರಾಣ ಉಳಿಸಿದೆ. ಪಾಪ ಗಿಡುಗನದು ಆ ದಿನ ದುರದೃಷ್ಟ ದಿನ. ಆದರೆ ಅದೇ ಮೀನು ಮತ್ತು ಹಾವು ಎರಡೂ ಅದರ ಪಾಲಾಗಿದ್ದರೆ ಅವತ್ತಿನ ಅದರ ಬೇಟೆ ನಿಂತು ಎರಡನ್ನೂ ತಿಂದು ಹಾಯಾಗಿ ನಿದ್ರಿಸುತ್ತಿತ್ತೇನೊ.”

© ಗುರುಪ್ರಸಾದ್ ಕೆ. ಆರ್.

ಲೇಖನ: ವನಜಾಕ್ಷಿ ಎಸ್.
          ಮೈಸೂರು ಜಿಲ್ಲೆ

Spread the love
error: Content is protected.