ಸಾಮಾನ್ಯ ತೋಳ ಹಾವು

ಸಾಮಾನ್ಯ ತೋಳ ಹಾವು

       © ಡಾ. ಶಿಶುಪಾಲ ಎಸ್.

ಇಂಗ್ಲಿಷ್ ಹೆಸರು: ಕಾಮನ್ ವೂಲ್ಫ್ ಸ್ನೇಕ್ (Common Wolf Snake)
ಪ್ರಾಣಿಶಾಸ್ತ್ರೀಯ ಹೆಸರು: ಲೈಕೊಡಾನ್ ಅಯಿಲಿಕಸ್ (Lycodon aulicus)
ಗಾತ್ರ: ಹುಟ್ಟುವಾಗ: 14 ಸೆಂ. ಮೀ.
ವಯಸ್ಕ: 30 ಸೆಂ.ಮೀ. (ಸುಮಾರು 01 ಅಡಿ; 0.3 ಮೀಟರ್)
ಗರಿಷ್ಟ: 80 ಸೆಂ.ಮೀ. (ಸುಮಾರು 2.7 ಅಡಿ: 0.8 ಮೀಟರ್)

ಗುಣಲಕ್ಷಣಗಳು: ತೆಳುವಾದ ದೇಹ, ನಯವಾದ ಹುರುಪೆಗಳು. ಕುತ್ತಿಗೆಗಿಂತ ಸ್ವಲ್ಪ ದೊಡ್ಡದಾದ ಚಪ್ಪಟೆ ತಲೆ. ಮೂಗಿನ ತುದಿ ಕೆಳಗಿನ ದವಡೆಗಿಂತ ಮುಂದಿರುತ್ತದೆ. ಕಪ್ಪು ಕಣ್ಣುಗಳು. ಹೊಳಪಾದ ಕಂದು, ಕಪ್ಪು ಅಥವಾ ಬೂದು ಬಣ್ಣದ ದೇಹ. ಕುತ್ತಿಗೆಯಲ್ಲಿ ಹಳದಿ ಅಥವಾ ಬಿಳಿ ಬಣ್ಣದ ಪಟ್ಟಿಯಿರುತ್ತದೆ.  ದೇಹದಲ್ಲಿ 10 ರಿಂದ 20ರ ತನಕ ಬಿಳಿ ಆಥವಾ ಹಳದಿ ಅಡ್ಡ-ಪಟ್ಟಿಗಳು. ಈ ಪಟ್ಟಿಗಳ ಪಾರ್ಶ್ವದಲ್ಲಿ ಸೀಳಿದಂತೆ ಕಾಣುತ್ತದೆ. ಅಡ್ಡ ಪಟ್ಟಿಗಳು ದೇಹದ ಮುಂಭಾಗದಲ್ಲಿ ಚೆನ್ನಾಗಿದ್ದು, ಕೊನೆಯ ಭಾಗದಲ್ಲಿ ಮಾಸಲು ಬಣ್ಣದ್ದಾಗಿರುತ್ತದೆ ಅಥವಾ ಇರುವುದಿಲ್ಲ. ಮೆಲ್ತುಟಿ ಬಿಳಿಯಿದ್ದು ಕಂದು ಚುಕ್ಕೆಗಳಿರುತ್ತವೆ. ದೇಹದ ಕೆಳಭಾಗ ಬಿಳಿಯ ಬಣ್ಣದ್ದು. ಈ ಪ್ರಭೇದದ ಕೆಲವು ಹಾವುಗಳಲ್ಲಿ ಅಡ್ಡ ಪಟ್ಟಿಗಳು ಇರುವುದೇ ಇಲ್ಲ.

© ಡಾ. ಶಿಶುಪಾಲ ಎಸ್.

ಆವಾಸ ಸ್ಥಳ/ಆಹಾರ/ಸಂತಾನಭಿವೃದ್ಧಿ: ನಿಶಾಚರಿ. ಬಾವಿ, ಗುಹೆ, ಕಲ್ಲಿನರಾಶಿ, ಮರಗಳ ಪೊಟರೆಗಳಲ್ಲಿ ವಾಸ. ಗೋಡೆಗಳನ್ನು ಸಲೀಸಾಗಿ ಹತ್ತಬಲ್ಲದು. ಆಹಾರಕ್ಕಾಗಿ ಓತಿಕ್ಯಾತ ಮತ್ತು ಹಲ್ಲಿಗಳನ್ನು ತಿನ್ನುತ್ತದೆ. ಸಂತಾನಭಿವೃದ್ಧಿ ಸಮಯ- ದಕ್ಷಿಣ ಭಾರತದಲ್ಲಿ ಡಿಸೆಂಬರ್ ನಿಂದ ಜನವರಿವರೆಗೆ ಮತ್ತು ಉತ್ತರ ಭಾರತದಲ್ಲಿ ಮಾರ್ಚಿನಿಂದ ಜುಲೈವರೆಗೆ. ಐದರಿಂದ ಏಳು ಮೊಟ್ಟಿಗಳನ್ನಿಡುತ್ತದೆ.

ಪ್ರಾಕೃತಿಕ ನಡವಳಿಕೆ: ಬಹಳ ಹೆದರುವ ಹಾವು. ಮುಟ್ಟಿದರೆ ಕಚ್ಚುತ್ತದೆ ಆದರೆ ವಿಷವಿಲ್ಲ. ಅವಸರದಲ್ಲಿ ಹೋಗುವಾಗ ಮುಂದಿನ ಭಾಗದಿಂದ ಹಾರುವಂತೆ ಕಾಣುತ್ತದೆ.

ವಿಸ್ತರಣೆ: ಜಮ್ಮು-ಕಾಶ್ಮೀರ, ಲಡಾಖ್-ಗಳನ್ನು ಹೊರತು ಪಡಿಸಿ ಭಾರತದೆಲ್ಲಡೆ ಕಾಣಸಿಗುತ್ತದೆ. ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳಲ್ಲೂ ವಾಸಿಸುವುದು.

ಹೋಲಿಕೆ ಹಾವುಗಳು: ಕಟ್ಟು ಹಾವುಗಳು. ಹಾಗಾಗಿ ಜನ ಕೆಟ್ಟಹುಳವೆಂದು ಕೊಲ್ಲುವರು. ನಿರುಪದ್ರವಿಯಾದ ಈ ಹಾವು ಜನರ ಮೂಢನಂಬಿಕೆಯಿಂದ ನಶಿಸುತ್ತಿದೆ.

© ಡಾ. ಶಿಶುಪಾಲ ಎಸ್.

ಉರಗ ಸಂರಕ್ಷಣೆ ಸಂದೇಶ
• ದಯಮಾಡಿ ಹಾವುಗಳನ್ನು ಕೊಲ್ಲಬೇಡಿ
• ಅವು ನಮ್ಮ ಜಾಗಗಳಿಗೆ ಬಂದಿಲ್ಲ. ಅವುಗಳ ಜಾಗವನ್ನು ನಾವು ಆಕ್ರಮಿಸಿದ್ದೇವೆ.
• ಹಾವುಗಳನ್ನು ಮತ್ತು ಅವುಗಳ ಚರ್ಮದಿಂದ ಮಾಡಿದ ಉತ್ಪನ್ನಗಳನ್ನು ಖರೀದಿಸಬೇಡಿ.
• ಉರಗ ರಕ್ಷಕರ ಕೆಲಸಕ್ಕೆ ಗೌರವ ಸೂಚಿಸಿ
• ಮೂಢನಂಬಿಕೆಗಳನ್ನು ನಿವಾರಿಸಲು ಸಹಾಯ ಮಾಡಿ.
• ಹಾವುಗಳ ಸಂರಕ್ಷಣೆಗೆ ತಮ್ಮಿಂದಾದ ಸಹಾಯ ಮಾಡಿ.
• ಜನರಿರುವ ಕಡೆ ಹಾವು ಕಾಣಿಸಿದಾಗ ಅರಣ್ಯ ಇಲಾಖೆ ಅಥವಾ ಉರಗ ರಕ್ಷಕರಿಗೆ ಕರೆ ಮಾಡಿ. ಹಾವುಗಳನ್ನು ಕೊಲ್ಲುವುದನ್ನು ತಪ್ಪಿಸಿ.

ಲೇಖನ: ಡಾ. ಶಿಶುಪಾಲ ಎಸ್.
          ದಾವಣಗೆರೆ ಜಿಲ್ಲೆ

Spread the love
error: Content is protected.