ರೈತನ ಮಿತ್ರ ಗಂಗೆ ಹುಳು

ರೈತನ ಮಿತ್ರ ಗಂಗೆ ಹುಳು

© ಸಂತೋಷ್ ರಾವ್ ಪೆರ್ಮುಡ

ಗದ್ದೆಯ ಬದುವಿನಲ್ಲಿ ನಾನು ಮತ್ತು ನನ್ನ ತಮ್ಮ ಸಂದೇಶ್ ತೋಟದ ಕಡೆಗೆ ಸಾಗುತ್ತಿದ್ದೆವು. ಸ್ವಲ್ಪ ದೂರ ಬದುವಿನಲ್ಲಿ ಸಾಗಿದ್ದೆವಷ್ಟೇ, ತಮ್ಮ ಸಂದೇಶ್ ಅಲ್ಲೇ ನಿಂತು ಅಣ್ಣಾ ನಿನಗೆ ಚೆಂಡು ಬೇಕೇ ಎಂದು ಕೇಳಿದ. ಆಗ ನಾನು ಈ ಗದ್ದೆಯ ಬದುವಿನಲ್ಲಿ ಅದ್ಯಾವ ಚೆಂಡು ಎಂದು ಕೇಳುತ್ತಿದ್ದಂತೆಯೇ ತಮ್ಮ ಅಲ್ಲಿದ್ದ ಚೆಂಡನ್ನು ಎತ್ತಿಕೊಂಡು ಬಿಟ್ಟಿದ್ದ. ಆಗ ಜೊತೆಗಿದ್ದ ನನ್ನಪ್ಪ ಅದು ಚೆಂಡಲ್ಲಪ್ಪಾ, ಅದು ಒಂದು ಹುಳ. ಆದರೆ ಆ ಹುಳ ಚೆಂಡಿನಂತೆಯೇ ಇದೆ ಎಂದು ಅವರು ಅದನ್ನು ಕೈಯಿಂದ ಎತ್ತಿಕೊಂಡು ತೋರಿಸಿದರು.

ಹತ್ತಿರ ಹೋಗಿ ನೋಡಿದೆ. ಹೌದು, ಕಪ್ಪು ಬಣ್ಣದ ಚೆಂಡಿಗೆ ಅಲ್ಲಲ್ಲಿ ಬಿಳಿ ಬಣ್ಣವನ್ನು ಹಚ್ಚಿದ ಅಂದದ ಚೆಂಡಿನಂತೆ ಇತ್ತು. ಅದುವರೆಗೆ ತೋಟವನ್ನು ತಲುಪುವ ಧಾವಂತದಲ್ಲಿದ್ದ ನಮ್ಮೆಲ್ಲರ ಚಿತ್ತ ಒಮ್ಮಿಂದೊಮ್ಮೆಲೇ ಚೆಂಡು ಹುಳುವಿನ ಕಡೆಗೆ ತಿರುಗಿತು. ಚೆಂಡನ್ನು ಅಲ್ಲೇ ಬಿಟ್ಟು ಮುಂದಡಿ ಇಡಬಹುದಾಗಿದ್ದರೂ ಅದರ ವೈಶಿಷ್ಟ್ಯತೆಯನ್ನು ತಿಳಿಯಬೇಕೆಂದು ಅದನ್ನು ಹಾಗೇ ಕೈಯಲ್ಲಿ ಹಿಡಿದುಕೊಳ್ಳಲು ಹೇಳಿದೆ. ಆದರೆ ಅದನ್ನು ಹೇಗೆ ಹಿಡಿದುಕೊಳ್ಳುವುದು ಎಂದು ಯೋಚಿಸುತ್ತಿರುವಾಗ ಅಪ್ಪ ಹೇಳಿದರು, ಈ ಹುಳುವನ್ನು ಕೈಯಲ್ಲಿ ಹಿಡಿಯಬಹುದು, ಕಿಸೆಯಲ್ಲಿ ಹಾಕಿಕೊಳ್ಳಬಹುದು ಅಷ್ಟು ಸಾಧು ಪ್ರಾಣಿಯಿದು ಎಂದು ಹೇಳಿದರು.

ಆ ವೇಳೆಗಾಗಲೇ ಸಂದೇಶ್ ಆ ಚೆಂಡನ್ನು ಗದ್ದೆಯ ಬದುವಿನಲ್ಲಿ ಬಿಟ್ಟುಬಿಟ್ಟ. ಕೆಳಗೆ ಬಿಟ್ಟ ಕೂಡಲೇ ಅದು ನಿಧಾನವಾಗಿ ಚೆಂಡಿನ ರೂಪದಿಂದ ಬಿಚ್ಚಿಕೊಂಡಿತು. ನೋಡಿದರೆ ಚೆಂಡಿನ ರೂಪದಲ್ಲಿದ್ದ ಅದು 7-8 ಇಂಚು ಉದ್ದದ ಒಂದು ಹುಳು ಆಗಿತ್ತು.  ತನ್ನ ಮೂತಿಯಲ್ಲಿದ್ದ ಎರಡು ಆಂಟೆನಾಗಳಂತಹ ಮೀಸೆಯನ್ನು ಬಳಸಿ ಮುಂದಕ್ಕೆ ಸಾಗಲು ಪ್ರಾರಂಭಿಸಿತು. ಕುತೂಹಲದಿಂದ ಅದನ್ನು ನಾನು ಮುಟ್ಟಿದಾಗ ಮತ್ತೆ ಅದು ಚೆಂಡಿನ ರೂಪಕ್ಕೆ ಮುದುಡಿಕೊಂಡಿತು. ಸಹಸ್ರಪದಿಗಳು ತಮ್ಮನ್ನು ಮುಟ್ಟಿದ ಕೂಡಲೆ ಸುರುಳಿಯ ಆಕಾರವನ್ನು ತಾಳುವಂತೆಯೇ, ಈ ಹುಳು ಚೆಂಡಿನ ಆಕಾರವನ್ನು ತಾಳುತ್ತದೆ. ಇದೇ ಕಾರಣಕ್ಕೆ ಇದನ್ನು ‘ಪಿಲ್ಬಗ್’ ಅಥವಾ ‘ರೋಲಿ ಪಾಲಿ’ ಎಂದೂ ಕರೆಯುತ್ತಾರೆ.

ಆ ಚೆಂಡನ್ನು ಎತ್ತಿಕೊಂಡು ಮನೆಗೆ ತಂದು ಬೆಳಕಿನಲ್ಲಿಟ್ಟು, ಅದು ತೆರೆದುಕೊಳ್ಳುತ್ತದೆಯೇ ಎಂದು ನೋಡುತ್ತಿದ್ದೆ. ಆದರೆ ಅದು ತೆರೆದುಕೊಳ್ಳಲೇ ಇಲ್ಲ. ಬೆಳಕನ್ನು ನಂದಿಸಿ ಕತ್ತಲೆ ಮಾಡಿದೆ ಆಗ ಅದು ಸ್ವಲ್ಪ ತೆರೆದುಕೊಂಡು, ಇಣುಕಿ ನೋಡಿ ಮತ್ತೆ ಚೆಂಡಿನ ಆಕಾರವನ್ನು ತಾಳಿತು. ಬಹುಶಃ ಅದಕ್ಕೆ ನುಣುಪಿನ ನೆಲದಲ್ಲಿ ಬಿಚ್ಚಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸಿ, ಅದನ್ನು ಮನೆಯ ಹೊರಗಡೆ ಬಿಟ್ಟೆ. ಅಲ್ಲಿ ಸ್ವಲ್ಪ ಹೊತ್ತಿನ ನಂತರ ಮೆಲ್ಲನೆ ಆ ಚೆಂಡು ತೆರೆದುಕೊಂಡು ಅತ್ತಿಂದಿತ್ತ ಮುಖವನ್ನು ತಿರುಗಿಸಿಕೊಂಡು ಓಡಾಡಲು ಪ್ರಾರಂಭಿಸಿತು. ಈ ಹುಳುವಿನ ಹೆಸರು ‘ಗಂಗೆ ಹುಳು’ ಎಂದು. ಕೆಲವರು ಇದನ್ನು ‘ಉಂಡೆ ಹುಳ’, ‘ಗೋಲಿ ಹುಳ’ ಎನ್ನುತ್ತಾರೆ.

‘ಪಿಲ್ ಮಿಲ್ಲಿಪೇಡ್ (Pill millipede)’ ಎನ್ನುವುದು ಇದರ ಆಂಗ್ಲ ಹೆಸರು. ‘ಐಸೊಪಾಡ್’ ಪ್ರಭೇದಕ್ಕೆ ಸೇರಿದ್ದು, ವೈಜ್ಞಾನಿಕವಾಗಿ ಇದನ್ನು ‘ಗ್ಲೋಮೆರಿಸ್ ಮಾರ್ಜಿನೇಟ್’ ಎಂದು ಕರೆಯುತ್ತಾರೆ. ಈ ಹುಳುಗಳು ಹೆಚ್ಚಾಗಿ ಪಶ್ಚಿಮಘಟ್ಟದ ಕಾಡಿನಲ್ಲಿ ಅದರಲ್ಲೂ ಮಳೆಗಾಲದ ಜೌಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಇದು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಇವುಗಳು ಕೊಳೆತ ಎಲೆ ಮತ್ತು ಒಣಗಿದ ಮರಗಳಲ್ಲಿ ಮತ್ತು ತೋಟಗಳಲ್ಲೂ ಕಾಣಿಸಿಕೊಳ್ಳುತ್ತದೆ.

ಗಂಗೆಯ ದೇಹ ರಚನೆ:

© ಸಂತೋಷ್ ರಾವ್ ಪೆರ್ಮುಡ

ಗಂಗೆ ಹುಳುವಿನ ದೇಹರಚನೆ ಒಂದು ರೀತಿಯಲ್ಲಿ ವಿಭಿನ್ನವಾಗಿದ್ದು, ಇದರ ಮೂತಿಯ ಮುಂಭಾಗದಲ್ಲಿ ಎರಡು ಆಂಟೆನಾಗಳಂತಹ ಮೀಸೆಗಳಿರುತ್ತವೆ. ಈ ಮೀಸೆಗಳು ಅಲ್ಲಿನ ಪರಿಸರದಲ್ಲಿ ನಡೆಯುವ ಚಟುವಟಿಕೆಗಳನ್ನು ಗ್ರಹಿಸುವ ಸಂವೇದನಾ ಪ್ರಚೋದಕಗಳಾಗಿ ಕೆಲಸ ಮಾಡುತ್ತವೆ. ಮುಖದ ಮುಂಭಾಗದಲ್ಲಿ ಎರಡು ಸಣ್ಣದಾದ ಕಣ್ಣುಗಳಿರುತ್ತವೆ. ಮುಖವನ್ನು ಬಿಟ್ಟರೆ ಇದರ ದೇಹದಲ್ಲಿ ಸರಿ ಸುಮಾರು 10-12 ವಿಭಾಗಗಳಿರುತ್ತವೆ. ಅವುಗಳು ಕಪ್ಪು ಬಣ್ಣ ಇಲ್ಲವೇ ಕಂದು ಬಣ್ಣವಿರುತ್ತವೆ. ಪ್ರಬುದ್ಧ ಗಂಗೆ ಹುಳು 8-9 ಜೊತೆ ಕಾಲುಗಳನ್ನು ಹೊಂದಿದ್ದು, ತಲೆಯ ನಂತರ ಒಂದೆರಡು ವಿಭಾಗಗಳನ್ನು ದಾಟಿದರೆ ಇದರ ಹೊಟ್ಟೆಯಿದ್ದು, ಕೊನೆಯ ವಿಭಾಗವೇ ಗುದದ್ವಾರ. ಇವುಗಳ ಹೊಟ್ಟೆಯ ಕೆಳಭಾಗವನ್ನು ನೋಡಿ ಗಂಡು ಮತ್ತು ಹೆಣ್ಣನ್ನು ಗುರುತಿಸಬಹುದು. ಗಂಡು ಗಂಗೆ ಹುಳುವಿನ ಎದೆಗೂಡಿನ ಮುಂಭಾಗದಲ್ಲಿ ಕಾಪ್ಯುಲೇಟರಿ ಅಂಗವಿದ್ದರೆ, ಹೆಣ್ಣು ಗಂಗೆ ಹುಳುವು ಗರ್ಭಿಣಿಯಾಗಿದ್ದರೆ ಬ್ರೂಡಿಂಗ್‌ಗಾಗಿ (ಮಾರ್ಸ್ಪಿಯಮ್) ಹೊಟ್ಟೆಯ ಭಾಗದಲ್ಲಿ ಒಂದು ಚೀಲವನ್ನು ಹೊಂದಿರುತ್ತದೆ. ಇದರ ದೇಹದ ಮೇಲ್ಭಾಗವು ತುಸು ಗಟ್ಟಿಯಾಗಿರುತ್ತದೆ. ನಿಧಾನವಾಗಿ ಹೆಜ್ಜೆಯಿಡುತ್ತಾ ಸಾಗುವ ಈ ಹುಳುವು ತಾನು ಅಪಾಯವನ್ನು ಗ್ರಹಿಸಿದ ಕೂಡಲೇ ಚೆಂಡಿನಂತೆ ಮುದುರಿಕೊಳ್ಳುತ್ತದೆ.

 ಯುರೋಪ್, ಅಮೇರಿಕಾ, ದಕ್ಷಿಣ ಏಷ್ಯಾಗಳಲ್ಲಿ ಹೆಚ್ಚಾಗಿ ವಾಸಿಸುವ ಇವುಗಳು ಸೂರ್ಯನ ಬಿಸಿಲಿನಲ್ಲೂ ಕ್ರಿಯಾಶೀಲವಾಗಿ ಇರುತ್ತವೆ. ಸಾಮಾನ್ಯವಾಗಿ ಹುಳಗಳು ಬೆಳಕಿನ ಪ್ರಖರತೆಗೆ ಓಡಿ ಹೋದರೆ, ಗಂಗೆ ಹುಳು ಬಿಸಿಲಿಗೆ ಭಯಪಡುವುದಿಲ್ಲ. ಇವುಗಳು ತಾಪಮಾನ ಕಡಿಮೆಯಾದಾಗ ಪ್ರಖರ ಸೂರ್ಯನ ಬೆಳಕನ್ನು ಆಶ್ರಯಿಸಿದರೆ ತಾಪಮಾನ ಹೆಚ್ಚಾದಾಗ ನೆರಳಿನಲ್ಲಿ ಉಳಿಯುತ್ತವೆ. -20 C ಗಿಂತ ಕಡಿಮೆ ಅಥವಾ 360 C ಗಿಂತ ಹೆಚ್ಚಿನ ತಾಪಮಾನ ಗಂಗೆ ಹುಳುವಿಗೆ ಮಾರಕವಾಗಿದೆ. ಈ ಹುಳುಗಳ ಸಾಧು ಸ್ವಭಾವದ ಕುರಿತು ತಿಳಿಯದ ಒಂದಷ್ಟು ಮಂದಿ ಈ ಹುಳುವನ್ನು ಗೊಬ್ಬರದಲ್ಲಿ ಕಂಡುಬರುವ ಹುಳುವೆಂದು ತಪ್ಪಾಗಿ ಭಾವಿಸಿ ಕೊಲ್ಲುವುದಿದೆ. ಆದರೆ ಇವುಗಳು ಮನುಷ್ಯನಿಗೆ ನಿರುಪದ್ರವಿ ಪ್ರಾಣಿಯೆಂದೇ ಹೇಳಲಾಗಿದೆ.

ರಾಸಾಯನಿಕ ಸಂರಕ್ಷಣೆಯ ಜಾಣತನ:

© ಸಂತೋಷ್ ರಾವ್ ಪೆರ್ಮುಡ

ತನಗೆ ಅಪಾಯ ಎದುರಾದ ಕೂಡಲೇ ಗಂಗೆ ಹುಳು ತನ್ನನ್ನು ತಾನು ಚೆಂಡಿನಂತೆ ಮಾರ್ಪಡಿಸಿಕೊಳ್ಳುತ್ತದೆ. ಚೆಂಡಿನ ಆಕಾರವನ್ನು ಇದು ತಾಳಿದೊಡನೆ ಅದು ಒಂದು ವಿಭಿನ್ನವಾದ ಕೆಟ್ಟ ವಾಸನೆಯ ರಾಸಾಯನಿಕವನ್ನು ಹೊರ ಸೂಸುತ್ತದೆ. ಅದು ಸೂಸುವ ರಾಸಾಯನಿಕದ ವಾಸನೆ ಮನುಷ್ಯನ ಮೂಗಿಗೆ ಅಷ್ಟೊಂದು ಗೋಚರ ಆಗದಿದ್ದರೂ ಅದನ್ನು ತಿನ್ನಲು ಬರುವ ಪ್ರಾಣಿಗಳು ಆ ವಾಸನೆಗೆ ದೂರ ಓಡುತ್ತವೆ. ಮನುಷ್ಯರಿಗೆ ಅಷ್ಟೊಂದು ಘಾಟು ಹೊಡೆಯದಿದ್ದರೂ, ಅದನ್ನು ತಿನ್ನಲು ಬಯಸುವ ಪ್ರಾಣಿಗಳನ್ನು ದೂರ ಓಡಿಸುವುದಲ್ಲದೇ, ಒಂದು ವೇಳೆ ಇದನ್ನು ಯಾವುದಾದರೂ ಪ್ರಾಣಿ ತಿಂದರೆ ಕೆಟ್ಟ ರುಚಿ ಇರುವಂತೆ ಮಾಡುತ್ತದೆ.

ಸಂತಾನೋತ್ಪತ್ತಿಯ ವಿಧಾನ ಮತ್ತು ಆಯಸ್ಸು;

ಗಂಗೆ ಹುಳುಗಳಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳಿವೆ. ಹೆಣ್ಣು ಲೈಂಗಿಕಾಸಕ್ತಿಯನ್ನು ಹೊಂದಿದಾಗ ಅದು ವಿಶಿಷ್ಟವಾದ ಸದ್ದನ್ನು ಮಾಡುವ ಮೂಲಕ ಗಂಡು ಹುಳುವನ್ನು ಆಕರ್ಷಿಸುತ್ತದೆ. ಈ ಸಂದರ್ಭ ಮಿಲನವಾದರೆ ಹೆಣ್ಣು ಹುಳುವು ಸುಮಾರು 0.7 ಮಿ. ಮೀ ವ್ಯಾಸವಿರುವ 7-8 ಡಜನ್ ಮೊಟ್ಟೆಗಳನ್ನು ಇಡುತ್ತದೆ. ಇವು ಚಳಿ ಮತ್ತು ಬೇಸಿಗೆಯ ಕಾಲದಲ್ಲಿ ಮೊಟ್ಟೆ ಇಡುವುದು ಸಾಮಾನ್ಯ. ಒಂದು ಮೊಟ್ಟೆಯು ಒಡೆದು ಮರಿ ಆಗಬೇಕಾದರೆ ಕನಿಷ್ಟ ಎರಡು ತಿಂಗಳಾದರೂ ಬೇಕು. ವಾತಾವರಣವು ತಂಪಾಗಿದ್ದರೆ ಇದರ ಮೊಟ್ಟೆಗಳು ಒಡೆದು ಮರಿಯಾಗಲು ಹೆಚ್ಚು ಕಾಲಾವಕಾಶ ಬೇಕು. ಮರಿ ಹುಳುವು ಪ್ರೌಢಾವಸ್ಥೆಗೆ ತಲುಪಲು ಕನಿಷ್ಟ ಒಂದು ವರ್ಷವಾದರೂ ಬೇಕು. ಮೊಟ್ಟೆಯು ಒಡೆದ ನಂತರ, ಮರಿಗಳು 1-2 ವಾರಗಳ ಕಾಲ ತಮ್ಮ ತಾಯಿಯ ಹೊಟ್ಟೆಯ ಕೆಳಭಾಗದಲ್ಲಿ ಇರುವ ಚೀಲದಲ್ಲಿ ಇರುತ್ತವೆ. ಮರಿಗಳು ಸ್ವತಂತ್ರವಾಗಿ ಓಡಾಡಲು ಪ್ರಾರಂಭಿಸುವ ವೇಳೆಗೆ 2 ಮಿ. ಮೀ ಉದ್ದಕ್ಕೆ ಬೆಳೆದರೆ ಇವುಗಳ ಜೀವಿತಾವಧಿ 2-5 ವರ್ಷಗಳು.

ಮನುಷ್ಯನಿಗೆ ಉಪಕಾರಿ ಜೀವಿ:

ಮಣ್ಣಿನಲ್ಲಿ ಬಿದ್ದು ಕೊಳೆತಿರುವ ವಸ್ತುಗಳನ್ನು ಮತ್ತಷ್ಟು ಹದಗೊಳಿಸಿ ಅವುಗಳನ್ನು ಮಣ್ಣಿಗೆ ಸೇರಿಸಿ ಜೈವಿಕ ಗೊಬ್ಬರವಾಗಿ ವಿಭಜಿಸುವ ಪ್ರಮುಖ ಕೆಲಸವನ್ನು ಇವು ಮಾಡುತ್ತವೆ. ಇವುಗಳು ಸಸ್ಯಾಹಾರಿಗಳಾಗಿದ್ದು, ಮರದಲ್ಲಿರುವ ಪಾಚಿ, ಮರದ ತೊಗಟೆ ಮತ್ತು ಎಲೆಗಳೇ ಇದರ ಪ್ರಮುಖ ಆಹಾರ. ಇವುಗಳಿಗೆ ವಿಷ ಅಥವಾ ನಂಜು ಇಲ್ಲವಾದ್ದರಿಂದ ಇವುಗಳು ಕಚ್ಚಿದರೂ ಯಾವುದೇ ಅಪಾಯವಿಲ್ಲ.

© ಸಂತೋಷ್ ರಾವ್ ಪೆರ್ಮುಡ

ಪ್ರಾಕೃತಿಕ ಮಹತ್ವ:

ಇವುಗಳ ಮುಖ್ಯ ಆವಾಸ ಸ್ಥಾನವು ಹಸಿಗೊಬ್ಬರ, ಬಿದ್ದ ಎಲೆಗಳು ಮತ್ತು ಬಂಡೆಗಳ ಅಡಿಭಾಗವಾಗಿದ್ದು, ಇವುಗಳು ಮೊಳಕೆ ಮತ್ತು ಕೆಲವು ಸಸ್ಯ ಬೇರುಗಳಿಗೆ ಆಹಾರವನ್ನು ನೀಡುತ್ತವೆ. ಇವುಗಳ ಉಳಿವು ಪರಿಸರ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಹೆಚ್ಚಿದ ಖನಿಜ ಪದರದ ಪೋಷಕಾಂಶಗಳು (ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್), ಹೆಚ್ಚಿದ ಪಿ. ಹೆಚ್ ಮತ್ತು ಬಿದ್ದ ಎಲೆಗಳಿಂದ ಹೊರಹಾಕಲ್ಪಟ್ಟ ಹೆಚ್ಚಿನ ಪ್ರಮಾಣದ ಇಂಗಾಲವನ್ನು ಇವುಗಳು ಸಸ್ಯಗಳಿಗೆ ಯಥೇಚ್ಛವಾಗಿ ನೀಡುತ್ತವೆ. ಇಷ್ಟೆಲ್ಲ ಪರಿಸರಸ್ನೇಹಿ ಗುಣವನ್ನು ಹೊಂದಿರುವ ಗಂಗೆ ಹುಳುಗಳು ಇಂದು ಕೃಷಿ ಭೂಮಿಗೆ ರೈತನು ಸುರಿಯುತ್ತಿರುವ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಕಾರಣದಿಂದ ಅಳಿವಿನ ಅಂಚಿನಲ್ಲಿವೆ. ರೈತಸ್ನೇಹಿ ಈ ಹುಳುಗಳನ್ನು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಹಾಗೂ ಗಿಡಮರಗಳನ್ನು ಪೋಷಿಸುವುದರಿಂದ ಇವುಗಳನ್ನು ರಕ್ಷಿಸಬೇಕಾದ್ದು ಅತ್ಯವಶ್ಯಕ.

© ಸಂತೋಷ್ ರಾವ್ ಪೆರ್ಮುಡ

ಲೇಖನ: ಸಂತೋಷ್ ರಾವ್ ಪೆರ್ಮುಡ
          ದಕ್ಷಿಣ ಕನ್ನಡ ಜಿಲ್ಲೆ

Spread the love
error: Content is protected.