ಗ್ರಹಾನುಗ್ರಹ!

© JPL-Caltech_NASA
ಆ ದಿನದ ಶುರುವಲ್ಲೇ ಒಂದು ಸುಳಿವಿನ ಹಾಗೆ ಹೊಟ್ಟೆ ಶಬ್ಧ ಮಾಡುತ್ತಿತ್ತು. ಅದನ್ನು ಲೆಕ್ಕಿಸದೇ ಎಂದಿನಂತೆ ಆ ದಿನವೂ ಸಹ ಆಫೀಸಿಗೆ ಹೊರಟೆ. ಅಮ್ಮ ಮಾಡಿದ್ದ ಚಿತ್ರಾನ್ನವನ್ನು ಡಬ್ಬಿಗೆ ಹಾಕಿಕೊಂಡು ಅಲ್ಲೇ ತಿಂದೆ. ಅಷ್ಟು ದಿನ ದೇಹ ಹೇಗೋ ತಡೆದುಕೊಂಡಿತ್ತು ಎಂದು ಕಾಣುತ್ತದೆ. ಆ ವಾರ ಹೆಚ್ಚು ಬಿಸಿಲಿನಲ್ಲಿ ಓಡಾಟದ ಪರಿಣಾಮ ಉಷ್ಣ ಹಾಗೂ ನಾನು ಕೆಲವು ದಿನಗಳಿಂದ ಸತತವಾಗಿ ತಿನ್ನುತ್ತಿದ್ದ ಚಿಕನ್ ವೆರೈಟಿಗಳಿಗೂ ಹೊಂದಾಣಿಕೆಯಾಗಿ, ಅದನ್ನು ನನ್ನ ದೇಹ ಅಸೂಯೆಯಿಂದ ಒಪ್ಪದೆ ಅಜೀರ್ಣ ಮಾಡಿತ್ತು. ಫಲಿತಾಂಶ: ಅಜೀರ್ಣ ಹಾಗು ಅತಿಸಾರ. ಮೊದಲ ಬಾರಿಗೆ ಕೆಲವು ವರ್ಷಗಳ ನಂತರ ಅರ್ಧ ದಿನ ರಜೆ ಮಾಡಿ ಮನೆಗೆ ಹೋಗಿ ತಿಳಿದ ಎಲ್ಲಾ ರೀತಿಯ ಮನೆ ಮದ್ದನ್ನು ತೆಗೆದುಕೊಂಡು ವಿರಮಿಸುವಷ್ಟು ತೀವ್ರವಾಗಿತ್ತು ಅಂದು ನನ್ನ ಪರಿಸ್ಥಿತಿ. ಅದಕ್ಕೆ ಹೇಳುವುದು, ‘ಕಣ್ಣಿಗೆ ಬೇಕೆಂದ ಹಾಗೆ ತಿನ್ನುವುದಲ್ಲ, ದೇಹಕ್ಕೆ ಬೇಕೆಂದ ಹಾಗೆ ತಿನ್ನಬೇಕು’ ಎಂದು. ಆದರೆ ಇಲ್ಲಿ ಯಾವುದೋ ಗ್ರಹ, ಭೂಮಿಯಿಂದ ಸುಮಾರು 800 ಜ್ಯೋತಿರ್ವರ್ಷ ದೂರದಲ್ಲಿ ಇರುವ ನಮ್ಮ ಸೂರ್ಯನ ಹಾಗೆ ಒಂದು ನಕ್ಷತ್ರ ಇದ್ದು ಅದರ ಸುತ್ತ ಸುತ್ತುತ್ತಿರುವ ಒಂದು ಗ್ರಹವಿದ್ದು, ತನ್ನ ಉದರದಲ್ಲೂ ಅಜೀರ್ಣ ಸಮಸ್ಯೆ ಇರುವ ಹಾಗೆ ತನ್ನ ದೇಹದ ಭಾಗವನ್ನೇ ಬಾಹ್ಯಾಕಾಶಕ್ಕೆ ಉಗುಳುತ್ತಾ ಸಾಗುತ್ತಿದೆ. ಅದು ನೋಡಲು ನಮ್ಮ ಧೂಮಕೇತು ನಮ್ಮ ಸೂರ್ಯನ ಸುತ್ತ ಸುತ್ತುವಾಗ ಹಿಂದೆ ಬಿಡುವ ಬಾಲದಂತೆ ತನ್ನ ಹಿಂದೆಯೂ ಸಹ ಬಾಲವನ್ನು ಬಿಟ್ಟುಕೊಂಡು ತನ್ನ ನಕ್ಷತ್ರದ ಸುತ್ತ ತಿರುಗುತ್ತಿದೆ ಅಂತೆ. ಅಯ್ಯೋ ಅದರಲ್ಲೇನಿದೆ ಬಿಡೀ… ಇಂತಹ ಎಷ್ಟೋ ವಿದ್ಯಮಾನಗಳು ಬಾಹ್ಯಾಕಾಶದಲ್ಲಿ ನಡೆಯುತ್ತಿವೆ. ಎಂದು ತಾತ್ಸಾರ ಮಾಡದಿರಿ. ಏಕೆಂದರೆ ಹೀಗೆ ನಮ್ಮ ಸೂರ್ಯನಿಗೆ ಇಷ್ಟು ಹತ್ತಿರವಿರುವ ನಕ್ಷತ್ರದಲ್ಲಿನ ಗ್ರಹವೊಂದು ಹೀಗೆ ತನ್ನ ಮೇಲಿನ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಉಗುಳುತ್ತಿರುವುದು ತಮ್ಮ ಅದೃಷ್ಟವೆಂದೇ ಅಂತರಿಕ್ಷ ತಜ್ಞರು ಭಾವಿಸುತ್ತಾರೆ.

ಅದೇಕೆ? ಅದರಲ್ಲೇನಿದೆ ವಿಶೇಷ? ಅಲ್ಲಿಗೇ ಬರುತ್ತಿರುವೆ. ವಿಜ್ಞಾನಿಗಳ ಪ್ರಕಾರ ದೂರದ ನಕ್ಷತ್ರ ಮಂಡಲದ ಗ್ರಹಗಳನ್ನು ಹಾಗೂ ಅವುಗಳು ಯಾವ ವಸ್ತುಗಳಿಂದ ಮಾಡಲ್ಪಟ್ಟಿವೆ ಎಂದು ಆ ಗ್ರಹಗಳು ಹೊರಸೂಸುವ ‘ಎಲೆಕ್ಟ್ರೋ ಮ್ಯಾಗ್ನೆಟಿಕ್’ ಅಲೆಗಳನ್ನು ‘ಸ್ಪೆಕ್ಟ್ರೋಸ್ಕೋಪ್’ ಗಳಂತಹ ಉಪಕರಣಗಳಿಂದ ಕಂಡು ಹಿಡಿಯುತ್ತಾರೆ. ಇದೇ ಈ ಗ್ರಹ ವಿಶೇಷ! ಏಕೆಂದರೆ ಇದು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಅದರಿಂದಾಗಿಯೇ ತನ್ನ ಮೇಲ್ಮೈ ನ ವಸ್ತುಗಳೊಂದಿಗೆ ತನ್ನ ಒಳ ಪದರದ ಒಳಗಿನ ವಸ್ತುಗಳನ್ನೂ ಸಹ ಆಕಾಶಕ್ಕೆ ಉಗುಳುತ್ತಿದೆ. ಇಂತಹ ವಿದ್ಯಮಾನ ಇದುವರೆಗೆ ಕಾಣಲು ಸಿಗಲಿಲ್ಲ. ಈಗ ಸಿಕ್ಕಿರುವ ಈ ಅವಕಾಶದಿಂದ ದೂರದ ಒಂದು ಗ್ರಹದ ಒಳ-ಹೊರಗೆ ಏನೇನಿದೆ, ಅದು ಯಾವ ಯಾವ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದು ನಿಖರವಾಗಿ ತಿಳಿಯಲು ನಮಗೆ ಸಿಕ್ಕಿರುವ ಒಂದು ಸುವರ್ಣಾವಕಾಶವೇ ಸರಿ! ಎಂದು ವಿಜ್ಞಾನಿಗಳು ಭಾವಿಸುತ್ತಾರೆ.

K2 22b ಎಂದು ಕರೆಯಲ್ಪಡುವ ಈ ಗ್ರಹ ಸದ್ಯಕ್ಕೆ ನಮ್ಮ ಅಂತರಿಕ್ಷ ತಜ್ಞರ ಫೇವರೇಟ್ ಗ್ರಹ. ಇದುವರೆಗೆ ಒಂದು ಅನ್ಯ ಗ್ರಹದ ಒಳಗೆ ಏನೇನಿದೆ, ಇದು ರಾಸಾಯನಿಕವಾಗಿ ಯಾವ ಯಾವ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದು ಯಾರಿಗೂ ಅರಿಯದ ವಿಚಾರ ಇವರೇ ಮಾಡುವ ಮೊದಲ ಅನ್ವೇಷಣೆ ಆಗಲಿದೆ. ಬಾಹ್ಯಾಕಾಶ ಅನ್ವೇಷಣೆಗೆಂದೇ ಭೂಮಿಯ ಹೊರಗೆ ಇಟ್ಟಿರುವ ಪ್ರಪಂಚದ ಅತಿ ದೊಡ್ಡ ದೂರದರ್ಶಕವಾದ ‘ಜೇಮ್ಸ್ ವೆಬ್ ದೂರದರ್ಶಕ’ದ ಸಹಾಯದಿಂದ ಕಂಡುಕೊಂಡ ಅವರು ಈಗ ತಾನೇ ತಮ್ಮ ಸಂಶೋಧನೆಯ ಮೊದಲ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅದರ ಮೊದಲ ಅನ್ವೇಷಣೆ ವಿಚಾರ ಹೇಳುವುದಾದರೆ, ಸಾಮಾನ್ಯವಾಗಿ ಅನ್ಯ ಗ್ರಹಗಳು ಕಬ್ಬಿಣದಿಂದ ಆಗಿರುತ್ತವೆ. ಆದರೆ ಈ ಮೇಲೆ ಹೇಳಿದ ಹಾಗೆ ಈ ಗ್ರಹ ವಿಶೇಷವಲ್ಲವೇ? ಅದರಿಂದ ಇದು ಹೊರ ಬಿಡುತ್ತಿದ್ದ ಸುಮಾರು 90 ಲಕ್ಷ ಕಿಲೋ ಮೀಟರ್ ಉದ್ದ ಬಾಲದ ವಸ್ತುಗಳಿಂದ ಬಂದ ಬೆಳಕನ್ನು ಗಮನಿಸಿದಾಗ ತಿಳಿದದ್ದು, ಇದು ಕೇವಲ ಕಬ್ಬಿಣದಿಂದ ಆದದ್ದಲ್ಲ. ಅಥವಾ ಸಾಮಾನ್ಯವಾಗಿ ಒಂದು ಗ್ರಹದ ಒಳಗಿರುವ ‘ಮೆಗ್ನೀಷಿಯಮ್ ಆಕ್ಸೈಡ್’ ಅಥವಾ ‘ಸಿಲಿಕಾನ್ ಮೊನಾಕ್ಸೈಡ್’ ಆಗಿರಬಹುದು ಎಂದು ಪರೀಕ್ಷಿಸಿದರು. ಆದರೆ ಅವರ ಅಚ್ಚರಿಗೆ ಅದೂ ಅಲ್ಲ. ನಿಜ ಹೇಳುವುದಾದರೆ, ಆ ಗ್ರಹದಿಂದ ಬರುತ್ತಿರುವ ಆ ಅಲೆಗಳ ಆಧಾರವಾಗಿ ನೋಡುವುದಾದರೆ ಅದು ಹೊರಸೂಸುತ್ತಿರುವ ಅಲೆಗಳು ನಮ್ಮ ಭೂಮಿಯ ಮೇಲಿನ ಯಾವ ಮೂಲವಸ್ತುಗಳಿಗೂ ಹೊಂದಾಣಿಕೆ ಆಗುತ್ತಿಲ್ಲ! ಇದು ವಿಚಿತ್ರವಾದರೂ ಸತ್ಯ.

ಒಟ್ಟಿನಲ್ಲಿ, ನಾವು ಈ ದೇಹವನ್ನು ಬಿಟ್ಟು ಹೋಗುವಾಗ ನಮ್ಮ ಒಳಗಿನ ಎಲ್ಲಾ ಸರಿ-ತಪ್ಪುಗಳು, ಒಳ್ಳೆ ಕೆಲಸಗಳು, ಕೆಟ್ಟ ಘಟನೆಗಳು ಹೀಗೆ ಎಲ್ಲಾ ಗಾಢ ಅನುಭವಗಳು ಒಮ್ಮೆ ನಮ್ಮ ಕಣ್ಣ ಮುಂದೆ ಭಾಸವಾಗುತ್ತವೆ ಎನ್ನುತ್ತಾರೆ, ಹಾಗೆಯೇ ಈ ಸಾಯುತ್ತಿರುವ ಗ್ರಹದ ಅನುಗ್ರಹದಿಂದ (ಗ್ರಹಾನುಗ್ರಹದಿಂದ) ನಮ್ಮ ಸೌರ ಮಂಡಲ ಬಿಟ್ಟು ಅನ್ಯ ನಕ್ಷತ್ರಗಳ ಗ್ರಹಗಳ ಒಳಗಿನ ಸತ್ಯಾನ್ವೇಷಣೆಯ ಅಭ್ಯಾಸದಲ್ಲಿ ಇದು ಅತಿ ದೊಡ್ಡ ಹೆಜ್ಜೆಯಾಗುವುದರಲ್ಲಿ ಸಂದೇಹವಿಲ್ಲ. ಇದರಲ್ಲಿ ನಾವು ಗಮನಿಸಬಹುದಾದ ಇನ್ನೊಂದು ವಿಚಾರವೆಂದರೆ, ನಮ್ಮ ಭೂತ-ಭವಿಷ್ಯಗಳನ್ನು ನಮ್ಮ ಹುಟ್ಟಿನಲ್ಲಿ ಗುರುತಿಸಿದ ಗ್ರಹಗಳ ಅನುಗ್ರಹದಿಂದ ಎಂದು ನಂಬುವ ನಾವು, ಒಮ್ಮೆ ಈ ಗ್ರಹ ತೋರುತ್ತಿರುವಂತೆ ನಮ್ಮ ಒಳಗೆ ನಾವು ಮಾಡಲ್ಪಟ್ಟಿರುವ ಸರಿ-ತಪ್ಪುಗಳ, ಭಾವನೆ-ಉದ್ದೇಶಗಳ, ಗುಣ-ಋಣಗಳ ಕಡೆ ಗಮನ ಹರಿಸಿದರೆ ಯಾವ ಗ್ರಹಾನುಗ್ರಹದ ಮೊರೆ ಹೋಗದೆ, ನಮ್ಮ ನಮ್ಮ ಗ್ರಹಗತಿಯನ್ನು ನಾವೇ ನಿಯಂತ್ರಿಸಬಹುದೇನೋ ಪ್ರಯತ್ನಿಸಿ ನೋಡಿ!
Source: www.snexplores.org

ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.