AC ಯಲ್ಲಿ ಅರಳಿದ ಹೂ…

© AIG_04
‘ವಾರ ಬಂತಮ್ಮ… ಗುರುವಾರ ಬಂತಮ್ಮ. ರಾಯರ ನೆನೆಯಮ್ಮ… ಗುರು ರಾಯರ ನೆನೆಯಮ್ಮ…’ ಹಾಡನ್ನು ಕೇಳಿರುತ್ತೀರಿ. ಬಹುಶಃ ನೀವು ಈಗ ಈ ಲೇಖನ ಓದುತ್ತಿರುವ ದಿನವೇ ಗುರುವಾರ ಆಗಿರಬಹುದು. ಅಥವಾ ರಾಯರ ಭಕ್ತರಾಗಿದ್ದರೆ ಗುರುವಾರ ನಿಮ್ಮ ವಾರದ ಮುಖ್ಯ ಹಾಗೂ ಇಷ್ಟದ ದಿನವಾಗಿರಬಹುದು. ಆದರೆ ನನಗೆ ಗುರುವಾರವೆಂದರೆ ಇಷ್ಟ-ಕಷ್ಟಗಳ ಸಮ್ಮಿಶ್ರಣ, ಅದರಲ್ಲೂ ಹೀಗೆ ಬಿಸಿ ಬಿಸಿ ಕಜ್ಜಾಯದಂತೆ ಬುಸುಗುಟ್ಟುವ ಬಿಸಿಲಿನ ಬೇಗೆ ಇರುವ ಫೆಬ್ರವರಿ-ಮಾರ್ಚ್ ತಿಂಗಳುಗಳಾದರೆ ಸ್ವಲ್ಪ ಇಷ್ಟ-ಬೇಜಾನ್ ಕಷ್ಟದ ಮಿಶ್ರಣ. ಏಕೆ ಎಂದಿರಾ? ನಾನು ಕೆಲಸ ಮಾಡುವ “ಮಾಡೂ” ಪ್ರಾಜೆಕ್ಟ್ ನಲ್ಲಿ ವಾರಕ್ಕೆ ಕನಕಪುರದ ಆಯ್ದ ಹತ್ತು ಸರ್ಕಾರಿ ಶಾಲೆಗಳಿಗೆ ಹೋಗುತ್ತೇವೆ. ಗುರುವಾರದಂದು ತಮಿಳುನಾಡಿಗೆ ಸಮೀಪದ ಹುಣಸನಹಳ್ಳಿಯ ಬಳಿ ಇರುವ ಆಲನಾಥ-ಬನ್ನಿಮುಕ್ಕೋಡ್ಲು ಎಂಬ ಹಳ್ಳಿಗಳ ಶಾಲೆಗಳಿಗೆ ನಮ್ಮ ಭೇಟಿ. ಕನಕಪುರ-ಕೋಡಿಹಳ್ಳಿ ಯಿಂದ ಆಚೆ ಹೋದಂತೆಲ್ಲಾ ನಮ್ಮ ಬೆಂಗಳೂರಿನ ವಾತಾವರಣ ಕ್ರಮೇಣ ತಮಿಳುನಾಡಿನ ಬಿಸಿಲಿಗೆ ಬದಲಾಗುತ್ತಾ ಹೋಗುತ್ತದೆ. ಆಶ್ರಮದಲ್ಲಿ ಮರಗಳ ನಡುವಿನ ತಂಪಾದ ವಾತಾವರಣದಿಂದ ಅಲ್ಲಿಗೆ ಹೋಗುತ್ತಿದ್ದಂತೆ, ಯಾರೋ ಚಾಲೂ ಇದ್ದ AC ಯನ್ನು ಕ್ರಮೇಣ ಕಡಿಮೆ ಮಾಡಿ ಬಂದ್ ಮಾಡುವುದಲ್ಲದೇ ಬೆಂಕಿಯನ್ನೂ ಹಚ್ಚಿದಂತೆ ವಾತಾವರಣ ಬದಲಾಗುತ್ತಾ ಹೋಗುತ್ತದೆ. ಅಷ್ಟು ಸಾಲದು ಎಂಬಂತೆ ಆಲನಾಥ ಶಾಲೆಯ ಕಟ್ಟಡ 200-250ಮೀ ಎತ್ತರದ ಒಂದು ಸಣ್ಣ ಗುಡ್ಡದ ಮೇಲಿದೆ. ಅಷ್ಟು ಸಾಕು! ಕೆಲವೊಮ್ಮೆ ರಸ್ತೆಯಿಂದ ನಡೆದು ಹೋಗುವಾಗ ಆ ಬಿಸಿಲಿಗೆ ಕಾಲುಗಳು ಹೇಳಿದ ಮಾತೇ ಕೇಳುವುದಿಲ್ಲ. ಕಣ್ಣುಗಳು ನೆರಳಿರುವ ಮರಗಳ ಹುಡುಕುವಿಕೆಯಲ್ಲಿ ತಲ್ಲೀನವಾದವು. ಇದು ಸಾಲದೆಂಬಂತೆ ಆ ಹಾದಿಯಲ್ಲಿ ನೆರಳಿಡುವ ಒಂದು ಮರವೂ ಹತ್ತಿರದಲ್ಲಿಲ್ಲ. ಕೇವಲ ಆ 200 ಮೀಟರ್ ಏರುವ ನಡಿಗೆಯೇ ಸಾಕು. ದೇಹದ ಉಷ್ಣ ಏರಿ ಅದನ್ನು ತಂಪಾಗಿಸಲು ಬರುವ ಬೆವರು ಆವರಿಸಿ ಸುರಿಯುತ್ತಿರುತ್ತದೆ. ಕೊನೆ ಕೊನೆಗೆ ಸಿಗುವ ಹೊಂಗೆ ಮರದ ಸ್ವಲ್ಪ ನೆರಳು ಆಕರ್ಷಿಸಿದರೂ ಇನ್ನೇನು ಶಾಲೆ ಬಂತಲ್ಲಾ ಎಂದು ಮುಂದೆ ಸಾಗಿಬಿಡುವುದು ವಾಡಿಕೆ. ಇದಕ್ಕಿಂತ ಹೆಚ್ಚಾಗಿ ವಾರಕ್ಕೊಮ್ಮೆ ಬರುವ ನಮ್ಮ “ಮಾಡೂ ತರಗತಿಗಾಗಿ” ಕಾಯುತ್ತಿರುವ ಮಕ್ಕಳ ಮುಖಗಳ ಮಂದಹಾಸದ ಆಹ್ವಾನ AC ಗಾಳಿಯಂತೆ ಬೀಸಿ ಜೀವ ತಣ್ಣಗಾಗಿಸುತ್ತದೆ.

ಹಾಗಾದರೆ ಪಾಪ ಯಾವಾಗಲೂ ಬಿಸಿಲಿನಲ್ಲೇ ಇರುವ ಮರ-ಗಿಡಗಳ ಗತಿಯೇನು? ಅವುಗಳ AC ಏನು? ನಿಮಗೆ ತಿಳಿದಿರುವ ಹಾಗೆ ಬೇಸಿಗೆಯ ಸಮಯದಲ್ಲಿ ನಮ್ಮ ಸುತ್ತ ಮುತ್ತಲ ಕಾಡಿನ ಮರಗಳು ಒಣಗಿರುತ್ತವೆ. ಹಸಿರಾಗಿರುವ ಕೆಲವು ಮರಗಳು, ನಾವು ಬೆವರಿ ನಮ್ಮ ದೇಹದ ಉಷ್ಣಾಂಶ ತಗ್ಗಿಸುವಂತೆ ಆ ಮರಗಿಡಗಳೂ ಸಹ ಬಾಷ್ಪ ವಿಸರ್ಜನೆಯ ಮೂಲಕ ನೀರಿನ ಅಂಶವನ್ನು ಹೊರ ಹಾಕಿ ತಮ್ಮ ಸುತ್ತಲಿನ ಪ್ರದೇಶ ಹಾಗೂ ಎಲೆ-ಹೂಗಳನ್ನು ತಂಪಾಗಿರಿಸುತ್ತವೆ. ಹೌದು, ನೀವು ಕೇಳುತ್ತಿರುವುದು ಸತ್ಯ. ಹೂಗಳೂ ಸಹ ಆ ಕಾಲದಲ್ಲಿದ್ದರೆ ತಂಪಾಗಿರುತ್ತವೆ. ಬಹುಶಃ ಬಿಸಿಲಿಗೆ ಬೆಂದು ಉಸ್ಸಪ್ಪಾ… ಎಂದು ಕೂತು ವಿಶ್ರಮಿಸುವ ಯೋಚನೆಯಲ್ಲಿರುವ ನಮಗೆ ಇದನ್ನೆಲ್ಲಾ ಪರೀಕ್ಷಿಸಬೇಕೆಂಬ ಕುತೂಹಲ ಇರುವುದಿಲ್ಲ. ಆದರೆ ದಕ್ಷಿಣ ಭಾಗದ ಸ್ಪೇನ್ ನಲ್ಲಿರುವ ಒಬ್ಬ ಸಂಶೋಧಕನಿಗೆ ಅಲ್ಲಿರುವ ಬೆಟ್ಟದ ಸಸ್ಯಗಳನ್ನು ತನ್ನ ಸಂಶೋಧನೆಯ ಸಲುವಾಗಿ ಗಮನಿಸಲು ಹೋದಾಗ ಅಕಸ್ಮಾತಾಗಿ ಅಲ್ಲಿ ಬೇಸಿಗೆಯಲ್ಲಿ ಬೇರೆಲ್ಲ ಗಿಡ ಮರಗಳು ಒಣಗಿರುವ ಆ ಸಮಯದಲ್ಲಿ ಅರಳಿ ಸೊಗಸಾಗಿ ಹಳದಿ ಹೂ ಬಿಡುವ ಥಿಸಲ್ ಗಿಡದ ಹೂವನ್ನು (thistle flower) ಮುಟ್ಟುತ್ತಾನೆ.

ಮುಟ್ಟಿದ ತಕ್ಷಣ ಅವನಿಗೆ ಅರಿವಾಗುತ್ತದೆ ಇದರಲ್ಲೇನೋ ವಿಶೇಷವಿದೆ ಎಂದು. ಏಕೆಂದರೆ ಮುಟ್ಟಿದ ತಕ್ಷಣ ಹೂವಿನ ಮೇಲಿನ ಉಷ್ಣಾಂಶ ಕಡಿಮೆ ಇರುತ್ತದೆ. ‘ಅರೇ ಆದರಲ್ಲೇನಿದೆ ವಿಶೇಷ? ಈ ಮೇಲೆ ನೀವೇ ಹೇಳಿದ ಹಾಗೆ ಮರಗಿಡಗಳ ಹೂಗಳೂ ಸಹ ಅಂತಹ ಬಿಸಿಲಿನಲ್ಲಿ ಬಾಷ್ಪ ವಿಸರ್ಜನೆಯ ಕ್ರಿಯೆಯಿಂದ ತಂಪಾಗಿರುತ್ತವಲ್ಲಾ’ ಹೌದು ನಿಜ, ಆದರೆ ಇಲ್ಲಿನ ವಿಚಾರವೇ ಬೇರೆ. ಸಾಮಾನ್ಯವಾಗಿ ಹೀಗೆ ಮರಗಿಡಗಳು ತಂಪಾಗಿರುತ್ತವಾದರೂ ಅವುಗಳ ಉಷ್ಣಾಂಶ ಸುತ್ತಲಿನ ಗಾಳಿಯ ಉಷ್ಣಾಂಶಕ್ಕಿಂತ ಕಡಿಮೆ ಇರುವುದಿಲ್ಲ. ಆದರೆ ಈ ಹೂವನ್ನು ಮುಟ್ಟಿದಾಗಲೇ ಅವನಿಗೆ ತಿಳಿಯಿತು ಇದು ವಾತಾವರಣದ ಗಾಳಿಯ ಉಷ್ಣಕ್ಕಿಂತ ಹೆಚ್ಚು ಕಡಿಮೆಯಿದೆ ಎಂದು. ಒಂದು ರೀತಿಯಲ್ಲಿ ತನ್ನೊಳಗೆ AC ಯನ್ನು ಇಟ್ಟುಕೊಂಡಿರುವ ಹಾಗಿದೆ.
ಹಾಗಾದರೆ ಎಷ್ಟು ಡಿಗ್ರಿ ಕಡಿಮೆ ಇತ್ತು? ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿಲ್ಲ ಎಂದು ಹೇಳುವುದಿಲ್ಲ. ಲೇಖನದ ಮುಖ್ಯ ಭಾಗವೇ ಅದಲ್ಲವೇ? ಹೇಳುತ್ತೇನೆ, ತನ್ನಲ್ಲಿದ್ದ ಎಲೆಕ್ಟ್ರಾನಿಕ್ ಉಷ್ಣ ಮಾಪಕದ ಸಹಾಯದಿಂದ ಸುಮಾರು 2-3 ಬೇರೆ ಬೇರೆ ಭಾಗಗಳಲ್ಲಿ ಆ ಹೂವಿನ ಉಷ್ಣ ಅಳೆದಾಗ ತಿಳಿದದ್ದು, ಹೂವಿನ ಉಷ್ಣ ಸುತ್ತಲಿನ ಗಾಳಿಯ ಉಷ್ಣಕ್ಕಿಂತ ಸರಾಸರಿ 3 ಡಿಗ್ರಿ ಸೆಲ್ಸಿಯಸ್ ಕಡಿಮೆ ಇತ್ತು ಎಂದು. ಸ್ವಾಭಾವಿಕವಾಗಿ ಒಂದು ಹೂ ಅಂತಹ ಬಿಸಿಲಿನಲ್ಲಿ ಇಷ್ಟು ತಂಪಾಗಿರುವುದು ವಿಶೇಷವೇ. ಇಷ್ಟೇ ಎಂದುಕೊಂಡಿರಿ, ಇನ್ನೂ ಇದೆ. ದಿನಕರ ಜರುಗಿದಂತೆ, ಬಿಸಿಲೇರುತ್ತಾ ಹೋದಂತೆ, ಬಿಸಿ ಹೆಚ್ಚಾದಂತೆ ಹೂವಿನ ಉಷ್ಣಾಂಶ ಕಡಿಮೆಯಾಗುತ್ತಾ ಹೋಯಿತಂತೆ. ಎಷ್ಟೆಂದರೆ, ಸುಮಾರು 10 ಡಿಗ್ರಿ ಸೆಲ್ಸಿಯಸ್ ತನಕ ಕಡಿಮೆ ಇತ್ತಂತೆ. ಅಂದರೆ ವಾತಾವರಣದ ಉಷ್ಣತೆ 45 ಡಿಗ್ರಿ ಇದ್ದರೆ, ಹೂವಿನ ಉಷ್ಣತೆ ಕೇವಲ 35 ಡಿಗ್ರಿ ಸೆಲ್ಸಿಯಸ್. ತನ್ನ ಸುತ್ತಲಿನ ಗಾಳಿಯ ಉಷ್ಣಾಂಶಕ್ಕೆ ಹೋಲಿಸಿದರೆ ಇಷ್ಟು ವ್ಯತ್ಯಾಸ ಇರುವುದು ಅಚ್ಚರಿಯೇ! ಒಂದು ರೀತಿಯಲ್ಲಿ, ತನ್ನಲ್ಲಿ ಒಂದು ಸ್ವಾಭಾವಿಕ AC ಯನ್ನೇ ಇರಿಸಿಕೊಂಡು ತಂಪಾದಂತೆ.
ಸಾಮಾನ್ಯವಾಗಿ ಒಂದು ಗಿಡ ಅಥವಾ ಮರದ ಎಲೆಗಳು ಹೀಗೆ ಬಿಸಿಲಿನಲ್ಲಿ ತಂಪಾಗಿರುತ್ತವೆ. ಆದರೆ ಇಲ್ಲಿ ಹೂಗಳೇ ತನ್ನ ಆ ಗಿಡದ ಎಲೆಗಳಿಗಿಂದ ತಂಪಾಗಿರುವುದು ವಿಶೇಷ. ಒಂದು ವಿಧವಾಗಿ ಸಂಶೋಧಕನ ಹಾಗೆ ಯೋಚಿಸಿದರೆ ಆ ಬಿಸಿಲಿನಲ್ಲಿ ಹೀಗೆ ಹೂ ತಂಪಾಗಿರುವುದರಿಂದ ಪರಾಗಸ್ಪರ್ಷಕಗಳನ್ನು ಆಕರ್ಷಿಸಲು ಇದೊಂದು ಗಿಡದ ಬುದ್ಧಿವಂತ ಹೆಜ್ಜೆಯಾಗಿರಬಹುದು. ಆದರೆ ‘ಇದಕ್ಕೆ ನಿಖರ ವೈಜ್ಞಾನಿಕ ಕಾರಣವೇನೆಂದು ಈ ವಿಷಯದ ಬಗ್ಗೆ ಹೆಚ್ಚಾಗಿ ಸಂಶೋಧನೆ ಇಲ್ಲದೇ ಇರುವುದರಿಂದ ತಿಳಿದಿಲ್ಲ. ಈಗ ಆ ಸಮಯ ಬಂದಿದೆ. ಹೂಗಳ ಈ ನಡವಳಿಕೆಗಳಿಗೆ ವೈಜ್ಞಾನಿಕ ಕಾರಣ ಹುಡುಕಬೇಕಿದೆ.’ ಎನ್ನುವ ಸಂಶೋಧಕನ ಮಾತು ಒಪ್ಪುವಂಥದ್ದು.
1983ರಲ್ಲಿ ಬಂದ ಕನ್ನಡ ಚಲನಚಿತ್ರ ‘ಬೆಂಕಿಯಲ್ಲಿ ಅರಳಿದ ಹೂ’ ನಂತೆ ತನ್ನ ಸ್ವಂತ ಸ್ವಾಭಾವಿಕ ‘AC ಯಲ್ಲಿ ಅರಳಿದ ಹೂ’ ವನ್ನು ನಾವಿಲ್ಲಿ ನೋಡಬಹುದು. ಆದರೆ ಈ ಎರಡು ಹೇಳುವಂತೆ ತನ್ನ ಸುತ್ತ ಸುತ್ತಿರುವ ಕಠಿಣ-ಕಷ್ಟದ ವಾತಾವರಣವನ್ನೂ ಮೀರಿ ಅರಳುವ ಛಲ ನಮ್ಮಲ್ಲಿ ಇರಬೇಕೆಂಬ ಸಂದೇಶ ನಾವು ಅರಿಯಬೇಕಿದೆ….

ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ