ಶೂರಾ ಪೋರರ ಕೇರೆ ಕಥನ

© ಜಿ. ಪ್ರೆಜಿನ್
“ಇವತ್ ಕೊನೆ ಕೊಯ್ಲ್ ಮುಗುಸ್ತ್ವಾ ಇಲ್ಯನ ಮಾರಾಯ” ಎಂದು ಅಪ್ಪ ಹೇಳುವಷ್ಟರಲ್ಲಿ ನೇಣು ಹಿಡಿಯುವ ಹುಡುಗ “ಚಾ ಕೊಡ್ತ್ರಾ” ಎನ್ನುತ್ತಾ ಹಲ್ಕಿರಿದುಕೊಂಡು ಬಂದ. “ಮದ್ಯಾನಕ್ ಮುಗ್ಸ್’ಬೋದು” ಅಂದಾಗ ಅಪ್ಪನಿಗೆ ಸಮಾಧಾನವಾಯ್ತು. “ಹಂಗಾರ್ ಒಂದ್ ಕೆಲ್ಸ ಇದೆ. ಕಡೆಗೆ ಹೇಳ್ತೆ. ಹಂಗೇ ಮುಗ್ಸ್ಕಂಡ್ ಓಡಿ ಹೋಗ್ಬೇಡಿ ಹ್ಹಾ.” ಹ್ಹೂ ಎಂದ ಹುಡುಗ ಟೀ ಕ್ಯಾನು ತೆಗೆದುಕೊಂಡು ತೋಟಕ್ಕೆ ಓಡಿದ.
ನಮ್ಮ ಮನೆಯಲ್ಲೊಂದು ಗೋಡಾನಿದೆ. ಅಡಕೆ, ಹಿಂಡಿ, ಕೆಲಸದ ಪರಿಕರ ಹೀಗೆ ಹತ್ತು ಹಲವು ವಸ್ತುಗಳನ್ನು ತುಂಬಿ ಬಿಡುತ್ತಿದ್ದೆವು. ಕಳೆದ ಸಲದ ಒಣಗೋಟು ಅಡಿಕೆಯ ಚೀಲಗಳು ಕಾರಣಾಂತರಗಳಿಂದ ಮಂಡಿಗೆ ಸೇರದೆ ಉಳಿದುಬಿಟ್ಟಿದ್ದವು. ಗೋಡಾನಿನಲ್ಲಿ ಓಡಾಡಲು ಹೊರತುಪಡಿಸಿ ಜಾಗವೇ ಇಲ್ಲದಾಗಿತ್ತು. ಮಾಡಿನ ಸಂದಿನಿಂದೆಲ್ಲೋ ಸೇರಿಕೊಂಡ ಇಲಿಗಳು ಅರಮನೆಯೇ ಸಿಕ್ಕಿತು ಎಂದು ಭಾವಿಸಿದಂತೆ ಸಂಸಾರ ಪ್ರಾರಂಭಿಸಿ ಎಲ್ಲಾ ಚೀಲಗಳಿಗೂ ತೂತು ಕೊರೆದು ಹೆದ್ದಾರಿ ಮಾಡಿಕೊಂಡಿದ್ದವು. ಎಲ್ಲಾ ಚೀಲಗಳನ್ನು ಹೊರಗೆ ಹಾಕದೇ ಇಲಿಗಳ ದಮನ ಸಾಧ್ಯವೇ ಇರಲಿಲ್ಲ. ಕೊನೆ ಕೊಯ್ಲಾದ ಮೇಲೆ ಆ ಹುಡುಗರಿಂದ ಮೂಷಿಕ ದಮನ ಮಾಡಿಸಬೇಕು ಎಂದು ಅಪ್ಪ ಯೋಚಿಸಿದ್ದ. ಮರಿಯ, ರಾಜೇಶ ಮತ್ತಿಬ್ಬರು ಹುಡುಗರು ತೋಟದ ಕೆಲಸ ಮುಗಿಸಿ ಉಂಡು ಬಂದರು. ಎಲ್ಲರ ಕೈಗೂ ಒಂದೊಂದು ದೊಣ್ಣೆಯನ್ನು ಕೊಟ್ಟೆ. ಯುದ್ಧಕ್ಕೆ ಹೊರಡುವ ಮೊದಲು ಚೀಲಗಳನ್ನು ಹೊರ ಹಾಕಬೇಕಲ್ಲಾ! ನಾನೂ ಸೇರಿಕೊಂಡೆ. ಸರಿಸುಮಾರು ಎಲ್ಲವೂ ತೂತಾಗಿದ್ದರಿಂದ ಒಣ ಅಡಿಕೆ ಉದುರಿ ಬೀಳತೊಡಗಿದವು. ಇನ್ನೊಂದೆರಡು ಸಾಲು ಉಳಿದಿವೆ ಅನ್ನುವಾಗ ಒಂದು ಚೀಲದ ಸಂದಿಯಲ್ಲಿ ಕರ್ರಗಿನ ಬೆಲ್ಟಿನಂಥದ್ದೇನೋ ಕಂಡಿತು. ಒಂದೇ ನೋಟಕ್ಕೆ ಇದು ಹಾವೇ ಎಂಬುದು ನನಗೆ ಸ್ಪಷ್ಟವಾದರೂ ನಿಧಾನಕ್ಕೆ ಚೀಲವನ್ನೆತ್ತಿ ರಾಜೇಶನ ತಲೆಗೆ ಏರಿಸಿದೆ. ಕರ್ರಗಿನ ಕೇರೆ ಹಾವು ಬೆಚ್ಚಗೆ ಸುರುಳಿ ಸುತ್ತಿಕೊಂಡು ಮಲಗಿತ್ತು.

ಸರಿಸುಮಾರು ಒಂದೂವರೆ ಮಾರಿನಷ್ಟು ಉದ್ದವಿದ್ದ ಕೇರೆ ಹಾವನ್ನು ಕಾಣುತ್ತಲೇ ಎಲ್ಲರೂ ಹೌಹಾರಿ ಹೊರಗೆ ಧಾವಿಸಿದರು. ನಿದ್ದೆಗಣ್ಣಿಂದ ಎಚ್ಚೆತ್ತ ಹಾವು ತಬ್ಬಿಬ್ಬಾಗಿ ಇಲಿಗಳ ಹೆದ್ದಾರಿಯ ಒಳಗೆ ಸೇರಿಕೊಂಡುಬಿಟ್ಟಿತು. “ಲೇ. . . ಹಾವಲೇ. . .”, ” ಓಡು ಓಡು ಕೋಲ್ ತಕ ಬಾ”. “ಅದೇನ್ ವಿಷದ್ ಹಾವಲ್ಲ ಸುಮ್ನಿರಿ ಮಾರಾಯ. ಅದ್ ಎಂತ ಮಾಡದಿಲ್ಲ”, ಹೌದೆಂದು ಗೋಣಲ್ಲಾಡಿಸಿ ಒಬ್ಬೊಬ್ಬರೇ ಒಳ ಬಂದರು. ಉಳಿದ ಎಲ್ಲಾ ಚೀಲಗಳನ್ನೂ ನಿಧಾನಕ್ಕೆ ಸರಿಸಿ ಹೊರಗೆ ಸೇರಿಸಿದೆವು. ದೊಣ್ಣೆಗಳ ದುರಾದೃಷ್ಟಕ್ಕೆ ಎಲ್ಲಾ ಇಲಿಗಳನ್ನೂ ಹಾವು ಸ್ವಾಹಾ ಮಾಡಿತ್ತು. ಅದೆಷ್ಟು ದಿನಗಳಿಂದ ಸೇರಿಕೊಂಡಿತ್ತೋ ಏನೋ. ದೇಹದ ಪುಷ್ಟಿಯನ್ನು ಗಮನಿಸಿದರೆ ಅದು ಇಲ್ಲಿರುತ್ತಾ ಬಹಳ ದಿನಗಳೇ ಕಳೆದಿರಬೇಕು.

ನಮ್ಮನೆ ಬೆಕ್ಕಂತೂ ಅದೇ ರೂಮಿನಲ್ಲಿ ದಿನಾ ಮಲಗುತ್ತಿತ್ತು. ಒಂದು ದಿನವೂ ಇಲಿಯನ್ನು ಹಿಡಿಯುತ್ತಿರಲಿಲ್ಲ. ಜೆರ್ಸಿ ಹಾಲಿನ ಪರಮಭಕ್ತನಾದ ಅದು ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬಂತೆ ಹಿಂಡಿಯನ್ನೂ ಇಲಿಗಳ ಜೊತೆ ಹಂಚಿ ತಿನ್ನುತ್ತಿತ್ತು. ಹಾವನ್ನು ಕಂಡಿದ್ದರೂ ಸೋಂಬೇರಿಯಾಗಿದ್ದರಿಂದ ತಲೆ ಕೆಡಿಸಿಕೊಂಡಿರಲಿಲ್ಲವೇನೋ. ಅಷ್ಟಕ್ಕೂ ಹೆಬ್ಬಾವು ಅಲ್ಲವಲ್ಲ. “ಥೋ ಇದೆಲ್ಲಿಂದ ಬಂದು ಸೇರಿಕೊಳ್ತೋ ಮಾರಾಯ” ಎಂದು ಗೊಣಗುತ್ತಾ ಅಪ್ಪ ಕಿಟಕಿಗಳನ್ನು ಪೂರ್ತಿ ತೆರೆದು ಅಳಿದುಳಿದ ಸಣ್ಣ ಪುಟ್ಟ ಸಾಮಾನುಗಳನ್ನು ಆಚೆ ಹಾಕಲು ನಿರ್ದೇಶಿಸಿದ. ಎರಡು ಕಪಾಟುಗಳನ್ನು ಮಾತ್ರ ಜರುಗಿಸಲು ಸಾಧ್ಯವಿರಲಿಲ್ಲ. ರಾಜೇಶ ಮತ್ತು ಗ್ಯಾಂಗ್ ಕೋಲುಗಳನ್ನು ಸನ್ನದ್ಧಗೊಳಿಸಿದರು.

ಕಾಡಿನ ಹುಡುಗರಾದ ರಾಜೇಶ ಹಾಗೂ ಅವನ ಗೆಳೆಯರಿಗೆ ಕೇರೆ ಹಾವನ್ನು ಓಡಿಸುವುದು ಬಹಳ ಸುಲಭವೆಂದೇ ತಿಳಿದಿದ್ದೆ. ಹಾವು ಬೆದರದಂತೆ ಜಾಗರೂಕತೆಯಿಂದ ಬಾಗಿಲ ಬಳಿ ಹೋಗುವಂತೆ ಮಾಡುತ್ತಾರೆ ಎಂದು ಹೊರಗಿನಿಂದ ಇಣುಕುತ್ತಿದ್ದೆ. ಹುಡುಗರಿಗೆ ಇದು ಆಟವಾಗಿ ತೋರಿತೆಂದು ಕಾಣುತ್ತದೆ. ‘ಏ ಅಲ್ ಬಂತು’, ‘ಬಡಿ ಬಡಿ’, ‘ಓಡಲೇ’. ಹಾವು ಗಾಬರಿಯಿಂದ ಅತ್ತಿಂದಿತ್ತ ಸರಿದಾಡತೊಡಗಿ ಕೊನೆಗೆ ಕಪಾಟಿನ ಅಡಿಯಿಂದ ಮೇಲಕ್ಕೆ ಎಲ್ಲೋ ಒಳಗೆ ಅವಿತುಬಿಟ್ಟಿತು. ಈ ಆಟಗಳಿಂದ ಸಿಟ್ಟುಗೊಂಡ ನಾನು ಇದೀಗ ನನ್ನ ಸರದಿ ಎಂಬಂತೆ ಇನ್ಸ್ಟಾಗ್ರಾಮು ಹಾಗೂ ಯುಟ್ಯೂಬುಗಳಲ್ಲಿ ಹಾವುಗಳನ್ನು ಹಿಡಿಯಲು ಉಪಯೋಗಿಸುವ ಚೀಲ ಹಾಗೂ PVC ಪೈಪಿನ ಸಣ್ಣ ತುಂಡೊಂದನ್ನು ಹುಡುಕಿಕೊಂಡು ಬಂದೆ. ಚೀಲದ ಬಾಯಿಯನ್ನು ಪೈಪಿಗೆ ಸುತ್ತಿ ಹಗ್ಗದಿಂದ ಕಟ್ಟಿದೆ. ನನ್ನ ಈ ಆನ್ಲೈನ್ ಜ್ಞಾನಕ್ಕೆ ನಾನೇ ಮನದೂಗಿ ಈ ಚೀಲದೊಳಗೆ ಹಾವು ನುಗ್ಗಿ ಹಿಡಿಯುವಾಗ ಎಲ್ಲರೆದುರು ಶಭಾಸುಗಿರಿಯನ್ನು ಗಿಟ್ಟಿಸಬಹುದು ಎಂದು ದುರಾಲೋಚನೆ ಮಾಡಿದೆ.

ಅಷ್ಟರಲ್ಲಿ ಕಪಾಟನ್ನು ಅಡ್ಡ ಮಲಗಿಸಲಾಗಿತ್ತು. ಹಾವು ಅದರಡಿ ಸಿಕ್ಕಿ ಅಪ್ಪಚ್ಚಿಯಾಯಿತು ಎಂತಲೇ ನಾನು ಭಾವಿಸಿದೆ. ನನ್ನ ಚೀಲವನ್ನು ಗೋಡೆಯ ಮೂಲೆಯಲ್ಲಿ ಹಾವು ಹಿಂದೆ ಓಡಾಡಿಹೋದ ದಾರಿಯಲ್ಲಿ ಮಲಗಿಸಿ ಅತ್ತ ಹಾವನ್ನು ಓಡಿಸಿ ಎಂದೆ. ನನ್ನಪ್ಪನಿಗೆ ನನ್ನ ಈ ಧೈರ್ಯತನವನ್ನು ಕಂಡು ದಿಗಿಲಾಯ್ತು. ಅಷ್ಟರವರೆಗೆ ಅಂಗಳದಲ್ಲಿ ನಮ್ಮ ಹುಡುಗಾಟಿಕೆಯನ್ನು ನೋಡುತ್ತಾ ಕೌಳ ಮೆಲ್ಲುತ್ತಿದ್ದ ಮರಿಯನಿಗೆ ರೋಸಿ ಹೋಯ್ತು. ಅದೆಲ್ಲಿಂದಾಲೋ ಬಲೆಯನ್ನು ತಂದು ಹಾವಿನ ಮೇಲೆ ಎಸೆದ. ಹಾವು ಒಂದಷ್ಟು ಒದ್ದಾಡಿ ಬಲೆಯಲ್ಲಿ ಸಿಲುಕಿ ಹಾಕಿಕೊಂಡಿತು. ಹೀರೋನಂತೆ ಪೋಸು ಕೊಡಬೇಕೆಂದು ಕಾದಿದ್ದ ನನ್ನ ಪ್ಲಾನು ಠುಸ್ಸಾಯ್ತು. ನಾನು ಬಾಗಿಲ ಹೊರಗೆ ಪೆಚ್ಚಾಗಿ ಬಂದು ನಿಂತೆ. ಹಾವು ಸೋಲೊಪ್ಪಲಿಲ್ಲ. ಕೊಸರಾಡಿ ಬಲೆಯಿಂದ ತಪ್ಪಿಸಿಕೊಂಡು ಸೀದಾ ಬಾಗಿಲ ಹೊರಗೆ ಚಿಮ್ಮಿತು. ನಾನು ಬದಿಗೆ ಹಾರಿಕೊಂಡೆ. ಸತ್ತೇನೋ ಬಿಟ್ಟೇನೋ ಎಂಬಂತೆ ಕಂಗಾಲಾಗಿದ್ದ ಕೇರೆ ಹಾವು ಮನೆಯ ಪಕ್ಕದಲ್ಲಿದ್ದ ತೆಂಗಿನಕಾಯಿಗಳ ರಾಶಿಯೊಳಗೆ ಅಂತರ್ಧಾನವಾಯ್ತು.
ಮತ್ ಬತ್ ಅದು; ಒಮ್ಮಿ ಇಲಿ ಕಂಡ್ ಮೇಲ್ ಬಿಡುದಿಲ್ಲ” ಎಂದು ಮರಿಯ ತನ್ನ ಜ್ಞಾನವನ್ನು ಹಂಚಿಕೊಂಡ. ಎಲ್ಲರೂ ಹ್ಹೂ ಗುಟ್ಟಿದೆವು. ಅಷ್ಟರವರೆಗೂ ಯಾರೂ ಗೋಡಾನಿನ ಇನ್ನೊಂದು ಮೂಲೆಯನ್ನು ಗಮನಿಸಿರಲಿಲ್ಲ. ಎರಡು ಇಲಿಗಳು ಬಚ್ಚಿಟ್ಟುಕೊಳ್ಳಲು ಜಾಗ ಹುಡುಕುತ್ತಿದ್ದವು. ರಾಜೇಶನಿಗೆ ಮತ್ತೆ ಹುಮ್ಮಸ್ಸು ಬಂತು. “ಹೊಡಿರಲೇ. . .”, “ಓಡ್ರಲೇ. . .”, “ಬಾರ್ಸಲೇ!!”

ಲೇಖನ: ಸಚಿನ್ ಬಿ. ಎಸ್.
ಶಿವಮೊಗ್ಗ ಜಿಲ್ಲೆ