ಕಾಣದ ಕಾನನ

© ಡಾ. ಅಶ್ವಥ ಕೆ. ಎನ್.
ನೋಟದುದ್ದಕ್ಕೂ ಕಾಣುವ ಹಸಿರು, ಹಸಿರು ಹೊದ್ದ ಗುಡ್ಡ ಬೆಟ್ಟಗಳು, ಎತ್ತರ ಮರ, ಹರಿಯುವ ನದಿ, ನೆಲಕ್ಕಂಟಿರುವ ಪಾಚಿ, ಪಕ್ಷಿಗಳ ಚಿಲಿಪಿಲಿ, ದಾರಿಯುದ್ದಕ್ಕೂ ನೆರಳು.
ಕಾಡು ಎಂದಾಕ್ಷಣ ಎಲ್ಲರಲ್ಲೂ ಮೂಡುವ ಸಹಜ ಚಿತ್ರಣವಿದು, ಆದರೆ ಇದಕ್ಕೂ ಮೀರಿ ಕಾಣದ ಕಾನನಗಳೂ ಉಂಟು. ರಣ ಬಿಸಿಲು, ಅಲ್ಲಲ್ಲಿ ತೇಪೆಯಂತೆ ಬೆಳೆದಿರುವ ಮರಗಳು, ಕುಬ್ಜ ಗಿಡಗಳು, ಬಿಸಿಲಿಗೆ ಕಾದ ಕಲ್ಲು ಬಂಡೆಗಳು, ಒಣ ಹವೆ, ಅಲ್ಲಲ್ಲಿ ಪುಟ್ಟ ಕೊಳ್ಳಗಳಲ್ಲಿ ನೀರಿನ ಮೂಲ, ಇದಕ್ಕೆ ಹೊಂದಿಕೊಂಡಂತೆ ತನ್ನದೇ ಪ್ರಾಣಿವರ್ಗ, ವಿಶಿಷ್ಟ ಸಸ್ಯಸಂಪತ್ತು ಇವು ಕರ್ನಾಟಕದ ಬಹುಭಾಗದ ಪಾಲುದಾರಿಕೆ ಹೊಂದಿರುವ ಕುರುಚಲು ಗುಡ್ಡಗಾಡು ಅರಣ್ಯಗಳು. ಸಾಧಾರಣ ಎತ್ತರಕ್ಕೆ ಬೆಳೆಯುವ ಮರಗಳು, ನೆಟ್ಟ ವಿವಿಧ ಉಪಯೋಗಿ ಮರಗಳು ಕರ್ನಾಟಕದ ಉತ್ತರ ಭಾಗದ ತುಂಬೆಲ್ಲಾ ಹರಡಿಕೊಂಡಿರುವ ಈ ಪ್ರದೇಶವು ಭೌಗೋಳಿಕವಾಗಿ ಡೆಕ್ಕನ್ ಪ್ರಸ್ಥಭೂಮಿಗೆ ಒಳಪಡುತ್ತದೆ. ಅದಕ್ಕಾಗಿಯೇ ಡೆಕ್ಕನ್ ಕುರುಚಲು ಕಾಡು ಎಂಬ ಹೆಸರು ಉಂಟು. ಯಾವುದೇ ಇತರ ಕಾಡುಗಳಿಗೆ ಹೋಲಿಸಿದರೆ ಈ ಕಾಡು ತನ್ನದೇ ಆದ ವೈಶಿಷ್ಟ್ಯತೆ ಮತ್ತು ವಿಸ್ಮಯತೆಯನ್ನು ಕಾಯ್ದುಕೊಂಡಿದೆ.
ಸುಮಾರು 700 ಮಿ. ಮೀ ಸರಾಸರಿ ಮಳೆ ಹಾಗು ಗರಿಷ್ಠ 42°c ನಷ್ಟು ತಾಪಮಾನಕ್ಕೆ ಹೊಂದಿಕೊಳ್ಳುವಂತ ಸಸ್ಯಸಂಕುಲ ಈ ಕಾಡನ್ನು ಅಸಾಮಾನ್ಯವಾಗಿಸುತ್ತದೆ. ಗುರಿಯಾ ಹುಲ್ಲು (chrysopogonfluvs) ಛಾವಣಿ ಹುಲ್ಲು (heteropogon contortus) ಕಾಗೇಪಾದ (dactyloctenium) ದಂತಹ ಹುಲ್ಲುಗಳು ಪ್ರಾಣಿಗಳಿಗೆ ಮೇವು ಅಷ್ಟೇ ಅಲ್ಲದೆ ಮನುಕುಲಕ್ಕೆ ಪೊರಕೆ, ಛಾವಣಿಗೆ ಆಸರೆಯಾಗಿವೆ. ಬೇವು (Azadirachta indica), ನೀಲಗಿರಿ (Eucalyptus), ಹೊಂಗೆಯಂತಹ (Pongamia pinnata) ಎತ್ತರದ ಮರಗಳು; ಇಂಗಳ (balanites roxburghii), ಛತ್ರಿ ಗಿಡ, ಜರಿಗಿಡ (Psilotum nudum), ಬೆಡ್ಡೋಮಿ ಗಿಡ (Cycas beddomei) ನಂತಹ ಮುಳ್ಳಿನ ಪ್ರಭೇದಕ್ಕೆ ಸೇರಿದ ಗಿಡಗಳು ಮಾನವನಿಗೆ ನೈಸರ್ಗಿಕ ಸಂಪನ್ಮೂಲವಾಗಿ, ಅನೇಕ ಔಷಧೀಯ ಗುಣಗಳನ್ನೂ ಹೊಂದಿವೆ. ಚಳ್ಳೆ ಗಿಡ (cordia myxa), ಕಾಡು ಬಾರೆ (Ziziphus genus), ಕರಂಡೆ (Carissa carandas) ದಂತಹ ಗಿಡಗಳು ತಮ್ಮ ಆಕರ್ಷಕ ಹಣ್ಣುಗಳಿಂದ ಅನೇಕ ವಿಧದ ಪ್ರಾಣಿ-ಪಕ್ಷಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತವೆ, ಗದಗದ ಕಪ್ಪತಗುಡ್ಡ ವನ್ಯಜೀವಿ ಧಾಮ ಇದಕ್ಕೆ ಒಂದು ಉದಾಹರಣೆ. ಇದು ವಿವಿಧ ರೀತಿಯ ಔಷಧೀಯ ಸಸ್ಯಗಳ ಆಗರವಾಗಿವೆ.
ಅತಿಯಾದ ಹಸಿರು ದಟ್ಟಣೆಯಿರದ ಕಾರಣ ಪಶ್ಚಿಮ ಘಟ್ಟಕ್ಕೆ ಹೋಲಿಸಿದಲ್ಲಿ ಪ್ರಾಣಿ ಪ್ರಭೇದ ಕೊಂಚ ಕಡಿಮೆ. ನಾಗರಹಾವು, ಓತಿಕ್ಯಾತ, ಹಾವುರಾಣಿ, ಉಡ, ಚೇಳು ಇಲ್ಲಿನ ಪ್ರಮುಖ ಸರೀಸೃಪಗಳು. ಹೆಬ್ಬಕ್ಕ (great Indian bustrud), ಬೆಳ್ಳಕ್ಕಿ (egrets), ಟಿಟ್ಟಿಬ, ಮಿಂಚುಳ್ಳಿ, ಗೂಬೆ ಇಲ್ಲಿನ ಸಾಮಾನ್ಯ ಪಕ್ಷಿಗಳು. ತೋಳ, ಭಾರತೀಯ ನರಿ, ಕಾಡು ಬೆಕ್ಕು, ಮುಂಗುಸಿಗಳನ್ನು ಸಾಮಾನ್ಯವಾಗಿ ಕಾಣಬಹುದು.
ಇವುಗಳನ್ನು ಹೊರತುಪಡಿಸಿ ವಿಶೇಷವಾಗಿ ಕಾಣಸಿಗುವ ಕೃಷ್ಣಮೃಗ (black buck), ಕರಡಿ (sloth bear), ಚಿಂಕಾರಗಳನ್ನೂ ಕಾಣಬಹುದು. ಇವುಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ರಾಣಿಬೆನ್ನೂರಿನಲ್ಲಿ ಕೃಷ್ಣಮೃಗ ಅಭಯಾರಣ್ಯ, ದಾರೋಜಿಯಲ್ಲಿ ಕರಡಿ ಅಭಯಾರಣ್ಯ, ತುಂಗಭದ್ರೆಯ ಮಡಿಲಲ್ಲಿ ನೀರುನಾಯಿ ಸಂರಕ್ಷಣಾ ಮೀಸಲು, ಬಂಕಾಪುರದಲ್ಲಿ ನವಿಲು ಕಾಪುಗಾಡು, ಯಡಹಳ್ಳಿಯ ಚಿಂಕಾರ ಅಭಯಾರಣ್ಯ, ಅದಲ್ಲದೆ ಅನೇಕ ವಲಸೆ ಪಕ್ಷಿಗಳಿಗೆ ಮಾತೃ ಮಡಿಲಾಗಿರುವ ಮಾಗಡಿ ಕೆರೆ (ಪಟ್ಟೆತಲೆ ಹೆಬ್ಬಾತು) ಸಂರಕ್ಷಣಾ ಮೀಸಲು, ಅತ್ತಿವೇರಿ ಪಕ್ಷಿಧಾಮ, ಅಂಕಸಮುದ್ರ ಪಕ್ಷಿಧಾಮ, ಕೃಷ್ಣಾ ನದಿಯ ದಡದ ಘಟಪ್ರಭಾ ಪಕ್ಷಿಧಾಮ ಅನೇಕ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಿ ಈ ಕಾಡುಗಳ ಶ್ರೇಯ ಹೆಚ್ಚಿಸಿವೆ.
ಲೇಖನ: ಪ್ರಜ್ವಲ್ ಸಿಂಧೂರ್
ಬಾಗಲಕೋಟೆ ಜಿಲ್ಲೆ.