ಸಸ್ಯ ರೋಗಗಳು

ಸಸ್ಯ ರೋಗಗಳು

ಚಿತ್ರ :  ಶಂಖಪುಷ್ಟ ಗಿಡದ ಎಲೆ ಬೂದಿ ರೋಗ © ಡಾ. ಎಸ್. ಶಿಶುಪಾಲ 

ಕಷ್ಟ ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತದೆಯೇ? ಎಂಬುದೊಂದು ಗಾದೆ ಮಾತು. ಸತ್ಯ ಹೇಳಬೇಕೆಂದರೆ ಗಿಡ-ಮರಗಳಿಗೂ ಕಷ್ಟಗಳಿವೆ. ಭೂಮಿಯಲ್ಲಿರುವ ಜೀವಿಗಳಲ್ಲಿ ಸಸ್ಯಗಳದ್ದೇ ಮೇಲುಗೈ. ಮಾನವ ಸೇರಿದಂತೆ ಎಲ್ಲಾ ಜೀವಿಗಳು ಸಸ್ಯಗಳ ಮೇಲೆ ಅವಲಂಬಿತ. ಹಾಲು, ಮೊಟ್ಟೆ, ಮಾಂಸ ಉತ್ಪಾದಿಸುವ ಜೀವಿಗಳೂ ಸಹ ಸಸ್ಯಗಳನ್ನೇ ಆಹಾರವಾಗಿ ಬಳಸುವುದು. ಸಸ್ಯಗಳು ತಮ್ಮ ವಿಶಿಷ್ಟ ದ್ಯುತಿಸಂಶ್ಲೇಷಣೆ (Photosynthesis) ಕ್ರಿಯೆಯಿಂದ ಸೌರಶಕ್ತಿಯನ್ನು ಬಳಸಿ ಆಹಾರ ತಯಾರಿಸುವ ಜೀವಿಗಳಾದ್ದರಿಂದ ಅವುಗಳನ್ನು ದ್ಯುತಿಸ್ವಯಂಪೋಷಣೆ (Photoautotrophs) ಎನ್ನುವರು.  ಶರ್ಕರ, ಪ್ರೊಟಿನ್ ಮತ್ತು ಕೊಬ್ಬನ್ನು ಉತ್ಪಾದಿಸಿ ಬೇರೆಲ್ಲಾ ಜೀವಿಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಅಷ್ಟೇ ಅಲ್ಲದೇ ಜೀವಿಗಳಿಗೆ ಬೇಕಾದ ಆಮ್ಲಜನಕವನ್ನು ಸಸ್ಯಗಳು ಹೊರಸೂಸುತ್ತವೆ. ಭೂಮಿಯಲ್ಲಿ ಎಲ್ಲಾ ಜೀವಿಗಳ ಅಗತ್ಯಗಳನ್ನು ಪೂರೈಸುವ ಸಸ್ಯಗಳ ಕೆಲಸಗಳಿಗೆ ಅಡಚಣೆ ಎಂದರೆ ರೋಗಗಳು. ಇವು ಮಾನವ ಮತ್ತು ಇತರೆ ಪ್ರಾಣಿಗಳಿಗೆ ಬರುವ ರೋಗಗಳಂತೆಯೇ ಇರುತ್ತವೆ.

ಸಸ್ಯರೋಗಗಳ ಗುಂಪುಗಳು:

ಸಸ್ಯರೋಗಗಳನ್ನು ಎರಡು ಪ್ರಮುಖ ಗುಂಪುಗಳಾಗಿ ವಿಂಗಡಿಸಬಹುದು. ಒಂದು ಸಾಂಕ್ರಮಿಕ ರೋಗಗಳು (Infectious diseases) ಸೂಕ್ಷ್ಮಜೀವಿಗಳಿಂದ ಉಂಟಾದರೆ ಮತ್ತೊಂದು ಅಸಾಂಕ್ರಮಿಕ ರೋಗಗಳು (Non-infectious diseases) ಪರಿಸರದ ಪ್ರತಿಕೂಲ ಪರಿಣಾಮಗಳಿಂದಾಗುವುದು. ಹಲವಾರು ವೈರಸ್‌ಗಳು, ದಂಡಾಣುಗಳು (Bacteria), ಶಿಲೀಂದ್ರಗಳು, ಪ್ರೊಟೊಜೂವ, ಹುಳು ಮತ್ತು ಕೀಟಗಳು ಸಸ್ಯಗಳಲ್ಲಿ ರೋಗಕಾರಕಗಳಾಗಿವೆ. ಅಲ್ಲದೇ ತಾಪಮಾನ, ಮಣ್ಣಿನ ತೇವಾಂಶ, ಆಮ್ಲೀಯತೆ/ಕ್ಷಾರತೆ, ಬೆಳಕು, ಪೋಷಕಾಂಶಗಳು, ರಾಸಾಯನಿಕ ಕಲ್ಮಶಗಳು, ಪೀಡೆನಾಶಕಗಳು ಸಸ್ಯಾರೋಗ್ಯವನ್ನು ಹದಗೆಡಿಸಬಹುದು. ಯಾವ ಜೀವಿಯಿಂದ ರೋಗ ತಗುಲಿದೆ, ಯಾವ ಅಂಗಕ್ಕೆ ರೋಗ ತಗುಲಿದೆ ಎಂಬ ಆಧಾರದ ಮೇಲೂ ಸಸ್ಯರೋಗಗಳನ್ನು ವಿಭಾಗಿಸಬಹುದು.

ಸಸ್ಯಗಳು ನೋವು ಅನುಭವಿಸುತ್ತವೆ ಆದರೆ ಹೇಳಿಕೊಳ್ಳಲು ಬರುವುದಿಲ್ಲ. ಹಾಗಾಗಿ ಸಸ್ಯರೋಗ ಎಂದರೆ ಯಾವುದೇ ತರಹದ ಅಸಹಜ ಲಕ್ಷಣಗಳು, ಕುಂಠಿತ ಬೆಳವಣಿಗೆ ಅಥವಾ ಇಳುವರಿ ಕಡಿಮೆಯಾದಾಗ ರೋಗಗಳಿಂದ ಆಗಿರಬಹುದು ಎಂದು ಅಂದಾಜಿಸಬಹುದು. ಸಸ್ಯಗಳ ಸಹಜ ಬೆಳವಣಿಗೆ ಅವುಗಳಲ್ಲಿನ ಚಯಾಪಚಯ ಕ್ರಿಯೆಗಳನ್ನು (Metabolism) ಅವಲಂಬಿಸಿದೆ. ಈ ಕ್ರಿಯೆಗಳೆಂದರೆ ಬೇರಿನ ಮೂಲಕ ನೀರು ಮತ್ತು ಪೋಷಕಾಂಶಗಳ ಹೀರುವಿಕೆ, ವಿವಿಧ ಭಾಗಗಳಿಗೆ ಅವುಗಳ ರವಾನೆ, ದ್ಯುತಿಸಂಶ್ಲೇಷಣೆ, ಉಸಿರಾಟ, ರಸದೂತಗಳ ಸ್ರವಿಕೆ, ವಂಶಾಭಿವೃದ್ಧಿ, ಹೂ, ಹಣ್ಣು ಮತ್ತು ಬೀಜಗಳ ಉತ್ಪಾದನೆ ಮುಂತಾದವು. ಇವುಗಳಲ್ಲಿ ಯಾವುದಾದರೊಂದು ಕ್ರಿಯೆಗೆ ಅಡಚಣೆ ಉಂಟಾದರೆ ಅದನ್ನು ರೋಗ ಎನ್ನುವರು. ಕೆಲವು ರೋಗಗಳಲ್ಲಿ ಕಾಣುವಂತಹ ರೋಗಲಕ್ಷಣಗಳು ಉಂಟಾಗುತ್ತವೆ. ಸಸ್ಯದ ಜೀವಕೋಶಗಳು ಮತ್ತು ಅಂಗಾಂಶಗಳು ತೊಂದರೆಗೊಳಗಾದಾಗ ಅವುಗಳ ಬೆಳವಣಿಗೆ ಕುಂಠಿತಗೊಂಡು ರೋಗದಿಂದ ನರಳುತ್ತವೆ ಮತ್ತು ಸಾಯುತ್ತವೆ.

ರೋಗಲಕ್ಷಣಗಳು:

ಚಿತ್ರ :  ಸೂರ್ಯಕಾಂತಿಯ ಎಲೆ ಚುಕ್ಕೆ ರೋಗ

ಬೀಜದಿಂದ ಸಸಿ ಮೊಳಕೆಗೊಳ್ಳದಿರುವುದು, ಮೊಳಕೆಯಾದ ಸಸಿ ಬೇಗನೆ ಸಾಯುವುದು, ಬೇರುಗಳ ಕೊಳೆಯುವಿಕೆ, ಎಲೆಗಳು ಹಳದಿಯಾಗುವುದು, ಎಲೆಗಳ ಮೇಲೆ ಚುಕ್ಕೆಗಳು, ಎಲೆಗಳು ಸುರುಳಿಯಂತಾಗುವುದು, ಎಲೆಗಳ ಮೇಲೆ ಮತ್ತು ಕೆಳಗೆ ಬಿಳಿ ಬಣ್ಣದ ಪುಡಿ ಹಾಕಿದಂತೆ ಕಾಣುವುದು, ಗಿಡ ಒಣಗುವಿಕೆ, ಎಲೆ ಅಥವಾ ಕಾಂಡಕ್ಕೆ ಬೆಂಕಿ ತಗುಲಿದಂತೆ ಕಾಣುವುದು, ಹಣ್ಣುಗಳ ಕೊಳೆಯುವಿಕೆ, ನಪುಂಸಕ ಹೂ ಉತ್ಪಾದನೆ, ಹೂ-ಹಣ್ಣು ಬಿಡದಿರುವುದು, ಅಸಹಜ ಗಂಟುಗಳು, ಕುಬ್ಜತನ ಮುಂತಾದವುಗಳು ಪ್ರಮುಖ ರೋಗಲಕ್ಷಣಗಳು (ಚಿತ್ರ-೧).

ಸಸ್ಯರೋಗ ತಪಾಸಣೆ ಮತ್ತು ಸಸ್ಯಾರೋಗ್ಯ ಕೇಂದ್ರ:

ರೋಗಕಾರಕ ಜೀವಿಗಳು ಮತ್ತು ಪರಿಸರೀಯ ಅಂಶಗಳಿಂದ ಉಂಟಾಗುವ ಸಸ್ಯರೋಗಗಳನ್ನು ಅಭ್ಯಸಿಸುವುದನ್ನು ಸಸ್ಯರೋಗಶಾಸ್ತ್ರ ಎನ್ನುವರು. ಇಂತಹ ರೋಗಗಳನ್ನು ಹತೋಟಿಯಲ್ಲಿಡುವ ಅಂಶಗಳನ್ನು ಪರಿಗಣಿಸಲಾಗುತ್ತದೆ. ಇದರಲ್ಲಿ ಪರಿಣಿತಿ ಪಡೆದವರನ್ನು ಸಸ್ಯಗಳ ವೈದ್ಯ ಎನ್ನಬಹುದು. ಮುಂದುವರೆದ ದೇಶಗಳಲ್ಲಿ ಸಸ್ಯರೋಗ ಪತ್ತೆ ಹಚ್ಚುವ ಮತ್ತು ನಿಯಂತ್ರಿಸುವ ಆಸ್ಪತ್ರೆಗಳಿವೆ. ನಮ್ಮ ಕೆಲವು ವಿಶ್ವವಿದ್ಯಾಲಯಗಳಲ್ಲಿಯೂ ತಜ್ಞ ಸಸ್ಯವೈದ್ಯರಿದ್ದಾರೆ. ರೋಗ ಪೀಡಿತ ಗಿಡಗಳನ್ನು ಇಂತಹ ತಜ್ಞರಲ್ಲಿ ತೋರಿಸಿದರೆ ರೋಗಕ್ಕೆ ಕಾರಣವೇನು ಎಂದು ಪತ್ತೆ ಹಚ್ಚಿ ಪರಿಹಾರೋಪಾಯಗಳನ್ನು ಸೂಚಿಸುತ್ತಾರೆ. ಸಮಗ್ರ ರೋಗ ನಿಯಂತ್ರಣ ವಿಧಾನಗಳಿಂದ ಸಸ್ಯರೋಗಗಳನ್ನು ಹತೋಟಿಯಲ್ಲಿಡಬಹುದು. ಅದಕ್ಕಾಗಿ ನಾವು ಬೆಳೆಸುವ ಸಸ್ಯ ಮತ್ತು ಅದರ ಅಗತ್ಯಗಳನ್ನು ಮುಂಚಿತವಾಗಿಯೇ ತಿಳಿದುಕೊಂಡು ರೋಗ ಬಾರದಂತೆ ತಡೆಯುವುದೇ ಜಾಣತನ.

ಚಿತ್ರ :  ಹೊಂಗೆ ಮರದ ಎಲೆಗಂಟುಗಳು © ಡಾ. ಎಸ್. ಶಿಶುಪಾಲ 

ಲೇಖನ: ಡಾ. ಎಸ್. ಶಿಶುಪಾಲ 
           ದಾವಣಗೆರೆ
.

Spread the love

Leave a Reply

Your email address will not be published. Required fields are marked *

error: Content is protected.