ಶ್ಯೇನ ಹಕ್ಕಿಯು ಕೆಂಪು ರೆಕ್ಕೆಯ ನೆಲಗುಬ್ಬಿಯನ್ನು ಬೇಟೆಯಾಡಿ ತಿಂದ ದೃಶ್ಯ ಕಥನ

© ಶಶಿಧರಸ್ವಾಮಿ ಆರ್. ಹಿರೇಮಠ
ರಾಜಸ್ಥಾನದ ಜೈಸಲ್ಮೇರ್ ಹತ್ತಿರದ ಡೆಸರ್ಟ್ ನ್ಯಾಷನಲ್ ಪಾರ್ಕಿನಲ್ಲಿ ಹಕ್ಕಿಗಳ ಪೋಟೊಗ್ರಫಿಗಾಗಿ ಗೆಳೆಯರಾದ ಹೇಮಚಂದ್ರ ಜೈನ್ ಹಾಗೂ ಸೂರ್ಯಪ್ರಕಾಶರವರೊಂದಿಗೆ ತೆರೆದ ಜೀಪಿನಲ್ಲಿ ಹೋಗುತ್ತಿದ್ದೆವು. ಕಣ್ಣು ಹಾಯಿಸಿದಷ್ಟು ಬರೀ ಮರಳುಗಾಡು, ಅಲ್ಲಲ್ಲಿ ಕಾಣಸಿಗುವ ಕುರುಚಲು ಮರಗಳು. ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ನೀರನ್ನು ಒದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂ ಪ್ರದೇಶವೇ ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನವಸತಿ ಇಲ್ಲವೇ ಇಲ್ಲ. ಒಣ ವಾತಾವರಣದ ಪ್ರದೇಶವಾದರೂ ಚಳಿಗಾಲದಲ್ಲಿ ಇಲ್ಲಿ ಶೀತ ಹವಾಮಾನ ಎಂತ ಗಟ್ಟಿಗ ಜಟ್ಟಿಯನ್ನು ಮಲಗಿಸಿ ಬಿಡುತ್ತದೆ. ನಾವು ಇಲ್ಲಿರುವ ಸುಮಾರು 60c ರಿಂದ 80C ಚಳಿಯನ್ನು ತಡೆದುಕೊಳ್ಳುವಂತ ಬಟ್ಟೆ ಹೊಂದಿದ್ದರೂ ಶೀತಗಾಳಿಗೆ ಮೈ ಗಡಗಡ ನಡುಗುತ್ತಿತ್ತು. ಛಾಯಾಗ್ರಾಹಕ ಹಾಗೂ ಪಕ್ಷಿ ವೀಕ್ಷಕನಿಗೆ ಚಳಿಯಾದರೇನು, ಮಳೆಯಾದರೇನು ಪೋಟೊಗ್ರಫಿ ಮಾಡುವುದೊಂದೇ ಗುರಿ. ಚಾಲಕ ಕಮ್ ಗೈಡ್ ಮುಸಾಖಾನ್ ಜೀಪನ್ನು ನಿಧಾನವಾಗಿ ಚಲಿಸುತ್ತಿದ್ದರು.

ನೆಲದಿಂದ ನೆಲಗುಬ್ಬಿಗಳ ಗುಂಪು ಒಮ್ಮೆಲೆ ಪುರ್ರೆಂದು ಹಾರಿ ಚದುರಿ ಚಲ್ಲಾಪಿಲ್ಲಿಯಾಗಿ ಹಾರಾಟದಲ್ಲಿ ಪೈಪೋಟಿಗಿಳಿದವರಂತೆ ನಮ್ಮ ಜೀಪನ್ನು ಹಿಂದಿಕ್ಕಿ ಹಾರುತ್ತಾ ಹೋದವು. ಯಾಕಿರಬೇಕೆಂದು ಕ್ಯಾಮೆರಾದ ಮಾರುದ್ದ ಲೆನ್ಸಿನಲ್ಲಿ ನೋಡಿದೆ. ಹತ್ತಿದ ಕುರುಚಲು ಮರದ ತುದಿಯಲ್ಲಿ ಕುಳಿತು ಬೇಟೆಗಳ ಇರುವಿಕೆಯನ್ನು ದೂರದೃಷ್ಠಿಯ ಕಣ್ಣುಗಳಿಂದ ವಿಕ್ಷೀಸುತ್ತಿದ್ದ ‘ಶ್ಯೇನ’ ಹಕ್ಕಿ ಒಮ್ಮೆಲೆ ಹಾರಿ, ಬಾಲವನ್ನು ನೆಟ್ಟಗಾಗಿಸಿ ಬೇಟೆಯಾಡಲೆಂದು ಹಾರಿದಾಗ ಎಚ್ಚೆತ್ತ ನೆಲಗುಬ್ಬಿಗಳು ನೆಲದಿಂದ ಒಮ್ಮೆಲೆ ಈ ರೀತಿ ಹಾರಿದವು. ‘ಶ್ಯೇನ’ಹಕ್ಕಿಯು ಸಹ ನಮ್ಮ ಜೀಪನ್ನು ಹಿಂದಿಕ್ಕಿ ಶರವೇಗದಲ್ಲಿ ಹಾರುತ್ತಾ ನೆಲಗುಬ್ಬಿಯನ್ನು ಬೆನ್ನಟ್ಟಿ ಬೇಟೆಯಾಡಿ ಕಬಳಿಸಲು ಹಾರುತ್ತಿತ್ತು. ಗುಂಪಿನಲ್ಲಿ ಹಾರಿದ ಒಂದು ನೆಲಗುಬ್ಬಿಯ ಮೇಲೆ ಎರಗಿ ತನ್ನ ದೇಹವನ್ನು ಮೇಲೆತ್ತಿ ತನ್ನ ಬಲಿಷ್ಠ ಕಾಲಿನ ಉಗುರುಗಳಿಂದ ಅದಕ್ಕೆ ಹೊಡೆದ ತಕ್ಷಣವೇ ತನ್ನ ಕಾಲುಗಳ ಉಗುರುಗಳಲ್ಲಿ ಹಿಡಿದುಕೊಂಡು ಹೋಗಿ ಹತ್ತಿರದ ನೆಲದ ಮೇಲೆ ಒಂಟೆ ಹಾಕಿದ ಲದ್ದಿಯ ಮೇಲೆ ಕುಳಿತುಕೊಂಡು ಬೇಟೆಯನ್ನು ಭಕ್ಷಿಸಲು ಸಿದ್ದವಾಯಿತು. ನಾನು ಮುಸಾಖಾನ್‌ಗೆ ಜೀಪನ್ನು ಅದರತ್ತ ನಿಧಾನವಾಗಿ ಚಲಿಸಲು ತಿಳಿಸಿದೆ. ಜೀಪನ್ನು ಅದರ ಬೇಟೆಯ ಉಪಹಾರ ಭಕ್ಷಣೆಗೆ ಅಡ್ಡಿ ಬಾರದ ಹಾಗೆ ದೂರದಲ್ಲಿ ನಿಲ್ಲಿಸಿಕೊಂಡು ನಿಧಾನವಾಗಿ ಕ್ಯಾಮೆರಾವನ್ನು ಕೈಯಲ್ಲಿ ಹಿಡಿದು ಜೀಪು ಇಳಿದು ನೆಲಕ್ಕೆ ಹೊಟ್ಟೆ ಹಚ್ಚಿ ಮಲಗಿ ತೆವಳುತ್ತಾ ಅದರ ಹತ್ತಿರ ಸಾಗಿ ಮೊಣಕೈಗಳನ್ನು ಸಣ್ಣ ಹರಳುಗಳಿದ್ದ ನೆಲಕ್ಕೆ ಹಚ್ಚಿ ಪೊಟೋ ಕ್ಲಿಕ್ಕಿಸಲು ಪ್ರಾರಂಭಸಿದೆ.



ಶ್ಯೇನ ಹಕ್ಕಿಯು ನೆಲಗುಬ್ಬಿಯ ಕೊಕ್ಕನ್ನು ತನ್ನ ಕೊಕ್ಕಿನಿಂದ ಎಳೆದು ಕತ್ತರಿಸಿ ಬೇಟೆಯ ಭಕ್ಷಣೆಯನ್ನು ಪ್ರಾರಂಭಿಸಿತು. ಬೇಟೆಯಾಡಿದ ನೆಲಗುಬ್ಬಿಯನ್ನು ತನ್ನ ಒಂದು ಕಾಲಲ್ಲಿ ಬಿಗಿಯಾಗಿ ಹಿಡಿದು ದೇಹವನ್ನು ಎಳೆದು ತುಂಡರಿಸುತ್ತಾ ಉಪಹಾರವನ್ನು ಸ್ವಾಧಿಸತೊಡಗಿತು. ದೇಹವನ್ನು ಎಳೆದಾಗ ನೆಲಗುಬ್ಬಿಯ ಪುಕ್ಕಗಳು ಕಿತ್ತು ಚೆಲ್ಲಾಪಿಲ್ಲಿಯಾದವು. ಒಂದೊಂದೆ ಎಳೆಯಂತೆ ನೆಲಗುಬ್ಬಿಯ ದೇಹದ ಮಾಂಸವನ್ನು ಎಳೆದು ತುಂಡರಿಸಿ ತಿನ್ನುವಾಗ ನನ್ನ ಕ್ಯಾಮೆರಾ ಚಟರ್ … ಚಟರ್ ಎಂದು ಸದ್ದು ಮಾಡಿದಾಗ ಹಕ್ಕಿಯು ನನ್ನತ್ತ ನೋಡುತ್ತಿತ್ತು.
ಆದರೆ ಅದಕ್ಕೆ ನನ್ನ ಇರುವಿಕೆ ಗೋಚರವಾಗುತ್ತಿರಲಿಲ್ಲ, ಕಾರಣ ನಾನು ಧರಿಸಿದ ಬಟ್ಟೆಯು ಕ್ಯಾಮೋಪ್ಲೆಜ್ ಆಗಿ ನೆಲ ಬಣ್ಣದಿಂದ ಕೂಡಿತ್ತು. ಇದಕ್ಕೆ ಬರೀ ಕ್ಯಾಮೆರಾದ ಸದ್ದು ಮಾತ್ರ ಕೇಳುತ್ತಿದ್ದುದ್ದರಿಂದ ಯಾವ ತೊಂದರೆಯು ಇಲ್ಲವೆಂದು ಗ್ರಹಿಸಿ ಬೇಟೆಯನ್ನು ತಿನ್ನುವುದರಲ್ಲಿ ಮುಂದುವರೆಯಿತು. ಪೂರ್ಣವಾಗಿ ದೇಹವನ್ನು ಸ್ವಾಹ ಮಾಡಿ ನೆಲಗುಬ್ಬಿಯ ಕಾಲು, ಕೊಕ್ಕು ಹಾಗೂ ಪುಕ್ಕಗಳನ್ನು ಬಿಟ್ಟು ಅಲ್ಲಿಂದ ಹಾರಿತು. ಈ ಉಪಹಾರ ಕೂಟವು ಸುಮಾರು 21 ನಿಮಿಷಗಳ ಅವಧಿಯದ್ದಾಗಿತ್ತು. (8 ಗಂಟೆ 40 ನಿಮಿಷದಿಂದ ಪ್ರಾರಂಭವಾದ ಉಪಹಾರ ಭಕ್ಷಣೆ 9 ಗಂಟೆ 1 ನಿಮಿಷಕ್ಕೆ ಮುಕ್ತಾಯವಾಗಿತ್ತು). ಮೊಣಕೈಗಳನ್ನು ಸಣ್ಣ ಹರಳುಗಳಿದ್ದ ನೆಲಕ್ಕೆ ಹಚ್ಚಿದ್ದರಿಂದ ಕೈಗಳಿಗೆ ಒತ್ತಿದ್ದ ಸಣ್ಣ ಹರಳುಗಳನ್ನು ಕೊಡವಿ ಮೇಲೆದ್ದು ಜೀಪಿನತ್ತ ನಡೆದೆ.
ಶ್ಯೇನ ಹಕ್ಕಿಯನ್ನು ಸಂಸ್ಕೃತದಲ್ಲಿ “ಶಶಘ್ನಿ” ಎಂದು ಕರೆಯುತ್ತಾರೆ. ಇಂಗ್ಲೀಷನಲ್ಲಿ ಮೆರ್ಲಿನ್ (Merlin) ಎಂದು ಕರೆದು, ವೈಜ್ಞಾನಿಕವಾಗಿ ಫಾಲ್ಕೊ ಕೊಲಂಬರಿಯಸ್ (Falco columbarius) ಎಂದು ಹೆಸರಿಸಿ. ಫಾಲ್ಕೋನಿಫಾರ್ಮಿಸ್ (Falconiformes) ಗಣದ, ಫಾಲ್ಕೋನಿಡೇ (Falconidae) ಕುಟುಂಬಕ್ಕೆ ಸೇರಿಸಲಾಗಿದೆ.
ದೇಹ ಬಣ್ಣದ ಮಾದರಿ:

ಶ್ಯೇನ ಹಕ್ಕಿಗಳು ಸಾಮಾನ್ಯವಾಗಿ 25-30 ಸೆಂ.ಮೀ. ಗಾತ್ರದಲ್ಲಿದ್ದು, ರೆಕ್ಕೆಗಳ ಹರಿವು 53–58 ಸೆಂ.ಮೀ. (21–23 ಇಂಚು) ಅಗಲವಾಗಿದ್ದು, ಹೆಣ್ಣು ಹಕ್ಕಿಗಳು ಸ್ವಲ್ಪ ದೊಡ್ಡದಾಗಿರುತ್ತವೆ. ಸಾಮಾನ್ಯವಾಗಿ ಗಾಢ ಬಣ್ಣ ಮತ್ತು ಗೆರೆಗಳಿಂದ ಕೂಡಿರುತ್ತವೆ, ಆದರೂ ಅವುಗಳ ಬಣ್ಣ ಭೌಗೋಳಿಕವಾಗಿ ಗಂಡು-ಹೆಣ್ಣುಗಳಲ್ಲಿ ಸ್ವಲ್ಪ ಭಿನ್ನತೆ ಇರುವುದನ್ನು ಕಾಣಬಹುದಾಗಿದೆ. ವಯಸ್ಕ ಗಂಡು ಹಕ್ಕಿಯು ನೀಲಿ-ಬೂದು ಬಣ್ಣದ ಕಿರೀಟವನ್ನು ಹೊಂದಿದ್ದು, ಯಾವುದೇ ಗುರುತುಗಳಿರುವುದಿಲ್ಲ. ಮೇಲ್ಭಾಗ ಮತ್ತು ಬಾಲದಲ್ಲಿಯೂ ಸಹ, ಅಗಲವಾದ ಕಪ್ಪು ಉಪ-ತುದಿ ಬಾಲ ಪಟ್ಟಿಯು ಸ್ಪಷ್ಟವಾಗಿ ಗೋಚರಿಸುತ್ತದೆ. ಹೆಣ್ಣು ಮತ್ತು ವಯಸ್ಕ ಹಕ್ಕಿಗಳು ಕಂದು ಬಣ್ಣದಲ್ಲಿರುತ್ತವೆ. ಎದೆಯು ಸಾಮಾನ್ಯವಾಗಿ ಹೆಚ್ಚು ಗೆರೆಗಳನ್ನು ಹೊಂದಿರುತ್ತದೆ ಮತ್ತು ರೆಕ್ಕೆಗಳ ಕೆಳಭಾಗವು ಗಾಢವಾಗಿರುತ್ತದೆ. ಕಪ್ಪು ಬಾಲವು ಕಿರಿದಾದ ಬಿಳಿ ಪಟ್ಟೆಗಳನ್ನು ಹೊಂದಿರುತ್ತದೆ.
ಶರವೇಗದ ಹಾರಾಟಗಾರ:
ಶ್ಯೇನ ಹಕ್ಕಿಗಳು ಉಗ್ರ, ಶಕ್ತಿಯುತ ಬೇಟೆಗಾರ ಹಕ್ಕಿಳಾಗಿದ್ದು (ಹಿಂಸ್ರಪಕ್ಷಿ-Bird of Prey or Raptor Bird), ಅವು ಮರಳುಗಾಡಿನ ತೆರೆದ ಪ್ರದೇಶಗಳಲ್ಲಿ ಕುರುಚಲು ಮರಗಳಲ್ಲಿ ಕುಳಿತಿರುತ್ತವೆ. ಸಣ್ಣ ಪಕ್ಷಿಗಳ (ಕೆಲವೊಮ್ಮೆ ಡ್ರಾಗನ್‌ಫ್ಲೈಗಳು) ಬೇಟೆಯನ್ನು ಹುಡುಕುತ್ತಾ ಗಸ್ತು ತಿರುಗುತ್ತವೆ. ಅವು ಶಕ್ತಿಯುತವಾಗಿ, ತ್ವರಿತ ರೆಕ್ಕೆ ಬಡಿತಗಳೊಂದಿಗೆ ಶರವೇಗದಲ್ಲಿ ಹಾರುತ್ತವೆ, ಇವುಗಳ ವಿಶಿಷ್ಟ ಹಾರಾಟದ ವೇಗವು ಗಂಟೆಗೆ ಸುಮಾರು 30 ಮೈಲುಗಳು, ಆದರೆ ಅವು ಬೇಟೆಗಳನ್ನು ಬೆನ್ನಟ್ಟುವ ಸಮಯದಲ್ಲಿ ಗಂಟೆಗೆ 45 ಮೈಲುಗಳಿಗಿಂತ ಹೆಚ್ಚಿನ ವೇಗವನ್ನು ತಲುಪಬಹುದು. ತೆರೆದ ಪ್ರದೇಶ, ಕೃಷಿ ಮತ್ತು ಮರುಭೂಮಿ ಪ್ರದೇಶದ ಪೊದೆಗಳಲ್ಲಿ ವಿರಳವಾಗಿ ಮಾತ್ರ ವಿರಮಿಸುತ್ತವೆ. ತೆರೆದ ಪ್ರದೇಶಗಳಲ್ಲಿ ದೀರ್ಘಕಾಲ ಕುಳಿತು ಬೇಟೆಯನ್ನು ಹುಡುಕುತ್ತವೆ. ಈ ಹಕ್ಕಿಗಳು ಭಾರತಕ್ಕೆ ಆಗಮಿಸುವ ಚಳಿಗಾಲದ ವಲಸೆಗಾರ ಹಕ್ಕಿಗಳಾಗಿವೆ.
ಮರಿಗಳು ಮೊಟ್ಟೆಯಿಂದ ಹೊರಬಂದು ಆಗಲೇ ಒಂದೂವರೆ ತಿಂಗಳಷ್ಟು ಸಮಯವಾಗಿತ್ತು. ಮರಿಗಳಿಗೂ ರೆಕ್ಕೆ ಬಲಿತಿತ್ತು. ಅವುಗಳ ತುಂಟಾಟ ಜಾಸ್ತಿಯಾಗಿತ್ತು. ಪೊಟರೆಯ ಬಾಗಿಲಿನಿಂದಷ್ಟೇ ಕಾಣುತ್ತಿದ್ದ ಕಾಡನ್ನು ನೋಡಬೇಕು ಎಂದು ಮರಿ ಹಕ್ಕಿಗಳು ಹಾತೊರೆಯುತ್ತಿದ್ದವು. ಒಂದು ದಿನ ಮರಿ ಹಕ್ಕಿಗಳು ಪೊಟರೆಯಿಂದ ನಿಧಾನವಾಗಿ ಹೊರಗೆ ಬಂದು ಮರದ ಕೊಂಬೆಯ ಮೇಲೆ ಕುಳಿತುಕೊಂಡವು. ಹಾರಲು ತಯಾರಾದ ಹಾರ್ನ್ ಬಿಲ್ ಸಂಸಾರ ತಮಗೆ ಇಷ್ಟು ದಿನ ಆಶ್ರಯ ನೀಡಿದ ಮರಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಹೇಳಿದವು. ‘ಮತ್ತೆ ಮುಂದಿನ ಬಾರಿ ಇಲ್ಲೇ ಬನ್ನಿ. ನೀವಿದ್ದಾಗ ದಿನ ಕಳೆದದ್ದೇ ತಿಳಿಯಲಿಲ್ಲ’ ಎಂದು ಮರ ಪ್ರೀತಿಯಿಂದ ಕಳುಹಿಸಿ ಕೊಟ್ಟಿತು. ರೆಕ್ಕೆ ಬಿಚ್ಚಿ ಆಕಾಶದ ಕಡೆಗೆ ಹಾರಿದ ಮರಿಗಳಿಗೆ ಹೊಸತೊಂದು ಲೋಕ ತೆರೆದುಕೊಂಡಿತು.



ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
ಹಾವೇರಿ ಜಿಲ್ಲೆ

ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು.
ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.