ಹಾರ್ನ್ ಬಿಲ್ ಹಕ್ಕಿ

ಹಾರ್ನ್ ಬಿಲ್ ಹಕ್ಕಿ

© ಮಹೇಂದ್ರ ಎಂ. ಹೆಗ್ಡೆ

ವಸಂತ ಋತುವಿನ ಸಮಯ. ಬೇಸಿಗೆಯ ಬಿಸಿಲು ಆಗ ತಾನೇ ಹೆಚ್ಚಾಗತೊಡಗಿತ್ತು. ಮರಗಳೆಲ್ಲ ಹೂವುಗಳನ್ನು ಅರಳಿಸಿಕೊಂಡು ಹಣ್ಣುಗಳಿಂದ ತುಂಬಿ ಸುಂದರವಾಗಿ ಕಾಣುತ್ತಿದ್ದವು. ಎಲ್ಲಾ ಕಡೆಗೂ ಬಗೆ ಬಗೆಯ ಹೂವು ಹಣ್ಣುಗಳ ಪರಿಮಳವೇ ತುಂಬಿಕೊಂಡಿತ್ತು. ಕಾಡಿಗೆ ಕಾಡೇ ಒಂದು ರೀತಿಯ ಸಂಭ್ರಮದ ವಾತಾವರಣದಲ್ಲಿತ್ತು.

ಇದೆಲ್ಲದರ ನಡುವೆ ಹಾರ್ನ್ ಬಿಲ್ ಹಕ್ಕಿಗಳ ಸಂಸಾರವೊಂದು ಖುಷಿಯಾಗಿ ಓಡಾಡುತ್ತಿತ್ತು. ಈ ಹಕ್ಕಿ ದಂಪತಿಗಳು ಹೊಸದಾಗಿ ಜೋಡಿಯಾಗಿದ್ದವು. ಹೊಸ ಮರಿಗಳ ಆಗಮನಕ್ಕೆ ಕಾಯುತ್ತಿದ್ದವು. ಹೆಣ್ಣು ಹಕ್ಕಿ, ಇನ್ನೇನು ಕೆಲವೇ ದಿನಗಳಲ್ಲಿ ಮೊಟ್ಟೆ ಇಡಲು ತಯಾರಾಗಿತ್ತು. ಮೊದಲನೇ ಬಾರಿ ಬಸುರಿಯಾದ ಈಕೆ, ಮೊಟ್ಟೆ ಇಟ್ಟು ಮರಿ ಮಾಡಲು ಸರಿಯಾದ ಜಾಗ ಯಾವುದು ಅಂತ ಹುಡುಕಾಟ ಮಾಡುತ್ತಿತ್ತು. ಗಂಡು ಹಕ್ಕಿ ಕಾಡನ್ನೆಲ್ಲ ಸುತ್ತಿ ಹೊಸ ಹೊಸ ಮರಗಳ ಪೊಟರೆಗಳನ್ನು ತೋರಿಸುತ್ತಿತ್ತು. ಯಾವ ಪೊಟರೆಯೂ ಹೆಣ್ಣಿಗೆ ಅಷ್ಟಾಗಿ ಇಷ್ಟವಾಗಲಿಲ್ಲ. ಜಾಗಕ್ಕಾಗಿ ಗಂಡುಹಕ್ಕಿಯು ಬೇರೆ ಬೇರೆ ಮರಗಳನ್ನು ವಿಚಾರಿಸುತ್ತಿತ್ತು. ಕೊನೆಗೆ ಗುಡ್ಡದ ಮೇಲಿರುವ ಮರವೊಂದರಲ್ಲಿ ಒಂದೊಳ್ಳೆ ಪೊಟರೆ ಕಾಣಿಸಿತು. ಹೆಣ್ಣು ಹಕ್ಕಿಗೂ ಜಾಗ ಬಹಳ ಇಷ್ಟವಾಯಿತು. ಮರವೂ ಜಾಗ ಕೊಡಲು ಖುಷಿಯಾಗಿ ಒಪ್ಪಿತು.

© ಮಹೇಂದ್ರ ಎಂ. ಹೆಗ್ಡೆ
 

ಹೆಣ್ಣು ಹಕ್ಕಿ ಪೊಟರೆಯ ಒಳಗೆ ಹೋಗಿ ಜಾಗವನ್ನೆಲ್ಲಾ ಮತ್ತೊಮ್ಮೆ ಪರಿಶೀಲನೆ ಮಾಡಿತು. ಅದಕ್ಕೂ ಜಾಗ ಬಹಳ ಇಷ್ಟವಾಯಿತು. ಅಲ್ಲಿಂದ ಕಾಡಿನ ಕಣಿವೆ ಬಹಳ ಸುಂದರವಾಗಿ ಕಾಣುತ್ತಿತ್ತು. ಆದಷ್ಟು ಬೇಗನೆ ಒಳಗೆ ಸೇರಿದ ಹೆಣ್ಣು ತನ್ನ ಕೆಲಸ ಆರಂಭ ಮಾಡಿತು.

ಹದ್ದು, ಗೂಬೆ, ಗಿಡುಗ ಇತರೆ ಯಾವುದೇ ದೊಡ್ಡ ಹಕ್ಕಿಗಳ ಕಣ್ಣಿಗೆ ಗೂಡು ಬೀಳಬಾರದು ಎಂಬ ಉದ್ದೇಶದಿಂದ ಕೊಕ್ಕು ಹೊಕ್ಕುವಷ್ಟು ಜಾಗ ಬಿಟ್ಟು‌ ಪೊಟರೆಯ ಬಾಗಿಲನ್ನು ಮುಚ್ಚಲು ಪ್ರಾರಂಭ ಮಾಡಿತು. ಗಂಡು ಹಕ್ಕಿಯೂ ಅದಕ್ಕೆ ಸಹಾಯ ಮಾಡಿತು. ಎಲ್ಲ ತಯಾರಾದಾಗ ಹೆಣ್ಣಿಗೆ ಹೆರಿಗೆ ನೋವು ಪ್ರಾರಂಭವಾಯಿತು. ಮೊಟ್ಟೆಗಳನ್ನು ಇಡಲು ಮೃದುವಾದ ಹಾಸಿಗೆ ಬೇಕಲ್ಲ. ಹೊರಗಡೆಯಿಂದ ಏನನ್ನಾದರೂ ತಂದು ತಯಾರು ಮಾಡಲು ಸಮಯವಿಲ್ಲ ಎಂದು ತನ್ನ ಗರಿಗಳನ್ನೇ ಉದುರಿಸಿ ಮೊಟ್ಟೆಗಳಿಗೆ ಪುಟ್ಟದೊಂದು ಹಾಸಿಗೆಯನ್ನು ಸಿದ್ಧಪಡಿಸಿತು. ಎಲ್ಲವೂ‌ ಸಿದ್ಧವಾದಾಗ ಒಂದೊಂದಾಗಿ ಮೂರು ಮೊಟ್ಟೆಗಳನ್ನು ಇಟ್ಟಿತು. ಗಂಡು ಹಕ್ಕಿ ಸ್ವಲ್ಪ ದೂರದಲ್ಲಿ ಕುಳಿತು ಕಾವಲು ಕಾಯುತ್ತಿತ್ತು. ಹೆದರಬೇಡ ನಾನಿಲ್ಲಿ ಹತ್ತಿರದಲ್ಲೇ ಇದ್ದೇನೆ, ಧೈರ್ಯವಾಗಿರು ಎಂದು ಹೇಳುತ್ತಿತ್ತು.

ಮೊಟ್ಟೆ ಇಟ್ಟ ಹೆಣ್ಣು ಹಕ್ಕಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಿತು. ಗಂಡು ಹಕ್ಕಿ ಕೂಡಲೇ ಹಾರಿ ಹೋಗಿ ರಸವತ್ತಾದ ಹಣ್ಣುಗಳನ್ನು ಹುಡುಕಿ ತನ್ನ ಗಂಟಲಿನಲ್ಲಿ ಇಟ್ಟುಕೊಂಡು ಹಾರಿ ಬಂತು. ಕಾವು ಕೊಡುತ್ತಿರುವ ತನ್ನ ಸಂಗಾತಿಗೆ ಹಣ್ಣುಗಳನ್ನು ತಿನ್ನಿಸಿ ಮುದ್ದು ಮಾಡಿತು. ಹೀಗೆಯೇ ಪ್ರತಿ ದಿನ ವಿಧ ವಿಧವಾದ ಹಣ್ಣುಗಳನ್ನು ಹುಡುಕಿ ತಂದು ತಿನ್ನಿಸಿ ತನ್ನ ಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿತ್ತು. ಮೊಟ್ಟೆಗಳು ಹೇಗಿವೆ ಎಂದು ವಿಚಾರಿಸಿ ಪೊಟರೆಯ ಕಿಂಡಿಯಲ್ಲೇ ಇಣುಕಿ ನೋಡುತ್ತಿತ್ತು.

© ಮಹೇಂದ್ರ ಎಂ. ಹೆಗ್ಡೆ

ಹೀಗಿರಲು ಒಂದು ದಿನ ಮೊಟ್ಟೆ ಒಡೆದು ಮೂರು ಪುಟಾಣಿ ಮರಿಗಳು ಹೊರ ಬಂದವು. ಮರಿಗಳನ್ನು ನೋಡಿ ತಂದೆ ತಾಯಿ ಇಬ್ಬರಿಗೂ ಸಂಭ್ರಮವೋ ಸಂಭ್ರಮ. ತಂದೆಗೆ ಈಗ ತನ್ನನ್ನೂ ಸೇರಿಸಿ ಐದು ಜನರ ಹೊಟ್ಟೆ ತುಂಬಿಸುವ ಜವಾಬ್ದಾರಿ. ಕಾಡಿನಲ್ಲಿ ನೇರಳೆ, ಪೇರಳೆ, ಬೈನೆ, ಅತ್ತಿ, ಆಲ ಮೊದಲಾದ ಮರಗಳು ಹಣ್ಣು ತುಂಬಿಕೊಂಡಿದ್ದವು. ಮರಿಗಳಿಗೂ ಸಂಗಾತಿಗೂ ಹಣ್ಣು ತಂದು ಕೊಡುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ. ಒಮ್ಮೊಮ್ಮೆ ಸಣ್ಣ ಪುಟ್ಟ ಹಾವು, ಹಲ್ಲಿ, ಕೀಟಗಳನ್ನೂ ಹಿಡಿದುಕೊಂಡು ಬರುತ್ತಿತ್ತು.

ತಂದೆ ಹಕ್ಕಿಯ ಪ್ರತಿ ದಿನದ ಓಡಾಟವನ್ನು ದೊಡ್ಡದೊಂದು ಹದ್ದು ಪ್ರತಿದಿನ ಆಕಾಶದಿಂದಲೇ ಗಮನಿಸುತ್ತಿತ್ತು. ಚುರುಕು ಬುದ್ಧಿಯ ಹದ್ದಿಗೆ ವಿಷಯವೇನು ಎಂದು ತಿಳಿದುಹೋಯಿತು. ಓಹೋ ಹಾರ್ನ್ ಬಿಲ್ ಹಕ್ಕಿ ಸಂಸಾರ ಹೂಡಿದೆ, ಮರಿಗಳು ಆಗಲೇ ಹೊರಗೆ ಬಂದಿವೆ. ಸರಿಯಾದ ಸಮಯ ನೋಡಿ ದಾಳಿ ಮಾಡಿದರೆ, ಧಾರಾಳ ಆಹಾರ ಸಿಗಬಹುದು ಎಂದು ಯೋಚಿಸಿ ಹೊಂಚು ಹಾಕುತ್ತಿತ್ತು. ಆಕಾಶದಲ್ಲಿ ಮೌನವಾಗಿ ಹಾರುತ್ತ ಗಂಡು ಹಕ್ಕಿಯ ಚಲನವಲನವನ್ನು ಗಮನಿಸುತ್ತಿತ್ತು. ಗಂಡು ಹಕ್ಕಿ ಆಚೆ ಹೋಗುವ ಸಮಯವನ್ನೇ ಕಾದು, ಗೂಡಿಗೆ ದಾಳಿ ಮಾಡಿತು. ಹೆಣ್ಣು ಹಕ್ಕಿ ಮರಿಗಳ ಜೊತೆ ಗೂಡಿನಲ್ಲಿ ಇದ್ದುದು ಹದ್ದಿಗೆ ತಿಳಿದಿರಲಿಲ್ಲ. ಹದ್ದು ಇನ್ನೇನು ಗೂಡಿಗೆ ದಾಳಿ ಮಾಡಬೇಕು, ಹೆಣ್ಣು ಹಕ್ಕಿಗೆ ದಾಳಿಯ ಸೂಚನೆ ಸಿಕ್ಕಿಬಿಟ್ಟಿತು. ಅದು ತನ್ನ ಉದ್ದನೆಯ ಕೊಕ್ಕಿನಿಂದ ಪ್ರತಿದಾಳಿ ಮಾಡಿತು. ಪ್ರತಿದಾಳಿಯಿಂದ ಹದ್ದು ಗಾಬರಿಗೊಂಡಿತು. ಹೆಣ್ಣು ಹಕ್ಕಿ ಜೋರಾಗಿ ಕಿರುಚುತ್ತ ಹದ್ದು ಗೂಡಿನೊಳಗೆ ನುಗ್ಗುವುದನ್ನು ತಡೆಯಿತು. ಬೇರೆ ದಾರಿ ಕಾಣದೆ ಹದ್ದು ಅಲ್ಲಿಂದ ಜಾಗ ಖಾಲಿ ಮಾಡಿತು. ಮರಿಗಳು ಇದನ್ನು ನೋಡುತ್ತಾ ಪೊಟರೆಯ ಮೂಲೆಯಲ್ಲಿ ಮುದುರಿ ಕುಳಿತಿದ್ದವು. ಹದ್ದು ಹೋದ ನಂತರ ಅಮ್ಮನ ಬಳಿ ಬಂದು ಅಮ್ಮನನ್ನು ಗಟ್ಟಿಯಾಗಿ ಹಿಡಿದುಕೊಂಡವು.  ಸ್ವಲ್ಪ ಹೊತ್ತಿನಲ್ಲಿ ಹಣ್ಣುಗಳನ್ನು ತೆಗೆದುಕೊಂಡು ಬಂದ ಅಪ್ಪನಿಗೆ ನಡೆದ ವಿಚಾರವನ್ನೆಲ್ಲಾ ಮರಿ ಹಕ್ಕಿಗಳು ವಿವರಿಸಿ ಹೇಳಿದವು. ತಾಯಿ ಹಕ್ಕಿಯ ಧೈರ್ಯವನ್ನು ಎಲ್ಲರೂ ಹೊಗಳಿದರು.

© ಮಹೇಂದ್ರ ಎಂ. ಹೆಗ್ಡೆ

ಮರಿಗಳು ಮೊಟ್ಟೆಯಿಂದ ಹೊರಬಂದು ಆಗಲೇ ಒಂದೂವರೆ ತಿಂಗಳಷ್ಟು ಸಮಯವಾಗಿತ್ತು. ಮರಿಗಳಿಗೂ ರೆಕ್ಕೆ ಬಲಿತಿತ್ತು. ಅವುಗಳ ತುಂಟಾಟ ಜಾಸ್ತಿಯಾಗಿತ್ತು. ಪೊಟರೆಯ ಬಾಗಿಲಿನಿಂದಷ್ಟೇ ಕಾಣುತ್ತಿದ್ದ ಕಾಡನ್ನು ನೋಡಬೇಕು ಎಂದು ಮರಿ ಹಕ್ಕಿಗಳು ಹಾತೊರೆಯುತ್ತಿದ್ದವು.  ಒಂದು ದಿನ ಮರಿ ಹಕ್ಕಿಗಳು ಪೊಟರೆಯಿಂದ ನಿಧಾನವಾಗಿ ಹೊರಗೆ ಬಂದು ಮರದ ಕೊಂಬೆಯ ಮೇಲೆ ಕುಳಿತುಕೊಂಡವು. ಹಾರಲು ತಯಾರಾದ ಹಾರ್ನ್ ಬಿಲ್ ಸಂಸಾರ ತಮಗೆ ಇಷ್ಟು ದಿನ ಆಶ್ರಯ ನೀಡಿದ ಮರಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಹೇಳಿದವು. ‘ಮತ್ತೆ ಮುಂದಿನ ಬಾರಿ ಇಲ್ಲೇ ಬನ್ನಿ.  ನೀವಿದ್ದಾಗ ದಿನ ಕಳೆದದ್ದೇ ತಿಳಿಯಲಿಲ್ಲ’ ಎಂದು ಮರ ಪ್ರೀತಿಯಿಂದ ಕಳುಹಿಸಿ ಕೊಟ್ಟಿತು. ರೆಕ್ಕೆ ಬಿಚ್ಚಿ ಆಕಾಶದ ಕಡೆಗೆ ಹಾರಿದ ಮರಿಗಳಿಗೆ ಹೊಸತೊಂದು ಲೋಕ ತೆರೆದುಕೊಂಡಿತು.

ಲೇಖನ: ಅರವಿಂದ ಕೂಡ್ಲ
          ದಕ್ಷಿಣ ಕನ್ನಡ ಜಿಲ್ಲೆ

Spread the love
error: Content is protected.