ಹೊನ್ನ – ಮಿಕ ಬೇಟೆ
© ಅರವಿಂದ ರಂಗನಾಥ್
ಸರಿ ಸುಮಾರು 95 – 96ರ ದಿನಗಳು. ಮಂಗನಾಯಕನಹಳ್ಳಿ ಬೆಟ್ಟಗುಡ್ಡಗಳಿಂದ ಸುತ್ತುವರೆದ ಸುಂದರವಾದ ಪುಟ್ಟ ಹಳ್ಳಿ. ತುಂಗಭದ್ರಾ ನದಿ ತೀರದ ಹಳ್ಳಿ, ಹುಲ್ಲಿನ ಗುಡಿಸಲುಗಳ ಮನೆಗಳಿಂದ ಕಂಗೊಳಿಸುತ್ತಿತ್ತು. ಜೀವಸೆಲೆಯಾದ ಹೊಳೆಯಿಂದ, ಜನತೆ ನೀರಾವರಿ ಕೃಷಿಗೈದು ತಕ್ಕಮಟ್ಟಿಗೆ ನೆಮ್ಮದಿಯ ಸಾಮಾಜಿಕ ಬದುಕು ಕಟ್ಟಿಕೊಂಡಿದ್ದರು. ಆಗಾಗ, ಹಬ್ಬ-ಹರಿದಿನ, ಉತ್ಸವ ಹಾಗೂ ನಾಟಕಗಳ ಆಚರಣೆ ಜನತೆಯಲ್ಲಿ ಬದುಕ ಪ್ರೀತಿ ಉಕ್ಕಿಸುವಂತಿತ್ತು! ಊರ ಮಧ್ಯೆ ಸಾಗುವ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಲಂಬಾಣಿ ತಾಂಡಾದ ಜನತೆ ಮತ್ತು ಇತರೆ ಜನತೆ ಅತ್ಯಂತ ಸಾಮರಸ್ಯ, ಪ್ರೀತಿ, ಕರುಣೆ, ಮಾನವೀಯ ಗುಣಗಳಿಂದ ಭೇದ-ಭಾವ ತೊರೆದು ಅನ್ಯೋನ್ಯತೆಯಿಂದ ಬಾಳುತ್ತಿದ್ದರು. ಕೃಷಿ ಕೆಲಸಗಳಿಗೆ, ಎಲ್ಲರೂ ಕೂಡಿ ಹೊಲಗದ್ದೆಗಳಲ್ಲಿ ಹಗಲಿರುಳು ದುಡಿಯುತ್ತಿದ್ದ ಕಾರಣ, ಸಹಜವಾಗೇ ಮನುಷ್ಯ ಪ್ರೀತಿ ಒಡಲಾಳದಿ ಒಡಮೂಡಿತ್ತು. ಘನತೆ, ಗೌರವ ಇಮ್ಮಡಿಗೊಂಡಿತ್ತು! ಲಂಬಾಣಿಗರ ಹಟ್ಟಿಗಳು ತುಸು ಬೆಟ್ಟದಂಚಿನಲ್ಲಿದ್ದುದರಿಂದ ಸ್ವಾಭಾವಿಕವಾಗೇ ಕಾಡಿನ ನಂಟು ಅವರಿಗೆ ದಿನನಿತ್ಯದ ಬದುಕಲಿ ಹಾಸುಹೊಕ್ಕಾಗಿತ್ತು. ಅಲ್ಲಲ್ಲಿ, ಸಿಕ್ಕುತ್ತಿದ್ದ ಕಾಡಿನ ಉಪ-ಉತ್ಪನ್ನಗಳಾದ ಅಂಟು, ಗೆಡ್ಡೆ-ಗೆಣಸು, ಜೇನು, ಕವಳೆಹಣ್ಣು, ಕಾರೆಕಾಯಿ, ಅಂಜೂರ, ನಾಗರ, ಸಿಂಬಳೆ, ದ್ವಾರಹುಣಸೆ ಹಣ್ಣು, ಬೋರೆ ಹಣ್ಣು, ಬೆಳವಲ ಹಣ್ಣು, ಮೆಕ್ಕೆಕಾಯಿ, ಮಾವು, ನೇರಳೆ ಹಾಗೂ ಪೇರಲ ಇತ್ಯಾದಿ ಲಂಬಾಣಿಗರ ಪಾಲಿಗೆ ಬಹುನೆಚ್ಚಿನ ಹಾಗೂ ತುತ್ತಿನ ಚೀಲ ಪೊರೆಯುತ್ತಿದ್ದ ಪ್ರಾಕೃತಿಕ ಆಹಾರ ಪದಾರ್ಥಗಳಾಗಿದ್ದವು. ಅದೆಷ್ಟೋ ಜನತೆ, ಬುಧವಾರಕ್ಕೊಮ್ಮೆ ಜರುಗುತ್ತಿದ್ದ ‘ಊರ ಸಂತೇಲಿ’ ಕಾಡಿನ ಉತ್ಪನ್ನಗಳ ಮಾರಾಟ ಮಾಡಿ ಜೀವನ ಕಂಡುಕೊಂಡಿದ್ದರು. ಕೆಲವೊಮ್ಮೆ, ಸುತ್ತಮುತ್ತಲ ಹಳ್ಳಿಗಳಿಗೂ ತೆರಳಿ, ತಲೆ ಮೇಲೆ ಬುಟ್ಟಿ ಹೊತ್ತು ಇಡೀ ದಿನ ಊರಲೆದು ಹಣ್ಣು-ಹಂಪಲು ಮಾರಿ ಬದುಕು ಅರಸುತ್ತಿದ್ದರು. ಮತ್ತೊಂದೆಡೆ, ಆಗ ದನ ಕರುಗಳ ಸಾಕಣೆ, ಕುರಿ-ಕೋಳಿ, ಮೇಕೆಗಳ ಸಲಹುವುದು, ಪ್ರತಿಯೊಬ್ಬರ ಮನೆಯ ಅಚ್ಚುಮೆಚ್ಚಿನ ಉಪಕಸುಬಾಗಿತ್ತು. ಹೀಗಾಗಿ, ಹಾಲು, ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಹಾಗೂ ಮಾಂಸಗಳ ಬಳಕೆ ಹಿತಮಿತವಾಗಿ ಆರೋಗ್ಯಕರವಾಗಿತ್ತು.
ಬೇಸಿಗೆ ಹೊರತು, ಉಳಿದೆಲ್ಲ ಋತುಗಳಲ್ಲಿ, ಸುತ್ತಲೂ ಬೆಟ್ಟ-ಗುಡ್ಡಗಳು ಹಚ್ಚ-ಹಸಿರಿನಿಂದ ರೋಮಾಂಚನಗೊಳಿಸುವಂತೆ ಸಂಪದ್ಭರಿತವಾಗಿ ಮೈದುಂಬಿರುತ್ತಿದ್ದವು. ಹಾಗಾಗಿ, ಚುಕ್ಕೆ ಜಿಂಕೆ, ಮೊಲ, ನರಿ, ತೋಳ, ಕಾಡು ಕುರಿ, ಕಾಡು ಬೆಕ್ಕು, ಕಾಡು ಕೋಳಿ, ಗೌಜುಗ, ನವಿಲು, ಉಡ, ಊಸರವಳ್ಳಿ ಹಾಗೂ ಮಿಕ (ಕಾಡು ಹಂದಿ) ಮುಂತಾದ ಪಶು-ಪಕ್ಷಿಗಳು ಹೇರಳವಾಗಿದ್ದವು. ಜೊತೆಗೆ, ಬೆಟ್ಟದ ಇಳಿಜಾರುಗಳಲ್ಲಿ ಕಣಿವೆಗಳಡಿ, ಮಳೆ ನೀರು ಇಂಗಿ, ಸಂಗ್ರಹಗೊಂಡು ಅಲ್ಲಲ್ಲಿ ಕೆರೆ-ತೊರೆ, ಹಳ್ಳ-ಕೊಳ್ಳಗಳು ರೂಪಗೊಂಡು, ವನ್ಯಜೀವಿಗಳಿಗೆ ಸ್ವಾಭಾವಿಕ ನೀರಿನ ಜೀವಸೆಲೆಯಾಗಿದ್ದವು. ಆಗೆಲ್ಲಾ, ಜನತೆ ನಡೆದಾಡಿಯೇ ದಿನವಿಡೀ ಅಲೆದು, ಮೈಮುರಿದು, ಮಳೆ, ಚಳಿ, ಬಿಸಿಲೆನ್ನದೆ ಮಣ್ಣಿನೊಂದಿಗೆ ಬೆರೆತು ಹೊಲ-ಗದ್ದೆಗಳಲ್ಲಿ ಬೆವರ ಸುರಿಸಿ, ಕೃಷಿ ಕೆಲಸದಲಿ ನಿರತರಾಗಿದ್ದರು. ಈ ಕಾರಣಕ್ಕೆನೇ, ಬಹುತೇಕರು (ಹೆಂಗಸರು, ಗಂಡಸರು ಮಕ್ಕಳೂ ಸಹಿತ) ನೋಡಲು ಸಪೂರವಿದ್ದರೂ, ‘ಜವಾರಿ ಕೋಳಿಯಂತೆ’ ಆರೋಗ್ಯಕರವಾಗಿ ದಷ್ಟ-ಪುಷ್ಟರಾಗಿರುತ್ತಿದ್ದರು. ಮತ್ತೊಂದು ವಿಶೇಷತೆಯೆಂದರೆ, ಊರ ಇತರೆ ಜನತೆ ಕುರಿ, ಕೋಳಿ, ಮೇಕೆಗಳ ಮಾಂಸವನ್ನು ಊಟಕ್ಕೆ ಬಳಸ್ತಾಯಿದ್ರೆ; ಅತ್ತ, ಲಂಬಾಣಿಗರು ಇವುಗಳ ಜತೆಗೆ ‘ಮಿಕ’ದ ಮಾಂಸ ಅವರ ಅತ್ಯಂತ ಪ್ರಿಯವಾದ ಖಾದ್ಯವಾಗಿತ್ತು. ಆಗಾಗ್ಗೆ, ಬೇಸಿಗೆಯ ದಿನಗಳಲ್ಲಿ ಆಹಾರ ಅರಸಿ ಕಾಡಂಚಿಗೆ ಬರುವ ‘ಮಿಕಗಳ’ ಬೆನ್ನಟ್ಟಿ, ತಂಡೋಪತಂಡವಾಗಿ ಈಟಿ, ಭರ್ಜಿಗಳ ಹಿಡಿದು, ಬಲೆಯೊಂದಿಗೆ ಬೇಟೆಯಾಡುವುದು ಅವರ ಬಹುಮೆಚ್ಚಿನ ಹವ್ಯಾಸವಾಗಿತ್ತು. ಇನ್ನು, ಕೆಲವರಿಗೆ ಬೇಟೆ ಪ್ರತಿಷ್ಠೆಯ ವಿಷಯವಾಗಿತ್ತು. ಬೇಟೆ ಸಿಕ್ಕ ದಿನ, ಊರ ತುಂಬಾ ಹಬ್ಬವೋ ಹಬ್ಬ! ಅಲ್ಲಿಯೇ, ಊರಾಚೆಯ ಮರದಡಿ ಎಲ್ಲವನ್ನೂ ಶುಚಿಗೊಳಿಸಿ, ಚಿಕ್ಕ ಚಿಕ್ಕ ಪಾಲು ಹಾಕಿ, ‘ಮಿಕದ ಮಾಂಸ’ ಪಡೆವಲ್ಲಿ ಹರಸಾಹಸ ಪಡುತ್ತಿದ್ದರು! ಕೆಲವು ಸಲ, ಮಿಕದ ‘ಪಾಲಿ’ ಗೆ ಒಳಜಗಳ ಶುರುವಾಗಿ ಅತಿರೇಕಕ್ಕೇರಿದ ಪ್ರಸಂಗಗಳೂ ಉಂಟು! ಆ ರಾತ್ರಿ ಮನೆ- ಮನೆಗಳಲ್ಲಿ, ಕಟ್ಟಿಗೆಗಳ ಕೆಂಡದಿ ಮಿಕದ ಮಾಂಸವನ್ನ ಹದವಾಗಿ ಸುಟ್ಟು, ಖಾರ, ಮಸಾಲೆ, ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ, ಬಿಸಿ ಜೋಳದ ರೊಟ್ಟಿಯೊಂದಿಗೆ ಕೊಬ್ಬಿದ, ಎಣ್ಣೆ-ಭರಿತ ಒಣಕೊಬ್ಬರಿಯಂತಹ ಮಿಕದ ಮಾಂಸದ ತುಂಡು ಸವಿಯುತ್ತಾ ತಡರಾತ್ರಿವರೆಗೂ ಬೇಟೆಯ ರೋಚಕತೆಯನ್ನು ರಸವತ್ತಾಗಿ ಮೆಲುಕು ಹಾಕುವುದರಲ್ಲಿ ಮಗ್ನರಾಗುತ್ತಿದ್ದರು! ಆ ದಿನ ಓಣಿಗಳಲ್ಲಿ, ‘ಮಿಕದ ಸಾರಿನ’ ವಿಶಿಷ್ಟ ಪರಿಮಳದ ಘಮ್ಮತ್ತೋ ಘಮ್ಮತ್ತು!!
ಈ ನಡುವೆ, ಶಾಲಾ ಓಣಿಯ ಹೊನ್ನ, ಮಂಜ ಅಣ್ಣ-ತಮ್ಮಂದಿರಿಬ್ಬರೂ ಮಿಕದ ಮಾಂಸದ ರುಚಿಗೆ ಸದಾ ಹಾತೊರೆವ ಬಯಕೆ ಹೊತ್ತು, ಪಾಲು ಸಿಕ್ಕಾಗಲೆಲ್ಲಾ ಮನೇಲಿ ಹೆಂಡ್ತೀರೊಂದಿಗೆ ಮಂಗಳಾರತಿ ಎತ್ತಿಸಿಕೊಂಡರೂ, ಛಲದಿ ಬಿಡದೆ ಘಮ್ಮತ್ತು ಮಾಡಿ, ಬಾಯ್ತುಂಬಾ ಎಲೆಯಡಿಕೆ ಹಾಕಿ ಬರೀ ಬಿಳಿ ಬನಿಯನ್, ಪಂಚೆ ಧರಿಸಿ ಹೆಗಲ ಮೇಲಿನ ಟವೆಲನ್ನ ಎರಡೂ ಕೈಗಳಿಂದ ಗತ್ತು-ಗೈರಿನಿಂದ ಆಚೀಚೆ ಎಳೆದಾಡುತ್ತಾ ಓಣೀಲೆಲ್ಲಾ ತಿರುಗಾಡಿ ಹಮ್ಮು-ಬಿಮ್ಮಿನಿಂದ ಬೀಗುತ್ತಿದ್ದರು. ಹಲವು ಬಾರಿ ಲಂಬಾಣಿಗರೊಂದಿಗೆ ಮಿಕದ ಬೇಟೆಗೆ ತೆರಳಿ ಅನುಭವವಿದ್ದರಿಂದ, ಬೇಟೆಯಾಡುವ ಚಪಲವೂ ತುಸು ಹೆಚ್ಚೇ ಇತ್ತು. ಇವರ ಸಾಲಿಗೆ ಆಗಾಗ್ಗೆ, ಅದೇ ಓಣಿಯ ಮಾಯಮ್ಮ ದೇವಸ್ಥಾನದ ಬಳಿಯ ಅಳಿಯ-ಮಾವಂದಿರಾದ ಫಕ್ಕೀರ, ನಾಗ ಮನೆಯ ಹೊರಗೆ ಮಿಕದ ಮಾಂಸದ ರುಚಿ ಬಾಯಿಚಪ್ಪರಿಸಿ ಸವಿಯುತ್ತಿದ್ದರು! ಆದರೆ, ಬೇಟೆಯ ಹುಚ್ಚು ಅಷ್ಟಾಗಿರಲಿಲ್ಲ.
ಚಳಿಗಾಲ ಕಳೆದು, ಅದೊಂದು ಕಡು ಬೇಸಿಗೆಯ ದಿನ. ಅದಾಗಲೇ, ಮಿಕದ ಬೇಟೆಯಾಡಿ ತುಂಬಾ ದಿನಗಳೇ ಕಳೆದಿತ್ತು. ಲಂಬಾಣಿ ಜನತೆ, ಕೃಷಿ ಕೆಲಸ ತುಸು ಬಿಡುವಿದ್ದರಿಂದ, ಬೇಟೆಯ ಮೋಜಿಗೆ ಎಲ್ಲಾ ಉಪಾಯ ಮಾಡಿ ಮರುದಿನ ಸಂಚು ಹೂಡಿದ ಸುದ್ದಿ ಕಾಳ್ಗಿಚ್ಚಿನಂತೆ ಊರೆಲ್ಲಾ ಹಬ್ಬಿತ್ತು. ರಾತ್ರೋರಾತ್ರಿ, ಎಲ್ಲಾ ‘ಬೇಟೆ ಪ್ರಿಯರು’ ತಮ್ಮ ಬಳಿ ಇರುವ ಸಕಲ ಶಸ್ತ್ರಗಳಿಂದ ಸುಸಜ್ಜಿತರಾಗತೊಡಗಿದ್ದರು. ಹಾಗೆನೇ, ಇತ್ತ ಹೊನ್ನ-ಮಂಜ ರಿಬ್ಬರೂ ಅತೀವ ಆಸಕ್ತಿಯಿಂದ ಭರ್ಜಿ, ಈಟಿ, ಗಟ್ಟಿ-ಮುಟ್ಟಾದ ಕೊಲ್ಲಾಪುರ ಕುರುಬರ ಚರ್ಮದ ಪಾದರಕ್ಷೆಗಳೆಲ್ಲವನ್ನು ಭರದಿಂದ ಸಿದ್ಧಗೊಳಿಸಿ, ಬೇಟೆ ಇಲ್ಲದೆ ಕಂಗೆಟ್ಟ ಮನಕೆ ಇನ್ನಿಲ್ಲದ ಉತ್ಸಾಹ ತುಂಬಿ ಆಗಸದಲ್ಲಿ ತೇಲುತ್ತಿದ್ದರು. ಆ ರಾತ್ರಿ, ಓಣಿಯಲಿ ಸಿಕ್ಕವರೆಲ್ಲರಿಗೂ ತಮ್ಮ ನಾಳೆಯ ಬೇಟೆಯ ಆರ್ಭಟವೋ ಆರ್ಭಟ! ಇವರ ಹುಚ್ಚು ಮನಸ್ಸಿನ ಹೋಯ್ದಾಟಕ್ಕೆ, ಕೆಲ ಹಿರಿಯರು ಬೇಟೆಗೆ ಹೋಗದಿರಲು; ಇನ್ನೂ ಕೆಲವರು, ಮನೆದೇವರು ಶ್ರೀ ಉಚ್ಚಂಗೆಮ್ಮ, ಶ್ರೀ ಮಾಯಮ್ಮ ದೇವತೆಯರಲ್ಲಿ ಆಯುಧಗಳೊಂದಿಗೆ ಪೂಜೆಗೈದು ದರ್ಶನ ಪಡೆದು ತೆರಳಲು ಸಲಹೆಯಿತ್ತರು. ಎಲ್ಲವನ್ನೂ ತುಸು ದಾರ್ಷ್ಟ್ಯದಿಂದಲೇ ಅಲಕ್ಷಿಸಿ, ‘ನಾವು ಭಲೇ ಧೀರ ಬೇಟೆಗಾರರು! ಸಾಕಷ್ಟು ಬಾರಿ ಜಯಸಿದ್ದೇವೆ; ಇದೇ ಮೊದಲೇನಲ್ಲ, ನಾವು ದಿಟ್ಟರು, ಕಲಿವೀರರು!’ ಎಂತೆಲ್ಲ ತೋರಿಕೆಯ ಹುಂಬ ಮಾತುಗಳನ್ನ ಸಲಹೆಯಿತ್ತವರಿಗೆ ಫಟೀರನೇ ಕಿಡಿಕಾರುತ್ತಿದ್ದರು. ಮೈಮನ ಅದಾಗಲೇ ಕಾಡಿನಲಿ ಅಲೆಯುವಂತಾಗಿತ್ತು! ರಾತ್ರಿಯಿಡೀ, ನಿದ್ದೆಯಲ್ಲೂ ‘ಮಿಕದ ಬೇಟೆಯ’ ನಾನಾ ವಿಧದ ಅವತಾರಗಳ ಕನಸೇ!! ಇಬ್ಬರಲ್ಲಿ, ಅಣ್ಣ ಹೊನ್ನ ಎತ್ತರದ, ಕಡು ಕಪ್ಪುಬಣ್ಣದ, ಒರಟು ಮುಖದ, ತುಸು ಭಂಡ ಧೈರ್ಯದ ಹಾಗೂ ಹುಂಬ ಮನಸಿನ, ದುಡುಕಿನ ವ್ಯಕ್ತಿತ್ವದ ಗಟ್ಟಿಗನಾಗಿದ್ದ! ಮಿಕದ ಬೇಟೆಯ ಮೋಜು ಭಲೇ ಇಷ್ಟವಾಗಿತ್ತು. ಯಾರಾದರೂ ಬೇಟೆಯ ಸೊಲ್ಲೆತ್ತಿದರೆ ಸಾಕು, ಚಡಪಡಿಸಿ ಸದಾ ಮುಂದೆ ನುಗ್ಗುತ್ತಿದ್ದ!
ಕಗ್ಗತ್ತಲು ಸರಿದು, ಚುಮುಚುಮು ಬೆಳಕು ಹರಿಯಿತು. ಗಡಿಬಿಡೀಲಿ ಎದ್ದ ಹೊನ್ನ, ಬೆಳಗಿನ ಸಂಧ್ಯಾವಂದನೆ ಮುಗಿಸಿ, ಮನೇಲಿ ಬಿಸಿ ರೊಟ್ಟಿ-ಪಲ್ಯ ಸವಿದು, ಕುತೂಹಲದಿ ಲಂಬಾಣಿಗರ ಹಟ್ಟಿಯ ಕರೆಗೆ ತವಕದಿ ಕಾಯುತ್ತಿದ್ದ. ಬೆಳಗಿನ ಜಾವ ಎಂಟು ಗಂಟೆ ಹೊತ್ತಿಗೆ, ಸುಮಾರು 25-30 ಜನರ ಬೇಟೆಯ ತಂಡ ಆಯುಧಗಳಿಂದ ತಾಂಡಾದಂಚಿನ ಗುಡ್ಡದ ಮೂಲಕ ಸಾಲು ಸಾಲಾಗಿ ಉತ್ಸಾಹದಿ ಉಪಾಯಗಳನ್ನ ಹೆಣೆಯುತ್ತಾ, ಚರ್ಚಿಸುತ್ತಾ ಹೊರಟಿತು. ಮುಂದೆ ಬಲಾಢ್ಯ ನಿಪುಣರು; ಅಲ್ಲಲ್ಲಿ, ಸಾಧಾರಣ ಅನುಭವ ಇರುವವರು; ಮಧ್ಯೆ, ಮತ್ತೆ ಕೊನೆಯಲ್ಲಿ ಗಟ್ಟಿಗರು ಹಂಚಿಕೆಯಾಗಿ ಸಾಗುತ್ತಿತ್ತು ಬೇಟೆಗಾರರ ದಂಡು! ಹೀಗೆ, ದಾರಿ ಮಧ್ಯೆ ಸಿಕ್ಕ ಬೃಹತ್ ಅರಳಿ ಮರದಡಿ ಕೊಂಚ ವಿಶ್ರಮಿಸಿ, ‘ಮಿಕದ ಬೇಟೆಯ’ ಜಾಣತನದ ಉಪಾಯಗಳನ್ನ ತಾಂಡಾದ ಹಿರಿಯ ಬೇಟೆಗಾರ – ‘ಹಂಕ್ಯಾ ನಾಯ್ಕ್’ ಎಲ್ಲರಿಗೂ ಸೂಕ್ಷ್ಮರೀತಿ ವಿವರವಾಗಿ ಮನದಟ್ಟು ಮಾಡಿಸಿದ. ಜೊತೆಗೆ, ಬಲಾಢ್ಯ ಮಿಕದ ನಡತೆ, ವರ್ತನೆ ಹಾಗೂ ಅದರ ಅಗಾಧ ಶಕ್ತಿಯ ಕುರಿತು ವಿವೇಚನೆಯ ಅರಿವು ಕೊಟ್ಟ. ಕೆಲವು ವಿಶಿಷ್ಟ ಧ್ವನಿಗಳು, ಹಾವಭಾವಗಳ ನಟನೆಯ ಮೂಲಕ ಅವುಗಳ ಅರ್ಥ ವಿವರಣೆಯೊಂದಿಗೆ, ಮಿಕದ ಸಧ್ಯದ ಮನಸ್ಥಿತಿ, ಇರುವಿಕೆ, ಸಿಟ್ಟು, ಶಕ್ತಿ ಇತ್ಯಾದಿ ಕುರಿತು ತಂಡದ ಇತರೆ ಸದಸ್ಯರಿಗೆ ಮಾಹಿತಿ ನೀಡಲು, ಪ್ರಾತ್ಯಕ್ಷಿಕೆ ನೀಡಿ, ಪೂರ್ವ ತಯಾರಿ ಮಾಡಿಕೊಳ್ಳಲಾಯಿತು. ಅಲ್ಲದೆ, ‘ಬೇಟೆಯೆನ್ನುವುದು ಒಗ್ಗಟ್ಟಿನಲಿ ಹೋರಾಡುವುದೇ ಹೊರತು ಒಬ್ಬಂಟಿಗರಿಂದಲ್ಲ’ ಎಂಬ ನೀತಿಯನ್ನ ಮನವರಿಕೆ ಮಾಡಿಸಿದ. ತಾಳ್ಮೆ, ಚತುರತೆ ಹಾಗೂ ಒಗ್ಗಟ್ಟಿನಿಂದ ಸುರಕ್ಷಿತವಾಗಿ ಧೈರ್ಯ, ಆತ್ಮವಿಶ್ವಾಸದಿ ಹೋರಾಡುವಂತೆ ಕರೆಕೊಟ್ಟ. ಎಲ್ಲರೂ ತಲೆದೂಗಿದರು. ಚರ್ಚೆಯಂತೆಯೇ, ಐದಾರು ಸದಸ್ಯರಿರುವ ಸುಮಾರು ಏಳೆಂಟು ತಂಡಗಳನ್ನು ಮಾಡಿ, ಪ್ರತಿ ತಂಡದಲ್ಲಿ ಎರಡರಿಂದ ಮೂರು ಜನ ಅನುಭವಿ ಬಲಾಢ್ಯ ಬೇಟೆಗಾರರು ಮುಂದಾಳತ್ವ ವಹಿಸಿಕೊಂಡು ತಂಡವನ್ನ ಮುನ್ನಡೆಸುವಂತೆ ಹಾಗೂ ಸಮಯಕ್ಕೆ ತಕ್ಕಂತೆ ಉಪಾಯದಿಂದ ಬೇಟೆಗೆ ಸನ್ನದ್ಧರಾಗುವಂತೆ ರಚನೆ ಮಾಡಲಾಯಿತು. ಬಳಿಕ, ಎಲ್ಲರೂ ಊರ ಅಧಿದೇವತೆ ಶ್ರೀ ದುರ್ಗಾದೇವಿ ಹಾಗೂ ತಾಂಡಾದ ಸಂತ ಶ್ರೀ ಸೇವಾಲಾಲ್ ಮನದಿ ನೆನೆದು, ಪ್ರಾರ್ಥಿಸಿ, ತಂಡದ ಜವಾಬ್ದಾರಿಯರಿತು ಬೆಟ್ಟದ ಕಣಿವೆಗಳಡಿ ಮಿಕಗಳ ಹೆಜ್ಜೆ ಗುರುತುಗಳ ಜಾಡು ಹಿಡಿದು ಅವುಗಳ ಆವಾಸದತ್ತ ವಾಳತಾಂಡಾದ ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿ ಜೋರಾಗಿ ಅರಚುತ್ತ, ಕೂಗಾಡುತ್ತಾ ಮಿಕಗಳನ್ನ ದೊಂಬಿಯೆಬ್ಬಿಸ ತೊಡಗಿದರು. ಅಲ್ಲಲ್ಲಿ ಚದುರಿದಂತೆ, ತಂಡಗಳು ಆಯುಧಗಳಿಂದ ಪೊದೆಗಳನ್ನ ತಿವಿಯುತ್ತಾ, ಭಯಂಕರ ಸದ್ದುಗೈಯುತ್ತಾ, ಪ್ರಾಣಿಗಳಂತೆಯೇ ಒದರುತ್ತಾ, ಒಗ್ಗಟ್ಟಿನಲಿ ಮೂರು ನಾಲ್ಕು ಬೆಟ್ಟಗಳನ್ನ ಅಲೆದು, ಬಿಸಿಲ ತಾಪಕ್ಕೆ ಬಾಯಾರಿಸಿ, ಬಳಲತೊಡಗಿದರು. ಅಲ್ಲಲ್ಲಿ ಕೆರೆ, ತೋಡು, ಕಲ್ಲೊರತೆಗಳಲಿ ಸಿಕ್ಕ ಹನಿ ನೀರ ಹೀರಿ, ಬಾಯಾರಿಕೆ ನೀಗಿಸಿಕೊಂಡು, ಬರ್ಸಿದ್ದಪ್ಪನ ಬೆಟ್ಟದ ತಳಭಾಗದಿ ಪೊದೆಯೊಂದರಲಿ ಧುತ್ತನೆ ಎದುರಾದ ‘ಮಿಕರಾಯ’ನ ಕಂಡು ಬೆಚ್ಚಿ, ಕ್ಷಣಾರ್ಧದಲ್ಲೇ ಎಚ್ಚೆತ್ತುಕೊಂಡರು. ಕಾಡೆಲ್ಲ ಅಲೆದು, ಕೊಬ್ಬಿ ಸೊಕ್ಕಿದ ಮಿಕರಾಯ, ಶರವೇಗದಿ ಛಂಗನೆ ಪೊದೆಯಿಂದ ಜಿಗಿದು ಮತ್ತೊಬ್ಬ ಹಿರಿಯ ಬೇಟೆಗಾರ ಠಾಕ್ರ ನಾಯ್ಕನ ಪಕ್ಕದಲ್ಲಿಯೇ ಎಗರಿದ್ದರಿಂದ, ಅವನ ಭರ್ಜಿಯ ಮೊನಚಾದ ತುದಿ ಮಿಕರಾಯನ ಎಡತೊಡೆಗೆ ತಾಗಿ ತುಸು ರಕ್ತ ಸೋರಿ, ಕಾಲ್ಬೇನೆಯಲ್ಲೇ ಎರಡು-ಮೂರು ಬೆಟ್ಟಗಳನ್ನು ಅಲೆದಾಡಿಸಿ, ಬೇಟೆಗಾರರ ಸರ್ವ ಶಕ್ತಿಯನ್ನೂ ಕುಂದಿಸಿ, ಮೆತ್ತಗೆ ಮಾಡಿ ಬಳಲಿಸಿಬಿಟ್ಟಿತ್ತು.
ಈ ನಡುವೆ, ಏಳೆಂಟು ಮಂದಿ ತಂಡದ ಹೊಸ ಸದಸ್ಯರು ಕೈಕಾಲು ಬೇನೆಗೊಂಡು ಸುಸ್ತಾಗಿ ಬೇಸತ್ತಿದ್ದರು. ಸಮಯ ಅದಾಗಲೇ ಮಧ್ಯಾಹ್ನ ಒಂದು ಗಂಟೆ ಮೀರಿತ್ತು. ಮುಖ್ಯಸ್ಥ ಹಂಕ್ಯಾ ನಾಯ್ಕ್, ‘ಮಿಕ ಈಗಾಗಲೇ ಭಯಂಕರ ಓಡಿ, ದಣಿದಿದೆ; ಬಿಡದೆ, ಇನ್ನ ಸ್ವಲ್ಪ ಬೆನ್ನಟ್ಟಿದರೆ ಬೇಟೆ ನಿಶ್ಚಿತ’ ಎಂದು ಎಲ್ಲರನ್ನೂ ಹುರಿದುಂಬಿಸುತ್ತಾ, ಆಯುಧಗಳ ಸಪ್ಪಳದಿ ‘ಊ…ಹೂಂ… ಊ…ಹೂಂ…. ಹೇ… ಹೇಯ್, ಕಾಡ್ ಬೇಟೆ ಐಸಾ; ಮಿಕ ಬೇಟೆ ಐಸಾ’, ಎಂದು ಜೋರಾಗಿ ಪುನಃ ಆರ್ಭಟಿಸ ತೊಡಗಿದರು. ಅದಾಗಲೇ, ಎಡತೊಡೆ ನೋವಿಂದ ಬಳಲಿ ದಣಿದ, ಕೊಂಚ ವಿಶ್ರಮಿಸುತ್ತಿದ್ದ ಪೊದೆಯಲ್ಲಡಗಿ ಕುಳಿತ ಮಿಕರಾಯ ಭಯಂಕರ ಕ್ರೋದಧಿ ಗೂರತೊಡಗಿದ! ಕೂಡಲೇ ಎಚ್ಚೆತ್ತ, ಎಲ್ಲರೂ ಸುತ್ತಮುತ್ತಲ ಸಿಕ್ಕಸಿಕ್ಕ ಮರಗಳನ್ನೇರಿ ಅದರ ಹೊರಬರುವಿಕೆಯ ನಿರೀಕ್ಷೆಯಲ್ಲಿ ಕಣ್ಣು ಮಿಟುಕಿಸದೆ ತದೇಕಚಿತ್ತದಿಂದ ಕಾಯತೊಡಗಿದರು.
ಇದ್ದಕ್ಕಿದ್ದಂತೆ ಅದೇನನ್ನಿಸಿತೋ ಗೊತ್ತಿಲ್ಲ. ಈ ಹೊನ್ನ ಭಲೇ ಭಂಡ ಧೈರ್ಯ ಮಾಡಿ, ತಮ್ಮ ಮಂಜ ಹಾಗೂ ಹಂಕ್ಯಾ ನಾಯ್ಕರ ಧ್ವನಿ, ಹಾವಭಾವದ ಸೂಚನೆಯನ್ನೂ ಲೆಕ್ಕಿಸದೆ, ನೇರ ಮರದಿಂದಿಳಿದು ಭರ್ಜಿ ಹಿಡಿದು, ಮಿಕರಾಯನ ಪೊದೆಯತ್ತ ವೀರಾವೇಶದಿ ಓಡಿ, ಅದರ ಕಾಲಿಗೆ ತಿವಿದೇ ಬಿಟ್ಟ! ಬಿರುಬಿಸಿಲಲಿ ಓಡಿ ಬಳಲಿ ಬೆಂಡಾದ ಮಿಕರಾಯ ಹೊನ್ನನ ಚೇಷ್ಟೆಗೆ ಕೆರಳಿ ಏಕಾಏಕಿ ಅವನ ಮೇಲೆರಗಿತು. ಪ್ರತಿಭಟನೆಯ ಧೈರ್ಯವೂ ತೋರದೆ, ಹೊನ್ನ ಅದರ ಆರ್ಭಟಕ್ಕೆ ತತ್ತರಿಸಿ ಹೋಗಿದ್ದ. ಕ್ಷಣಾರ್ಧದಲಿ ಅಡಗಿಸಿದ ತನ್ನೆಲ್ಲಾ ಶಕ್ತಿ ಒಗ್ಗೂಡಿಸಿ ಚಿರತೆಯಂತೆ ಎಗರಿದ ಮಿಕರಾಯ, ಕಣ್ಣೆಲ್ಲ ಕೆಂಪಾಗಿ, ಕೋಪದಿಂದ ಹರಿತವಾದ ತನ್ನೆರಡೂ ಕೋರೆಗಳಿಂದ ಹೊನ್ನನ ಕುತ್ತಿಗೆಯ ಹಿಂಭಾಗ ಹಾಗೂ ಬೆನ್ನ ಭಾಗವನ್ನು ಅಕ್ಷರಶಃ ಇರಿದು ರಕ್ತದ ಮಡುವಿನಲ್ಲಿ ಬೀಳಿಸಿತ್ತು!! ಯಾರೊಬ್ಬರೂ ಆ ಕ್ಷಣಕ್ಕೆ ಧೈರ್ಯ ತೋರದೆ, ಬೆಪ್ಪು-ಪೆಚ್ಚು ಮೋರೆ ಹಾಕಿ, ಮೂಕವಿಸ್ಮಿತರಾಗಿ ಏರಿದ್ದ ಮರವನ್ನಿಳಿಯದಾದರು. ಆದರೆ, ಮಂಜ ರೋಷಾಗ್ನಿಯಿಂದ ಜಿಗಿದು, ಅಣ್ಣನ ನೆರವಿಗೆ ಧಾವಿಸಿದ. ಆ ಕೂಡಲೇ, ದಾಳಿಯ ಭೀಕರತೆಯ ಅರಿವಾಗಿ ಹಂಕ್ಯಾ ನಾಯ್ಕ್, ಠಾಕ್ರಾ ನಾಯ್ಕ್ ಎಲ್ಲರೂ ಸಂಜ್ಞೆಗಳ ಮೂಲಕ ಆಕ್ರಮಿಸುವುದಾಗಿ ಈಟಿ, ಭರ್ಜಿಗಳೊಂದಿಗೆ ದಿಢೀರನೆ ಮಿಕರಾಯನ ಹೊಟ್ಟೆ, ಬೆನ್ನಿಗೆ ಇರಿಯುವುದರ ಮೂಲಕ ಅದನ್ನ ನೆಲಕ್ಕರುಳಿಸಿದ್ದರು! ರಕ್ತ ಒಸರುತ್ತ, ವಿಪರೀತ ಬೇನೆಯಿಂದ ನರಳಿ, ಜೀವ ಸಂಕಟಕ್ಕೆ ಇಡೀ ಕಾಡೇ ಭಯ-ಭೀತಿಗೊಳ್ಳುವ ರೀತಿ ಅರಚಾಡುತ್ತಿದ್ದ ‘ಮಿಕ’ ಒಂದೆಡೆಯಾದರೆ; ಇತ್ತ, ಹೊನ್ನ ಜೀವನ್ಮರಣದ ಮಧ್ಯೆ ಸಿಲುಕಿದ್ದ! ಈ ಎರಡೂ ಘಟನೆಗಳಿಂದ ಬೇಟೆಗೆ ತೆರಳಿದ ಇಡೀ ಸಮೂಹವಲಯದಲ್ಲಿ ಹಿಂದೆಂದೂ ಅನುಭವಕ್ಕೆರಗದ ಭಾವೋದ್ವೇಗ ಉಕ್ಕಿ, ಜೀವದ ಅಮೂಲ್ಯತೆಗೆ ತಲೆಬಾಗಿ ಹೃದಯದಾಳದಿಂದ ಕಣ್ಣುಗಳು ತೇವಗೊಂಡಿದ್ದವು! ಆ ಕ್ಷಣ, ಬೇಟೆಯ ಕ್ರೂರತೆ ತಂದೊಡ್ಡುವ ಅನಾಹುತಗಳ ಅರಿವು ಒಳಗಣ್ಣ ತೆರೆಸಿತ್ತು.
ಇತ್ತ, ಹೊನ್ನನ ಸ್ಥಿತಿ ತೀರಾ ಗಂಭೀರತೆಯಿಂದ ಕೂಡಿದ್ದು, ರಕ್ತಸ್ರಾವ ಹಾಗೂ ತೀವ್ರ ಬೇನೆಯಿಂದ ನರಳಿ ಮೂರ್ಛೆ ಹೋಗಿದ್ದ. ಅಣ್ಣನ ಸ್ಥಿತಿಗೆ ಮುಮ್ಮಲ ಮರಗಿ, ಮಂಜ ತಬ್ಬಿ ಗೋಗರೆದು ಅಳತೊಡಗಿದ. ಕೂಡಲೇ ಕಾಡೌಷಧಿಯ ಬಲ್ಲ ಹಂಕ್ಯಾನಾಯ್ಕ್ ಅಲ್ಲಿಯೇ ಸುತ್ತಮುತ್ತ ಸಿಕ್ಕ ಹತ್ತಾರು ಹಸಿರು ಸೊಪ್ಪುಗಳ ಹೆಕ್ಕಿ, ಒಟ್ಟುಗೂಡಿಸಿ ಜಜ್ಜಿ ರಸಹಿಂಡಿ ಗಾಯದ ಭಾಗಕ್ಕೆ ಹಚ್ಚಿ ನೇವರಿಸಲು ಬೇನೆಯ ತೀವ್ರತೆ ತಗ್ಗಿ ನಿಧಾನವಾಗಿ ಹೊನ್ನ ಮೂರ್ಛೆಯಿಂದ ಚೇತರಿಸಿಕೊಂಡು ಕೈ-ಕಾಲು ಆಡಿಸತೊಡಗಿದ. ಸುತ್ತ ಗದ್ದೆ ಕೆಲಸಕ್ಕೆ ತೆರಳಿದ ಕೃಷಿಕರು, ಬೇಟೆಗಾರರು, ನೆರೆದವರೆಲ್ಲರೂ ಹಂಕ್ಯಾ ನಾಯ್ಕ್ ರ ಗಿಡಮೂಲಿಕೆಯ ಕೈಚಳಕಕ್ಕೆ ತಲೆಬಾಗಿ ಎರಡೂ ಕೈ ಜೋಡಿಸಿದರು. ಆ ಹೊತ್ತಿಗಾಗಲೇ, ಹೊನ್ನ ಮಿಕದ ದಾಳಿಗೆ ತುತ್ತಾಗಿ ಸಾವು-ಬದುಕಿನ ಮಧ್ಯೆ ನರಳುತ್ತಿರುವ ಹಾಗೂ ಬದುಕುಳಿವ ಅನುಮಾನ ಊರೆಲ್ಲಾ ಸುದ್ದಿ ಆಗಿತ್ತು. ತಡಮಾಡದೆ, ಆತನನ್ನು ಆಸ್ಪತ್ರೆಗೆ ಸೇರಿಸಿ, ಸರಿಯಾದ ಸಮಯಕ್ಕೆ ಕುತ್ತಿಗೆ ಹಾಗೂ ಬೆನ್ನ ಭಾಗದಲ್ಲಿನ ಗಾಯಗಳಿಗೆ ಎಂಟರಿಂದ ಹತ್ತು ಹೊಲಿಗೆ ಹಾಕಿಸಿ, ಚಿಕಿತ್ಸೆ ನೀಡುವುದರ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಲಾಯಿತು. ಹೊನ್ನ ಸಂಪೂರ್ಣ ಚೇತರಿಸಿಕೊಳ್ಳಲು ತಿಂಗಳುಗಳೇ ಹಿಡಿಯಿತು. ನಿಜಕ್ಕೂ ಆ ದಿನಗಳು, ‘ಬದುಕಿದೆಯಾ ಬಡಜೀವವೆಂಬಂತೆ’ ಆತನಿಗೆ ಮರುಜನ್ಮ ಪಡೆದ ಅನುಭವವೇ ಆಗಿತ್ತು! ಇಡೀ ಘಟನೆಗೆ ಕಂಬನಿಮಿಡಿದ ಊರ ಜನತೆ ಕಾಡು, ಪಶು ಪಕ್ಷಿಗಳ ಮಹತ್ವ, ಜೀವದ ಬೆಲೆಯರಿತು ಅಂದಿನಿಂದಲೇ, ಊರಲ್ಲಿ ‘ಮಿಕದ ಬೇಟೆ’ ಮಂಕು ಕವಿದಂತಾಗಿ ಬೇಟೆಯೆಂಬ ಕ್ರೂರತೆಗೆ ಕೊನೆಯ ದಿನಗಳಾಗಿತ್ತು!! ಭೂ ಮಾತೆ ಮಡಿಲಲ್ಲಿ, ಸಕಲ ಜೀವ-ಸಂಕುಲವೂ ಬದುಕು ಕಟ್ಟಿಕೊಳ್ಳುವ ಸ್ವಾತಂತ್ರ್ಯವಿರುವಾಗ, ಮನುಷ್ಯ ಮಾತ್ರ ತನ್ನ ಮೂಗಿನ ನೇರಕ್ಕೇ ಎಲ್ಲವೂ ಸಲ್ಲಬೇಕು; ಈ ಭೂಮಿಯಲ್ಲಡಗಿರುವ ಸಂಪತ್ತೆಲ್ಲ ತನ್ನ ಅನುಕೂಲಕ್ಕೇ ಹಾಗೂ ತನ್ನಿಚ್ಛೆಯೇ ಸರ್ವ ಶ್ರೇಷ್ಠ; ಆ ಸಂತಸಕ್ಕೆ ಎಲ್ಲವನ್ನೂ ಬದಲಿಸಬಲ್ಲೆ; ನೀರು, ಗಾಳಿ, ಮಣ್ಣು, ಪಶು-ಪಕ್ಷಿ, ಗಿಡ-ಮರ, ಹಾಗೂ ಅರಣ್ಯವನ್ನೆಲ್ಲ
ಕಬಳಿಸಬಲ್ಲೆ, ನಾಶಪಡಿಸಬಲ್ಲೆ; ಮಲಿನಗೊಳಿಸಬಲ್ಲೆ; ಜೊತೆಗೆ, ಹೊಸ ಲೋಕ ಸೃಷ್ಟಿಸಬಲ್ಲೆಯೆಂಬ ಹುಂಬತನದ ಅವೈಜ್ಞಾನಿಕ, ಮೂರ್ಖತನದ ವಿಚಾರಗಳಿಂದ ಪರಿಸರಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರವೃತ್ತಿ ರೂಢಿಸಿಕೊಂಡಿದ್ದಾನೆ. ಈ ಮನಸ್ಥಿತಿ ಬದಲಾಗಬೇಕು. ಮನುಷ್ಯನ ಉಸಿರು ಗಿಡ-ಮರಗಳಲ್ಲಿದೆ. ಅಂಥಹ ಸಸ್ಯವರ್ಗವನ್ನ ನಾವೆಲ್ಲ ಎಷ್ಟು ನೆಟ್ಟು, ಪೋಷಿಸಿ, ಆರೈಕೆ ಮಾಡಿದ್ದೇವೆ? ಸಸ್ಯ-ಸಂಪತ್ತು ಹೆಚ್ಚಿದಷ್ಟೂ ಪರಿಶುದ್ಧ ಆಮ್ಲಜನಕ, ಕಾಲಕ್ಕೆ ತಕ್ಕ ಮಳೆ, ಸಮೃದ್ಧ ಬೆಳೆ, ಸಮತೋಲಿತ ಜೀವ-ಸಂಕುಲ ಮತ್ತು ಆರೋಗ್ಯ ಎಲ್ಲವೂ ತಂತಾನೇ ಸುಸ್ಥಿರವಾಗಿ ಭದ್ರಗೊಳ್ಳುತ್ತೆ. ಭೂಮಿ ಹಚ್ಚ-ಹಸಿರಿನಿಂದ ಕಂಗೊಳಿಸುವಂತಾಗಬೇಕು. ಮತ್ತೆ, ಪಕ್ಷಿಗಳ ಚಿಲಿಪಿಲಿ ಕಲರವ, ಪ್ರಾಣಿಗಳ ಒಕ್ಕೊರಲ ಒಡನಾಟ, ಪ್ರಾಕೃತಿಕ ಸಮತೋಲನ ಬೇರೂರುವಂತಾಗಬೇಕು. ಬುದ್ಧಿಜೀವಿ ಮನುಷ್ಯನಲ್ಲಿ ಕಾಡು, ಪಶು-ಪಕ್ಷಿಗಳ ಒಡನಾಟದಿ ಪರಿಶುದ್ಧ ಭಾವಗಳ ಸಂಪ್ರೀತಿ ಒಡಮೂಡಬೇಕು.
ಲೇಖನ: ಡಾ. ಚಂದ್ರಪ್ಪ ಎಚ್.
ಚಿತ್ರದುರ್ಗ ಜಿಲ್ಲೆ