ಅದೊಂದು ಬೇರೆಯದೇ ಅನುಭೂತಿ
© ಧನಂಜಯ ಜೀವಾಳ
ಮುಂದುವರಿದ ಭಾಗ
ಬೆಳಿಗ್ಗೆ ಆರು ಗಂಟೆಗೇ ಗಂಟುಮೂಟೆ ಕಟ್ಟಿದ ಪ್ರವಾಸೀ ತಂಡ, ಎಂಟೂವರೆಗೆಲ್ಲ ಮುತ್ತೋಡಿ ಅರಣ್ಯಪ್ರದೇಶವನ್ನು ಪ್ರವೇಶಿಸಿತು. ಮುಗಿಲೆತ್ತರದ ಮರಗಳಿಂದ ಥಠ್ ಥಠ್ ಎಂದು ಬೀಳುತ್ತಿದ್ದ ಇಬ್ಬನಿಯ ಹನಿಗಳು ಆಗಷ್ಟೇ ಹರಡಿಕೊಳ್ಳುತ್ತಿದ್ದ ತೆಳ್ಳನೆಯ ಬಿಸಿಲಿಗೆ ಹೌದೋ-ಅಲ್ಲವೋ ಎಂಬಂತೆ ಹಬೆಯಾಡುತ್ತಾ ಆವಿಯಾಗಲು ಅನುವಾಗುತಿತ್ತು. ಈ ಹಿಂದೆಯೇ ನಿಗದಿಯಾಗಿದ್ದಂತೆ ಅರಣ್ಯ ಇಲಾಖೆಯ ಸಫಾರಿ ಜೀಪುಗಳು ಈ ತಂಡವನ್ನು ಕಾಡಿನ ಕೋರ್ ಏರಿಯಾಕ್ಕೆ ಕರೆದೊಯ್ಯಲು ಸಿದ್ಧವಾಗಿ ನಿಂತಿದ್ದವು. ಅರಣ್ಯ ಇಲಾಖೆಯವರೇ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಲಗುಬಗೆಯಿಂದ ಕಾಫಿ, ತಿಂಡಿ ಮುಗಿಸಿಕೊಂಡವರಿಗೆ ನೇರವಾಗಿ ಆನೆ, ಕಾಟಿ, ಜಿಂಕೆ, ಕಡವೆ, ಹುಲಿ, ಕಾಡುನಾಯಿ, ನವಿಲು, ಕೆಂಜಳಿಲು, ಕಾಳಿಂಗಸರ್ಪ ಮುಂತಾದವನ್ನು ನೋಡುವ ಕಾತರ ಹಾಗೂ ಸಡಗರ. ಅಗತ್ಯ ಮಾರ್ಗಸೂಚಿಗಳನ್ನು ನೀಡಿದ ನಂತರ ವಾಹನಗಳು ನಿಧಾನವಾಗಿ ಕಾಡಿನೊಳಕ್ಕೆ ಚಲಿಸಲಾರಂಭಿಸಿದವು.
ಸುಮಾರು ಎರಡು ಗಂಟೆಗಳ ತಿರುಗಾಟದಲ್ಲಿ ಹಲವಾರು ಪ್ರಾಣಿಗಳ, ಅಪೂರ್ವ ತಾಣಗಳ ಎದುರುವಿಕೆಯ ನಂತರ ಸಫಾರಿ ವಾಹನಗಳು ಸಂಚರಿಸಲೆಂದೇ ನಿಗದಿಯಾಗಿದ್ದ ಹಾದಿಯ ಬದಿಯಲ್ಲಿದ್ದ ಪೊದೆಯ ಪಕ್ಕದಲ್ಲಿ ನಿಂತೇ ವಿಶ್ರಮಿಸುತ್ತಿದ್ದ ಆರಡಿಗೂ ಎತ್ತರದ ಭುಜ ಹೊಂದಿದ್ದ ಹಾಗೂ ಕರಿಶಿಲೆಯನ್ನೇ ಕಡೆದಿಟ್ಟಂತ್ತಿದ್ದ ಬೃಹತ್ಗಾತ್ರದ ಕಾಡುಕೋಣವೊಂದು ದಾರಿಗಡ್ಡವಾಗಿ ನಿಂತು, ತನ್ನ ತಲೆಯನ್ನು ತಗ್ಗಿಸಿ, ಅಗಲವಾದ ಹೊಳ್ಳೆಯಿಂದ ಬುಸಬುಸನೆ ಬಿಡುತ್ತಿದ್ದ ಉಸಿರಿಗೆ ನೆಲದಲ್ಲಿದ್ದ ಧೂಳು ಚಿಮ್ಮುತ್ತಿತ್ತು. ವಿಶಾಲವಾಗಿ ಎರಡೂ ಬದಿಗೆ ಪ್ರಭಾವಳಿಯಂತೆ ವಿಜೃಂಭಿಸುತ್ತಾ ಥಳಥಳಿಸುತ್ತಿದ್ದ ಬಿಳಿತುದಿಯ ಕಪ್ಪು ಕೋಡುಗಳನ್ನು ಎಲ್ಲದಕ್ಕಿಂತ ಮುಂದಿದ್ದ ಸಫಾರಿ ವಾಹನದ ಮುಂದಿನ ಬಂಪರ್‌ಗೆ ಒದೆಕೊಟ್ಟು ತನ್ನ ಪ್ರತಿರೋಧ ತೋರಹತ್ತಿತು. ವಾಹನದೊಳಗಿದ್ದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಗಾಬರಿ ಗಲಿಬಿಲಿಯಿಂದ ಗದ್ದಲಮಾಡತೊಡಗಿದರು. ಇಲಾಖೆಯ ನೌಕರನೇ ಆಗಿದ್ದ ವಾಹನ ಚಾಲಕ, ಎಂಜಿನ್ ಅನ್ನು ಆಫ್ ಮಾಡಿ, ಹಿಂದಕ್ಕೆ ತಿರುಗಿ, “ಯಾರೂ ಗದ್ದಲ ಮಾಡಬೇಡಿ, ಇದು ಸ್ವಲ್ಪ ತುಂಟಾಟದ ಕೋಣ, ಸ್ವಲ್ಪ ಹೊತ್ತು ತಂಟೆ ಮಾಡಿ ಅದರ ಪಾಡಿಗೆ ಅದು ಹೊರಟುಹೋಗುತ್ತೆ, ಅಲ್ಲಿಯವರೆಗೆ ಅದರ ಚಲನವಲನಗಳನ್ನು ನಿಶ್ಯಬ್ಧವಾಗಿ ಗಮನಿಸುತ್ತಿರಿ. ಇಂಥಾ ಸಂದರ್ಭಗಳು ಎಲ್ಲರಿಗೂ ಸಿಗೋದಿಲ್ಲ’ ಎಂದು, ತಾನೂ ಡ್ಯಾಷ್ಬೊರ್ಡಿನ ಮುಂದಕ್ಕೆ ಬಾಗಿ ಆಸಕ್ತಿಯಿಂದ ಗಮನಿಸತೊಡಗಿದ. ಬಂಪರಿಗೆ ಹಣೆಯನ್ನು ಕೊಟ್ಟು, ವಾಹನವನ್ನು ಕೊಂಚ ಹಿಂದಕ್ಕೆ ತಳ್ಳಿದ ಕೋಣ, ಎರಡ್ಹೆಜ್ಜೆ ಹಿಂದಕ್ಕೆ ಸರಿದು ತನ್ನ ತಲೆಯನ್ನು ಮೂರ್ನಾಲ್ಕು ಬಾರಿ ಅರ್ಧ ಚಂದ್ರಾಕಾರವಾಗಿ ಆಡಿಸಿ, ವಾಹನದೊಳಗಿದ್ದವರೆಡೆಗೆ ಅರ್ಥಗರ್ಭಿತವಾಗಿ ನೋಡಿ ನಿಧಾನವಾಗಿ ಮರಗಳತ್ತ ಸರಿದು ಪೊದೆಗಳ ಸಂದಿಯಲ್ಲಿ ಮರೆಯಾಯಿತು. ಏನು ಹೇಳಲಿಕ್ಕಿತ್ತೋ, ಏನ ಹೇಳಿತೋ, ಕಾಡಿನ ಗುಟ್ಟನ್ನು ಬಲ್ಲವರಾರೋ?
ಬದುಕಿನ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ಆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಆ ಗುಂಗಿನಿಂದ ಹೊರಬರಲು ಬಹಳ ಹೊತ್ತು ತೆಗೆದುಕೊಂಡರು. ಕಾಡು ಹಾಗೂ ಪೊದೆಗಳ ಪ್ರದೇಶದಿಂದ ಕೊಂಚ ಹೊರಸರಿದ ನಂತರ ಸಫಾರಿ ವಾಹನ ಹುಲ್ಲುಗಾವಲಿನಂಥಾ ಬಯಲನ್ನು ಪ್ರವೇಶಿಸಿತು. ವಾಹನ ಚಾಲಕ, ವಾಹನವನ್ನು ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ನಿಲ್ಲಿಸಿದ. ಹಿಂದಕ್ಕೆ ತಿರುಗದೇ ತನ್ನ ಎಡಗೈಯ್ಯ ಹಸ್ತವನ್ನಗಲಿಸಿ ಎಲ್ಲರೂ ಸದ್ದು ಮಾಡದೇ ಹಾದಿಯ ಎಡಪಕ್ಕದ ಬಯಲಿನೆಡೆಗೆ ಗಮನ ಹರಿಸುವಂತೆ ಸಂಜ್ಞೆ ಮಾಡಿದ.
ಮೂರ್ನಾಲ್ಕು ಅಡಿ ಎತ್ತರಕ್ಕೆ ಬೆಳೆದಿದ್ದ ಹುಲ್ಲಿನ ರಾಶಿಯ ನಡುವೆ ಅಗಾಧ ಗಾತ್ರದ ಹುಲಿಯೊಂದು ಮಧ್ಯಾಹ್ನ ಭೋಜನದ ನಂತರದ ವಿಶ್ರಾಂತಿ ಪಡೆಯುವಂತೆ ಅದೆತ್ತಲೋ ನೋಡುತ್ತಾ ವಿಶ್ರಮಿಸುತ್ತಿತ್ತು. ಅದರ ಮಾರುದ್ದದ ಬಾಲ ಸುತ್ತಲಿನ ಹುಲ್ಲಿಗೆ ಪೈಪೋಟಿ ಎಂಬಂತೆ ನೆಟ್ಟಗೆ ನಿಗುರಿಕೊಂಡು ತುದಿಯ ಗೇಣುದ್ದದಷ್ಟು ವಿಶಿಷ್ಟವಾದ ಲಹರಿಯಲ್ಲಿ ತೊನೆಯುತ್ತಿತ್ತು. ವಾಹನದಲ್ಲಿ ಎತ್ತರದ ಜಾಗದಲ್ಲಿ ಕುಳಿತಿದ್ದುದ್ದರಿಂದ ಇವರಿಗೆ ಹುಲಿಯ ದೇಹ ಕಾಣಿಸುತಿತ್ತೇ ಹೊರತು, ನೆಲದಲ್ಲಿ ನಿಂತಿದ್ದರೆ ತೊನೆಯುತ್ತಿದ್ದ ಆ ಬಾಲದ ತುದಿ ಮಾತ್ರ ಗೋಚರಿಸುತ್ತಿತ್ತು. ಫಳಫಳನೆ ಕಂಗೊಳಿಸುತ್ತಿದ್ದ ಆ ಹಳದಿ ದೇಹದ ಮೇಲೆ ದೇವರೇ ಪಡಿಯಚ್ಚು ಹಾಕಿದಂತೆ ಕಲಾತ್ಮಕವಾಗಿ ಒಡಮೂಡಿದ್ದ ಆ ಕಪ್ಪು ಪಟ್ಟಿಗಳು ಜಗತ್ತಿನ ಎಲ್ಲಾ ಸೌಂದರ್ಯವನ್ನು ಎರಕ ಹೋಯ್ದಿಟ್ಟಂತೆ ಕಾಣುತ್ತಿತ್ತು. ಏನೋ ಅಸಹಜವಾದದ್ದನ್ನು ಗ್ರಹಿಸಿದಂತೆ ಜಾಗೃತಗೊಂಡ ಆ ಹುಲಿರಾಯ ತನ್ನ ಕತ್ತನ್ನೊಮ್ಮೆ ಹೊರಳಿಸಿ ಮುಖವನ್ನು ಬೆನ್ನ ಹಿಂದಕ್ಕೆ ತಿರುಗಿಸಿ ಸಫಾರಿ ವಾಹನದೆಡೆಗೆ ನೋಡಿತು. ಇಡೀ ಕಾಡಿಗೆ ಕಾಡೇ ಜ್ಯೋತಿಯಾಗಿ ಉರಿದಂತೆ ಆ ಸಫಾರಿ ವಾಹನದೊಳಗಿದ್ದ ಪ್ರತಿಯೋರ್ವರಿಗೂ ತಮ್ಮೊಳಗೆ ನಾನೂರ ನಲವತ್ತು ವೋಲ್ಟ್ ವಿದ್ಯುತ್ ಝಗ್ ಎಂದು ಪ್ರವಹಿಸಿದಂತಾಯಿತು. ಅಕ್ಕಿ ಕೇರುವ ದೊಡ್ಡ ಗಾತ್ರದ ಮೊರದಷ್ಟಗಲವಿದ್ದ ಆ ಮೊಗವನ್ನು ಕಂಡ ಆ ಕ್ಷಣ ಎಲ್ಲರ ಮನದಲ್ಲಿ ಸಾಕ್ಷಾತ್ ದೇವರನ್ನು ಕಂಡ ಅನುಭೂತಿಯನ್ನು ಮೂಡಿಸಿತು. ಅಗ್ನಿದೇವನೇ ಘನೀಕರಿಸಿ ಹುಲಿಯ ರೂಪದಲ್ಲಿ ದೇದೀಪ್ಯಮಾನನಾಗಿ ಅವತರಿಸಿದ್ದಾನೇನೋ ಎಂಬಂತೆ ಎಲ್ಲರೂ ಧನ್ಯತೆಯ ಅನನ್ಯಭಾವದಲ್ಲಿ ಪರವಶರಾದರು. ಇಡೀ ಪ್ರಾಣಿ ಪ್ರಪಂಚದಲ್ಲಿ ಹುಲಿಗೆ ಯಾಕೆ ವಿಶಿಷ್ಟವಾದ ಹಾಗೂ ಅಪೂರ್ವವಾದ ಸ್ಥಾನವಿದೆ ಎಂದು ಅವರಿಗೆ ಆ ಕ್ಷಣ ವೇದ್ಯವಾಯಿತು. ನಿಗಿನಿಗಿ ಎನ್ನುತ್ತಿದ್ದ ಆ ಕೆಂಡದಂಥಾ ಕಣ್ಣುಗಳು, ಜಗತ್ತಿನೆಲ್ಲಾ ಶೌರ್ಯವನ್ನು ಪ್ರತಿನಿಧಿಸುತ್ತಿದೆಯೇನೋ ಎಂಬಂಥಾ ಆ ಮೀಸೆಗಳು, ಇಡೀ ಅಡವಿಯ ಗಾಂಭೀರ್ಯವೇ ಹರಳುಗಟ್ಟಿದೆಯೇನೋ ಎನ್ನುವಂಥಾ ಮುಖಮುದ್ರೆ, ಆ ದೇವರೇ ಕೆತ್ತಿ, ಕಟೆದು, ಕೊರೆದು, ತಿಕ್ಕಿ ನಿರ್ಮಿಸಿದಂಥಾ ಅಮೋಘ ಅಂಗಸೌಷ್ಠವದ ಹುಲಿರಾಯ ಕೊಂಚ ಹೊತ್ತು ಇವರೆಡೆಗೆ ದೃಷ್ಟಿಸಿ, ತನ್ನ ಬಲಿಷ್ಠ ದೇಹವನ್ನೊಮ್ಮೆ ಗತ್ತಿನಿಂದ ಸೆಟೆಸಿ, ಮೈಮುರಿದು, ವರ್ಣಿಸಲಸದಳವಾದ ಘನತೆಯ ನಿಲುವಿನೊಂದಿಗೆ ಆ ವಿಸ್ತಾರವಾದ ಹುಲ್ಲುಗಾವಲಿನಲ್ಲಿ ಮರೆಯಾಯಿತು.
ಬದುಕಿನಲ್ಲೆಂದೆಂದೂ ಮರೆಯಲಾಗದ ಅವರ್ಣನೀಯ ಅನುಭವ ಪಡೆದ ಶಾಲಾಮಕ್ಕಳು, ಈ ಪ್ರವಾಸ ಎಂದೆಂದಿಗೂ ಕೊನೆಯಾಗದೇ ಹೀಗೇ ಮುಂದುವರೆಯುತ್ತಿರಲಿ ಎಂದು ಆ ದೇವರನ್ನು ಬೇಡುತ್ತಿದ್ದರು.
ಪ್ರವಾಸದ ರಸನಿಮಿಷಗಳನ್ನು ಮೆಲುಕು ಹಾಕುತ್ತಾ ಊರಿನೆಡೆಗೆ ಹೊರಟ ತಂಡ ದಾರಿಯುದ್ದಕ್ಕೂ ಚರ್ಚಿಸದ ವಿಚಾರವೇ ಇರಲಿಲ್ಲ. ನಮ್ಮ ಬದುಕು ಹೇಗೆ ರೂಪುಗೊಳ್ಳುತ್ತಾ ಹೋಗುತ್ತದೆ ಎಂಬುದನ್ನು ತನ್ನ ಸಹೋದ್ಯೋಗಿಗಳೊಂದಿಗೆ ಚರ್ಚಿಸುತ್ತಾ, ಗಿರೀಶ್ ಮೇಷ್ಟ್ರು ನಮ್ಮ ಬದುಕನ್ನು ರೂಪಿಸಿದವರು, ಬದುಕಿನ ದೃಷ್ಟಿಕೋನವನ್ನು ಕಟ್ಟಿಕೊಟ್ಟವರು, ಬದುಕಿನ ತಿರುವುಗಳನ್ನು ಹೊರಳಿಸಿದವರು, ನಾವು ಆಲೋಚಿಸುವ ರೀತಿಯನ್ನು ಪ್ರಭಾವಿಸಿದವರು ಯಾರ್ಯಾರೆಂದು ಹಿಂದಿರುಗಿ ನೋಡಿದರೆ, ನಮ್ಮನ್ನು ಹುಟ್ಟಿಸಿದವರು, ಹೆತ್ತು ಬೆಳೆಸಿದವರು, ಬಾಲ್ಯದಲ್ಲಿ ಬೆರಳು ಹಿಡಿದು ನಡೆಯಲು ಕಲಿಸಿದವರು, ಅಕ್ಷರ ತಿದ್ದಿಸಿದವರು, ಬಾಲ್ಯದಲ್ಲಿ ಕ್ಲಾಸ್ರೂಮಿನ ಬೆಂಚಿನಿಂದ ನೂಕಿ ಬೀಳಿಸಿದವರು, ಏನಾಗಲ್ಲ ಬಾ ಎಂದು ಎರಡಾಳುದ್ದದ ನೀರಿನ ಹೊಂಡಕ್ಕೆ ನೆಗೆಸಿದವರು, ನಾನು ಬರೆದ ಚಿತ್ರವನ್ನೇ ತನ್ನದೆಂದು ತೋರಿಸಿ ಬೆನ್ನು ತಟ್ಟಿಸಿಕೊಂಡವರು, ಬೇಕಿದ್ರೆ ಇದ ತಗೋ; ಇಲ್ದಿದ್ರೆ ಏನೂ ಇಲ್ಲ ಎಂದು ಬಾಗಿಲು ತೋರಿದವರು, ಸೀಬೇಹಣ್ಣು ಕದಿಯಲು ಮರ ಹತ್ತಿಸಿ; ಮಾಲೀಕ ಓಡಿಸಿಕೊಂಡು ಬಂದಾಗ ನನ್ನನ್ನು ಸಿಕ್ಕಿಹಾಕಿಸಿ ಓಡಿ ಹೋದವರು, ಇವತ್ತು ನಿಮ್ಮಪ್ಪನ ಜೇಬಿನಿಂದ ಹತ್ರುಪಾಯಿ ಎಗರಿಸಿಕೊಂಡು ಬಾ ಎಂದು ಹುರಿದುಂಬಿಸಿದವರು, ಈ ಲವ್ ಲೆಟರನ್ನು ಅವಳಿಗೆ ಕೊಟ್ಟು ಬಾ ಎಂದು ಪೂಸಿ ಮಾಡಿದವರು, ನೀನಾಗಿಯೇ ಮಾಡಿಕೊಂಡಿದ್ದು; ಎಲ್ಲಾ ನಿನ್ನ ಹಣೆಬರಹ ಎಂದವರು, ತಮಗಾಗದ್ದನ್ನು ನಾ ಸಾಧಿಸಿದಾಗ ತಾನೇ ಗೆದ್ದಂತೆ ಸಂಭ್ರಮಿಸಿದವರು, ನನ್ನ ಎದುರಾಗಿ ಸಾಕ್ಷಿ ಹೇಳಿದರೆ ಕಾಲ್ಮುರೀತೀನಿ ಎಂದವರು, ಎಂದೋ ಬಸ್ಸಿನಲ್ಲಿ ನಮ್ಮ ಪಕ್ಕದಲ್ಲಿ ಕುಳಿತು ಪಯಣಿಸಿದವರು, ಪರೀಕ್ಷೆಯ ಹಿಂದಿನ ದಿನದವರೆಗೂ ನೋಟ್ಸ್ ಇವತ್ತು ವಾಪಾಸ್ ಕೊಡ್ತೀನಿ, ನಾಳೆ ಕೊಡ್ತೀನಿ ಅಂತ ಆಟವಾಡಿಸಿದವರು.
ಸಾಧ್ಯವೇ ಇಲ್ಲವೆಂದು ಕೈಚೆಲ್ಲಿ ಹತಾಶನಾದಾಗ ಅಂಡಿನ ಮೇಲೆ ಬಾರಿಸಿ ಉತ್ಸಾಹ ತುಂಬಿದವರು, ಕಡ್ಡಿಯಲ್ಲೂ ಮುಟ್ಟಬಾರದ್ದನ್ನು ಕಾಲಿನಿಂದ ಮೆಟ್ಟಿಸಿ ಚಪ್ಪಾಳೆ ತಟ್ಟಿದವರು, ಒಳ್ಳೆಯ ಹಣ್ಣು ತೋರಿಸಿ; ಕೊಳೆತಿದ್ದನ್ನು ಪ್ಯಾಕ್ ಮಾಡಿಕೊಟ್ಟವರು, ನನಗೆ ಕಾಣಿಸುವಂತೆ ಇಟ್ಟುಕೊಂಡು ಬರೆಯದಿದ್ದರೆ; ಹೊರಗೆ ಬಂದಾಗ ನೋಡ್ಕೋತೀನಿ ಎಂದವರು, ನನ್ ಹತ್ರವೂ ಲೆಟರ್ ಇಸ್ಕೊಂಡು, ಇನ್ನೂ ಇಬ್ಬರೊಡನೆಯೂ ಕಣ್ಣಿನಲ್ಲಿಯೇ ಕಾವ್ಯ ಬರೆಯುತ್ತಿದ್ದವಳು, ನೀನು ನನಗೆ ಮ್ಯಾಚಾ? ಹಛಾ ಎಂದವಳು, ನಿನಗೆ ನನಗಿಂತಲೂ ಒಳ್ಳೇ ಹುಡುಗಿ ಸಿಕ್ತಾಳೆ ಎಂದು ಸಮಾಧಾನ ಹೇಳಿದವಳು, ಹುಟ್ಟಿ ಬೆಳೆದ ಮನೆ ಬಿಟ್ಟು ಬಾಳಿನುದ್ದಕ್ಕೂ ಜೊತೆಯಲ್ಲಿರುವೆ ಎಂದು ಕೈಹಿಡಿದವಳು, ನಾವೇ ಜನ್ಮ ನೀಡಿದ ಮಕ್ಕಳು, ಜೊತೆಯಲ್ಲಿದ್ದೇ ನಯವಾಗಿ ಬತ್ತಿ ಇಟ್ಟವರು, ಅನಿರೀಕ್ಷಿತವಾಗಿ ಸಹಾಯ ಮಾಡಿದವರು, ನಮ್ಮನ್ನು ಟಿಶ್ಯೂ ಪೇಪರಿನಂತೆ ಬಳಸಿ ಎಸೆದವರು, ದಿಕ್ಕೆಟ್ಟು ಕೂತಾಗ ಹೊಸ ಸಾಧ್ಯತೆ ತೋರಿದವರು, ಹಣ ಪಡೆದೂ ಕೆಲಸ ಮಾಡದೆ ಕೈ ಎತ್ತಿದವರು, ವಿಷಮ ಪರಿಸ್ಥಿತಿಯಲ್ಲಿ ಜೊತೆ ನಿಂತು ಸಂಬಾಳಿಸಿದವರು, ಸಾರ್ವಜನಿಕವಾಗಿ ಅಪಮಾನಿಸಿದವರು, ಕಿವಿ ಹಿಡಿದು ಬುದ್ಧಿ ಹೇಳಿದವರು, ಬೆಂಗಳೂರಿನಲ್ಲಿ ಕೆಲಸವೊಂದನ್ನು ಹಿಡಿದು; ಬಂದು ನಿನ್ನನ್ನು ಕರೆದೊಯ್ಯುತ್ತೇನೆಂದು ಹೇಳಿ ಶಾಶ್ವತವಾಗಿ ನಿರ್ಗಮಿಸಿದವರು, ಎದುರಾ ಎದುರು ಮುಖಭಂಗ ಮಾಡಿದವರು, ಭುಜ ಅಮುಕಿ ಧೈರ್ಯ ತುಂಬಿದವರು, ಹೆಜ್ಜೆಹೆಜ್ಜೆಗೂ ಅಡ್ಡಗಾಲು ಹಾಕಿದವರು, ನಮ್ಮಲ್ಲೂ ಇರಬಹುದಾದ ಸಣ್ಣತನವನ್ನು ತೆರೆದು ತೋರಿಸಿ ಕನ್ನಡಿಯಾದವರು, ಆತ್ಮವಿಶ್ವಾಸವೇ ಕೊಚ್ಚಿಹೋಗುವಂತೆ ತಿರಸ್ಕಾರದಿಂದ ನೋಡಿದವರು, ಏನೂ ಆಗಲ್ಲ; ನಾನಿದ್ದೇನೆ ಎಂದು ಹೆಗಲು ಕೊಟ್ಟು ನಿಂತವರು ಹೀಗೆ ಪಟ್ಟಿ ನಿರಂತರವಾಗಿ ಬೆಳೆಯುತ್ತಲೇ ಹೋಗುತ್ತದೆ.
ಪ್ರತಿಯೋರ್ವರ ಬದುಕಿನಲ್ಲಿ ಇಂತಹ ಹತ್ತಾರು ಸಂದರ್ಭಗಳು ಮಿಂಚಿ, ಶಾಶ್ವತವಾದ ತಿರುವುಗಳನ್ನು ಸೃಷ್ಟಿಸಿ ಎಂದೆಂದಿಗೂ ಹಿಂದಿರುಗಲಾರದ ಜೀವಪ್ರವಾಹದಲ್ಲಿ ಲೀನವಾಗಿರುತ್ತದೆ. ಈ ಮೇಲಿನ ಸಾಲುಗಳನ್ನು ಕೇಳುತ್ತಿರುವಾಗ ನಿಮ್ಮ ಸ್ಮೃತಿಪಟಲದಲ್ಲಿ ಮಿಂಚಿ ಮಾಯವಾದವರೆಷ್ಟೋ? ಬುದ್ಧ, ಬಸವ, ವಿವೇಕಾನಂದ, ಗಾಂಧೀ ಇನ್ಯಾರೋ ಸಾಹಿತಿ ನಮ್ಮ ಬದುಕನ್ನು ಪ್ರಭಾವಿಸಿದರು, ರೂಪಿಸಿದರು, ಪ್ರೇರಣೆ ನೀಡಿದರು ಎಂಬುದೆಲ್ಲ ವಾಸ್ತವವಾಗಿ ಸಿನಿಕತನವಲ್ಲದೇ, ಬೇರೇನಲ್ಲ.
ಲೇಖನ: ಧನಂಜಯ ಜೀವಾಳ
ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ