ಸಂಕಷ್ಟದಲ್ಲಿ ಆನೆಗಳು
© ಶ್ರೀನಿವಾಸ್ ಶಾಮಾಚಾರ್
ಭಾರತ ವಿವಿಧತೆಯಲ್ಲಿ ಏಕತೆ ಕಾಣುವ ರಾಷ್ಟ್ರ. ಇಲ್ಲಿನ ಜೀವವೈವಿದ್ಯತೆ ಕೂಡ ಇಲ್ಲಿನ ಸಂಸ್ಕೃತಿಯಂತೆಯೇ ವಿಭಿನ್ನ. ನಮ್ಮ ದೇಶದ ಇನ್ನೊಂದು ವಿಶೇಷತೆ ಅಂದ್ರೆ ಇಲ್ಲಿನ ಪೌರಾಣಿಕ ಕಥೆಗಳೂ ಕೂಡ ಹಲವಾರು ಪ್ರಾಣಿಗಳನ್ನು ದೇವತಾ ಸ್ವರೂಪದಲ್ಲಿ ಕಾಣುತ್ತವೆ. ಅದರಲ್ಲಿ ಆನೆ ಕೂಡ ಒಂದು. ಬುದ್ಧನ ಜನನದ ಸೂಚನೆಯಾಗಿ ಬಿಳಿ ಆನೆಯನ್ನು ಮಾಯಾದೇವಿ ಕನಸಲ್ಲಿ ಕಂಡಿದ್ದಳಂತೆ. ಆನೆ ಮುಖದ ವಿನಾಯಕ ವಿಘ್ನ ನಿವಾರಿಸುವ ಗಜಾನನ. ಮೊದಲ ಪೂಜೆಯ ಅಧಿಪತಿ. ಇದಷ್ಟೇ ಅಲ್ಲದೇ ಆನೆಯನ್ನು ನಮ್ಮ ದೇಶದ “ಹೆರಿಟೇಜ್ ಅನಿಮಲ್” ಆಗಿಯೂ, ನಮ್ಮ ರಾಜ್ಯದ ಪ್ರಾಣಿಯನ್ನಾಗಿಯೂ ಘೋಷಿಸಿದ್ದೇವೆ.
ಗತಕಾಲದಿಂದ ಮಾನವ ತನ್ನ ಜೊತೆ ಪಳಗಿಸಿದ ಪ್ರಾಣಿಗಳಲ್ಲಿ ಆನೆ ಕೂಡ ಒಂದು. ದೈತ್ಯ ದೇಹ ಹೊಂದಿರುವ ಇವುಗಳನ್ನು ಬಹಳಷ್ಟು ಜನರು, ಮರಗಳನ್ನೆಲ್ಲಾ ಬುಡಮೇಲು ಮಾಡುವ ಪ್ರಾಣಿಗಳೆಂದಷ್ಟೇ ತಿಳಿದಿದ್ದಾರೆ. ಆದರೆ, ನಿಜಕ್ಕೂ ಆನೆಗಳು ಬಹಳ ಸಾಧು ಜೀವಿಗಳು. ಮರದ ಕೊಂಬೆ, ರೆಂಬೆಗಳನ್ನು ಸೇವಿಸುವ ಮೂಲಕ ಕಾಡಿನ ಮರಗಳ ಕೊಂಬೆ ಸವರುವಿಕೆಯಿಂದ (tree prunning) ಬೇರೆ ಸಸಿಗಳಿಗೆ ಬೆಳಕು ದೊರೆಯುವಂತೆ ಮಾಡಿ ಕಾಡಿನ ಬೆಳವಣಿಗೆಗೆ ಸಹಾಯವಾಗುವಂತೆ ಮಾಡುತ್ತವೆ. ಹುಲ್ಲುಗಳನ್ನೂ ಸೇವಿಸುವ ಇವು ಹುಲ್ಲುಗಾವಲುಗಳಿನ ಬೆಳವಣಿಗೆಯನ್ನೂ ನಿಯಂತ್ರಣದಲ್ಲಿಡುತ್ತವೆ. “ಆನೆ ನಡೆದದ್ದೇ ದಾರಿ” ಎಂಬ ಮಾತಿನಂತೆ, ದಟ್ಟವಾದ ಕಾಡಿನಲ್ಲಿ ತಮ್ಮದೇ ದಾರಿ ಸೃಷ್ಟಿಸುತ್ತಾ, ಇತರ ಸಣ್ಣ ಜೀವಿಗಳೂ ಓಡಾಡಬಲ್ಲ ನೈಸರ್ಗಿಕ ಹಾದಿ ನಿರ್ಮಿಸುತ್ತವೆ. ಆನೆಗಳು ಮೂಡಿಸುವ ಹೆಜ್ಜೆಯ ಗುರುತುಗಳಲ್ಲಿ ನೀರು ತುಂಬಿದಾಗ ಕಪ್ಪೆಯ ಗೊದಮೊಟ್ಟೆಗಳಿಗೆ ಆಶ್ರಯ ತಾಣ ಲಭಿಸುತ್ತದೆ. ಆನೆಯ ಲದ್ದಿಯಿಂದ ಕಾಡು ಹಣ್ಣುಗಳ ಬೀಜ ಪ್ರಸರಣೆ, ಮಣ್ಣಿನ ಫಲವತ್ತತೆ ಹೆಚ್ಚಿಸುವುದಕ್ಕಷ್ಟೆ ಅಲ್ಲದೇ, ಆನೆ ಲದ್ದಿಯು ಕೂಡ ಕೀಟಗಳನ್ನೂ ಮತ್ತು ಹಲವಾರು ಶಿಲಿಂದ್ರಗಳನ್ನು ಪೋಷಿಸಿ ಒಂದು ಸೂಕ್ಷ್ಮ ಆವಾಸಸ್ಥಾನ (ಮೈಕ್ರೋ ಹಾಬಿಟಾಟ್) ಕಲ್ಪಿಸುತ್ತದೆ. ಹಾಗಾಗಿಯೇ ಇವುಗಳನ್ನು “ಫ್ಲ್ಯಾಗ್ ಶಿಪ್” ಅರ್ಥಾತ್ ಒಂದು ರೀತಿ ಕಾಡಿನ ಉಳಿವಿಗೆ ಬಾವುಟ ಹೊತ್ತ ಪ್ರಾಣಿಗಳು ಎಂದೇ ಹೇಳಬಹುದು. ಆದರೆ ಈಗ ಇದೇ ಜೀವಿಗಳು ಹಲವಾರು ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿವೆ.
ಹೀಗೆ ಶಿವಮೊಗ್ಗದ ರೈತರೋರ್ವರ ಬಳಿ ಮಾತನಾಡುತ್ತಾ ಮಾನವ – ಆನೆಗಳ ಸಂಘರ್ಷದ ಕುರಿತು ಕೇಳಿದೆ. “ಮೊದ್ಲು ಒಂದ್ ಆರ್ – ಎಂಟ್ ವರ್ಷ ಕೆಳಗೆ ಮೊದ್ಲ್ ಬಾರಿ ಆನೆ ನಮ್ಮ್ ತೋಟಕ್ಕೆ ಬಂತ್. ಆಗ ಅದ್ರ್ ಹೆಜ್ಜೆಗೆಲ್ಲ ಪೂಜೆ ಮಾಡಿತ್ತು. ಈಗ ದಿನ ಬರ್ತದೆ, ತೋಟ ಕಾಯುದೇ ದೊಡ್ಡ ಕೆಲಸ ಆಗಿತ್ತು!” ಎಂದರು. ನಮಗೆಲ್ಲ ತಿಳಿದಿರುವ ಹಾಗೆಯೇ ಇತ್ತೀಚೆಗೆ ಆನೆ ಮರಣದ ಸುದ್ದಿಗಳು ವ್ಯಾಪಕವಾಗಿದೆ. 2017 ರಲ್ಲಿ ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (WII) ನಡೆಸಿದ ಅಧ್ಯಯನದ ಪ್ರಕಾರ ಇದೀಗ ಭಾರತದಲ್ಲಿ ಸುಮಾರು 30,000 ಆನೆಗಳಿವೆ. 2007ರಲ್ಲಿ 4035 ರಷ್ಟು ಇದ್ದ ಕರ್ನಾಟಕದ ಆನೆಗಳ ಸಂಖ್ಯೆ 2017ರ ಹೊತ್ತಿಗೆ 6049 (MoEF report) ಆಗಿದೆ. ಹೆಚ್ಚುತ್ತಿರುವ ಆನೆ ಸಂಖ್ಯೆ ಆಶದಾಯಕವೇ ಆದರೂ ಚಿಂತೆಯ ವಿಚಾರ ಎಂದರೆ ಹೆಚ್ಚಾಗುತ್ತಿರುವ ಆನೆಗಳ ಸಾವು!
ಸಾವಿಗೆ ಕಾರಣ ಒಂದೇ, ಎರಡೇ?
ಇದೇ ವರುಷ ಕಾಡನೆಯ ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವಾಯಿತು. ಅದರ ಬೆನ್ನಲ್ಲೇ ವಿದ್ಯುತ್ ತಂತಿ ತುಳಿತದಿಂದ ಮತ್ತೊಂದು ದಸರಾ ಆನೆ ಅಶ್ವತ್ಥಾಮ ಕೂಡ ಅಸುನೀಗದ್ದಕ್ಕೆ ಇಡೀ ರಾಜ್ಯವೇ ಮರುಕಗೊಂಡಿತು. ಇದು ತಿಳಿದ ಸುದ್ದಿಯಾದರೆ, ಸುದ್ದಿಗೆ ಬಾರದೆ ವಿದ್ಯುತ್ ತುಳಿತ, ರೈಲು ಹಳಿ ಮತ್ತು ರಸ್ತೆ ದಾಟುವಾಗ ಆಗುವ ಅಪಘಾತ, ರೈಲ್ವೆ ಬಾರಿಕೆಡ್ ದಾಟುವಾಗ ಸಿಕ್ಕಿಹಾಕಿಕೊಂಡು ನಿತ್ಯ ಅಸುನೀಗುವ ಆನೆಗಳ ಸಂಖ್ಯೆ ಅದೆಷ್ಟೋ! ಎರಡು – ಮೂರು ವರ್ಷಗಳ ಹಿಂದೆ ಕೇರಳದಲ್ಲಿ ವಿಷ ಸೇವನೆಯಿಂದ ಆನೆ ಸತ್ತ ಉದಾಹರಣೆಯೂ ಇದೆ. ಸಾವಿನ ಸಮಯ, ಕಾರಣ ಎರಡೂ ನಿಗೂಢವಾಗಿ ಅವಶೇಷವಷ್ಟೇ ದೊರೆಯುತ್ತಿರುವುದರ ಬಗ್ಗೆ ವಿಶೇಷವಾಗಿ ಹೇಳಬೇಕೆಂದಿಲ್ಲ.
ಬದಲಾಗುತ್ತಿರುವ ಹವಾಮಾನ – ಆನೆ ಸಾವು: ಎಲ್ಲಿನ ಸಂಬಂಧ?
ಬಾಂಧವ್ ಘರ್ ಹುಲಿ ಅಭಯಾರಣ್ಯ, ಮಧ್ಯಪ್ರದೇಶ. ಇಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿಗಳು ದೇಶದ ಇತರೆ ಜನರಂತೆ ಅಕ್ಟೋಬರ್ ತಿಂಗಳ ಕೊನೆ ವಾರದಲ್ಲಿ ದೀಪಾವಳಿ ಆಚರಣೆಯ ತಯಾರಿಯಲ್ಲಿದ್ದರು. ಆದರೆ ಸಲಾಖನೀಯ ಎಂಬ ಜಾಗದಲ್ಲಿ ಒಂದಲ್ಲ – ಎರಡಲ್ಲ ಹತ್ತು ಗಜಗಳ ಸಾವಿನ ಸುದ್ದಿ ಅಲ್ಲಿನ ಸಿಬ್ಬಂದಿಗಳನ್ನು ಸೂತಕಕ್ಕೆ ಹೊತ್ತೊಯ್ದಿತ್ತು. ಹತ್ತು ಆನೆಗಳ ಸಾವೇ? ಹೌದು, ಅಲ್ಲಿನ ರೈತರು ಬೆಳೆದಿದ್ದ ಹಾರಕ ಸಿರಿಧಾನ್ಯ (ಕೊಡೋ ಮಿಲ್ಲೆಟ್) ಪೂರ್ತಿ ಕಟಾವಾಗದೆ, ಒಂದಷ್ಟು ಎಕರೆ ಹಾಗೆ ನಿಂತಿತ್ತು. ಬದಲಾದ ಬಿಸಿಲು – ತೇವಾಂಶ ಇತ್ಯಾದಿಗಳು ಆ ಬೆಳೆಯಲ್ಲಿ “ಏರ್ಗಟ್” ಎಂಬ ಶಿಲೀಂಧ್ರದ ಬೆಳವಣಿಗೆಗೆ ಸೂಕ್ತ ವಾತಾವರಣ ಸೃಷ್ಟಿಸಿತ್ತು. ಈ ಶಿಲೀಂಧ್ರ “ಸೈಕ್ಲೋಪಿಯೋಝೋನಿಕ್ ಆಮ್ಲ” ಬಿಡುಗಡೆ ಮಾಡುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಪ್ರಾಣಕ್ಕೆ ಹಾನಿ ಸಂಭವಿಸುತ್ತದೆ. ಹೀಗೆ ಈ ಸೋಂಕಿತ ಬೆಳೆಯನ್ನು ತಿಂದು ಒಂದು ಹಿಂಡಿನ ಹತ್ತು ಆನೆಗಳು ಸಾವನ್ನಪ್ಪಿದವು. ಅಂತೆಯೇ ಇತ್ತೀಚೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆಯಲ್ಲಿ ಹೆಣ್ಣಾನೆ ಒಂದರ ಮೃತ ದೇಹ ಪತ್ತೆಯಾಗಿದ್ದು, ಆಂತ್ರಾಕ್ಸ್ ಸೋಂಕಿನಿಂದ (Anthrax, ಇದೊಂದು ಬ್ಯಾಕ್ಟೀರಿಯಾ) ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಹವಾಮಾನ ಬದಲಾವಣೆ ಮತ್ತು ಆವಾಸಸ್ಥಾನದ ನಷ್ಟವು ನೆರೆಯ ತಮಿಳುನಾಡು ಮತ್ತು ಕರ್ನಾಟಕದ ಆನೆಗಳನ್ನು ಆಂಧ್ರಪ್ರದೇಶಕ್ಕೆ ಜಮೀನುಗಳಲ್ಲಿ ಆಹಾರ ಹುಡುಕಲು ಪ್ರೇರೇಪಿಸುತ್ತಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ 2012 ರಲ್ಲಿ 8 ಆನೆಗಳನ್ನು ಹೊಂದಿತ್ತು, ಇದು 2017 ರ ವೇಳೆಗೆ 30 ಕ್ಕೆ ಏರಿತು. 2024 ರ ವೇಳೆಗೆ, ದೇಶಾದ್ಯಂತ ಸಿಂಕ್ರೊನೈಸ್ಡ್ ಆನೆಗಳ ಅಂದಾಜಿನ ಪ್ರಕಾರ ಸಂಖ್ಯೆಯು ಸರಿಸುಮಾರು 100 ಕ್ಕೆ ಏರಿದೆ. ಹೀಗೆ ಬದಲಾಗುತ್ತಿರುವ ಹವಾಮಾನ, ಆವಾಸಸ್ಥಾನದ ನಷ್ಟದಿಂದಾಗಿ, ಅಸಂಗತ ಚಲನೆಯು ಹೆಚ್ಚಾಗುತ್ತಿದೆ. (Ranganathan, E., & Krishnan, A. (2021). Elephant and human mortality in the Bannerghatta-Hosur Landscape, southern India. Gajah, 54(1), 30-33.)
ಗಡಿ – ದಾಟುವ ಆನೆಯೊಡನೆ ಸಮಸ್ಯೆಗಳು!
ಈ ವರ್ಷದ ಆರಂಭದಲ್ಲಿ ಬೇಲೂರು, ಹಾಸನದಲ್ಲಿ ಸೆರೆ ಹಿಡಿದ ಒಂದು ಮಖನ ಆನೆಯನ್ನು ಬಂಡೀಪುರ ಕಾಡಿಗೆ ಸ್ಥಳಾಂತರಿಸಲಾಗಿತ್ತು. ಇದೇ ಆನೆ ರಾಜ್ಯದ ಗಡಿ ದಾಟಿ ವಾಯನಾಡಿನ ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿ ದೇಶದ ಕೆಂಗಣ್ಣಿಗೆ ಗುರಿಯಾಗಿತ್ತು. ಮತ್ತೊಂದು ಅರಿಕೊಂಬನ್ ಎನ್ನುವ ಆನೆಯನ್ನು ಕೇರಳ ಇಡುಕ್ಕಿ ಜಿಲ್ಲೆಯಿಂದ ವಶಪಡಿಸಿಕೊಂಡು, ತಮಿಳುನಾಡು ಗಡಿಗೆ ಸಮೀಪವಿರುವ ಪೆರಿಯಾರ್ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೂ ಕೂಡ ಜನರ ಸಾವಿಗೆ ಆನೆ ಕಾರಣವಾಯಿತು. ಹೆಚ್ಚುತ್ತಿರುವ ವನ್ಯಜೀವಿ ಸಂಖ್ಯೆಯಿಂದ ಹೀಗೆ ಆಗುತ್ತಿರಬಹುದು ಎಂದು ಅಂದಾಜಿಸಲಾಗುತ್ತಿದೆ. ನಾವು ಮನುಷ್ಯರ ಸಂಖ್ಯೆ ಹೆಚ್ಚಾದ ಹಾಗೆ ಕಾಡನ್ನು ಆಕ್ರಮಿಸಿದೆವು. ಈಗ ಹೆಚ್ಚುಗುತ್ತಿರುವ ಆನೆಗಳ ಸಂಖ್ಯೆ ನಾಡನ್ನು ತಲುಪುತ್ತಿದೆ ಅಂದರೆ ಬಹುಷಃ ತಪ್ಪಾಗುವುದಿಲ್ಲ!
ಡಾ. ಅರುಣ್ ಜಕರಿಯಾ, ಮುಖ್ಯ ಪಶುವೈದ್ಯಾಧಿಕಾರಿ, ಕೇರಳ ಅರಣ್ಯ ಇಲಾಖೆ ಇವರು ಹೇಳುವಂತೆ, “ಪ್ರತಿಯೊಂದು ವನ್ಯಜೀವಿಯ ಸಂಘರ್ಷವು ವಿಶಿಷ್ಟವಾಗಿದೆ. ಆವಾಸಸ್ಥಾನ ಆಧಾರಿತ ಮತ್ತು ವನ್ಯಜೀವಿ ಆಧಾರಿತ ಮಟ್ಟದಲ್ಲಿ ಸಮಸ್ಯೆಯನ್ನು ಗುರುತಿಸಬೇಕು. ಸಾಮಾನ್ಯ ಪರಿಹಾರವಿಲ್ಲ.” ಎನ್ನುವಂತೆ. ಅಧ್ಯಯನ ಆಧಾರಿತ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕು. ಕಾಡುಗಳು ಛಿದ್ರವಾಗಿರುವುದರಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಬೇಕಾದಲ್ಲಿ ಮಾನವ ನಿರ್ಮಿತ ಜಾಗದ ನಡುವೆಯೇ ಸಂಚರಿಸಬೇಕಾದ ಸಂದರ್ಭ ಏರ್ಪಟ್ಟಿದೆ. ಹಾಗಾಗಿ ಆನೆಗಳು ಸುರಕ್ಷಿತವಾಗಿ ಸಂಚರಿಸಲು ನೈಸರ್ಗಿಕ ಆನೆ ಕಾರಿಡಾರ್ ಪಾತ್ರ ಬಹುಮುಖ್ಯವಾಗಿದೆ. ಈ ಕಾರಿಡಾರ್ ಇರುವಂತಹ ಜಾಗಗಳನ್ನು ಹಾನಿಯಾಗದಂತೆ ರಕ್ಷಿಸಬೇಕು. ರೈಲುಗಳಿಗೆ ಸಿಲುಕಿ ಮೃತ ಪಡುತ್ತಿರುವ ಜಾಗಗಳನ್ನು ಗುರುತಿಸಿ ಸೆಂಸರ್ಸ್, ಜಿ.ಐ.ಎಸ್, ಆರ್ಟಿಫಿಷಿಯಲ್ ಇಂಟಿಲಿಜೆನ್ಸ್ ಹೊಸ ತಂತ್ರಜ್ಞಾನದ ಮೂಲಕ ಸಂರಕ್ಷಣೆಯ ಮಾರ್ಗ ಅನುಸರಿಸಬೇಕು. ಹವಾಮಾನ ಬದಲಾವಣೆ ಒಡ್ಡುತ್ತಿರುವ ಹೊಸ ಸವಾಲುಗಳಿಗೆ ವೈಪರಿತ್ಯ ಕಡಿಮೆ ಮಾಡುವ ಮತ್ತು ಅದರೊಂದಿಗೆ ಹೊಂದಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ.
ಈಗಾಗುತ್ತಿರುವ ಇದೆಲ್ಲಾ ಪರಿಸರ ಸಮಸ್ಯೆಗೆ ಕಾರಣ ನಮ್ಮ ಅಭಿವೃದ್ಧಿಯ ಅತಿಯಾಸೆ. ಈಗಾಗಲೇ ಅಭಿವೃದ್ಧಿಗೆ ಬೇಕಾದಷ್ಟು ಪರಿಸರ ಬಲಿದಾನ ಕೊಟ್ಟಿದ್ದಾಗಿದೆ. ಈಗ ಸುಸ್ಥಿರ ಅಭಿವೃದ್ಧಿಯ ಕಡೆ ಗಮನ ಕೊಡಬೇಕು. ಆರೋಗ್ಯಕರ ಪರಿಸರ ಇದ್ದರೆ ಮಾತ್ರ ನಾವು, ಮನುಷ್ಯರು ಬದುಕೊದಕ್ಕೆ ಸಾಧ್ಯ. ಸುಸ್ಥಿರ ಪರಿಸರಕ್ಕೆ ಕಾಡು ಬೇಕು. ಕಾಡಿನ ಉಳಿವಿಗೆ ವನ್ಯಜೀವಿಗಳು ಬೇಕು. ಒಂದಿಲ್ಲದೇ ಒಂದಿಲ್ಲ. ವನ್ಯಜೀವಿಗಳು ಹಾಗೂ ಕಾಡಿನ ಸಂಬಂಧ ಅವಿಭಜನಿಯ. ಸಂರಕ್ಷಣೆ ಮತ್ತು ಸಹಬಾಳ್ವೆ ಮಧ್ಯ ಇರುವುದು ಕೂದಲಿನ ಅಂತರ ಅಷ್ಟೇ. ಇದರಲ್ಲಿ ಯಾವುದೇ ಒಂದು ಭಾಗಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರೂ ಇನ್ನೊಂದು ಭಾಗಕ್ಕೆ ಹಾನಿ ಖಂಡಿತ. ಚಂದ್ರನನ್ನೆ ಮುಟ್ಟುತ್ತೆವೆ, ಸಾಗರದ ಆಳವನ್ನೆ ಅಳೆಯುತ್ತೇವೆ ಅಂದ ಮೇಲೆ, ಭೂಮಿಯ ಮೇಲೆ ಸಂರಕ್ಷಣೆಯ ಜೊತೆ ಸಹಬಾಳ್ವೆಯ ಸೂತ್ರ ಕಂಡು ಹಿಡಿಯುವುದು ಅಸಾಧ್ಯ ಅಂತು ಅಲ್ಲ.”ಕಾಡುಗಳು ಇಲ್ಲದ ಕಾಡು ಪ್ರಾಣಿಗಳು ಇಲ್ಲದ ಪರಿಸರ ಸ್ಮಶಾನಕ್ಕಿಂತ ಘೋರವಾಗಿರುತ್ತದೆ” ಎನ್ನುವ ಪೂರ್ಣಚಂದ್ರ ತೇಜಸ್ವಿಯವರ ಮಾತುಗಳನ್ನ ನಾವಿಲ್ಲಿ ನೆನೆಯಬೇಕು. “ದಿ ಎಲಿಫೆಂಟ್ ವಿಸ್ಪರರ್ಸ್” ಎನ್ನುವ ಸಾಕ್ಷ್ಯಚಿತ್ರ ಎಲ್ಲರೂ ನೋಡಿದ್ದೇವೆ. ಈ ಸಿನೆಮಾ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿದ್ದು ನಮ್ಮೆಲ್ಲರ ಹೆಮ್ಮೆ. ಇದು ಕೇವಲ ಚಿತ್ರವಾಗಿರದೆ ಪ್ರಾಣಿಗಳನ್ನು ನಾವು ಅರ್ಥೈಸಿಕೊಳ್ಳುವ ಸಾಧನವಾಗಬೇಕು.
ಲೇಖನ: ರಕ್ಷಾ
ಉಡುಪಿ ಜಿಲ್ಲೆ
ಅರಣ್ಯಶಾಸ್ತೃ (ಬಿ. ಎಸ್.ಸಿ. ಫೋರೆಸ್ಟ್ರೀ) ವಿದ್ಯಾರ್ಥಿನಿಯಾಗಿದ್ದು, ಪರಿಸರದ ಕುರಿತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ.