ಜೇನು ಪ್ರಪಂಚ: ಭಾಗ ೧೨
© ವಿನೀತ್ ಕರ್ಥ
ನನ್ನ ಮೂರನೇ ಮತ್ತು ನಂತರದ ದಿನಗಳ ವೃತ್ತಾಂತ ಹೇಳಲು ಶುರುವಾದದ್ದು ಎಲ್ಲೆಲ್ಲಿಗೋ ಹೋಗಿತ್ತು, ವಿಷಯಾಂತರವಾಗಿ ಸಾಕಷ್ಟು ವಿಷಯಗಳನ್ನು ವಿವರಿಸುವ ಪ್ರಸಂಗಗಳು ಎದುರಾಗಿತ್ತು, ಮತ್ತೆ ಕೇವಲ ನಾನು ನನ್ನ ವಠಾರದ ಬಗ್ಗೆ ಪ್ರಸ್ತಾಪಿಸುವ ಸಂದರ್ಭ ಬಂದಿದೆ.
ಸೂರ್ಯಕಾಂತಿ ಹೂಗಳಲ್ಲಿ ಮಕರಂದ ಮತ್ತು ಪರಾಗರೇಣುಗಳ ಉತ್ಪಾದನೆ ಕಡಿಮೆಯಾಗತೊಡಗಿದಾಗ ಅಲ್ಲಿನ ಸಂಗ್ರಹಣಾ ಜವಾಬ್ದಾರಿ ನನ್ನ ಕಿರಿಯ ಸಹೋದರಿಯರಿಗೆ ವಹಿಸಿದ್ದರಿಂದ, ಅದೇ ಸಮಯದಲ್ಲಿ ಉತ್ತರ ದಿಕ್ಕಿನಲ್ಲಿರುವ ಹತ್ತಿ ಬೆಳೆಯಲ್ಲಿ ಹೂಗಳು ಬಿಡಲಾರಂಭಿಸಿ, ಅಲ್ಲಿ ಆಹಾರ ಸಂಗ್ರಹಣೆಗೆ ನನ್ನನ್ನು ನಿಯೋಜಿಸಲಾಗಿತ್ತು.
ಇಂದಿಗೆ ನಾನು ವಯಸ್ಸಿಗೆ ಬಂದು 35 ದಿನಗಳಾಗಿದ್ದು, ಹತ್ತಿ ಬೆಳೆಯಲ್ಲಿ ಹೂ ಬಿಡುವಿಕೆ ಹೆಚ್ಚು ದಿನಗಳವರೆಗೆ ಸಾಗುವುದರಿಂದ ಮತ್ತು ನಮ್ಮ ಮನೆಗೆ ಹತ್ತಿರವಿರುವ ಕಾರಣ ಕಡಿಮೆ ಸಮಯದಲ್ಲಿ ಹೆಚ್ಚು ಆಹಾರ ಸಂಗ್ರಹಿಸತೊಡಗಿದೆವು. ಸೂರ್ಯಕಾಂತಿಯ ಹೂಗಳ ಜೊತೆಗೆ ಆಗಾಗ ಜಯಂತಿಗಿಡ, ಬೇಲಿ, ಬದನೆ, ಹಿಪಟೊರಿಯಮ್ ಇತರ ಗಿಡಗಳ ಹೂಗಳಿಗೆ ಭೇಟಿ ಮಾಡಿದ್ದುಂಟು ಆದರೆ ಹೆಚ್ಚಿನ ಸಮಯ ಹತ್ತಿ ಹೂಗಳ ಸಂಗ್ರಹಣೆಯಲ್ಲೇ ಕಳೆಯುತ್ತಿದ್ದೆವು.
ಎಂದಿನಂತೆ ಅಂದು ನಾನು ಬೆಳಗ್ಗೆಯೇ ಆಹಾರ ಸಂಗ್ರಹಣೆಯಲ್ಲಿ ತೊಡಗಿದ್ದೆ, ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ಹತ್ತಿ ಬೆಳೆಯಲ್ಲಿ ಮನುಷ್ಯರ ಓಡಾಟ ಹೆಚ್ಚಿದ್ದರಿಂದ ನಾನು ತೋಟದ ನೀರಿಗೆ ಸೊಂಪಾಗಿ ಬೆಳೆದಿದ್ದ ಬೇಲಿ ಗಿಡಗಳ ಮಕರಂದ ಸಂಗ್ರಹಣೆಗೆ ಹೊರಟೆ. ಆದರೆ ಆ ಮನುಷ್ಯರ ಚಟುವಟಿಕೆ ನನ್ನ ಮತ್ತು ನನ್ನ ವಠಾರದ ನಾಶಕ್ಕೆ ನಾಂದಿಯಾಗುತ್ತದೆಂದು ನನ್ನ ಊಹೆಗೆ ಬಂದಿರಲಿಲ್ಲ. ಮಾರನೆಯ ದಿನ ಹತ್ತಿಯಲ್ಲಿ ಪರಾಗರೇಣುಗಳ ಸಂಗ್ರಹಣೆಗೆ ಹೊರಟಾಗ ನಾನು ಎಲೆ, ಹೂಗಳ ಮೇಲೆ ಬಿಳಿಯಾದ ಪುಡಿ ಇರುವುದನ್ನು, ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದೆ, ಪರಾಗರೇಣು ಮತ್ತು ಮಕರಂದದ ರುಚಿಯಲ್ಲಿ ವ್ಯತ್ಯಾಸವಾಗಿತ್ತು ಆದರೆ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ವ್ಯವಧಾನವಿಲ್ಲದೆ ನನ್ನ ಸಂಗ್ರಹಣಾ ಕಾರ್ಯದಲ್ಲಿ ಮಗ್ನಳಾದೆ. ಸಾಮಾನ್ಯವಾಗಿ ಸಂಗ್ರಹಿಸುವ ಸಂದರ್ಭದಲ್ಲಿ ಮೊದಲು ನನ್ನ ಹೊಟ್ಟೆ ತುಂಬಿಸಿಕೊಂಡ ನಂತರ ಮನೆಗೆ ಒಯ್ಯುತ್ತಿದ್ದೆನು, ಆದರೆ ಯಾಕೋ ಇಂದು ತಿನ್ನುವ ಮನಸ್ಸಾಗದೆ ಸಂಗ್ರಹಣೆಯಲ್ಲಿ ತೊಡಗಿದೆ.
ಸುಮಾರು 10 ಗಂಟೆಗೆ ಮಕರಂದ ಮತ್ತು ಪರಾಗರೇಣುಗಳ ಉತ್ಪಾದನೆ ಕುಂಠಿತ ಗೊಂಡಿದ್ದರಿಂದ ನಾನು ದೂರದ ಸೂರ್ಯಕಾಂತಿ ಹೂಗಳಿಗೆ ಹೊರಟೆ, ನನಗೆ ನೂರಾರು ಕಿ. ಮೀ. ಗಳಷ್ಟು ಹಾರಾಟದ ಅನುಭವವಿದ್ದರೂ ನನಗೆ ಯಾಕೋ ಹಾರಲು ಶಕ್ತಿ ಇಲ್ಲದೆ ಅರ್ಧ ಮುಚ್ಚಿದ ಕಣ್ಣಿನಲ್ಲಿ ಹಾರಲಾಗದೆ ಎಲ್ಲಿ ಬೀಳುತ್ತೇನೋ ಎನ್ನುವ ಸಂಶಯದಲ್ಲಿ ಹೇಗೋ ವಠಾರ ಸೇರಿದೆ. ವಠಾರದಲ್ಲಿ ನನಗೆ ಆದಂತೆ ಇತರ ಸದಸ್ಯರಲ್ಲಿಯೂ ಇದೇ ರೀತಿಯ ನಿಶಕ್ತಿ ಇರುವುದನ್ನು ಕಂಡು ಚಕಿತಳಾದೆ.
ಸಮಯ 11 ಗಂಟೆ, ಮಕರಂದ ಮಿಶ್ರಿತ ಪರಾಗರೇಣುಗಳನ್ನು ತಿಂದ ನನ್ನ ಸೋದರ-ಸೋದರಿ ಮರಿಗಳು ಮೂರ್ಛೆ ಹೊಗಿದ್ದವು. ಆಹಾರ ಸಂಗ್ರಹಣೆಗೆ ಹೋದ ಕೆಲವು ಸಹೋದರಿಯರು ಅಲ್ಲೇ ಸತ್ತಿದ್ದರೆ, ಕೆಲವು ದಾರಿ ತಿಳಿಯದೆ ಎಲ್ಲೋ ಹೋಗಿದ್ದವು, ಮನೆ ಸೇರಿದ ಕೆಲವು ಸಹೋದರಿಯರು ತಮ್ಮ ವಠಾರದ ಸೋದರಿಯರನ್ನೇ ಗುರುತಿಸಲಾಗದೆ ತಮ್ಮ-ತಮ್ಮಲ್ಲೇ ಕಚ್ಚಾಡುತ್ತಾ ಸಾಯುತ್ತಿದ್ದವು, ನಾನು ಏನು ಮಾಡಬೇಕೆಂದು ತಿಳಿಯದೆ ಮೂಖಪ್ರೇಕ್ಷಕಳಾಗಿದ್ದೆ.
ಸುಮಾರು ಮಧ್ಯಾಹ್ನ 2 ಗಂಟೆ, ಅರ್ಧದಷ್ಟು ನನ್ನ ಸಹೋದರಿಯರು ಈಗಾಗಲೇ ಕೆಳಗೆ ಬಿದ್ದು ಒದ್ದಾಡುತ್ತಾ ಸತ್ತಿದ್ದರು. ಇನ್ನೂ ಕೆಲವು ಕಚ್ಚಾಟದಲ್ಲಿ ಮಗ್ನವಾಗಿದ್ದವು. ಬೆಳಗ್ಗೆ ಮೂರ್ಛೆಗೆ ಜಾರಿದ್ದ ಮರಿಗಳು ಈಗಾಗಲೇ ಬಹುತೇಕ ಸತ್ತಿದ್ದವು. ಸಂಜೆ 6 ಗಂಟೆ, ಇನ್ನೇನು ಪಡುವಣದಲ್ಲಿ ರವಿ ಅಸ್ತಮಿಸುತ್ತಿದ್ದರೆ ನಮ್ಮ ಬದುಕೇ ಅಸ್ತಮಿಸುತ್ತಿರುವಂತೆ ಭಾಸವಾಗುತ್ತಿತ್ತು. ಎಲ್ಲಾ ಮರಿಗಳು ಸತ್ತು ಅವುಗಳ ಚರ್ಮ ಅರೆದು ನೀರಿನಾಂಶ ಹೊರಬರುತ್ತಿತ್ತು, ಈಗಾಗಲೇ ಶೇಖಡ 80 ರಷ್ಟು ಸೋದರಿಯರು ತೀರಿಕೊಂಡಿದ್ದರು. ಯಾರು ಹತ್ತಿ ಬೆಳೆಗೆ ಆಹಾರ ಸಂಗ್ರಹಣೆಗೆಂದು ಭೇಟಿ ನೀಡಿಲ್ಲವೋ ಅವುಗಳ ಜೀವ ಮಾತ್ರ ಉಳಿದಿತ್ತು. ರಾಣಿ ನಿಶಕ್ತಳಾಗಿ ಕಂಡರೂ ಅವಳ ಜೀವ ಉಳಿದಿದ್ದೇ ನಮ್ಮೆಲ್ಲರ ಅದೃಷ್ಟ ಎಂದು ಹೇಳಬಹುದು, ಕಾರಣ ಅವಳಿಗೆ ಮರಿಗಳಿಗೆ ನೀಡುವ ಆಹಾರ ನೀಡುವುದಿಲ್ಲ. ಇಷ್ಟೆಲ್ಲಾ ನನ್ನ ಕಣ್ಣ ಮುಂದೆ ನೆಡೆಯುತ್ತಿದ್ದರೂ ನನ್ನ ಕೈಯಲ್ಲಿ ಏನೂ ಮಾಡದ ಸ್ಥಿತಿ.
ಮಾರನೆಯ ದಿನ ಸೂರ್ಯೋದಯವಾಗುವಷ್ಟರಲ್ಲಿ ನಾನು, ರಾಣಿ, ಕೆಲವೇ ಕೆಲವು ಸೋದರಿಯಷ್ಟೆ ಜೀವಂತವಾಗಿದ್ದೆವು. ಸ್ವ-ಔಷಧೀಕರಣಕ್ಕೆಂದು ತಂದಿದ್ದ ಔಷಧಿ ಮರದ ತೊಗಟೆಯ ರಾಳ ಉಳಿದವರ ಜೀವ ಉಳಿಸಿತ್ತು. ನನ್ನ ಜೀವ ಸಹ ಉಳಿದಿದ್ದೂ ಹೆಚ್ಚು ಎಂದು ಹೇಳಬೇಕು! ಬಹುಶಃ ನನ್ನ ಕಥೆ ನಿಮಗೆ ಹೇಳಲೆಂದೇ ಉಳಿದುಕೊಂಡೆ ಎಂದು ಅನಿಸುತ್ತಿದೆ.
ನಮ್ಮ ಕುಟುಂಬವೆಲ್ಲ ನರಕಯಾತನೆ ಅನುಭವಿಸಿ ಸಂಪೂರ್ಣವಾಗಿ ನಾಶವಾಗಲು ಕಾರಣವಾದದ್ದು ರೈತರು ತಮ್ಮ ಬೆಳೆಯನ್ನು ಕೀಟಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸಿಂಪಡಿಸಿದ ಕೀಟನಾಶಕದಿಂದ! ಈ ಕೀಟನಾಶಕ ಕೇವಲ ಪೀಡೆಗಳನ್ನು ಕೊಲ್ಲುವುದಲ್ಲದೆ ಬೆಳೆಗೆ ಸಹಾಯ ಮಾಡುವ ಸಾವಿರಾರು ನಮ್ಮಂತಹ ಜೀವಿಗಳನ್ನು ಕೊಲ್ಲುತ್ತದೆ ಎಂಬ ಅರಿವು ಆತನಿಗೆ ಇರುವುದಿಲ್ಲ. ರೈತ ಸಿಂಪಡಿಸಿದ ಕೀಟನಾಶಕದಿಂದ ಪರಿಸರಕ್ಕೆ ಆದ ನಷ್ಟ ಮತ್ತು ನಮ್ಮಿಂದ ಸಹಾಯ ಮಾಡಲಾಗದೆ ರೈತ ಮತ್ತು ಪ್ರಕೃತಿಗೆ ಆದ ನಷ್ಟವನ್ನು ಕೇವಲ ಹಣದಿಂದ ಅಳೆಯಲು ಅಸಾಧ್ಯ. ಈ ಪರಿಸರ ವ್ಯವಸ್ಥೆಯ ಸೇವೆಗಳಿಗೆ ಹಣದಿಂದ ಬೆಲೆ ಕಟ್ಟಬಹುದೇ? ನಮ್ಮ ವಠಾರದ ಎಲ್ಲರನ್ನೂ ಕಳೆದುಕೊಂಡು ಇನ್ನೂ ಅದೇ ವಠಾರದಲ್ಲಿ ಉಳಿಯುವುದು ನಮಗೂ ಉಚಿತವಲ್ಲವೆಂದು ಅರಿವಾಗಿ, ನಾನು, ರಾಣಿ, ಉಳಿದ ಸಹೋದರಿಯರೊಡನೆ ಬೇರೊಂದು ವಠಾರವನ್ನು ಕಟ್ಟುವ ಸಲುವಾಗಿ ಮತ್ತೊಂದು ಪ್ರದೇಶಕ್ಕೆ ವಲಸೆ ಹೊರಡಲಿದ್ದೇವೆ, ನಮ್ಮ ಮುಂದಿನ ಹೊಸ ವಠಾರ ಕಟ್ಟುವ ಬಗೆಗಿನ ಇನ್ನಷ್ಟು ಕುತೂಹಲಕಾರಿ ಕತೆಗಳನ್ನು ಮುಂದೆ ಎಂದಾದರು ಹೇಳುವೆ.
ಲೇಖನ: ಹರೀಶ ಎ. ಎಸ್.
IISER- ತಿರುಪತಿ