ಬಲು ಜಾಣವೀ ಕಾಜಾಣ

ಬಲು ಜಾಣವೀ ಕಾಜಾಣ

© ಗುರುಪ್ರಸಾದ್ ಕೆ. ಆರ್.

ಅದು ಒಂದು ಸುಂದರ ಸಂಕ್ರಾಂತಿ ಸಮಯದ ಮುಂಜಾನೆ. ನನ್ನ ಪಕ್ಷಿವೀಕ್ಷಣೆ ಹವ್ಯಾಸದ ಪ್ರಾರಂಭದ ದಿನಗಳು. ಜಯಮಂಗಲಿ ಅಭಯಾರಣ್ಯಕ್ಕೆ ಕೃಷ್ಣಮೃಗಗಳ ವೀಕ್ಷಣೆಗೆಂದು ನನ್ನ ಸ್ನೇಹಿತರ ಜೊತೆ ಹೋಗಿದ್ದೆನು. ಕೃಷ್ಣಮೃಗಗಳ ಹುಡುಕುತ್ತಾ ಕ್ಯಾಮೆರಾ ಹಿಡಿದುಕೊಂಡು ಕಾರಿನಲ್ಲಿ ಹೊರಟಿದ್ದೆವು. ಮಾಗಿಯ ಚಳಿಗಾಲ ಮುಗಿದು ಸಂಕ್ರಾಂತಿ ಸುಗ್ಗಿಯ ಎಳೆ ಬಿಸಿಲಿನಲ್ಲಿ ಆ ವಿಶಾಲ ಹುಲ್ಲುಗಾವಲಿನ ನಡುವೆ ನಮ್ಮ ಪಯಣ ಸಾಗಿತ್ತು. ಕೆಲವು ಸಮಯದ ಸುತ್ತಾಟದ ಬಳಿಕ ಯಾರೋ ಕಟ್ಟಿಗೆಯಲ್ಲಿ ಬಡಿದಾಡುತ್ತಿರುವ ಶಬ್ದ ಕೇಳಿಸಿತು. ಅರೆ… ಈ ವಿಶಾಲ ಹುಲ್ಲುಗಾವಲಿನಲ್ಲಿ ಯಾರು ಹೀಗೆ ಕೋಲನ್ನು ಬಡೆಯುತ್ತಿರುವರು? ಎಂದು ಶಬ್ದ ಬಂದ ಕಡೆ ನಮ್ಮ ಗಾಡಿ ತಿರುಗಿಸಿದೆವು.  ದೂರದಲ್ಲಿ ಎರಡು ದೊಡ್ಡ ಕೊಂಬಿನ ಕೃಷ್ಣಮೃಗಗಳ ನಡುವೆ ರೋಚಕ ಕಾದಾಟ ನಡೆಯುತ್ತಿತ್ತು! ಓಹ್ ನಾವು ಹುಡುಕುತ್ತಿದ್ದ ಕೃಷ್ಣಮೃಗ ಸಿಕ್ತು ಅಂತ ಖುಷಿಯೊಂದಿಗೆ ಕಾರಿನಿಂದ ಇಳಿದು ಕ್ಯಾಮೆರಾದ ಜೊತೆ ಕುರುಚಲು ಪೊದೆಗಳ ನಡುವೆ ನಿಧಾನಕ್ಕೆ ಹೆಜ್ಜೆ ಹಾಕಿದೆವು. ಈ ಕೃಷ್ಣಮೃಗಗಳ ಕಿವಿ ಬಲು ಚುರುಕು. ಸ್ವಲ್ಪ ದೂರದಿಂದಲೇ ನಮ್ಮ ಇರುವಿಕೆ ಗಮನಿಸಿ ತಮ್ಮ ಕಾದಾಟ ನಿಲ್ಲಿಸಿ ನಮ್ಮ ಕಡೆ ನೋಡುತ್ತಾ ನಿಂತವು. ನಾವು ಸ್ವಲ್ಪ ಮುಂದೆ ನಡೆದದ್ದೇ ತಡ ನಮ್ಮನ್ನು ಗಮನಿಸಿ ಚಂಗನೆ ಜಿಗಿದು ಓಡಿ ಹೋದವು. ಛೆ…  ಒಳ್ಳೆ ದೃಶ್ಯ ಹಾಗು ಫೋಟೋ ತೆಗೆಯುವ ಅವಕಾಶ ಕೈತಪ್ಪಿ ಹೋಯ್ತಲ್ಲಾ ಎಂದು ಬೇಸರದಿಂದ ಕಾರಿನ ಕಡೆ ಹಿಂದಿರುಗುತ್ತಿದ್ದೆವು. ನಮ್ಮ ಸಮೀಪದಲ್ಲಿಯೇ ಒಂದು ಕಪ್ಪು ಬಣ್ಣದ ಹಕ್ಕಿ ಕುಳಿತು ಬೇಟೆಗೆ ಹೊಂಚು ಹಾಕುತ್ತಿರುವುದು ನನ್ನ ಕಣ್ಣಿಗೆ ಬಿತ್ತು. ನಾನು ಅದು ಹಾರಿಹೋಗಬಹುದು ಎಂದು ಅಲ್ಲಿಯೇ ನಿಂತೆನು. ಅದು ಸ್ವಲ್ಪವೂ ವಿಚಲಿತವಾಗದೆ ತನ್ನ ಪಾಡಿಗೆ ತಾನು ಬೇಟೆ ಹುಡುಕುತ್ತಿತ್ತು. ಪಕ್ಷಿಗಳ ಬಗ್ಗೆ ನನಗಿನ್ನೂ ಹೆಚ್ಚು ಜ್ಞಾನವಿರದ ಕಾರಣ ‘ಯಾವುದೋ ಕಪ್ಪಗೆ ಕಾಗೆ ತರಹ ಇದೆಯಲ್ಲಾ! ಎಂದು ಭಾವಿಸುತ್ತಾ ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ಅದರ ಚಲನ ವಲನ ನೋಡತೊಡಗಿದೆ.  ಪುಟ್ಟ ಕಪ್ಪನೆಯ ಹಕ್ಕಿ ಆದರೆ ಕಾಗೆ ಅಲ್ಲ, ಯಾವುದೋ ಬೇರೆ ಪಕ್ಷಿ ಎಂದರಿತು ನನ್ನ ಕೈಯಲ್ಲೇ ಇದ್ದ ‘ಪಕ್ಷಿ ಲೋಕ’ ದ ಪುಸ್ತಕ ತೆಗೆದು ಕೂಲಂಕುಷವಾಗಿ ನೋಡಿದೆ. ಆಗ ತಿಳಿಯಿತು ಅದು ಕಾಜಾಣ ಹಕ್ಕಿ (Drongo) ಎಂದು. ನಾವು ಅಷ್ಟು ಹತ್ತಿರವಿದ್ದರು ಧೃತಿಗೆಡದೆ ಅದರ ಧೈರ್ಯ ಅದರ ಬಗ್ಗೆ ನಾನು ಇನ್ನು ಹೆಚ್ಚು ತಿಳಿಯಲು ಪ್ರೇರಣೆ ನೀಡಿತು. ಅಂದಿನಿಂದ ಕಾಜಾಣ ಎಲ್ಲಿ ಕಂಡರೂ ಸ್ವಲ್ಪ ಸಮಯವಾದರೂ ಅದನ್ನು ಹಿಂಬಾಲಿಸುತ್ತಿದ್ದೆ.

ಕಾಜಾಣವು ಪಕ್ಷಿವರ್ಗದ ಪ್ಯಾಸೆರಿಫಾರ್ಮೀಸ್ ಗಣದ ಡೈಕ್ರೂರಿಡೀ ಕುಟುಂಬ ಒಂದು ಜಾತಿಯ ಹಕ್ಕಿ (ಡ್ರಾಂಗೊ). ಇದಕ್ಕೆ ರಾಜಕಾಗೆ (ಕಿಂಗ್ ಕ್ರೋ) ಎಂಬ ಹೆಸರೂ ಇದೆ. ಈ ಜಾತಿಯ ವೈಜ್ಞಾನಿಕ ಹೆಸರು ಡೈಕ್ರೂರಸ್

© ಗುರುಪ್ರಸಾದ್ ಕೆ. ಆರ್.

ಇದಾದ ಕೆಲವು ವರ್ಷಗಳ ತರುವಾಯ ಕುಣಿಗಲ್ ನ ಬಳಿ ಪಕ್ಷಿವೀಕ್ಷಣೆ ಮಾಡುವಾಗ ಈ ಕಾಜಾಣಗಳ ಧೈರ್ಯವನ್ನು ನೋಡಿ ಇನ್ನಷ್ಟು ಬೆರಗಾದೆ!  ಸಾಮಾನ್ಯವಾಗಿ ಹೊಲ ಅಥವಾ ಗದ್ದೆಯಲ್ಲಿ ಕಟಾವು ಮುಗಿದಾದ ಮೇಲೆ ಉಳಿದ ಹುಲ್ಲಿಗೆ ಬೆಂಕಿ ಹಾಕುತ್ತಾರೆ. ಅದೇ ರೀತಿ ಒಂದು ಗದ್ದೆಯಲ್ಲಿ ಬೆಂಕಿಯನ್ನು ಹಾಕಲಾಗಿತ್ತು. ಬೆಂಕಿಯ ಆ ಶಾಖವನ್ನು ಲೆಕ್ಕಿಸದೆ ಒಂದೇ ರೀತಿ ಕಾಣುವ ಹಲವಾರು ಪಕ್ಷಿಗಳು ಬೆಂಕಿಯ ಮೇಲೆ ಹಾರುತ್ತಿದ್ದವು. ಕಾರಿನಲ್ಲಿ ಚಲಿಸುತ್ತಿದ್ದ ನನಗೆ ‘ಯಾವುದಪ್ಪಾ ಈ ಪಕ್ಷಿಗಳು ಬಿಸಿಯನ್ನೂ ಲೆಕ್ಕಿಸದೆ ಬೇಟೆಯಾಡುತ್ತಿವೆಯಲ್ಲಾ? ಎಂದು ಕಾರನ್ನು ಪಕ್ಕಕ್ಕೆ ನಿಲ್ಲಿಸಿ ನೋಡಿದೆ. ಮತ್ತದೇ ಕಾಜಾಣ! ಆ ಬೆಂಕಿಯ ಶಾಖಕ್ಕೆ ಮೇಲೆ ಏಳುವ ಸಣ್ಣ ಸಣ್ಣ ಮಿಡತೆ, ಹುಳ ಹುಪ್ಪಟೆ ಗಳನ್ನೂ ಬೆಂಕಿಯ ಸಮೀಪ ಹಾರಿ ಹಾರಿ ಹಿಡಿದು ತಿನ್ನುತ್ತಾ ಇದ್ದವು. ಸಾಮಾನ್ಯವಾಗಿ ಬೆಂಕಿ ಕಂಡರೆ ಅದರ ಹೊಗೆ ಇದ್ದರೆ ಹಕ್ಕಿಗಳು ದೂರ ಹಾರಿ ಹೋಗುತ್ತವೆ. ಈ ಪಕ್ಷಿ ಮಾತ್ರ ಅದೇ ಅವಕಾಶವನ್ನು ಬಳಸಿಕೊಂಡು ಬೇಟೆಯಾಡುತ್ತಿದೆ! ಈ ಅಪರೂಪದ ದೃಶ್ಯವನ್ನು ನೋಡುತ್ತಾ ಹಾಗೆ ಸುಮ್ಮನೆ ನಿಂತೆ. ಆ ಗುಂಪಿನ ಕೆಲವು ಪಕ್ಷಿಗಳಂತೂ ಬೆಂಕಿ ಒಳಗೆ ನುಸುಳಿ ತನ್ನ ಆಹಾರ ಹಿಡಿದು ತರುತ್ತಿದ್ದವು. ಸುಮಾರು ಅರ್ಧ ಘಂಟೆಯ ಇದರ ಧೈರ್ಯದ ಸಾಹಸವನ್ನು ನೋಡಿ ಬೆರಗಾಗಿ ನಂತರ ನನ್ನ ಮುಂದಿನ ಪ್ರಯಾಣವನ್ನು ಬೆಳೆಸಿದೆ.

ಮತ್ತೊಂದು ದಿನ ಈ ಕಾಜಾಣ ಹಕ್ಕಿಯ ಬೇರೆ ರೀತಿಯ ಧೈರ್ಯ ಸಾಹಸವನ್ನು ನೋಡಲು ಸಿಕ್ಕಿತು.  ದೊಡ್ಡ ಬೇಟೆಗಾರ (ಹದ್ದು, ಗಿಡುಗ,) ಪಕ್ಷಿಗಳ ಫೋಟೋ ತೆಗೆಯಲು ಹೋಗಿದ್ದಾಗ, ಈ ಪುಟ್ಟ ಹಕ್ಕಿ ಒಂದು ದೊಡ್ಡ ಗಿಡುಗವನ್ನು (short toed snake eagle) ಅಟ್ಟಾಡಿಸಿಕೊಂಡು ಅದರ ತಲೆ ಮೇಲೆ ಕುಕ್ಕಿ ದೂರಕ್ಕೆ ಓಡಿಸುತ್ತಿತ್ತು. ಆ ದೊಡ್ಡ ಗಿಡುಗ ಹೋಗಿ ಒಂದು ಕಡೆ ಕುಳಿತಾಗ ಕೂಡ ಬಿಡಲಿಲ್ಲ ಅಲ್ಲಿಗೆ ಧೈರ್ಯವಾಗಿ ಹತ್ತಿರ ಹೋಗಿ ಕುಕ್ಕಿ ಕುಕ್ಕಿ ಅಲ್ಲಿಂದ ಎಬ್ಬಿಸಿ ಓಡಿಸಿತು. ಅದು ಏಕೆ ಹೀಗೆ ಮಾಡುತ್ತಿದೆ ಅಂತ ನಿಧಾನಕ್ಕೆ ನೋಡುತ್ತಾ ಕುಳಿತಾಗ ಗೊತ್ತಾಯ್ತು ಅಲ್ಲೇ ಒಂದು ಚಿಕ್ಕ ಪೊದೆಗಳ ಹತ್ತಿರ ಈ ಕಾಜಾಣದ ಗೂಡು ಇದೆ ಎಂದು. ಇದು ತನ್ನ ಗೂಡನ್ನು ಮತ್ತು ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಹೀಗೆ ಮಾಡುತ್ತಿತ್ತು.

ಇದನ್ನು ರೌಡಿ ಪಕ್ಷಿ ಅಂತ ಕೂಡ ಕರೆಯಬಹುದು ಯಾಕೆ ಗೊತ್ತಾ? ಪಾಪ ಸಣ್ಣ ಸಣ್ಣ ಪಕ್ಷಿಗಳು ತನ್ನ ಆಹಾರವಾದ ಚಿಕ್ಕ ಹುಳ ಹುಪ್ಪಟ್ಟೆಗಳನ್ನು ಸಂಪಾದಿಸಿ ತಂದರೆ ಇದು ಅದರ ಪಕ್ಕದಲ್ಲೇ ಇದ್ದು ಹತ್ತಿರ ಬಂದ ಆ ಸಣ್ಣ ಪಕ್ಷಿಗಳನ್ನು ಹೆದರಿಸಿ ಅದರ ಆಹಾರವನ್ನು ಕಸಿದುಕೊಳ್ಳುತ್ತದೆ. ಪಾಪ ಆ ಸಣ್ಣ ಪಕ್ಷಿಗಳು ಇದರ ಆಟಕ್ಕೆ ಹೆದರಿ ಗಾಬರಿಯಿಂದ ತನ್ನ ಬೇಟೆಯನ್ನು ಬಿಟ್ಟು ಬಿಡುತ್ತವೆ.

ಇವೆಲ್ಲವುದರ ಜೊತೆಯಲ್ಲಿ ಇದರ ಮತ್ತೊಂದು ವೈಶಿಷ್ಟ್ಯತೆ ಎಂದರೆ, ಬೇರೆ ಬೇರೆ ಪಕ್ಷಿಗಳ ಕೂಗು ಅನುಕರಣೆ ಮಾಡುವುದು. ಅದರಲ್ಲಿಯೂ ಈ ಕಾಜಾಣ ಕುಲದಲ್ಲಿ ಬೂದು ಕಾಜಾಣ, ಭೀಮರಾಜ ಪ್ರಭೇದಗಳು ಎತ್ತಿದ ಕೈ.


ನಾವು ಪಕ್ಷಿವೀಕ್ಷಣೆ ಮಾಡುವಾಗ ತುಂಬಾ ಸಲ ಇದರ ಅನುಕರಣೆ ಕೂಗು ಕೇಳಿಸಿಕೊಂಡು ಯಾಮಾರಿದ್ದೇವೆ. ಒಮ್ಮೊಮ್ಮೆ ನಮ್ಮ ಕ್ಯಾಮೆರಾ ಕ್ಲಿಕ್ ಮಾಡುವ ಶೆಟ್ಟರ್ (shutter) ಸೌಂಡ್, ಹಾಗೆ ಬುಲೆಟ್ ಹೋಗುವ ಶಬ್ದ ಕೂಡ ಅನುಕರಣೆ ಮಾಡಿದ ಉದಾಹರಣೆಗಳು ಇವೆ.

ಕಾಜಾಣಗಳು ತೋಟಗಳು, ಕಾಡುಗಳು ಹಾಗು ವನ್ಯಪ್ರದೇಶಗಳಲ್ಲಿ ಸಾಧಾರಣವಾಗಿ ಒಂಟಿಯಾಗಿ ಇಲ್ಲವೆ ಜೋಡಿಗಳಲ್ಲಿ ವಾಸಿಸುತ್ತವೆ. ದೊಡ್ಡ ಗುಂಪುಗಳಲ್ಲಿ ಕಾಣಸಿಗುವುದು ಕಮ್ಮಿ. ಈ ಕಾಜಾಣ ಕುಲದಲ್ಲಿ ಸುಮಾರು ಮೂವತ್ತು ಪ್ರಭೇದಗಳಿವೆ. ಅವುಗಳಲ್ಲಿ ಸುಮಾರು ಒಂಬತ್ತು ಪ್ರಭೇದಗಳು ನಮ್ಮ ಭಾರತದಲ್ಲಿ ಕಾಣಸಿಗುತ್ತವೆ ಹಾಗೂ ಆರು ಪ್ರಭೇದಗಳು ನಮ್ಮ ಕರ್ನಾಟಕದಲ್ಲಿ ಕಾಣಸಿಗುತ್ತವೆ. ಅವುಗಳೆಂದರೆ

  1. ಕಪ್ಪು ಕಾಜಾಣ – Black Drongo
  2. ಬೂದು ಕಾಜಾಣ – Ashy Drongo
  3. ಬಿಳಿ ಹೊಟ್ಟೆಯ ಕಾಜಾಣ – White-bellied Drongo
  4. ಕಂಚು ಕಾಜಾಣ Bronzed Drongo
  5. ಭೀಮರಾಜ – Greater Racket-tailed Drongo
  6. ಜುಟ್ಟು ಕಾಜಾಣ – Hair-crested Drongo
© ಗುರುಪ್ರಸಾದ್ ಕೆ. ಆರ್.

ಕಪ್ಪು ಕಾಜಾಣ (Black Drongo) – ಸಾಮಾನ್ಯವಾಗಿ ಹಳ್ಳಿಗಳಲ್ಲಿ, ತೋಟ, ಕುರುಚಲು ಕಾಡು. ಗದ್ದೆಗಳಲ್ಲಿ ಕಾಣಸಿಗುತ್ತವೆ, ಇವು ತುಂಬಾ ಧೈರ್ಯಶಾಲಿ ಹಕ್ಕಿಗಳು.

ಬೂದು ಕಾಜಾಣ (Ashy Drongo) – ಹಿಮಾಲಯದ ತಪ್ಪಲಿನಲ್ಲಿ ಹೆಚ್ಚಾಗಿ ಕಂಡುಬಂದರೂ, ನಮ್ಮ ಕರ್ನಾಟಕದ ಕಡೆ ಚಳಿಗಾಲದಲ್ಲಿ ವಲಸೆ ಬರುತ್ತವೆ, ನೋಡಲು ಕಪ್ಪು ಕಾಜಾಣ ರೀತಿ ಇದ್ದರೂ ಕೆಂಪಗಿನ ಕಣ್ಣು ಮತ್ತು ಬಿಳಿ ಬಣ್ಣದ ಚುಕ್ಕೆ ಇಂದ ಇದನ್ನು ಬೂದು ಕಾಜಾಣ ಅಂತ ಗುರುತಿಸಬಹುದು. ಇವು ಮಧುರಕಂಠ ಮತ್ತು ಹಲವು ಹಕ್ಕಿಗಳ ಕೂಗನ್ನು ಅನುಕರಣೆ ಮಾಡುವಲ್ಲಿ ನಿಸ್ಸೀಮ.

ಬಿಳಿ ಹೊಟ್ಟೆಯ ಕಾಜಾಣ (White-bellied Drongo) – ಇದನ್ನು ಗುರುತಿಸುವುದು ಬಹಳ ಸುಲಭ. ದೇಹವೆಲ್ಲಾ ಕಪ್ಪು ಬಣ್ಣದ್ದಾಗಿದ್ದರೂ, ಬಿಳಿ ಬಣ್ಣದ ಹೊಟ್ಟೆ ಇರುವ ಕಾರಣ ಇದರ ಗುರುತಿಸುವಿಕೆ ಬಹಳ ಸುಲಭ, ಇವು ಕೂಡ ಸಾಮಾನ್ಯವಾಗಿ ಕಾಡಿನ ಪ್ರದೇಶಗಳಲ್ಲಿ ಕಂಡು ಬರುತ್ತವೆ.

ಕಂಚು ಕಾಜಾಣ (Bronzed Drongo) – ಇವು ನೋಡಲು ಹಸಿರು ಮತ್ತು ನೀಲಿ ಮಿಶ್ರಿತ ಗಾಢ ಬಣ್ಣದಿಂದ ಕೂಡಿರುತ್ತವೆ, ಬಾಲ ಸ್ವಲ್ಪ ಫ್ರಾಕ್ ರೀತಿ ಇರುತ್ತದೆ, ನಮ್ಮ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.

© ಗುರುಪ್ರಸಾದ್ ಕೆ. ಆರ್.

ಭೀಮರಾಜ (Greater Racket-tailed Drongo) – ಬೇರೆ ಎಲ್ಲ ಕಾಜಾಣಗಳಿಗಿಂತಲೂ ನನಗೆ ಈ ಭೀಮರಾಜ ತುಂಬ ಇಷ್ಟ. ಕಾರಣ ಇದರ ಉದ್ದನೆಯ ಬಾಲ. ಇದು ಹಾರಾಡುವಾಗ ಇದರ ಸೊಬಗನ್ನು ನೋಡುವುದೇ ಒಂದು ಆನಂದ. ಒಳ್ಳೆ ರಾಕೆಟ್ ಬಿಟ್ಟ ಹಾಗೆ ಹಾರಾಡುತ್ತಾ ಇರುತ್ತೆ ಅದಕ್ಕೆ ಇದರ ಇಂಗ್ಲೀಷ್ ಹೆಸರು ರಾಕೆಟ್ ಟೈಲ್ಡ್ ಡ್ರ್ಯಾಂಗೋ ಎಂದು. ಪಶ್ಚಿಮ ಘಟ್ಟ, ಮತ್ತು ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಇವು ಹೆಚ್ಚಾಗಿ ಕಾಣಸಿಗುತ್ತವೆ.

ಜುಟ್ಟು ಕಾಜಾಣ (Hair-crested Drongo) – ಈ ಹಕ್ಕಿ ಕಾಣಸಿಗುವುದು ತುಂಬಾ ಅಪರೂಪ, ದಟ್ಟ ಅರಣ್ಯ ಹಾಗು ತೇವಭರಿತ ಕಾಡುಗಳಲ್ಲಿ ಮಾತ್ರ ಕಾಣಸಿಗುತ್ತದೆ. ನಮ್ಮ ಮಲೆನಾಡು, ದಾಂಡೇಲಿ ಕಡೆ ಇವು ಕಾಣಿಸುತ್ತವೆ, ತಲೆ ಮೇಲೆ ಜುಟ್ಟು ಇರುವ ಕಾರಣ ಇದಕ್ಕೆ ಜುಟ್ಟು ಕಾಜಾಣ (Hair-crested Drongo) ಎಂದು ಹೆಸರು.

© ಗುರುಪ್ರಸಾದ್ ಕೆ. ಆರ್.

ಇದರ ಇನ್ನೊಂದು ಅದ್ಭುತ ವಿಶೇಷತೆ ಎಂದರೆ, ತಾನು ಕಟ್ಟಿರುವ ಗೂಡನ್ನು ನಿಧಾನವಾಗಿ ಬೇರ್ಪಡಿಸುತ್ತದೆ. ಮರಿ ಹಕ್ಕಿ ದೊಡ್ದದಾಗಿ ಗೂಡು ಬಿಟ್ಟು ಹಾರಿದ ನಂತರ ನಿಧಾನವಾಗಿ ಒಂದೆರಡು ದಿನಗಳಲ್ಲಿ ಗೂಡನ್ನು ಬಿಚ್ಚುತ್ತವೆ ಎಂದು ಚೀನಾ ವಿಜ್ಞಾನಿಗಳು ಅಭ್ಯಸಿಸಿ ತಿಳಿಸಿದ್ದಾರೆ. ಇದರ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.

ನನ್ನ ಹತ್ತು ಹನ್ನೆರಡು ವರುಷಗಳ ಪಕ್ಷಿವೀಕ್ಷಣೆಯಲ್ಲಿ ಕರ್ನಾಟಕದಲ್ಲಿ ಕಾಣಸಿಗುವ ಎಲ್ಲಾ ಕಾಜಾಣಗಳ ಹಿಂದೆ ಹೋಗಿ ನೋಡಿ ಫೋಟೋ ತೆಗೆದಿರುವುದು ಮನಸ್ಸಿಗೆ ಸಂತೋಷವನ್ನು ಉಂಟುಮಾಡಿದೆ.

ಇನ್ನು ಇದರ ಸಂತಾನೋತ್ಪತ್ತಿ ಋತುವಿನಲ್ಲಿ ಗಂಡು ಹೆಣ್ಣಿನ ಪ್ರಣಯದಾಟ ಸುಂದರವಾಗಿರುತ್ತದೆ, ಹೆಣ್ಣನ್ನು ಮೆಚ್ಚಿಸಲು ಗಂಡು ಹಕ್ಕಿ ಮಾಡುವ ಸರ್ಕಸ್ ನೋಡಲು ಬಲು ಚೆಂದ, ಹಾಗೆ ಇವು ಗೂಡುಗಳನ್ನು ಸಣ್ಣ ಕಡ್ಡಿ, ಜೇಡರ ಬಲೆ ಮುಂತಾದವುಗಳಿಂದ ನಿರ್ಮಿಸಿರುತ್ತವೆ, ಗಂಡು ಹೆಣ್ಣು ಎರಡು ಸೇರಿ ಕಾವು ಕೊಡುವ ಮತ್ತು ಮರಿಗಳನ್ನು ಸಾಕುವ ಕರ್ತವ್ಯ ಹಂಚಿಕೊಳ್ಳುತ್ತವೆ.

ಕಪ್ಪು ಮತ್ತು ಬೂದು ಕಾಜಾಣ ರೈತರ ಮಿತ್ರ ಅಂತ ಕೂಡ ಹೇಳಬಹುದು, ತೋಟ ಮತ್ತು ಗದ್ದೆಗಳ ಸಮೀಪ ಇರುವ ಸಣ್ಣ ಸಣ್ಣ ಹುಳುಗಳನ್ನೂ ತಿಂದು ಬೆಳೆ ಕಾಪಾಡುವಲ್ಲಿ ಸಹಕರಿಸುತ್ತವೆ.

ಲೇಖನ: ಗುರು ಪ್ರಸಾದ್ ಕೆ.ಆರ್.
          ಬೆಂಗಳೂರು ಜಿಲ್ಲೆ

Spread the love
error: Content is protected.