ಕಾಡುಕೊಂಪೆಯಲ್ಲೊಂದು ಕ್ಯಾಂಪು
© ಸುನೀಲ್ ಆರ್.
ರಾತ್ರಿಯಾದ್ದರಿಂದ ಸಿಕಾಡಗಳು ಕೂಗುತ್ತಿದ್ದವು. ತಲೆಯೆತ್ತಿ ನೋಡಿದರೆ ಆಕಾಶದಲ್ಲಿ ನಮ್ಮ ಗೆಲಕ್ಸಿ ಹಾಲುಹಾದಿಯ ಒಂದು ಬಾಹು ನಕ್ಷತ್ರಗಳು, ಆಕಾಶವನ್ನೇ ಇಬ್ಬಾಗ ಗೊಳಿಸುವಂತೆ ದುರ್ಗೋಚರಗೊಂಡವು. ನಗರವಾಸಿಗಳಾದ ನಮಗೆ ಈ ರೀತಿಯ ನಕ್ಷತ್ರಗಳು ಕಾಣುವುದಿಲ್ಲ ಬಿಡಿ! ಎಲ್ಲೆಲ್ಲೂ ಬೆಳಕಿನ ಮಾಲಿನ್ಯ! ರಾತ್ರಿ ಎಲ್ಲಾ ಕಾಡು ಸುತ್ತಿ ಬಂದಿದ್ದರಿಂದ
ಮಲೆನಾಡಿನ ಕಾಡುಗಳಲ್ಲಿ ಕಂಡು ಬರುವ ಇಂಬಳಗಳು ಎಲ್ಲರಿಗೂ ಸರಿಯಾಗಿ ಕಚ್ಚಿ, ಎಲ್ಲರ ಕಾಲು ರಕ್ತಸಿಕ್ತವಾಗಿತ್ತು,
ಎಲ್ಲರ ಕಾಲು ಬೆರಳುಗಳ ನಡುವೆ ರಕ್ತ ಸುರಿಯುತ್ತಿತ್ತು.
ಜುಳುಜುಳು ಹರಿಯುವ ನೀರಿನ ಹಳ್ಳದ ಪಕ್ಕದಲ್ಲೇ ಮಂಡಲ ಹಾಕಿ ಮಲಗಿದ್ದ ಹಂಪ್ ನೋಸ್ಡ್ ಪಿಟ್ ವೈಪರ್ ಅನ್ನು ಅಶ್ವಥ್ ರವರ ತೀಕ್ಷ್ಣ ಕಣ್ಣು ಗುರುತಿಸಿತು. ಮುಕ್ಕಾಲು ಮೊಳ ಉದ್ದದ ಈ ಅಪರೂಪದ ಹಾವನ್ನ ಪತ್ತೆ ಹಚ್ಚಿ, ಎಲ್ಲರನ್ನೂ ಕರೆದು ತೋರಿಸಿದರು. ಎಲ್ಲರ ಬಳಿಯಿದ್ದ ಟಾರ್ಚ್ ನ ಬೆಳಕು ಹಾವಿನ ಮೇಲೆ ಬಿಟ್ಟರು. ಅದು ಏನು ಮಾಡದೆ ಮಲಗಿತ್ತು. ಎಲ್ಲರೂ ತಮ್ಮ ತಮ್ಮ ಕ್ಯಾಮೆರಾಗಳಲ್ಲಿ, ಮೊಬೈಲ್ಗಳಲ್ಲಿ ಪಟಪಟ ಫೋಟೋ ಕ್ಲಿಕ್ಕಿಸಿಕೊಂಡರು. ಮೊಬೈಲ್ನಲ್ಲಿ ಕ್ಲಿಕ್ಕಿಸುವವರು ಜಾಸ್ತಿ ಹತ್ತಿರ ಹೋಗಬೇಡಿ. ದೂರದಿಂದಲೇ ಫೋಟೋ ತೆಗಿರಿ ಎಂದು ಮುನ್ನೆಚ್ಚರಿಕೆಯನ್ನು ಕೊಟ್ಟರು.
ಹೀಗೆ ನಾವು ಕತ್ತಲ ಕಾಡಿನಲ್ಲಿ ಸಾಗುವಾಗ, ನಮ್ಮ ವಾಸನೆ ಗ್ರಹಿಸಿ ಒಂದು ಕಂತ್ರಿ ನಾಯಿಯೊಂದು ನಮ್ಮ ಗುಂಪನ್ನು ಸೇರಿಕೊಂಡು ನಮ್ಮ ಬಿಡಾರದ ಬಳಿಗೂ ಬಂದುಬಿಟ್ಟಿತು. ದಷ್ಟಪುಷ್ಟವಾಗಿದ್ದ ಆ ಕರಿ ನಾಯಿಗೆ ಭಗವತಿರವರು ʼಭೈರವʼ ಎಂದು ಹೆಸರಿಟ್ಟರು. ಅದು ಹೆಣ್ಣು ನಾಯಿ ಎಂದು ಹರಿಹರನ್ ರವರು ತಿಳಿಸಿದಾಗ ಭೈರವಿ ಎಂದು ಬದಲಿ ನಾಮಕರಣ ಮಾಡಿದರು.
ಅಂದು ಮಧ್ಯ ರಾತ್ರಿವರೆಗೂ, ನೇಚರ್ ವಾಕ್ ಮುಗಿಸಿ, ಫೈಯರ್ ಕ್ಯಾಂಪ್ ಹಾಕಿ, ಊಟ ಮಾಡಿ, ಎಲ್ಲರೂ ಬಿಡದಿಯ ಟೆಂಟ್ ಗಳನ್ನು ಸೇರಿ ಮಲಗಿದಾಗ ಒಂದು ಗಂಟೆಯಾಗಿತ್ತು. ನಾವು ಮಲೆನಾಡಿನ ಕಗ್ಗಾಡಿನ ಮಧ್ಯೆ, ಯಾವುದೋ ಹೇಳ ಹೆಸರಿಲ್ಲದ ಕಾಡು ಕೊಂಪೆಯಲ್ಲಿ ಕ್ಯಾಂಪ್ ಮಾಡಿ, ಬಿಡದಿ ಮಾಡಿ ಬಿಡಾರ ಹೂಡಿದ್ದೆವು. ಅಲ್ಲೇ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳದಲ್ಲಿನ ನೀರು ಜುಳು ಜುಳು ಸದ್ದು ಮಾಡುತ್ತಾ, ಬೋರ್ಗರೆವ ನದಿಯ ರೀತಿ ಹರಿಯುತ್ತಿತ್ತು.
ರಾತ್ರಿ ಎಲ್ಲಾ ಕಾಡನ್ನು ಸುತ್ತಿ ಬಂದು ಮಲಗಿದ್ದೇ ತಡ ನನಗೆ ನಿದ್ದೆ ಬಂದಿತ್ತು. ಬೆಳಗಿನ ಜಾವ ಐದು ಗಂಟೆ ಆಗಿರಬಹುದು, ಮೂಗಿನ ಬಳಿ ಏನೋ ತಣ್ಣನೆಯ ಅನುಭವ ಆಯಿತು. ಮುಟ್ಟಿ ನೋಡಿದರೆ ಇಂಬಳ! ಥೂ ಎಂದು ಅದನ್ನು ಎಡಗೈಯಲ್ಲಿ ಹಿಡಿದು, ಟೆಂಟಿನಿಂದ ಆಚೆ ಬಂದು ದೂರದಲ್ಲಿ ಬಿಸಾಡಿ ನೋಡಿದರೆ ಆಗಲೇ ಬೆಳಕಾಗುತ್ತಿತ್ತು.
ಎಲ್ಲರೂ ಎದ್ದು ಬೆಳಗಿನ ನೇಚರ್ ವಾಕ್ ಗೆ ತಯಾರಿ ಮಾಡುತ್ತಿದ್ದರು. ನಾನು ಎಲ್ಲರಿಗೂ ಕಾಫಿ ತಯಾರಿ ಮಾಡೋಣ ಎಂದು ಬಿಡದಿಯ ತೆರೆದ ಅಡುಗೆ ಮನೆಗೆ ಹೋದೆ. ನಮ್ಮ ಬಿಡಾರದ ಮುಂದೆ ಕೃತಕವಾಗಿ ನಿರ್ಮಿಸಿದ್ದ ಕುಂಟೆಯಲ್ಲಿ ಗೂಳಿಕಪ್ಪೆಗಳು, ದೂರದಲ್ಲಿ ನವಿಲು ಕೂಗುತ್ತಿತ್ತು. “ಹಿಲ್ ಮೈನಾ ಸೌಂಡ್ ಕೇಳಿಸಿಕೊಂಡಿರಾ? ಯಾವುದೋ ಒಂದು ಅಪರೂಪದ ಪ್ರಭೇದದ ಚಿಟ್ಟೆ ಈಗ ತಾನೇ, ಹಾರಿ ಹೋಯಿತೆಂದು, ನನ್ನ ಕೈಯಲ್ಲಿ ಕ್ಯಾಮೆರಾ ಇಲ್ಲದ ವೇಳೆಗೆ ಹಾರಿಹೋಗ್ಬಿಡುತು.” ಎಂದು ಹರಿಹರನ್ ರವರು ದುಃಖ ಪಟ್ಟರು. ನಾನು ಬನ್ನಿ ಸರ್ ಕಾಫಿ ಕುಡೀರಿ ಎಂದು ಕಾಯಿಸಿದ್ದ ಬಿಸಿಬಿಸಿ ಕಾಫಿ ಕೊಟ್ಟೆ.
ರಾತ್ರಿ ಹಾಕಿದ್ದ ಕ್ಯಾಂಪ್ ಫೈಯರ್ ಬೆಂಕಿ ಹಾರಿಹೋಗಿತ್ತು. ಆದರೆ ಮುಚ್ಚಿದ ಬೂದಿಯಲ್ಲಿ ಇದ್ದ ಕೆಂಡದ ಶಾಖಕ್ಕೆ ಭೈರವಿ ಅಲ್ಲಿಯೇ ಮಲಗಿತ್ತು. ಅಲ್ಲ ಮಲಗಿದ್ದಳು! ಬೂದಿ ಮುಚ್ಚಿದ ಕೆಂಡದಿಂದ ಹೊರ ಸೂಸುತ್ತಿದ್ದ ಅವೆಗೆಂಪು ಬಣ್ಣದ ಕಿರಣಗಳ ಶಾಖವನ್ನು ಆನಂದಿಸುತ್ತ ಮಲಗಿದ್ದ ನಾಯಿಯನ್ನು ಯಶವಂತನು ಅಚಾ! ಎಂದು ಪಕ್ಕಕ್ಕೆ ಓಡಿಸಿ, ಆ ಬೂದಿಯಲ್ಲಿ ಇದ್ದ ಕೆಂಡಗಳಿಗೆ ಒಳ್ಳೆಯ ತರಗು ಸೇರಿಸಿ ಬೆಂಕಿಯಾಗಿಸಿದನು. ನಾನು ಕಾಯಿಸಿದ 2 ಲೀಟರ್ ಕಾಫಿಯನ್ನು ಎಲ್ಲರೂ ತಮಗೆ ಸಾಕಾಗುವಷ್ಟು ಲೋಟಗಳಿಗೆ ಬಗ್ಗಿಸಿಕೊಂಡು. ಆಗಲೇ ಯಶವಂತನು ಹಾಕಿದ್ದ ಬೆಂಕಿಯ ಬಳಿ ಸುತ್ತಲೂ ಕುಳಿತು ಚಳಿ ಕಾಯಿಸುತ್ತಾ ಕಾಫಿ ಕುಡಿಯುತ್ತಿದ್ದರು.
ಬಿಡದಿಯ ಬಳಿ ಕೈಕಾಲು ಮುಖ ತೊಳೆಯುತ್ತಾ, ಹಲ್ಲುಜ್ಜುತ್ತಾ ನಿಂತಿದ್ದ ನನಗೆ, ಬಿಡದಿಯ ಹಿಂಬದಿ ಕಾಡಿನಿಂದ ಒಂದು ವಿಚಿತ್ರ ಜೀವಿ, ಮರಗಳ ಮರೆಯಲ್ಲಿ ಚಲಿಸಿದಂತಾಯಿತು. ನೋಡ ನೋಡುತ್ತಾ ಕಂಬಳಿ ಒದ್ದು ಬಂದಿದ್ದ ಆ ಜೀವಿ, ಸುಮಾರು ಐದು ಅಡಿ ಎತ್ತರದ, ಕುರುಚಲು ಗಡ್ಡದ, ಗಟ್ಟಿಮಸ್ತಾದ ಆಳು ನನ್ನ ಬಳಿಯೇ ಬಂದು ನಿಂತಿತ್ತು! ಮಾತು ಇಲ್ಲ! ಕಥೆಯೂ ಇಲ್ಲ!
ಅತ್ತ ಇತ್ತ ನೋಡಿ, ಎಲ್ಲಿಯವರು? ಎಂದಿತು.
ನಾನು ನಮ್ಮ ಜನ್ಮಸ್ಥಳ, ನಮ್ಮೂರಿನ ಹೆಸರು, ಅಲ್ಲಿನ ಇತಿಹಾಸ, ನಾವು ಬೆಳೆಯುವ ಬೆಳೆಗಳು, ಮಳೆ, ಆನೆಕಾಟ, ರೈತರ ಗೋಳು, ಎಲ್ಲವನ್ನು ವಿವರವಾಗಿ, ಆತ್ಮೀಯವಾಗಿ ವಿವರಿಸಿದೆ. ಆ ಆಳು ಹೊದ್ದಿದ್ದ ಕಂಬಳಿಯ ಹಿಂದಿನಿಂದ ಒಂದು ಪ್ಲಾಸ್ಟಿಕ್ ಕವರ್ ತೆಗೆದು, ಅದರಿಂದ ವೀಳ್ಯದೆಲೆ ತೆಗೆಯುತ್ತಾ, ವೀಳ್ಯದ ತೊಟ್ಟು ಮುರಿಯುತ್ತಾ ನಿಂತ.
ವೀಳ್ಯ ಹಾಕ್ತಿರಾ? ಎಂದು ನನ್ನನ್ನು ಕೇಳಿದ. ನಾನು ವೀಳ್ಯ ಹಾಕುತ್ತೇನಾದರೂ. . .
ಬೇಡ. ಎಂದೆ.
ಪ್ಲಾಸ್ಟಿಕ್ ಕವರಿಂದ ಸುಣ್ಣದ ಡಬ್ಬಿ ತೆಗೆದು, ಎಲೆಗೆ ಸುಣ್ಣವನ್ನು ಹಚ್ಚಿ ಬಾಯಿಗೆ ಹಾಕಿಕೊಂಡ. ಈ ಮಲೆನಾಡಿನಲ್ಲಿ ಬಹುವಾಗಿ ಬೆಳೆಯುವ ಅಡಿಕೆ, ವೀಳ್ಯವನ್ನು ಯಥೇಚ್ಛ ತಿಂದು ತಿಂದು ಅವನ ಹಲ್ಲುಗಳೆಲ್ಲಾ ಬೂದು ಬಣ್ಣಕ್ಕೆ ತಿರುಗಿದ್ದವು. ಆ ಕಗ್ಗಾಡಲ್ಲಿ ಅವನಿಗಿದ್ದ ಮನರಂಜನೆ ಅದೊಂದೇ ಇರಬಹುದು. ನಾನು ಹಲ್ಲುಜ್ಜುವುದನ್ನು ನಿಲ್ಲಿಸಿ ಬಾಯಿ ತೊಳೆದುಕೊಂಡು ಕಾಫಿ ಕುಡಿಯೋಣವೆಂದು ಲೋಟ ತೆಗೆದುಕೊಂಡು ಆ ಕಡೆ ತಿರುಗಿದೆ.
ಬಲಕ್ಕೆ ತಿರುಗಿ, ಎಡಕ್ಕೆ ತಿರುಗುವ ವೇಳೆಗೆ ಅ ಕಂಬಳಿ ಹೊದ್ದು ನಿರಾಯುಧನಾಗಿ ನಿಂತಿದ್ದ ಆಳು, ತನ್ನ ಎದೆ ಭಾಗಕ ಎತ್ತರಕ್ಕೆ ಮಚ್ಚು ಹಿಡಿದು ನಿಂತಿದ್ದ. ಇದ್ದಕ್ಕಿದ್ದಂತೆ ಆ ಮಚ್ಚು ಎಲ್ಲಿಂದ ತೆಗೆದ ಎಂದು, ಕ್ಷಣ ಹೊತ್ತು ಚಕಿತನಾದೆ!
ಅವನು ನಿಧಾನಕ್ಕೆ ತನ್ನ ಪ್ಲಾಸ್ಟಿಕ್ ಕವರ್ ನಿಂದ ಒಂದು ಗೋಟಡಿಕೆಯನ್ನು ತೆಗೆದು ಮಚ್ಚಿನಿಂದ ಗೋಟಡಿಕೆಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕೈಯ ಮೇಲೆ ಹಿಡಿದು ತುಂಡರಿಸತೊಡಗಿದ. ಅವನು ಅಡಿಕೆ ಕತ್ತರಿಸಲು ಮಚ್ಚು ತೆಗೆದನೋ ಅಥವಾ ಆತನ ಬಳಿ ಆಯುಧವಿದೆ ಎಂದು ನನಗೆ ತೋರಿಸಲು ಮಚ್ಚು ತೆಗೆದನೋ? ನನಗೆ ಇನ್ನೂ ಸಂಶಯವಿದೆ. ಆ ಕಾಡಿನಲ್ಲಿ ಇರುವ ಯಾವುದೋ ಮನೆಯ ಒಡೆಯನಿರಬೇಕು.
ಸುತ್ತಲೂ ಹರಡಿರುವ ಈ ದಟ್ಟ ಕಾಡಿನ ನಡುವೆ ಹರಿಯುವ ನೂರಾರು ಸಣ್ಣ ಸಣ್ಣ ನೀರಿನ ಹೊಳೆಗಳು, ಹಳ್ಳಗಳ ಬಳಿ ಅಲ್ಲಲ್ಲಿ ಕಾಣಸಿಗುವ, ಬೆಟ್ಟಗಳನ್ನೇ ಕಡಿದು ಮಾಡಿದ ಹಚ್ಚ ಹಸಿರಾದ ಗದ್ದೆಗಳು. ಆಗಸದೆತ್ತರ ಬೆಳೆದು ನಿಂತ ದೈತ್ಯ ಮರಗಳು. ಕ್ಷಣ ಕ್ಷಣಕ್ಕೂ ಬದಲಾಗುವ ವಾತಾವರಣ. ಒಮ್ಮೆ ಹನಿ ಹನಿ ಮಳೆ, ತಕ್ಷಣ ಬಿಸಿಲು. ಎಲ್ಲಿ ನೋಡಿದರೂ ಹಸಿರು, ಹಚ್ಚ ಹಸಿರು. ದೂರದಲ್ಲಿ ಕೂಗುವ ಪಕ್ಷಿಗಳ ಇನಿ ಧ್ವನಿ, ಇಂಬ, ಇನ್ನೂ ಏನೇನೋ.
ಮಾನವ ಸಂಪರ್ಕವಿಲ್ಲದ ಈ ಕಾಡು ಕೊಂಪೆ, ಭೂಮಿಯ ಮೇಲಿನ ಸ್ವರ್ಗದಂತೆ ಕಂಡಿತು. ಎರಡು ದಿನ ಮೊಬೈಲ್ ಇಲ್ಲದೆ, ಕುಡಿಯಲು ನೀರಿಲ್ಲದೆ, ಕರೆಂಟ್ ಇಲ್ಲದೆ, ಕಾಲ ಕಳೆಯುವ ಸೌಭಾಗ್ಯ ನಮಗೆ ಸಿಕ್ಕಿದ್ದೇ ಸೋಜಿಗ. ಅಲ್ಲೇ ಹರಿಯುವ ಹಳ್ಳದ ನೀರನ್ನೇ ತಂದು ಕುಡಿಯಲು ಬಳಸಿದವು. ಅದೇ ನೀರಿನಿಂದ ಅಡುಗೆ ಮಾಡಿದೆವು. ಅಲ್ಲಲ್ಲಿ ಬಿದ್ದಿದ್ದ ಸೌದೆಯನ್ನೇ ಗುಡ್ಡೆ ಹಾಕಿ ಬೆಂಕಿ ಕಾಯಿಸಿದೆವು. ಮೊಬೈಲಿಗೆ ಕರೆಂಟ್ ಇಲ್ಲದೆ, ಸಿಗ್ನಲ್ ಇಲ್ಲದೆ, ಬದುಕಿದೆವು. ಹರಿವ ನೀರಿನಲ್ಲಿ ಸ್ನಾನ ಮಾಡಿದೆವು. ಏನೋ ಒಂದು ರೀತಿ ನಾಗರಿಕತೆಯಿಂದ ದೂರ, ನಿಸರ್ಗಕ್ಕೆ ಹತ್ತಿರವಾಗಿ ಎರಡು ದಿನ ಬದುಕಿದೆವು.
ಈ ಕಾಡು ಕೊಂಪೆಗೆ ಒಗ್ಗಿಕೊಳ್ಳಲು ಒಂದು ದಿನವೇ ಹಿಡಿಯುವುದು. ಒಂದು ದಿನ ಕಳೆದ ನಂತರ ತಮ್ಮ ತಮ್ಮ ಮೊಬೈಲುಗಳನ್ನು ಬ್ಯಾಗಿಗೆ ಬಿಸಾಕಿ, ತಮ್ಮ ನೆಚ್ಚಿನ ಹವ್ಯಾಸಕ್ಕೆ ಕಟ್ಟುಬಿದ್ದು, ಎಲ್ಲರೂ ಕಾಲ ಕಳೆದರು. ವಿಸ್ತಾರವಾಗಿ ಹರಿಯುವ ಹಳ್ಳದಲ್ಲಿ ದಣಿವರಿಯೇ ನೀರಿನಲ್ಲಿ ಮಿಂದೆವು. ಮನೆಯಲ್ಲಿ ಎರಡು ಬಕೆಟ್ ಬಿಸಿ ನೀರಿನ ಸ್ನಾನ ಮಾಡುವ ನಮಗೆ, ಇಲ್ಲಿ ಸಾವಿರಾರು ಬಕೆಟ್ ತಣ್ಣಗೆ ಹರಿವ ನೀರಿಗೆ ಮೈಯೊಡ್ಡಿ ಶುದ್ಧ ಜಲದಲ್ಲಿ ಸ್ನಾನ ಮಾಡಿದಾಗ ಮೈಯಲ್ಲಿದ್ದ ಜಡವೆಲ್ಲ ಕಳೆದು ಹೋಗಿ, ಹೊಸ ಹುಮ್ಮಸ್ಸು ಮೂಡಿತು. ʼನೀರಿಗೆ ಜೀವ ಕೊಡುವ ಚೈತನ್ಯವಿದೆʼ ಎಂಬ ನಿಜದ ಅನುಭವವಾಯಿತು.
ಹಳ್ಳದ ಬಳಿಯಲ್ಲಿ ಇದ್ದ ಅಡಿಕೆ ಮರದಲ್ಲಿ ಯಾವುದೋ ಓತಿ ಪ್ರಭೇದದ ಪ್ರಾಣಿಯನ್ನು ಧನು ತೋರಿಸಿದ. ನಾನು ತಲೆಯೆತ್ತಿ ನೋಡತೊಡಗಿದೆ. ಆಗಸದೆತ್ತರಕ್ಕೆ ಬೆಳೆದಿದ್ದ ಆ ಅಡಿಕೆ ಮರದ ತುದಿಯಲ್ಲಿ ಒಂದು ಓತಿ ನನ್ನ ಬೈನಾಕುಲರ್ ನಲ್ಲಿ ಕಂಡಿತು. ಅದು ತನ್ನ ಕೊರಳ ಬಳಿ ಇದ್ದ ಹಳದಿ ಬಣ್ಣದ ತೊಗಲನ್ನು ಬಾವುಟದ ರೀತಿ ಅಗಲಿಸಿ ತೋರಿಸುತ್ತಿತ್ತು. ಇದ್ದಕ್ಕಿದ್ದಂತೆ ಆ ಮರದಿಂದ ತನ್ನ ಪಕ್ಕೆಗಳನ್ನು ಅಗಲಿಸಿ ರೆಕ್ಕೆಗಳಾಗಿಸಿಕೊಂಡು, ಗ್ಲೈಡ್ ಮಾಡುತ್ತಾ, ದೂರದ ಇನ್ನೊಂದು ಅಡಿಕೆ ಮರಕ್ಕೆ ಹಾರಿತು! ನಾನು ಹಲವು ದಿನಗಳಿಂದ ನೋಡಬೇಕೆಂದಿದ್ದುಕೊಂಡಿದ್ದ ಹಾರುವ ಓತಿಯನ್ನು ಧನು ನನಗೆ ತೋರಿಸಿದ. ಎಲ್ಲರೂ ಆ ಕ್ಷಣ ಮಂತ್ರಮುಗ್ಧರಾಗಿದ್ದು ಸುಳ್ಳಲ್ಲ!
ಜೀವ ವಿಕಾಸದಲ್ಲಿ ಸಾವಿರಾರು ವರ್ಷದಿಂದ ವಿಕಾಸವಾಗದೆ ಉಳಿದುಕೊಂಡು ಬಂದಿದ್ದ ಆ ಜೀವಂತ ಪಳಯುಳಿಕೆಯನ್ನು ಕಂಡಿದ್ದು ಸಂತೋಷವಾಯಿತು. ಬಿಡಾರದಿಂದ ಎರಡು ಕಿಲೋಮೀಟರ್ ದೂರದಲ್ಲಿ ನಮ್ಮ ಕಾರುಗಳು ನಿಂತಿದ್ದವು. ಅಲ್ಲಿಂದ ಸಾಗಿಸಿ ತಂದಿದ್ದ ಟೆಂಟುಗಳು ಅಡುಗೆ ಸಾಮಾನು, ಗ್ಯಾಸ್, ನಮ್ಮ ಲಗ್ಗೇಜು, ಬಟ್ಟೆ ಬರೆ, ಎಲ್ಲವನ್ನು ಹೊತ್ತುಕೊಂಡು ಮತ್ತೆ ಹಳ್ಳ ದಾಟಿದೆವು.
ಮುಂದೆ ಶೃಂಗೇರಿಯ ಕಡೆ ನಡೆದ ನಮ್ಮ ಪಯಣ, ತುಂಗಾ ನದಿಯ ದಡದಲ್ಲಿದ್ದ ಶಾರದಾ ಪೀಠದಲ್ಲಿ ತಾಯಿ ಶಾರದೆಗೆ ಕೈಮುಗಿದೆವು. ಮುಂದೆ ಯುಗದ ಕವಿ, ಜಗದ ಕವಿ ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿ ತಲುಪಿದೆವು. ಕುಪ್ಪಳ್ಳಿಯ ಕವಿಮನೆಯನ್ನು ಸಂದರ್ಶಿಸಿದೆವು. ಅವರು ಬದುಕಿದ ಮನೆಯ ಸೊಬಗನ್ನು ಕಣ್ತುಂಬಿಕೊಂಡೆವು. ಅಲ್ಲಿಂದ ಮುಂದೆ ಕವಿಶೈಲದ ನೆತ್ತಿಯ ಮೇಲೆ ಹೋಗುವಷ್ಟರಲ್ಲಿ ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ. ಆ ಸೂರ್ಯಾಸ್ತವನ್ನು ಎಲ್ಲರು ಮನದಲ್ಲಿ ತುಂಬಿಕೊಂಡು, ಆ ಮಲೆನಾಡ ಸೊಬಗಿಗೆ ಮನದಣಿಯೆ ಮಣಿದೆವು. ಕೆಳಗೆ ಇರುವ ಅವರ ಸ್ಮಾರಕದ ಬಳಿ ಬಂದು, ನಮ್ಮ ತಂಡದ ಪರಿಸರ ಕೆಲಸಗಳಿಗೆ ಸ್ಪೂರ್ತಿ ನೀಡಿದ ಕೆ ಪಿ ಪೂರ್ಣಚಂದ್ರ ತೇಜಸ್ವಿ ರವರ ಸ್ಮಾರಕದ ಬಳಿ ಕ್ಷಣ ಹೊತ್ತು ಕುಳಿತೆವು. ಅವರ ಸ್ಪೂರ್ತಿಯಿಂದಲೇ ರಚಿತವಾದ ಕಥೆಗಳ ಪುಸ್ತಕ ‘ಜೀವಾಂಕುರ’ ವನ್ನು ಅವರಿಗೆ ಅರ್ಪಿಸಿದೆವು. ಅಲ್ಲೇ ಎಲ್ಲರೂ ಕುಳಿತು ಆ ಕಥಾಸಂಕಲನದ ಒಂದು ಕಥೆಯನ್ನು ವಾಚಿಸಿದೆವು. ಈ ಸ್ಪೂರ್ತಿ ನಮ್ಮಲ್ಲಿ ಇನ್ನೂ ಹಚ್ಚ ಹಸಿರಾಗಿ ಉಳಿದು, ಇನ್ನೂ ಪರಿಸರ ಸಂರಕ್ಷಣೆಯ, ಕನ್ನಡದ ಕಾನನದ ಕೆಲಸಗಳು ಇನ್ನೂ ಹೆಚ್ಚೆಚ್ಚು ಮೂಡಿ ಬರಲಿ. ಈ ಅರಿವು ಹೆಚ್ಚೆಚ್ಚು ಪಸರಿಸಲಿ ಎಂದು ಮನದಲ್ಲಿ ಭಾವಿಸುತ್ತಾ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದವು. ಬೆಳಿಗ್ಗೆ ಮೂರು ಗಂಟೆಗೆ ಬೆಂಗಳೂರು ತಲುಪಿದವು.
ಇಷ್ಟೆಲ್ಲಾ ಅನುಭವವನ್ನು ಹೊತ್ತು ತೋರಲು ಅವಕಾಶವಾದದ್ದು ನಮ್ಮ ಡಬ್ಲ್ಯೂ ಸಿ ಜಿ ತಂಡದ ಸಾಮರ್ಥ್ಯ ವೃದ್ಧಿಗಾಗಿ ಆಯೋಜಿಸಿದ್ದ ಎರಡು ದಿನಗಳ ಕ್ಯಾಂಪ್ ನಿಂದ. ಈ ಕ್ಯಾಂಪಿನಲ್ಲಿ ನಮ್ಮ ತಂಡದ ಎಲ್ಲಾ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಿದರು.
ಲೇಖನ: ಶಂಕರಪ್ಪ ಕೆ ಪಿ
ಬೆಂಗಳೂರು ಜಿಲ್ಲೆ
WCG ಯ ಹಲವರು ಒಟ್ಟಿಗೆ ಶೃಂಗೇರಿಯ ಬಳಿಯಿರುವ ಕಾಡು/ತೋಟದ ಬಳಿ ಇದ್ದುಬರುವುದೆಂದು ಹೇಳಿದಾಗ, ನನ್ನ ಅದೃಷ್ಟಕ್ಕೆಂಬಂತೆ ಆ ವಾರಾಂತ್ಯಕ್ಕೆ ಬೇರಾವ ಪ್ಲಾನ್ ಇಲ್ಲದುದು ಸಹಾಯವಾಯಿತು. ನಿಗದಿಯನುಸಾರ ಹದಿನೆಂಟು ಮಂದಿ ನಾಲ್ಕು ಕಾರ್ ಗಳಲ್ಲಿ ಹೊರಟೆವು. ಅಲ್ಲಿ ತಲುಪಿದ ನಂತರ ಕಾರ್ ಗಳನ್ನು ಒಂದು ತೋಟದ ಬಳಿ ನಿಲ್ಲಿಸಿ, ಅಲ್ಲಿಂದ ಸರಿ ಸುಮಾರು 4 ಕಿಲೋಮೀಟರ್ ಗಳಷ್ಟು ದೂರ, ಕಾಡಿನ ಮಧ್ಯೆ ಕಾಲ್ದಾರಿಯಲ್ಲಿ ಹೊರಟೆವು. ಊಟದ ವ್ಯವಸ್ಥೆಗೆಂದು ಸಣ್ಣ ಸಿಲಿಂಡರ್ ಮತ್ತು ಅಡುಗೆಗೆ ಬೇಕಾದ ಸಾಮಾಗ್ರಿಗಳನ್ನು ಹೊತ್ತು ನಡೆದೆವು. ಕ್ಯಾಂಪ್ ಸೈಟ್ ತಲುಪುವಷ್ಟರಲ್ಲಿ ಬೆಳಿಗ್ಗೆ ಐದು ಘಂಟೆ! ರಾತ್ರಿಯಿಡೀ ಗಾಡಿ ಓಡಿಸಿ, ಕಾಡಿನ ನಡುವೆ ನಡೆದು ದಣಿದಿದ್ದ ದೇಹಕ್ಕೆ ಸ್ವಲ್ಪ ವಿಶ್ರಾಂತಿಬೇಕಿತ್ತು. ನಮ್ಮ ಗುಂಪಿನಲ್ಲಿದ್ದ ಸಾಕಷ್ಟು ಮಂದಿ ‘ಟೆಂಟ್ ಪಿಚ್’ ಮಾಡುವ ಪರಿಣಿತರು; ಪಟಪಟನೆ ನಮಗೆ ಮಲಗಲು ಅಣಿ ಮಾಡಿಕೊಟ್ಟರು. ಎರಡು ಘಂಟೆಗಳ ವಿಶ್ರಾಂತಿಯ ನಂತರ ಎದ್ದು, ಕಟ್ಟಿಕೊಂಡು ಬಂದಿದ್ದ ಚಪಾತಿ ತಿಂದು, ಚಿಟ್ಟೆಗಳನ್ನು ನೋಡಲು ಹೊರಟೆವು; ನಮ್ಮೊಡನೆ ಬಂದಿದ್ದ ಹರಿಹರನ್ ಸರ್ ಚಿಟ್ಟೆಗಳ ಎಕ್ಸ್ಪರ್ಟ್! ಘಟ್ಟಗಳ ವಿಶೇಷಗಳಾದ ರಸ್ಟಿಕ್, ಬ್ಲೂ ಮಾರ್ಮಾನ್, ಕ್ರೂಸರ್ ಹೀಗೆ ಸುಮಾರು 35ಕ್ಕೂ ಹೆಚ್ಚು ಪ್ರಭೇದದ ಚಿಟ್ಟೆಗಳನ್ನು ನೋಡಿ ಕಣ್ ತುಂಬಿ ಕೊಂಡೆವು. ಹಾಗೇ ನಡೆಯುತ್ತಾ ತಲುಪಿದ್ದು, ಒಂದು ಸಣ್ಣ ತೊರೆಯ ಹತ್ತಿರ. ಮಳೆಗಾಲವಾಗಿದ್ದರೂ ಈ ಸಲ ವಾಡಿಕೆಗಿಂತ ಮಳೆ ಕಡಿಮೆಯಾಗಿರುವ ಕಾರಣ ನೀರು ಕಡಿಮೆಯೇ ಇತ್ತು. ನಾವೆಲ್ಲ ನೀರಿನಲ್ಲಿ ಇಳಿದು ‘ಸ್ಟ್ರೀಮ್ ಗ್ಲೋರಿ ಡ್ಯಾಂಸಲ್ ಫ಼್ಲೈ ‘ನ ರೆಕ್ಕೆಯ ಬಣ್ಣವನ್ನು ನೋಡುತ್ತಾ ಅವಾಕ್ಕಾಗಿ ನಿಂತಿರುವಾಗ ಕೆಲವರು ನೀರಿನಲ್ಲಿಯೇ ನಡೆದು ಮುಂದಕ್ಕೆ ಹೆಜ್ಜೆಹಾಕಿದರು; ನಾವೂ ಸಹ ಅವರನ್ನು ಹಿಂಬಾಲಿಸಿ ಹೊರಟೆವು. ಅದಾದ ಬಳಿಕ, ಊಟಕ್ಕೆಂದು ಮರಳಿ ಕ್ಯಾಂಪ್ ಹತ್ತಿರ ಹೊರಟೆವು. ಶಂಕ್ರಣ್ಣ ಅನ್ನ ಬೇಯಿಸಿದ್ದರು; ಅದಕ್ಕೆ ಮನೆಯಿಂದ ತಂದ ಪುಳಿಯೋಗರೆ ಗೊಜ್ಜು ಕಲೆಸಿಕೊಂಡು ತಿಂದೆವು. ತಿಂದು, ತಟ್ಟೆ ತೊಳೆಯುವಷ್ಟರಲ್ಲಿ ಒಂದು ಸಣ್ಣ ಮಳೆಯಾಯಿತು! ನಮ್ಮ ಮನ ತಣಿಯಿತು!
ಕತ್ತಲಾಗುತ್ತಿದ್ದ ಹಾಗೆ, ಹಾವು-ಕಪ್ಪೆ ನೋಡಲು ಹೊರಡುವ ಮುನ್ನ, ಎಲ್ಲರೂ ಒಟ್ಟಿಗೆ ಕುಳಿತು WCG ಹಾಗೂ ನಮ್ಮ ಪರಿಚಯ ಹೇಗಾಯ್ತು ಅನ್ನೋ ದಿನಗಳ ಬಗ್ಗೆ ಮಾತನಾಡುತ್ತಾ, ಒಬ್ಬರನೊಬ್ಬರು ಇನ್ನಷ್ಟು ತಿಳಿದುಕೊಂಡೆವು; ಈ ಸಣ್ಣ ಸಂಸ್ಥೆಯೊಂದು ಹುಟ್ಟಿದ ಬಗೆ, ಅದು ಯಾವುದೇ ಆಡಂಬರವಿಲ್ಲದೆ ಬೆಳೆದು, ಬನ್ನೇರುಘಟ್ಟದ ಸುತ್ತಲಿನ ಹಲವಾರು ವಿದ್ಯಾರ್ಥಿಗಳಿಗೆ ತಮ್ಮ ಪರಿಸರದ ಬಗ್ಗೆ ಅರಿವು ಮೂಡಿಸುತ್ತಾ ಇಲ್ಲಿಯವರೆಗೆ ಬಂದು ನಿಂತಿರುವ ಕತೆಯೇ ಒಂದು ಸೋಜಿಗ! ಅಶ್ವತ್ಥಣ್ಣ, ಶಂಕ್ರಣ್ಣರ ನಿಸ್ವಾರ್ಥ ಕೊಡುಗೆಯೇ ಈ ಮಟ್ಟಿಗಿನ ಬೆಳವಣಿಗೆಗೆ ಕಾರಣವಾಗಿರುವುದು ಖಂಡಿತಾ ಸುಳ್ಳಲ್ಲ.
ಈ ಮಾತುಕತೆಯ ನಂತರ, ಹಾವುಗಳನ್ನು ಹುಡುಕಿ ಹೊರಟ ನಮಗೆ ನಿರಾಸೆಯಾಗಲಿಲ್ಲ; ಹಸಿರು ಹಾವು, ಹಪ್ಪಟೆ ಹಾವುಗಳ ನೋಡಿ ವಾಪಸ್ಸಾದೆವು.
ಬಹಳಷ್ಟು ಓಡಾಟದ ನಂತರ, ಎಲ್ಲರಿಗೂ ಒಂದೊಳ್ಳೆಯ ನಿದ್ದೆ ಬೇಕಿತ್ತು; ಹಾಗೇ ಮಲಗಿದವರೆಲ್ಲರೂ ಮಾರನೆಯ ದಿನ ಎದ್ದು, ಹೊಸ ಉತ್ಸಾಹದೊಂದಿಗೆ ಪಕ್ಷಿವೀಕ್ಷಣೆಗೆಂದು ಹೊರಟೆವು. ‘ಬಾರ್ ವಿಂಗ್ಡ್ ಫ಼್ಲೈಕ್ಯಾಚರ್’ ನೋಡುತ್ತ ನಿಂತಿದ್ದ ನನ್ನನ್ನು ಮತ್ತು ಯಶುವನ್ನು ಅಶ್ವತ್ಥಣ್ಣ ಕರೆದು, ಅಲ್ಲಿಯೇ ನಮ್ಮ ಹಿಂದಿದ್ದ ಅಡಿಕೆ ಮರಗಳ ಕಡೆ ನೋಡಲು ಹೇಳಿದರು. ಅಲ್ಲಿದದ್ದು ನಮ್ಮ ಪೂರ್ಣಚಂದ್ರ ತೇಜಸ್ವಿ ರವರ ‘ಕರ್ವಾಲೊ’ ಕಾದಂಬರಿಯ ಹೀರೊ ‘ಹಾರುವ ಓತಿ’! ಒಂದು ಮರದಿಂದ ಜಿಗಿದು ಇನ್ನೊಂದಕ್ಕೆ ಗ್ಲೈಡ್ ಮಾಡುತ್ತಾ ಹೋಗುವ ಅದನ್ನು ನೋಡಿ ಮೈಮರೆತೆವು.
ಅಲ್ಲಿಂದ ಹೊರಡುವ ಸಮಯ ಸನ್ನಿಹಿತವಾಗುತಿತ್ತು; ಎಲ್ಲವನ್ನು ಪ್ಯಾಕ್ ಮಾಡಿ, ಕಾರುಗಳನ್ನು ಪಾರ್ಕ್ ಮಾಡಿದ್ದ ಜಾಗಕ್ಕೆ ನಡೆದು ಬಂದ ಜಾಡು – ಕಳೆದ ಒಂದು ದಿನದ ಅದ್ಭುತ ಸಮಯವನ್ನು ಮತ್ತೆ ನೆನಪಿಸುವಂತಿತ್ತು. ಪ್ರತಿ ದಿನ ಕೆಲಸದ ಜಂಜಾಟದಲ್ಲಿಯೇ ತೊಡಗಿರುವ ನನಗೆ, ಈ ಒಂದೂವರೆ ದಿನಗಳ ಪಶ್ಚಿಮ ಘಟ್ಟದಲ್ಲಿನ ವಾಸ – ಬಹಳ ಕಾಲ ನನ್ನ ನೆನಪಿನಲ್ಲಿ ಉಳಿಯುತ್ತದೆ ಎಂಬ ಗಟ್ಟಿ ನಂಬಿಕೆಯೊಡನೆ ಕರ್ಮಭೂಮಿ ಬೆಂಗಳೂರಿಗೆ ಬಂದೆವು.
ಲೇಖನ: ಭಾನುಪ್ರಕಾಶ್
ಬೆಂಗಳೂರು ಜಿಲ್ಲೆ