ಅದೊಂದು ಬೇರೆಯದೇ ಅನುಭೂತಿ

© ಧನಂಜಯ ಜೀವಾಳ
ಮುಂದುವರಿದ ಭಾಗ
ಡೂಮಿರೆಗೆಯಿಂದ ಹೊರಡುವಾಗಲೇ ವರದಶೆಟ್ಟಿಯ ಪುರಿಬೋಂಡ ಅಂಗಡಿಯಲ್ಲಿ ಕಟ್ಟಿಸಿಕೊಂಡಿದ್ದ ಇಪ್ಪತ್ತು ಲೀಟರ್ ಪುರಿ, ಅರ್ಧ ಕೆ. ಜಿ ಖಾರಾಕಡ್ಡಿ, ಅರ್ಧ ಲೀಟರ್ ಹುರ್ಗಡ್ಲೆಯನ್ನು ಹೊರತೆಗೆದು, ಅನ್ನ ಬಸಿಯಲೆಂದು ತಂದಿದ್ದ ಬಿದಿರಿನ ಮಂಕರಿಗೆ ಸುರುವಿ, ಎರಡೂ ಕೈಗಳ ಹತ್ತೂ ಬೆರಳುಗಳನ್ನು ಅಗಲವಾಗಿ ಹರಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿದ ದ್ಯಾವಣ್ಣ ಮೇಷ್ಟ್ರು ಹುಡುಗರ ಬಳಿ ನೀಡಿ ಎಲ್ಲರಿಗೂ ಬೊಗಸೆ ತುಂಬ ಹಂಚಲು ಹೇಳಿದರು. ಉತ್ಸಾಹದಿಂದ ಜಿಟಜಿಟನೆ ಉರಿಯುತ್ತಿದ್ದ ಬೆಂಕಿಗೆ ಸಮ್ಮೋಹಿತರಾಗಿ ಸುತ್ತಲ ಕಾಡಿನ ಮೂಲೆಮೂಲೆಯಲ್ಲಿ ಹಾರಾಡುತಿದ್ದ ಕ್ರಿಮಿಕೀಟಗಳು ಕರೆಯದೇ ಬಂದು ಆ ಕೆನ್ನಾಲಿಗೆಗೆ ಸಿಲುಕಿ ಸಹಗಮನ ಮಾಡುತ್ತಿದ್ದವು. ಗರಿಗರಿಯಾಗಿದ್ದ ಪುರಿಯನ್ನು ಬಾಯಿಗೆಸೆದುಕೊಳ್ಳುತ್ತಿದ್ದ ದಿನೇಶ ಇದ್ದಕ್ಕಿದ್ದಂತಲೇ ಶ್ವಾಸಕೋಶವೇ ಕಿತ್ತುಬರುವಂತೆ ಕೆಮ್ಮತೊಡಗಿದ. ಎಸೆದುಕೊಂಡ ಪುರಿಕಡ್ಲೆಯನ್ನು ಕ್ಯಾಚ್ ಹಿಡಿಯಲು ತೆರೆದು ಬೀಸಿದ ಬಾಯಿಯೊಳಕ್ಕೆ ತಾನೇನು ಕಡಿಮೆ ಎಂಬಂತೆ ನುಸುಳಿಕೊಂಡ ಕೀಟವೊಂದು ತನ್ನ ಅಪೂರ್ವ ಸ್ವಾದದೊಂದಿಗೆ ದಿನೇಶನ ಗಂಟಲಲ್ಲಿ ಕೋಲಾಹಲವನ್ನೇ ಹುಟ್ಟುಹಾಕಿತ್ತು. ಗಂಟಲೊಳಗೆ ಕೀಟ ನುಗ್ಗಿಸಿಕೊಂಡು ಕೆಮ್ಮಿ, ಕ್ಯಾಕರಿಸಿ ಕಕ್ಕಾಬಿಕ್ಕಿಯಾಗಿದ್ದ ದಿನೇಶ ಒಂದು ತಹಬಂದಿಗೆ ಬರುವಷ್ಟರಲ್ಲಿ ಆತನ ಕಣ್ಣುಗುಡ್ಡೆಗಳು ಕಪ್ಪೆಕಣ್ಣುಗಳಾಗಿ ರೂಪಾಂತರ ಹೊಂದಿದ್ದವು.

ಬೆಂಕಿಯ ಸುತ್ತಲೂ ಸೇರಿದ್ದ ಗುಂಪನ್ನು ಯಾವುದಾದರೂ ಉಪಯೋಗಕ್ಕೆ ಬರುವ ಚರ್ಚೆಗೆಳೆಯಬೇಕೆಂದು ಬಯಸಿ ಹೆಡ್ಮಾಷ್ಟ್ರು, “ಓದಿದ ನಂತರ ಪುಸ್ತಕವನ್ನೇನು ಮಾಡುವಿರಿ?” ಎಂದರು ಮಕ್ಕಳು ಯಾವುದೇ ಉತ್ತರವನ್ನು ನೀಡದಿದ್ದಾಗ ಅವರೇ ಮುಂದುವರಿದು “ಸಾಹಿತ್ಯಾಸಕ್ತರು ಭಾಗವಹಿಸುವ ಸಭೆಗಳಲ್ಲಿ ವಿಭಿನ್ನ ರೀತಿಯ ಪುಸ್ತಕ ವಿನಿಮಯ ಸಂಭ್ರಮವನ್ನು ಆಯೋಜಿಸಬಹುದು. ಪ್ರತಿಯೊಬ್ಬರೂ ಒಂದೊಂದು ಪುಸ್ತಕ ಪೂಲ್ ಮಾಡಿ, ಸಭೆ ಮಾಡಿದ ನಂತರ ಸಂಗ್ರಹಗೊಂಡ ಪುಸ್ತಕಗಳ ಪೈಕಿ ತಮಗೆ ಓದಲು ಅಗತ್ಯವಿರುವ ಪುಸ್ತಕವನ್ನು ತೆಗೆದುಕೊಂಡು ಹೋಗುವಂತ ಸಂಪ್ರದಾಯ ಪ್ರಾರಂಭಿಸಬಹುದು. ಮೊದಲು ಪುಸ್ತಕ ಪೂಲ್ ಮಾಡಿದವರು, ಮೊದಲು ಪುಸ್ತಕ ಆಯ್ಕೆ ಮಾಡಲು ಸಾಧ್ಯವಾಗುವಂತೆ ಟೋಕನ್ ನೀಡಬಹುದು. ಪ್ರತೀ ಕಾರ್ಯಕ್ರಮಗಳಲ್ಲಿ ಈ ರೀತಿಯ ಪುಸ್ತಕ ಅರ್ಪಣೆ ಮತ್ತು ಪುಸ್ತಕ ಆಯ್ಕೆ ಮಾಡಿಕೊಳ್ಳುವ ಸತ್ಸಂಪ್ರದಾಯವನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಲು ಸಾಧ್ಯವಿದೆ. ಆಯಾ ಸಮಾರಂಭದ ಆಹ್ವಾನ ಪತ್ರಿಕೆಗಳಲ್ಲಿ ಈ ಪುಸ್ತಕ ವಿನಿಮಯ ಕುರಿತು ಸೂಚನೆಗಳನ್ನು ನೀಡಬಹುದು, ಅಲ್ವ ಮಕ್ಳಾ?’’ ಅಂದರು.

ಮೂರು ವರ್ಷದ ಹಿಂದೆ ತನ್ನ ಕುಟುಂಬದ ಅಸಹಾಯ ಆರ್ಥಿಕ ಸ್ಥಿತಿಯಿಂದ ತಂಗಿ ಅಂಬಿಕಾಳನ್ನ ಕಳೆದುಕೊಂಡಿದ್ದ ಎಂಟನೇ ತರಗತಿಯ ಶೇಖರ, “ಆರೋಗ್ಯ ಸಮಸ್ಯೆಯಿಂದ ತೊಂದರೆಗೀಡಾದವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಸರಿ. ಈ ಆಸ್ಪತ್ರೆಯವರೇ ಅಸಹಾಯಕರಿಗೆ ರಿಯಾಯಿತಿಯ ಉಚಿತ ಚಿಕಿತ್ಸೆ ನೀಡಬಾರದೇಕೇ? ಅವರಿಗೂ ಸಾಮಾಜಿಕ ಜವಾಬ್ದಾರಿ ಇಲ್ಲವೇ? ಆಸ್ಪತ್ರೆಗೆಂದೇ ರಿಯಾಯಿತಿಯಲ್ಲಿ, ಇಲ್ಲವೇ ಉಚಿತವಾಗಿ ಭೂಮಿ, ನೀರು, ವಿದ್ಯುತ್ ಹಾಗೂ ಇನ್ನಿತರೇ ಸವಲತ್ತುಗಳನ್ನು ಸರ್ಕಾರ, ದಾನಿಗಳಿಂದ ಪಡೆದಿರುತ್ತಾರಲ್ಲ. ಸರ್ಕಾರದ್ದೇ ಕಾಲೇಜಿನಲ್ಲಿ ಸರ್ಕಾರದಿಂದಲೇ ವೇತನ ಪಡೆಯುವ ಉಪನ್ಯಾಸಕರಿಂದ ಕಲಿತು, ಸಾರ್ವಜನಿಕರ ತೆರಿಗೆಯ ಹಣದ ಗ್ರಂಥಾಲಯಗಳ ಸೌಲಭ್ಯ ಪಡೆದ ವೈದ್ಯರುಗಳಿಗೆ ಹೊಣೆಗಾರಿಕೆಯಿಲ್ಲವೇ? ಸಾರ್ವಜನಿಕರಿಂದ ಸಹಾಯ ಪಡೆಯಲಿಕ್ಕಾಗಿ ಪತ್ರಿಕಾ ಪ್ರಕಟಣೆ ನೀಡಲು ಆಸ್ಪತ್ರೆಯವರು ಉಪದೇಶಿಸುತ್ತಾರೆಯೇ ಹೊರತು, ತಾವು ಹೇಗೆ ಸಹಾಯ ಮಾಡಬಹುದೆಂದು ಆಲೋಚಿಸುವುದಿಲ್ಲ. ಅಷ್ಟಲ್ಲದೇ ಕೋಟ್ಯಾಂತರ ರೂಪಾಯಿ ವ್ಯಯ ಮಾಡಿ ಉನ್ನತೀಕರಣಗೊಂಡ ಸರ್ಕಾರೀ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸದೇ ಆ ಸಂಸ್ಥೆಗಳೆಲ್ಲಾ ಸಾರ್ವಜನಿಕರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿವೆ. ಬಂದ ಅನುದಾನವನ್ನು ಖರ್ಚು ಮಾಡಲಿಕ್ಕಾದರೂ ಒಂದಷ್ಟು ಕಳಪೆ ದರ್ಜೆಯ ಉಪಕರಣಗಳನು ತಂದು, ಖಾಸಗಿಯವರಿಗೆ ಅನುಕೂಲವಾಗಲೆಂದು ಬೇಕೆಂದೇ ಹಾಳುಗೆಡವಿ ಬಕ್ಷೀಸು ಪಡೆಯುವುದೂ ಇದೆ” ಎಂದ.

ಶೇಖರನ ವೇದನಾಮಯ ಆಲೋಚನೆಯನ್ನು ಸಹಾನುಭೂತಿಯಿಂದಲೇ ಆಲಿಸಿದ ಆತನ ಸಹಪಾಠಿಗಳು ಹಾಗೂ ಗುರುಗಳು ಕೊಂಚಕಾಲ ಮೌನವಾದರು. ದೀರ್ಘವಾದ ನಿಟ್ಟುಸಿರೊಂದನ್ನು ತೆಗೆದ ಕವಿತಾ ಮೇಡಂ, “ಮಕ್ಕಳೇ, ಇಂದಲ್ಲ ನಾಳೆ ನೀವೆಲ್ಲರೂ ಈ ಸಮಾಜದ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಿಗೆ ತಲುಪಿಯೇ ತಲುಪುತ್ತೀರಿ. ನೀವಿಂದು ನಿಮ್ಮ ಬದುಕಿನಲ್ಲಿ, ನಿಮ್ಮ ಕುಟುಂಬದಲ್ಲಿ, ನೆರೆಹೊರೆ, ಊರಿನಲ್ಲಿ ಕಾಣುತ್ತಿರುವ ದುಃಖ ದುಮ್ಮಾನಗಳಿಗೆ ನಿಮ್ಮ ಇಂದಿನ ಪರಿಸ್ಥಿತಿಯನ್ನು ಮರೆಯದೇ ನೆನಪಿಟ್ಟುಕೊಂಡು ನೀವೇ ಪರಿಹಾರವಾಗಿ. ನಿಮ್ಮೂರಿನ ಇಲ್ಲವೇ ಹಳ್ಳಿಯ ಬೀದಿಯೊಂದಕ್ಕೆ ನಿಮ್ಮ ಹೆಸರಿಡುವಂಥಾ ಅಪೂರ್ವವಾದ ಸಾರ್ಥಕ ಕೆಲಸ ಮಾಡಿ. ಸರಳ ಜೀವನವೊಂದೇ ಉಳಿದಿರುವ ದಾರಿ. ನಮ್ಮ ಬಳಿ ಇರುವುದು ಕೊಂಚವೇ ಆಗಿದ್ದರೂ, ಅದರಲ್ಲೇ ಒಂದಷ್ಟನ್ನು ತೋರಿಕೆಗಲ್ಲದೇ, ಶೋಕಿಗಲ್ಲದೇ, ಅಸಹ್ಯಕರ ಪ್ರದರ್ಶನಕ್ಕಲ್ಲದೇ ನಿಜವಾದ ಪ್ರೀತಿ, ವಿಶ್ವಾಸ, ಅಭಿಮಾನ, ನಿಷ್ಕಳಂಕ ಸಹಾನುಭೂತಿ ಮತ್ತು ನಿಸ್ವಾರ್ಥದಿಂದ ಹಂಚಿಕೊಳ್ಳೋಣ”.

ಹತ್ತನೇ ತರಗತಿಯ ಮನೋಹರಿ, “ನಮಗೆ ಅಗತ್ಯವಿಲ್ಲದ ಮತ್ತು ಸುಸ್ಥಿತಿಯಲ್ಲಿರುವ ಉಡುಪು, ಪಾದರಕ್ಷೆ, ಪುಸ್ತಕ, ಚೀಲ ಇನ್ನಿತರೇ ವಸ್ತುಗಳನ್ನು ಅಗತ್ಯವಿರುವವರಿಗೆ ಉದಾರವಾಗಿ ನೀಡಲು ‘ಕೊಡುಗೈ ಗೋಡೆ’ಯನ್ನು ಪ್ರಾರಂಭಿಸೋಣ. ಪುನರ್ಬಳಕೆ, ಪರೋಪಕಾರ, ಮಾಲಿನ್ಯ ನಿವಾರಣೆ, ಸುಸ್ಥಿತಿಯಲ್ಲಿರುವ ವಸ್ತುಗಳ ಸದುಪಯೋಗ, ಧ್ಯೇಯದಡಿ ಯೋಜಿಸೋಣ. ಗೋಡೆಯೊಂದಕ್ಕೆ ಅಳವಡಿಸಲಾಗುವ ಕಪಾಟಿನಲ್ಲಿ ಹೃದಯವಂತರು ತಂದಿಡುವ ಸುಸ್ಥಿತಿಯ ವಸ್ತುವನ್ನು ಅಗತ್ಯವಿರುವವರು ಹಾಗೂ ಅನಾಮಧೇಯ ಅಪೇಕ್ಷಿತರು ತಮ್ಮ ಸ್ವಂತ ಬಳಕೆಗೆ ಕೊಂಡೊಯ್ಯಬಹುದು. ಈ ಮೂಲಕ ಉಳ್ಳವರು ಇಲ್ಲದವರ ಅಗತ್ಯಗಳಿಗಾಗಿ ಸ್ಪಂದಿಸಬಹುದು” ಎಂದಳು.
ಸ್ಕೂಲಿನ ಎಲ್ಲಾ ಮೇಷ್ಟ್ರುಗಳಲ್ಲೇ ಕಠಿಣ ಶಿಸ್ತಿಗೆ ಹೆಸರಾಗಿದ್ದ ಮೋಹನ್ ರಾಜ್, “ಈ ದೇಶದ ಅಮೂಲ್ಯ ಆಸ್ತಿಯಾದ ಸಶಕ್ತ ಯುವಜನರೇ, ಸಾರ್ವಜನಿಕ ಸಾರಿಗೆಯಲ್ಲಿ ಪಯಣಿಸುವಾಗ ವೃದ್ಧರು ಮತ್ತು ಅಶಕ್ತರು ಕೂರಲು ಸ್ಥಳವಿಲ್ಲದೇ ನಿಂತಿದ್ದಾಗ, ಅದನ್ನು ಕಂಡು ಸಹಾ ನೀವು ಕುಳಿತೇ ಇದ್ದರೆ ನೀವು ಕಲಿತಿರುವ ವಿದ್ಯೆ, ನಿಮ್ಮ ಹಿರಿಯರು ಹೇಳಿಕೊಟ್ಟ ಸಂಸ್ಕಾರ ನಿರರ್ಥಕ. ನೀವೇ ಹೀಗಾದರೆ, ನಿಮ್ಮ ಮಕ್ಕಳು ಇನ್ನೆಂಥವರಾಗಿ ರೂಪುಗೊಳ್ಳಬಹುದು?’’ಎಂದವರೇ “ಇವತ್ತಿಗೆ ಸಾಕು. ಎದ್ದೇಳಿ, ಊಟ ರೆಡಿಯಾಗಿದೆ. ಊಟ ಮಾಡಿ, ನಾಳೆಯ ಕಾರ್ಯಕ್ರಮಕ್ಕೆ ನಿದ್ರೆ ಮಾಡಿ ಸಿದ್ಧರಾಗೋಣ” ಎಂದು ಫರ್ಮಾನು ಹೊರಡಿಸಿದರು.
ಮುಂದುವರಿಯುವುದು . . .
ಲೇಖನ: ಧನಂಜಯ ಜೀವಾಳ
ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ