ಬೆಳೆಸಬಲ್ಲ ವಜ್ರಗಳು!

ಬೆಳೆಸಬಲ್ಲ ವಜ್ರಗಳು!

ಬೆಳಕಿನ ಪರ್ವತಕೋಹಿನೂರ್ ವಜ್ರನಮ್ಮ ದೇಶದ ಬಹು ಪ್ರಸಿದ್ಧ ವಜ್ರ. ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ದೇಶವನ್ನು ದಾಟಿಸಲ್ಪಟ್ಟ ಈ ವಜ್ರ ಈಗ ಯುನೈಟೆಡ್ ಕಿಂಗ್ಡಮ್ ನ ರಾಣಿಯ ಕಿರೀಟದಲ್ಲಿ ಕೂತಿದೆ. ಇದು ನಮ್ಮ ದೇಶದ ಆಸ್ತಿ, ಅದನ್ನು ಹಿಂತಿರುಗಿಸಿ ಎಂದು ಭಾರತ 2023ರಲ್ಲೇ ಇಂಗ್ಲೆಂಡ್ ಗೆ ಕರೆ ನೀಡಿದೆ. ಇದು ನಮ್ಮದೇ ಎಂದು ನಾವು ಖಚಿತವಾಗಿ ಹೇಳುವ ಹಾಗೆಯೇ ಪಾಕಿಸ್ತಾನ, ಇರಾನ್ಮತ್ತು ಅಫ್ಘಾನಿಸ್ತಾನ್ ಕೂಡ ಹೇಳುತ್ತಿದೆ. ನಮ್ಮಲ್ಲಿ ಕೆಲವರು ಅಂದುಕೊಳ್ಳುವ ಹಾಗೆ ಈ ಕೋಹಿನೂರ್ ವಜ್ರ ಪ್ರಸಿದ್ಧಿಯೇ ಆದರೆ ಇದು ಪ್ರಪಂಚದ ಅತೀ ದೊಡ್ಡ ವಜ್ರ ಎಂದಲ್ಲ. 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭೂಮಿಯೊಳಗಿಂದ ತೆಗೆಯಲ್ಪಟ್ಟ ಕಲ್ಲಿನಾನ್ ವಜ್ರ (cullinan diamond)ಪ್ರಪಂಚದ ಅತಿ ದೊಡ್ಡ ವಜ್ರ. ಇದಾದ ಸುಮಾರು ಒಂದು ಶತಮಾನದ ವರೆಗೆ ಇಷ್ಟು ದೊಡ್ಡ ವಜ್ರ ಸಿಕ್ಕಿರಲಿಲ್ಲ. ಮೊನ್ನೆಯಷ್ಟೇ ಆಗಸ್ಟ್ 24ರಂದು ಬೋಟ್ಸ್ವಾನದಲ್ಲಿ ದೊರೆತ ವಜ್ರ ಈಗ ಭೂಮಿಯಿಂದ ಹೊರೆತೆಗೆದ 2ನೇ ಅತಿದೊಡ್ಡ ವಜ್ರವಾಗಿ ನಿಂತಿದೆ. ಇದೆಲ್ಲ ಈಗ ಏಕೆ ಎಂದರೇ..ವಜ್ರಗಳಿಗೆ ಬೆಲೆ ಬರುವುದೇ ಅವುಗಳ ವಿರಳತೆಯಿಂದ. ಅವುಗಳು ಏಕೆ ಅಷ್ಟು ವಿರಳ ಎಂದರೇ… ವಜ್ರಗಳು ಸ್ವಾಭಾವಿಕವಾಗಿ ಆಗಲು ಹಲವಾರು ವರ್ಷಗಟ್ಟಲೆ ಸಮಯದ ಜೊತೆಗೆ ವಿಪರೀತ ಉಷ್ಣಾಂಶ ಹಾಗೂ ಒತ್ತಡದ ವಾತಾವರಣ ಇರಬೇಕಾಗುತ್ತದೆ.

© LIONEL BONAVENTURE_AFP via Getty Images

ಇದನ್ನು ಹೇಗಾದರೂ ಮಾಡೀ ನಮ್ಮ ಪ್ರಯೋಗಶಾಲೆಯಲ್ಲೇ ತಯಾರಿಸಬಹುದೇ ಎಂಬ ವಿಜ್ಞಾನಿಗಳ ಗೀಳು ಈಗ ನಮಗೆ ದೊರೆಯುವ ಮಾನವ ನಿರ್ಮಿತ ವಜ್ರಗಳಿಗೆ ದಾರಿ ಮಾಡಿ ಕೊಟ್ಟಿವೆ. ಆದರೆ ವಜ್ರ ತಯಾರಿಸುವ ವಿಧಾನದಲ್ಲಿ ಅದೇ ಹೆಚ್ಚಿನ ಉಷ್ಣಾಂಶ ಹಾಗೂ ಒತ್ತಡ ಬೇಕಾಗುತ್ತದೆ. ಅದಕ್ಕೆ HTHP ವಿಧಾನವೆನ್ನುತ್ತಾರೆ. ಅಂದರೆ High Temperature High Pressure ವಿಧಾನ. ಆದರೆ ಈಗಷ್ಟೆ ಕಂಡುಕೊಂಡ ಹೊಸ ವಿಧಾನದಿಂದ ನಾವು ಪ್ರಯೋಗಾಲಯದಲ್ಲೇ ಕಡಿಮೆ ಉಷ್ಣ ಹಾಗೂ ಒತ್ತಡದಲ್ಲಿ ವಜ್ರಗಳನ್ನು ಬೆಳೆಯಬಹುದಂತೆ. ಅದು ಹೇಗೆ ಎಂದು ಮುಂದೆ ನೋಡೋಣ.

© Institute for Basic Science

   ಈ ವಿಧಾನದಲ್ಲಿ ದ್ರವ ರೂಪದಲ್ಲಿರುವ ಗ್ಯಾಲಿಯಮ್, ಕಬ್ಬಿಣ, ನಿಕ್ಕಲ್ ಮತ್ತು ಸಿಲಿಕಾನ್ ಗಳನ್ನು ಬಳಸಿ ಅದಕ್ಕೆ ಇಂಗಾಲ ಹೆಚ್ಚಿರುವ ಮೀಥೇನ್ ಗ್ಯಾಸ್ ಮತ್ತು ಹೈಡ್ರೋಜನನ್ನು ಸೇರಿಸುತ್ತಾರೆ. ಇಂಗಾಲದ ಅಣುಗಳು ದ್ರವ ರೂಪದ ಗ್ಯಾಲಿಯಮ್ ನಲ್ಲಿ ಸೇರಿ ವಜ್ರವಾಗುವ ಸ್ಪಟಿಕದ ರಚನೆಯಾಗಲು ಶುರುವಾಗುತ್ತದೆ. ಅದರಲ್ಲೂ ಸಿಲಿಕಾನ್ ಇಡೀ ವಿಧಾನವನ್ನು ಅಂದರೆ ವಜ್ರ ಆಗುವ ಕ್ರಿಯೆಯನ್ನು ಶುರು ಮಾಡುತ್ತದಂತೆ. ಈ ಮೇಲೆ ಹೇಳಿದ ಹಾಗೆ ಕೃತಕ ವಜ್ರವನ್ನು ತಯಾರಿಸುವಲ್ಲಿ HTHP ವಿಧಾನವನ್ನು ಹೆಚ್ಚು ಬಳಸುತಿದ್ದರು. ಇದರಲ್ಲಿ ಸುಮಾರು 5000000 ಪ್ಯಾಸ್ಕಲ್ ಹಾಗೂ 1400 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಇರುವ ತೀವ್ರ ವಾತಾವರಣದಲ್ಲಿ ತಯಾರಿಸಲಾಗುತ್ತದೆ. ಇದು ಸರಿಸುಮಾರು ಭೂಮಿಯಲ್ಲಿ ಸ್ವಾಭಾವಿಕವಾಗಿ ಆಗುವ ವಜ್ರದ ಸ್ಥಿತಿಗೆ ಸಮನಾಗಿರುತ್ತದೆ.

© (CC0) Sumit

ಆದರೆ ಈಗಿನ ಹೊಸ ವಿಧಾನದಲ್ಲಿ ಕಡಿಮೆ ಒತ್ತಡದಲ್ಲಿ ಅಂದರೆ ಕೇವಲ 1 ಪ್ಯಾಸ್ಕಲ್ ನಲ್ಲಿ ವಜ್ರವನ್ನು ಬೆಳೆಯುವುದರ ಜೊತೆಗೆ, 1025 ಡಿಗ್ರಿ ಸೆಲ್ಷಿಯಸ್ ನಷ್ಟು ಕಡಿಮೆ ಉಷ್ಣಾಂಶದಲ್ಲಿ ಸಾಧಿಸಬಹುದಂತೆ. HTHP ವಿಧಾನದ ಹಾಗೆ CVD ಎಂಬ Chemical Vapor Deposition ವಿಧಾನವನ್ನು ಬಳಸಿ ಕಡಿಮೆ ಒತ್ತಡದಲ್ಲಿ ಕೃತಕ ವಜ್ರವನ್ನು ತಯಾರಿಸುತ್ತರಾದರೂ ಈಗ ಕಂಡುಹಿಡಿದಿರುವ ವಿಧಾನಕ್ಕೆ ಹೋಲಿಸಿದರೆ CVD ವಿಧಾನವು ಭಾರಿ ದುಬಾರಿ ಹಾಗೂ ಸಂಕೀರ್ಣ ಪ್ರಕ್ರಿಯೆ. ಈ ಹೊಸ ವಿಧಾನದ ವಿವರಣೆ ಸ್ವಲ್ಪ ಕಡಿಮೆ ಎನಿಸಿದರೂ ಮುಂದೊಂದು ದಿನ ಈ ವಿಧಾನವೇ ಕೃತಕ ವಜ್ರ ತಯಾರಿಕೆ ಹಾಗೂ ಆಭರಣ ತಯಾರಿಕೆಯ ಮುಖ್ಯ ಹಸ್ತವಾಗುತ್ತದೆ ಎಂಬುದು ವಿಜ್ಞಾನಿಗಳ ನಂಬಿಕೆ ಹಾಗು ವಾದ.

ಈ ಹೊಸ ವಿಧಾನಗಳನ್ನು ಕಂಡು ಹಿಡಿದ ನಂತರ ಅತ್ಯಂತ ಒತ್ತಡಕ್ಕೆ ಒಳಗಾದ ಇದ್ದಿಲೇ ಕೊನೆಗೆ ವಜ್ರವಾಗಿ ಹೊರಹೊಮ್ಮುವುದುಎಂಬ ನಾಣ್ಣುಡಿಯನ್ನು ಬದಲಾಯಿಸಬೇಕೇನೋ. ವಿಧಾನ ಏನೇ ಆದರೂ ಒಮ್ಮೆ ವಜ್ರವಾದ ಮೇಲೆಅತ್ಯಂತ ಸುಂದರವಾಗಿ ಹೊಳೆಯುವ ವ್ಯಕ್ತಿತ್ವದೊಂದಿಗೆ ಎಷ್ಟೇ ಒತ್ತಡವನ್ನೂ ಒಡ್ಡಿದರೂ ಅದಕ್ಕೆ ಒಗ್ಗುವ ಮನೋಶಕ್ತಿಯನ್ನು ಹೊಂದಿದ್ದರೆ ಸಾಕು. ಇನ್ನೇನು ಬೇಕು?

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
   
ಬೆಂಗಳೂರು ನಗರ ಜಿಲ್ಲೆ

Spread the love
error: Content is protected.