ಖಗಲೋಕದ ಶಿಶು ಪೋಷಣಾಚರಣೆಗಳು
© ಗುರುಪ್ರಸಾದ್ ಕೆ. ಆರ್.
ಜೀವಲೋಕದ ನಿರಂತರತೆಗೆ ಜೀವಿಗಳು ತಮ್ಮತನವನ್ನು ಉಳಿಸಿಕೊಳ್ಳುತ್ತಾ, ತಮ್ಮ ದೈಹಿಕ ಅಳಿವಿನೊಂದಿಗೂ ತಮ್ಮ ಜೀವತತ್ವದ ಅಂಶವನ್ನು ಭೂಮಿಯ ಮೇಲೆ ಖಾಯಂಗೊಳಿಸಬೇಕೆಂದು ಹಲವು ವಿಧಾನಗಳನ್ನು ಅಭಿವೃದ್ಧಿ ಪಡಿಸಿಕೊಂಡಿವೆ. ಈ ವಿಧಾನಗಳು ವಿಕಾಸದ ಹಾದಿಯ ಕೆಳಸ್ತರದ ಜೀವಿಗಳಾದ ಸೂಕ್ಷ್ಮಾಣು ಜೀವಿಗಳಿಂದ ಇತ್ತೀಚಿನ ಜೀವಿಗಳಾದ ಮಾನವನವರೆಗೂ ಪ್ರಸ್ತುತವಿದ್ದರೂ ಇದರಲ್ಲಿ ವೈವಿಧ್ಯತೆಯನ್ನು ಕಾಣಬಹುದು. ಈ ವಿಧಾನಗಳ ಉದ್ದೇಶ ಪ್ರಜ್ಞಾಪೂರ್ವಕವಾಗಿಯೋ ಅಥವಾ ಸುಪ್ತವಾಗಿಯೋ ಪ್ರತಿ ಜೀವಿಗಳಲ್ಲೂ ತನ್ನತನವನ್ನು ಖಾಯಂ ಗೊಳಿಸುವುದೇ ಆಗಿರುತ್ತದೆ. ಇದರಲ್ಲಿ ಕೆಲವು ವಂಶವಾಹಿ ಸ್ಮರಣೆಯ ಆಧಾರದಿಂದಿರಬಹುದು, ಕೆಲವು ಜೀವಿಯ ಸುತ್ತಣ ಪರಿಸರದ ಕ್ರಿಯೆಗಳ ಮಾಹಿತಿಯಿಂದ ಇರಬಹುದು. ಯಾವುದೇ ಆದರೂ ಕೊನೆಯ ಅನ್ವಯವಂತೂ ಜೀವಿಯ ವಂಶವಾಹಿ ಅಂಶದ ಹೆಜ್ಜೆಯ ಗುರುತನ್ನು ಅಚ್ಚು ಮೂಡಿಸುವುದೇ ಆಗಿರುತ್ತದೆ. ಜೀವಿಗಳ ತಲೆಮಾರುಗಳ ಉಳಿವಿನ ಯಾತ್ರೆಯ ಚರಿತ್ರೆಯನ್ನು ಜೀವವಿಜ್ಞಾನದ ಕನ್ನಡಿಯ ಮೂಲಕ ಕಾಣ ಪ್ರಯತ್ನಿಸಿದರೆ ವಿಕಾಸದ ನಡಿಗೆಯನ್ನು ಆದಿಯಿಂದಲೇ ಪ್ರಾರಂಭಿಸಿದ ಸೂಕ್ಷ್ಮಾಣು ಜೀವಿಗಳಲ್ಲಿ ಜೀವಕೋಶದ ಅವಳಿ ವಿಧಳನ, ಕೋಶಹೊರ ಬೆಳವಣಿಗೆ, ಬೀಜಕಗಳ ಉತ್ಪಾದನೆ, ವಿಘಟನೆ ಮುಂತಾದವುಗಳು ಮುಖ್ಯವಾಗಿರುತ್ತವೆ. ವಿಕಾಸದ ಹಾದಿ ನಿಧಾನವಾಗಿ ಸವೆದಂತೆ ಲಿಂಗ ಪ್ರತ್ಯೇಕೀಕರಣ ಲೈಂಗಿಕ ಸಂತಾನೋತ್ಪತ್ತಿಯ ಪ್ರಧಾನತೆಯೆಡೆಗೆ ಸಾಗಿತು. ಆದ್ದರಿಂದಲೇ ವಿಕಾಸದಲ್ಲಿ ಮೇಲ್ಸ್ಥರದ ಜೀವಿಗಳೆಂದು ಕರೆಸಿಕೊಳ್ಳುವಂತಹ ಪ್ರಾಣಿ, ಪಕ್ಷಿ, ಉಭಯವಾಸಿ, ಸರಿಸೃಪಗಳಲ್ಲಿ ಈ ವಿಧಾನದ ಪ್ರಸ್ತುತತೆಯನ್ನು ಗಮನಿಸಬಹುದು. ಹೀಗೆಂದ ಮೇಲೆ ನಮ್ಮ ಲೇಖನದ ನಾಯಕ ನಾಯಕಿಯರಾದ ಖಗ ಶ್ರೀಮಾನ್ಯರು ಹೇಗೆ ಹಿಂದುಳಿಯಲು ಸಾಧ್ಯ! ಎಲ್ಲಾ ಜೀವಿಗಳಲ್ಲಿನ ಹಂಬಲ ಇವುಗಳಲ್ಲಿ ಇರದೇ ಇರಲು ಸಾಧ್ಯವೇ? ಆದ್ದರಿಂದ ಇವುಗಳಲ್ಲೂ ಸಂಕೀರ್ಣ ಜೀವ ಕ್ರಿಯೆಗಳು ಏರ್ಪಟ್ಟವು ಅದರಲ್ಲಿ ಒಂದೆಂದರೆ ಶಿಶು ಪೋಷಣ ವಿಧಾನ.
ನಮ್ಮ ಅರಣ್ಯ ಕಾಲೇಜಿನ ವನ್ಯಜೀವಿ ಅಧ್ಯಾಪಕರಾದ ಶ್ರೀಧರ ಭಟ್ಟರು ತಮ್ಮ ಮನೆಯಲ್ಲಿ ಗೂಡು ಕಟ್ಟುತ್ತಿದ್ದ ಸೂರಕ್ಕಿಗಳ (Sunbirds) ನಡವಳಿಕೆಯ ಬಗ್ಗೆ ಹೇಳುತ್ತಾ ಗೂಡು ಕಟ್ಟುವುದರಲ್ಲಿ ಮಗ್ನತೆ ಹೆಣ್ಣು ಪಕ್ಷಿಯು ಜಾಸ್ತಿ ತೋರುತ್ತಿದ್ದುದ್ದಾಗಿಯೂ ಗಂಡು ಪಕ್ಷಿಯು ಸೇರಿಕೊಂಡಿದ್ದರೂ ಅಷ್ಟೊಂದು ಮಗ್ನತೆಯನ್ನು ಇರಲಿಲ್ಲವೆಂದೂ ಗಂಡು ಪಕ್ಷಿಯು ಹೆಣ್ಣು ಪಕ್ಷಿಗೆ ಪರವಾಗಿಲ್ಲ ಚೆನ್ನಾಗಿ ಕಟ್ಟುತ್ತಿದ್ದೀಯಾ ಎಂದು ಪ್ರೋತ್ಸಾಹಿಸುವುದರಲ್ಲಿ ತೊಡಗಿದ್ದಂತೆ ತೋರುತ್ತಿತ್ತು ಎಂದು ಹೇಳಿದ್ದರು.
ಸೂರಕ್ಕಿಗಳು ತುಂಬಾ ಸಣ್ಣದೈಹಿಕ ಗಾತ್ರದ ವೇಗ ಚಲನೆಯುಳ್ಳ ಪಕ್ಷಿಗಳು. ಇವುಗಳು ವೈರಿಗಳಿಂದ ತನ್ನ ಸಂತಾನ ರಕ್ಷಣಾ ಉದ್ದೇಶದಿಂದ ಹಾಗೂ ಸಂತಾನಭಿವೃದ್ಧಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮನುಷ್ಯನ ಆವಾಸಸ್ಥಾನಗಳ ಹತ್ತಿರದಲ್ಲಿ ಗೂಡುಗಳನ್ನು ಕಟ್ಟುತ್ತವೆ. ಇವುಗಳಲ್ಲಿ ಹೇಗೆ ಗೂಡಿನ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಗಂಡು-ಹೆಣ್ಣು ಪಕ್ಷಿಗಳು ತೊಡಗಿಸಿಕೊಳ್ಳುವುದರಲ್ಲಿ ವ್ಯತ್ಯಾಸವಿದೆಯೋ ಹಾಗೆ ಶಿಶು ಪೋಷಣೆ, ಶಿಶುಗಳೊಂದಿಗೆ ಬಾಂಧವ್ಯದ ಅವಧಿ ಮುಂತಾದವುಗಳ ವರ್ತನೆಯಲ್ಲಿ ಲಿಂಗ ಸಂಬಂಧಿ, ಪ್ರಭೇದ ಸಂಬಂಧಿ ವಿಭಿನ್ನತೆಯನ್ನು ಕಾಣಬಹುದು. ಖಗಲೋಕದ ಹೆಚ್ಚಿನ ಪ್ರಜಾತಿಗಳಲ್ಲಿ ಶಿಶು ಪೋಷಣ ಕಾರ್ಯದಲ್ಲಿ ಗಂಡು-ಹೆಣ್ಣು ಪಕ್ಷಿಗಳೆರಡೂ ತೊಡಗುವುದನ್ನು ಕಾಣಬಹುದು. ಈ ಪ್ರಕ್ರಿಯೆ ಮಸ್ತಿಷ್ಕದಲ್ಲಿ ನ್ಯುರೋಎಂಡೋಕ್ರೈನಲ್ ಕ್ರಿಯೆಗಳಿಂದ ಉತ್ತೇಜಕವಾಗಿರುತ್ತದೆ. ಇದು ಸಂತತಿಯ ಉಳಿವು, ಬೆಳವಣಿಗೆ, ಸಾಮಾಜಿಕ ಬಾಂಧವ್ಯ, ತಲೆಮಾರುಗಳ ನಡುವಿನ ಕಲಿಕೆ, ಸಂತಾನೋತ್ಪತ್ತಿಯ ಯಶಸ್ಸು ಅಂತಿಮವಾಗಿ ಪ್ರಭೇದದ ವಿಕಾಸ ಉಳಿವಿನ ಯುಕ್ತಿಯ ಆಧಾರವಾಗಿರುತ್ತದೆ. ಪಕ್ಷಿಗಳು ಆಂತರಿಕ ಗರ್ಭಧಾರಣೆ ಹಾಗೂ ಬಾಹ್ಯ ಬೆಳವಣಿಗೆ ವಿಧಾನದ ರೀತಿಯಲ್ಲಿ ವಿಕಾಸಗೊಂಡಿದ್ದು. ಶಿಶು ಪೋಷಣೆಯು ತತ್ತಿಯ ಬಾಹ್ಯ ವಾತಾವರಣವನ್ನು ಪ್ರವೇಶಿಸಿದ ನಂತರ ಆರಂಭವಾಗುವ ಪ್ರಕ್ರಿಯೆ ಎನ್ನಬಹುದು. ಇದು ತತ್ತಿಯ ಶಾಖವನ್ನು ಪಕ್ಷಿಯ ದೇಹ ಶಾಖಕ್ಕೆ ಸಮಾನವಾಗಿ ಕಾಪಾಡುವುದು (ಇನ್ಕ್ಯುಬೇಷನ್) ತತ್ತಿಯಿಂದ ಬೆಳೆದು ಹೊರಬಂದ ಮರಿಗಳಿಗೆ ನಂತರ ರಕ್ಷಣೆ, ಉಪಚಾರ, ಕಲಿಕೆ, ಮೇವು ಒದಗಿಸುವ ಕ್ರಿಯೆಯನ್ನು ಒಳಗೊಂಡಿರುತ್ತದೆ.
ಸುಮಾರು 50 ಮಿಲಿಯನ್ ವರ್ಷಗಳ ಹಿಂದೆ ದೇಹಾಂಗಗಳು ಕಿರಿದಾಗಿ ರಚನೆಗೊಳ್ಳುವುದರ ಮೂಲಕ ತೆರಪೊಯ್ಡ್ ಡೈನೋಸರ್ ಗಳಿಂದ ಉಗಮಗೊಂಡವು. Archaeopteryx ಗರಿಗಳೊಂದಿಗೆ ವಿಕಾಸಗೊಂಡ ಮೊದಲ ಪಕ್ಷಿ ಪ್ರಭೇದ. ಇದರ ಮುಂಗೈಗಳು ಸಂಪೂರ್ಣ ರೆಕ್ಕೆಗಳಾಗಿ ಮಾರ್ಪಟ್ಟಿರಲಿಲ್ಲ ಕೇವಲ ಬೆರಳುಗಳನ್ನು ಕಾಣಬಹುದಾಗಿತ್ತು ಆದ್ದರಿಂದ ವಿಜ್ಞಾನಿಗಳು ಶಿಶು ಪಾಲನೆಯಲ್ಲಿ ತನ್ನ ಕೈಗಳನ್ನು ಬಳಸಿರಬಹುದು ಎಂದು ತರ್ಕಿಸುತ್ತಾರೆ.
ಶಿಶು ಪೋಷಣಾ ವಿಧಾನಗಳು: ಶಿಶು ಪಾಲನಾ ಕ್ರಿಯೆಯಲ್ಲಿ ಪೋಷಕಜೀವಿಗಳು ತಮ್ಮ ಸಂತತಿಯ ಪೋಷಣೆಯ ಕ್ರಿಯೆಯಲ್ಲಿ ವ್ಯಯಿಸುವ ಅಥವಾ ಉಪಯೋಗಿಸುವ ಸಮಯ, ಶಕ್ತಿಯ ಆಯವ್ಯಯದ ಪ್ರಮಾಣ ದುಬಾರಿಯಾಗಿಯೇ ಇರುತ್ತದೆ. ಆದ್ದರಿಂದ ಎಲ್ಲ ಜೀವಿಗಳು ಈ ಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಕೈಗೊಳ್ಳುತ್ತವೆ.
ದ್ವಿಪೋಷಕ ಶಿಶುಪೋಷಣೆ: ಗಂಡು ಮತ್ತು ಹೆಣ್ಣು ಪಕ್ಷಿಗಳು ಸೇರಿಕೊಂಡು ಶಿಶುಪೋಷಣ ಕಾರ್ಯದಲ್ಲಿ ತೊಡಗುವ ವಿಧಾನವಾಗಿದ್ದು, ಈ ವಿಧಾನವನ್ನು ಪಕ್ಷಿ ಲೋಕದ ಶೇಕಡ 85ರಷ್ಟು ಪಕ್ಷಿಗಳಲ್ಲಿ ಗಮನಿಸಬಹುದು. ವಿಶೇಷವಾಗಿ ಪ್ಯಾಸ್ಸೇರಿನೇ ಗುಂಪಿಗೆ ಸೇರಿದ ಪಕ್ಷಿಗಳಲ್ಲಿ ಕಾಣಬಹುದು. ಈ ವಿಧಾನವನ್ನು ಅನುಸರಿಸುವ ಪಕ್ಷಿಗಳು ತಮ್ಮ ಸಂಗಾತಿಯನ್ನು ಆಯ್ದುಕೊಳ್ಳುವ ಸಂದರ್ಭದಲ್ಲಿ ಹೆಚ್ಚಿನ ಪೋಷಕ ಕೌಶಲ್ಯವನ್ನು ಹೊಂದಿರುವ ಸಂಗಾತಿಯನ್ನು ಆಯ್ದುಕೊಳ್ಳುತ್ತವೆ. ಹಿತಕಾರಿ ಪೋಷಕ ಕಲ್ಪಿತ ಸಿದ್ಧಾಂತದ ಪ್ರಕಾರ ಈ ಕ್ರಿಯೆಯು ಪಕ್ಷಿಗಳು ಉತ್ತಮ ಸಂಗಾತಿಯನ್ನು ಆಯ್ದುಕೊಳ್ಳುವ ಮೂಲಕ ತಮ್ಮ ಹೆಚ್ಚಿನ ಶಕ್ತಿಯನ್ನು ತಮ್ಮ ವೈಯಕ್ತಿಕ ಉಳಿವಿನ ವೃದ್ಧಿಗೆ ವ್ಯಯಿಸಿದಂತೆ ಎಂದು ಪ್ರತಿಪಾದಿಸುತ್ತದೆ. ಪೋಷಣ ಸಾಮರ್ಥ್ಯವನ್ನು ಜಾಹಿರುಪಡಿಸಲು ದೈಹಿಕವಾಗಿ ವಿಶೇಷ ರಚನೆಗಳು ಸುಳಿವಾಗಿರುತ್ತದೆ. ಉದಾಹರಣೆಗೆ ಐಬೇರಿಯನ್ ರಾಕ್ ಸ್ಪಾರೋ ಎದೆಯ ಮೇಲಿನ ಅರಿಶಿಣ ಬಣ್ಣದ ಗುರುತು ಪ್ರತ್ಯೇಕ ಹಂಚಿಕೆ ಸಿದ್ಧಾಂತದ ಪ್ರಕಾರ ಈ ರಚನೆಯ ಗಾತ್ರವು ಪಕ್ಷಿಯ ಪೋಷಣ ಕಾರ್ಯಕ್ಕೆ ವ್ಯಯಿಸುವ ಶಕ್ತಿಯೊಂದಿಗೆ ಹೊಂದಿಕೆ ಇರುತ್ತದೆ ಎಂದು ಪ್ರತಿಪಾದಿಸುತ್ತದೆ. ಹಾಗೆ ಕೆಲ ಪ್ರಯೋಗಗಳು ಕೇವಲ ಒಂದು ಪೋಷಕರಿಂದ ಪೋಷಿಸಲ್ಪಟ್ಟ ಐಬೇರಿಯನ್ ರಾಕ್ ಸ್ಪಾರೋಗಳು ದ್ವಿಪೋಷಕ ಸಂತತಿಗೆ ಹೋಲಿಸಿದರೆ ದುರ್ಬಲವಾಗಿರುತ್ತದೆ ಎಂದು ಸಾಬೀತುಪಡಿಸಿವೆ. ಸಾಮಾನ್ಯವಾಗಿ ದ್ವಿಪೋಷಕ ವಿಧಾನದಲ್ಲಿ ಗಂಡು ಪಕ್ಷಿಯು ಪ್ರಮುಖವಾಗಿ ಆಹಾರ ಸಂಪಾದಿಸಿ, ಹೆಣ್ಣು ಪಕ್ಷಿ ಹಾಗೂ ಮರಿಗಳಿಗೆ ನೀಡುವ ಜವಾಬ್ದಾರಿಯನ್ನು ನಿಭಾಯಿಸಿದರೆ ಹೆಣ್ಣು ಪಕ್ಷಿಯು ತನ್ನ ಸಂತತಿಯನ್ನು ಹೊರಗಿನ ವಾತಾವರಣದಿಂದ, ವೈರಿಗಳಿಂದ ರಕ್ಷಿಸುವ ಕಾರ್ಯವನ್ನು ಮಾಡುತ್ತದೆ. ಇದಕ್ಕೆ ವಿರೋಧಾಭಾಸವೆಂಬಂತೆ ದಕ್ಷಿಣ ಅಮೆರಿಕದ ಅಮೆಝೋನ್ ಕಾಡುಗಳಲ್ಲಿ ಕಂಡುಬರುವ ಕೆಂಪು ಕಣ್ಣಿನ ವಿರ್ವ್ ಪಕ್ಷಿಗಳಲ್ಲಿ ಈ ಕ್ರಿಯೆಯು ವಿಪರ್ಯಯಗೊಂಡಿರುವುದನ್ನು ಕಾಣಬಹುದು. ಉತ್ತರ ಅಮೆರಿಕ ಖಂಡದಲ್ಲಿ ಕಂಡುಬರುವ ಅಕ್ರೋನ್ ಮರಕೋಟಿಗಳಲ್ಲಿ ಸಂತಾನೋತ್ಪತ್ತಿ ಹಂತ ತಲುಪದ ಅರೆ ವಯಸ್ಕ ಪಕ್ಷಿಗಳೂ ತಮ್ಮ ಪೋಷಕರೊಂದಿಗೆ ಶಿಶು ಪಾಲನಾ ಕ್ರಿಯೆಯಲ್ಲಿ ಕೈಜೋಡಿಸುವುದನ್ನು ಕಾಣಬಹುದು.
ಏಕಾಪೋಷಕ ಶಿಶುಪೋಷಣೆ: ಪಕ್ಷಿ ಲೋಕದಲ್ಲಿ ಕೇವಲ ಶೇಕಡ 1ರಷ್ಟು ಪ್ರಭೇದಗಳಲ್ಲಿ (90 ಪ್ರಜಾತಿ) ಕೇವಲ ಗಂಡು ಪಕ್ಷಿಯಿಂದ ಮಾತ್ರ ಶಿಶು ಪೋಷಣ ಕ್ರಿಯೆಯನ್ನು ನಡೆಸಲ್ಪಡುತ್ತದೆ. ಕೇವಲ ಹೆಣ್ಣು ಪಕ್ಷಿಯಿಂದ ಮಾತ್ರ ಪೋಷಣೆ ಶೇಕಡ 8ರಷ್ಟು ಪಕ್ಷಿ ಪ್ರಜಾತಿಗಳಲ್ಲಿ (772 ಪ್ರಜಾತಿ) ನಡೆಯುತ್ತದೆ. ಒಂದು ಸಿದ್ಧಾಂತದ ಪ್ರಕಾರ ಗಂಡು-ಹೆಣ್ಣು ಪಕ್ಷಿಗಳಲ್ಲಿ ಯಾವುದು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಕಡಿಮೆ ಶಕ್ತಿ ವ್ಯಯ ಮಾಡುತ್ತದೆ ಅದು ಕ್ರಿಯೆಯನ್ನು ಪೂರ್ಣಗೊಳಿಸದೆ ಕ್ರಿಯೆಯನ್ನು ತೊರೆಯುವ ಸಾಧ್ಯತೆಯನ್ನು ಹೆಚ್ಚಾಗಿ ಹೊಂದಿರುತ್ತದೆ. ಏಕೆಂದರೆ ತನ್ನ ಸಂತತಿಯ ಉಳಿವು ಯಶಸ್ವಿಯಾಗದಿದ್ದರೂ ತನ್ನ ಸಂಗಾತಿಗೆ ಹೋಲಿಸಿದರೆ ಆ ಪಕ್ಷಿಯು ಕಳೆದುಕೊಳ್ಳುವಂತಹ ಶಕ್ತಿಯ ಪ್ರಮಾಣ ಕಡಿಮೆಯಾಗಿರುತ್ತದೆ.
ಪಕ್ಷಿಲೋಕದ ಶೇಕಡ 9 ರಷ್ಟು ಪ್ರಭೇದಗಳಲ್ಲಿ (852 ಪ್ರಬೇಧ) ಬಹು ಪತಿತ್ವವನ್ನು ಅನುಸರಿಸುವುದನ್ನು ಕಾಣಬಹುದು. ಬಹು ಪತಿತ್ವದಲ್ಲಿ ಒಂದು ಹೆಣ್ಣು ಪಕ್ಷಿಯು ಹಲವು ಗಂಡು ಪಕ್ಷಿಗಳೊಂದಿಗೆ ಸಂತಾನಾಭಿವೃದ್ಧಿ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ. ಆದರೆ ಒಂದು ಗಂಡು ಪಕ್ಷಿಯು ಒಂದು ಹೆಣ್ಣು ಪಕ್ಷಿಯೊಂದಿಗೆ ಮಾತ್ರ ಪಾಲ್ಗೊಳ್ಳುವುದು. ವಿಕಾಸವು ಈ ದಿಕ್ಕಿನಲ್ಲಿ ಸಾಗಲು ಹೆಣ್ಣು ಪಕ್ಷಿಗಳ ಸಂಖ್ಯೆಯ ಕೊರತೆಯೂ ಕಾರಣವಿರಬಹುದು ಏನೋ? ಹೀಗಿರುವಾಗ ಗಂಡು ಪಕ್ಷಿಗಳು ತನ್ನ ಸಂತಾನವನ್ನು ಸ್ಥಾಪಿಸಲು ಹೆಣ್ಣು ಪಕ್ಷಿಗಳಿಗಿಂತ ಸ್ವಲ್ಪ ಹೆಚ್ಚಿನ ಶಕ್ತಿಯನ್ನು ವಹಿಸಬೇಕು. ಬಹುಪತಿತ್ವದಲ್ಲಿ ಎರಡು ವಿಧಗಳನ್ನು ಗಮನಿಸಬಹುದು ಒಂದು ಕ್ರಮಾನುಗತ ಬಹುಪತಿತ್ವ ಹಾಗೂ ಇನ್ನೊಂದು ಏಕಕಾಲಿಕ ಬಹುಪತ್ನಿತ್ವ ಕ್ರಮಾನುಗತ ಬಹುಪತ್ನಿತ್ವದಲ್ಲಿ ಹೆಣ್ಣು ಪಕ್ಷಿಯು ಒಂದು ಗಂಡು ಪಕ್ಷಿಯೊಂದಿಗೆ ಸಂತತಿಯನ್ನು ಬೆಳೆಸಿದ ನಂತರ ಮತ್ತೊಂದು ಗಂಡು ಪಕ್ಷಿಯೊಂದಿಗೆ ಸಂತತಿಯನ್ನು ಬೆಳೆಸುವುದು. ಈ ಮೂಲಕ ಹೆಣ್ಣು ಪಕ್ಷಿಯ ವಂಶವಾಹಿಯ ಹೆಚ್ಚು ವೈವಿಧ್ಯವಾಗಿ ಸ್ಥಾಪಿತ ಗೊಳ್ಳುತ್ತದೆ. ಈ ವಿಧಾನದಲ್ಲಿ ಪೋಷಕ ಪಾತ್ರಗಳು ವಿಪರ್ಯಯಗೊಂಡು ಗಂಡು ಪಕ್ಷಿಗಳು ತನ್ನ ಸಂತತಿಯ ಪೋಷಣೆಯಲ್ಲಿ ಹೆಚ್ಚು ತೊಡಗಿಕೊಳ್ಳುವುದನ್ನು ಕಾಣಬಹುದು. ವಿಪರ್ಯಯತೆಯನ್ನು ದೈಹಿಕ ವ್ಯತ್ಯಾಸದಲ್ಲಿಯೂ ಇದ್ದು ಸಾಮಾನ್ಯವಾಗಿ ಇತರೆ ವಿಧಾನವನ್ನು ಅನುಸರಿಸುವಂತಹ ಪಕ್ಷಿಗಳಲ್ಲಿ ಗಂಡು ಪಕ್ಷಿಗಳು ದೈಹಿಕವಾಗಿ ವರ್ಣಮಯವಾಗಿರುತ್ತವೆ ಆದರೆ ಇವುಗಳಲ್ಲಿ ಹೆಣ್ಣು ಪಕ್ಷಿಗಳು ಹೆಚ್ಚು ವರ್ಣಮಯವಾಗಿರುತ್ತವೆ. ಏಕಕಾಲಿಕ ಬಹುಪತ್ನಿತ್ವದಲ್ಲಿ ಹೆಣ್ಣು ಪಕ್ಷಿಯು ಆವಾಸಸ್ಥಾನದ ಕೆಲ ಭಾಗಗಳನ್ನು ಅಧೀನದಲ್ಲಿಟ್ಟುಕೊಳ್ಳುತ್ತದೆ. ಇದರೊಳಗೆ ಹಲವು ಸಣ್ಣ ಗೂಡುಗಳು ಹಾಗೆ ಗಂಡು ಪಕ್ಷಿಗಳು ವಾಸವಾಗಿರುತ್ತವೆ. ಹೆಣ್ಣು ಪಕ್ಷಿಗಳು ಗಂಡು ಪಕ್ಷಿಗಳಿಗೆ ಹಾಗೂ ಆವಾಸಸ್ಥಾನದ ಅಧೀನತೆಗೆ ಪೈಪೋಟಿಯನ್ನು ನಡೆಸುತ್ತವೆ. ಹೆಣ್ಣು ಪಕ್ಷಿಗಳು ಹಲವು ಗಂಡು ಪಕ್ಷಿಗಳೊಂದಿಗೆ ಏಕಕಾಲದಲ್ಲಿ ಕೂಡುತ್ತವೆ ಹಾಗೂ ಗಂಡು ಪಕ್ಷಿಗಳ ಗೂಡಿನಲ್ಲಿ ಮೊಟ್ಟೆಯನ್ನು ಇರಿಸುತ್ತವೆ. ಈ ವಿಧಾನವನ್ನು ಜಕಾನಾ ಪ್ರಭೇದಗಳಲ್ಲಿ ಕಾಣಬಹುದು. ಕ್ರಮಾನುಗತ ಬಹುಪತ್ನಿತ್ವದಲ್ಲಿ ಹೆಣ್ಣು ಪಕ್ಷಿಯು ಒಂದು ಗಂಡು ಪಕ್ಷಿಯೊಂದಿಗೆ ಕೂಡಿ ತತ್ತಿಯ ರಕ್ಷಣೆಯ ಜವಾಬ್ದಾರಿಯನ್ನು ಗಂಡು ಪಕ್ಷಿಗೆ ಬಿಟ್ಟು ಇನ್ನೊಂದು ಗಂಡು ಪಕ್ಷಿಯೊಂದಿಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಲು ಸಾಗುತ್ತದೆ. ಈ ವಿಧಾನವನ್ನು ದಕ್ಷಿಣ ಅಮೇರಿಕಾದಲ್ಲಿ ಕಂಡು ಬರುವ ಸ್ಪಾಟೆಡ್ ಸ್ಯಾಂಡ್ ಪೈಪರ್ ಗಳಲ್ಲಿ ಕಾಣಬಹುದು.
ಶಿಶು ಪೋಷಣ ಕ್ರಿಯೆ ಮೇಲೆ ಪ್ರಭಾವ ಬೀರುವ ಅಂಶಗಳಲ್ಲಿ ಮುಖ್ಯವಾದದು ಗಂಡು ಮತ್ತು ಹೆಣ್ಣು ಪಕ್ಷಿಗಳ ಸಂಖ್ಯಾ ಅನುಪಾತ. ರಾಕ್ ಸ್ಪಾರೋಗಳ ಮೇಲೆ ನಡೆದ ಅಧ್ಯಯನವೊಂದು ಹೆಣ್ಣು ಪಕ್ಷಿಗಳು ಅಧಿಕ ಸಂಖ್ಯೆಯು ಗಂಡು ಪಕ್ಷಿಯುಳ್ಳ ವಾತಾವರಣಕ್ಕೆ ತೆರೆದುಕೊಂಡರೆ ಸರಿಸುಮಾರು ಶೇಕಡ 50 ರಷ್ಟು ಹೆಣ್ಣು ಪಕ್ಷಿಗಳು ಸಾಮನ್ಯವಾಗಿ ಪೋಷಿಸಬೇಕಿದ್ದ ಸಮಯಕ್ಕಿಂತಲೂ ಮೊದಲೇ ಕ್ರಿಯೆಯನ್ನು ತೊರೆದು ಹೋದದ್ದನ್ನು ಹಾಗು ಪೋಷಣಾ ಜವಾಬ್ದಾರಿಯನ್ನು ಗಂಡುಪಕ್ಷಿಗಳು ನಿಭಾಯಿಸಿದ್ದನ್ನು ದಾಖಲಿಸಿ ಕೊಳ್ಳಲಾಗಿದೆ.
ಹೆಣ್ಣು ಪಕ್ಷಿಗಳು ತನ್ನ ಸಂತತಿಯ ಲಿಂಗ ನಿರ್ಧರಿಸಬಲ್ಲವು: ಮಾನವರಲ್ಲಿ ಗಂಡು ಜೀವಿಯ ವೀರ್ಯದಲ್ಲಿ ಸಂತತಿಯ ಲಿಂಗ ನಿರ್ಧರಿಸುವಂತಹ ವಂಶವಾಹಿ ತತ್ವಗಳಿವೆ. ಆದರೆ ಪಕ್ಷಿಗಳಲ್ಲಿ ಇದಕ್ಕೆ ವಿರುದ್ಧವಾಗಿ ಹೆಣ್ಣು ಪಕ್ಷಿಗಳು ಸಂತತಿಯ ಲಿಂಗವನ್ನು ನಿರ್ಧರಿಸುವಂತಹ ನಿರ್ಧಾರಕ ವಿಚಾರಕ ವಂಶವಾಹಿ ತತ್ವ ಅಂಶವನ್ನು ಹೊಂದಿರುತ್ತವೆ. ಮಾನವರಂತೆ ಪಕ್ಷಿಗಳಲ್ಲೂ ಪ್ರಜ್ಞಾಪೂರ್ವಕವಾಗಿ ಸಂತಾನದ ಲಿಂಗ ನಿರ್ಧಾರ ಸಾಧ್ಯವಿಲ್ಲದಿದ್ದರೂ, ಕೆಲವು ಸನ್ನಿವೇಶಗಳು ಲಿಂಗ ನಿರ್ಧಾರದ ಸಂಭವ್ಯತೆಯನ್ನು ಹೆಚ್ಚಿಸುವುದು ತಿಳಿದುಬಂದಿದೆ. ಸೇಂಟ್ ಅಂಡರ್ಸನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ಉತ್ತಮ ಪೋಷಕಾಂಶಗಳನ್ನು ಒಳಗೊಂಡ ಆಹಾರವನ್ನು ಸೇವಿಸಿದ ಜೀಬ್ರಾ ಪಿಂಚ್ ಪಕ್ಷಿಗಳು ಹೆಣ್ಣು ಸಂತಾನವನ್ನು ಹೆಚ್ಚಾಗಿ ಹಾಗೂ ಕಡಿಮೆ ಪೋಷಕಾಂಶ ಉಳ್ಳ ಆಹಾರವನ್ನು ಸೇವಿಸಿದ ಪಕ್ಷಿಗಳು ಗಂಡು ಸಂತತಿಯನ್ನು ಹೆಚ್ಚಿನದಾಗಿ ಜನ್ಮ ನೀಡಿರುವುದು ಅಧ್ಯಯನದಲ್ಲಿ ಸಾಬೀತಾಗಿದೆ. ಹೆಣ್ಣು ಪಕ್ಷಿಗಳಿಗೆ ಶಿಶು ಹಂತದಿಂದಲೂ ಹೆಚ್ಚಿನ ಆರೈಕೆ ಹಾಗೂ ಪೋಷಣೆಯ ಅವಶ್ಯಕತೆ ಇರುವುದರಿಂದ ಆಹಾರದ ಕೊರತೆ ಇರುವ ಕಾಲದಲ್ಲಿ ಸಂತತಿಯು ಸೊರಗಲು ಕಾರಣವಾಗಬಹುದಾದ್ದರಿಂದ ಈ ರೀತಿಯ ವಿಕಾಸವೆಂದು ಊಹಿಸಲಾಗಿದೆ. ಇದನ್ನು ಜನ್ಮ ಪೂರ್ವ ಪೋಷಕ ಆರೈಕಾ ವ್ಯವಸ್ಥೆಯೆಂದು ಕರೆಯಬಹುದು.
ಆವಾಸ ಪರಾವಲಂಬಿಗಳು: ಇದು ತಮ್ಮ ತತ್ತಿಯನ್ನು ಇತರೆ ಪಕ್ಷಿಗಳ ಗೂಡಿನಲ್ಲಿಟ್ಟು, ತನ್ನ ಸಂತತಿಯನ್ನು ಇತರೆ ಪಕ್ಷಿಗಳು ಬೆಳೆಸುವುದರ ಮೇಲೆ ಅವಲಂಬಿಸಿ ಶಿಶು ಪಾಲನಾ ಕ್ರಿಯೆಯಲ್ಲಿ ವ್ಯಯವಾಗುವ ಶಕ್ತಿಯನ್ನು ರಕ್ಷಿಸಿಕೊಳ್ಳುವ ವಿಧಾನವಾಗಿದ್ದು, ಇದನ್ನು ಪ್ರಭೇದಗಳ ನಡುವಿನ ಪರಾವಲಂಬಿತನಾ ಪ್ರಭೇದದೊಳಗಿನ ಪ್ರಾವಲಂಬಿತ ಎಂಬುದಾಗಿ ವಿಂಗಡಿಸಲಾಗಿದೆ. ಪರಾವಲಂಬಿ ಕ್ರಿಯೆಯನ್ನು ಅರ್ಥೈಸಿಕೊಳ್ಳಲು ಕೆಲವು ಕಲ್ಪಿತ ಸಿದ್ದಾಂತಗಳು ವಿವರಿಸಲ್ಪಟ್ಟಿದ್ದು ಇವುಗಳಲ್ಲಿ ಮಾಫಿಯಾ ಸಿದ್ದಾಂತ, ಸಾಮ್ಯತೆ ಸಿದ್ದಾಂತ ಕೆಲವು ಪ್ರಸಿದ್ಧವಾದವು ಈ ವಿಷಯದ ಮೇಲೆ ವಿವರಣಾತ್ಮಕವಾಗಿ ಒಂದು ಲೇಖನವನ್ನು ರಚಿಸಬಹುದಾದಷ್ಟು ವಿಶಾಲವಾದ ವಿಷಯವಾಗಿದೆ.
ಲೇಖನ: ರಜತ್ ಕುಮಾರ್
ಚಿಕ್ಕಮಗಳೂರು ಜಿಲ್ಲೆ