ಅದೊಂದು ಬೇರೆಯದೇ ಅನುಭೂತಿ
© ಧನರಾಜ್ ಎಂ.
ಮುಂದುವರಿದ ಭಾಗ
ಎಷ್ಟು ದೂರ ನಡೆಯಬೇಕು, ಎಂಥ ಹಾದಿಯಲ್ಲಿ ನಡೆಯಬೇಕು, ಎಷ್ಟು ಹೊತ್ತಿಗೆ ಮುಗಿಸಿ ಹಿಂದಿರುಗಬೇಕು. ಕಾಡಿನಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನೆಲ್ಲ ಮೋಹನ್ ರಾಜ್ ಹಾಗೂ ಗೈಡ್ ಚಂದ್ರೇಗೌಡರು ಹೇಳಿದರು. ಈ ಚಂದ್ರೇಗೌಡರು ಔಷಧೀಯ ಸಸ್ಯಗಳ, ಅಪ್ಪುಸಸ್ಯಗಳ ಬಗೆಗೆ ಅಪೂರ್ವ ತಿಳುವಳಿಕೆಯಿರುವವರು. ಕೀಟ, ಪ್ರಾಣಿ-ಪಕ್ಷಿಗಳ ಬಗ್ಗೆ ಜ್ಞಾನ ಇರುವವರು, ಅರಣ್ಯಶಾಸ್ತ್ರದಲ್ಲಿ ಅನುಭವವಿರುವವರು, ಹಾಗೆಂದ ಮಾತ್ರಕ್ಕೆ ಅವರೇನೂ ಯೂನಿವರ್ಸಿಟಿಯಿಂದ ಬಂದವರಲ್ಲ, ಸ್ಥಳೀಯ ಪ್ರಜ್ಞಾವಂತರಾದವರಿದ್ದರೆ ಚಾರಣ ಒಂದು ಪದವಿಯಾನದಷ್ಟೇ ಅರ್ಥಪೂರ್ಣ. ತನ್ನೊಡನೆ ತನ್ನದೇ ವೇಗದಲ್ಲಿ ನಡೆಯುತಿದ್ದ ಒಂದಷ್ಟು ಜನ ಹುಡುಗ ಹುಡುಗಿಯರಿಗೆ, “ಒಂದೂ ಒಂದೂ ಸೇರಿದರೆ ಎರಡೇ? ಅಥವಾ ಒಂದೇ?” ಎಂದು ಚಂದ್ರೇಗೌಡರು ಕೇಳಿದ್ದಕ್ಕೆ ಇದ್ದಬದ್ದವರೆಲ್ಲಾ ಒಕ್ಕೊರಲಿನಿಂದ ಗಟ್ಟಿ ದನಿಯಲಿ ಎರಡೂ ಎಂದು ಕೂಗಿದರು. “ಎಲ್ಲಿಂದಲೋ ಹರಿದು ಬಂದ ಎರಡು ತೊರೆಗಳು ಸೇರಿದರೆ ಒಂದು ತೊರೆಯೋ ಇಲ್ಲಾ ಎರಡೋ? ತಾರ್ಕಿಕ ಗಣಿತಕ್ಕಿಂತ ಸಹಜ ಕಲ್ಪನೆಯ ವಾಸ್ತವವೇ ಅಂತಿಮ ಸತ್ಯವೆನಿಸುತ್ತೆ. ಅಲ್ವಾ ಮಕ್ಕಳೇ?” ಎಂದು ಮೀಸೆಯಡಿಯಲಿ ನಕ್ಕ ಚಂದ್ರೇಗೌಡರು, “ನಿಮ್ಮ ಗಣಿತ ಪರೀಕ್ಷೇಲಿ ಮಾತ್ರ ಇದನ್ನೇ ಬರೀಬೇಡಿ, ಆಯ್ತಾ?” ಎಂದು ಎಚ್ಚರಿಕೆಯನ್ನೂ ನೀಡಿದರು.
ಚಾರಣದ ರೀತಿ ರಿವಾಜುಗಳ ಬಗ್ಗೆ ಮೋಹನ್ ರಾಜ್ ರವರು ಕೆಲವು ಸೂಚನೆಗಳನ್ನು ಮುಂದುವರಿಸುತ್ತಾ, ಚಾರಣವನ್ನು ಸಂಘಟಿಸುವ ಮೊದಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು, ಅದನ್ನು ಹಲವು ದಿನಗಳ ಮುಂಚೆಯೇ ಪಡೆದಿದ್ದೇವೆ. ನಿಂತಲ್ಲೆಲ್ಲಾ, ನೋಡಿದೆಡೆಯಲ್ಲೆಲ್ಲಾ ಜ್ಞಾನದ ಮಹಾಪೂರವೇ ಹರಿಯುತ್ತಿರುವುದರಿಂದ ಕಾಡಿಗೆ ಹೋದಾಗ ಊರಿನ ಹರಟೆಯನ್ನು ಅಲ್ಲಿಯೂ ಮುಂದುವರೆಸುವುದು ಬೇಡ. ಕಾಡಿನ ಅನೂಹ್ಯ ಜಗತ್ತನ್ನು ಅರಿಯಲು ಈ ಶೈಕ್ಷಣಿಕ ಉದ್ದೇಶದ ಚಾರಣ ನಮಗೆ ಹೊಸ ಜಗತ್ತನ್ನೇ ತೆರೆದಿಡುತ್ತದೆ.
ಕಾಡಿನ ನಡುವೆ ಇನ್ಯಾವುದೋ ಉಪಹಾದಿ ಕಾಣಿಸಿತೆಂದು ಒಬ್ಬಿಬ್ಬರು ಅದರಲ್ಲಿ ಕ್ರಮಿಸಬೇಡಿ. ಗುಂಪಿನಿಂದ ಬೇರೆಯಾಗಿ ತಪ್ಪಿಸಿಕೊಂಡು ಪಜೀತಿಗೊಳಗಾಗುವ ಸಾಧ್ಯತೆಯಿರುತ್ತದೆ. ಎಲ್ಲರಿಗಿಂತ ಮುಂದೆ ಇರುವ ಮಾರ್ಗದರ್ಶಕ ಹಾಗೂ ಎಲ್ಲರಿಗಿಂತ ಹಿಂದೆ ಇರುವ ಟ್ರೆಕ್ಕಿಂಗ್ ಮ್ಯಾನೇಜರ್ ನಡುವೆಯೇ ಉಳಿದೆಲ್ಲಾ ಚಾರಣಿಗರು ಇರುವುದು ಕಡ್ಡಾಯ.
ಯಾವ ಕಾರಣಕ್ಕೂ ಕಾಡಿನಲ್ಲಿ ಬೆಂಕಿ ಹಾಕಬೇಡಿ. ಅನಿವಾರ್ಯವಾಗಿ ಬೆಂಕಿ ಹಾಕಲೇಬೇಕಿದ್ದರೆ, ಕೆಲಸ ಮುಗಿದ ಕೂಡಲೇ ಹಚ್ಚಿದ ಬೆಂಕಿಯನ್ನು ನೀರು ಹಾಕಿ ಸಂಪೂರ್ಣವಾಗಿ ನಂದಿಸಿ. ಹಾಗೆ ಮಾಡದೆ ಅಪ್ಪಿತಪ್ಪಿಯೂ ಕಾಡ್ಗಿಚ್ಚಿಗೆ ಕಾರಣವಾಗಬೇಡಿ.
ತೀರಾ ಆಕಸ್ಮಿಕವಾಗಿ ಕಾಡಿನಲ್ಲಿ ತಪ್ಪಿಸಿಕೊಂಡರೆ ಎಲ್ಲಿದ್ದೀರೋ ಅಲ್ಲಿಯೇ ಸ್ವಲ್ಪ ಎತ್ತರದ ಸುರಕ್ಷಿತ ಸ್ಥಳಕ್ಕೆ ಹೋಗಿ ನಿಲ್ಲಿ. ಗಾಬರಿ ಬೀಳಬೇಡಿ, ಸುಧಾರಿಸಿಕೊಳ್ಳಿ, ಧೈರ್ಯ ತಂದುಕೊಳ್ಳಿ. ನಿಮ್ಮಲ್ಲಿ ವಿಷಲ್ ಇದ್ದಲ್ಲಿ ನಿರಂತರವಾಗಿ ಊದಿ. ಖಚಿತತೆ ಇಲ್ಲದಿದ್ದಲ್ಲಿ ಎತ್ತ ಕಡೆಯೂ ನಡೆಯಬೇಡಿ. ಸುತ್ತಮುತ್ತ ಗಮನಿಸಿ, ಪರಿಸ್ಥಿತಿಯನ್ನು ಅವಲೋಕಿಸಿ. ನಿಮ್ಮ ತಂಡವೂ ನಿಮ್ಮನ್ನು ಹುಡುಕಲು ಪ್ರಯತ್ನಿಸುತ್ತಿರುತ್ತದೆ. ಮಳೆ ಅಥವಾ ಮಂಜು ಸುರಿಯುತ್ತಿದ್ದಲ್ಲಿ ನಿಮ್ಮ ಕೂಗು ನಿಮ್ಮ ಸಂಗಾತಿಗಳಿಗೆ ತಲುಪುವುದಿಲ್ಲ, ನೆನಪಿಡಿ. ತಾಳ್ಮೆಯಿಂದ ಮುಂದಿನ ನಡೆಯನ್ನು ಯೋಜಿಸಿ. ಗಾಬರಿ, ಆತಂಕ ನಿಮ್ಮ ದೇಹದ ಶಕ್ತಿಯನ್ನು ಕುಗ್ಗಿಸುತ್ತದೆ. ಭಯ ನಿಮ್ಮನ್ನು ಹೊಸ ಪ್ರಯತ್ನಕ್ಕೆ ಪ್ರೇರೇಪಿಸಲೂಬಹುದು ಹಾಗೆಯೇ ನಿಮ್ಮನ್ನು ವಿಚಲಿತಗೊಳಿಸಲೂಬಹುದು. ಸಿಕ್ಕ ನೀರು, ಗುರುತಿಸಬಹುದಾದ ಹಣ್ಣನ್ನು ತಿನ್ನಿ, ತೊಂದರೆಯಿಲ್ಲ. ತೀರಾ ಸುಸ್ತಾದರೆ ನಿದ್ರೆ ಮಾಡಿ, ಮುಂದಿನ ಪ್ರಯತ್ನಕ್ಕೆ ಚೈತನ್ಯ ಹಾಗೂ ಧೈರ್ಯ ಬರುತ್ತದೆ. ಸಾಧ್ಯವಾದಲ್ಲಿ ಸಣ್ಣದಾಗಿ ಬೆಂಕಿ ಹಾಕಿ, ಹೆಚ್ಚು ಹೊಗೆ ಬರುವಂತೆ ಹಸಿ ಸೊಪ್ಪನ್ನು ಬೆಂಕಿಗೆ ಹಾಕಿ, ಇದರಿಂದ ಉಪದ್ರವಕಾರಿ ಕೀಟಗಳನ್ನು ದೂರವಿಡಬಹುದು ಹಾಗೂ ನಿಮ್ಮನ್ನು ಹುಡುಕುವವರಿಗೆ ಆ ಹೊಗೆಯ ಮೂಲ ಸಹಾಯ ಮಾಡಬಹುದು. ಗಾಯಗೊಂಡಿದ್ದಲ್ಲಿ ಹೆಚ್ಚು ಆಯಾಸಗೊಳ್ಳುತ್ತೀರಿ. ವಿಷಲ್ ಊದಿ ಗಮನ ಸೆಳೆಯಿರಿ. ಎಲ್ಲವೂ ಸುಖಾಂತ್ಯವಾದ ಮೇಲೆ ಹೊಗೆ ಏಳಿಸಲು ಹಾಕಿದ್ದ ಬೆಂಕಿಯನ್ನು ನಂದಿಸಿ” ಎಂದು ತಿಳಿಹೇಳಿದರು.
ಮರದ ಮೇಲಿರುವ ಆರ್ಕಿಡ್ಗಳು, ತೊಗಟೆಯಡಿ ವಾಸಿಸುವ ಹುಳುಹುಪ್ಪಟೆಗಳು, ಕಪ್ಪೆಗಳು, ಪೊಟರೆಯ ಪಕ್ಷಿಗಳು, ನೆಲದಡಿಯಿಂದ ಉದ್ಭವವಾಗುವ ಅಣಬೆಗಳು, ಯಾವುದೋ ಕೊರಕಲಿನಿಂದ ಜಿನುಗಿ ಬೃಹತ್ ನದಿಗೆ ಜೀವನೀಡುವ ಸರುಕಲುಗಳು, ಲಕ್ಷಾಂತರ ಜೀವಿಗಳಿಗೆ ಆವಾಸಸ್ಥಾನವಾಗಿರುವ ಜವುಗು ಪ್ರದೇಶಗಳು, ತನ್ನದೇ ಆದ ಜೀವವೈವಿಧ್ಯ ಪಡೆದಿರುವ ನಮ್ಮ ಲೆಕ್ಕದ ಬಂಜರು ಪ್ರದೇಶ, ಮರಗಳು ಬೇರಿಳಿಸಿ ಎಲೆಗಳ ಮೂಲಕ ಬಾಷ್ಪೀಕರಿಸುವ ನೀರು, ಮೇಲ್ಮಣ್ಣಿನ ಸೂಕ್ಷ್ಮಜೀವಿಗಳು, ಕಲ್ಲಿನಡಿಯ ನೀರಿನ ಸಂಗ್ರಹ, ದೊಣೆಗಳೊಳಗಿನ ಸರೀಸೃಪಗಳು ಇವುಗಳನ್ನು ಗಮನಿಸಬೇಕು. ಸೀಬೆಗಿಡದ ಮೇಲಿನ ಅಳಿಲು, ಪುಕ್ಕ ಒಣಗಿಸುವ ನೀರು ಕಾಗೆ, ಕಲ್ಲಿನ ಸಂದಿಯ ಏಡಿ, ಮುಟ್ಟಿದರೆ ಉಂಡೆಯಾಗುವ ಅಡಕೆ ಹುಳ, ಕೆಸರಿನ ಪಕ್ಕದ ಕಪ್ಪೆ, ಸಮೀಪಿಸಿದರೆ ಹಾರುವ ಚಿಟ್ಟೆ, ಬಿಸಿಲು ಕಾಯಿಸುವ ಆಮೆ, ಮುಟ್ಟಿದರೆ ಮುನಿಯುವ ಮಿಮೋಸಾ ಪುಡಿಕಾ, ಗಾಳಿಗೆ ತೊನೆದಾಡುವ ವೃಕ್ಷಗಳು, ಬಿದ್ದಲ್ಲೇ ಕುಂಬಾಗುತ್ತಿರುವ ಮಹಾಮರಗಳು, ಸದ್ದಿಲ್ಲದೇ ಎದ್ದು ನಿಲ್ಲುವ ಅಣಬೆಗಳು ಇವೆಲ್ಲವೂ ಸೇರಿಯೇ ನಮ್ಮ ಕಾಡುಗಳಾಗಿವೆ.
ಭೂಮಿಯ ನಿರಂತರ ಚಲನೆಗೂ, ನಾವು ಉಸಿರಾಡುವ ಗಾಳಿಗೂ, ಹವಾಮಾನ ಬದಲಾವಣೆಗೂ, ಬೆಟ್ಟಗುಡ್ಡಗಳ ಆಕಾರಕ್ಕೂ, ಉಕ್ಕುವ ಸಮುದ್ರಕ್ಕೂ, ಚೆಲ್ಲಾಡಿ ಹರಡಿರುವ ಮರುಭೂಮಿಗೂ, ನಿರ್ಲಿಪ್ತವಾಗಿರುವ ಹಿಮ ಪ್ರದೇಶಕ್ಕೂ, ನದಿ-ತೊರೆಗಳು ಹರಿಯುವ ದಿಕ್ಕು-ವೇಗಕ್ಕೂ, ನೀರಿನ ಮೂಲಗಳನ್ನಾಧರಿಸಿ ನಭದೆತ್ತರಕ್ಕೆ ನಿಂತಿರುವ ವೃಕ್ಷ ಸಂಪತ್ತಿಗೂ, ಹಸಿರಿನ ಆಶ್ರಯದಲ್ಲಿ ನೆಲೆ ನಿಂತಿರುವ ಸೂಕ್ಷ್ಮಜೀವಿಗಳಿಂದ ಹಿಡಿದು, ಬೃಹದಾಕಾರದ ಪ್ರಾಣಿಗಳವರೆಗೂ ಇರುವ ಪರಸ್ಪರ ಸಂಬಂಧ, ಮಿಳಿತಗಳು ಹೇಗಿವೆಯೆಂದರೆ, ಇವುಗಳಲ್ಲಿ ಯಾವುದಾದರೊಂದು ಸೂಕ್ಷ್ಮ ಬದಲಾವಣೆಯಾದರೂ, ಉಳಿದೆಲ್ಲವುದರಲ್ಲಿ ಪೂರಕ ವಿಪ್ಲವಗಳು ಸಂಭವಿಸುತ್ತವೆ ಎಂದರು ಮೋಹನ್ ರಾಜ್.
ಕವಿತಾ ಮೇಡಂ ರವರು ಮಾತಿಗಿಳಿದು, “ನಿಮ್ಮೆದುರಲ್ಲಿರುವ ಗಿಡಕ್ಕೆ ಹಸಿರು ಬಣ್ಣ ಬರಲು ಕಾರಣ ಮಣ್ಣಿನಲ್ಲಿದೆಯೋ? ಅದು ನೀರಿನಿಂದ ಬಂತೋ? ಬೀಜದ ಪ್ರಭಾವವೋ? ವಾತಾವರಣವೋ? ಸೂರ್ಯನ ಬೆಳಕೋ?” ಎಲ್ಲಾ ವಿದ್ಯಾರ್ಥಿಗಳು ಮುಖ ಮುಖ ನೋಡಿಕೊಂಡು ಪಿಸುಗುಡುತ್ತಿದ್ದುದರಿಂದ ಮೇಡಂ ರವರೇ ತಮ್ಮ ಮಾತನ್ನು ಮುಂದುವರಿಸಿ, “ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಮತ್ತೊಂದು ಕಾರಣವಾಗಿದೆ. ಕ್ರಿಯೆಯಿಲ್ಲದೆ ಪ್ರವಾಹವಿಲ್ಲ, ಚಲನೆಯಿಲ್ಲದೇ ಜೀವವಿಲ್ಲ, ಜೀವವಿಲ್ಲದೇ ಚೈತನ್ಯವಿಲ್ಲ, ಚೈತನ್ಯವಿಲ್ಲದೇ ಪ್ರಕ್ರಿಯೆಯಿಲ್ಲ” ಎಂದರು.
ಚಾರಣ ತಾಣಗಳ ಕಡಿದಾದ ತುದಿಯನ್ನು ಏರಿದರೆ ಅವಿಸ್ಮರಣೀಯ ದೃಶ್ಯಗಳು ಕಣ್ಣು ಹಾಯಿಸಿದೆಡೆಯೆಲ್ಲಾ ತೆರೆದುಕೊಳ್ಳುತ್ತವೆ. ಎದುರಿನಿಂದ ಧಾವಿಸುವ ಮೋಡಗಳು ನಮ್ಮ ಸುತ್ತ ಸುಳಿದು ಅನಂತ ಆಕಾಶದಲ್ಲಿ ಲೀನವಾಗುವ ಬಗೆಯನ್ನು ಅನುಭವಿಸಿಯೇ ತಿಳಿಯಬೇಕು. ಕಣ್ಣೆದುರಿನ ಕಣಿವೆ, ಕಮರಿಗಳು ಇದ್ದಕ್ಕಿದ್ದಂತೆ ಅಂತರ್ಧಾನವಾಗುವುದು, ನೋಡನೋಡುತ್ತಿದ್ದಂತೆ ನಿರಭ್ರವಾಗಿ ಗೋಚರಿಸಿ ಶೋಲಾ ಕಾಡುಗಳ ದರ್ಶನ ಮಾಡಿಸುವ ಬಗೆ ರಮಣೀಯವಾದುದು. ಜೋಪಾನವಾಗಿ ನಡೆಯಿರಿ” ಎಂದು ಹುರಿದುಂಬಿಸಿದರು ಮೋಹನ್ ರಾಜ್.
ಮಕ್ಕಳೆಲ್ಲ ಪಿಟಿ ಮೇಷ್ಟ್ರು ಹೇಳಿದಂತೆಯೇ ಸಾಲಾಗಿ ಬಂದು ಕಿತ್ತಳೆಹಣ್ಣು, ಸೌತೇಕಾಯಿ ಹಾಗೂ ಹುಳಿ ಪೆಪ್ಪರ್ಮಿಂಟನ್ನು ತೆಗೆದುಕೊಂಡು ಗೈಡ್ ಚಂದ್ರೇಗೌಡರು ಮುಂ ದೆ ಮುಂದೆ ನಡೆದಂತೆ ಶಿಸ್ತಿನಿಂದ ಹಿಂಬಾಲಿಸತೊಡಗಿದರು.
ಯಾವುದಾದರೂ ದಿಬ್ಬದ ಎತ್ತರದಲ್ಲಿ ನಿಂತು ದೂರದೂರದವರೆಗೆ ಕಣ್ಣು ಹಾಯಿಸಿದರೆ ಅನಂತದವರೆಗೂ ಕಾಣುವ ನಿರಂತರವಾಗಿರುವ ಅಗಾಧ ಪರ್ವತ ಶ್ರೇಣಿಗಳು, ಇವೆಲ್ಲದರ ಒಡಲಲ್ಲಿ ನಿರಂತರವಾಗಿ ಚಲನಶೀಲವಾಗಿರುವ ಹಾವುಗಳು, ಬಿಸಿಲು ಕಾಯಿಸುವ ಆಮೆಗಳು, ಕ್ರಿಮಿಗಳು, ಕೀಟಗಳು, ಖಗ-ಮೃಗಗಳು, ನೆಲದೊಗೆಯುತ್ತಿರುವ ಏಡಿಗಳು, ನದಿ-ತೊರೆಗಳು, ಮೀನುಗಳು, ಗರಿಕೆಯಿಂದ ಹಿಡಿದು ಹೆಮ್ಮರಗಳವರೆಗಿನ ವೃಕ್ಷ ಸಂಪತ್ತು, ಮೊಳೆಯುತ್ತಿರುವ ಬೀಜಗಳು, ಕೊಳೆಯುತ್ತಿರುವ ದಿಮ್ಮಿಗಳು, ಗಾಳಿ, ನೀರು, ಸೂರ್ಯನ ಶಾಖದಿಂದ ಪುಡಿಪುಡಿಯಾಗುತ್ತಿರುವ ಕಲ್ಲುಗಳು, ದಿಣ್ಣೆಯಾಗುತ್ತಿರುವ ಮರಳು, ನೀರಿನ ಸೆಳೆತಕ್ಕೆ ತಳದ ಮರಳು ಜರುಗುತ್ತಿದ್ದಂತೆ ನಿರಂತರವಾಗಿ ಕದಲುತ್ತಿರುವ ನೀರ್ಗಲ್ಲುಗಳು, ನಿಧಾನವಾಗಿ ಸದ್ದಿಲ್ಲದಂತೆ ಬೀಜಗಳ ಆಸ್ಫೋಟ ನಡೆಸುತ್ತಿರುವ ಅಣಬೆಗಳು, ಶಿಕಾರಿಗಾಗಿ ಬಲೆ ನೇಯುತ್ತಿರುವ ಜೇಡ, ಗಿಡದೆಲೆಯಡಿಯಲಿ ಮೊಟ್ಟೆ ಇಡುತ್ತಿರುವ ಚಿಟ್ಟೆ, ನೆಲವನ್ನು ಉಳುತ್ತಿರುವ ಎರೆಹುಳು, ಒಂದೇ ಎರಡೇ? ಅಸಂಖ್ಯಾತ ಕಾರುಬಾರುಗಳ ಆಗರವಾಗಿರುವ ಈ ಪರ್ವತಮಾಲೆ ಈ ಪ್ರಕೃತಿಯಲ್ಲಿ ಮಾನವ ಎಷ್ಟು ನಿಕೃಷ್ಠ ಎಂದು ಸಾಬೀತು ಪಡಿಸುತ್ತದೆ.
ಮಕ್ಕಳೊಂದಿಗೆ ಮಕ್ಕಳಾಗಿ ನಡೆದ ಗಿರೀಶ್, ಒಂದೆಡೆ ದಣಿವಾರಿಸಿಕೊಳ್ಳಲು ಎಲ್ಲರನ್ನೂ ನಿಲ್ಲಲು ಹೇಳಿದರು. “ಅನಂತವಾಗಿ ಹರಡಿರುವ ಈ ಬ್ರಹ್ಮಾಂಡದಲ್ಲಿ ಬದುಕಲು ಅವಕಾಶವಿರುವುದು ನಮ್ಮ ಈಗಿನ ತಿಳುವಳಿಕೆಯಂತೆ ನಮ್ಮ ಭೂಮಿಯೆಂಬ ಏಕೈಕ ಗ್ರಹದಲ್ಲಿ ಮಾತ್ರ. ಇದು ನಮ್ಮ ಆಸ್ತಿಯಲ್ಲ ಇನ್ನೂ ಸಾವಿರಾರು ವರ್ಷ ಈ ಭೂಮಿಯನ್ನು ಬದುಕಲು ಆಶ್ರಯಿಸಲಿರುವ ಸಮಸ್ತ ಜೀವವೈವಿಧ್ಯದ್ದು. ಪ್ರವಾಸೋದ್ಯಮ, ಜಾನುವಾರುಗಳ ಪೋಷಣೆ, ನಗರೀಕರಣ, ರಸ್ತೆ ನಿರ್ಮಾಣ, ವಸತಿ ಅಗತ್ಯ, ಕೃಷಿಭೂಮಿ ವಿಸ್ತರಣೆ, ಗಣಿಗಾರಿಕೆ, ಮರಕಡಿತ ಇವೇ ಮುಂತಾದ ಅಗತ್ಯ ಅಡಚಣೆಗಳು ಅರಣ್ಯಭೂಮಿ ಕಡಿಮೆಯಾಗಲು, ನಿಸರ್ಗ ಸಂಪತ್ತು ಬಿಕ್ಕಟ್ಟು ಎದುರಿಸಲು, ಜೀವವೈವಿಧ್ಯ ಆತಂಕದ ಸ್ಥಿತಿ ತಲುಪಲು ಮತ್ತು ಮಾನವ-ವನ್ಯಜೀವಿ ಸಂಘರ್ಷವೇರ್ಪಡಲು ಕಾರಣವಾಗಿದೆ.
ಪಶ್ಚಿಮ ಘಟ್ಟದ ಈ ಮಳೆಕಾಡುಗಳು ಜಗತ್ತಿನ ಶ್ವಾಸಕೋಶಗಳಲ್ಲಿ ಒಂದಾಗಿವೆ. ಕಲ್ಪನೆಗೂ ನಿಲುಕದ ಅಗಾಧವಾದ ಜೀವವೈವಿಧ್ಯಕ್ಕೆ ಆಧಾರವಾಗಿವೆ. ಹಾಗೆಯೇ ಅತ್ಯಂತ ಆತಂಕದ ಅಂತಿಮ ದಿನಗಳನ್ನು ಎದುರಿಸುತ್ತಿವೆ ಎಂಬುದೂ ಅಷ್ಟೇ ಸತ್ಯವಾಗಿದೆ. ಸಹ್ಯಾದ್ರಿ ಸಾಲುಗಳೆಂದೇ ಹೆಸರಾಗಿರುವ ಈ ಪಶ್ಚಿಮ ಘಟ್ಟಗಳು ಗುಜರಾತ್ನಿಂದ ಪ್ರಾರಂಭವಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹೀಗೇ ಸಾಗಿ ತಮಿಳುನಾಡಿನಲ್ಲಿ ಕೊನೆಗೊಳ್ಳುತ್ತವೆ. ಈ ಪ್ರದೇಶದಲ್ಲಿ ಹಲವು ಅಭಯಾರಣ್ಯಗಳು, ಮೀಸಲು ಅರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಇದ್ದು, ವೈವಿಧ್ಯಮಯ ಜೀವ ಸಂಕುಲಗಳಿಗೆ ಆಶ್ರಯ ನೀಡಿವೆ. ಈ ಘಟ್ಟಶ್ರೇಣಿಗಳು ಗೋದಾವರಿ, ಕಾವೇರಿ, ಕೃಷ್ಣಾ, ತುಂಗಾ, ಕಾಳಿ, ಭದ್ರಾ, ಭವಾನಿ, ಭೀಮಾ, ಮಲಪ್ರಭಾ, ಘಟಪ್ರಭಾ, ಹೇಮಾವತಿ, ಕಬಿನಿ, ಪೆರಿಯಾರ್, ಪಂಪಾ, ನೇತ್ರಾವತಿ, ಶರಾವತಿ, ಮಾಂಡೋವಿ, ಜುವಾರಿ ಮುಂತಾದ ಜೀವನದಿಗಳಿಗೆ ಜನ್ಮಸ್ಥಾನವಾಗಿದೆ.
ಎಷ್ಟೇ ದೊಡ್ಡ ನಗರ ನಿರ್ಮಾಣ ಮಾಡಿದರೂ, ಆರು ಲೇನ್ನ ರಸ್ತೆ ನಿರ್ಮಿಸಿದರೂ, ಪ್ರತೀ ಹಳ್ಳಿಯಲ್ಲೂ ನಾಲ್ಕಾರು ರೆಸಾರ್ಟ್ ಪ್ರಾರಂಭವಾದರೂ, ಬೆಟ್ಟಗಳನ್ನು ಬಗೆದು ನೆಲಸಮಮಾಡಿ ಅದಿರು ಅಗೆದರೂ, ಸಿಮೆಂಟ್ ತಯಾರಿಸಿದರೂ, ಸಾವಿರಾರು ವಸತಿ ನಿರ್ಮಾಣ ಮಾಡಿದರೂ ಅಂತಿಮವಾಗಿ ನಮಗೆ ನಮ್ಮ ಕಾಡುಗಳು ನೀಡುವ ಪರಿಶುದ್ಧ ಗಾಳಿಯೇ ಬೇಕು, ಹೊಟ್ಟೆಗೆ ಅನ್ನ ತಿನ್ನಲು ಸಮತೋಲಿತ ಆರೋಗ್ಯಕರ ವಾತಾವರಣವಿರಬೇಕು. ಕುಡಿಯಲು, ಬೆಳೆ ಬೆಳೆಯಲು ನಮ್ಮ ಕಾಡುಗಳು ದಯಪಾಲಿಸುವ ಶುಭ್ರ ಜೀವಜಲವೇ ಬೇಕು. ಹಾಗಾಗಿ ಇವನ್ನೆಲ್ಲ ನಾವು ಉಳಿಸಿಕೊಳ್ಳಲೇಬೇಕು” ಎಂದು ತಿಳಿಹೇಳಿದರು.
ಅಷ್ಟರಲ್ಲಿ ಹಿಂದೆ ನಿಧಾನವಾಗಿ ಬರುತ್ತಿದ್ದವರೂ ಸಹಾ ಸೇರಿಕೊಂಡರು. ಹಣ್ಣು ತಿಂದು ನೀರು ಕುಡಿದ ಮಕ್ಕಳು ಮತ್ತೆ ಆ ಶಿಶಿಲಕುಡಿಯತ್ತ ದೃಷ್ಟಿ ನೆಟ್ಟವರೇ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ, ಜಗ್ಗದೆಯೇ ಕುಗ್ಗದೆಯೇ ನುಗ್ಗಿ ನಡೆ ಮುಂದೆ… ಎಂದುಕೊಳ್ಳುತ್ತಾ ಹೆಜ್ಜೆಹಾಕತೊಡಗಿದರು. ಬೆಟ್ಟದ ತುದಿಯೇರಿದ ಹುಡುಗರು ಏರುವಾಗ ಅನುಭವಿಸಿದ ಅಗಾಧ ಶ್ರಮವನ್ನು ಮರೆತು ಅಲ್ಲಿ ತೂಯ್ಯುತ್ತಿದ್ದ ತಂಗಾಳಿಯನ್ನು ತಮ್ಮ ಶ್ವಾಸ ಪೂರ್ತಿಯಾಗಿ ತುಂಬಿಕೊಳ್ಳುವಂತೆ ಎಳೆದುಕೊಂಡು ಅಷ್ಟೆತ್ತರದಿಂದ ಕಣ್ಣು ಹಾಯುವವರೆಗೆ ನೋಡಿ ಆನಂದಿಸಿದರು. ಯಾರಿಗೂ ಕೆಳಗಿಳಿಯುವ ಮನಸ್ಸೇ ಇಲ್ಲವೆಂಬಂತೆ ಸಂಭ್ರಮಾಚರಣೆಯಲ್ಲಿ ಮೈಮರೆತಿದ್ದರು. ಕಡೆಗೆ ಗಿರೀಶರೇ ಇಲ್ಲಿಂದ ಇಳಿದು ಊಟ ಮುಗಿಸಿಕೊಂಡು ಇಲ್ಲಿಂದ ಇಪ್ಪತ್ತು ಮೈಲು ದೂರದ ದೇವರಮನೆಯಲ್ಲಿ ಇವತ್ತಿನ ಬಿಡಾರ ಹೂಡಬೇಕಿದೆ ಎನ್ನುತ್ತಾ ಒತ್ತಾಯದಿಂದ ಎಲ್ಲರನ್ನೂ ಹೊರಡಿಸಿದರು.
ಒಲ್ಲದ ಮನಸ್ಸಿನಿಂದ ಕೆಳಗಿಳಿದ ಮಕ್ಕಳು ಊಟ ಮುಗಿಸಿ, ಚಂದ್ರೇಗೌಡರಿಗೆ ಧನ್ಯವಾದ ಹೇಳಿ, ಬಸ್ಸನ್ನೇರಿ ಶಿಶಿಲಕುಡಿ ದೃಷ್ಟಿಯಿಂದ ಮರೆಯಾಗುವವರೆಗೂ ಮನದಣಿಯೆ ನೋಡುತ್ತಲೇ ಇದ್ದರು.
ಊರುಬಗೆ, ಗುತ್ತಿಹಳ್ಳಿಯ ಮಾರ್ಗವಾಗಿ ದೇವರಮನೆ ಬೆಟ್ಟವನ್ನೇರಿದ ಪ್ರವಾಸಿ ತಂಡಕ್ಕೆ ಎದುರಾದದ್ದು ಅಲೆಗಳೋಪಾದಿಯ ನಿರಂತರವಾದ ಚಾರ್ಮಾಡಿ ಪರ್ವತಗಳ ಸಾಲು.
ನೂರಾರು ಮೈಲು ದೂರದಿಂದ ಕರಾವಳಿಯ ಕುಳಿರ್ಗಾಳಿ ನಿರಂತರವಾಗಿ ಗಾಳಿಗಂಡಿ ಮಾರ್ಗವಾಗಿ ರಭಸವಾಗಿ ತೂರಿಬಂದು ದೇವರಮನೆ ಬಳಿ ಜುಮ್ಮನೆ ಆಗಸಕ್ಕೆ ಚಿಮ್ಮಿ ನಿರ್ಮಿಸುವ ವಿಶಿಷ್ಟ ಅನುಭೂತಿಯನ್ನು ಬೆಟ್ಟದ ತುದಿಯೇರಿ ಅನುಭವಿಸಿಯೇ ತಿಳಿಯಬೇಕು. ಕಣ್ಣೆದುರಿನ ಕಣಿವೆ, ಕಮರಿಗಳು ಇದ್ದಕ್ಕಿದ್ದಂತೆ ಅಂತರ್ದಾನವಾಗುವುದು, ನೋಡನೋಡುತ್ತಿದ್ದಂತೆ ನಿರಭ್ರವಾಗಿ ಗೋಚರಿಸಿ ಶೋಲಾ ಕಾಡುಗಳ ದರ್ಶನ ಮಾಡಿಸುವ ಬಗೆ ರಮಣೀಯವಾದುದು. ತಲೆ ಎತ್ತಿದರೆ ಎಡಕ್ಕೆ ಒಲೆಕಲ್ಲುಗುಡ್ಡ, ಬಲಕ್ಕೆ ಕಾಟಿಹರ, ಮಧ್ಯದ ಕಣಿವೆ ನಡುವಿನ ಕಾರಿಕೂಲ್, ಅದರ ಬುಡದಲ್ಲಿರುವ ಅಡ್ಡಮನೇರಹಿತ್ಲು, ಹಿಂದಿರುಗಿ ನೋಡಿದರೆ ಬಾರಿಮಲೆ, ಅದರಾಚೆಯ ಬಾಂಜಾರ್ಮಲೆ ಇತ್ತ ತಿರುಗಿದರೆ ಅನಂತವಾಗಿ ಹರಡಿ ದಿಗಂತದಲ್ಲಿ ಶಿರಾಡಿಯೊಂದಿಗೆ ಲೀನವಾಗುವ ಭೈರಾಪುರ ಅರಣ್ಯ ಪ್ರದೇಶ.
ದೇವಾಲಯದ ಪಕ್ಕದ ಬಯಲಿನಲ್ಲಿ ಟೆಂಟುಗಳನ್ನು ಹೂಡಲು ರುದ್ರಮುನಿಯವರು ತಮ್ಮ ಶಿಷ್ಯಂದಿರನ್ನು ಹುರಿದುಂಬಿಸುತ್ತಿದ್ದರು. ಆರಾರು ಜನ ಮಲಗುವಂತ ಆರು ಟೆಂಟುಗಳನ್ನು ಅಚ್ಚುಕಟ್ಟಾಗಿ ಹೂಡಿದ ಹುಡುಗರು, ಅಡುಗೆಯವರು ಸಿದ್ಧಪಡಿಸಿದ್ದ ಕಾಫಿಯನ್ನು ಸೊರ್ಸೊರಕ್ಕೆಂದು ಹೀರುತ್ತಾ ಗ್ಲೂಕೋಡೀ ಗರಿಗರಿ ಬಿಸ್ಕತ್ತುಗಳನ್ನು ಮುರುಕುತ್ತಿರುವ ಸಮಯದಲ್ಲೇ ಎಂಟ್ಹತ್ತುಜನ ಹುಡುಗಿಯರು ತಂತಮ್ಮ ಲಗೇಜಿನೊಂದಿಗೆ ಮೂರು ಟೆಂಟುಗಳನ್ನು ಆಕ್ರಮಿಸಿಕೊಂಡೇಬಿಟ್ಟರು. ಹೋ… ಎಂದು ಬೊಬ್ಬಿಟ್ಟ ಹುಡುಗರು ಅನ್ಯಾಯ ಅನ್ಯಾಯ… ಎಂದು ಕೂಗಾಡತೊಡಗಿದರು. ಈ ಹಿಂದೆಯೇ ಯೋಜಿಸಿದಂತೆ ಹುಡುಗಿಯರೆಲ್ಲ ಬಸ್ಸಿನಲ್ಲೇ ನಿದ್ರಿಸುವುದು, ಹುಡುಗರು ಟೆಂಟುಗಳಲ್ಲಿ ಮಲಗುವುದು ಎಂಬ ನಿಯಮ ಮುರಿದುಹೋಗುತ್ತಿರುವುದನ್ನು ಕಂಡ ಹುಡುಗರು ಮುಖ್ಯೋಪಾಧ್ಯಾಯರ ಬಳಿ ದೂರು ಕೊಂಡೊಯ್ದರು. ಹುಡುಗಿಯರು ಟೆಂಟಿನಲ್ಲೇ ಮಲಗುವುದಾಗಿ ಧರಣಿ ಕುಳಿತರು. ನೇತೃತ್ವವನ್ನು ಸಾಕ್ಷಾತ್ ಕವಿತಾ ಮೇಡಮ್ಮೇ ವಹಿಸಿಕೊಂಡ ಮೇಲಂತೂ ಹುಡುಗರಿಗಿರಲಿ ರುದ್ರಮುನಿಯವರೂ ಸಹಾ ಏನೂ ಮಾಡಲಾಗದೇ ಆ ಮೂರೂ ಟೆಂಟುಗಳನ್ನು ಹುಡುಗಿಯರದ್ದೇ ಆಸ್ತಿ ಎಂದು ಘೋಷಿಸಿದರು. ತಾವು ತೂರಿಕೊಂಡು ವಶಪಡಿಸಿಕೊಂಡಿದ್ದ ಟೆಂಟುಗಳು ತಮ್ಮದೇ ಎಂದು ಅಧಿಕೃತವಾಗಿ ಘೋಷಣೆಯಾಗಿದೆ ಎಂದು ಒಳಗಿದ್ದ ಲಲನೆಯರಿಗೆ ತಿಳಿದಾಗಲಂತೂ ಆ ಟೆಂಟಿನೊಳಗಿಂದ ಯ್ಯೇ… ಎಂಬ ವಿಜಯಘೋಷ ಬಹಳ ಹೊತ್ತಿನವರೆಗೂ ಕೇಳಿಸುತ್ತಿತ್ತು.
ಹೆಡ್ಮಾಸ್ಟ್ರು ಬಸ್ಸಿನಲ್ಲಿ ತಮ್ಮ ಸೀಟಿನಡಿಯೇ ಇಟ್ಟುಕೊಂಡು ಜೋಪಾನವಾಗಿ ತಂದಿದ್ದ ಎರಡು ಗ್ಯಾಸ್ಲೈಟುಗಳನ್ನು ತಾವೇ ಇಳಿಸಿ ತಂದು, ಅಳವಡಿಸಿದ್ದ ಪಟ್ಟಿಪಟ್ಟಿ ಗಾಜಿನ ಆವರಣಗಳನ್ನು ತೆಗೆದು, ಗ್ಯಾಸ್ ಲೈಟಿಗೆ ಮ್ಯಾಂಟಲುಗಳನ್ನು ಅಳವಡಿಸುತ್ತಿದ್ದರು. ಸುತ್ತಲೂ ನಿಂತಿದ್ದ ವಿದ್ಯಾರ್ಥಿಗಳು ಯಾವುದೋ ಅಭೂತಪೂರ್ವ ವೈಜ್ಞಾನಿಕ ಆಪರೇಷನ್ ಒಂದು ನಡೆಯುತ್ತಿದೆಯೇನೋ ಎಂಬಂತೆ ಕಣ್ಣೆವೆಯಿಕ್ಕದೇ ನೋಡುತ್ತಿದ್ದರು. ಠಕ್ಕ ಠಕ್ಕ ಠಕ್ಕ ಠಕ್ಕ ಎಂದು ಪಂಪ್ ಹೊಡೆದು, ನಿಧಾನವಾಗಿ ಸೀಮೆಎಣ್ಣೆಯನ್ನು ಮ್ಯಾಂಟಲೆಡೆಗೆ ಹಾರಿಸಿ, ಅದನ್ನು ನೆನೆಸಿದರು. ಬೆಂಕಿಕಡ್ಡಿ ಗೀರಿದವರೇ ಆ ಮ್ಯಾಂಟಲಿಗೆ ತಾಗಿಸಿದರೋ ಇಲ್ಲವೋ ಅಷ್ಟರಲ್ಲಿ ಭಗ್ಗನೆ ಹತ್ತಿಕೊಂಡ ಬೆಂಕಿ ಮೂರ್ನಾಲ್ಕು ಅಡಿ ಎತ್ತರದವರೆಗೆ ಧಗಧಗನೆ ಉರಿಯತೊಡಗಿತು. ಟ್ಯಾಂಕಿನಲ್ಲಿ ತುಂಬಿಸಿದ್ದ ಗಾಳಿಯನ್ನು ನಿಧಾನವಾಗಿ ಹೊರಬಿಟ್ಟು, ಉರಿಯುತ್ತಿದ್ದ ಬೆಂಕಿಯ ರಭಸವನ್ನು ಕಡಿಮೆಗೊಳಿಸಿದ ನಂತರ ಆ ಮ್ಯಾಂಟಲು ಕೆಂಬಣ್ಣಕ್ಕೆ ತಿರುಗಲಾರಂಭಿಸಿತು. ಮತ್ತೆ ಬಿರಡೆಯನ್ನು ಬಿಗಿ ಮಾಡಿ ಠಕ್ಕ ಠಕ್ಕ ಠಕ್ಕ ಠಕ್ಕ ಎಂದು ಪಂಪ್ ಹೊಡೆದು ಬಝ್ ಎಂಬ ಸದ್ದು ಬರುವಂತೆ ಮಾಡಿ ಆ ಕೆಂಬೆಳಕನ್ನು ಬಿಳಿಹಳದಿ ಬಣ್ಣಕ್ಕೆ ತಿರುಗುವಂತೆ ಫೈನ್ ಟ್ಯೂನ್ ಮಾಡಿದ ಹೆಡ್ಮಾಸ್ಟ್ರ ಮುಖದಲ್ಲಿ ಯುದ್ಧ ಗೆದ್ದ ಹೆಮ್ಮೆಯಿತ್ತು. ಒಂದು ಗ್ಯಾಸ್ ಲೈಟನ್ನು ಅಡುಗೆ ಮಾಡುವಲ್ಲಿಗೂ ಮತ್ತೊಂದನ್ನು ಟೆಂಟುಗಳು ಹಾಗೂ ಬಸ್ ನಿಂತಿದ್ದ ಜಾಗಕ್ಕೂ ನಡುವೆ ಇರಿಸಿ ಆ ಲೈಟಿನ ಸುತ್ತಲೂ ಎಲ್ಲರೂ ವೃತ್ತಾಕಾರವಾಗಿ ಕುಳಿತರು. ಹತ್ತಾರು ಹುಡುಗರು ಸೇರಿ ಸುತ್ತಮುತ್ತಲೂ ಇದ್ದ ಮರಗಳಿಂದ ಉದುರಿ ಬಿದ್ದಿದ್ದ ತರಗೆಲೆ, ಸಣ್ಣ ಗಾತ್ರದ ಗೆಲ್ಲು, ಕೊನೆಗಳನ್ನು ಒಟ್ಟುಮಾಡಿ ಆಳೆತ್ತರದ ಜ್ವಾಲೆ ಏಳುವಂತೆ ಕ್ಯಾಂಪ್ ಫೈರೊಂದನ್ನು ಸ್ಥಾಪಿಸಿಯೇಬಿಟ್ಟರು.
ಮುಂದುವರಿಯುವುದು . . .
ಲೇಖನ: ಧನಂಜಯ ಜೀವಾಳ
ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ