ವಯನಾಡಿನ ದುರಂತ – ಒಂದು ಪಾಠವಾಗಬಹುದೇ?

ವಯನಾಡಿನ ದುರಂತ – ಒಂದು ಪಾಠವಾಗಬಹುದೇ?

© ಧನರಾಜ್ ಎಂ.


ವಯನಾಡು, “ಕೇರಳದ ಊಟಿ” ಎಂದೇ ಪ್ರಸಿದ್ಧವಾದ ಪಶ್ಚಿಮ ಘಟ್ಟಗಳ ನಡುವಣ ಸುಂದರ ತಾಣ. ಹಸಿರು ವೈಭವದಿಂದ ಕೂಡಿದ ಪ್ರಾಕೃತಿಕ ಸ್ವರ್ಗ. 30 ಜುಲೈ 2024ರ ತನಕ ರಜೆಯಲ್ಲಿ ಕಾಂಕ್ರೀಟ್ ಕಾಡುಗಳಿಂದ ತಪ್ಪಿಸಿಕೊಂಡು ಪ್ರವಾಸಿಗರು ಮರೆಯಾಗಲು ಬಯಸಿದ್ದ ಪ್ರಸಿದ್ಧ ಜಾಗ. ಆ ದಿನದ ನಂತರ ವಯನಾಡಿನ ಸುದ್ದಿಯಲ್ಲಿ ಇದ್ದಿದ್ದು ಬರಿ ಸಾವು – ನೋವುಗಳಷ್ಟೇ!

ಆಗಿದ್ದೇನು?

© CC0

ಮಾನ್ಸೂನ್ ಆಧಾರಿತ ದೇಶವಾದ ಭಾರತಕ್ಕೆ ಮೊದಲು ನೈಋತ್ಯ ಮಾನ್ಸೂನ್ ಅಪ್ಪಳಿಸುತ್ತದೆ. ನೈಋತ್ಯ ಮಾನ್ಸೂನ್ ಭಾರತದಲ್ಲಿ ಪ್ರಮುಖ ಮಳೆಯನ್ನು ತರುವ ಋತುವಾಗಿದೆ. ಇದು ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ ಅಂತ್ಯದವರೆಗೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಾಗುತ್ತದೆ. ಭಾರತದ ಭೌಗೋಳಿಕ ಲಕ್ಷಣದ ಆಧಾರದಲ್ಲಿ ದೇಶದಲ್ಲೇ ಮೊದಲು ಮಳೆ ಸುರಿಯುವುದು ಕೇರಳ ರಾಜ್ಯಕ್ಕೆ. ಇಲ್ಲಿ ಮಳೆರಾಯನ ಆರ್ಭಟ ಪ್ರತೀ ವರುಷ ಜೋರಾಗಿಯೇ ಇರುತ್ತದೆ.

ಹಾಗೆಯೇ ಈ ವರ್ಷ ಇಂಡಿಯನ್ ಮೆಟಿರಿಯಾಲಜಿಕಲ್ ಡಿಪಾರ್ಟ್ಮೆಂಟ್ (IMD) ತಿಳಿಸಿದಂತೆ ಸರಾಸರಿಗಿಂತ ಹೆಚ್ಚು ಮಳೆಯಾಯಿತು. ಸುಮಾರು 48 ಗಂಟೆಗಳಲ್ಲಿ 572 ಮಿಲಿಮೀಟರ್‌ಗಳಷ್ಟು ಧಾರಾಕಾರ ಮಳೆಯನ್ನು ಈ ಪ್ರದೇಶ ಅನುಭವಿಸಿತು. ಹೀಗಾಗಿ ವಯನಾಡಿನ ಚೂರಲ್‌ಮಾಲ, ಮುಂಡಕೈ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿತು. ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಒಮ್ಮೆ ಮತ್ತು 4 ಗಂಟೆ ಸುಮಾರಿಗೆ ಇನ್ನೊಮ್ಮೆ ಅವಳಿ ಭೂಕುಸಿತ ಸಂಭವಿಸಿತು. ಕೆಸರಿನ ನೀರು ಮತ್ತು ಬೃಹತ್ ಬಂಡೆಗಳು ಮೆಪ್ಪಾಡಿ ಪಂಚಾಯತ್‌ನ ಮುಂಡಕೈ ಮತ್ತು ಚೂರಲ್ಮಲಾ ಹಳ್ಳಿಗಳನ್ನು ನಾಶಪಡಿಸಿತು. ಇದರಿಂದ ಸುಮಾರು 360 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು.

© CC0

ಭೂಕುಸಿತಕ್ಕೆ ಕಾರಣ
ಭಾರಿ ಮಳೆ ಒಂದು ಕಾರಣವಾದರೆ, ಈ ದುರ್ಘಟನೆಗೆ ಪುಷ್ಟಿ ಕೊಟ್ಟ ಹಲವು ಅಂಶಗಳನ್ನು ನಾವು ಗಮನಿಸಬೇಕು. “ಭೂ ವಿಜ್ಞಾನ ಅಧ್ಯಯನಗಳ ರಾಷ್ಟ್ರೀಯ ಕೇಂದ್ರ” [National Centre for Earth Science Studies (NCESC)] ನಡೆಸಿದ ಅಧ್ಯಯನದ ಪ್ರಕಾರ 570 ಮಿಲಿಮೀಟರ್ ಮಳೆಯಿಂದಾಗಿ ಅರಣ್ಯ ಪ್ರದೇಶದ ಬೆಟ್ಟವು ನೀರಿನಿಂದ ತುಂಬಿತು. ಸೂಕ್ತವಾಗಿ ನೀರು ಹರಿಯಲು ಜಾಗವಿರದ ಕಾರಣ, ನೀರಿನಲ್ಲಿ ಅದ್ದಿದ ವಸ್ತುಗಳು ಮೆತ್ತಗಾಗುವಂತೆ ಈ ಬೆಟ್ಟವು ಕೂಡ ಸಂಪೂರ್ಣವಾಗಿ ತೇವಗೊಂಡು (saturation) ಕೆಸರು – ಕಲ್ಲುಗಳ ಜೊತೆ ಕುಸಿಯಿತು.

ಈ ಪ್ರದೇಶದಲ್ಲಿ ಹಿಂದಿನ ವರ್ಷಗಳಲ್ಲೂ ಸಣ್ಣ ಭೂಕುಸಿತ ಅನುಭವಿಸಿತ್ತು. ಆದರೆ ಇತ್ತೀಚೆಗೆ ಹೆಚ್ಚಾದ ಕಾಡಿನ ನಾಶ, ಬದಲಾದ ಕೃಷಿ, ಏಕರೂಪದ ಬೆಳೆಯ ತೋಟಗಾರಿಕೆ (ರಬ್ಬರ್, ಕಾಫಿ, ಟೀ, ಏಲಕ್ಕಿ) ಮತ್ತು ಕಟ್ಟಡಗಳ ನಿರ್ಮಾಣ ಸಣ್ಣ ಭೂಕುಸಿತ ದೊಡ್ಡದಾಗಿ ಸಾವು – ನೋವು ಸೃಷ್ಟಿಸಿದೆ.

ದೇಶದಲ್ಲಿ ಭೂಕುಸಿತದ ಸಂಭವನೀಯತೆ
ನಮಗೆಲ್ಲ ತಿಳಿದಿರುವಂತೆ ನಮ್ಮ ದೇಶ ವಿವಿಧ ಮೇಲ್ಮೈ ಲಕ್ಷಣ ಹೊಂದಿದೆ. ಇಲ್ಲಿರುವ ಬೆಟ್ಟಗಳು ಹಲವಾರು ರೀತಿ ಭೂಕುಸಿತದ ರೂಪತಾಳುವ ಸಂಭವನೀಯತೆ ಹೆಚ್ಚಿದೆ. ಇದರ ಪ್ರಕಾರ ಮೂರು ಜಾಗಗಳಲ್ಲಿ ಅತೀ ಹೆಚ್ಚು ಭೂಕುಸಿತ ಕಾಣಬಹುದು.
ಅವುಗಳೆಂದರೆ
1) ಹಿಮಾಲಯ ಪ್ರದೇಶ: ಉತ್ತರಾಖಂಡ್, ಹಿಮಾಚಲ ಪ್ರದೇಶ್. ಇದು ಭಾರತದ ಅತ್ಯಂತ ಭೂಕುಸಿತ ಪ್ರಮಾಣವಿರುವ ಪ್ರದೇಶವಾಗಿದೆ.

2) ಪಶ್ಚಿಮ ಘಟ್ಟಗಳು: ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ವಿಸ್ತರಿಸಿದೆ. ಇಲ್ಲಿನ ಇಳಿಜಾರು ಪ್ರದೇಶಗಳು ಹೆಚ್ಚಿನ ಮಳೆಯಿಂದಾಗಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚು.

3)ಈಶಾನ್ಯ ಭಾರತ: ಸಿಕ್ಕಿಮ್, ಅರುಣಾಚಲ ಪ್ರದೇಶ್, ನಾಗಾಲ್ಯಾಂಡ್, ಮಿಜೋರಾಮ್ ಮತ್ತು ಮಣಿಪುರ ರಾಜ್ಯಗಳನ್ನು ಒಳಗೊಂಡಿದೆ ಇವು ಕೂಡ ಭೂಕುಸಿತಕ್ಕೆ ಒಳಪಟ್ಟಿವೆ.

ಈ ಮೇಲೆ ತಿಳಿಸಿರುವ ಎಲ್ಲಾ ಜಾಗಗಳೂ ಕೂಡ ಪರಿಸರ ಸೂಕ್ಷ್ಮ ಪ್ರದೇಶ. ಇಲ್ಲಿ ಯಾವುದೇ ರೀತಿಯ ದೊಡ್ಡ ಕೈಗಾರಿಕೆ, ಡ್ಯಾಂ ನಿರ್ಮಾಣ ಇಲ್ಲವೇ ಕಟ್ಟಡಗಳ ನಿರ್ಮಾಣವನ್ನು ಸಹಿಸುವ ಶಕ್ತಿ ಇಲ್ಲಿನ ಭೂಮಿಯಲ್ಲಿ ಇಲ್ಲ. ಹಿಂದೆ ಸಂಭವಿಸಿದ ಜೋಷಿಮಟ್ ದುರಂತವೂ ಕೂಡ ಇಲ್ಲಿ ಒಳ್ಳೆಯ ಉದಾಹರಣೆ.

ಗಾಡ್ಗಿಲ್ – ಕಸ್ತೂರಿರಂಗನ್ ವರದಿಗಳು

ಗಾಡ್ಗಿಲ್ ವರದಿ ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರಮುಖ ದಾಖಲೆಯಾಗಿದೆ. ಪ್ರಸಿದ್ಧ ಪರಿಸರವಾದಿ ಡಾ. ಮಾಧವ್ ಗಾಡ್ಗಿಲ್ ನೇತೃತ್ವದ ಸಮಿತಿಯು ಈ ವರದಿಯನ್ನು ಸಿದ್ಧಪಡಿಸಿತು. ಸಂಪೂರ್ಣ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸುವುದು. ಈ ಪ್ರದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಒತ್ತು ನೀಡುವುದು.

© CC0

ಜಲಸಂಪನ್ಮೂಲಗಳ ರಕ್ಷಣೆ ಮತ್ತು ಸಂವರ್ಧನೆಗೆ ಕ್ರಮ ಕೈಗೊಳ್ಳುವುದು. ಪರಿಸರ ಸ್ನೇಹಿ ಕೃಷಿ ಮತ್ತು ಇತರ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದು, ಇತ್ಯಾದಿಗಳು ಇಲ್ಲಿನ ಪ್ರಮುಖ ಅಂಶಗಳಾಗಿದ್ದವು. ಆದರೆ ಪರೋಕ್ಷ ಕಾರಣಗಳಿಂದ ಈ ವರದಿ ಜಾರಿಯಾಗದೇ ಹಾಗೇ ಉಳಿಯಿತು.

ಗಾಡ್ಗಿಲ್ ವರದಿಯ ನಂತರ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕುರಿತು ಸಿದ್ಧಪಡಿಸಲಾದ ಮತ್ತೊಂದು ಪ್ರಮುಖ ದಾಖಲೆಯೆಂದರೆ ಕಸ್ತೂರಿರಂಗನ್ ವರದಿ. ಡಾ. ಕೆ. ಕಸ್ತೂರಿರಂಗನ್ ನೇತೃತ್ವದ ಸಮಿತಿಯು ಈ ವರದಿಯನ್ನು ಸಿದ್ಧಪಡಿಸಿತು. ಪೂರ್ಣ ಪಶ್ಚಿಮ ಘಟ್ಟಗಳ ಬದಲು 37% ಘಟ್ಟದ ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ [Ecological Sensitive Area (ESA)] ಎಂದು ಘೋಷಿಸುವಂತೆ ವರದಿ ನೀಡಿತು.  ಇದೆರಡೂ ವರದಿಗಳು ಇನ್ನೂ ಜಾರಿಯಾಗದೇ ಧೂಳು ಹಿಡಿದಿದೆ. ಇನ್ನೊಂದೆಡೆ ಪಶ್ಚಿಮ ಘಟ್ಟ ಅವನತಿಯ ಹಾದಿ ಹಿಡಿದಿದೆ.

ಪರಿಹಾರಗಳು

ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತವೆ. ನ್ಯಾಷನಲ್ ಡಿಸಾಸ್ಟರ್ ರಿಸ್ಕ್ ಮ್ಯಾನೇಜ್ಮೆಂಟ್ ಅಥಾರಿಟಿ (NDMA) ವಿಪತ್ತು ನಿರ್ವಹಣೆಗೆ, ವಿಪತ್ತುಗಳಿಗೆ ಸಂಬಂಧಿಸಿದ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವುದು ಇದರ ಪ್ರಮುಖ ಕಾರ್ಯ. ಇದರ ನೀತಿ – ನಿಯಮಗಳು ವಿಪತ್ತಿನ ನಿರ್ವಹಣೆ ಮಾಡಬಹುದೇ ಹೊರತು ಅವುಗಳು ಆಗದಂತೆ ತಡೆಯಲು ಸಾಧ್ಯವಿಲ್ಲ.

ವರ್ಲ್ಡ್ ವೆದರ್ ಅಸೆಸ್ಮೆಂಟ್ (WWA) ಗುಂಪಿನ ವಿಜ್ಞಾನಿಗಳು ಭೂಕುಸಿತದ ಸ್ಥಳವಾದ ವೆಲ್ಲರಿಮಲ ಶ್ರೇಣಿಯಲ್ಲಿ ಹವಾಮಾನ ಬದಲಾವಣೆಯಿಂದಾಗಿ ಮಳೆಯ ತೀವ್ರತೆಯಲ್ಲಿ ಶೇಕಡಾ 10 ರಷ್ಟು ಹೆಚ್ಚಳವನ್ನು ಸೂಚಿಸಿವೆ. ಹಾಗೆಯೇ ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ಇನ್ನೂ ಹಲವು ಪರಿಸರ ವೈಪರೀತ್ಯಗಳು ಸಂಭವಿಸುತ್ತವೆ.  ಹೀಗಾಗಿ ಪರಿಸರ ಮಾಲಿನ್ಯ ತಗ್ಗಿಸುತ್ತ, ಹವಾಮಾನ ಬದಲಾವಣೆ ನಿಯಂತ್ರಿಸಿ, ವೈಜ್ಞಾನಿಕ ಮತ್ತು ಸುಸ್ಥಿರ ಅಭಿವೃದ್ಧಿಯಿಂದ ಮಾತ್ರ ಈ ವೈಪರೀತ್ಯಗಳನ್ನು ತಗ್ಗಿಸಲು ಸಾಧ್ಯ.

© CC0

ಲೇಖನ: ರಕ್ಷಾ
          ಉಡುಪಿ ಜಿಲ್ಲೆ

Spread the love
error: Content is protected.