ಹಾವು, ನಾವು ಮತ್ತು ಪರಿಸರ
©ಪೂರ್ಣಪ್ರಜ್ಞಾ ಎಸ್. ಎನ್., ನಾಗರಹಾವು
ಹಾವು! ಅಬ್ಬಾ!! ಹಾವು ಎಂದರೆ ಯಾರಿಗೆ ತಾನೇ ಭಯವಿಲ್ಲ? ಹಾವು ಎಂದರೆ ಯಾರಿಗೆ ತಾನೇ ಕುತೂಹಲವಿಲ್ಲ? ಅಲ್ಲವೇ? ನಮ್ಮ ಸಹಸೃಷ್ಟಿಯಾದ ಈ ಜೀವಿಯ ವೈಶಿಷ್ಟ್ಯವೇ ಅದು.
ನಿತ್ರಾಣನಾಗಿ ಹಾಸಿಗೆಯಲ್ಲಿ ಸಾವಿನ ದವಡೆಯಲ್ಲಿರುವ ರೋಗಿಗೂ ಸಹ ಹಾವು ಎಂದೊಡನೆ ದಿಗಿಲು ಹುಟ್ಟಿ ಓಡಬೇಕು ಅನ್ನಿಸುತ್ತದೆ. ಅದೇ ರೀತಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಾವು ಎಂದೊಡನೆ ಒಂದು ಬಗೆಯ ಸಹಜ ಕುತೂಹಲ. ಎಲ್ಲಿಯಾದರೂ ಹಾವು ಇದೆ ಎಂದರೆ ಒಮ್ಮೆ ನೋಡುವ ಕೌತುಕ. ಚಿಕ್ಕದೋ? ದೊಡ್ಡದೋ? ಯಾವ ಬಣ್ಣವೋ? ಯಾವ ಪ್ರಭೇದವೋ? ಎಷ್ಟು ಉದ್ಧವಿದೆಯೋ? ಎಷ್ಟು ದಪ್ಪವಿದೆಯೋ? ಹೀಗೆ ಹಾವು ಎಂದೊಡನೆ ಕ್ಷಣಮಾತ್ರದಲ್ಲಿ ನಾನಾ ಚಿತ್ರಗಳು ನಮ್ಮ ಮನಸ್ಸಲ್ಲಿ ಮೂಡುವುದು ಸಹಜ. ಇದಕ್ಕೆ ಪ್ರಮುಖವಾಗಿ ಹಾವುಗಳ ಬಗೆಗೆ ನಮ್ಮಲ್ಲಿರುವ ಸಹಜವಾದ ಭಯವೂ ಒಂದು ಪ್ರಮುಖ ಕಾರಣವಿರಬಹುದು. ಏನೇ ಇರಲಿ ಅದು ಹಾವಿನ ಸೃಷ್ಟಿಗಿರುವ ವೈಶಿಷ್ಟ್ಯವೇ ಸರಿ.
ಹಾವುಗಳು ಆಹಾರ ಸರಪಳಿಯಲ್ಲಿ ಮತ್ತು ಪ್ರಕೃತಿಯ ಸಮತೋಲನದಲ್ಲಿ ಅತ್ಯಂತ ಪ್ರಮುಖ ಸ್ಥಾನವಹಿಸುತ್ತವೆ. ಅತ್ಯಂತ ಗಹನವಾದ ಪ್ರಕೃತಿಯ ಮೂಲಭೂತ ಗುಣವೆಂದರೆ, ಪ್ರಕೃತಿಯ ಯಾವುದೇ ಭಾಗದಲ್ಲಿ ಅಸಮತೋಲನ ತಲೆದೋರಿದರೆ ತತ್ ಕ್ಷಣ ಪ್ರಕೃತಿಯ ನಿಯೋಜಿತ ವ್ಯವಸ್ಥೆ ಕಾರ್ಯಪ್ರವೃತ್ತವಾಗಿ ಅದರ ಸಮತೋಲನೆಗೆ ಬೇಕಾದ ಮಾರ್ಪಾಟುಗಳನ್ನು ಮಾಡುತ್ತದೆ. ಈ ಮಾರ್ಪಾಟುಗಳು ಅಥವಾ ಸಮತೋಲನ ವ್ಯವಸ್ಥೆಯ ಕ್ರಿಯೆಗಳು ಅತ್ಯಂತ ನಿಗೂಢ ಮತ್ತು ಕ್ರಮಬದ್ಧ. ಈ ಕ್ರಿಯೆಯಲ್ಲಿ ಕೆಲವೇ ಕೆಲವು ಅಂಶಗಳು ಮಾತ್ರ ವಿಜ್ಞಾನದ ಕಣ್ಣಿಗೆ ಗೋಚರಿಸಬಹುದು ಅದೂ ಸಹ ವಿಜ್ಞಾನದ ಅಲ್ಪ ಜ್ಞಾನದ ಮಿತಿಗೆ ಮಾತ್ರ! ಮಾನವ ಹಸ್ತಕ್ಷೇಪವಿಲ್ಲದ ಯಾವುದೇ ಕ್ಷೇತ್ರ ಅಥವಾ ಪ್ರದೇಶದಲ್ಲಿ ಪ್ರಕೃತಿಯ ಪೂರ್ವ ನಿಯೋಜಿತ ಈ ಸಮತೋಲನ ವ್ಯವಸ್ಥೆ ಕ್ರಮಬದ್ಧವಾಗಿ ನಡೆಯುತ್ತಿರುತ್ತದೆ. ಈ ಗಹನವಾದ ಸಮತೋಲನ ವ್ಯವಸ್ಥೆಯಿಂದಲೇ ಜಿಂಕೆಯನ್ನು ಹುಲಿಯು ಬೇಟೆಯಾಡಿ ತಿಂದರೂ ಮತ್ತು ಒಂದು ಬಾರಿಗೆ ಜಿಂಕೆಯು ಹುಲಿಗಿಂತ ಕಡಿಮೆ ಮರಿಹಾಕಿದರೂ ಕಾಡಿನಲ್ಲಿ ಜಿಂಕೆಯ ಸಂಖ್ಯೆಗಳೇ ಹೆಚ್ಚು. ಇದೇ ರೀತಿ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು ಅಥವಾ ಕ್ರಿಮಿ ಕೀಟಗಳಿಂದ ಹಿಡಿದು ಪ್ರತೀ ಪ್ರಭೇದದ ಸಸ್ಯ, ಪ್ರಾಣಿ ಮತ್ತು ಪಕ್ಷಿಗಳ ಸಂಖ್ಯೆಯನ್ನು ಪ್ರಕೃತಿ ಸಮತೋಲನದಲ್ಲಿಡುತ್ತದೆ. ನೆನಪಿರಲಿ ಈ ಸಮತೋಲನ ಅತ್ಯಂತ ಸುಗಮ ಸ್ಥಿತಿಯಲ್ಲಿ ಸಾಗುವುದು ಮಾನವನ ಹಸ್ತಕ್ಷೇಪವಿಲ್ಲದಿದ್ದಾಗ ಮಾತ್ರ. ಎಲ್ಲೆಲ್ಲಿ ಪ್ರಕೃತಿಯ ವಿರುದ್ಧವಾಗಿ ಅಥವಾ ಮಾರಕವಾಗಿ ಮಾನವನ ಹಸ್ತಕ್ಷೇಪವಿದೆಯೋ ಅಲ್ಲಲ್ಲಿ ಪ್ರಕೃತಿಯ ಪ್ರತಿಕ್ರಿಯೆಯೂ ಸಹ ಅಷ್ಟೇ ಘೋರಾತಿಘೋರವಾಗಿರುತ್ತದೆ. ಇದಕ್ಕೆ ಬಹುದೊಡ್ಡ ಉದಾಹರಣೆಯೊಂದು ಈಗಾಗಲೇ ನಮ್ಮ ಕಣ್ಣ ಮುಂದಿದೆ (ಕೊರೊನಾ ವೈರಸ್). ಇರಲಿ, ಪ್ರಕೃತಿಯ ಸಮತೋಲನ ವ್ಯವಸ್ಥೆಯ ಮಹತ್ವದ ಬಗ್ಗೆ ಇಷ್ಟೆಲ್ಲಾ ಹೇಳಬೇಕಾದುದು ಅನಿವಾರ್ಯವಾಯಿತು. ಅದೇನೇ ಇರಲಿ ಮತ್ತೆ ಹಾವಿನ ವಿಷಯಕ್ಕೆ ಬರುವ.
ಹಾವಿನ ಬಗೆಗಿರುವ ಆಜ್ಞಾನ ಹಾಗು ಮತ್ತಿತರ ಮಾಹಿತಿಗಳು
ಮೊಟ್ಟ ಮೊದಲಿಗೆ ಹಾವಿನ ಬಗೆಗಿರುವ ಆಜ್ಞಾನದ ಭಯದ ಬಗ್ಗೆ ಮಾತನಾಡುವ. ಹೌದು, ಹಾವು ಕಚ್ಚುತ್ತದೆ, ಕಚ್ಚಿದಾಗ ಸಾವು ಸಂಭವಿಸುತ್ತದೆ. ಹಾಗಾಗಿ ಹಾವಿನ ಬಗೆಗೆ ಜನಸಾಮಾನ್ಯರಲ್ಲಿ ಅತಿಯಾದ ಭಯವಿರುವುದು ಸಹಜ. ಆದರೆ ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ವಿಷಯಗಳೆಂದರೆ, ಎಲ್ಲಾ ಹಾವುಗಳು ಕಚ್ಚಿದಾಗಲೂ ಸಾವು ಸಂಭವಿಸುತ್ತದೆಯೇ? ಹಾವುಗಳು ತಾವಾಗಿಯೇ ಮನಷ್ಯನನ್ನು ಹುಡುಕಿಕೊಂಡು ಬಂದು ಕಚ್ಚಿದ ಉದಾಹರಣೆಗಳಿವೆಯೇ? ಹಾವು ಕಡಿತದಿಂದ ಅತಿಹೆಚ್ಚು ಸಾವು ನೋವುಗಳು ಸಂಭವಿಸುವುದು ಯಾವ ಕಾಲದಲ್ಲಿ? ಸಾವಿನ ಪ್ರಮಾಣ ಎಲ್ಲಾ ಕಾಲಗಳಲ್ಲಿಯೂ ಒಂದೇ ಇದೆಯೇ? ಇದ್ದರೂ ಸಹ, ಈ ಸಾವುಗಳ ಸಂಖ್ಯೆ ಇತ್ತೀಚಿನ ಆಧುನಿಕ ಕಾಯಿಲೆಗಳಾದ ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಏಡ್ಸ್, ಧೂಮಪಾನ ಅಥವಾ ಮದ್ಯಪಾನ ಸಂಬಂಧಿತ ಕಾಯಿಲೆಗಳಿಂದ ಆಗುತ್ತಿರುವ ಸಾವುಗಳಿಗಿಂತ ಜಾಸ್ತಿಯೇ? ಅಥವಾ ಇತ್ತೀಚೆಗೆ ನಮ್ಮ ಹದಿಹರೆಯ ಯುವಕ ಯುವತಿಯರು ಮನೋದೌರ್ಬಲ್ಯದಿಂದ ಅಥವಾ ಆತ್ಮವಿಶ್ವಾಸದ ಕೊರತೆಯಿಂದ ಕ್ಷುಲ್ಲಕ ಕಾರಣಗಳಿಗಾಗಿ ಮಾಡಿಕೊಳ್ಳುತ್ತಿರುವ ಆತ್ಮಹತ್ಯೆಗಳಿಗಿಂತ ಜಾಸ್ತಿಯೇ? ಈ ಎಲ್ಲಾ ಪ್ರಶ್ನೆಗಳನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಸೂಕ್ಷ್ಮವಾಗಿ ಒಮ್ಮೆ ಅವಲೋಕಿಸಿದರೆ ಹಾವಿನ ಬಗೆಗಿರುವ ನಮ್ಮ ಅಜ್ಞಾನದ, ಭಯದ ಬುಡವೇ ಸುಟ್ಟುಹೋಗುತ್ತದೆ!
Sawscaledviper
Russels viper
ನಮ್ಮ ಸುತ್ತಮುತ್ತಲಿರುವ (ಕರ್ನಾಟಕ) ಬಹುತೇಕ ಹಾವುಗಳು ವಿಷರಹಿತ (Non-Venomous), ಅಮಾಯಕ ಮತ್ತು ಪಾಪದ ಹಾವುಗಳು. ಹೌದು, ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ಕಾಣಸಿಗುವ ಹಾವುಗಳಲ್ಲಿ ಕೇವಲ ಕಾಳಿಂಗ ಸರ್ಪ, ನಾಗರಹಾವು, ಕಟ್ಟು ಹಾವು (ಕಡಂಬಳ), ಕೊಳಕು ಮಂಡಲ (ಕನ್ನಡಿ) ಹಾವು ಮತ್ತು ಗರಗಸ ಮಂಡಲ ಹಾವುಗಳು ಮಾತ್ರ ವಿಷ ಪೂರಿತ. ಇನ್ನುಳಿದ ಪ್ರಭೇದಗಳಾದ ಕೇರೆ ಹಾವು, ಹಸಿರು ಹಾವು, ತೋಳದ ಹಾವು, ಹೆಬ್ಬಾವು, ನೀರು ಹಾವುಗಳು ಮತ್ತು ಮಣ್ಣು ಮುಕ್ಕ ಹಾವು ಇತ್ಯಾದಿ ಹಾವುಗಳು ವಿಷರಹಿತ ಹಾವುಗಳು. ಈ ವಿಷರಹಿತ ಹಾವುಗಳು ಅತ್ಯಂತ ದುರ್ಬಲ ಹಾವುಗಳು. ಮೇಲೆ ಹೆಸರಿಸಿದ ವಿಷಪೂರಿತ ಹಾವುಗಳಂತೆ ಇವುಗಳಿಗೆ ತಮ್ಮ ಆತ್ಮರಕ್ಷಣೆಗಾಗಿ ಕನಿಷ್ಠ ಪಕ್ಷ ವಿಷವೂ ಇಲ್ಲದ ಅಮಾಯಕ ಹಾವುಗಳಿವು. ಇವುಗಳು ಕಚ್ಚುವುದಿಲ್ಲವೆಂದಲ್ಲ ಕಚ್ಚುತ್ತವೆ ಆದರೆ ಇವುಗಳಲ್ಲಿ ವಿಷವಿಲ್ಲ ಮತ್ತು ಇದರಿಂದ ಯಾವುದೇ ಸಾವು ಸಂಭವಿಸುವುದಿಲ್ಲ. ಹಾಗಾಗಿ ಯಾವುದೇ ಹಾವು ವಿಷರಹಿತ ಎಂದು ಮನದಟ್ಟಾದ ಕೂಡಲೇ ಅವುಗಳನ್ನು ಹೊಡೆಯುವುದಾಗಲಿ ಅಥವಾ ಹಿಂಸಿಸುವುದಾಗಲಿ ಮಾಡಬಾರದು. ಹಾಗೆಂದು ವಿಷಪೂರಿತ ಹಾವುಗಳನ್ನು ಹೊಡೆಯಬಹುದು ಅಥವಾ ಹಿಂಸಿಸಬಹುದು ಎಂದಲ್ಲ, ಅಂತಹ ಹಾವುಗಳ ವಿಷಯದಲ್ಲಿ ಏನು ಮಾಡಬಹುದು ಎಂಬುದನ್ನು ಮುಂದೆ ಚರ್ಚಿಸೋಣ.
Common Bronze Back
ಈ ಹಾವುಗಳಲ್ಲಿ ಕೆಲವು ಹಗಲು ಹೊತ್ತು ಕ್ರೀಯಾಶೀಲವಾಗಿದ್ದು, ರಾತ್ರಿ ವೇಳೆ ತಟಸ್ಥವಾಗಿರುತ್ತವೆ. ಮತ್ತೆ ಕೆಲವು ನಿಶಾಚರಿಗಳು, ಇವುಗಳ ಓಡಾಟವೇನಿದ್ದರೂ ಕೇವಲ ರಾತ್ರಿಯ ವೇಳೆ ಮಾತ್ರ. ಹಾಗೆ ಕೆಲವು ಬಹಳ ವೇಗದವು, ಕೆಲವು ನಿಧಾನಗತಿಯವು. ಅದೇ ರೀತಿ ಅವುಗಳ ದೇಹದ ಉದ್ದ, ಗಾತ್ರ, ತೂಕ, ಬಣ್ಣ, ಚಲನೆ, ಶತ್ರು ಎದುರಾದಾಗ ಅವು ನೀಡುವ ಪ್ರತಿರೋಧದ ವಿಧಾನಗಳು, ಅವು ಕಚ್ಚುವ ರೀತಿ, ವಿಷದ ಪ್ರಮಾಣ, ವಿಷದ ತೀವ್ರತೆ, ರೂಪ, ದೇಹ ರಚನೆ, ಆಹಾರ ಕ್ರಮ, ಮಿಲನ ಕ್ರಿಯೆ, ಸಂತಾನೋತ್ಪತ್ತಿ ಮತ್ತು ವಾಸಿಸುವ ಸ್ಥಳ ಹೀಗೆ ಇನ್ನೂ ಹಲವು ಭಿನ್ನತೆಗಳಿಂದ ಹಾವುಗಳು ಈ ಸೃಷ್ಟಿಯಲ್ಲಿ ವಿಶಿಷ್ಟವಾಗಿವೆ.
ಹೆಬ್ಬಾವು
Ornate flying snake
Malabar pit viper
ಹಾವುಗಳಿಂದ ಸಾಮಾನ್ಯವಾಗಿ ತೊಂದರೆಗೊಳಗಾಗುವವರು ಕೃಷಿಕರು ಮತ್ತು ಗ್ರಾಮೀಣ ಪ್ರದೇಶದ ಜನರು. ನಗರಗಳಲ್ಲಿ ಇಲ್ಲವೆಂದಲ್ಲ, ಅಲ್ಲಿ ಜನಸಂದಣಿಯ ಕಾರಣದಿಂದಾಗಿ ಹಾವುಗಳು ಕಾಣುವುದೇ ವಿರಳ ಎನ್ನಬಹುದು. ಹಾವುಗಳ ಪ್ರಮುಖ ಆಹಾರ ಇಲಿಗಳು ಮತ್ತು ಕಪ್ಪೆಗಳು. ಇಲಿಗಳ ಮತ್ತು ಕಪ್ಪೆಗಳ ಪ್ರಮುಖ ವಾಸಸ್ಥಾನ ಹೊಲಗದ್ದೆಗಳು, ಮನೆಗಳು ಮತ್ತು ಮನೆಯ ಸುತ್ತಮುತ್ತಲಿನ ಆವರಣ. ಇರುವೆ, ಗೆದ್ದಲುಗಳಂತೆ ಇಲಿ ಮತ್ತು ಕಪ್ಪೆಗಳೂ ಸಹ ಪರಿಸರದ ತ್ಯಾಜ್ಯಗಳನ್ನು ತಿಂದು ಪರಿಸರವನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಪ್ಪೆಗಳು ಗದ್ದೆಯಲ್ಲಿನ ಅಥವಾ ಮನೆಯ ಸುತ್ತಮುತ್ತಲಿನ ಅತಿಯಾಗಿ ವೃದ್ಧಿಯಾದ ಹುಳು ಹುಪ್ಪಟೆಗಳನ್ನು ತಿಂದು ಸ್ವಚ್ಛತೆ ಕಾಪಾಡುವಲ್ಲಿ ಸಹಕರಿಸುತ್ತವೆ. ಆದರೆ ಈ ಇಲಿಗಳಿಗೆ ಆ ತ್ಯಾಜ್ಯಗಳ ಜೊತೆ ಜೊತೆಗೆ ದವಸ ಧಾನ್ಯಗಳೂ ಸಹ ಬಲು ಪ್ರಿಯವಾದ ಆಹಾರ, ಹಾಗಾಗಿ ಈ ರೀತಿಯ ದವಸ-ಧಾನ್ಯಗಳು ಸಲೀಸಾಗಿ ಇವುಗಳ ಕೈಗೆಟಕುವಾಗ, ಇವುಗಳ ಸಂಖ್ಯೆಯೂ ಸಹ ಅಷ್ಟೇ ವೇಗವಾಗಿ ವೃದ್ಧಿಯಾಗುತ್ತದೆ. ಅದು ಪ್ರಕೃತಿಯ ಸಹಜ ನಿಯಮ. ಅಂತಹ ಸಂದರ್ಭದಲ್ಲಿ ಇಲಿಗಳು ಮನುಷ್ಯನಿಗೆ ಉಪದ್ರವಿಯಾಗಿ ಗೋಚರಿಸುವುದು ಸಹಜ. ಆದರೆ ಅದು ಆ ಜೀವಿಯ ತಪ್ಪಲ್ಲ. ಅದು ಪ್ರಕೃತಿಯ ನಿಯಮ. ಪ್ರಕೃತಿ ಎಲ್ಲಾ ಜೀವಿಗಳಿಗೂ ಸಮನಾಗಿ ಸೇರಿದ್ದು ಮತ್ತು ಸಹ ಜೀವನ ಮತ್ತು ಸಹ ಬಾಳ್ವೆಯೇ ಪ್ರಕೃತಿ ಸಮತೋಲನದ ಮೂಲ ಮಂತ್ರ. ಮೊದಲೇ ತಿಳಿಸಿದಂತೆ ಆಹಾರ ಸರಪಳಿಯಲ್ಲಿ ಪ್ರತಿಯೊಂದೂ ಜೀವಿಯ ಪಾತ್ರವೂ ಬಹಳ ಮಹತ್ವದ್ದು. ಈ ಸರಪಳಿಯಲ್ಲಿ ಯಾವುದೇ ಒಂದು ಜೀವಿಯ ಸಂಖ್ಯೆ ಅತಿಯಾಗಿ ವೃದ್ಧಿಯಾದಾಗ ಅದರ ಸಮತೋಲನಕ್ಕಾಗಿ ಪ್ರಕೃತಿ ಆ ಜೀವಿಗಳ ನಿಯಂತ್ರಣಕ್ಕೆ ಪೂರಕವಾಗುವಂತೆ ಮತ್ತೊಂದು ಜೀವಿಯನ್ನು ಪ್ರಚೋದಿಸುತ್ತದೆ. ಹೀಗೆ ಅತಿಯಾಗಿ ವೃದ್ಧಿಯಾದ ಇಲಿಗಳ ಅಥವಾ ಕಪ್ಪೆಗಳ ಸಮತೋಲನಕ್ಕಾಗಿ ಹಾವುಗಳನ್ನು ಪ್ರಚೋದಿಸುತ್ತದೆ. ಹೀಗಾಗಿ ಹಾವುಗಳು ಪ್ರಕೃತಿಯಲ್ಲಿ ಅನಿವಾರ್ಯ. ಇಲ್ಲವಾದಲ್ಲಿ ಇಲಿಗಳ ಸಂಖ್ಯೆ ಅತಿಯಾಗಿ ವೃದ್ಧಿಯಾಗಿ ಪ್ಲೇಗು ಮತ್ತು ಇಲಿ ಜ್ವರಗಳಂತಹ ಪಿಡುಗುಗಳು ಮನುಷ್ಯನನ್ನು ಸಹ ಕಾಡುತ್ತವೆ. ಇಲಿಗಳ ನಿಯಂತ್ರಣ ಹಾವುಗಳಿಂದಲೇ ಆಗಬೇಕೆ? ಇಲಿ ಪಾಷಾಣ, ಯಂತ್ರಗಳ ಬಳಕೆ ಅಥವಾ ಬೆಕ್ಕುಗಳ ಸಹಾಯದಿಂದಲೂ ಸಾಧ್ಯವಲ್ಲವೇ ಅನ್ನಬಹುದು. ಆದರೆ ನಾವು ಯೋಚಿಸುತ್ತಿರುವ ಈ ವಿಧಾನಗಳು ಇಲಿಗಳು ಬಿಲದಿಂದ ಹೊರಬಂದಾಗ ಮಾತ್ರ. ಇಲಿಗಳು ಬಿಲಗಳಲ್ಲಿ ಅಡಗಿದ್ದರೂ ಬಿಲದೊಳಗೆ ನುಗ್ಗಿ ಬೇಟೆಯಾಡುವ ಸಾಮರ್ಥ್ಯವಿರುವುದು ಹಾವುಗಳಿಗೆ ಮಾತ್ರ. ಹಾಗಾಗಿ ಹಾವುಗಳು ಇಲಿಗಳ ಸಂಖ್ಯೆಯನ್ನು ಹತೋಟಿಯಲ್ಲಿ ಇಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ.
ಕೇರೆ ಹಾವು
ಕೇರೆ ಹಾವು, ನಾಗರ ಹಾವು ಮತ್ತು ತೋಳದ ಹಾವುಗಳು ತಮ್ಮ ಬೇಟೆಗಾಗಿ ಮನೆಯ ಒಳಗೂ ಪ್ರವೇಶಿಸುತ್ತವೆ. ಉಳಿದ ಹಾವುಗಳು ಮನೆ ಪ್ರವೇಶಿಸುವುದು ಅತ್ಯಂತ ವಿರಳ, ಅಂತಹ ಸನ್ನಿವೇಶಗಳು ಎದುರಾಗುವುದು ಮನೆಯ ಹೊಸ್ತಿಲು ನೆಲಮಟ್ಟಕ್ಕೆ ಅಥವಾ ನೆಲಮಟ್ಟದಿಂದ ಕೆಳಗೆ ಇದ್ದಲ್ಲಿ ಮಾತ್ರ. ತೋಳದ ಹಾವು ಮನೆಯಲ್ಲಿದ್ದರೂ ನಿಶಾಚರಿಯಾದ್ದರಿಂದ 99 ಪ್ರತಿಶತ ಇದು ಯಾರ ಕಣ್ಣಿಗೂ ಬೀಳುವುದಿಲ್ಲವಂತೆ; ಜೊತೆಗೆ ಇದು ನಿರುಪದ್ರವಿಯೂ ಸಹ. ಇನ್ನೂ ಕೇರೆ ಹಾವನ್ನು ಒಮ್ಮೆ ಹೆದರಿಸಿದರೆ ಅಥವಾ ಓಡಿಸಿದರೆ ಮತ್ತೆ ಆಕಡೆ ಬರುವುದಿಲ್ಲ. ಕೇರೆ ಹಾವು ಅಥವಾ ತೋಳದ ಹಾವು ತನ್ನ ಬೇಟೆಯನ್ನು ಒಮ್ಮೆಗೆ ಹಿಡಿದು ಅಲ್ಲಿಯೇ ತಿನ್ನುತ್ತದೆ. ಆದರೆ ನಾಗರ ಹಾವಿನ ವಿಷಯ ಹಾಗಲ್ಲ, ಅದು ಒಮ್ಮೆ ತನ್ನ ಬೇಟೆಗೆ ಗುರಿ ಇಟ್ಟರೆ ಅದನ್ನು ತಿನ್ನದೇ ಹೋಗುವುದಿಲ್ಲ. ಮತ್ತು ಅದು ಬಹುತೇಕ ತನ್ನ ಬೇಟೆಯನ್ನು ಒಂದೇ ಬಾರಿಗೆ ಹಿಡಿದು ಅಲ್ಲೇ ತಿನ್ನುವುದಿಲ್ಲ, ಬದಲಾಗಿ ತಮ್ಮ ಬೇಟೆಗೆ ಮೊದಲು ಸ್ವಲ್ಪ ವಿಷವನ್ನು ಇಂಜೆಕ್ಟ್ ಮಾಡಿ ಬಿಡುತ್ತದೆ, ಆಮೇಲೆ ಆ ಬೇಟೆ ದೂರದಲ್ಲೆಲ್ಲೋ ನರಳುತ್ತಿರುತ್ತದೆ / ಸಾಯುತ್ತದೆ.
ಕೇರೆ ಹಾವು
ಆ ಬೇಟೆಯನ್ನು ಹುಡುಕಿಕೊಂಡು ಹೋಗಿ ಅದನ್ನು ತಿನ್ನುವವರೆಗೂ ನಾಗರಹಾವು ತನ್ನ ಹಠವನ್ನು ಮುಂದುವರಿಸುತ್ತದೆ. ನೀವು ಬೆದರಿಸಿ ಓಡಿಸಿದರೂ ಮತ್ತೆ ಮತ್ತೆ ಬರುತ್ತದೆ. ನೀವು ಅದನ್ನು ಬೆದರಿಸುವಾಗ ಅದೂ ಸಹ ನಿಮಗೆ ಪ್ರತಿರೋಧ ನೀಡುತ್ತದೆ. ಹೆಡೆ ಎತ್ತಿ ನಿಲ್ಲುತ್ತದೆ, ಬುಸುಗುಡುತ್ತದೆ, ಬಿಚ್ಚಿದ ಹೆಡೆಯನ್ನು ನೆಲಕ್ಕೆ ಬಡಿಯುತ್ತದೆ ಹೀಗೆ ನಿಮ್ಮನ್ನು ಹೆದರಿಸಲು ಅದೂ ಸಹ ಪ್ರತಿತಂತ್ರ ಹೂಡುತ್ತದೆ. ನೆನಪಿರಲಿ ನಾಗರಹಾವು ಮತ್ತೆ ಮತ್ತೆ ಅದೇ ದಾರಿಯಲ್ಲಿ ಮನೆಗೆ ಬರುವುದು/ಸಂಚರಿಸುವುದು, ಹೆಡೆಯನ್ನು ನೆಲಕ್ಕೆ ಬಡಿಯುವುದು ತನ್ನ ಬೇಟೆಗಾಗಿ ಮಾತ್ರ. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು, ಅದು ನಾಗ ದೋಷ ಅಥವಾ ನಾಗರ ಹಾವಿಗೆ ಅವರ ಮೇಲಿರುವ ಯಾವುದೋ ದ್ವೇಷ ಎಂದೆಲ್ಲಾ ಕಲ್ಪಿಸಿಕೊಂಡು ಹಾವನ್ನು ಸಾಯಿಸುವುದೋ, ಹಿಂಸಿಸುವುದೋ ಮಾಡುತ್ತಾರೆ. ಆದರೆ ಅದು ತಪ್ಪು. ನೆನಪಿರಲಿ ಹಾವಿಗೆ ದ್ವೇಷವಿರುವುದಿಲ್ಲ ಬದಲಾಗಿ ರೋಷವಿರುತ್ತದೆ. ಅದು ಸಹ ತನ್ನ ಆತ್ಮರಕ್ಷಣೆಯ ಒಂದು ಪ್ರತಿತಂತ್ರ ಅಷ್ಟೆ. ನೆನಪಿನ ಶಕ್ತಿ ಇಲ್ಲದ ಒಂದು ಮಗುವಿಗಿಂತ ಹೆಚ್ಚು ವಿಕಾಸವಾಗಿರದ ಮೆದುಳು ಹೊಂದಿರುವ, ಕಿವಿಗಳಿಲ್ಲದ, ಗಟ್ಟಿಯಾದ ಎಲುಬಿಲ್ಲದ ಮತ್ತು ಕೈ ಕಾಲುಗಳೇ ಇಲ್ಲದ ಬಡಪಾಯಿ ಅಮಾಯಕ ಜೀವಿಯ ಮೇಲೆ ದ್ವೇಷದ ಅಪವಾದ ಹೊರಿಸುವುದೆಷ್ಟು ಸರಿ ಅಲ್ಲವೇ? ಹಾಗೆಂದು ಹಾವನ್ನು ಮನೆಗೆ ಬಿಟ್ಟುಕೊಂಡು ಅಪಾಯ ತಂದುಕೊಳ್ಳುವುದೂ ಸರಿಯಲ್ಲ. ಇಂತಹ ಸಂದರ್ಭಗಳಲ್ಲಿ ಉರಗ ಸಂರಕ್ಷಕರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ದೂರದ ಸೂಕ್ತ ಪ್ರದೇಶಕ್ಕೆ ಬಿಡುವುದೊಂದೇ ಸೂಕ್ತ ಪರಿಹಾರ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲಿ ಮತ್ತು ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು, ಇಲಿ ಮತ್ತು ಕಪ್ಪೆಗಳು ಮನೆಯಲ್ಲಿ ಇರದಂತೆ ನೋಡಿಕೊಳ್ಳುವುದು ಅತ್ಯಂತ ಸುರಕ್ಷಿತ ಮುನ್ನೆಚ್ಚರಿಕಾ ಕ್ರಮ. ನೆನಪಿರಲಿ ಪ್ರಕೃತಿಯ ಸಮತೋಲನ ವ್ಯವಸ್ಥೆಯಲ್ಲಿ ಸಹಜೀವನ ಮತ್ತು ಸಹಬಾಳ್ವೆ ಅತೀ ಅಗತ್ಯ.
Common cat snake
Barred Wolf Snake
ಹಾವುಗಳು ಸಾಮಾನ್ಯವಾಗಿ ಒಮ್ಮೆಗೆ ಹಲವಾರು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. (ವರ್ಷಕ್ಕೆ ಒಂದು ಬಾರಿ). ಇದರಿಂದಲೂ ಸಹ ಜನರು ಭಯ ಭೀತರಾಗುತ್ತಾರೆ. ಒಂದು ಹಾವು ಒಂದು ಸಲಕ್ಕೆ ಹಲವಾರು ಮೊಟ್ಟೆಗಳನ್ನಿಟ್ಟು ಮರಿ ಮಾಡಿ ಹಾವಿನ ಸಂಖ್ಯೆ ಎಥೇಚ್ಛವಾಗಿ ವೃದ್ಧಿಯಾದರೆ ಮುಂದೆ ಗತಿ ಏನು ಎಂಬ ಭೀತಿ. ಆದರೆ ಈ ಭೀತಿ ಅವೈಜ್ಞಾನಿಕವಾದದ್ದು. ಹುಟ್ಟಿದ್ದು ಎಲ್ಲಾ ಮರಿಗಳು ಬದುಕುಳಿಯುವುದು ಕಷ್ಟ ಸಾಧ್ಯ. ಏಕೆಂದರೆ ನವಿಲು, ಕೆಂಬೂತ, ದೊಡ್ಡ ಕಪ್ಪೆ, ಗರುಡ ಮತ್ತು ಇತರ ಹಾವುಗಳು ಸಣ್ಣ ಮರಿಗಳನ್ನು ತಿಂದು ಬಿಡುತ್ತವೆ. ಇನ್ನೊಂದು ಬಹು ಮುಖ್ಯವಾದ ಅಂಶವೆಂದರೆ ಹಾವಿಗೆ ತನ್ನ ಸುತ್ತಮುತ್ತಲಿನ ಬಹುತೇಕ ಜೀವಿಗಳೆಲ್ಲಾ ಶತ್ರುಗಳೇ! ಮಾನವ, ಹಸು, ನಾಯಿ, ಕೋಳಿ, ನವಿಲು, ಗರುಡ, ಬೆಕ್ಕು, ಮುಂಗುಸಿ, ದೊಡ್ಡ ಕಪ್ಪೆ ಹೀಗೆ ಎಲ್ಲವೂ ಶತ್ರುಗಳೇ! ಇವೆಲ್ಲವನ್ನೂ ಸಂಬಾಳಿಸಿಕೊಂಡು ತನ್ನ ಆಹಾರವನ್ನು ಹುಡುಕಿಕೊಂಡು ಬದುಕಿ ತನ್ನ ಸಂತಾನೋತ್ಪತ್ತಿಯನ್ನೂ ಮಾಡಬೇಕಾದುದು ಹಾವಿಗಿರುವ ಸವಾಲು. ಇದು ಆಹಾರ ಸರಪಳಿಯಲ್ಲಿ ಪ್ರಕೃತಿಯ ಸಮತೋಲನೆ ಕಾಪಾಡುವ ರಹಸ್ಯಗಳಿಗೆ ಒಂದು ಸಣ್ಣ ಉದಾಹರಣೆಯಷ್ಟೆ. ಇದು ಪ್ರತೀ ಜೀವಿಗೂ ಅನ್ವಯಿಸುತ್ತದೆ, ಹಿಂದೆ ಇದು ಮಾನವರಿಗೂ ಅನ್ವಯಿಸುತ್ತಿದುದರಿಂದ ಜನಸಂಖ್ಯೆ ನಿಯಂತ್ರಣದಲ್ಲಿತ್ತು, ಕೃತಕ ಬುದ್ಧಿಮತ್ತೆಯ ಮತ್ತು ವಿಜ್ಞಾನದ ನೆರವಿನಿಂದ ಮನುಷ್ಯನ ಸರಾಸರಿ ಜೀವಿತಾವಧಿ ಹೆಚ್ಚಿರುವುದರ ಪರಿಣಾಮವೇ ಈ ಜನಸಂಖ್ಯಾ ಸ್ಫೋಟ.
ಮುಂದುವರೆಯುವುದು . . .
ಲೇಖನ: ಹೊನ್ನಸ್ವಾಮಿ ಅ. ರಾ.
ಮಂಡ್ಯ ಜಿಲ್ಲೆ, ಪ್ರಸ್ತುತ ವಾಸ: ಕತಾರ್