ನೀಲಿ ಕಂಡ ಕೆಂಪು!
© DANIEL HURST PHOTOGRAPHY_MOMENT_GETTY IMAGES
ಆಗ ತಾನೆ ಶಾಲೆಯ ಗೋಡೆಗಳನ್ನು ನೋಡಿದ ವಯಸ್ಸು. ಆದರೆ ನನ್ನ ಮೊದಲ ಸರ್ಕಾರಿ ಶಾಲೆಯ ಅನುಭವಕ್ಕೆ ಮೊದಲೇ ಮನೆಯ ಶಾಲೆಯಲ್ಲಿ ಕಲಿತದ್ದೇ ಹೆಚ್ಚು. ಅಲ್ಲಿನ ಮುಖ್ಯ ಶಿಕ್ಷಕರು ಗೊತ್ತಲ್ಲವೇ, ಅಮ್ಮ. ಈಗಿನ ಶಾಲೆಗಳ ಹಾಗೆ ಕಲಿಯಲು ಇದೇ ಜಾಗ, ಇದೇ ಸಮಯ ಎಂಬ ಕಡಿವಾಣಗಳಿಲ್ಲದ ಸಮಯವದು. ಅಮ್ಮ ಸೀಗೇಕಾಯಿ ಹಚ್ಚಿ ಸ್ನಾನ ಮಾಡಿಸುತ್ತಿದ್ದ ಸಮಯವದು. ಬಿಸಿ ನೀರಿನ ಹಂಡೆಯಲ್ಲಿ ನೀರನ್ನು ಕಾಯಿಸುತ್ತಿದ್ದ ಬೆಂಕಿಯ ಬೆಳಕನ್ನೂ ಮೀರಿ ಚಂದ್ರ ಕಿಟಕಿಯಿಂದ ಇಣುಕಿದ್ದ. ನನ್ನ ಯಾರೋ ಇಣುಕಿದಂತೆ ಆಗಿ ನಾನೂ ಅವನತ್ತ ನೋಡಿದೆ. ಆದರೆ ಅಲ್ಲಿ ನನಗೆ ಕಂಡದ್ದು ಚಂದ್ರನ ಚಂದದ ಮುಖವಲ್ಲ. ಬದಲಿಗೆ ಗುಂಡಗಿನ ಬಿಳಿ ಗೋಳದ ಮೇಲೆ ಮಚ್ಚೆಗಳು. ತಕ್ಷಣ ಮೂಡಿದ ಪ್ರಶ್ನೆ, ಅದೇನದು?ಅದನ್ನೇ ಅಮ್ಮನಿಗೆ ಕೇಳಿದ್ದೆ, ಅದಕ್ಕೆ ಅಮ್ಮ ಅವಳ ಬಳುವಳಿಯಲ್ಲಿ ಬಂದಿದ್ದ ಜ್ಞಾನವನ್ನೇ ನನಗೂ ಒಪ್ಪಿಸುತ್ತಾ, ‘ಅದಾ, ಚಂದ್ರನ್ ಮೇಲೆ ಒಂದು ದೊಡ್ಡ ಮರ ಐತೆ. ಅದ್ರ ಕೆಳ್ಗೆ ಒಬ್ಬ ಋಷಿ ಜಪ ಮಾಡ್ತಾ ಇರ್ತಾರೆ’. ಈ ಮಾತುಗಳು ನನಗೆ ಈಗಲೂ ನೆನಪಿದೆ. ವಿಜ್ಞಾನ ವಿಷಯ ಆಯ್ಕೆ ಮಾಡಿ, ಓದಿ, ಖಗೋಳ ಶಾಸ್ತ್ರದ ಪರಿಚವಿದ್ದರೂ, ಚಂದ್ರನ ಮೇಲಿನ ಆ ಗುಳಿಗಳು ದೊಡ್ಡ ಮರದ ಹಾಗೆ ಒಮೊಮ್ಮೆ ಕಾಣುತ್ತವೆ. ಕಲಿಕೆಯ ಪರಿಣಾಮ ಕ್ಷಣ ಮಾತ್ರದಲ್ಲಿ ಅದು ಇದಲ್ಲ ಎಂದು ಅರಿವಾಗಿ, ಮುಖದಲ್ಲಿ ಮುಗುಳುನಗೆ ಮೂಡುತ್ತದೆ. ಇದು ಜ್ಞಾನದಿಂದಾದ ನನ್ನ ರಸಾನುಭವದ ವಿಘ್ನ ಎಂದರೆ ತಪ್ಪೇನಿಲ್ಲ. ನನ್ನ ಅನುಭವದ ಆಳಕ್ಕೇನು ಹೋಗುವುದಿಲ್ಲ ಬಿಡಿ. ಬದಲಿಗೆ ಇಂತಹ ಚಿಕ್ಕಂದಿನ ಗಾಢ ನಂಬಿಕೆಗಳು ನಾವು ಬೆಳೆದಂತೆ, ಬೆರೆತಂತೆ, ಕಲಿತಂತೆ ಮಿಥ್ಯ ಎಂದು ಅರಿವಾದರೆ ಹೇಗಿರುತ್ತದೆ? ಅದು ಒಬ್ಬರಿಗೆ ಒಂದೊಂದು ಅನುಭವ ಕೊಡುತ್ತದೆ. ನಾನು ಈಗ ವಿಜ್ಞಾನದ ವಿಚಾರದಲ್ಲಿ ಮಾತ್ರ ಹೇಳಲು ಹೊರಟಿರುವ ವಿಷಯ ಅಂಥದ್ದೇ. ನಿಮಗೆ ಹೇಗೆ ಅನಿಸುತ್ತದೆ ನೋಡಿ. “ಬ್ಲೂ ಬೆರಿ” ಹಣ್ಣು ನೋಡಿದ್ದೀರಾ? ನಮ್ಮಲ್ಲಿ ನೇರಳೆ ಹಣ್ಣು ಹೇಗೋ ಅಮೆರಿಕಾ ದೇಶಗಳಲ್ಲಿ ಈ ಬ್ಲೂ ಬೆರಿ. ಹೆಸರೇ ಸೂಚಿಸುವಂತೆ ಈ ಹಣ್ಣುಗಳ ಬಣ್ಣ? ಬ್ಲೂ ಅಂದರೆ ನೀಲಿ. ಚಿತ್ರದಲ್ಲೂ ಕಾಣಬಹುದು. ಆದರೇ… ಈ ಬ್ಲೂ ಬೆರಿ ಹಣ್ಣುಗಳ ನಿಜವಾದ ಬಣ್ಣ ಬ್ಲೂ ಅಲ್ಲವೇ ಅಲ್ಲ ಅದು ಕೆಂಪು!
ನಂಬಲಿಕ್ಕೆ ಕಷ್ಟ ಅಲ್ಲ, ಇದು ಸತ್ಯವಲ್ಲ, ಸಾಧ್ಯವೇ ಇಲ್ಲ. ಎನಿಸುತ್ತದೆ ಅಲ್ಲವೇ, ನನಗೂ ಮೊದಲಿಗೆ ಹಾಗೆ ಅನ್ನಿಸಿದ್ದು. ಮುಂದೆ ಓದಿದ ನಂತರವೇ ಹೇಗೆ? ಏಕೆ?ಎಂದು ತಿಳಿದದ್ದು. ನೀವೂ ಈ ಲೇಖನವನ್ನು ಓದಿ-ಮುಗಿಸುವಷ್ಟರಲ್ಲಿ ಒಂದು ಸಮಾಧಾನಕರ ಉತ್ತರ ಸಿಗಬಹುದು, ಓದಿ ನೋಡಿ. ಬ್ಲೂ ಬೆರಿ ಅಥವಾ ಗಾಢ ಬಣ್ಣದ ದ್ರಾಕ್ಷಿಯಂತಹ ಹಣ್ಣುಗಳ ಬಣ್ಣ ನೀಲಿಯಾಗಿ ಕಂಡರೂ ಆ ಹಣ್ಣು ನಿಜವಾಗಿಯೂ ನೀಲಿ ಬಣ್ಣದ್ದಾಗಿರುವುದಿಲ್ಲ. ಬದಲಿಗೆ ಅವುಗಳ ಮೇಲೆ ಹರಡಿರುವ, ನಾವು ಬಳಸುವ ಪೇಪರ್ ದಪ್ಪದಲ್ಲಿ ಸಾವಿರ ಭಾಗ ಮಾಡಿದರೆ ದೊರೆಯುವ ದಪ್ಪದಷ್ಟು ಸಣ್ಣ ‘ಮೇಣದ ಪದರ (waxy layer)’ ಇರುತ್ತದೆ. ಅತ್ಯಂತ ನಿಖರವಾದ ಸೂಕ್ಷ್ಮದರ್ಶಕವನ್ನು ಬಳಸಿ ಈ ‘ನ್ಯಾನೋಪದರವನ್ನು’ ವೀಕ್ಷಿಸಿದರು. ಈ ಪದರದಲ್ಲಿರುವ ಮೇಣದ ರಚನೆ ನೀಲಿ ಮತ್ತು ಅತಿನೇರಳೆ ಬಣ್ಣವನ್ನು ಪ್ರತಿಫಲಿಸುತ್ತದೆ. ಅದೇ ನಮ್ಮ ಹಾಗೂ ಇತರ ಪ್ರಾಣಿ-ಪಕ್ಷಿಗಳ ಕಣ್ಣಿಗೆ ಬಿದ್ದು ಆ ಹಣ್ಣು ನೀಲಿ ಬಣ್ಣದ್ದಾಗಿ ಕಾಣುತ್ತದೆ. ಆದರೆ ನಿಜ ಸಂಗತಿ ಏನೆಂದರೆ, ಬೇರೆ ಹಣ್ಣುಗಳ ಬಣ್ಣವನ್ನು ಆ ಹಣ್ಣಿನ ಮೇಲ್ಮೈ ನಲ್ಲಿರುವ ವರ್ಣದ್ರವ್ಯ (pigment) ಕಾರಣವಾಗಿರುತ್ತದೆ. ಅದೇ ತರಹದ ವರ್ಣದ್ರವ್ಯ ಈ ಬ್ಲೂ ಬೆರಿಯಲ್ಲಿಯೂ ಇದೆ ಅದು ‘ಆಂಥೋಸಯಾನಿನ್ (anthocyanin)’ ಎಂದು ಕರೆಯಲ್ಪಡುವ, ಗಾಢ ಕೆಂಪು ವರ್ಣವನ್ನು ನೀಡುವ ವರ್ಣದ್ರವ್ಯ. ಹಾಗೆ ನೋಡಿದರೆ ನಿಜವಾಗಿ ‘ಬ್ಲೂ ಬೆರಿಯ’ ಬಣ್ಣ ಕೆಂಪು. ಆದರೆ ಮೇಣದ ಪದರ ಹಾಗೂ ಈ ಬೆಳಕಿನ ಪ್ರತಿಫಲನದ ಆಟದಿಂದ ‘ರೆಡ್ ಬೆರಿ’ ಆಗಬೇಕಾದದ್ದು ‘ಬ್ಲೂ ಬೆರಿ’ ಆಯಿತು.
ಹಾಗಾದರೆ ಈ ಮೇಣದ ಪದರವನ್ನು ತೆಗೆದುಬಿಟ್ಟರೆ?ಎಂದು ಯೋಚಿಸಿ, ಅದನ್ನೂ ವಿಜ್ಞಾನಿಗಳು ಪ್ರಯೋಗ ಮಾಡಿ ನೋಡಿದರು. ಆಗ ಹಣ್ಣು ನೀಲಿಯೂ ಕಾಣದೇ, ಕೆಂಪಾಗಿಯೂ ಕಾಣದೆ. ಗಾಢವಾಗಿ (dark) ಕಂಡಿತು. ಈ ಮೇಣದ ರಚನೆ ಮತ್ತು ಕಾರ್ಯವನ್ನು ತಿಳಿಯಲೆಂದು, ನೀಲಿ ಹಣ್ಣಿನ ಮೇಲೆ ದೊರೆಯುವ ಅದೇ ಮೇಣವನ್ನು ತೆಗೆದುಕೊಂಡು ಇಂಗಾಲಯುಕ್ತ ದ್ರಾವಣ (solution of carbon based molecules)ಒಂದರಲ್ಲಿ ಬೆರೆಸಿದರು ಅದರಲ್ಲಿ ಅದು ಕರಗಿತು. ನಂತರ ಅದನ್ನೇ ತೆಗೆದು ಒಂದು ಪೇಪರ್ ನ ಮೇಲೆ ಲೇಪಿಸಲಾಯಿತು. ದ್ರಾವಣ ಆವಿಯಾದ ಮೇಲೆ ಮೇಣವಿದ್ದ ಕಾರಣ ಪೇಪರ್ ನ ಆ ಹಚ್ಚಿದ ಭಾಗ ನೀಲಿಯಾಗಿ ಕಂಡಿತು. ಈ ಸಂಶೋಧನೆಯ ಉಪಕಾರದಿಂದ ಕಲೆಯಿಲ್ಲದ ಬಣ್ಣಗಳನ್ನು ತಯಾರಿಸುವ ವಿಧಾನಗಳಿಗೆ ನಾಂದಿ ಆದಂತಾಯಿತು.
ಅದೇ ಸಂಶೋಧನೆಯನ್ನು ಮುಂದುವರೆಸಿ, ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ನಿಟ್ಟಿನಲ್ಲಿ ಒಂದು ಯೋಚನಾ ಸಮೂಹ ಮುಂದೆ ಸಾಗಬಹುದು. ಆದರೆ ನಮ್ಮಂತವರ ತಲೆಯಲ್ಲಿ ಓಡುವುದು, ‘ಕಂಡದ್ದೊಂದು ಇದ್ದದ್ದೊಂದು!’ ಅಷ್ಟು ಸ್ಪಷ್ಟವಾಗಿ ನೀಲಿಯಾಗಿ ಕಂಡರೂ ಆ ಹಣ್ಣು ನೀಲಿಯಲ್ಲ ಎಂದರೆ… ನಾವು ನೋಡಿಬಿಟ್ಟಿದ್ದೇವೆ, ತಿಳಿದುಬಿಟ್ಟಿದ್ದೇವೆ ಎಂಬುದರಲ್ಲಿ ಎಷ್ಟು ಸತ್ಯ? ಏನು ಮಿಥ್ಯ?
ನಮ್ಮ ನಿಮ್ಮ ಕೈಯಲ್ಲೇನಿದೆ, ಇದು ಸಮಯ ಮಾತ್ರ ಉತ್ತರಿಸಬಹುದಾದ ರಹಸ್ಯ!
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ., ಬೆಂಗಳೂರು ನಗರ ಜಿಲ್ಲೆ
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.