ಜೇನು ಪ್ರಪಂಚ: ಭಾಗ – ೬
©ಗುರುಪ್ರಸಾದ್ ಕೆ. ಆರ್.
ಕಳೆದ ಸಂಚಿಕೆಯಿಂದ…
ನೀವು ಮನುಷ್ಯರು ಸಂಘ ಜೀವಿಗಳು, ಸಾಮಾಜಿಕವಾಗಿ, ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿರುವಿರಿ, ಕೆಲವು ಸಂದರ್ಭಗಳಲ್ಲಿ ಪ್ರಾಣವನ್ನೇ ಗೆದ್ದು ಬರುವಷ್ಟು ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆದಿರುವಿರಿ, ಆದರೆ 2020ರಲ್ಲಿ ನಿಮಗೆ COVID-19 ಎನ್ನುವ ವೈರಾಣು ಎಲ್ಲಿಂದ ಬಂದು ವಕ್ಕರಿಸಿತೋ ತಿಳಿಯದು, ಒಮ್ಮೆ ಇಡೀ ನಿಮ್ಮ ಮಾನವ ಸಂಕುಲವನ್ನೇ ನಡುಗಿಸಿದೆ. ಇದು ನಮ್ಮ ಕೀಟ ಸಮುದಾಯದಿಂದ ಬಂದು ವಕ್ಕರಿಸಿದ್ದಲ್ಲಾ ಅನ್ನೋದೇ ನಮಗೆ ನೆಮ್ಮದಿಯ ವಿಷಯ.
ಸಾಂಕ್ರಾಮಿಕ ರೋಗ ಕಾಣಿಸಿಕೊಂಡರೆ ನಾವು ಹೇಗೆ ಅದನ್ನು ತಡೆಗಟ್ಟುತ್ತೇವೆ ಅನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಈಗ ನಾನು ನಮ್ಮ ಜೇನುಹುಳುಗಲ್ಲಿ ಇಂತಹ ಮಾರಿ ವಕ್ಕರಿಸಿದರೆ ಏನು ಮಾಡುತ್ತೇವೆ ಎಂಬುದನ್ನು ತಿಳಿಸುವೆ.
ಒಂದು ವೇಳೆ ಯಾವುದಾದರೂ ಸಾಂಕ್ರಾಮಿಕ ರೋಗ ನಮಗೆ ತಗುಲಿದರೆ ಇಡೀ ನಮ್ಮ ವಠಾರವೇ ಸರ್ವನಾಶವಾಗುತ್ತದೆ, ಕಾರಣ ನಾವು ಒಂದೇ ಮನೆಯಲ್ಲಿ ಸಾವಿರಾರು ಸೋದರ ಸೋದರಿಯರೊಂದಿಗೆ ಜೀವಿಸುತ್ತಿರುತ್ತೇವೆ. ನಮ್ಮ ಸಾಮಾಜಿಕ ಜೀವನ ವಿಧಾನವು ಎಲ್ಲರಿಗಿಂತ ಹೆಚ್ಚಾಗಿ ರೋಗ ಬರಲು ಮತ್ತು ಹರಡಲು ಸಹಕರಿಸುತ್ತದೆ. ನಮ್ಮ ಮನೆಯಲ್ಲಿ ಶೇಖರಿಸಿ ಇಟ್ಟ ಪರಾಗರೇಣುಗಳ ಪ್ರೋಟೀನ್ ಯುಕ್ತ ಆಹಾರ ಮತ್ತು ಜೇನುತುಪ್ಪ ನಮಗೆ ಇನಷ್ಟು ಕ್ರಿಮಿಗಳನ್ನು ಪರಭಕ್ಷಕಗಳನ್ನು ಆಕರ್ಷಿಸುತ್ತದೆ. ಆದರಿಂದ ಎಲ್ಲರಿಗಿಂತಲೂ ನಾವು ಹೆಚ್ಚು ಆರೋಗ್ಯ ವಿಷಯದಲ್ಲಿ, ಸಾಂಕ್ರಾಮಿಕ ರೋಗ ತಗಲದಂತೆ ನೋಡಿಕೊಳ್ಳುವ ವಿಷಯದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಬೇಕಿರುತ್ತದೆ.
ನಾವು ನಮ್ಮ ವಠಾರಕ್ಕೆ ರೋಗ ತಗಲದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತೇವೆ.
- ಮರಗಿಡಗಳು ರೋಗಾಣುಗಳಿಂದ ಮತ್ತು ಕ್ರಿಮಿ-ಕೀಟಗಳಿಂದ ಹೋರಾಡಲು ದ್ವಿತೀಯ ರಾಸಾಯನಿಕಗಳನ್ನು (Secondary metabolites) ಉತ್ಪಾದಿಸುತ್ತವೆ, ಈ ರಾಸಾಯನಿಕಗಳ ಅಂಶ ಪರಾಗರೇಣು ಮತ್ತು ಮಕರಂದದಲ್ಲಿ ಕೂಡ ಇರುವುದರಿಂದ, ನಾವು ಆಹಾರವಾಗಿ ಅವನ್ನು ನಮ್ಮ ಗೂಡಿಗೆ ತಂದಾಗ, ಆ ಅಂಶವು ನಮ್ಮನ್ನು ಮತ್ತು ನಮ್ಮ ವಠಾರವನ್ನು ಕ್ರಿಮಿ-ಕೀಟಗಳಿಂದ ರಕ್ಷಿಸುತ್ತದೆ. ನಮ್ಮ ಜೇನುತುಪ್ಪ ಅಷ್ಟೊಂದು ಸಕ್ಕರೆ ಭರಿತವಾಗಿದ್ದರೂ ಯಾವುದೇ ಸೂಕ್ಷ್ಮಾಣು ಜೀವಿಗಳು ಬೆಳೆಯದೇ ಇರಲು ಮರಗಿಡಗಳ ಈ ದ್ವಿತೀಯ ರಾಸಾಯನಿಕಗಳು ಕೂಡ ಒಂದು ಕಾರಣ.
- ರೋಗಾಣುಗಳನ್ನು ತಡೆಯುವ ಸಲುವಾಗಿ ನಾವು ಪ್ರೊಪೊಲಿಸ್ ತಯಾರಿಸಿ ನಮ್ಮ ಮನೆಯ ಸುತ್ತಲೂ ಮತ್ತು ವಠಾರದ ಅನಾವಶ್ಯಕ ಜಾಗಗಳನ್ನು ಇದರಿಂದ ಮುಚ್ಚುತ್ತೇವೆ, ಇದನ್ನು ನಾವು ಮರದ ರಾಳ, ಪರಾಗರೇಣು ಮತ್ತು ಇತರ ಮರಗಳು ಸ್ರವಿಸುವ ದ್ರವದಿಂದ ತಯಾರಿಸುತ್ತೇವೆ. ಮತ್ತು ಮರಗಳು ಉತ್ಪಾದಿಸುವ ರಾಳದಲ್ಲಿ ಕ್ರಿಮಿನಾಶಕ ಅಂಶವಿರುವುದರಿಂದ ನಾವು ಅದನ್ನು ಸಂಗ್ರಹಿಸಿ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ.
- ನಮ್ಮ ಹೊರ ಚರ್ಮವು ಹೈಡ್ರೋಕಾರ್ಬನ್ ನಿಂದ ಕೂಡಿದ್ದು, ಇದು ನೀರು ನಮ್ಮ ದೇಹದಿಂದ ಹೊರಹೋಗದ ಹಾಗೆ ತಡೆದು, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ನಮ್ಮ ಚರ್ಮದ ಮೂಲಕ ಒಳ ಬರದಂತೆ ತಡೆಯುತ್ತದೆ.
- ನಾವು ಮನೆಯನ್ನು ಮೇಣದಿಂದ ನಿರ್ಮಿಸುತ್ತೇವೆ, ನಾವು ಉತ್ಪಾದಿಸುವ ಮೇಣಕ್ಕೆ ಸೂಕ್ಷ್ಮಾಣು ಜೀವಿಗಳಿಂದ ರಕ್ಷಿಸುವ ಗುಣವಿರುತ್ತದೆ, ಇದು ಪರಾಗರೇಣು ಮತ್ತು ಮಕರಂದದಲ್ಲಿನ ಔಷಧೀಯ ಗುಣಗಳೊಂದಿಗೆ ಸೇರಿ ನಮ್ಮನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೋಗರುಜಿನಗಳಿಂದ ಕಾಪಾಡುತ್ತದೆ.
- ನಾವು ತಿನ್ನುವ ಆಹಾರ ಮತ್ತು ಅನುಸರಿಸುವ ಪದ್ಧತಿಗಳು ನಮ್ಮನ್ನು ರೋಗ ಹರಡದಂತೆ ತಡೆಯುತ್ತವೆ. ನಮ್ಮ ರಾಣಿಗೆ ರಾಯಲ್ ಜೆಲ್ಲಿ ಉತ್ಪಾದಿಸಿ ತಿನ್ನಿಸುವ ಸೋದರಿಯರೇ ಬೇರೆ, ನನ್ನ ಸೋದರಿ ಮರಿಗಳಿಗೆ ಆಹಾರ ಉತ್ಪಾದಿಸಿ ತಿನ್ನಿಸುವವರು ಬೇರೆ, ಇನ್ನೂ ಸೋದರ ಮರಿಗಳಿಗೆ ಆಹಾರ ನೀಡುವರೇ ಬೇರೆ ಆದ್ದರಿಂದ ಒಬ್ಬರಿಗೆ ಇದ್ದ ರೋಗ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಕಡಿಮೆ ಜೊತೆಗೆ ನಾವು ತಿನ್ನಿಸುವ ಆಹಾರದಲ್ಲಿ ರೋಗ ನಿರೋಧಕ ಅಂಶಗಳನ್ನು ಅವಶ್ಯಕತೆಗೆ ಅನುಗುಣವಾಗಿ ಮಿಶ್ರಣ ಮಾಡಲಾಗುತ್ತದೆ.
- ಇನ್ನೂ ಮನುಷ್ಯರಿಂದ ಮತ್ತು ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ನಮಗಿರುವ ಏಕೈಕ ಆಯುಧ ನಮ್ಮ ವಿಷ ಕುಟುಕು. ನಮ್ಮ ಈ ಕುಟುಕಿನ ವಿಷದ ಶೇಕಡಾ 50 ರಷ್ಟು ಮೆಲಿಟಿನ್ ಎಂಬ ರಾಸಾಯನಿಕವಿದ್ದು ಇದರ ಪ್ರಾಮುಖ್ಯತೆ ಏನೆಂದರೆ ಇದು ಪರಿಣಾಮಕಾರಿಯಾಗಿ ರೋಗಾಣುಗಳ ವಿರುದ್ದ ಹೋರಾಡುತ್ತದೆ. ಮೆಲಿಟಿನ್ ಜೊತೆಗೆ ವಿಷದಲ್ಲಿ ಅಪಮಿನ್ ಎಂಬ ರಸಾಯನಿಕವಿದ್ದು, ಇವೆರಡರ ಮಿಶ್ರಣವನ್ನು ನಾವು ನಮ್ಮ ದೇಹದ ಮೇಲೆ ಮತ್ತು ನಮ್ಮ ವಠಾರದ ಮೇಲೆ ಆಗಾಗ ನಮ್ಮ ಕುಟುಕುವಿನಿಂದ ಹಚ್ಚುತ್ತಿರುತ್ತೇವೆ ಇದರಿಂದ ನಾವು ಮತ್ತು ನಮ್ಮ ವಠಾರವನ್ನು ಕ್ರಿಮಿಗಳಿಂದ ರಕ್ಷಿಸಿಕೊಳ್ಳುತ್ತೇವೆ.
ಮೇಲಿನ ಎಲ್ಲವೂ ನಾವು ನಮ್ಮನ್ನು ರೋಗಾಣುಗಳಿಂದ ಕಾಪಾಡಿಕೊಳ್ಳಲು ಮಾಡುವ ಪ್ರಯತ್ನಗಳು, ನಿಮಗೆ ಇನ್ನೂ ಒಮ್ಮೆ ರೋಗ ತಗುಲಿದರೆ, ನಮ್ಮಲ್ಲಿ ವಯಸ್ಸಿಗೆ ತಕ್ಕ ಕೆಲಸಕಾರ್ಯಗಳನ್ನು ನಿರ್ವಹಿಸುತ್ತೇವೆಂದು, ವಠಾರದ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಲೆಂದೇ ಒಂದು ಪ್ರತ್ಯೇಕ ತಂಡವಿರುತ್ತದೆ. ಈ ತಂಡದ ವಿಶೇಷತೆ ಎಂದರೆ ಇದರ ವಾಸನೆ ಗ್ರಹಿಸುವ ಗ್ರಂಥಿಗಳು ಬಹಳ ಚುರುಕಾಗಿದ್ದು, ಎಂತವುದೇ ರಾಸಾಯನಿಕಗಳನ್ನು ಗ್ರಹಿಸುವ ಸಾಮರ್ಥ್ಯವಿರುತ್ತದೆ. ಒಮ್ಮೆ ಮರಿಗಳಿಗೆ ರೋಗ ತಗುಲಿದರೆ, ಮರಿಯು ಬಾಷ್ಪಶೀಲ ರಾಸಾಯನಿಕಗಳನ್ನು ಶ್ರವಿಸುತ್ತವೆ, ಈ ಬಾಷ್ಪಶೀಲ ರಾಸಾಯನಿಕಗಳನ್ನು ಗ್ರಹಿಸಿ ಆ ಮರಿಗಳನ್ನು ಗೂಡಿಂದ ತೆಗೆದು ದೂರ ಎಸೆಯುತ್ತೇವೆ. ಇನ್ನೂ ರೋಗದ ತೀವ್ರತೆ ಹೆಚ್ಚಾದರೆ ವಠಾರವನ್ನೇ ತೊರೆದು ದೂರದ ಪ್ರದೇಶಕ್ಕೆ ವಲಸೆ ಹೋಗುತ್ತೇವೆ.
ಲೇಖನ: ಹರೀಶ ಎ. ಎಸ್.
ಜಿಕೆವಿಕೆ, ಬೆಂಗಳೂರು ನಗರ ಜಿಲ್ಲೆ