ಸಮುದ್ರದಲ್ಲಿ ಶಾಕಿಂಗ್ ಶಬ್ಧ!

ವಿದ್ಯಾರ್ಥಿ : ‘ಚಾನ್ಸೇ ಇಲ್ಲ ಸಾರ್, ಗಾಳಿನಲ್ಲೇ ಬೇಗ ಶಬ್ಧ ಚಲ್ಸೋದು! ನೀರಲ್ಲಿ ಕಡಿಮೆ’
ನಾನು : ಅದು ಹೆಂಗೋ? ನೀನ್ ಏನೇ ಆನ್ಸರ್ ಹೇಳಿದ್ರೂ ಕಾರಣ ಕೊಡ್ಬೇಕಲ್ಲ…
ವಿದ್ಯಾರ್ಥಿ : ಓಹ್ ಅದಕ್ಕೇನಂತೆ, ನೋಡಿ ಸಾರ್… ನೀವೂ ಸ್ವಿಮ್ಮಿಂಗ್ ಮಾಡಿರ್ತೀರಾ ಅಲ್ವಾ?
ನಾನು : ಹೌದು.
ವಿದ್ಯಾರ್ಥಿ : ನೀರಲ್ಲಿ ಮಾತಾಡಿದೀರಾ?
ನಾನು : ಆಆ… ಮೋಸ್ಟ್ಲೀ.. ಇಲ್ಲ.
ವಿದ್ಯಾರ್ಥಿ : ಆದ್ರೆ ನಾನ್ ಟ್ರೈ ಮಾಡಿದೀನಿ ಸಾರ್, ನಾವು ನೀರಲ್ಲಿ ಮಾತಾಡಕ್ಕೇ ಕಷ್ಟ. ಆದ್ರೂ ಮಾತಾಡಿದ್ರೆ ಗಾಳಿನಲ್ಲಿ ಮಾತಾಡೋಷ್ಟು ಜೋರಾಗಿ ಅಥ್ವಾ ದೂರಕ್ಕೆ ಕೇಳ್ಸಲ್ಲ ಸಾರ್.
ತಾರ್ಕಿಕವಾಗಿ(logically) ನನ್ನ ತರಗತಿಯ ವಿದ್ಯಾರ್ಥಿ ಸರಿ ಎನಿಸಿದರೂ, ವೈಜ್ಞಾನಿಕವಾಗಿ ಅಲ್ಲ. ಗಾಳಿಯಲ್ಲಿನ ಅಣುಗಳ ರಚನೆ ನೀರಿಗಿಂತ ಕಡಿಮೆ ಒತ್ತೊತ್ತಾಗಿರುವುದರಿಂದ ಮಾಧ್ಯಮಗಳ ಮೂಲದಿಂದ ಚಲಿಸುವ ಶಬ್ಧ ಅಣುಗಳು ಒತ್ತೊತ್ತಾಗಿರುವ ಮಾಧ್ಯಮದಲ್ಲೇ ವೇಗವಾಗಿ ಚಲಿಸುವುದು. ಇದು ಸಮುದ್ರದ ನೀರಲ್ಲೂ ಅನ್ವಯಿಸುತ್ತದೆ. ಹಾಗೆ ನೋಡಿದರೆ ಸಮುದ್ರದಲ್ಲೇ ಇನ್ನೂ ವೇಗವಾಗಿ ಹಾಗು ದೂರಕ್ಕೆ ಶಬ್ಧ ಚಲಿಸುವುದು. ಏಕೆ ಹೇಳಿ? ಸಮುದ್ರದಲ್ಲಿನ ಉಪ್ಪಿನ ಅಂಶ, ಉಷ್ಣಾಂಶ ಹಾಗೂ ಇನ್ನೊಂದೆರೆಡು ಕಾರಣಗಳಿಂದ. ಇದನ್ನೆಲ್ಲಾ ಇಲ್ಲೇಕೆ ಹೇಳುತ್ತಿರುವೆ ಎಂದರೆ, ಮುಂದೆ ಹೇಳುವ ವಿಚಾರ ಅಚ್ಚರಿ ಎನಿಸಿದರೂ ಸತ್ಯ! ನೀವು ಓಡಾಡಲು ನಿಮ್ಮ ಸ್ವಂತ ವಾಹನಗಳನ್ನು ಹೆಚ್ಚು ಬಳಸುತ್ತೀರಾ? ಪ್ಲಾಸ್ಟಿಕ್ ವಸ್ತುಗಳನ್ನು ಹೆಚ್ಚು ಖರೀದಿಸುತ್ತೀರಾ? ಹೆಚ್ಚೆಚ್ಚು ಔಷಧಿಗಳನ್ನು ತೆಗೆದುಕೊಳ್ಳುತ್ತೀರಾ? ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುತ್ತೀರಾ? ಇವುಗಳಲ್ಲಿ ನಿಮ್ಮ ಭಾಗವಿದ್ದರೆ ಸಮುದ್ರದಲ್ಲಿ ಆಗುವ ಗಲಾಟೆಯ ಶಬ್ಧಕ್ಕೆ ಹಾಗೂ ಅದರಿಂದ ಅಲ್ಲಿನ ಜೀವರಾಶಿಗಳಿಗಾಗುವ ತೊಂದರೆಗಳಿಗೆ ನೀವೆಲ್ಲಾ ಪಾಲುದಾರರು. ಅಯ್ಯೋ… ಇದೆಲ್ಲಿಯ ಸಂಬಂಧ? ನಾವಿಲ್ಲೆಲ್ಲೋ ಸಮುದ್ರದಿಂದ ನೂರಾರು ಕಿಲೋಮೀಟರುಗಳು ದೂರವಿದ್ದು, ಹೇಗೆ ಸಮುದ್ರದಲ್ಲಾಗುವ ಶಬ್ಧಕ್ಕೆ ಕಾರಣರು? ವಿವರಿಸಿಯೇ ಹೇಳುತ್ತೇನೆ. ಈ ಮೇಲೆ ಹೇಳಿದ ವಸ್ತುಗಳು ಭಾರತಕ್ಕೆ ಸಮುದ್ರದ ಮೂಲಕ ಶಿಪ್ ಗಳಿಂದ ಬರುತ್ತವೆ. ನಮ್ಮ ಭಾರತಕ್ಕೆ ಆಮದು ಮಾಡಿಕೊಳ್ಳುವ 82% ವಸ್ತುಗಳು ಇವೇ ಆಗಿವೆ. ಹೀಗೆ ಬರುವಾಗ ಶಿಪ್ ಗಳಿಂದ ಉತ್ಪತ್ತಿಯಾಗುವ ಶಬ್ಧ ಹಾಗೂ ಕಚ್ಛಾತೈಲವನ್ನು ಸಮುದ್ರದಾಳದಿಂದ ಕೊರೆದು ಹೊರತೆಗೆಯುವ ಯಂತ್ರಗಳಿಂದ ಉತ್ಪತ್ತಿಯಾಗುವ ಶಬ್ಧದಿಂದ ಅಲ್ಲಿ ಜೀವಿಸುವ, ಶಬ್ಧ ಮಾಡುವ ಮೂಲಕ ಮಾತನಾಡುವ, ಶಬ್ಧ ಮಾಡಿಕೊಂಡು ವಲಸೆ ಹೋಗುವ ಹಾಗು ಶಬ್ಧದ ಆಧಾರದ ಮೇಲೆ ಬೇಟೆಯಾಡುವ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲ, ನಮ್ಮಿಂದಲೇ ಆಗುತ್ತಿರುವ ಜಾಗತಿಕ ತಾಪಮಾನ(climate change)ದ ಪರಿಣಾಮವಾಗಿ ಸಮುದ್ರದಲ್ಲಿ ಬದಲಾಗುತ್ತಿರುವ ಅದರ ಉಷ್ಣಾಂಶ, ಆಮ್ಲೀಯತೆ ಮತ್ತು ಉಪ್ಪಿನ ಪ್ರಮಾಣಈ ಶಬ್ಧಗಳನ್ನು ಇನ್ನೂ ವೇಗವಾಗಿ ಹಾಗೂ ಹೆಚ್ಚು ದೂರಕ್ಕೆ ತಲುಪಿಸುತ್ತವೆಯಂತೆ. ಇದೇ ಹೊಸ ಸಂಶೋಧನೆಯ ಸಾರ.

ಶಾಕಿಂಗ್ ಎನಿಸುತ್ತದೆ ಅಲ್ಲವೇ? ಅಲ್ಲಿನ ಪ್ರಾಣಿಗಳಿಗೆ ಪಾಪ ಇನ್ನೆಷ್ಟು ಶಾಕ್/ಒತ್ತಡ ಎನಿಸಿರಬಹುದು? ಸ್ವಲ್ಪ ವಿವರವಾಗಿ ಹೇಳುವುದಾದರೆ… ಸಮುದ್ರದ ನೀರು ಆಮ್ಲೀಯವಗುತ್ತಾ ಹೋದಂತೆ, ಕೆಲವು ತರಂಗಾಂತರದ ಶಬ್ಧದ ಅಲೆಗಳನ್ನು ನೀರು ಹೀರಿಕೊಳ್ಳುವುದಿಲ್ಲ. ಹಾಗಾಗಿ ಶಬ್ಧ ಇನ್ನೂ ಹೆಚ್ಚು ದೂರ ಚಲಿಸುವುದು. ಹೀಗೆ ಶಬ್ಧ ಚಲಿಸುವ ದೂರ ಹೆಚ್ಚುತ್ತದೆ ಆದರೆ ಅಷ್ಟು ಹೆಚ್ಚೇನಲ್ಲ. ಆದರೆ ಅದೇ ನೀರಿನಲ್ಲಾಗುವ ಉಷ್ಣಾಂಶದ ಬದಲಾವಣೆ ಹಾಗೂ ಉಪ್ಪಿನಂಶದ ಬದಲಾವಣೆ ಅಲ್ಲಿರುವ ಸಮುದ್ರದ ನೀರನ್ನು ಬೇರೆ ಬೇರೆ ಪದರಗಳಾಗಿ ವಿಂಗಡಿಸುತ್ತದೆ, ಇದರಿಂದ ಶಬ್ಧದ ಪ್ರಮಾಣ ಹೆಚ್ಚುತ್ತದೆ. ಇವೆರೆಡೂ ಸೇರಿದರೆ ಹೆಚ್ಚು ಗದ್ದಲದ ಶಬ್ಧ ತರಂಗಗಳು ಹೆಚ್ಚು ದೂರ ಚಲಿಸುತ್ತದೆ. ಇದು ತೊಂದರೆಯೇ! ಈಗ ದೊರಕಿರುವ ಈ ಸಂಶೋಧನಾ ಪಲಿತಾಂಶಗಳನ್ನು ಮುಂದೆ ಬರುವ 70 ವರ್ಷಗಳ ನಂತರದ ಜಾಗತಿಕ ತಾಪಮಾನದಿಂದ ಬದಲಾದ ಸಮುದ್ರವನ್ನು ನೋಡಿದರೆ ತಿಳಿಯುತ್ತದೆ ಸಮುದ್ರದ ನೀರಿನೊಳಗೆ ಶಬ್ಧ ಚಲಿಸುವುದರಲ್ಲಿ ಎಷ್ಟು ಬದಲಾವಣೆ ಇದೆ ಎಂದು. ಇಲ್ಲೇ ಕೊಟ್ಟಿರುವ ಚಿತ್ರವನ್ನು ಗಮನಿಸಿದರೆ ನಿಮಗೇ ತಿಳಿಯುತ್ತದೆ. ಅದರಲ್ಲೂ ಸಮುದ್ರದ ಮೇಲ್ಭಾಗದ ಮೊದಲ 210 ಮೀಟರುಗಳಲ್ಲಿ.
ಹೀಗೆ ಸಮುದ್ರದ ಮೇಲೆ ಪದರದಲ್ಲಿನ ನೀರಿನಲ್ಲಿ ಹೀಗೆ ಬದಲಾವಣೆ ಕಾಣುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಭೂಮಿಯ ಉತ್ತರ ಭಾಗದಲ್ಲಿರುವ ಗ್ರೀನ್ಲ್ಯಾಂಡಿನಲ್ಲಿರುವ ಮಂಜು ಜಾಗತಿಕ ತಾಪಮಾನದಿಂದ ಹೆಚ್ಚು ಕರಗುತ್ತಿದೆ. ಇದರಿಂದ ಆ ಪ್ರದೇಶದ ಅಂದರೆ ಆರ್ಕಟಿಕ್ ಸಾಗರದ ನೀರಿನ ಮೇಲ್ಪದರ ಹೆಚ್ಚು ತಂಪಾಗುತ್ತದೆ. ಅಲ್ಲಿ ಚಲಿಸುವ ಹಡಗಿನಿಂದ ಉತ್ಪತ್ತಿಯಾಗುವ ಶಬ್ಧದ ಅಲೆಗಳು ಸಮುದ್ರದ ಆಳಕ್ಕೆ ಹೋಗಿ ಮರೆಯಾಗದೆ ಹೆಚ್ಚು ತಂಪಾದ ಪ್ರದೇಶಗಳಿಗೆ ಅಂದರ ಸಮುದ್ರದ ಮೇಲಿನ ಪದರಗಳಿಗೇ ಆಕರ್ಶಿಸಲ್ಪಡುತ್ತವೆ ಹಾಗೂ ಹಾಗೇ ದೂರ ಚಲಿಸುತ್ತವೆ. ಹೀಗೆ ಆಗುತ್ತಿರುವುದರಿಂದ ಅಲ್ಲಿ ಚಲಿಸುವ ಹಡಗುಗಳಿಂದ ಬರುವ ಶಬ್ಧ ಮುಂಚೆಗಿಂತ 5 ಪಟ್ಟು ಹೆಚ್ಚು ಜೋರಾಗಿ ಕೇಳುತ್ತದೆ ಹಾಗೂ ದೂರಕ್ಕೆ ಚಲಿಸುತ್ತದೆಯಂತೆ.

ಇದರಿಂದೇನಾಗುತ್ತದೆ ಬಿಡಿ ಎಂದುಬಿಟ್ಟೀರಿ… ಯುರೋಪ್ ಮತ್ತು ಉತ್ತರ ಅಮೇರಿಕಾದ ಚಲಿಸುವ ಎಷ್ಟೋ ಹಡಗುಗಳಿಂದ ಬರುವ ಈ ಶಬ್ಧಗಳು ಅಲ್ಲಿನ ಹಾಗೂ ಸುತ್ತಮುತ್ತಲಿನ ಸಮುದ್ರ ಜೀವಿಗಳಿಗೆ ಬಲವಾಗಿ ಪೆಟ್ಟು ಬೀಳುತ್ತದೆ. ಒತ್ತಡವನ್ನೂ ಹೇರುತ್ತವೆ. ಹೇಗೆಂದರೆ, ಶಬ್ಧವನ್ನೇ ಆಧಾರವಾಗಿಟ್ಟುಕೊಂಡು ಸಂವಹಿಸುವ ಅಥವಾ ಮಾತನಾಡುವ ಜೀವಿಗಳಿಗೆ, ಶಬ್ಧವನ್ನೇ ಆಧಾರವಾಗಿಟ್ಟುಕೊಂಡು ಬೇಟೆಯಾಡುವ ಜೀವಗಳಿಗೆ ಹಾಗೂ ಶಬ್ಧದ ಸಹಾಯದಿಂದ ವಲಸೆ ಹೋಗುವ ಜೀವಿಗಳಿಗೆ ಇದು ಮಾರಕವೇ ಸರಿ! “ಇದು ಹೀಗೆ ಮುಂದುವರಿದರೆ ಬೇರೆ ಯಾವ ರೀತಿಯಲ್ಲೆಲ್ಲಾ ಪರಿಣಾಮ ಬೀರುವುದಂತೂ ಯಾರಿಗೂ ತಿಳಿದಿಲ್ಲ.” ಎನ್ನುತ್ತಾರೆ ಸಂಶೋಧನೆಯ ರುವಾರಿಯಾದ ವಿಜ್ಞಾನಿ ‘ಪೊಸ್ಸೆಂಟಿ’.
‘ಇಗ್ನೋರೆನ್ಸ್ ಈಸ್ ಬ್ಲಿಸ್ (ignorance is bliss)’ ಎನ್ನುತ್ತಾರೆ. ಅಂದರೆ ಸರಿಸುಮಾರು ‘ಅಜ್ಞಾನವೇ ವರದಾನ’ ಎಂದುಕೊಂಡು ಈ ವಿಷಯದಲ್ಲಿ ಸುಮ್ಮನೆ ಕೂರುವ ಹಾಗೆ ಇಲ್ಲ. ಏಕೆಂದರೆ ಇಲ್ಲೆಲ್ಲೋ ಕೂತು ನಮ್ಮ ಕೆಲಸಗಳಲ್ಲಿ ಮಗ್ನರಾಗಿರುವ ನಾವು, ಹೇಗೆ ನಮ್ಮ ದಿನ ನಿತ್ಯದಲ್ಲಿ ಬಳಸುವ ವಸ್ತುಗಳನ್ನು ಖರೀದಿಸುವ ಮೂಲಕ ಹಡಗುಗಳ ಚಲನೆಯ ಪ್ರಮಾಣವನ್ನು ಹೆಚ್ಚಿಸುತ್ತಿರುವೆವೋ ಹಾಗೇ ಅಲ್ಲಿ ಆಗುತ್ತಿರುವ ಜೀವಗಳ ತೊಂದರೆಗಳಿಗೆ ನಾವೇ ಪರೋಕ್ಷವಾಗಿ ಕಾರಣರು. ಹಾಗೆಯೇ ಇದರ ಪರಿಣಾಮ ಮುಂದೇನಾಗಬಹುದು ಎಂಬ ಜ್ಞಾನದ ಕೊರತೆ ನಮ್ಮನ್ನು ಎಚ್ಚರಿಸದೇ ಕೊನೆಗೆ ನಮ್ಮ ಬುಡಕ್ಕೇ ಇಟ್ಟ ಟೈಮ್ ಬಾಂಬ್ ನಂತೆಯೇ ಸರಿ.
ಆದ್ದರಿಂದ ಜ್ಞಾನ ಜೀವಿಗಳೇ ಎಂದು ಬೀಗುವ ನಾವು ವಿಜ್ಞಾನದಿಂದ ದೊರೆತ ಈ ಸುಜ್ಞಾನವನ್ನು ಬಳಸಿಕೊಂಡು ನಮ್ಮ ಜೀವನವನ್ನು ಮನೋಜ್ಞವಾಗಿ ಬದಲಾಯಿಸಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕಿದೆ ಎಂಬುದೇ ಈಗ ನಮಗೆ ಇರಬೇಕಾದ ಪರಿಜ್ಞಾನ!


ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ., ಬೆಂಗಳೂರು ನಗರ ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.