ಸೂರ್ಯಾಸ್ತ, ಸೂರ್ಯೋದಯದ ವೈಭೋಗ

ಸೂರ್ಯಾಸ್ತ, ಸೂರ್ಯೋದಯದ ವೈಭೋಗ

© ಗುರು ಪ್ರಸಾದ್ ಕೆ ಆರ್

ಪಡುವಣದ ಸೂರ್ಯಾಸ್ತ ಹಾಗು ಮೂಡಣದ ಸೂರ್ಯೋದಯದ ವೈಭೋಗ ನೋಡಿದ್ದೀರಾ…?

ಯಾರಿಗೆ ತಾನೇ ಸೂರ್ಯಾಸ್ತ ಹಾಗೂ ಸೂರ್ಯೋದಯ ನೋಡಲು ಇಷ್ಟ ಇರಲ್ಲ ಹೇಳಿ? ಪ್ರತಿದಿನ ಪ್ರಕೃತಿಯಲ್ಲಿ ನಡೆಯುವ ಈ ವಿಸ್ಮಯ ನನಗಂತೂ ತುಂಬಾ ಅಚ್ಚುಮೆಚ್ಚು. ಪ್ರತಿ ಸಾರಿ ನೋಡಿದಾಗಲೂ ಇದು ಒಂಥರಾ ವಿಸ್ಮಯ ಲೋಕವೆನಿಸುತ್ತದೆ. ಈ ವಿಸ್ಮಯಕ್ಕೆ ಎಲ್ಲಾ ಕವಿಗಳು, ಚಲನಚಿತ್ರ ನಿರ್ದೇಶಕರು ಹಾಗೂ ಚಿತ್ರಕಾರರೂ ಮಾರುಹೋಗಿರುವುದು ಅವರ ಕ್ಷೇತ್ರಗಳಲ್ಲಿ ಕಾಣಬಹುದು. ರಸ್ತೆಯಲ್ಲಿ ಸಾಗುವಾಗ, ಸಂಜೆಯ ಅಥವಾ ಬೆಳಗ್ಗೆ ವಾಕಿಂಗ್ ಮಾಡುವಾಗ, ಯಾವುದಾದರೂ ಕೆರೆಯ ಸಮೀಪ ಅಥವಾ ಪಾರ್ಕಿನ ಸಮೀಪ ಇರುವಾಗ ಈ ಸೂರ್ಯಾಸ್ತ ಅಥವಾ ಸೂರ್ಯೋದಯ ಕಂಡರಂತೂ ಅದ್ಭುತ ಲೋಕವೇ ತೆರೆದಿಡುತ್ತದೆ. ಇದನ್ನು ನೋಡಿಯೇ ಅನುಭವಿಸಬೇಕು.

ಅದೆಷ್ಟೋ ಸಾವಿರ ಫೋಟೋಗಳನ್ನು ನನ್ನ ಕ್ಯಾಮೆರಾ ಹಾಗೂ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದೇನೆ. ನನ್ನ ಈ ಕುಚೇಷ್ಟೆಯನ್ನು ಕಂಡು ಮೊದಮೊದಲು ನನ್ನ ಮಡದಿ ಸುಮ್ಮನೆ ರೇಗಿಸುತ್ತಿದ್ದಳು. ಎಲ್ಲಾದರೂ ಹೋಗುತ್ತಿರಬೇಕಾದರೆ ಸೂರ್ಯಾಸ್ತ ಆಗುತ್ತಿದೆ ಎಂದರೆ ಸಾಕು ನಾನು ಕಾರನ್ನು ಪಕ್ಕದಲ್ಲಿ ನಿಲ್ಲಿಸಿ ಅದನ್ನು ನೋಡಿ, ಕ್ಯಾಮೆರಾ ಇಲ್ಲದಿದ್ದರೆ ಮೊಬೈಲ್ನಲ್ಲಿಯಾದರೂ ಸರಿ ಒಂದೆರಡು ಫೋಟೋ ತೆಗೆದುಕೊಳ್ಳುತ್ತಿದ್ದೆ. “ಎಷ್ಟು ಫೋಟೋ ತೆಗಿತೀರಾ ನೀವು? ಎಷ್ಟು ಒಂದೇ ರೀತಿ ಫೋಟೋ ಇದೆ ನಿಮ್ಮ ಹತ್ತಿರ, ಪ್ರತಿಸಾರಿ ಸೂರ್ಯ ಮುಳುಗುವಾಗ ಒಂದೇ ತರ ಅಲ್ವಾ ಕಾಣಿಸುವುದು” ಅಂತ ಕೇಳ್ತಾ ಇದ್ರು. ಸೂರ್ಯಾಸ್ತದ ಸೊಬಗನ್ನು ನೋಡುವ ರೀತಿಯೇ ಬೇರೆ ಇರುತ್ತೆ ಅದನ್ನು ಅನುಭವಿಸುವ, ಆಸ್ವಾದಿಸುವ ರೀತಿ ಗೊತ್ತಿದ್ದರೆ, ಪ್ರತಿ ದಿನವೂ ಕೂಡ ವಿಸ್ಮಯಗಳ ಆಗರ. ಒಂದು ತರಹ ಮಾಯಾಲೋಕ ಆಗಸದಲ್ಲಿ ಕಾಣಸಿಗುತ್ತದೆ. ನನ್ನ ಈ ಹವ್ಯಾಸವನ್ನು ನೋಡಿ ನೋಡಿ ನನ್ನ ಮಡದಿ ಹಾಗೂ ಮಕ್ಕಳಿಗೆ ಅಭ್ಯಾಸವಾಗಿಬಿಟ್ಟಿದೆ. ಎಲ್ಲಿಯಾದರೂ ಹೋಗುತ್ತಿರುವಾಗ ಸೂರ್ಯಾಸ್ತದ ಸಮಯವಾಗಿದ್ದರೆ ಅವರೇ ಒಳ್ಳೆಯ ಜಾಗವನ್ನು ಆಯ್ಕೆ ಮಾಡಿ ಕಾರನ್ನು ನಿಲ್ಲಿಸಲು ಹೇಳುತ್ತಾರೆ.

ಯಾರೋ ಪುಣ್ಯಾತ್ಮ ಹೇಳಿದ್ದಾರೆ “ಹೊರಗೆ ಸೂರ್ಯಾಸ್ತವಾಗುತ್ತಿರುವಾಗ ನೀವು ಒಳಗೆ ಕುಳಿತುಕೊಂಡು, ಯಾವುದೋ ಮುಖ್ಯ ಕೆಲಸದಲ್ಲಿ ಮುಳುಗಿ ಎಂದಿಗೂ ಅತ್ಯಮೂಲ್ಯವಾದ ಸಮಯವನ್ನು ವ್ಯರ್ಥಮಾಡಿಕೊಳ್ಳಬೇಡಿ – ಜಾಯ್‌ಬೆಲ್ ಸಿ (Never waste any amount of time doing anything important when there is a sunset outside that you should be sitting under.” — C. JoyBell C). ಆದ ಕಾರಣ ನಾನು ಎಂದೂ ಆ ಅವಕಾಶವನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ.

© ಗುರು ಪ್ರಸಾದ್ ಕೆ ಆರ್

ಮುಳುಗುತ್ತಿರುವ ಸೂರ್ಯ ಹಾಗೂ ಅದರ ಸೌಂದರ್ಯ ಒಂದುಕಡೆಯಾದರೆ ಸೂರ್ಯ ಮುಳುಗಿದ ಮೇಲೆ ಮೂಡುವ ಚಿತ್ತಾಕರ್ಷಕ ಬಣ್ಣಗಳು ನಮ್ಮನ್ನು ಇನ್ನಷ್ಟು ವಿಸ್ಮಯಗೊಳಿಸುತ್ತವೆ. ಸೂರ್ಯ ಮುಳುಗಿದ ಮೇಲೆ ಹದಿನೈದು ನಿಮಿಷ ಆಕಾಶದ ತುಂಬೆಲ್ಲಾ ರಂಗುರಂಗಿನ ರಂಗೋಲಿ ಆಟ! ಇಂತಹ ಸೊಬಗನ್ನು ನೋಡಲು ಒಳ್ಳೆಯ ಕಾಲವೆಂದರೆ ಸೆಪ್ಟೆಂಬರ್ ನಿಂದ ಜನವರಿ ಮಾಸದ ಕೊನೆಯವರೆಗು. ಸೂರ್ಯ ಮುಳುಗಿದ ಮೇಲೆ ಚೆಲ್ಲುವ ಬೆಳಕು ಆಕಾಶದಲ್ಲಿರುವ ಮೋಡಗಳ ಮೇಲೆ ಬೀಳುವಾಗ ಕ್ಷಣಕ್ಷಣಕ್ಕೂ ಬಗೆ ಬಗೆಯ ಬಣ್ಣಗಳಾಗಿ ಬದಲಾಗುತ್ತಾ ಹೋಗುತ್ತದೆ. ಮೋಡಗಳು ಕೆಂಪು, ಹಳದಿ, ಕಿತ್ತಳೆ, ನೇರಳೆ ಬಣ್ಣಗಳಲ್ಲಿ ಕಂಡರೆ ಮೋಡಗಳ ಹಿಂದೆ ಇರುವ ಶುಭ್ರವಾದ ನೀಲಿ ಆಕಾಶವು ಅದರ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಿಂಗಾರು ಮೋಡಗಳು ಇದ್ದಾಗ ಇದರ ಅಂದ ಇನ್ನಷ್ಟು ಹೆಚ್ಚಿರುತ್ತವೆ.

© ಗುರು ಪ್ರಸಾದ್ ಕೆ ಆರ್

ಈ ತರಹ ಸೂರ್ಯಾಸ್ತ ದೃಶ್ಯಗಳನ್ನು ತೆಗೆಯುವಾಗ ಯಾವುದಾದರೂ ಒಂದು ವಿಷಯವನ್ನು (ಸಬ್ಜೆಕ್ಟ್) ಬಳಸಿಕೊಂಡು ತುಂಬಾ ಅದ್ಭುತವಾದ ಚಿತ್ರಗಳನ್ನು ತೆಗೆಯಬಹುದು. ಉದಾಹರಣೆಗೆ ವಿಸ್ತಾರವಾದ ಬಯಲು ಅದರ ಮಧ್ಯದಲ್ಲಿ ಒಂದು ಒಂಟಿಮರ ಅದರ ಹಿಂದೆ ಸೂರ್ಯಾಸ್ತದ ದೃಶ್ಯ, ಗುಂಪುಗುಂಪಾಗಿ ಹಕ್ಕಿಗಳು ಹಾರುತ್ತಿರುವಾಗ ಅದರ ಹಿಂದೆ ಸೂರ್ಯ ಮುಳುಗುವಾಗ ಸೆರೆಹಿಡಿಯುವ ದೃಶ್ಯಗಳು, ಯಾವುದಾದರೂ ಒಂದು ಮಾನ್ಯುಮೆಂಟ್ಸ್ ಅಥವಾ ವಾಸ್ತುಶಿಲ್ಪದ ದೇವಸ್ಥಾನ, ಕೋಡಿ ಬಿದ್ದ ಕೆರೆ, ಹಳ್ಳಿಯ ಹೊಲ, ಗದ್ದೆ, ಹೀಗೆ ಯಾವುದಾದರೂ ಒಂದು ವಿಷಯವನ್ನು (ಸಬ್ಜೆಕ್ಟ್) ಆಯ್ಕೆ ಮಾಡಿಕೊಂಡು ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯೋದಯದ ಸಮಯದಲ್ಲಿ ಸೆರೆ ಹಿಡಿದಾಗ ಒಂದು ಒಳ್ಳೆಯ ಚಿತ್ರ ಮೂಡಿಬರುತ್ತದೆ.

ನನಗೆ ಒಂದು ಆಸೆ ಇತ್ತು, ‘ಸೂರ್ಯ ಇನ್ನೇನು ಮುಳುಗಬೇಕು ಆಗ ಕಿತ್ತಳೆ ಬಣ್ಣದಲ್ಲಿ ಹೊಳೆಯುತ್ತಿರುವ ಸೂರ್ಯನ ಜೊತೆಗೆ, ಯಾವುದಾದರೂ ಒಂದು ಪಕ್ಷಿ ಅದರ ಮುಂದೆ ಹಾರುವಾಗ ಫೋಟೋವನ್ನು ಸೆರೆಹಿಡಿಯಬೇಕು ಅಥವಾ ಮರದ ಮೇಲೆ ಯಾವುದಾದರೂ ಪಕ್ಷಿ ತನ್ನ ರೆಕ್ಕೆಗಳನ್ನು ಬಿಡಿಸಿ ಕುಳಿತು ಕೊಂಡಿರುವ ಚಿತ್ರವನ್ನು ಸೆರೆಹಿಡಿಯಬೇಕು ಎಂದು’ ಅದಕ್ಕಾಗಿ ತುಂಬಾ ಸಲ ಪ್ರಯತ್ನವನ್ನು ಸಹ ಮಾಡಿದ್ದೆ.

ಮೊದ ಮೊದಲು ಈ ರೀತಿಯ ದೃಶ್ಯ ನನಗೆ ಸಿಗದಿದ್ದರೂ, ಕೊನೆಗೂ ಇದರಲ್ಲಿ ಯಶಸ್ವಿಯಾಗಿದ್ದೇನೆ. ಈ ಕೆಳಗೆ ಕಾಣುವ ಒಂದು ಫೋಟೋ ತೆಗೆಯಲು ಏನಿಲ್ಲ ಎಂದರೂ ಒಂದು ವಾರ ಸರ್ಕಸ್ ಮಾಡಿದ್ದೇನೆ. ಕೆಲವೊಮ್ಮೆ ಸೂರ್ಯ ಮುಳುಗುತ್ತಿರುವಾಗ ಪಕ್ಷಿಗಳು ಇರುತ್ತಿರಲಿಲ್ಲ ಅಥವಾ ಪಕ್ಷಿಗಳು ಬರುತ್ತಿದ್ದಾಗ ಸೂರ್ಯ ಮುಳುಗಿ ಹೋಗಿರುತ್ತಿದ್ದ. ಕೆಲವೊಮ್ಮೆ ಮಧ್ಯದಲ್ಲಿ ಮೋಡಗಳು ಅಡ್ಡ ಬಂದು ಎಲ್ಲವನ್ನೂ ಹಾಳು ಮಾಡುತ್ತಿದ್ದವು. ಅಂತೂ ಇಂತೂ ಒಂದು ಸಾರಿ ಮಾತ್ರ ಯಾವ ಅಡಚಣೆ ಕೂಡ ಇರಲಿಲ್ಲ. ಒಂದು ನೀರುಕಾಗೆ ಒಂದು ಮರದ ಮೇಲೆ ಬಂದು ಕುಳಿತುಕೊಂಡಿತು ಹಿಂದಗಡೆ ಸರಿಯಾಗಿ ಸೂರ್ಯ ಮುಳುಗುತ್ತಿರುವ ದೃಶ್ಯ, ಮುಂದೆ ಮರದ ಮೇಲೆ ಕುಳಿತಿದ್ದ ನೀರುಕಾಗೆ ರೆಕ್ಕೆಗಳನ್ನು ಅಗಲ ಮಾಡಿ ಮೈಕೈ ಕೊಡವಿಕೊಂಡು ಕುಳಿತು ಒಂದು ರೀತಿಯ ಅತ್ಯದ್ಭುತ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಅನುವುಮಾಡಿಕೊಟ್ಟಿತು.

ಇದೇ ರೀತಿ ದೊಡ್ಡ ಬೆಟ್ಟದ ಮೇಲಿಂದ ಸೂರ್ಯೋದಯದ ದೃಶ್ಯವನ್ನು ಸೆರೆಹಿಡಿಯಬೇಕು ಎಂದು, ನಮ್ಮ ಕರ್ನಾಟಕದ ಅತಿ ಎತ್ತರದ ಪರ್ವತಗಳಲ್ಲಿ ಒಂದಾದ ಕೊಡಚಾದ್ರಿ ಬೆಟ್ಟಕ್ಕೆ ಹೋಗಿದ್ದೆವು. ಸುಮಾರು 1,343 ಮೀಟರ್ ಎತ್ತರವಿರುವ ಈ ಬೆಟ್ಟದ ಮೇಲಿನಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತದ ದೃಶ್ಯಗಳು ತುಂಬಾ ಚೆನ್ನಾಗಿ ಕಾಣುತ್ತವೆ. ಕಣ್ಣುಹಾಯಿಸಿ ನೋಡಿದಷ್ಟು ದೂರ ಹಚ್ಚಹಸಿರಿನ ಕಾಡುಗಳು, ಗಿರಿಕಂದರಗಳು, ಅಲ್ಲಲ್ಲಿ ಕಾಣುವ ಸಣ್ಣ ಸಣ್ಣ ಕೆರೆಗಳು. ದೂರದಲ್ಲಿ ಸೂರ್ಯ ಉದಯಿಸಿ ಮುಂಜಾನೆಯ ಹೊಂಬೆಳಕನ್ನು ನಿಧಾನವಾಗಿ ಇವುಗಳ ಮೇಲೆ ಚೆಲ್ಲುತ್ತಿರುವ ದೃಶ್ಯವನ್ನು ನೋಡಲು ನಮ್ಮ ಎರಡು ಕಣ್ಣುಗಳು ಸಾಲದು. ಎಂತಹ ಅನುಭವ ಅದು. ನನ್ನ ಜೀವನದಲ್ಲಿ ಮರೆಯಲಾಗದ ಅದ್ಭುತ ಅನುಭವಗಳಲ್ಲಿ ಇದೂ ಒಂದು.

ಸೂರ್ಯೋದಯ ಆಗುವ ಮುನ್ನ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕ್ಯಾಮೆರಾ ಮತ್ತು ಟ್ರೈಪಾಡ್ ಗಳನ್ನು ಹೆಗಲಿಗೇರಿಸಿಕೊಂಡು, ಕೈಯಲ್ಲಿ ಟಾರ್ಚ್ ಹಿಡಿದು ಬೆಟ್ಟದ ತುದಿ ತಲುಪಿದಾಗ ಸಮಯ 5:15 ಆಗಿತ್ತು. ನಮಗಿಂತ ಮುಂಚೆ ಎಷ್ಟೋ ಜನರು ರಾತ್ರಿಯೇ ಬಂದು ಸ್ಲೀಪಿಂಗ್ ಬ್ಯಾಗ್, ಟೆಂಟ್ ಗಳಲ್ಲಿ ಠಿಕಾಣಿ ಹೂಡಿದ್ದರು. ನಾವು ಜಾಗಮಾಡಿಕೊಂಡು ಪೂರ್ವದಿಕ್ಕಿಗೆ ಎದುರಾಗಿ ನಮ್ಮ ಕ್ಯಾಮರಾ ಹಾಗೂ ಟ್ರೈಪಾಡ್ ಗಳನ್ನು ಸಜ್ಜಾಗಿಸಿ ಸೂರ್ಯೋದಯದ ಅದ್ಭುತ ದೃಶ್ಯಗಳನ್ನು ನೋಡಲು ಹಾಗೂ ಸೆರೆಹಿಡಿಯಲು ಕಾತುರದಿಂದ ಕಾಯುತ್ತಿದ್ದೆವು. ಮುಂಜಾನೆಯ ಮೈಕೊರೆಯುವ ಚಳಿ, ಬೆಟ್ಟದ ಮೇಲೆ ಭರೋ ಎಂದು ಬೀಸುವ ಗಾಳಿಯು ನಮ್ಮ ಮೈಯನ್ನು ನಡುಗಿಸುತ್ತಿತ್ತು. ಆ ಗಾಳಿಯ ಮುಂದೆ ನಾವು ಇಟ್ಟಿದ್ದ ಟ್ರೈಪಾಡ್ ಗಳೆಲ್ಲವೂ ಅಲುಗಾಡಿ ಬೀಳುತ್ತಿದ್ದವು. ಕೊನೆಗೆ ಟ್ರೈಪಾಡುಗಳನ್ನು ಮಡಚಿ ಪಕ್ಕಕ್ಕಿಟ್ಟು, ಕ್ಯಾಮೆರಾವನ್ನು ಕೈಯಲ್ಲಿ ಹಿಡಿದು ತೆಗೆಯುವ ಸಾಹಸಕ್ಕೆ ಮುಂದಾದೆವು.  ಸಮಯ 5:45 ಆಗಲೇ ಪೂರ್ವ ದಿಕ್ಕಿನ ಕಡೆಯಿಂದ ನಿಧಾನವಾಗಿ ಕತ್ತಲಿನ ಆಕಾಶ ಬಿಳಿ ಹಾಗೂ ಗಾಢ ನೀಲಿ ಬಣ್ಣಕ್ಕೆ ತಿರುಗಲು ಶುರುಮಾಡಿತು. ಇದನ್ನು ನೋಡುತ್ತಿದ್ದ ಹಾಗೆ ಎಲ್ಲೋ ಒಂದು ಕಡೆ ಕೆಂಪು ಹಾಗೂ ಕಿತ್ತಳೆ ಮಿಶ್ರಿತ ಬಣ್ಣ ಗೋಚರಿಸಿತು. ನಾವೆಲ್ಲಾ ಓಹೋ… ಅಲ್ಲಿಂದಲೇ ಸೂರ್ಯ ಉದಯಿಸಬಹುದು ಎಂದು ನಮ್ಮ ಕ್ಯಾಮೆರಾಗಳನ್ನು ರೆಡಿಯಾಗಿ ಇಟ್ಟುಕೊಂಡೆವು. ಅರೆರೇ…! ಇವಾಗ ಅದೇ ಪೂರ್ವದಿಕ್ಕಿನ ಮತ್ತೊಂದು ಕಡೆ ಕೆಂಪು ಮಿಶ್ರಿತ ಬಣ್ಣ ಗೋಚರವಾಯಿತು. ಇದೇ ರೀತಿ ಮೂರ್ನಾಲ್ಕು ಕಡೆ ಕಾಣಿಸತೊಡಗಿತು. ನಮಗೆಲ್ಲಾ ಆಶ್ಚರ್ಯ, ಇಷ್ಟು ಜಾಗಗಳಲ್ಲಿ ಯಾವ ಜಾಗದಿಂದ ಸೂರ್ಯ ಹೊರಗೆ ಬರುತ್ತಾನೆ ಎಂದು. ನಾವೆಲ್ಲರೂ ನಮ್ಮನಮ್ಮಲ್ಲೇ ಬೆಟ್ಟಿಂಗ್ ಕಟ್ಟಿಕೊಂಡು ಕಾಯುತ್ತಾ ಕುಳಿತೆವು. ನಾನು ಒಂದು ಕೆಂಪಾದ ಜಾಗದ ಕಡೆ ಕೈ ತೋರಿಸಿ ಅಲ್ಲಿಂದಲೇ ಸೂರ್ಯ ಉದಯಿಸುವುದು ಎಂದರೆ, ನನ್ನ ಸ್ನೇಹಿತ ಇನ್ನೊಂದು ಜಾಗ ಎಂದು ಹೇಳಿದನು, ಅದೇ ರೀತಿ ಮತ್ತೊಬ್ಬರು ಇವೆರಡೂ ಅಲ್ಲ ಈ ಕಡೆಯ ಜಾಗದಲ್ಲೇ ಸೂರ್ಯ ಉದಯಿಸಿ ಬರುವುದು ಎಂದು ನಿಶ್ಚಯವಾಗಿ ಹೇಳಿದ. ಆಗ ಎಲ್ಲರೂ ಅಲ್ಲಲ್ಲಿ ಕಾದು ಕುಳಿತಿದ್ದೆವು. ನಾವು ಅಂದುಕೊಂಡಿದ್ದೇ ಬೇರೆ ಅಲ್ಲಿ ನಡೆದಿದ್ದೇ ಬೇರೆ. ನಮ್ಮ ಎಲ್ಲಾ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ನಮ್ಮ ಸೂರಪ್ಪ ಬೇರೆ ಒಂದು ಜಾಗದಿಂದ ನಿಧಾನವಾಗಿ ತನ್ನ ಕೆಂಪು ಮೂತಿ ತೋರಿಸುತ್ತ ಮೇಲೆ ಬರತೊಡಗಿದ. ಅಬ್ಬಾ… ಎಂತಹ ವಿಸ್ಮಯ!  ಸೂರ್ಯ ಉದಯಿಸುತ್ತಾನೆ ಎಂದು ಅಂದುಕೊಂಡ ಜಾಗವೇ ಒಂದು, ಆದರೆ ಅದು ಉದಯಿಸಿದ ಜಾಗವೇ ಇನ್ನೊಂದು! ಮೂಡಣ ದಿಕ್ಕಿನಲ್ಲಿ ಆಗತಾನೆ ನಿದ್ದೆಯಿಂದ ಕಣ್ಣುಜ್ಜಿ ಎದ್ದು ಬರುತ್ತಿದ್ದ ಕೆಂಪಗಿನ ಸೂರ್ಯ ಎಷ್ಟು ಚೆನ್ನಾಗಿ ಕಾಣುತ್ತಿದ್ದ. ಒಂದೆರಡು ನಿಮಿಷ ಅಷ್ಟೇ, ಪೂರ್ತಿ ಮೇಲೆ ಬಂದು ಸುತ್ತಲಿನ ಕತ್ತಲ ಪರಿಸರವನ್ನು, ಬೆಳಕಾಗಿಸಿ ಬಿಟ್ಟ.

ಬೆಳಗಿನ ಹೊಂಬಣ್ಣದ ಕಿರಣಗಳು ದೂರದಲ್ಲಿ ಕಾಣುತ್ತಿದ್ದ ಕೆರೆ ನೀರಿನ ಮೇಲೆ ಬಿದ್ದಾಗ ಅವುಗಳ ಪ್ರತಿಫಲನ ಮಾಯದ ಚಿನ್ನದ ಗೆರೆಗಳಂತೆ ಕಾಣಿಸುತ್ತಿದ್ದವು. ಮತ್ತೆ ಅದೇ ಹೊಂಬಣ್ಣದ ಬೆಳಕು ದೊಡ್ಡ ದೊಡ್ಡ ಮರಗಳ ಮೇಲೆ ಬೀಳುತ್ತಿದ್ದಾಗ ಹಸಿರಿನ ವನಸಿರಿಯ ಮರಗಳು, ಚಿಗುರೆಲೆಗಳು, ಬಣ್ಣಬಣ್ಣದ ಹೂವುಗಳು ಆಹಾ… ಅದರ ಸೌಂದರ್ಯ ನೋಡುತ್ತಾ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಈ ಅನುಭವ ಮಾತ್ರ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಇದೇ ರೀತಿ ಒಂದೊಂದು ದಿನಗಳಲ್ಲೂ ಸೂರ್ಯಾಸ್ತ ಹಾಗೂ ಸೂರ್ಯೋದಯದ ಕಥೆಗಳು, ಅನುಭವಗಳು ಹೇರಳವಾಗಿವೆ. ಕೆಲವೊಮ್ಮೆ ನಮಗೆ ಬೇಕಾಗಿರುವ ಹಾಗೂ ಅಂದುಕೊಂಡಿರುವ ಚಿತ್ರಗಳು ಮೂಡಿಬರಲು ಸಾಕಷ್ಟು, ತಾಳ್ಮೆ ಹಾಗೂ ಶ್ರಮ ಬೇಕಾಗುತ್ತದೆ. ನಮ್ಮ ಕಲ್ಪನೆಯಂತೆಯೇ ಚಿತ್ರಗಳು ಸಿಕ್ಕರೆ ನಾವು ಪಟ್ಟ ಶ್ರಮ ಹಾಗೂ ಸಮಯ ಸಾರ್ಥಕ ಎನಿಸುತ್ತದೆ ಅಲ್ಲವೇ?

ಲೇಖನ: ಗುರು ಪ್ರಸಾದ್ ಕೆ ಆರ್
            ಬೆಂಗಳೂರು ಜಿಲ್ಲೆ

Spread the love
error: Content is protected.