ಮರೆಯಲಾರದ ಹಕ್ಕಿ ಗೂಡಿನ ಅಣಬೆ
© ಶಶಿಧರಸ್ವಾಮಿ ಆರ್. ಹಿರೇಮಠ
ಮಳೆಗಾಲ ಆರಂಭವಾಯಿತೆಂದರೆ ಕಾಡು ಮತ್ತು ನಾಡಿನ ಕೊಳೆತ ಪ್ರದೇಶ, ಒಣಗಿ ಬಿದ್ದಿರುವ ಮರಗಳ ದಿಮ್ಮೆ, ಕಟ್ಟಿಗೆಗಳ ಮೇಲೆ ಕೊಳೆತಿನಿಗಳದ್ದೆ ಕಾರುಬಾರು. ಕೆಲವು ಜನ “ಇದು ನಾಯಿಕೊಡೆ. ಛೀ… ಛೀ. ಹೊಲಸು”, ಅಂತಾ ಇವುಗಳಿಂದ ದೂರ ಸರಿಯುತ್ತಾರೆ. ಆದ್ರೆ ಪ್ರಕೃತಿಯಲ್ಲಿ ಇವುಗಳದ್ದೂ ಸಹ ಬಹು ಮುಖ್ಯ ಪಾತ್ರವಿದೆ. ಈ ಶಿಲೀಂದ್ರ ಸಾಮ್ರಾಜ್ಯವು ಜೀವ ಸಾಮ್ರಾಜ್ಯದ 3 ನೇ ದೊಡ್ದ ಸಾಮ್ರಾಜ್ಯವಾಗಿದೆ. ಮಲೆನಾಡು, ಪೂರ್ವ ಘಟ್ಟ, ಪಶ್ಚಿಮ ಘಟ್ಟಗಳ ಪ್ರಾಂತ್ಯಗಳಲ್ಲಿ ಮಳೆಗಾಲ ಬಂತೆಂದರೆ ತಿನ್ನಲು ಅಣಬೆಗಳನ್ನು ಹುಡುಕುವುದೇ ಒಂದು ಸುಗ್ಗಿ. ಆದ್ರೆ ತಿನ್ನಲು ಯೋಗ್ಯವಲ್ಲದ, ಅತಿ ಸುಂದರ ರೂಪ, ಚಿತ್ರ ವಿಚಿತ್ರ ಆಕಾರ, ಬಣ್ಣಬಣ್ಣದ ಅಣಬೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಂತಹ ಅಣಬೆಗಳ ಲೋಕದಲ್ಲಿ ಈಗ ನಾನು ಹೇಳಲು ಹೊರಟಿರುವ ಅಣಬೆಯೂ ಒಂದು.
ಈ ಅಣಬೆಯನ್ನು ಹಕ್ಕಿ ಗೂಡಿನ ಅಣಬೆ Bird Nest Fungi (Cyathus olla) ಎಂದು ಕರೆಯುತ್ತಾರೆ. ಇದು Nidulariaceae ಕುಟುಂಬಕ್ಕೆ ಸೇರಿದ ಅಣಬೆ. Nidulus ಎಂದರೆ ಚಿಕ್ಕ ಗೂಡು ಎಂದು ಅರ್ಥ. ಈ ಅಣಬೆಗಳ ಆಕಾರವು ಥೇಟ್ ಮೊಟ್ಟೆಯಿರುವ ಹಕ್ಕಿಯ ಗೂಡಿನ ರೀತಿ ಕಾಣುವುದರಿಂದ ಈ ಅಣಬೆಗೆ ಈ ರೀತಿಯ ಹೆಸರಿನಿಂದ ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಬಟ್ಟಲಿನ ಆಕಾರದಲ್ಲಿರುವ ಈ ಅಣಬೆ ಸಾಮಾನ್ಯವಾಗಿ 4 ರಿಂದ 18 ಮಿಲೀ ಮೀಟರ್ ಎತ್ತರ, 3-9 ಮಿಲೀ ಮೀಟರ್ ಅಗಲವಿರುತ್ತದೆ. ಈ ಕುಟುಂಬದಲ್ಲಿನ ಕೆಲವು ಪ್ರಭೇದದ ಅಣಬೆಗಳ ದೇಹದ ಮೇಲ್ಭಾಗವು ಕೂದಲಿನಿಂದ ಆವರಿಸಿಕೊಂಡಿರುತ್ತವೆ. ಗೂಡಿನಲ್ಲಿರುವ ಹಕ್ಕಿ ಮೊಟ್ಟೆಯ ರೀತಿಯ ಅಣಬೆಗೆ ಕೆಲವು ಭಾಗಗಳಿದ್ದು, ಅದನ್ನು peridioles ಎಂದು ಕರೆಯುತ್ತಾರೆ. ಇವುಗಳು ಸಾಮಾನ್ಯವಾಗಿ ಅವರೆಕಾಳಿನ ಆಕಾರದಲ್ಲಿದ್ದು (Lenticular shape) ಒಂದರಿಂದ ನಾಲ್ಕು ಮಿಲೀ ಮೀಟರ್ ಗಾತ್ರ ಹೊಂದಿರುತ್ತವೆ. ಇವುಗಳು ಕಪ್ಪು, ಬಿಳಿ, ಕೆಂಪು ಮಿಶ್ರಿತ ಕಂದು ಬಣ್ಣಗಳಲಿ ಕಂಡುಬರುತ್ತವೆ. ಮೊಟ್ಟೆಗಳ ರೀತಿ ಕಾಣುವ ಈ ಭಾಗಗಳೇ ಅಣಬೆಗಳ ಬೀಜಕಗಳಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಸಂತಾನೋತ್ಪತ್ತಿಯು ಲೈಂಗಿಕ ಮತ್ತು ಅಲೈಂಗಿಕವಾಗಿ ನಡೆಯುತ್ತದೆ. Peridioles ಗಳು ಮಳೆಯಿಂದ ಪ್ರಸರಣಗೊಂಡು ಮತ್ತೆ ಸೂಕ್ತವಾದ ವಾತಾವರಣದಲ್ಲಿ ಅಂದರೆ ಒಣಗಿದ ಕಟ್ಟಿಗೆ, ಸಣ್ಣ ಕಟ್ಟಿಗೆಗಳ ತುಂಡು, ಜೀವಂತ ಮರಗಳ ಕೊಳೆತ ಭಾಗಗಳಲ್ಲಿ ಬೆಳೆಯುತ್ತವೆ. ಇವುಗಳು ಸಾಮಾನ್ಯವಾಗಿ ಸಮಶೀತೋಷ್ಣ ವಲಯದ ಎಲ್ಲಾ ಭಾಗಳಲ್ಲಿಯೂ ಕಂಡು ಬರುತ್ತವೆ. ಇವುಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣ, ಉಷ್ಣತೆ ಮತ್ತು ತೇವಾಂಶಯುಕ್ತ ಗಾಳಿ ಪ್ರಮುಖ ಪಾತ್ರ ವಹಿಸುತ್ತವೆ.
ಈ ಅಣಬೆಗಳನ್ನು ಒಮ್ಮೆಯಾದರೂ ನೋಡಬೇಕು ಎಂದು ಕಳೆದ ಐದಾರು ವರ್ಷಗಳಿಂದ ಹುಡುಕುತ್ತಿದ್ದೆ. ಮೊದಲ ಬಾರಿ ನೋಡಲು ಅವಕಾಶ ಸಿಕ್ಕಿದ್ದು 27ನೇ ಜುಲೈ 2022 ರಂದು. ಅಂದು ಬೇರೆ ಬೀಟ್ನಲ್ಲಿ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ, ಕಾಡನ್ನು ಲಂಟಾನದಿಂದ ರಕ್ಷಿಸಲು ಲಂಟಾನಾ ಪೊದೆಗಳನ್ನು ನಮ್ಮ ಅರಣ್ಯ ಇಲಾಖೆಯ ಸಹೋದ್ಯೋಗಿಗಳು ಕಡಿದು ಒಂದೆಡೆ ಹಾಕಿದ್ದರು. ಅಲ್ಲಿ ಹೆಚ್ಚು ಗೊಬ್ಬರದ ಅಂಶವಿದ್ದ ಕಾರಣ ನಾನು ಯಾವುದಾದರೂ ಅಣಬೆ ಸಿಗಬಹುದು ಎಂದು ಹತ್ತಿರ ಹೋಗಿ ನೋಡಿದೆ. ಆಶ್ಚರ್ಯವೆಂಬಂತೆ ಈ ಹಕ್ಕಿ ಗೂಡಿನ ಅಣಬೆಯೇ ಕಂಡಿತು. ನನ್ನ ಖುಷಿಯ ಕಟ್ಟೆ ಹೊಡೆಯಿತು. ತಕ್ಷಣವೇ ನನ್ನ ಬಳಿಯಿದ್ದ ಆಪಲ್ ಫೋನ್ ಗೆ ಮ್ಯಾಕ್ರೋ ಲೆನ್ಸ್ ಅನ್ನು ಅಳವಡಿಸಿ ಒಂದಷ್ಟು ಚಿತ್ರಗಳನ್ನು ಸೆರೆ ಹಿಡಿದೆ. ಸಂಜೆ ಕೆಲಸ ಮುಗಿಸಿಕೊಂಡು ಧೋ… ಎಂದು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ರೈನ್ ಜಾಕೆಟ್ ಅನ್ನು ಹಾಕಿಕೊಂಡು ನನ್ನ ದ್ವಿಚಕ್ರವಾಹನವನ್ನು ಏರಿ ಲೊಂಡಾ – ಗೋವಾ ಮುಖ್ಯ ರಸ್ತೆಗೆ ತಲುಪಿದೆ. ಯಾಕೋ ನನ್ನ ಬಳಿ ಏನೋ ಮಿಸ್ ಆಗಿದೆಯಲ್ಲ ಎನಿಸಿತು. ಗಾಡಿ ನಿಲ್ಲಿಸಿ ಎಲ್ಲಾ ಜೇಬುಗಳನ್ನು ಹುಡುಕಿದೆ. ನನ್ನ ಮೊಬೈಲ್ ಫೋನ್ ಯಾವ ಜೇಬಿನಲ್ಲೂ ಕಾಣಲಿಲ್ಲ ಮತ್ತೇ ಅದೇ ಜಾಗಕ್ಕೆ ಹಿಂದಿರುಗಿ ಮೂರ್ನಾಲ್ಕು ಜನ ಸ್ನೇಹಿತರ ಜೊತೆ ಓಡಾಡಿದ್ದ ಜಾಗವನ್ನೆಲ್ಲಾ ಹುಡುಕಿದೆ ಎಲ್ಲಿಯೂ ಸಿಗಲಿಲ್ಲ. ಆ ಫೋನ್ ಕಳೆದುಹೋಯಿತು ಅದೇ ರೀತಿ ಅದರಲ್ಲಿನ ಅಣಬೆಯ ಫೋಟೋಗಳು ಸಹ ಕಳೆದು ಹೋದವು. ಪುನಃ ಹಕ್ಕಿ ಗೂಡಿನ ಅಣಬೆ ನನಗೆ ಕಂಡದ್ದು ಇತ್ತೀಚಿಗೆ ಅಂದರೆ ಕಳೆದ ವರ್ಷದ ಮಳೆಗಾಲದಲ್ಲಿ. ನೆನಪಿಗಾಗಿ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡೆನು.
© ಶಶಿಧರಸ್ವಾಮಿ ಆರ್. ಹಿರೇಮಠ
ಲೇಖನ: ಡಾ. ಗುಂಡಪ್ಪ ಎಸ್, ಫಾರೆಸ್ಟರ್,
ಲೋಂಡಾ, ಬೆಳಗಾವಿ ಜಿಲ್ಲೆ.