ಜೇನು ಪ್ರಪಂಚ: ಭಾಗ ೧
© ಹರೀಶ ಎ. ಎಸ್.
ಬಿನ್ನಹ
ಇದು ಕೇವಲ ವೈಜ್ಞಾನಿಕ ಕಲ್ಪನಾ ಆಧಾರಿತ ಸರಣಿಯಾಗಿದ್ದು, ಕಥೆ ಕಾಲ್ಪನಿಕವಾದರೂ ಇಲ್ಲಿ ತಿಳಿಸುವ ವಿವರಣೆಗಳು ಪ್ರಸ್ತುತಕ್ಕೆ ಸತ್ಯವಾದವು. ಒಂದು ಕೀಟ ತನ್ನದೇ ಕಥೆಯನ್ನು ನಮಗೆ ಹೇಳುವಂತಾದರೆ ಹೇಗಿರಬಹುದು? ಆ ಕೀಟವು ನಮ್ಮನ್ನು (ಮನುಷ್ಯನನ್ನು), ನಮ್ಮ ವ್ಯವಸ್ಥೆಯನ್ನು ನೋಡುವ ಪರಿ ಮತ್ತು ಇತರ ಜೀವಿಗಳನ್ನು ನೋಡುವ ಪರಿ ಹೇಗಿರಬಹುದು ಎಂಬುವುದು ನನ್ನ ಕಲ್ಪನೆಗೆ ಒಳಪಟ್ಟಿರುತ್ತದೆ. ಅಂತಹ ಕಲ್ಪನೆಗೆ ನಾನು ಆಯ್ದುಕೊಂಡದ್ದು ಒಂದು ಜೇನುನೊಣವನ್ನು.
ಕೆಲವೊಮ್ಮೆ ನಮ್ಮ ವ್ಯವಸ್ಥೆಯ ಬಗ್ಗೆ ಬರೆಯಲು ಮತ್ತು ಮಾತನಾಡಲು ಭಯ, ಆದ್ದರಿಂದ ಬೇರೊಂದು ಜೀವಿಯ ಬಗ್ಗೆ ತನ್ನ ಸುತ್ತುಮುತ್ತಲಿನ ಆಗುಹೋಗುಗಳನ್ನು ಆ ಜೀವಿಯಾಗಿ ಹೇಳುವುದರಿಂದ ಸತ್ಯಕ್ಕೆ ಇನ್ನೂ ಹತ್ತಿರವಾಗಿ ಬರೆಯಬಹುದೆಂದು ನನ್ನ ಅಭಿಪ್ರಾಯ. ಜೊತೆಗೆ ವೈಜ್ಞಾನಿಕ ಮಾಹಿತಿಯನ್ನು ಕಥೆಯ ರೂಪದಲ್ಲಿ ಓದುಗರ ತಲೆಗೆ ಬಲವಂತವಾಗಿ ತುಂಬಬಹುದೆಂಬ ಸ್ವಾರ್ಥ.
ನಿಮಗೆ ನನ್ನನ್ನು ಹೇಗೆ ಪರಿಚಯಿಸಬೇಕೋ ಗೊತ್ತಾಗುತ್ತಿಲ್ಲ, ಕಾರಣ ನಿಮಗಿರುವ ಹಾಗೆ ನನಗೆ ಪ್ರತ್ಯೇಕವಾದ ಹೆಸರಿಲ್ಲ, ಊರಿಲ್ಲ, ಜಾತಿ-ಧರ್ಮವಿಲ್ಲ ಆದರೆ ನಮಗೂ ಅಂತಹ ಜಾತಿಯನ್ನು ಪಂಗಡವನ್ನು ಅಂಟಿಕಟ್ಟಿದ್ದರೆ ಅದು ನಿಮ್ಮದೇ ವಿಜ್ಞಾನಿಗಳಿಗೆ ಮತ್ತು ವರ್ಗೀಕರಣಶಾಸ್ತ್ರಜ್ಞರಿಗೆ ಒಳಪಟ್ಟಿದ್ದು, ಅವರವರ ಕಿತ್ತಾಟಕ್ಕೆ ನಾನು ಹೊಣೆಯಲ್ಲ! ಆದರೆ ಎಲ್ಲರೂ ನನ್ನನ್ನು, ನನ್ನ ಪರಿವಾರದವರನ್ನು “ಜೇನು ನೊಣ” ಎಂದೇ ಸಂಬೋಧಿಸುತ್ತಾರೆ. ನಾನು ಹೆಣ್ಣು ಜೇನು ನೊಣವಾಗಿದ್ದರೂ ಸಂತಾನ ಭಾಗ್ಯ ಇಲ್ಲದವಳು, ಈಗ ನನ್ನ ವಯಸ್ಸು ಸುಮಾರು ಇಪ್ಪತ್ತೈದು ದಿನಗಳಿರಬಹುದು. ನಾನು ಹುಟ್ಟಿ ಬೆಳೆದಿದ್ದೆಲ್ಲಾ ಷಡ್ಬುಜಾಕೃತಿಯ ಒಂದು ಸಣ್ಣ ಕೋಣೆಯಲ್ಲಿ, ನನ್ನೊಂದಿಗೆ ನನ್ನ ಅಣ್ಣ, ತಮ್ಮ, ಅಕ್ಕ-ತಂಗಿಯರು ಬೆಳೆದಿದ್ದು ಕೂಡ ಇಂತಹ ಸಣ್ಣ ಷಡ್ಬುಜಾಕೃತಿಯ ಕೋಣೆಗಳಲ್ಲಿಯೇ. ಇಂತಹ ಕೋಣೆಗಳು ನೂರಾರು ಇದ್ದು, ಈ ಕೋಣೆಗಳ ಸಮೂಹಕ್ಕೆ ವಠಾರ (Colony) ಎಂದು ಕರೆಯಬಹುದು.
ನಮ್ಮ ವಠಾರವನ್ನು ಮೂರು ಭಾಗಗಳಾಗಿ ಅಥವಾ ಮಹಡಿಗಳಾಗಿ ವಿಂಗಡಿಸಬಹುದು, ಈ ವಿಂಗಡಣೆ ಮನುಷ್ಯರಂತೆ ಮೇಲ್ವರ್ಗದವರಿಗೆ ಕೆರೆಯ ಮೇಲಕ್ಕೆ, ಕೆಳವರ್ಗದವರಿಗೆ ಕೆರೆಯ ಕೆಳಗೆ ಎನ್ನುವಂತೆ ವಿಂಗಡಿಸಿರುವುದು. ಅಲ್ಲ ನಮ್ಮ ನಮ್ಮ ಅಗತ್ಯಗಳಿಗೆ ಅನುಸಾರವಾಗಿ ವಿಂಗಡಿಸಿಕೊಂಡಿರುವುದು. ಮೇಲಿನ ಮಹಡಿಯಲ್ಲಿ ನಾವು ಮಕರಂದವನ್ನು ಶೇಖರಿಸಲು ಮೀಸಲಿಟ್ಟರೆ, ಮಧ್ಯದ ಮಹಡಿಯೂ ಪರಾಗರೇಣುಗಳನ್ನು ಸಂಗ್ರಹಿಸಲು ಹಾಗೂ, ಕೊನೆಯ ಕೆಳ ಮಹಡಿಯನ್ನು ನಮ್ಮ ಸಂತಾನೋತ್ಪತ್ತಿಗೆ ಅಂದರೆ ನಮ್ಮ ಜನ್ಮ ಕೋಣೆಗಳಾಗಿ ಉಪಯೋಗಿಸುತ್ತೇವೆ. ಈ ಎಲ್ಲಾ ಮಹಡಿಗಳಲ್ಲಿ ಕೋಣೆಗಳ ಸಂಖ್ಯೆ ನಮ್ಮ ಕುಟುಂಬದ ಗಾತ್ರವನ್ನು ಅವಲಂಬಿಸಿರುತ್ತದೆ. ಈಗಲೇ ತಿಳಿಸಿರುವಂತೆ ನಾನು ಹೆಣ್ಣಾದರೂ ಸಂತಾನಭಾಗ್ಯ ಇಲ್ಲದವಳು, ಕಾರಣ ಮೊಟ್ಟೆ ಇಡಲು ಬೇಕಾದ ಮೊಟ್ಟೆ-ಇಡಕವು ನನ್ನ ಮತ್ತು ನನ್ನ ಸಹೋದರಿಯರಲ್ಲಿ ಕುಟಕವಾಗಿ ಮಾರ್ಪಾಟಾಗಿದ್ದು, ಈ ಕುಟಕವನ್ನು ಶತ್ರುಗಳಿಂದ ನಮ್ಮ ವಠಾರವನ್ನು ರಕ್ಷಿಸಿಕೊಳ್ಳಲು ಬಳಸುತ್ತೇವೆ. ಈ ಕುಟುಕದ ಜೊತೆ ವಿಷವನ್ನು ಶತ್ರುಗಳ ದೇಹದೊಳಗೆ ಚುಚ್ಚುಮದ್ದುವಿನಂತೆ ಒಳಸೇರಿಸುತ್ತೇವೆ, ಒಮ್ಮೆ ನಾವು ಕುಟುಕದಿಂದ ಕುಟುಕಿದರೆ ನಮ್ಮ ಇಡೀ ಜೀರ್ಣಾಂಗವೇ ಹೊರಬರುವುದರಿಂದ ಕೆಲಕಾಲದಲ್ಲಿಯೇ ನಾವೂ ಸಾಯುತ್ತೇವೆ. ಇಷ್ಟೆಲ್ಲಾ ತ್ಯಾಗ ಮಾಡಲು ಕಾರಣ, ನಾನು ನನ್ನ ಅಕ್ಕ-ತಂಗಿಯರಲ್ಲಿ, ಮುಂದೆ ಹುಟ್ಟಬಹುದಾದ ನಮ್ಮ ತಾಯಿಯ ಮಕ್ಕಳಲ್ಲಿ, ನನ್ನನ್ನು ಮತ್ತು ನನ್ನ ಮಕ್ಕಳನ್ನು ಕಾಣುತ್ತೇನೆ (ಹೇಗೆಂಬುದನ್ನು ಮುಂದೆ ತಿಳಿಸುತ್ತೇನೆ).
ಇನ್ನೂ ನನ್ನ ಕುಟುಂಬದ ವಿಷಯಕ್ಕೆ ಬಂದಾಗ ನನಗೆ ಸಾವಿರಾರು ಸಹೋದರಿಯರು ಮತ್ತು ನೂರಾರು ಸಹೋದರರು, ನನಗೆ-ನನ್ನ ಸೋದರ-ಸೋದರಿಯರಿಗೆ ಒಬ್ಬಳೇ ತಾಯಿಯಾದರೂ ಕೆಲವೊಮ್ಮೆ ತಂದೆ ಬೇರೆ-ಬೇರೆ ಆಗಿರುವುದುಂಟು. ಆಕೆ ನನ್ನಂತಹ ಸಾವಿರಾರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಆದರೆ ನನ್ನ ತಂದೆ ಯಾರೆಂಬುದು ತಿಳಿದಿಲ್ಲ, ಕಾರಣ ನನ್ನ ತಾಯಿ ತನ್ನ ಜೀವಿತಾವಧಿಯಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಗಂಡುಗಳೊಂದಿಗೆ ಮಿಲನ ಪಯಣಕ್ಕೆ ಹೋಗುತ್ತಾಳೆ. ಪ್ರತಿ ಬಾರಿ ಪ್ರಣಯಕ್ಕೆ ಹೊರಟಾಗಲು ಹತ್ತಾರು ಗಂಡುಗಳೊಂದಿಗೆ ಗಾಳಿಯಲ್ಲಿ ತುಂಬಾ ಎತ್ತರಕ್ಕೆ ಕರೆದೊಯ್ದು ಮಿಲನವಾಗುತ್ತಾಳೆ, ಎಲ್ಲಾ ಗಂಡುಗಳ ವೀರ್ಯವನ್ನು ತನ್ನ ಹೊಟ್ಟೆಯಲ್ಲಿಯೇ ಸಂಗ್ರಹಿಸಿಕೊಂಡಿರುತ್ತಾಳೆ, ವೀರ್ಯಾಣುಗಳ ಸಂಖ್ಯೆ ಲಕ್ಷಗಳ ಸಂಖ್ಯೆಯನ್ನು ಮೀರಿರುತ್ತದೆ. ನಮ್ಮ ತಾಯಿ ವೀರ್ಯಾಣುವಿನೊಂದಿಗೆ ಫಲೀಕರಿಸಿದ ಮೊಟ್ಟೆಗಳನ್ನು ಇಟ್ಟರೇ ಅವು ಹೆಣ್ಣಾಗಿ ಹುಟ್ಟುತ್ತವೆ, ವೀರ್ಯಾಣುವಿನೊಂದಿಗೆ ಮಿಲನವಾಗದೆ ಇಟ್ಟ ಮೊಟ್ಟೆ ಗಂಡು ನೊಣವಾಗುತ್ತದೆ. ವಠಾರದಲ್ಲಿ ಗಂಡುಗಳು ಯಾವುದೇ ಕೆಲಸ-ಕಾರ್ಯಗಳನ್ನು ಮಾಡದ ಕೇವಲ ಸೋಂಬೇರಿ, ತಿಂಡಿಪೋತಗಳಾಗಿದ್ದು ಎಲ್ಲಾ ರೂಪದಲ್ಲೂ ಅನುಪಯುಕ್ತವಾಗಿರುತ್ತವೆ. ಇಡೀ ಮನೆಯ ಜವಾಬ್ದಾರಿ ನಮ್ಮ (ಹೆಣ್ಣುಗಳ) ಮೇಲಿರುತ್ತದೆ, ಮನೆಕಟ್ಟುವುದು, ಆಹಾರ ಸಂಗ್ರಹಣೆ ಮಾಡುವುದು, ಮರಿಗಳ ಪೋಷಣೆ, ಮನೆಯ ಸ್ವಚ್ಛತೆ, ರಕ್ಷಣೆ ಮುಂತಾದ ಎಲ್ಲಾ ಕೆಲಸಕಾರ್ಯಗಳನ್ನು ನಾವೇ ನೋಡಿಕೊಳ್ಳಬೇಕಿರುತ್ತದೆ. ಆದರೆ ಹೆಣ್ಣು ನೊಣಗಳು ಜನಿಸಲು ನಮ್ಮ ತಾಯಿಗೆ ಗಂಡು ಮತ್ತು ಅವನ ವೀರ್ಯಾಣು ಬೇಕಿರುವುದರಿಂದ ಗಂಡು ಹುಳುಗಳನ್ನು ಸಾಕಾಲೇಬೇಕಿರುತ್ತದೆ. ಆದ್ದರಿಂದ ಒಮ್ಮೆ ಗಂಡು ನಮ್ಮ ತಾಯಿ ಜೊತೆ ಮಿಲನವಾದ ನಂತರ ವಠಾರಕ್ಕೆ ಗಂಡಿನ ಅವಶ್ಯಕತೆ ಇಲ್ಲವಾದ್ದರಿಂದ ಅವುಗಳ ಸಂಖ್ಯೆ ಹೆಚ್ಚಾದಷ್ಟು ಊಟ ಮತ್ತು ವಠಾರದಲ್ಲಿ ಸ್ಥಳ ವ್ಯರ್ಥ. ಆದ್ದರಿಂದ ನಾವು ಗಂಡುಗಳ ರೆಕ್ಕೆ ಕಚ್ಚಿ ಬೀಳಿಸಿ ಸಾಯಿಸುತ್ತೇವೆ.
ನನ್ನ ಜೀವನಕ್ಕೆ ಬಂದಾಗ ಈಗ ನನ್ನ ವಯಸ್ಸು ಇಪ್ಪತ್ತೊಂದು ದಿನ, ಈಗ ತಾನೆ ನಾನು ಮರಿಯಿಂದ ವಯಸ್ಸಿಗೆ ಬಂದಿದ್ದೇನೆ. ನನ್ನ ಹುಟ್ಟೇ ಸ್ವಾರಸ್ಯಕರವಾದದ್ದು, ಇಪ್ಪತ್ತೊಂದು ದಿನಗಳ ಹಿಂದೆ ನನ್ನ ತಾಯಿ ಷಟ್ಬುಜಾಕೃತಿಯ ಸಣ್ಣ ಕೋಣೆಯಲ್ಲಿ ಮೊಟ್ಟೆ ಇಡಲಾಗಿತ್ತಂತೆ, ಮುಂದಿನ ಮೂರು ದಿನಗಳ ಕಾಲ ನಾನು ಮೊಟ್ಟೆ ರೂಪದಲ್ಲೇ ಇದ್ದು, ನಾಲ್ಕನೆ ದಿನಕ್ಕೆ ಸಣ್ಣ ಅಕ್ಕಿಯ ಗಾತ್ರದ ಮರಿಯಾಗಿ ಬಂದು ನಂತರ ಐದು ದಿನಗಳ ಕಾಲ ನನ್ನ ಹಿರಿಯ ಸಹೋದರಿಯರು ತಿನ್ನಿಸುವ ಜೇನುತುಪ್ಪ ಮಿಶ್ರಿತ ಪರಾಗರೇಣುಗಳನ್ನು ತಿಂದು ಆರನೆಯ ದಿನ ನನ್ನ ಹಿರಿಯ ಸಹೋದರಿಯರು ನನ್ನ ಷಟ್ಬುಜಾಕೃತಿಯ ಕೋಣೆಯನ್ನು ಮುಚ್ಚಿದ ಮೇಲೆ ನಾನು ನನ್ನ ಕೋಣೆಯಲ್ಲೇ ಗೂಡನ್ನು ಕಟ್ಟಿಕೊಂಡು ಹದಿಮೂರು ದಿನಗಳ ಕಾಲ ನಿದ್ರಾವಸ್ಥೆಯಲ್ಲಿ ಇದ್ದು ನಂತರ ವಯಸ್ಕಳಾಗಿದ್ದು. ಈ ಇಪ್ಪತ್ತೊಂದು ದಿನಗಳಲ್ಲಿ ಮೂರು ದಿನ ಮೊಟ್ಟೆಯಾಗಿ, ಐದು ದಿನ ಮರಿಯಾಗಿ, ಹದಿಮೂರು ದಿನ ಗೂಡುಹುಳುವಾಗಿ ದಿನ ಕಳೆದು ಈಗ ವಯಸ್ಸಿಗೆ ಬಂದಿದ್ದೇನೆ. ನಾನು ವಯಸ್ಸಿಗೆ ಬಂದಾಗ ನನ್ನ ದೇಹ ರಚನೆಯೇ ಬದಲಾಗಿದ್ದು, ಈಗ ನಾನು ಮೂರು ಜೊತೆಯ ಕಾಲುಗಳನ್ನು, ಎರಡು ಜೊತೆಯ ರೆಕ್ಕೆಗಳನ್ನು ಹೊಂದಿದ್ದು, ನನ್ನ ಎರಡು ಬದಿಯ ಮುಂದಿನ ರೆಕ್ಕೆಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಹಿಂಬದಿಯ ರೆಕ್ಕೆಗಳು ಗಾತ್ರದಲ್ಲಿ ಸಣ್ಣಗಿದ್ದರೂ ನಾನು ನಿಖರವಾಗಿ ಹಾರಡಲು ಸಹಕರಿಸುತ್ತವೆ. ಈಗ ನನ್ನ ದೇಹವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದಾಗಿದ್ದು ತಲೆ, ಕೊರಳು, ಹೊಟ್ಟೆ ಭಾಗವೆಂದು ಕರೆಯಬಹುದು. ಈಗ ನನ್ನ ಹೊಟ್ಟೆಯ ತುದಿ ಭಾಗದಲ್ಲಿ ಮುಳ್ಳಿನಾಕರದ ಕುಟುಕವಿದ್ದು, ಇದರಲ್ಲಿ ನಾನು ವಿಷವನ್ನು ಸ್ರವಿಸಬಹುದಾಗಿದ್ದು, ನಾನು ನನ್ನ ಮತ್ತು ನನ್ನ ಪರಿವಾರದ ರಕ್ಷಣೆಗೆ ಬಳಸಬಹುದಾಗಿದೆ.
ಲೇಖನ: ಹರೀಶ ಎ. ಎಸ್.
ಜಿಕೆವಿಕೆ, ಬೆಂಗಳೂರು ನಗರ ಜಿಲ್ಲೆ