ಹೊಳೆಯುವ ಇರುವೆ
©pexels-akbar-nemati-16543779
ಇತ್ತೀಚಿಗೆ ಹೊತ್ತಲ್ಲದ ಹೊತ್ತಿನಲ್ಲಿ ಮಳೆಯಾಗುತ್ತಿರುವುದರಿಂದ ಪರಿಸರದಲ್ಲಾದ ಗೊಂದಲ ಮನುಜ ಕುಲದವಳಾದ ನನಗೆ ಕೂಡ ಗಲಿಬಿಲಿಗೊಳಿಸಿತು! ಮಗುವಿಗೆ ಸ್ವೆಟರ್ ಹಾಕಿದರೆ ಶೆಖೆಯಾಗುತ್ತದೆ. ಹಾಗಂತ ಸ್ವೆಟರ್ ಇಲ್ಲದೆ, ಉದ್ಯಾನವನಕ್ಕೆ ಹೋದರೆ ಸೀನತೊಡಗುತ್ತಾನೆ. ಏನು ಮಾಡುವುದೆಂದು ಗೊತ್ತಾಗದೆ ಆಗಿದ್ದಾಗಲಿ ಎಂದು ಇದ್ದ ಬಟ್ಟೆ ಮೇಲೆಯೇ ಉದ್ಯಾನವನಕ್ಕೆ ಹೋದೆವು. ಸ್ವಲ್ಪ ಹೊತ್ತು ಆಟವಾಡಿದಂತೆ ನಟಿಸಿ ಆಮೇಲೆ ಅವನಿಷ್ಟದ ಆಟವಾದ ಮರಳಿನಲ್ಲಿ ಕೈ ಹಾಕಿಕೊಂಡು ಊಟಕ್ಕೆ ಕುಳಿತುಕೊಳ್ಳುವಂತೆ ಶಿಸ್ತಾಗಿ ಕುಳಿತ. ಇನ್ನು ಅವನು ಏಳುವುದು ಅವನ ಕಾಲು ಜೋಮು ಬಂದ ಮೇಲೆಯೇ ಎಂದು ನನಗೆ ತಿಳಿದಿತ್ತು. ಅವನು ಕುಳಿತ ಜಾಗದಿಂದ ಅನತಿ ದೂರದಲ್ಲಿ ಇರುವೆ ಗೂಡೊಂದು ನವೀಕರಣಗೊಳ್ಳುತ್ತಿತ್ತು. ದೂರದಿಂದ ಅವುಗಳು ನೋಡಲು ಸ್ವಲ್ಪ ಕಪ್ಪಾಗಿ ಕಂಡರೂ ಪೂರ್ತಿ ಕಪ್ಪಾಗಿರಲಿಲ್ಲ. ಒಂಥರಾ ರೇಷ್ಮೆ ಸೀರೆಗಳ ಹಾಗೆ ಕಾಂಟ್ರಾಸ್ಟ್ ಬಣ್ಣದಲ್ಲಿ! ಸ್ವಲ್ಪ ಕಪ್ಪು ಸ್ವಲ್ಪ ಕಂದು ಬಣ್ಣ, ಹೊಳೆಯುವ ಹಾಗೆ. ಇವುಗಳ ಮೈ ಮೇಲೆ ರೋಮಗಳಿವೆಯೇ ಎಂದು ಬಗ್ಗಿ ನೋಡಿದೆ, ಏನೂ ಕಾಣಲಿಲ್ಲ. ಬದಲಾಗಿ ನಾನು ಅಷ್ಟು ಹತ್ತಿರ ಹೋಗಿದ್ದಕ್ಕೆ ನನ್ನ ಉಸಿರಿನ ರಭಸಕ್ಕೆ ಅವು ಮಣ್ಣು ತೆಗೆಯುವುದನ್ನು ಬಿಟ್ಟು ಅಪಾಯವೆಂಬಂತೆ ಅತ್ತಿತ್ತ ಓಡಾಡತೊಡಗಿದವು. ನಾನೂ ಅಪಾಯವೆಂಬಂತೆ ದೂರ ಸರಿದು ನಿಂತುಕೊಂಡೆ. ಆದರೆ ಅವತ್ತು ಆ ಇರುವೆಗಳನ್ನು ಮರೆಯಲಾಗಲಿಲ್ಲ. ಅವುಗಳ ಹೊಟ್ಟೆ ಏಕೆ ಹೊಳೆಯುತ್ತದೆ ಎಂಬ ವಿಚಾರ ಕಾಡತೊಡಗಿತು. ಇನ್ಯಾಕೆ ತಡ ಎಂದು ಅವುಗಳನ್ನೇ ಕೀಟದ ನಂಟು ಅಂಕಣಕ್ಕೆ ಕರೆತಂದೆ.
ಬಹಳ ದಿನಗಳ ಅಭ್ಯಾಸದ ನಂತರ ಗೊತ್ತಾಗಿದ್ದೇನೆಂದರೆ ನಾನು ನೋಡಿದ ಇರುವೆಯ ವೈಜ್ಞಾನಿಕ ಹೆಸರು Camponotus sericeus. ಇವು ಭಾರತ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್ ಅಲ್ಲದೆ ಆಫ್ರಿಕಾದೆಲ್ಲೆಡೆ ಕಂಡುಬರುತ್ತವೆ. ಇವು ಬೇರೆ ಇರುವೆಗಳಂತೆ ಮಣ್ಣಿನಲ್ಲಿ ಗೂಡು ಕಟ್ಟದೆ, ಒಣಗಿದ ಮರದ ದಿಮ್ಮಿಯಲ್ಲಿ ಅಥವಾ ಕೆಲವೊಮ್ಮೆ ಸಜೀವ ಮರದ ಕಾಂಡದಲ್ಲಿ ಗೂಡು ಕಟ್ಟುತ್ತವೆ. ಮೊನ್ನೆ ದಿನ ಕೂಡ ನಾನು ನೋಡಿದಾಗ ಕೆಲ ಒಣಗಿದ ಮರದ ದಿಮ್ಮಿಗಳಿದ್ದವು. ಇರುವೆಗಳು ಬಹುಷಃ ಮಳೆ ನೀರಿನಿಂದ ಅಥವಾ ತಮ್ಮ ಗೂಡಿನಲ್ಲಿ ಬಿದ್ದ ಮರಳಿನ ರಾಶಿಯನ್ನು ತೆಗೆದು ಇಡುತ್ತಿದ್ದಿರಬಹುದು. ಇವುಗಳ ಮುಖ್ಯ ಆಹಾರವೆಂದರೆ ಬೀಜಗಳು, ಸತ್ತ ಚಿಕ್ಕ ಪ್ರಾಣಿಗಳು. ಒಂದು ವಿಶೇಷ ಸ್ವಭಾವವೆಂದರೆ ಇವುಗಳು ಕೃಷಿ ಮಾಡುತ್ತವೆ! ಅದು ಕೂಡ ಅಫಿಡ್ಸ್ ಗಳ ಕೃಷಿ. ಎಲ್ಲರಿಗೂ ಗೊತ್ತಿರುವಂತೆ ಅಫಿಡ್ಸ್ ಗಳು ಸಸ್ಯಗಳ ರಸವನ್ನು ಹೀರುತ್ತವೆ. ಈ ಅಫಿಡ್ಸ್ ಗಳನ್ನು ಬೇಟೆಯಾಡದೆ ಅವುಗಳನ್ನು ಸಾಕಿ ಬೆಳೆಸಿ ಅವುಗಳ ರಕ್ಷಣೆ ಮಾಡುತ್ತವೆ ಮತ್ತು ಅಫಿಡ್ಸ್ ಗಳ ವ್ಯವಸಾಯದ ಮೂಲ ಉದ್ದೇಶವೆಂದರೆ ಅವುಗಳು ಸ್ರವಿಸುವ ಸಿಹಿಯಾದ ದ್ರವ! ಈ ಸಿಹಿ ದ್ರವವನ್ನು ಸವಿಯಲು ಇರುವೆಗಳು ಅಫಿಡ್ಸ್ ಗಳನ್ನು ಸಾಕುತ್ತವೆ. ಬಹುಷಃ ನಾನು ಅವತ್ತು ಇನ್ನೂ ಸ್ವಲ್ಪ ಹೊತ್ತು ಇರುವೆಗಳನ್ನು ಗಮನಿಸಬೇಕಾಗಿತ್ತು. ಯಾಕೆಂದರೆ ಇರುವೆಗಳಲ್ಲಿ ಬಹಳ ಬಗೆಯ ಪ್ರಭೇದಗಳಿದ್ದು, ಭೌಗೋಳಿಕ ಪ್ರದೇಶದ ಅನುಗುಣವಾಗಿ ಅವುಗಳ ಸಂಖ್ಯೆ ಹಾಗು ಅವುಗಳ ನಡತೆಯಲ್ಲಿ ವ್ಯತ್ಯಾಸವಾಗುತ್ತದೆ. ಸಂಪೂರ್ಣ ದಟ್ಟ ಕಾಡಿನಲ್ಲಿ ಸಿಗುವ ಇರುವೆಗಳ ಗೂಡು ಹಾಗು ಅದೇ ಪ್ರಭೇದದ ಆದರೆ ಅಳಿವಿನಂಚಿನಲ್ಲಿರುವ ಕಾಡಿನಲ್ಲಿ ಇರುವ ಇರುವೆಗಳಿಗೂ ಬಹಳ ವ್ಯತ್ಯಾಸವಿರುತ್ತದೆ. ಒಂದು ಪ್ರದೇಶದಲ್ಲಿ ಕಾಣಸಿಗುವ ಇರುವೆಗಳ ಮೇಲೆ ಅಲ್ಲಿನ ಫಲವತ್ತತೆಯನ್ನು ನಿರ್ಧರಿಸಬಹುದು.
ಎಲ್ಲಾ ಇರುವೆಗಳಂತೆ ಇವುಗಳ ಜೀವನ ಚಕ್ರದಲ್ಲಿ ಮುಖ್ಯವಾದ ನಾಲ್ಕು ಹಂತಗಳಿದ್ದು, ಮೊಟ್ಟೆ, ಲಾರ್ವ, ಪ್ಯೂಪ (ಕೋಶಾವಸ್ಥೆ) ಹಾಗು ವಯಸ್ಕ ಇರುವೆ. ಇವುಗಳ ಕುಟುಂಬದಲ್ಲಿ ವರ್ಣ ವ್ಯವಸ್ಥೆ ಇದ್ದು, ಅದರಲ್ಲಿ ರಾಣಿ, ಗಂಡು ಇರುವೆಗಳು ಹಾಗು ಕೆಲಸದ ಇರುವೆಗಳು. ಈ ಕೆಲಸದ ಇರುವೆಗಳು ಹೆಣ್ಣಾಗಿದ್ದು, ಆದರೆ ಇವು ಮೊಟ್ಟೆ ಇಡುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತವೆ. ತಮ್ಮ ಇಡೀ ಜೀವನವನ್ನು ಗೂಡಿನ ಆರೈಕೆಯಲ್ಲಿ ಕಳೆಯುತ್ತವೆ. ಹಾಗೆಯೇ ಇತರ ಇರುವೆಗಳಂತೆ ಇವುಗಳ ಸಂಖ್ಯೆ ಲಕ್ಷಗಟ್ಟಲೆ ಇರದೆ ಕೇವಲ ನೂರರಿಂದ ಇನ್ನೂರರವರೆಗೆ ಇರುತ್ತದೆ. ಇವುಗಳಿಗೂ ಕೂಡ ಇರುವೆ ಅನುಕರಿಸುವ ಜಂಪರ್ ಜೇಡಗಳಿದ್ದು, ಇರುವೆ ಗೂಡಿನ ಸುತ್ತಮುತ್ತಲೇ ತಿರುಗಾಡುತ್ತಾ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ಹಿಂದೊಮ್ಮೆ ಇರುವೆ ಅನುಕರಿಸುವ ಜೇಡದ ಬಗ್ಗೆ ಬರೆದಿರುವುದು ನಿಮಗೆ ನೆನಪಿರಬಹುದು.
ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ
ಬೆಂಗಳೂರು ನಗರ ಜಿಲ್ಲೆ