ಶುಕ್ರ ಶಾಖ ~ ಭೂಮಿ ಮೇಲೆ!
©ಜೈ ಕುಮಾರ್ .ಆರ್.
ಮೊನ್ನೆಯಷ್ಟೇ ಹಿಮಾಲಯ ಪರ್ವತಗಳ ತಪ್ಪಲಿಗೆ ಚಾರಣ ಹೋಗಿ, ಸೌಂದರ್ಯ ಸವಿದು, ಮೈನಸ್ ತಾಪಮಾನದ ಜೊತೆಗೆ ಸೂರ್ಯನ ತೀಕ್ಷ್ಣ ಬೆಳಕಿನ ಝಳಕವನ್ನೂ ಸವಿದು ಬಂದೆವು. ಅದರ ನಂತರದ ಪರಿಣಾಮಗಳಾದ ಜ್ವರ, ನೆಗಡಿ, ಅಜೀರ್ಣಗಳ ಜೊತೆಗೂ ಹೋರಾಡುವಂತಾಯ್ತು. ನಮ್ಮ ದಕ್ಷಿಣ ಭಾರತದಂತೆ ಅಲ್ಲದ ಅಲ್ಲಿನ ವಾತಾವರಣಕ್ಕೆ ಒಗ್ಗಲು ಕೆಲವು ಸಾಮಗ್ರಿಗಳು ಬೇಕು. ಚಳಿಗೆ ಬೇಕಾಗುವ ಎಲ್ಲಾ ಬೆಚ್ಚಗಿನ ಬಟ್ಟೆಗಳು, ಕೈ ಚೀಲಗಳು, ತಲೆ ಚೀಲಗಳು ಇತ್ಯಾದಿ. ಅದರಲ್ಲಿ ಒಂದಾದ ‘ಸನ್ ಗ್ಲಾಸ್’ ಮೊದಲಿಗೆ ಬೇಡ ಎನ್ನಿಸಿದರೂ ಸೂರ್ಯನ ಬೆಳಕು ಎಷ್ಟು ತೀವ್ರವಾಗಿತ್ತೆಂದರೆ ತೆಗೆದುಕೊಂಡು ಹೋಗಿದ್ದು ಬಹುಉಪಯೋಗವಾಯ್ತು. ಹಿಮಾಲಯ ಪರ್ವತಗಳ ಮೇಲೆ ಹಾಲಿಗಿಂತ ಪ್ರಕಾಶಮಾನವಾಗಿ ಹೊಳೆಯುವ ಮಂಜು ಸೂರ್ಯನ ಬೆಳಕನ್ನು ಎಷ್ಟು ಪ್ರತಿಫಲಿಸುತ್ತದೆಂದರೆ, ಸತತವಾಗಿ ನೋಡುತ್ತಿದ್ದರೆ ಕಣ್ಣಿಗೆ ಆಯಾಸವಾಗಿ ತಲೆನೋವು ಬಂದರೂ ಆಶ್ಚರ್ಯವಿಲ್ಲ. ಹಾಗಾದರೆ ಭೂಮಿಯ ಮೇಲೆ ಸೂರ್ಯನ ಅತ್ಯಂತ ತೀವ್ರ ಬೆಳಕು ಹಿಮಾಲಯ ಪರ್ವತ ಶ್ರೇಣಿಗಳ ಮೇಲೆ ಬೀಳುತ್ತದೆಯೇ? ಎಂದರೆ ಅದಕ್ಕೆ ನಾನು ಒಳ್ಳೆಯ ವೈಜ್ಞಾನಿಕ ಊಹೆ ಎಂದು ಹೇಳುತ್ತೇನೆ. ಈ ಮೇಲೆ ಹೇಳಿದ ಹಾಗೆ, ಸೂರ್ಯನ ಬೆಳಕು ಮಂಜಿನ ಮೇಲೆ ಬಿದ್ದು ತೀವ್ರವಾಗಿ ಪ್ರತಿಫಲಿಸುತ್ತದಾದರೂ ಹಿಮಾಲಯದ ಮೌಂಟ್ ಎವರೆಸ್ಟ್ ನಂತಹ ಪರ್ವತಗಳ ಮೇಲೆ ಅತ್ಯಂತ ಹೆಚ್ಚು ಪ್ರಕಾಶಮಾನವಾದ ಬೆಳಕು ಪ್ರತಿಫಲಿಸಿದಂತೆ ದಾಖಲಾಗಲಿಲ್ಲ. ಕಾರಣ ಏಕೆಂದು ಸಧ್ಯಕ್ಕೆ ತಿಳಿಯದಾದರೂ, ಹಾಗಾದರೆ ಬೇರೆಲ್ಲಿ ದಾಖಲಾಗಿದೆ? ಎಂಬ ಪ್ರಶ್ನೆಗೆ ಉತ್ತರ ತಿಳಿದಿದೆ. ಅದೇ ದಕ್ಷಿಣ ಅಮೇರಿಕಾದ ‘ಅಟಕಾಮಾ ಮರುಭೂಮಿ’ಯಲ್ಲಿ. ಹೌದು, ಹೊಸ ಸಂಶೋಧನೆಯಲ್ಲಿ ಈ ವಿಷಯ ಹೊರಬಂದಿದೆ. ಅಟಕಾಮಾ ಮರುಭೂಮಿಯಲ್ಲಿ ಭೂಮಿಯ ಮೇಲೆ ಇನ್ನೆಲ್ಲೂ ಬೀಳದಷ್ಟು ಪ್ರಕಾಶಮಾನವಾದ ಸೂರ್ಯನ ಬೆಳಕು ಬೀಳುತ್ತಿದೆಯಂತೆ. ಇದರ ತೀವ್ರತೆ ಎಷ್ಟೆಂದರೆ ನಮ್ಮ ಸೌರಮಂಡಲದ ಸೂರ್ಯನ ಆಪ್ತ, ಅತಿ ಶಾಖಿ ಶುಕ್ರ ಗ್ರಹದ ಮೇಲೆ ಬೀಳುವ ಬೆಳಕಿನ ತೀವ್ರತೆಗೆ ಸವಾಲೊಡ್ಡುವಷ್ಟು!
ಈ ವಿಷಯ ಮೊದಲು ಬೆಳಕಿಗೆ ಬಂದದ್ದು ಮಾನವ ನಿರ್ಮಿತ ಉಪಗ್ರಹಳ ಗಮನಿಕೆಯಿಂದ. ನಮ್ಮ ಭೂಮಿಯ ವಾತಾವರಣ ಇತ್ಯಾದಿಗಳನ್ನು ಗಮನಿಸಲೆಂದೇ ಆಕಾಶಕ್ಕೆ ಬಿಟ್ಟಿರುವ ಇಂತಹ ಉಪಗ್ರಹಗಳು ಸತತವಾಗಿ ಭೂಮಿಯ ಮೇಲಿನ ಬದಲಾವಣೆಗಳನ್ನು ದಾಖಲಿಸುತ್ತಿರುತ್ತವೆ. ಹಾಗೆ ಮಾಡುವಾಗ ಈ ವಿಷಯ ತಿಳಿಯಿತು. ಆದರೂ ಅಲ್ಲೆಲ್ಲೋ ಕಿಲೋಮೀಟರುಗಟ್ಟಲೆ ದೂರವಿರುವ ಉಪಗ್ರಹದ ಮಾತುಗಳಿಗಿಂದ ಆ ಸ್ಥಳಕ್ಕೇ ಹೋಗಿ ಇದನ್ನು ಪರಿಶೀಲಿಸಬೇಕೆನ್ನಿಸಿತು ವಿಜ್ಞಾನಿಗಳಿಗೆ. ಅದಕ್ಕೆಂದೇ ಚಿಲಿ-ಬೊಲಿವಿಯಾ-ಪೆರು-ಅರ್ಜೆಂಟೈನಾಗಳ ಭಾಗಗಳನ್ನು ಆವರಿಸಿರುವ ಈ ಅಟಕಾಮಾ ಮರುಭೂಮಿ ಪ್ರದೇಶವನ್ನು ಗಮನಿಸಲು, ಚಿಲಿಯ ಆಲ್ಟಿಪಾನೋದಲ್ಲಿ ತಮ್ಮ ಬೀಡು ಬಿಟ್ಟರು. ಇವರ ಈ ಸಣ್ಣ ವೀಕ್ಷಣಾಲಯ 2016ರಿಂದ ಅಲ್ಲಿನ ಬೆಳಕಿನ ತೀವ್ರತೆಯ ಜೊತೆಗೆ ಸೂರ್ಯನ ಅತಿನೇರಳೆ ಕಿರಣಗಳನ್ನೂ ಸಹ ‘ಪೈರನೋಮೀಟರ್’ ಎಂಬ ಸಾಧನದ ಸಹಾಯದಿಂದ ಅಳೆಯುತ್ತಾ ಬರುತ್ತಿದ್ದಾರೆ.
ಐದು ವರ್ಷಗಳ ನಂತರ ಅವರು ಹೊರಹಾಕಿದ ಮಾಹಿತಿಯ ಪ್ರಕಾರ ಅಲ್ಲಿ ಸರಾಸರಿ 1 ಚದರ ಮೀಟರ್ ಪ್ರದೇಶದಲ್ಲಿ 308 watt ನಷ್ಟು ಸೂರ್ಯಶಕ್ತಿ ಬೀಳುತ್ತಿತ್ತಂತೆ. ಇದು ಹಿಮಾಲಯದ ಮೌಂಟ್ ಎವರೆಸ್ಟ್ ಮೇಲೆ ಬೀಳುವ ಬೆಳಕಿಗಿಂತ ಹೆಚ್ಚು ಎನ್ನುತ್ತಾರೆ ಈ ವಿಜ್ಞಾನಿಗಳ ತಂಡ. ಆದರೆ, ಈ ತೀವ್ರತೆ ದಿನ ಪೂರಾ ಇರದೆ ಕೆಲವು ಕ್ಷಣಗಳು ಮಾತ್ರ ಇದ್ದುವು ಎಂಬುದು ಗಮನಿಸಿದರು. ಬೆಳಕಿನ ಈ ತೀವ್ರತೆಗೆ ಕಾರಣ ಬಹುಶಃ ವಿರಳವಾಗಿ ಹರಡಿದ ಮೋಡಗಳ ಪ್ರತಿಫಲಿಕೆಯಿರಬಹುದು ಎಂದು ಊಹಿಸಿದರು. ಅಷ್ಟೇ ಅಲ್ಲ 2017ರ ಜನವರಿಯಲ್ಲಿ ಸೂರ್ಯನ ಬೆಳಕಿನ ತೀವ್ರತೆ ಎಷ್ಟಿತ್ತೆಂದರೆ 1 ಚದರ ಮೀಟರ್ ಪ್ರದೇಶದಲ್ಲಿ 2,177watt ನಷ್ಟು. ಈ ಶಕ್ತಿ ಸೌರಮಂಡಲದಲ್ಲೇ ಸೂರ್ಯನಿಗೆ ಭೂಮಿಗಿಂತ ಅತೀ ಹತ್ತಿರವಿರುವ ಹೆಚ್ಚು ಶಾಖ ಹೊಂದಿರುವ ಹಾಗೂ ಸೂರ್ಯನ ತೀವ್ರ ಬೆಳಕು ಬೀಳುವ ಶುಕ್ರ ಗ್ರಹದ ಮೇಲೆ ಬೀಳುವಷ್ಟು! ಇದನ್ನು ವಿಜ್ಞಾನಿಗಳ ತಂಡಕ್ಕೆ ನಂಬಲಾಗಲಿಲ್ಲ. ಆದರೂ ವೈಜ್ಞಾನಿಕವಾಗಿ ಇದು ಸತ್ಯ.. ಸೃಷ್ಟಿಯ ಸಿಹಿ-ಕಹಿ ಸತ್ಯಗಳ ಅನಂತ ಹಣ್ಣುಗಳ ಬುಟ್ಟಿಯಲಿ ಇದೂ ಒಂದು. ಹಣ್ಣು ಕೆಲವು ನಮ್ಮ ಇರುವಿಕೆಗೆ ಸಿಹಿಯಾದರೆ, ಅದೇ ಹಣ್ಣು ಬೇರೆ ಜೀವದ ಇರುವಿಕೆಗೆ ಕಹಿ. ಈ ಸಿಹಿ ಕಹಿಗಳ ನಡುವೆ ನಿಖರ ಅರ್ಥ ಹುಡುಕಲು ಹೋಗಿ ಪರ ಜೀವಿಯ ಜೊತೆ ಸೆಣಸಾಣಾಡುವ ವ್ಯರ್ಥ ಸಾಹಸ ಮಾಡದೆ ನಮ್ಮ ಇರುವಿಕೆಯನ್ನು ಗೌರವಿಸಿ, ಇರುವಷ್ಟು ದಿನ ಆ ಮಹಾಸೃಷ್ಟಿ ಲೋಕಾರ್ಪಣೆ ಮಾಡುವ ಸತ್ಯ-ವಿಸ್ಮಯವ ಅಚ್ಚರಿಯ ಕಣ್ಣುಗಳಿಂದ ಕಂಡು ವಿನಮ್ರತೆಯಿಂದ ತಲೆಬಾಗುವುದಷ್ಟೇ ನಮ್ಮ ಕೆಲಸ.
ಮೂಲ ಲೇಖನ: www.snexplores.org
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ., ಬೆಂಗಳೂರು ನಗರ ಜಿಲ್ಲೆ
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.